ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟುವುದು
“ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಅವರನ್ನು ಬೆಳೆಸುತ್ತಾ ಇರಿ.”—ಎಫೆಸ 6:4, NW.
1. ಕುಟುಂಬಕ್ಕಾಗಿರುವ ದೇವರ ಉದ್ದೇಶವೇನಾಗಿತ್ತು, ಆದರೆ ಅದಕ್ಕೆ ಬದಲಾಗಿ ಏನಾಯಿತು?
‘ಬಹುಸಂತಾನವುಳ್ಳವರಾಗಿ ಹೆಚ್ಚಿರಿ, ಭೂಮಿಯಲ್ಲಿ ತುಂಬಿಕೊಳ್ಳಿರಿ.’ (ಆದಿಕಾಂಡ 1:28) ಯೆಹೋವ ದೇವರು ಕುಟುಂಬದ ಏರ್ಪಾಡನ್ನು ಆರಂಭಿಸಿದಾಗ ಆ ಮಾತುಗಳನ್ನು ನುಡಿದನು. (ಎಫೆಸ 3:14, 15) ಆ ಮೊದಲ ದಂಪತಿಯು, ಭವಿಷ್ಯದಲ್ಲಿ ತಮ್ಮ ಸಂತಾನದಿಂದ ತುಂಬಿರುವ ಒಂದು ಲೋಕದ ಕುರಿತು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳಬಹುದಿತ್ತು. ಅದು, ಒಂದು ಪರದೈಸ ಭೂಮಿಯಲ್ಲಿ ಆನಂದದಿಂದ ಜೀವಿಸುತ್ತಿರುವ ಮತ್ತು ತಮ್ಮ ಮಹಾ ಸೃಷ್ಟಿಕರ್ತನನ್ನು ಐಕ್ಯವಾಗಿ ಆರಾಧಿಸುತ್ತಿರುವ ಪರಿಪೂರ್ಣ ವ್ಯಕ್ತಿಗಳ ವಿಸ್ತೃತ ಕುಟುಂಬವಾಗಿರಸಾಧ್ಯವಿತ್ತು. ಆದರೆ ಆದಾಮಹವ್ವರು ಪಾಪಮಾಡಿದರು, ಮತ್ತು ಈ ಕಾರಣದಿಂದ ಭೂಮಿಯು ನೀತಿವಂತರಾದ, ದೇವಭಯವುಳ್ಳ ಜನರಿಂದ ತುಂಬಿಕೊಳ್ಳಲಿಲ್ಲ. (ರೋಮಾಪುರ 5:12) ಅದಕ್ಕೆ ಬದಲು, ಕುಟುಂಬ ಜೀವನವು ಬೇಗನೆ ಹದಗೆಡುತ್ತಾ ಹೋಯಿತು. ಅಂದಿನಿಂದ ದ್ವೇಷ, ಹಿಂಸಾಚಾರ ಹಾಗೂ ‘ಮಮತೆಯಿಲ್ಲದಿರುವಿಕೆಯು’ ಸಾಮಾನ್ಯವಾಗಿ ಬಿಟ್ಟಿದೆ. ಮತ್ತು ಇದೆಲ್ಲವೂ ಈ ‘ಕಡೇ ದಿವಸಗಳಲ್ಲಿ’ ವಿಶೇಷವಾಗಿ ಸತ್ಯವಾಗಿದೆ.—2 ತಿಮೊಥೆಯ 3:1-5; ಆದಿಕಾಂಡ 4:8, 23; 6:5, 11, 12.
2. ಆದಾಮನ ಸಂತಾನಕ್ಕೆ ಯಾವ ಸಾಮರ್ಥ್ಯಗಳಿದ್ದವು, ಆದರೆ ಆತ್ಮಿಕವಾಗಿ ಬಲವಾಗಿರುವ ಒಂದು ಕುಟುಂಬವನ್ನು ಕಟ್ಟಲಿಕ್ಕಾಗಿ ಯಾವುದರ ಅಗತ್ಯವಿತ್ತು?
2 ಆದಾಮಹವ್ವರು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದರು. ಆದರೆ ಆದಾಮನು ಪಾಪಮಾಡಿದನು. ಆದರೂ ಅವನು ಮಕ್ಕಳನ್ನು ಪಡೆಯುವಂತೆ ಯೆಹೋವನು ಅನುಮತಿಸಿದನು. (ಆದಿಕಾಂಡ 1:27; 5:1-4) ಅವರ ತಂದೆಯಾದ ಆದಾಮನಂತೆಯೇ, ಈ ಸಂತತಿಗೂ ನೈತಿಕ ಸಾಮರ್ಥ್ಯವು ಇತ್ತು ಮತ್ತು ಸರಿ ಯಾವುದು, ತಪ್ಪು ಯಾವುದು ಎಂಬ ಭೇದವನ್ನು ಅವರು ಕಲಿಯಸಾಧ್ಯವಿತ್ತು. ತಮ್ಮ ಸೃಷ್ಟಿಕರ್ತನನ್ನು ಆರಾಧಿಸುವುದು ಹೇಗೆ ಮತ್ತು ಆತನನ್ನು ತಮ್ಮ ಪೂರ್ಣ ಹೃದಯ, ಪ್ರಾಣ, ಬುದ್ಧಿ ಮತ್ತು ಶಕ್ತಿಯಿಂದ ಪ್ರೀತಿಸುವುದು ಎಷ್ಟು ಮಹತ್ವಪೂರ್ಣವೆಂಬುದರ ಕುರಿತಾಗಿ ಅವರಿಗೆ ಬೋಧಿಸಸಾಧ್ಯವಿತ್ತು. (ಮಾರ್ಕ 12:30; ಯೋಹಾನ 4:24; ಯಾಕೋಬ 1:27) ಅಲ್ಲದೆ, ಅವರು ‘ನ್ಯಾಯವನ್ನು ಆಚರಿಸಲು, ಕರುಣೆಯಲ್ಲಿ ಆಸಕ್ತರಾಗಿರಲು ಮತ್ತು ದೇವರಿಗೆ ನಮ್ರರಾಗಿ ನಡೆದುಕೊಳ್ಳಲು’ ತರಬೇತಿ ಹೊಂದಸಾಧ್ಯವಿತ್ತು. (ಮೀಕ 6:8) ಆದರೆ ಅವರು ಪಾಪಿಗಳಾಗಿರುವುದರಿಂದ, ಆತ್ಮಿಕವಾಗಿ ಬಲವಾಗಿರುವ ಒಂದು ಕುಟುಂಬವನ್ನು ಕಟ್ಟಲಿಕ್ಕಾಗಿ ಅವರು ಬಹಳಷ್ಟು ಗಮನವನ್ನು ಕೊಡುವ ಅಗತ್ಯವಿತ್ತು.
ಸಮಯವನ್ನು ಕೊಂಡುಕೊಳ್ಳಿ
3. ಕ್ರೈಸ್ತ ಮಕ್ಕಳನ್ನು ಬೆಳೆಸಲಿಕ್ಕಾಗಿ ಹೆತ್ತವರು ಹೇಗೆ ‘ಸಮಯವನ್ನು ಕೊಂಡುಕೊಳ್ಳುವರು?’
3 ಈ ಜಟಿಲವಾದ ಕಠಿನಕಾಲಗಳಲ್ಲಿ, ಮಕ್ಕಳು ‘ಕೆಟ್ಟತನವನ್ನು ಹಗೆಮಾಡಿ,’ ‘ಯೆಹೋವನನ್ನು ಪ್ರೀತಿಸುವವರಾಗು’ವಂತೆ ಮಾಡಲು ತುಂಬ ಶ್ರಮಪಡಬೇಕಾಗುತ್ತದೆ. (ಕೀರ್ತನೆ 97:10) ಈ ಕಷ್ಟಕರವಾದ ಸವಾಲನ್ನು ಎದುರಿಸಲಿಕ್ಕಾಗಿ ವಿವೇಕಿ ಹೆತ್ತವರು ‘ಸಮಯವನ್ನು ಕೊಂಡುಕೊಳ್ಳುವರು.’ (ಎಫೆಸ 5:15-17, NW) ನೀವು ಒಬ್ಬ ಹೆತ್ತವರಾಗಿರುವಲ್ಲಿ ಇದನ್ನು ಹೇಗೆ ಮಾಡಬಹುದು? ಮೊದಲಾಗಿ, ಯಾವ ಸಂಗತಿಗಳಿಗೆ ಆದ್ಯತೆ ನೀಡಬೇಕೆಂಬುದನ್ನು ನಿರ್ಧರಿಸಿ. ಇದನ್ನು ಮಾಡುವಾಗ, ನಿಮ್ಮ ಮಕ್ಕಳಿಗೆ ಕಲಿಸುವುದು ಹಾಗೂ ತರಬೇತಿ ನೀಡುವುದನ್ನೂ ಸೇರಿಸಿ, “ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳಿಗೆ” ಗಮನವನ್ನು ಕೊಡಿರಿ. (ಫಿಲಿಪ್ಪಿ 1:10, 11, NW) ಎರಡನೆಯದಾಗಿ, ನಿಮ್ಮ ಜೀವನವನ್ನು ಸರಳೀಕರಿಸಿರಿ. ನಿಜವಾಗಿಯೂ ಅಗತ್ಯವಿಲ್ಲದಿರುವ ಚಟುವಟಿಕೆಗಳಿಂದ ನೀವು ದೂರವಿರಬೇಕಾಗಬಹುದು. ಇಲ್ಲವೇ, ಸುಸ್ಥಿತಿಯಲ್ಲಿಡಲು ತುಂಬ ಸಮಯವನ್ನು ಅಗತ್ಯಪಡಿಸುವಂಥ ಅನಗತ್ಯ ಸ್ವತ್ತುಗಳನ್ನು ನೀವು ತೊಲಗಿಸಬೇಕಾಗಬಹುದು. ಕ್ರೈಸ್ತ ಹೆತ್ತವರೋಪಾದಿ, ನಿಮ್ಮ ಮಕ್ಕಳನ್ನು ದೇವಭಯವುಳ್ಳ ವ್ಯಕ್ತಿಗಳಾಗಿ ಬೆಳೆಸಲು ನೀವು ಮಾಡುವ ಪ್ರಯತ್ನದ ಬಗ್ಗೆ ನೀವೆಂದೂ ವಿಷಾದಿಸದಿರುವಿರಿ.—ಜ್ಞಾನೋಕ್ತಿ 29:15, 17.
4. ಒಂದು ಕುಟುಂಬವನ್ನು ಹೇಗೆ ಐಕ್ಯವಾಗಿರಿಸಬಹುದು?
4 ಹೆತ್ತವರೇ, ನೀವು ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಬೇಕು. ಇದನ್ನು ವಿಶೇಷವಾಗಿ ಆತ್ಮಿಕ ವಿಷಯಗಳ ಸಂಬಂಧದಲ್ಲಿ ಮಾಡಬೇಕು. ಇದು ಸಾರ್ಥಕವಾಗಿರುತ್ತದೆ ಮಾತ್ರವಲ್ಲದೆ, ಕುಟುಂಬವನ್ನು ಐಕ್ಯವಾಗಿಡಲು ಅತ್ಯುತ್ತಮವಾದ ವಿಧವಾಗಿದೆ. ಆದರೆ ಇದನ್ನು ಮನಬಂದಾಗ ಮಾತ್ರ ಮಾಡಬೇಡಿರಿ. ನೀವು ಜೊತೆಯಾಗಿ ಕಳೆಯಲಿರುವ ಸಮಯಗಳ ಶೆಡ್ಯೂಲ್ ಮಾಡಿರಿ. ಕೇವಲ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಪ್ರತಿಯೊಬ್ಬನು ತನಗೆ ಮನಬಂದಂತೆ ನಡೆದುಕೊಳ್ಳಬೇಕೆಂದು ಇದರರ್ಥವಲ್ಲ. ಮಕ್ಕಳಿಗೆ ದೈನಂದಿನ ವೈಯಕ್ತಿಕ ಗಮನವನ್ನು ಕೊಡುವಾಗ ಅವರು ಚೆನ್ನಾಗಿ ಅರಳುತ್ತಾರೆ. ಅವರಿಗೆ ಪ್ರೀತಿ ಮತ್ತು ಆಸಕ್ತಿಯನ್ನು ಉದಾರವಾಗಿ ತೋರಿಸಬೇಕು. ವಿವಾಹಿತ ದಂಪತಿಗಳು ಮಕ್ಕಳನ್ನು ಪಡೆಯುವುದರ ನಿರ್ಣಯವನ್ನು ಮಾಡುವ ಮುಂಚೆ, ಈ ಮಹತ್ವಪೂರ್ಣ ಜವಾಬ್ದಾರಿಯನ್ನು ಮೊದಲು ಗಂಭೀರವಾಗಿ ಪರಿಗಣಿಸಬೇಕು. (ಲೂಕ 14:28) ಆಗ ಅವರಿಗೆ, ಮಕ್ಕಳನ್ನು ಬೆಳೆಸುವುದು ಬೇಸರದ ಕೆಲಸವಾಗಿರುವುದಿಲ್ಲ. ಬದಲಾಗಿ, ಅವರು ಅದನ್ನು ಒಂದು ಆಶೀರ್ವದಿತ ಸುಯೋಗವಾಗಿ ಪರಿಗಣಿಸುವರು.—ಆದಿಕಾಂಡ 33:5; ಕೀರ್ತನೆ 127:3.
ಮಾತು ಹಾಗೂ ಮಾದರಿಯ ಮುಖಾಂತರ ಕಲಿಸಿರಿ
5. (ಎ) ಮಕ್ಕಳಿಗೆ ಯೆಹೋವನನ್ನು ಪ್ರೀತಿಸಲು ಕಲಿಸುವುದು ಎಲ್ಲಿ ಆರಂಭವಾಗುತ್ತದೆ? (ಬಿ) ಧರ್ಮೋಪದೇಶಕಾಂಡ 6:5-7ರಲ್ಲಿ ಹೆತ್ತವರಿಗೆ ಯಾವ ಸಲಹೆಯನ್ನು ಕೊಡಲಾಗಿದೆ?
5 ಯೆಹೋವನನ್ನು ಪ್ರೀತಿಸುವಂತೆ ನಿಮ್ಮ ಮಕ್ಕಳಿಗೆ ಕಲಿಸುವ ಆರಂಭದ ಹಂತವು, ಆತನಿಗಾಗಿರುವ ನಿಮ್ಮ ಪ್ರೀತಿಯಿಂದಲೇ ಆರಂಭವಾಗುತ್ತದೆ. ದೇವರಿಗಾಗಿ ನಿಮ್ಮಲ್ಲಿ ಬಲವಾದ ಪ್ರೀತಿಯಿರುವಲ್ಲಿ, ಆತನ ಎಲ್ಲ ಸೂಚನೆಗಳನ್ನು ನಂಬಿಗಸ್ತಿಕೆಯಿಂದ ಪಾಲಿಸುವಂತೆ ಅದು ನಿಮ್ಮನ್ನು ಪ್ರಚೋದಿಸುವುದು. ಈ ಸೂಚನೆಗಳಲ್ಲಿ, ಮಕ್ಕಳನ್ನು ‘ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸುತ್ತಾ ಇರುವುದು’ ಸಹ ಸೇರಿದೆ. (ಎಫೆಸ 6:4, NW) ಹೆತ್ತವರು ತಮ್ಮ ಮಕ್ಕಳಿಗಾಗಿ ಮಾದರಿಯನ್ನಿಡಬೇಕು, ಅವರೊಂದಿಗೆ ಮಾತುಕತೆಯನ್ನು ನಡೆಸಬೇಕು, ಮತ್ತು ಅವರಿಗೆ ಕಲಿಸಬೇಕೆಂದು ದೇವರು ಸಲಹೆ ಕೊಡುತ್ತಾನೆ. ಧರ್ಮೋಪದೇಶಕಾಂಡ 6:5-7 ತಿಳಿಸುವುದು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ಪದೇ ಪದೇ ಬುದ್ಧಿವಾದವನ್ನು ಕೊಡುವ ಮೂಲಕ ಮತ್ತು ಪುನರಾವರ್ತಿಸುವ ಮೂಲಕ, ನೀವು ನಿಮ್ಮ ಮಕ್ಕಳಲ್ಲಿ ದೇವರ ಆಜ್ಞೆಗಳನ್ನು ಬೇರೂರಿಸಬಹುದು. ಹೀಗೆ ಮಾಡುವುದರಿಂದ, ಯೆಹೋವನ ಕಡೆಗೆ ನಿಮಗಿರುವ ಪ್ರೀತಿಯನ್ನು ನಿಮ್ಮ ಮಕ್ಕಳು ನೋಡಲು ಶಕ್ತರಾಗುವರು, ಮತ್ತು ಆಗ ಅವರು ಸಹ ಆತನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವಂತೆ ಪ್ರಭಾವಿಸಲ್ಪಡುವರು.—ಜ್ಞಾನೋಕ್ತಿ 20:7.
6. ಮಕ್ಕಳು ಮಾದರಿಯ ಮೂಲಕ ಕಲಿಯುತ್ತಾರೆಂಬ ಸಂಗತಿಯನ್ನು ಹೆತ್ತವರು ಹೇಗೆ ಸದುಪಯೋಗಿಸಬಹುದು?
6 ಮಕ್ಕಳಲ್ಲಿ ಕಲಿಯುವ ಹಸಿವು ಇರುತ್ತದೆ. ಅವರ ಕಿವಿಗಳು ಚುರುಕಾಗಿರುತ್ತವೆ ಮತ್ತು ಅವರು ಎಲ್ಲವನ್ನೂ ಚೆನ್ನಾಗಿ ಗಮನಿಸುತ್ತಾರೆ. ಆದುದರಿಂದ ನೀವೇನು ಮಾಡುತ್ತೀರೊ ಅದನ್ನು ಅವರು ಬೇಗನೆ ನಕಲು ಮಾಡುತ್ತಾರೆ. ನೀವು ಪ್ರಾಪಂಚಿಕ ಭಾವದವರಾಗಿಲ್ಲ ಎಂಬುದನ್ನು ಅವರು ನೋಡುವಾಗ, ಇದು ಅವರಿಗೆ ಯೇಸುವಿನ ಸಲಹೆಯನ್ನು ಹೇಗೆ ಅನುಸರಿಸಬೇಕೆಂಬುದನ್ನು ಕಲಿಯಲು ಸಹಾಯಮಾಡುತ್ತದೆ. ಅವರು ಭೌತಿಕ ವಿಷಯಗಳ ಕುರಿತಾಗಿ ಚಿಂತಿತರಾಗಿರಬಾರದು, ಬದಲಾಗಿ ‘ದೇವರ ರಾಜ್ಯವನ್ನು ಪ್ರಥಮವಾಗಿ ಹುಡುಕಬೇಕು’ ಎಂದು ನೀವು ಅವರಿಗೆ ಕಲಿಸುತ್ತಿದ್ದೀರಿ. (ಮತ್ತಾಯ 6:25-33) ಬೈಬಲ್ ಸತ್ಯ, ದೇವರ ಸಭೆ, ಮತ್ತು ನೇಮಿತ ಹಿರಿಯರ ಬಗ್ಗೆ ಹಿತಕರವಾದ, ಭಕ್ತಿವೃದ್ಧಿಮಾಡುವಂಥ ಸಂಭಾಷಣೆಗಳನ್ನು ನಡೆಸುವ ಮೂಲಕ, ಅವರು ಯೆಹೋವನನ್ನು ಗೌರವಿಸುವಂತೆ ಮತ್ತು ಆತನ ಆತ್ಮಿಕ ಒದಗಿಸುವಿಕೆಗಳನ್ನು ಗಣ್ಯಮಾಡುವಂತೆ ನೀವು ಮಕ್ಕಳಿಗೆ ಕಲಿಸುತ್ತೀರಿ. ನೀವೇನು ಹೇಳುತ್ತೀರೊ ಅದರಂತೆ ನಡೆಯದಿದ್ದರೆ ಅದನ್ನೂ ಮಕ್ಕಳು ಬೇಗನೆ ಗಮನಿಸುತ್ತಾರೆ. ಆದುದರಿಂದ, ನೀವು ಅವರಿಗೆ ಕೊಡುವ ಉಪದೇಶದ ಜೊತೆಯಲ್ಲಿ, ನಿಮ್ಮ ಸ್ವಂತ ನಡತೆ ಹಾಗೂ ಮನೋಭಾವವು ಸಹ ಆತ್ಮಿಕ ವಿಷಯಗಳಿಗಾಗಿರುವ ನಿಮ್ಮ ಗಾಢವಾದ ಗಣ್ಯತೆಯನ್ನು ವ್ಯಕ್ತಪಡಿಸಬೇಕು. ತಮ್ಮ ಒಳ್ಳೆಯ ಮಾದರಿಯು, ಯೆಹೋವನ ಕಡೆಗೆ ಮನಃಪೂರ್ವಕವಾದ ಪ್ರೀತಿಯನ್ನು ಮಕ್ಕಳಲ್ಲಿ ಉತ್ಪಾದಿಸಿರುವುದನ್ನು ನೋಡುವುದು, ಹೆತ್ತವರಿಗೆ ಅದೆಂಥ ದೊಡ್ಡ ಆಶೀರ್ವಾದವಾಗಿದೆ!—ಜ್ಞಾನೋಕ್ತಿ 23:24, 25.
7, 8. ಮಕ್ಕಳನ್ನು ತೀರ ಚಿಕ್ಕ ಪ್ರಾಯದಲ್ಲೇ ತರಬೇತಿಗೊಳಿಸುವುದರ ಮೌಲ್ಯವನ್ನು ಯಾವ ಉದಾಹರಣೆಯು ತೋರಿಸುತ್ತದೆ, ಮತ್ತು ಯಶಸ್ಸಿಗಾಗಿ ಕೀರ್ತಿಯು ಯಾರಿಗೆ ಸಲ್ಲಬೇಕು?
7 ಚಿಕ್ಕ ಪ್ರಾಯದಿಂದಲೇ ಮಕ್ಕಳಿಗೆ ತರಬೇತಿಯನ್ನು ಕೊಡುವ ಮೌಲ್ಯವನ್ನು, ವೆನಿಸ್ವೇಲದಿಂದ ಬಂದಿರುವ ಒಂದು ಉದಾಹರಣೆಯಿಂದ ನೋಡಬಹುದು. (2 ತಿಮೊಥೆಯ 3:15) ಫೆಲಿಕ್ಸ್ ಮತ್ತು ಮೆಯರ್ಲಿನ್ ಎಂಬುವವರು ಒಬ್ಬ ಯುವ ವಿವಾಹಿತ ದಂಪತಿಯಾಗಿದ್ದರು. ಅವರು ಪಯನೀಯರರಾಗಿದ್ದರು. ಅವರಿಗೆ ಫೆಲಿಟೊ ಎಂಬ ಮಗನು ಹುಟ್ಟಿದಾಗ, ಅವನು ಯೆಹೋವನ ಸತ್ಯಾರಾಧಕನೋಪಾದಿ ಬೆಳೆಯುವಂತೆ ತಮ್ಮಿಂದಾದುದೆಲ್ಲವನ್ನೂ ಮಾಡಲು ಅವರು ಕಾತುರರಾಗಿದ್ದರು. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಬೈಬಲ್ ಕಥೆಗಳ ನನ್ನ ಪುಸ್ತಕದಿಂದ ಮೆಯರ್ಲಿನ್ ಫೆಲಿಟೊಗೆ ಕಥೆಗಳನ್ನು ಓದಿಹೇಳುತ್ತಿದ್ದಳು. ಆದುದರಿಂದ, ತುಂಬ ಚಿಕ್ಕವನಾಗಿದ್ದಾಗಲೇ, ಈ ಪುಸ್ತಕದಲ್ಲಿ ಮೋಶೆ ಮತ್ತು ಇತರರ ಚಿತ್ರಗಳನ್ನು ಅವನು ಗುರುತಿಸಲು ಶಕ್ತನಾಗಿದ್ದನು.
8 ತುಂಬ ಚಿಕ್ಕವನಿದ್ದಾಗಲೇ ಫೆಲಿಟೊ ಒಬ್ಬನಾಗಿಯೇ ಬೇರೆಯವರಿಗೆ ಸಾಕ್ಷಿಯನ್ನು ಕೊಡಲಾರಂಭಿಸಿದನು. ಒಬ್ಬ ರಾಜ್ಯ ಪ್ರಚಾರಕನಾಗಬೇಕೆಂಬ ತನ್ನ ಬಯಕೆಯನ್ನು ಅವನು ಪೂರೈಸಿದನು, ಮತ್ತು ಅನಂತರ ದೀಕ್ಷಾಸ್ನಾನ ಪಡೆದುಕೊಂಡನು. ಸಮಯಾನಂತರ ಫೆಲಿಟೊ ಒಬ್ಬ ರೆಗ್ಯುಲರ್ ಪಯನೀಯರನಾದನು. ಅವನ ಹೆತ್ತವರು ಹೀಗೆ ಹೇಳುತ್ತಾರೆ: “ನಮ್ಮ ಮಗನ ಪ್ರಗತಿಯನ್ನು ನೋಡುವಾಗ, ಇದೆಲ್ಲಕ್ಕೂ ನಾವು ಯೆಹೋವನಿಗೆ ಮತ್ತು ಆತನ ಸಲಹೆಗೆ ಋಣಿಗಳಾಗಿದ್ದೇವೆಂಬುದು ಮನದಟ್ಟಾಗುತ್ತದೆ.”
ಆತ್ಮಿಕವಾಗಿ ಬೆಳೆಯುವಂತೆ ಮಕ್ಕಳಿಗೆ ಸಹಾಯಮಾಡಿರಿ
9. ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಿಂದ ಸಿಗುವ ಆತ್ಮಿಕ ಸಲಹೆಗೆ ನಾವೇಕೆ ಆಭಾರಿಗಳಾಗಿರಬೇಕು?
9 ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದರ ಕುರಿತಾಗಿ ಸಲಹೆ ಕೊಡುವ ಅಸಂಖ್ಯಾತ ಪತ್ರಿಕೆಗಳು, ನೂರಾರು ಪುಸ್ತಕಗಳು ಮತ್ತು ಸಾವಿರಾರು ಇಂಟರ್ನೆಟ್ ವೆಬ್ ಸೈಟ್ಗಳಿವೆ. ಆದರೆ ಅನೇಕವೇಳೆ, “ಅವುಗಳಲ್ಲಿರುವ ಮಾಹಿತಿಯು ಪರಸ್ಪರ ವಿರುದ್ಧವಾಗಿರುತ್ತದೆ,” ಎಂದು ಮಕ್ಕಳ ಕುರಿತಾದ ವಿಶೇಷ ಸಂಚಿಕೆಯ ನ್ಯೂಸ್ವೀಕ್ ಪತ್ರಿಕೆಯು ಹೇಳುತ್ತದೆ. “ಭರವಸೆಯಿಡಬಹುದೆಂದು ನೀವು ನೆನಸಿದಂಥ ಮಾಹಿತಿಯು ಪೂರ್ತಿಯಾಗಿ ತಪ್ಪೆಂದು ಗೊತ್ತಾಗುವಾಗ, ಇನ್ನೂ ಹೆಚ್ಚು ಗಲಿಬಿಲಿಯಾಗುತ್ತದೆ.” ಆದರೆ ಯೆಹೋವನು, ಕುಟುಂಬಗಳ ಬೋಧನೆ ಮತ್ತು ಆತ್ಮಿಕ ಬೆಳವಣಿಗೆಗಾಗಿ ಹೇರಳವಾದ ಒದಗಿಸುವಿಕೆಗಳನ್ನು ಮಾಡಿರುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ ಮಾಡಲ್ಪಡುವ ಎಲ್ಲ ಒದಗಿಸುವಿಕೆಗಳ ಪೂರ್ಣ ಲಾಭವನ್ನು ನೀವು ಪಡೆದುಕೊಳ್ಳುತ್ತಿದ್ದೀರೊ?—ಮತ್ತಾಯ 24:45-47.
10. ಪರಿಣಾಮಕಾರಿಯಾದ ಕುಟುಂಬ ಬೈಬಲ್ ಅಭ್ಯಾಸವು, ಹೆತ್ತವರಿಗೂ ಮಕ್ಕಳಿಗೂ ಹೇಗೆ ಪ್ರಯೋಜನದಾಯಕವಾಗಿದೆ?
10 ಅತಿ ಪ್ರಾಮುಖ್ಯವಾದ ಒಂದು ಅಗತ್ಯವು, ಪ್ರಶಾಂತವಾಗಿರುವ ಗಡಿಬಿಡಿಯಿಲ್ಲದ ವಾತಾವರಣದಲ್ಲಿ ನಡೆಸಲ್ಪಡುವ ಕ್ರಮವಾದ, ಸುಸಂಗತವಾದ ಕುಟುಂಬ ಬೈಬಲ್ ಅಭ್ಯಾಸವೇ ಆಗಿದೆ. ಎಲ್ಲರೂ ಅದರಿಂದ ಏನಾದರೂ ಕಲಿಯುವಂತೆ, ಆನಂದಿಸುವಂತೆ ಮತ್ತು ಉತ್ತೇಜನ ಪಡೆಯುವಂತೆ ಮಾಡಲು, ಅದಕ್ಕಾಗಿ ಒಳ್ಳೆಯ ತಯಾರಿಯು ಆವಶ್ಯಕ. ತಮ್ಮ ಮಕ್ಕಳು ಮಾತಾಡುವಂತೆ ಮನವೊಲಿಸುವ ಮೂಲಕ ಅವರ ಹೃದಮನಗಳಲ್ಲಿ ಏನಿದೆಯೆಂಬುದನ್ನು ಹೆತ್ತವರು ತಿಳಿದುಕೊಳ್ಳಬಹುದು. ಕುಟುಂಬದ ಎಲ್ಲ ಸದಸ್ಯರು ಅಭ್ಯಾಸಕ್ಕಾಗಿ ಮುನ್ನೋಡುತ್ತಾ ಕಾದಿರುತ್ತಾರೊ ಎಂಬುದನ್ನು ಗಮನಿಸುವುದು, ಕುಟುಂಬ ಅಭ್ಯಾಸವು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನೀವು ಕಂಡುಹಿಡಿಯಬಹುದಾದ ಒಂದು ವಿಧವಾಗಿದೆ.
11. (ಎ) ತಮ್ಮ ಮಕ್ಕಳು ಯಾವ ಗುರಿಗಳನ್ನಿಡುವಂತೆ ಹೆತ್ತವರು ಸಹಾಯಮಾಡಬಹುದು? (ಬಿ) ಒಬ್ಬ ಜಪಾನೀ ಹುಡುಗಿಯು ತನ್ನ ಗುರಿಯನ್ನು ಬೆನ್ನಟ್ಟಿದ್ದರಿಂದ ಸಿಕ್ಕಿದ ಫಲಿತಾಂಶವೇನು?
11 ತದ್ರೀತಿಯಲ್ಲಿ, ಆತ್ಮಿಕ ಗುರಿಗಳನ್ನಿಡುವುದು ಸಹ ಆತ್ಮಿಕವಾಗಿ ಬಲವಾಗಿರುವ ಒಂದು ಕುಟುಂಬವನ್ನು ಕಟ್ಟಲು ಸಹಾಯಮಾಡುತ್ತದೆ. ಮಕ್ಕಳು ಇಂಥ ಗುರಿಗಳನ್ನಿಡುವಂತೆ ಹೆತ್ತವರು ಸಹಾಯಮಾಡಬೇಕು. ಬೈಬಲನ್ನು ದಿನಾಲೂ ಓದುವುದು, ಸುವಾರ್ತೆಯ ಕ್ರಮದ ಪ್ರಚಾರಕರಾಗುವುದು, ಮತ್ತು ಸಮರ್ಪಣೆ ಹಾಗೂ ದೀಕ್ಷಾಸ್ನಾನದ ವರೆಗೆ ಪ್ರಗತಿಯನ್ನು ಮಾಡುವಂಥ ಗುರಿಗಳು ಸೂಕ್ತವಾಗಿವೆ. ಬೇರೆ ಗುರಿಗಳು, ಪಯನೀಯರರೋಪಾದಿ, ಬೆತೆಲಿಗರೋಪಾದಿ, ಅಥವಾ ಮಿಷನೆರಿಗಳೋಪಾದಿ ಪೂರ್ಣ ಸಮಯದ ಸೇವೆಯಾಗಿರಬಹುದು. ಪ್ರಾಥಮಿಕ ಶಾಲೆಯಲ್ಲಿದ್ದಾಗ ಆಯೂಮಿ ಎಂಬ ಹೆಸರಿನ ಜಪಾನೀ ಹುಡುಗಿಯು, ತನ್ನ ತರಗತಿಯಲ್ಲಿರುವ ಎಲ್ಲರಿಗೆ ಸಾಕ್ಷಿ ಕೊಡುವುದನ್ನು ತನ್ನ ಗುರಿಯನ್ನಾಗಿ ಮಾಡಿದಳು. ತನ್ನ ಶಿಕ್ಷಕಿ ಹಾಗೂ ಸಹಪಾಠಿಗಳ ಆಸಕ್ತಿಯನ್ನು ಕೆರಳಿಸಲು, ತರಗತಿಯ ಗ್ರಂಥಾಲಯದಲ್ಲಿ ಹಲವಾರು ಬೈಬಲ್ ಪ್ರಕಾಶನಗಳನ್ನು ಇಡಲು ಅವಳು ಅನುಮತಿಯನ್ನು ಪಡೆದುಕೊಂಡಳು. ಫಲಿತಾಂಶವಾಗಿ, ಆಯೂಮಿ ಪ್ರಾಥಮಿಕ ಶಾಲೆಯಲ್ಲಿದ್ದ ಆರು ವರ್ಷಗಳ ಅವಧಿಯಲ್ಲಿ, 13 ಬೈಬಲ್ ಅಭ್ಯಾಸಗಳನ್ನು ನಡಿಸಿದಳು. ಆ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬಳು ಮತ್ತು ಅವಳ ಕುಟುಂಬದ ಇತರ ಸದಸ್ಯರು ದೀಕ್ಷಾಸ್ನಾನ ಪಡೆದುಕೊಂಡ ಕ್ರೈಸ್ತರಾದರು.
12. ಕ್ರೈಸ್ತ ಕೂಟಗಳಿಂದ ಮಕ್ಕಳು ಅತಿ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆಯಬಹುದು?
12 ಬಲವಾದ ಆತ್ಮಿಕ ಆರೋಗ್ಯಕ್ಕಾಗಿ, ಕ್ರಮವಾಗಿ ಕೂಟಕ್ಕೆ ಹಾಜರಾಗುವುದು ಸಹ ತುಂಬ ಆವಶ್ಯಕ. ಜೊತೆ ವಿಶ್ವಾಸಿಗಳು, ‘ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ಬಿಟ್ಟು ಬಿಡದಂತೆ’ ಅಪೊಸ್ತಲ ಪೌಲನು ಬುದ್ಧಿಹೇಳಿದನು. ಕೂಟಗಳಿಗೆ ತಪ್ಪಿಸಿಕೊಳ್ಳುವುದು ನಮ್ಮ ರೂಢಿಯಾಗದಿರಲಿ. ಏಕೆಂದರೆ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದರಿಂದ ಆಬಾಲವೃದ್ಧರು ಏಕಪ್ರಕಾರವಾಗಿ ತುಂಬ ಪ್ರಯೋಜನವನ್ನು ಪಡೆಯುತ್ತಾರೆ. (ಇಬ್ರಿಯ 10:24, 25; ಧರ್ಮೋಪದೇಶಕಾಂಡ 31:12) ಮಕ್ಕಳಿಗೆ ಗಮನಕೊಟ್ಟು ಕೇಳುವಂತೆ ಕಲಿಸಬೇಕು. ಕೂಟಗಳಿಗಾಗಿ ತಯಾರಿಸುವುದು ಸಹ ತುಂಬ ಪ್ರಾಮುಖ್ಯ. ಏಕೆಂದರೆ ಕೂಟಗಳಲ್ಲಿ ಉತ್ತರಕೊಡುವ ಮೂಲಕ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದಲೇ ಅತಿ ಪ್ರಮುಖ ಪ್ರಯೋಜನವು ಲಭಿಸುವುದು. ಒಂದು ಚಿಕ್ಕ ಮಗುವು ಉತ್ತರಗಳನ್ನು ಕೊಡಲಾರಂಭಿಸುವಾಗ, ಒಂದೆರಡು ಮಾತುಗಳನ್ನು ಹೇಳಬಹುದು ಅಥವಾ ಪ್ಯಾರಗ್ರಾಫ್ನಿಂದಲೇ ಒಂದು ಚಿಕ್ಕ ಭಾಗವನ್ನು ಓದಿಹೇಳಬಹುದು. ಆದರೆ ಮಕ್ಕಳು ಸ್ವತಃ ಉತ್ತರಗಳನ್ನು ಹುಡುಕಿ, ತಮ್ಮ ಸ್ವಂತ ಮಾತುಗಳಲ್ಲಿ ಹೇಳುವಂತೆ ಅವರಿಗೆ ತರಬೇತಿ ಕೊಡುವುದಾದರೆ, ಅದು ಹೆಚ್ಚು ಉಪಯುಕ್ತವಾಗಿರುವುದು. ಹೆತ್ತವರಾದ ನೀವು, ಸ್ವತಃ ಅರ್ಥಪೂರ್ಣವಾದ ಉತ್ತರಗಳನ್ನು ಕ್ರಮವಾಗಿ ಕೊಡುತ್ತಿರುವ ಮೂಲಕ ಮಾದರಿಯನ್ನಿಡುತ್ತೀರೊ? ಕುಟುಂಬದ ಪ್ರತಿಯೊಬ್ಬ ಸದಸ್ಯನ ಬಳಿ ತನ್ನದೇ ಆದ ಬೈಬಲ್, ಸಂಗೀತ ಪುಸ್ತಕ, ಮತ್ತು ಶಾಸ್ತ್ರೀಯ ಚರ್ಚೆಗಾಗಿ ಉಪಯೋಗಿಸಲ್ಪಡುತ್ತಿರುವ ಪ್ರಕಾಶನದ ಒಂದು ಪ್ರತಿ ಇರುವುದು ಒಳ್ಳೇದು.
13, 14. (ಎ) ಹೆತ್ತವರು ಶುಶ್ರೂಷೆಯಲ್ಲಿ ತಮ್ಮ ಮಕ್ಕಳೊಂದಿಗೆ ಜೊತೆಯಾಗಿ ಏಕೆ ಕೆಲಸಮಾಡಬೇಕು? (ಬಿ) ಕ್ಷೇತ್ರ ಸೇವೆಯನ್ನು ಮಕ್ಕಳಿಗೆ ಪ್ರಯೋಜನಕರವೂ, ಆನಂದಕರವೂ ಆಗಿ ಮಾಡುವಂತೆ ಯಾವುದು ಸಹಾಯಮಾಡುವುದು?
13 ವಿವೇಕಿ ಹೆತ್ತವರು, ಸಾರುವ ಕೆಲಸವನ್ನು ಮಕ್ಕಳ ಜೀವಿತದ ಒಂದು ಮಹತ್ವಪೂರ್ಣ ಭಾಗವನ್ನಾಗಿ ಮಾಡಲು ಸಹಾಯಮಾಡುವರು. ಹೀಗೆ, ತಮ್ಮ ಮಕ್ಕಳು ತಮ್ಮ ಯೌವನದ ಶಕ್ತಿಯನ್ನು ಯೆಹೋವನ ಸೇವೆಗಾಗಿ ಉಪಯೋಗಿಸಿಕೊಳ್ಳುವಂತೆ ಮಾರ್ಗದರ್ಶಿಸುವರು. (ಇಬ್ರಿಯ 13:15) ಅದಕ್ಕಾಗಿ ಅವರು ತಮ್ಮ ಮಕ್ಕಳೊಂದಿಗೆ ಶುಶ್ರೂಷೆಯಲ್ಲಿ ಜೊತೆಯಾಗಿ ಕೆಲಸಮಾಡುವರು. ಆಗ ಮಾತ್ರ, ತಮ್ಮ ಮಕ್ಕಳಿಗೆ ‘ಅವಮಾನಕ್ಕೆ ಗುರಿಯಾಗದ, ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವ’ ಶುಶ್ರೂಷಕರಾಗಲು ಬೇಕಾಗಿರುವ ತರಬೇತಿಯು ಸಿಗುತ್ತಿದೆ ಎಂಬುದನ್ನು ಅವರು ಖಚಿತಪಡಿಸಿಕೊಳ್ಳಬಲ್ಲರು. (2 ತಿಮೊಥೆಯ 2:15) ಹಾಗಾದರೆ, ನಿಮ್ಮ ವಿಷಯದಲ್ಲೇನು? ನೀವೊಬ್ಬ ಹೆತ್ತವರಾಗಿರುವಲ್ಲಿ, ಕ್ಷೇತ್ರ ಸೇವೆಗಾಗಿ ತಯಾರಿಸುವಂತೆ ನೀವು ನಿಮ್ಮ ಮಕ್ಕಳಿಗೆ ಸಹಾಯಮಾಡುತ್ತೀರೊ? ಹೀಗೆ ಮಾಡುವುದರಿಂದ, ಅವರ ಶುಶ್ರೂಷೆಯು ಆನಂದದಾಯಕವೂ, ಅರ್ಥಪೂರ್ಣವೂ, ಫಲಪ್ರದವೂ ಆಗಿರುವಂತೆ ನೀವು ಅವರಿಗೆ ಸಹಾಯಮಾಡುವಿರಿ.
14 ಹೆತ್ತವರು ಶುಶ್ರೂಷೆಯಲ್ಲಿ ತಮ್ಮ ಮಕ್ಕಳೊಂದಿಗೆ ಜೊತೆಯಾಗಿ ಕೆಲಸಮಾಡುವುದು ಏಕೆ ಪ್ರಯೋಜನಕಾರಿಯಾಗಿದೆ? ಏಕೆಂದರೆ, ಇದರ ಮೂಲಕ ಮಕ್ಕಳು ತಮ್ಮ ಹೆತ್ತವರ ಉತ್ತಮ ಮಾದರಿಯನ್ನು ನೋಡಿ, ಅದನ್ನು ನಕಲು ಮಾಡಬಹುದು. ಅದೇ ಸಮಯದಲ್ಲಿ, ಹೆತ್ತವರು ತಮ್ಮ ಮಕ್ಕಳ ಮನೋಭಾವ, ಅವರು ನಡೆದುಕೊಳ್ಳುವ ರೀತಿ ಮತ್ತು ಅವರ ಸಾಮರ್ಥ್ಯವನ್ನು ಗಮನಿಸಬಹುದು. ಶುಶ್ರೂಷೆಯ ಬೇರೆ ಬೇರೆ ವೈಶಿಷ್ಟ್ಯಗಳಲ್ಲಿ ಪಾಲ್ಗೊಳ್ಳುವಾಗ ನಿಮ್ಮ ಮಕ್ಕಳನ್ನು ಖಂಡಿತವಾಗಿಯೂ ಜೊತೆಯಲ್ಲಿ ಕರೆದುಕೊಂಡು ಹೋಗಿರಿ. ಸಾಧ್ಯವಿರುವಲ್ಲಿ, ಪ್ರತಿಯೊಬ್ಬ ಮಗುವಿಗೆ ತನ್ನದೇ ಆದ ಸೇವೆಯ ಬ್ಯಾಗ್ ಇರಲಿ. ಅದನ್ನು ನೀಟಾಗಿಯೂ, ನೋಡಲು ಅಂದವಾಗಿಯೂ ಇಟ್ಟುಕೊಳ್ಳುವುದು ಹೇಗೆಂಬುದನ್ನು ಕಲಿಸಿರಿ. ಸತತವಾದ ತರಬೇತಿ ಮತ್ತು ಉತ್ತೇಜನದ ಮೂಲಕ, ಶುಶ್ರೂಷೆಗಾಗಿ ನಿಜವಾದ ಗಣ್ಯತೆಯು ಅವರಲ್ಲಿ ಬೆಳೆಯುವುದು. ಮತ್ತು, ದೇವರಿಗಾಗಿಯೂ ನೆರೆಯವರಿಗಾಗಿಯೂ ಪ್ರೀತಿಯನ್ನು ತೋರಿಸುವ ಒಂದು ವಿಧಾನ, ಸಾರುವ ಕೆಲಸವಾಗಿದೆ ಎಂಬುದನ್ನು ಮಕ್ಕಳು ಮನಗಾಣುವರು.—ಮತ್ತಾಯ 22:37-39; 28:19, 20.
ಆತ್ಮಿಕತೆಯನ್ನು ಕಾಪಾಡಿಕೊಳ್ಳುವುದು
15. ಕುಟುಂಬದ ಆತ್ಮಿಕತೆಯನ್ನು ಕಾಪಾಡಿಕೊಳ್ಳುವುದು ತುಂಬ ಪ್ರಾಮುಖ್ಯವಾಗಿರುವುದರಿಂದ, ಅದನ್ನು ಮಾಡುವ ಕೆಲವೊಂದು ವಿಧಗಳು ಯಾವುವು?
15 ಕುಟುಂಬದ ಆತ್ಮಿಕತೆಯನ್ನು ಕಾಪಾಡಿಕೊಳ್ಳುವುದು ತೀರ ಆವಶ್ಯಕ. (ಕೀರ್ತನೆ 119:93) ಇದನ್ನು ಮಾಡುವ ಒಂದು ವಿಧವು, ಪ್ರತಿಯೊಂದು ಸಂದರ್ಭದಲ್ಲಿ ನಿಮ್ಮ ಕುಟುಂಬದೊಂದಿಗೆ ಆತ್ಮಿಕ ವಿಷಯಗಳನ್ನು ಚರ್ಚಿಸುವುದೇ ಆಗಿದೆ. ನೀವು ಅವರೊಂದಿಗೆ ದೈನಂದಿನ ಬೈಬಲ್ ವಚನವನ್ನು ಚರ್ಚಿಸುತ್ತೀರೊ? ‘ದಾರಿನಡೆಯುವಾಗ’ ಅವರೊಂದಿಗೆ ಕ್ಷೇತ್ರ ಸೇವೆಯ ಅನುಭವಗಳನ್ನು ಅಥವಾ ಇತ್ತೀಚಿನ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿ ಬಂದಿರುವ ಅಂಶಗಳನ್ನು ತಿಳಿಸುವುದು ನಿಮ್ಮ ರೂಢಿಯಾಗಿದೆಯೊ? “ಮಲಗುವಾಗಲೂ ಏಳುವಾಗಲೂ,” ಪ್ರತಿ ದಿನ ಆತನು ಕೊಟ್ಟಿರುವ ಜೀವಕ್ಕಾಗಿ ಮತ್ತು ಆತನ ಹೇರಳವಾದ ಒದಗಿಸುವಿಕೆಗಳಿಗಾಗಿ ಯೆಹೋವನಿಗೆ ಪ್ರಾರ್ಥನೆಯಲ್ಲಿ ಉಪಕಾರ ಹೇಳಲು ನಿಮಗೆ ಜ್ಞಾಪಕವಿರುತ್ತದೊ? (ಧರ್ಮೋಪದೇಶಕಾಂಡ 6:6-9) ನೀವು ಮಾಡುವ ಎಲ್ಲ ಕೆಲಸಗಳಲ್ಲಿ ದೇವರಿಗಾಗಿರುವ ನಿಮ್ಮ ಪ್ರೀತಿಯನ್ನು ಮಕ್ಕಳು ನೋಡುವಾಗ, ಅವರು ಸಹ ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳುವಂತೆ ಇದು ಅವರಿಗೆ ಸಹಾಯಮಾಡುವುದು.
16. ಮಕ್ಕಳು ತಮ್ಮ ಸ್ವಂತ ಸಂಶೋಧನೆಯನ್ನು ಮಾಡುವಂತೆ ಉತ್ತೇಜಿಸುವುದರ ಮಹತ್ವವೇನು?
16 ಕೆಲವೊಮ್ಮೆ ಮಕ್ಕಳ ಮುಂದೆ ಕೆಲವೊಂದು ಸಮಸ್ಯೆಗಳು ಅಥವಾ ಸನ್ನಿವೇಶಗಳು ಏಳುತ್ತವೆ. ಇವುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಅವರಿಗೆ ಮಾರ್ಗದರ್ಶನದ ಅಗತ್ಯವಿದೆ. ಅವರೇನು ಮಾಡಬೇಕೆಂಬುದನ್ನು ಯಾವಾಗಲೂ ನೀವೇ ಅವರಿಗೆ ಹೇಳುವ ಬದಲು, ಅವರು ತಮ್ಮಷ್ಟಕ್ಕೆ ಸಂಶೋಧನೆಯನ್ನು ಮಾಡಲು ಉತ್ತೇಜಿಸುವ ಮೂಲಕ ಆ ನಿರ್ದಿಷ್ಟ ವಿಷಯದ ಕುರಿತಾಗಿ ದೇವರ ದೃಷ್ಟಿಕೋನವನ್ನು ಕಂಡುಹಿಡಿಯುವುದು ಹೇಗೆಂಬುದನ್ನು ನೀವು ತೋರಿಸಬಹುದಲ್ಲವೇ? ‘ನಂಬಿಗಸ್ತ ಆಳಿನ’ ಮೂಲಕ ಒದಗಿಸಲ್ಪಡುವ ಎಲ್ಲ ಸಾಧನಗಳು ಮತ್ತು ಪ್ರಕಾಶನಗಳನ್ನು ಚೆನ್ನಾಗಿ ಉಪಯೋಗಿಸುವಂತೆ ಮಕ್ಕಳಿಗೆ ಕಲಿಸುವುದು, ಅವರು ಯೆಹೋವನೊಂದಿಗೆ ಒಂದು ಆಪ್ತವಾದ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುವುದು. (1 ಸಮುವೇಲ 2:21ಬಿ) ಮತ್ತು ತಮ್ಮ ಬೈಬಲ್ ಸಂಶೋಧನೆಯಿಂದ ಅವರು ಪಡೆದುಕೊಂಡಿರುವ ಆಸಕ್ತಿಕರ ಸಂಗತಿಗಳನ್ನು ಮನೆಯಲ್ಲಿರುವ ಬೇರೆ ಸದಸ್ಯರೊಂದಿಗೆ ಹಂಚಿಕೊಳ್ಳುವಾಗ, ಕುಟುಂಬದ ಆತ್ಮಿಕತೆಯು ಇನ್ನೂ ಹೆಚ್ಚಾಗುತ್ತದೆ.
ಯೆಹೋವನ ಮೇಲೆ ಪೂರ್ಣವಾಗಿ ಆತುಕೊಳ್ಳಿರಿ
17. ತಮ್ಮ ಮಕ್ಕಳನ್ನು ಕ್ರೈಸ್ತರೋಪಾದಿ ಬೆಳೆಸುವ ವಿಷಯದಲ್ಲಿ ಏಕ ಹೆತ್ತವರು ಏಕೆ ಧೈರ್ಯಗೆಡಬಾರದು?
17 ಆದರೆ ಕೇವಲ ತಂದೆ ಇಲ್ಲವೇ ತಾಯಿ ಮಾತ್ರ ಇರುವ ಕುಟುಂಬಗಳ ಕುರಿತೇನು? ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಇಂಥವರಿಗೆ ಹೆಚ್ಚಿನ ಸವಾಲುಗಳಿರುತ್ತವೆ. ಆದರೆ ಏಕ ಹೆತ್ತವರೇ, ಎದೆಗುಂದಿದವರಾಗಬೇಡಿ! ನೀವು ಸಫಲರಾಗಸಾಧ್ಯವಿದೆ. ದೇವರಲ್ಲಿ ನಂಬಿಕೆಯನ್ನಿಟ್ಟಿರುವ, ಆತನ ಸಲಹೆಯನ್ನು ವಿಧೇಯತೆಯಿಂದ ಪಾಲಿಸಿರುವ, ಮತ್ತು ಉತ್ತಮ ಹಾಗೂ ಆತ್ಮಿಕವಾಗಿ ಬಲವಾಗಿರುವ ಮಕ್ಕಳನ್ನು ಬೆಳೆಸಿರುವ ಅನೇಕ ಏಕ ಹೆತ್ತವರ ಉದಾಹರಣೆಗಳಿಂದ ಇದು ಕಂಡುಬರುತ್ತದೆ. (ಜ್ಞಾನೋಕ್ತಿ 22:6) ಏಕ ಹೆತ್ತವರಾಗಿರುವ ಕ್ರೈಸ್ತರು ಖಂಡಿತವಾಗಿಯೂ ಯೆಹೋವನ ಮೇಲೆ ಪೂರ್ಣವಾಗಿ ಆತುಕೊಳ್ಳಬೇಕು. ಖಂಡಿತವಾಗಿಯೂ ಆತನು ಸಹಾಯವನ್ನು ಮಾಡುವನೆಂಬ ನಂಬಿಕೆ ಅವರಿಗಿರಬೇಕು.—ಕೀರ್ತನೆ 121:1-3.
18. ಹೆತ್ತವರು ತಮ್ಮ ಮಕ್ಕಳ ಯಾವ ಮಾನಸಿಕ ಹಾಗೂ ಶಾರೀರಿಕ ಅಗತ್ಯಗಳಿಗೆ ಗಮನಕೊಡಬೇಕು, ಆದರೆ ಯಾವುದಕ್ಕೆ ಹೆಚ್ಚು ಮಹತ್ವವು ಕೊಡಲ್ಪಡಬೇಕು?
18 ‘ನಗುವ ಸಮಯ ಮತ್ತು ಕುಣಿದಾಡುವ ಸಮಯ’ ಇದೆಯೆಂದು ವಿವೇಕಿ ಹೆತ್ತವರು ಗ್ರಹಿಸುತ್ತಾರೆ. (ಪ್ರಸಂಗಿ 3:1, 4) ಮಗುವಿನ ಮನಸ್ಸು ಮತ್ತು ದೇಹದ ಬೆಳವಣಿಗೆಗೆ ವಿಶ್ರಾಂತಿಯ ಅವಧಿಗಳು ಹಾಗೂ ಸಮತೂಕದ ಮತ್ತು ಹಿತಕರವಾದ ಮನೋರಂಜನೆಯು ಸಹ ಅತ್ಯಾವಶ್ಯಕ. ಉತ್ತಮ ಗುಣಮಟ್ಟದ ಸಂಗೀತ ಮತ್ತು ವಿಶೇಷವಾಗಿ ದೇವರ ಸ್ತುತಿಗೀತೆಗಳನ್ನು ಹಾಡುವುದು, ಒಂದು ಉತ್ತಮ ಮನೋಭಾವವನ್ನು ವಿಕಸಿಸಲು ಮಗುವಿಗೆ ಸಹಾಯಮಾಡುವುದು. ಈ ಮನೋಭಾವವು, ಯೆಹೋವನೊಂದಿಗಿನ ಅವನ ಸಂಬಂಧವನ್ನು ಬಲಪಡಿಸುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಬಲ್ಲದು. (ಕೊಲೊಸ್ಸೆ 3:16) ದೇವ-ಭಯವುಳ್ಳ ವಯಸ್ಕನಾಗಲಿಕ್ಕಾಗಿ ಸಿದ್ಧತೆ ನಡೆಸಲು ಸಹ ಯುವ ಪ್ರಾಯವು ಸರಿಯಾದ ಸಮಯವಾಗಿದೆ. ಹೀಗೆ ಪರದೈಸ ಭೂಮಿಯಲ್ಲಿ ಸದಾಕಾಲಕ್ಕೂ ಜೀವನದ ಆನಂದವನ್ನು ಸವಿಯುತ್ತಾ ಇರಬಹುದು.—ಗಲಾತ್ಯ 6:8.
19. ಮಕ್ಕಳನ್ನು ಬೆಳೆಸಲಿಕ್ಕಾಗಿ ತಾವು ಮಾಡುತ್ತಿರುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನೆಂಬ ಭರವಸೆ ಹೆತ್ತವರಿಗೆ ಏಕೆ ಇರಬಹುದು?
19 ಎಲ್ಲ ಕ್ರೈಸ್ತ ಕುಟುಂಬಗಳು, ಬಲವಾದ ಆತ್ಮಿಕ ಘಟಕಗಳಾಗಿ ಯಶಸ್ವಿಯಾಗುವಂತೆ ಯೆಹೋವನು ಬಯಸುತ್ತಾನೆ. ನಾವು ನಿಜವಾಗಿಯೂ ದೇವರನ್ನು ಪ್ರೀತಿಸುತ್ತಿರುವಲ್ಲಿ ಮತ್ತು ಆತನ ವಾಕ್ಯಕ್ಕೆ ವಿಧೇಯರಾಗಲು ನಮ್ಮಿಂದಾದುದೆಲ್ಲವನ್ನೂ ಮಾಡುವಲ್ಲಿ, ಆತನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು ಮತ್ತು ಆತನ ಪ್ರೇರಿತ ನಿರ್ದೇಶನವನ್ನು ಪಾಲಿಸಲು ಬೇಕಾಗಿರುವ ಬಲವನ್ನು ನಮಗೆ ಕೊಡುವನು. (ಯೆಶಾಯ 48:17; ಫಿಲಿಪ್ಪಿ 4:13) ನಿಮ್ಮ ಮಕ್ಕಳಿಗೆ ಕಲಿಸಲು ಮತ್ತು ಅವರನ್ನು ತರಬೇತಿಗೊಳಿಸಲು ಈಗ ನಿಮಗಿರುವ ಅವಕಾಶವು, ಸ್ವಲ್ಪ ಸಮಯ ಮಾತ್ರ ಇರುವುದು ಮತ್ತು ಪುನಃ ಎಂದಿಗೂ ಸಿಗಲಾರದು ಎಂಬುದನ್ನು ನೆನಪಿಡಿರಿ. ದೇವರ ವಾಕ್ಯದ ಸಲಹೆಯನ್ನು ಅನ್ವಯಿಸಿಕೊಳ್ಳಲು ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿರಿ. ಆಗ ಯೆಹೋವನು, ಆತ್ಮಿಕವಾಗಿ ಬಲವಾಗಿರುವ ಒಂದು ಕುಟುಂಬವನ್ನು ಕಟ್ಟಲಿಕ್ಕಾಗಿ ನೀವು ಮಾಡುವ ಪ್ರಯತ್ನಗಳನ್ನು ಖಂಡಿತವಾಗಿಯೂ ಆಶೀರ್ವದಿಸುವನು.
ನಾವೇನು ಕಲಿತೆವು?
• ಮಕ್ಕಳನ್ನು ತರಬೇತಿಗೊಳಿಸುವಾಗ, ಸಮಯವನ್ನು ಕೊಂಡುಕೊಳ್ಳುವುದು ಏಕೆ ತುಂಬ ಪ್ರಾಮುಖ್ಯವಾಗಿದೆ?
• ಹೆತ್ತವರ ಒಳ್ಳೆಯ ಮಾದರಿಯು ಏಕೆ ಅತ್ಯಾವಶ್ಯಕ?
• ಮಕ್ಕಳು ಆತ್ಮಿಕವಾಗಿ ಬೆಳೆಯುವಂತೆ ಸಹಾಯಮಾಡುವ ಕೆಲವೊಂದು ಪ್ರಾಮುಖ್ಯ ವಿಧಗಳಾಗುವುವು?
• ಒಂದು ಕುಟುಂಬದ ಆತ್ಮಿಕತೆಯನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?
[ಪುಟ 24, 25ರಲ್ಲಿರುವ ಚಿತ್ರ]
ಆತ್ಮಿಕವಾಗಿ ಬಲವಾಗಿರುವ ಕುಟುಂಬಗಳು ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಮಾಡುತ್ತವೆ, ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತವೆ, ಮತ್ತು ಜೊತೆಯಾಗಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತವೆ