ನಿಜವಾದ ದೇವರಾಗಿರುವ ಯೆಹೋವನಲ್ಲಿ ಭರವಸೆಯಿಡಿರಿ
ಮೋಡವಿಲ್ಲದ ರಾತ್ರಿಯಲ್ಲಿ ನೀವು ಆಕಾಶದ ಕಡೆಗೆ ನೋಡಿ, ನೂರಾರು ನಕ್ಷತ್ರಗಳನ್ನು ಕಂಡಿದ್ದೀರೋ? ಅವುಗಳ ಅಸ್ತಿತ್ವಕ್ಕೆ ನೀವು ಹೇಗೆ ವಿವರಣೆ ನೀಡುತ್ತೀರಿ?
ರಾತ್ರಿಯ ನೀರವತೆಯಲ್ಲಿ, ಪುರಾತನ ಇಸ್ರಾಯೇಲಿನ ರಾಜ ದಾವೀದನೊಂದಿಗೆ ನಕ್ಷತ್ರಗಳು ಸಾಂಕೇತಿಕ ರೀತಿಯಲ್ಲಿ ಮಾತಾಡಿದವು. ಇವು ಅವನು ಹೀಗೆ ಬರೆಯುವಂತೆ ಪ್ರಚೋದಿಸಿದವು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” (ಕೀರ್ತನೆ 19:1) ಹೌದು, ಸೃಷ್ಟಿವಸ್ತುಗಳಿಗೆ ಬದಲಾಗಿ ಸೃಷ್ಟಿಕರ್ತನು “ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ” ಯೋಗ್ಯನಾಗಿದ್ದಾನೆ.—ಪ್ರಕಟನೆ 4:11; ರೋಮಾಪುರ 1:25.
“ಸಮಸ್ತವನ್ನು ಕಟ್ಟಿದಾತನು ದೇವರೇ” ಎಂದು ಬೈಬಲ್ ಹೇಳುತ್ತದೆ. (ಇಬ್ರಿಯ 3:4) ವಾಸ್ತವದಲ್ಲಿ, ‘ಯೆಹೋವನಾಮದಿಂದ ಪ್ರಸಿದ್ಧನಾದ’ ಸತ್ಯ ದೇವರು ‘ಒಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು.’ (ಕೀರ್ತನೆ 83:18) ಮತ್ತು ಅವನು ಒಂದು ಭ್ರಾಂತಿಯೋ ಮರೀಚಿಕೆಯೋ ಆಗಿರುವುದಿಲ್ಲ. ತನ್ನ ಸ್ವರ್ಗೀಯ ಪಿತನಾದ ಯೆಹೋವನ ಕುರಿತು ಯೇಸು ಕ್ರಿಸ್ತನು ಹೇಳಿದ್ದು: “ನನ್ನನ್ನು ಕಳುಹಿಸಿದಾತನು ನಿಜವಾದವನು.”—ಯೋಹಾನ 7:28.
ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುವಾತನು
ದೇವರ ಯೆಹೋವ ಎಂಬ ಅಪೂರ್ವ ಹೆಸರು, ಹೀಬ್ರು ಶಾಸ್ತ್ರವೊಂದರಲ್ಲೇ ಸುಮಾರು 7,000 ಬಾರಿ ಕಂಡುಬರುತ್ತದೆ. ಆ ಹೆಸರೇ, ಆತನು ನಿಜವಾದ ದೇವರಾಗಿದ್ದಾನೆ ಎಂಬ ವಾಸ್ತವಾಂಶದೆಡೆಗೆ ಕೈತೋರಿಸುತ್ತದೆ. ದೇವರ ಹೆಸರಿನ ಅಕ್ಷರಾರ್ಥವು, “ಆತನು ತನ್ನನ್ನು ಆಗಿಸಿಕೊಳ್ಳುತ್ತಾನೆ” ಎಂದಾಗಿದೆ. ಹೀಗೆ, ಯೆಹೋವ ದೇವರು ತನ್ನ ಉದ್ದೇಶಗಳನ್ನು ಪೂರೈಸುವವನೋಪಾದಿ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಮೋಶೆಯು ದೇವರಿಗೆ ಆತನ ಹೆಸರಿನ ಕುರಿತು ಕೇಳಿದಾಗ, ಈ ರೀತಿಯಲ್ಲಿ ಯೆಹೋವನು ಅದರ ಅರ್ಥವನ್ನು ವಿವರವಾಗಿ ವರ್ಣಿಸಿದನು: “ನಾನು ಏನಾಗಿ ಪರಿಣಮಿಸುವೆನೋ ಅದಾಗಿಯೇ ಪರಿಣಮಿಸುತ್ತೇನೆ.” (ವಿಮೋಚನಕಾಂಡ 3:14, NW) ರಾಥರ್ಹ್ಯಾಮ್ರ ಭಾಷಾಂತರವು ಕರಾರುವಾಕ್ಕಾಗಿ ಹೇಳಿದ್ದು: “ನನಗೆ ಏನಾಗಲು ಇಷ್ಟವೋ ಅದಾಗಿ ಪರಿಣಮಿಸುವೆ.” ತನ್ನ ನೀತಿಯ ಉದ್ದೇಶಗಳನ್ನು ಹಾಗೂ ವಾಗ್ದಾನಗಳನ್ನು ಸಾಕಾರಗೊಳಿಸಲಿಕ್ಕಾಗಿ ಏನು ಅಗತ್ಯವಿದೆಯೋ ಅದಾಗಿ ಯೆಹೋವನು ಪರಿಣಮಿಸುತ್ತಾನೆ ಅಥವಾ ಹಾಗಾಗುವ ಆಯ್ಕೆಮಾಡುತ್ತಾನೆ. ಹೀಗಿರುವುದರಿಂದಲೇ ಆತನಿಗೆ ಸೃಷ್ಟಿಕರ್ತ, ತಂದೆ, ಪರಮಾಧಿಕಾರಿ ಪ್ರಭು, ಕುರುಬ, ಸೇನಾಧೀಶ್ವರ, ಪ್ರಾರ್ಥನೆಯನ್ನು ಕೇಳುವವ, ನ್ಯಾಯಸ್ಥಾಪಕ, ಬೋಧಕ, ವಿಮೋಚಕ ಎಂಬಂಥ ಅನೇಕ ಪ್ರಭಾವಶೀಲ ಬಿರುದುಗಳಿವೆ.—ನ್ಯಾಯಸ್ಥಾಪಕರು 11:27; ಕೀರ್ತನೆ 23:1; 65:2; 73:28; 89:26; ಯೆಶಾಯ 8:13; 30:20; 40:28; 41:14.
ಸತ್ಯ ದೇವರು ಮಾತ್ರವೇ ಯೆಹೋವ ಎಂಬ ಹೆಸರನ್ನು ಹೊಂದಿರುವುದು ಸೂಕ್ತವಾಗಿರಸಾಧ್ಯವಿದೆ; ಏಕೆಂದರೆ ಮಾನವರು ತಮ್ಮ ಯೋಜನೆಗಳು ಸಫಲವಾಗುವವೋ ಇಲ್ಲವೋ ಎಂಬ ವಿಷಯದಲ್ಲಿ ಎಂದೂ ಖಾತ್ರಿಯಿಂದಿರಲಾರರು. (ಯಾಕೋಬ 4:13, 14) ಆದುದರಿಂದ, ಯೆಹೋವನೊಬ್ಬನೇ ಹೀಗೆ ಹೇಳಶಕ್ತನು: “ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸರುಗೊಳಿಸಿ ಫಲಿಸುವಂತೆ ಮಾಡಿ ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:10, 11.
ಯೆಹೋವನು ತನ್ನ ಉದ್ದೇಶವನ್ನು ಎಷ್ಟು ನಿಶ್ಚಿತತೆಯಿಂದ ಪೂರೈಸುತ್ತಾನೆಂದರೆ, ಯಾವುದು ಮಾನವರಿಗೆ ಅವಾಸ್ತವಿಕವಾಗಿ ಕಾಣುತ್ತದೋ ಅದು ಆತನ ದೃಷ್ಟಿಯಲ್ಲಿ ವಾಸ್ತವಿಕವಾಗಿದೆ. ಅಬ್ರಹಾಮ, ಇಸಾಕ, ಮತ್ತು ಯಾಕೋಬರು ಮರಣಪಟ್ಟು ದೀರ್ಘ ಕಾಲವು ಕಳೆದ ನಂತರವೂ, ಯೇಸು ಅವರ ಕುರಿತು ಉಲ್ಲೇಖಿಸುತ್ತಾ ಹೇಳಿದ್ದು: “[ಯೆಹೋವನು] ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಏಕೆಂದರೆ ಅವರೆಲ್ಲರೂ ಆತನಿಗೆ ಜೀವಿಸುವವರೇ.” (ಲೂಕ 20:37, 38, NW) ಆ ಮೂವರು ಪೂರ್ವಜರು ಮೃತಪಟ್ಟಿದ್ದರು, ಆದರೆ ಅವರನ್ನು ಪುನರುತ್ಥಾನಗೊಳಿಸುವ ದೇವರ ಉದ್ದೇಶವು ಎಷ್ಟು ಖಚಿತವಾಗಿ ನೆರವೇರಲಿಕ್ಕಿತ್ತೆಂದರೆ, ಆತನ ದೃಷ್ಟಿಯಲ್ಲಿ ಅವರು ಕಾರ್ಯತಃ ಜೀವಂತರಾಗಿದ್ದರು. ಪುರಾತನ ಕಾಲದ ಈ ನಂಬಿಗಸ್ತ ಸೇವಕರನ್ನು ಪುನಃ ಉಜ್ಜೀವಿಸುವುದು, ಯೆಹೋವನಿಗೆ ನೆಲದ ಮಣ್ಣಿನಿಂದ ಮೊದಲ ಮಾನವನನ್ನು ಸೃಷ್ಟಿಸಿದಷ್ಟೇ ಸುಲಭದ ಕೆಲಸವಾಗಿರುವುದು.—ಆದಿಕಾಂಡ 2:7.
ದೇವರು ತಾನು ಏನನ್ನು ಉದ್ದೇಶಿಸುತ್ತಾನೋ ಅದನ್ನು ಪೂರೈಸುತ್ತಾನೆ ಎಂಬುದರ ಇನ್ನೊಂದು ಉದಾಹರಣೆಯನ್ನು ಅಪೊಸ್ತಲ ಪೌಲನು ಒದಗಿಸುತ್ತಾನೆ. ಶಾಸ್ತ್ರವಚನಗಳಲ್ಲಿ, ಅಬ್ರಹಾಮನನ್ನು ‘ಅನೇಕ ಜನಾಂಗಗಳ ಮೂಲ ಪಿತೃ’ ಎಂದು ಕರೆಯಲಾಗಿದೆ. (ರೋಮಾಪುರ 4:16, 17) ಅಬ್ರಾಮನಿಗೆ ಇನ್ನೂ ಮಕ್ಕಳು ಹುಟ್ಟಿರದಿದ್ದಾಗಲೇ, ಯೆಹೋವನು ಅವನ ಹೆಸರನ್ನು ಅಬ್ರಹಾಮ ಎಂದು ಬದಲಾಯಿಸಿದನು. ಅಬ್ರಹಾಮ ಎಂಬುದರ ಅರ್ಥ “ಒಂದು ಗುಂಪಿನ (ಜನಸಮೂಹದ) ತಂದೆ” ಎಂದಾಗಿದೆ. ವೃದ್ಧ ಅಬ್ರಹಾಮನ ಹಾಗೂ ಅವನ ವೃದ್ಧ ಪತ್ನಿಯಾದ ಸಾರಳ ಸಂತಾನೋತ್ಪತ್ತಿ ಶಕ್ತಿಯನ್ನು ಅದ್ಭುತಕರವಾಗಿ ಪುನಸ್ಸ್ಥಾಪಿಸುವ ಮೂಲಕ, ಆ ಹೆಸರಿನ ಅರ್ಥವು ವಾಸ್ತವಿಕತೆಯಾಗುವಂತೆ ಯೆಹೋವನು ಮಾಡಿದನು.—ಇಬ್ರಿಯ 11:11, 12.
ಹೆಚ್ಚಿನ ಶಕ್ತಿ ಹಾಗೂ ಅಧಿಕಾರವನ್ನು ಹೊಂದಿದವನಾಗಿದ್ದ ಯೇಸು ಕ್ರಿಸ್ತನು, ವಾಸ್ತವಿಕತೆಗಳ ಕುರಿತು ಮಾನವರಿಗಿಂತಲೂ ಶ್ರೇಷ್ಠವಾದ ದೃಷ್ಟಿಕೋನದಿಂದ ಮಾತಾಡಿದನು. ಅವನ ಆಪ್ತ ಸ್ನೇಹಿತನಾದ ಲಾಜರನು ಮೃತಪಟ್ಟಿದ್ದರೂ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.” (ಯೋಹಾನ 11:11) ಒಬ್ಬ ಮೃತ ವ್ಯಕ್ತಿಯು ನಿದ್ರೆಮಾಡುತ್ತಿದ್ದಾನೆ ಎಂದು ಯೇಸು ಏಕೆ ಹೇಳಿದನು?
ಲಾಜರನ ಸ್ವಂತ ಊರಾದ ಬೇಥಾನ್ಯಕ್ಕೆ ಯೇಸು ತಲಪಿದಾಗ, ಅವನು ನೇರವಾಗಿ ಸಮಾಧಿಯ ಬಳಿಗೆ ಹೋದನು, ಮತ್ತು ಅದರ ಬಾಯಿಗೆ ಮುಚ್ಚಿದ್ದ ಕಲ್ಲನ್ನು ತೆಗೆಯುವಂತೆ ಹೇಳಿದನು. ತದನಂತರ ಗಟ್ಟಿಯಾಗಿ ಪ್ರಾರ್ಥಿಸಿದ ಬಳಿಕ ಅವನು ಅಪ್ಪಣೆ ಕೊಟ್ಟದ್ದು: “ಲಾಜರನೇ ಹೊರಗೆ ಬಾ”! ಸುತ್ತಲೂ ನಿಂತಿದ್ದ ಜನರ ಕಣ್ಣುಗಳು ಸಮಾಧಿಯ ಮೇಲೆ ನೆಟ್ಟಿದ್ದವು. ಆಗ “ಸತ್ತಿದ್ದವನು ಹೊರಗೆ ಬಂದನು; ಅವನ ಕೈಕಾಲುಗಳು ಬಟ್ಟೆಗಳಿಂದ ಕಟ್ಟಿದ್ದವು, ಅವನ ಮುಖವು ಕೈಪಾವಡದಿಂದ ಸುತ್ತಿತ್ತು.” ಆಗ ಯೇಸು ಹೇಳಿದ್ದು: “ಅವನನ್ನು ಬಿಚ್ಚಿರಿ, ಹೋಗಲಿ.” (ಯೋಹಾನ 11:43, 44) ನಾಲ್ಕು ದಿನಗಳ ವರೆಗೆ ಮೃತನಾಗಿದ್ದ ಒಬ್ಬ ವ್ಯಕ್ತಿಯಾದ ಲಾಜರನಿಗೆ ಪುನಃ ಜೀವವನ್ನು ನೀಡುವ ಮೂಲಕ ಯೇಸು ಅವನನ್ನು ಪುನರುತ್ಥಾನಗೊಳಿಸಿದನು! ತನ್ನ ಮಿತ್ರನು ನಿದ್ರೆಮಾಡುತ್ತಿದ್ದಾನೆ ಎಂದು ಕ್ರಿಸ್ತನು ಹೇಳಿದಾಗ, ಅವನು ಸತ್ಯವನ್ನೇ ನುಡಿದನು. ಯೆಹೋವನ ಹಾಗೂ ಯೇಸುವಿನ ದೃಷ್ಟಿಯಲ್ಲಿ, ಮೃತ ಲಾಜರನು ಕೇವಲ ಗಾಢ ನಿದ್ರೆಯಲ್ಲಿದ್ದವನಂತಿದ್ದನು. ಹೌದು, ಯೇಸುವೂ ಆತನ ಸ್ವರ್ಗೀಯ ತಂದೆಯೂ ವಾಸ್ತವಿಕತೆಯಲ್ಲಿ ಆಸಕ್ತಿ ವಹಿಸುತ್ತಾರೆ.
ಯೆಹೋವನು ನಮ್ಮ ನಿರೀಕ್ಷೆಗಳನ್ನು ಕೈಗೂಡಿಸಬಲ್ಲನು
ಮೋಸಕರವಾದ ವಿಗ್ರಹಗಳು ಹಾಗೂ ನಿಜವಾದ ದೇವರ ನಡುವೆ ಎಂಥ ಭಿನ್ನತೆಯಿದೆ! ವಿಗ್ರಹಾರಾಧಕರು ತಮ್ಮ ಆರಾಧನಾ ವಸ್ತುಗಳಿಗೆ ಅತಿಮಾನುಷ ಶಕ್ತಿಯಿದೆಯೆಂದು ತಪ್ಪಾಗಿ ನೆನಸುತ್ತಾರೆ. ಆದರೂ, ಈ ವಿಗ್ರಹಗಳಿಗೆ ಎಷ್ಟೇ ಪ್ರಮಾಣದ ಪೂಜ್ಯಭಾವನೆಯು ತೋರಿಸಲ್ಪಟ್ಟರೂ, ಅದು ಇವುಗಳಿಗೆ ಅದ್ಭುತಕರವಾದ ಸಾಮರ್ಥ್ಯಗಳನ್ನು ನೀಡಲಾರದು. ಇನ್ನೊಂದು ಕಡೆಯಲ್ಲಿ, ಯೆಹೋವ ದೇವರು ದೀರ್ಘ ಸಮಯದ ಹಿಂದೆಯೇ ಮರಣಪಟ್ಟಿರುವ ತನ್ನ ಸೇವಕರನ್ನು ಅವರು ಇನ್ನೂ ಜೀವಿಸುತ್ತಿದ್ದಾರೋ ಎಂಬಂತೆ ಸೂಚಿಸಿ ಮಾತಾಡುವುದು ಸೂಕ್ತವಾದದ್ದಾಗಿದೆ. ಏಕೆಂದರೆ, ಆತನು ಅವರಿಗೆ ಪುನಃ ಜೀವವನ್ನು ನೀಡಲು ಶಕ್ತನಾಗಿದ್ದಾನೆ. “ಯೆಹೋವನಾದರೋ ಸತ್ಯದೇವರು” ಮತ್ತು ಆತನೆಂದೂ ತನ್ನ ಜನರನ್ನು ಮೋಸಗೊಳಿಸುವುದಿಲ್ಲ.—ಯೆರೆಮೀಯ 10:10.
ಯೆಹೋವನು ತನ್ನ ಕ್ಲುಪ್ತ ಕಾಲದಲ್ಲಿ, ತನ್ನ ಸ್ಮರಣೆಯಲ್ಲಿರುವ ಮೃತರನ್ನು ಪುನರುತ್ಥಾನಗೊಳಿಸುವನು, ಅಂದರೆ ಅವರನ್ನು ಪುನಃ ಜೀವಂತಗೊಳಿಸುವನು ಎಂಬುದನ್ನು ತಿಳಿದಿರುವುದು ಎಷ್ಟು ಸಾಂತ್ವನದಾಯಕವಾಗಿದೆ! (ಅ. ಕೃತ್ಯಗಳು 24:15) ಹೌದು, ಪುನರುತ್ಥಾನದಲ್ಲಿ, ಒಬ್ಬ ವ್ಯಕ್ತಿಯ ಜೀವನ ರೀತಿಯನ್ನು ಪುನಸ್ಸ್ಥಾಪಿಸುವುದು ಒಳಗೂಡಿದೆ. ಮೃತರ ಜೀವನ ರೀತಿಯನ್ನು ಜ್ಞಾಪಿಸಿಕೊಳ್ಳುವುದು ಮತ್ತು ಅವರನ್ನು ಪುನರುತ್ಥಾನಗೊಳಿಸುವುದು ಸೃಷ್ಟಿಕರ್ತನಿಗೆ ಒಂದು ಸಮಸ್ಯೆಯಾಗಿರಲಾರದು, ಏಕೆಂದರೆ ಆತನು ಅಪಾರ ವಿವೇಕ ಹಾಗೂ ಶಕ್ತಿಯನ್ನು ಹೊಂದಿದ್ದಾನೆ. (ಯೋಬ 12:13; ಯೆಶಾಯ 40:26) ಯೆಹೋವನು ಅಪಾರ ಪ್ರೀತಿಯುಳ್ಳವನಾಗಿರುವುದರಿಂದ, ಮೃತರು ಮರಣಪಡುವುದಕ್ಕೆ ಮುಂಚೆ ಯಾವ ವ್ಯಕ್ತಿತ್ವವನ್ನು ಹೊಂದಿದ್ದರೋ ಅದೇ ವ್ಯಕ್ತಿತ್ವದೊಂದಿಗೆ ಒಂದು ಪರದೈಸ ಭೂಮಿಯಲ್ಲಿ ಅವರನ್ನು ಪುನರುತ್ಥಾನಗೊಳಿಸಲಿಕ್ಕಾಗಿ ಆತನು ತನ್ನ ಪರಿಪೂರ್ಣ ಜ್ಞಾಪಕಶಕ್ತಿಯನ್ನು ಉಪಯೋಗಿಸುವನು.—1 ಯೋಹಾನ 4:8.
ಸೈತಾನನ ಲೋಕದ ಅಂತ್ಯವು ಸಮೀಪಿಸುತ್ತಿರುವಾಗ, ಸತ್ಯ ದೇವರಲ್ಲಿ ಭರವಸೆಯಿಡುವವರಿಗಾಗಿ ನಿಜವಾಗಿಯೂ ಉಜ್ವಲವಾದ ಭವಿಷ್ಯತ್ತಿದೆ. (ಜ್ಞಾನೋಕ್ತಿ 2:21, 22; ದಾನಿಯೇಲ 2:44; 1 ಯೋಹಾನ 5:19) ಕೀರ್ತನೆಗಾರನು ನಮಗೆ ಹೀಗೆ ಆಶ್ವಾಸನೆ ನೀಡುತ್ತಾನೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:10, 11) ದುಷ್ಕೃತ್ಯ ಹಾಗೂ ಹಿಂಸಾಚಾರಗಳು ಗತ ಸಂಗತಿಗಳಾಗಿರುವವು. ನ್ಯಾಯವು ಮೇಲುಗೈ ಪಡೆಯುವುದು, ಮತ್ತು ಆರ್ಥಿಕ ಸಂಕಷ್ಟವು ಸಂಪೂರ್ಣವಾಗಿ ಇಲ್ಲವಾಗುವುದು. (ಕೀರ್ತನೆ 37:6; 72:12, 13; ಯೆಶಾಯ 65:21-23) ಸಾಮಾಜಿಕ, ಜಾತೀಯ, ಬುಡಕಟ್ಟಿನ ಹಾಗೂ ಕುಲಸಂಬಂಧಿತ ಭೇದದ ಸರ್ವ ಜಾಡುಗಳೂ ಪೂರ್ಣವಾಗಿ ನಿರ್ಮೂಲವಾಗುವವು. (ಅ. ಕೃತ್ಯಗಳು 10:34, 35) ಯುದ್ಧಗಳು ಹಾಗೂ ಯುದ್ಧದ ಶಸ್ತ್ರಾಸ್ತ್ರಗಳು ಇನ್ನಿರವು. (ಕೀರ್ತನೆ 46:9) ಆ ಸಮಯದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಪ್ರತಿಯೊಬ್ಬರೂ ಪರಿಪೂರ್ಣ ಹಾಗೂ ಅತ್ಯುತ್ತಮವಾದ ಆರೋಗ್ಯವನ್ನು ಅನುಭವಿಸುವರು. (ಪ್ರಕಟನೆ 21:3, 4) ಅತಿ ಬೇಗನೆ ಭೂಪರದೈಸವು ಒಂದು ವಾಸ್ತವಿಕತೆಯಾಗುವುದು. ಏಕೆಂದರೆ, ಯೆಹೋವನು ಇದನ್ನು ಉದ್ದೇಶಿಸಿದ್ದಾನೆ!
ಹೌದು, ಎಲ್ಲ ಬೈಬಲ್ ಆಧಾರಿತ ನಿರೀಕ್ಷೆಗಳು ಅತಿ ಬೇಗನೆ ನೆರವೇರಿಸಲ್ಪಡುವವು. ನಾವು ನಮ್ಮ ಪೂರ್ಣ ಭರವಸೆಯನ್ನು ಯೆಹೋವನಲ್ಲಿ ಇಡಸಾಧ್ಯವಿರುವಾಗ, ಈ ಲೋಕದಲ್ಲಿ ಪೂಜ್ಯಭಾವನೆಯಿಂದ ಪರಿಗಣಿಸಲ್ಪಡುವ ವಿಷಯಗಳು ನಮ್ಮನ್ನು ವಂಚಿಸುವಂತೆ ನಾವೇಕೆ ಬಿಡಬೇಕು? “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ. (1 ತಿಮೊಥೆಯ 2:3, 4) ಈ ವಿಷಯಗಳ ವ್ಯವಸ್ಥೆಯ ಹಾಗೂ ಅದರ ದೇವರುಗಳ ಭ್ರಾಂತಿಗಾಗಿ ಅಥವಾ ಮರೀಚಿಕೆಗಾಗಿ ನಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸುವುದಕ್ಕೆ ಬದಲಾಗಿ, ನಾವು ನಿಜ ದೇವರ ಜ್ಞಾನದಲ್ಲಿ ಬೆಳೆಯುತ್ತಿರೋಣ ಮತ್ತು ನಮ್ಮ ಪೂರ್ಣ ಹೃದಯದಿಂದ ಆತನಲ್ಲಿ ಭರವಸೆಯಿಡೋಣ.—ಜ್ಞಾನೋಕ್ತಿ 3:1-6; ಯೋಹಾನ 17:3.
[ಪುಟ 6ರಲ್ಲಿರುವ ಚಿತ್ರ]
ಯೆಹೋವನ ಹಾಗೂ ಯೇಸುವಿನ ದೃಷ್ಟಿಕೋನದಲ್ಲಿ ಲಾಜರನು ನಿದ್ರೆಮಾಡುತ್ತಿದ್ದನಷ್ಟೆ
[ಪುಟ 7ರಲ್ಲಿರುವ ಚಿತ್ರಗಳು]
ಭೂಪರದೈಸವು ಅತಿ ಬೇಗನೆ ಒಂದು ವಾಸ್ತವಿಕತೆಯಾಗುವುದು