ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 3/15 ಪು. 17-20
  • ನಿಮಗೆ ಹರ್ಷಿಸಲು ಸಕಾರಣವಿದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಹರ್ಷಿಸಲು ಸಕಾರಣವಿದೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ‘ಪೂರ್ವಕಾಲವನ್ನು’ ವರ್ಣಿಸಿರಿ
  • ‘ಪ್ರತಿಯೊಂದು ಅಂಗದ’ ಕಾರ್ಯನಿರ್ವಹಣೆಯ ಬಗ್ಗೆ ಕಲಿಯಿರಿ
  • “ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ”
  • ಮಕ್ಕಳಿಗೆ ಪರಿಚಯಿಸಿರಿ ಯೆಹೋವನ ಸಂಘಟನೆಯನ್ನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ದೇವರ ಸಂಸ್ಥೆಯ ಭಾಗವಾಗಿ ಸುರಕ್ಷಿತರಾಗಿರಿ
    ಕಾವಲಿನಬುರುಜು—1998
  • ನೀವು ಯೆಹೋವನ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೀರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 3/15 ಪು. 17-20

ನಿಮಗೆ ಹರ್ಷಿಸಲು ಸಕಾರಣವಿದೆ

ಸೂಕ್ಷ್ಮಾತಿಸೂಕ್ಷ್ಮ ಜೀವಕೋಶಗಳಿಂದ ಹಿಡಿದು ಸಮೂಹ ಸಮೂಹವಾಗಿರುವ ಬೃಹತ್‌ ಗಾತ್ರದ ಗ್ಯಾಲಕ್ಸಿಗಳ ವರೆಗೆ ಸಕಲ ಸೃಷ್ಟಿಯೂ ಸುಸಂಘಟಿತವಾಗಿದೆ. ಇದೇನು ಆಶ್ಚರ್ಯದ ಸಂಗತಿಯಲ್ಲ, ಏಕೆಂದರೆ ಸೃಷ್ಟಿಕರ್ತನು “ಗಲಿಬಿಲಿಯ ದೇವರಲ್ಲ.” (1 ಕೊರಿಂ. 14:33) ಆರಾಧನೆಗಾಗಿ ಯೆಹೋವನು ಮಾಡಿರುವ ಏರ್ಪಾಡು ಕೂಡ ಬೆರಗುಗೊಳಿಸುವಂಥದ್ದು. ಇದನ್ನು ಆತನು ಹೇಗೆ ಮಾಡಿದ್ದಾನೆಂದು ಪರಿಗಣಿಸಿ. ಇಚ್ಛಾಸ್ವಾತಂತ್ರ್ಯವಿರುವ, ಬುದ್ಧಿಶಕ್ತಿಯಿರುವ ಕೋಟ್ಯಂತರ ಭೌತಿಕ ಮತ್ತು ಆತ್ಮಿಕ ಜೀವಿಗಳನ್ನು ಆತನು ಒಂದು ವಿಶ್ವವ್ಯಾಪಿ ಸಂಘಟನೆಯಲ್ಲಿ ಸತ್ಯಾರಾಧನೆಗಾಗಿ ಐಕ್ಯಗೊಳಿಸಿದ್ದಾನೆ. ಇದೆಷ್ಟು ಅತ್ಯದ್ಭುತ ಏರ್ಪಾಡು!

ಪ್ರಾಚೀನ ಇಸ್ರಾಯೇಲಿನಲ್ಲಿ ಯೆಹೋವನ ಆಲಯ ಮತ್ತು ಆತನ ಅಭಿಷಿಕ್ತ ರಾಜನಿದ್ದ ಯೆರೂಸಲೇಮ್‌ ಪಟ್ಟಣವು ದೇವರ ಸಂಘಟನೆಯ ಭೂಭಾಗದ ಸಂಕೇತವಾಗಿತ್ತು. ಬಾಬೆಲಿನಲ್ಲಿ ಸೆರೆಯಾಳಾಗಿದ್ದ ಒಬ್ಬ ಇಸ್ರಾಯೇಲ್ಯನು ಪವಿತ್ರ ಪಟ್ಟಣವಾದ ಯೆರೂಸಲೇಮ್‌ ಬಗೆಗಿನ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, “ಯೆರೂಸಲೇಮೇ, ನಾನು ನಿನ್ನನ್ನು ನೆನಸದಿದ್ದರೆ, ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ” ಎಂದನು.—ಕೀರ್ತ. 137:6.

ದೇವರ ಸಂಘಟನೆಯ ಕುರಿತು ನಿಮಗೂ ಹಾಗನಿಸುತ್ತದೋ? ಅದು ನಿಮಗೆ ಬೇರಾವುದಕ್ಕಿಂತಲೂ ಹೆಚ್ಚು ಹರ್ಷಾನಂದವನ್ನು ತರುತ್ತದೋ? ದೇವರ ಸಂಘಟನೆಯ ಭೂಭಾಗದ ಇತಿಹಾಸ ಮತ್ತು ಅದು ಕಾರ್ಯನಿರ್ವಹಿಸುವ ವಿಧ ನಿಮ್ಮ ಮಕ್ಕಳಿಗೆ ತಿಳಿದಿದೆಯೋ? ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಹೋದರ ಬಳಗದ ಭಾಗವಾಗಿರುವುದನ್ನು ಅವರು ಗಣ್ಯಮಾಡುತ್ತಾರೋ? (1 ಪೇತ್ರ 2:17) ಯೆಹೋವನ ಸಂಘಟನೆಯ ಕಡೆಗೆ ನಿಮ್ಮ ಕುಟುಂಬದವರ ಗಣ್ಯತೆಯನ್ನು ಹೆಚ್ಚಿಸಲು ಕೆಳಗೆ ಕೊಡಲಾಗಿರುವ ಸಲಹೆಗಳನ್ನು ನಿಮ್ಮ ಕುಟುಂಬ ಆರಾಧನೆಯಲ್ಲಿ ಅನ್ವಯಿಸಬಾರದೇಕೆ?

‘ಪೂರ್ವಕಾಲವನ್ನು’ ವರ್ಣಿಸಿರಿ

ಇಸ್ರಾಯೇಲ್ಯ ಕುಟುಂಬಗಳು ಪಸ್ಕಹಬ್ಬವನ್ನು ಆಚರಿಸಲು ಪ್ರತಿವರ್ಷ ಒಟ್ಟುಸೇರುತ್ತಿದ್ದವು. ಈ ಹಬ್ಬದ ಆಚರಣೆಯು ಆರಂಭಗೊಂಡಾಗ ಮೋಶೆ ಜನರಿಗೆ ಆಜ್ಞಾಪಿಸಿದ್ದು: “ಇನ್ನು ಮೇಲೆ ನಿಮ್ಮ ಮಕ್ಕಳು—ಇದು ಯಾತಕ್ಕೆ ಎಂದು ವಿಚಾರಿಸುವಾಗ ನೀವು ಅವರಿಗೆ—ನಾವು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ಯೆಹೋವನು ಭುಜಬಲದಿಂದ ನಮ್ಮನ್ನು ಬಿಡಿಸಿದನು . . . ಎಂದು ಹೇಳಬೇಕು.” (ವಿಮೋ. 13:14, 15) ಯೆಹೋವನು ಇಸ್ರಾಯೇಲ್ಯರೊಂದಿಗೆ ವ್ಯವಹರಿಸಿದ ಬಗೆಯು ಒಂದು ಅವಿಸ್ಮರಣೀಯ ಇತಿಹಾಸ. ಮೋಶೆಯ ಆ ಆಜ್ಞೆಯನ್ನು ಅನೇಕ ಇಸ್ರಾಯೇಲ್ಯ ತಂದೆಯರು ಪಾಲಿಸಿದರೆಂಬುದು ನಿಶ್ಚಯ. ತಲೆಮಾರುಗಳ ನಂತರ ಒಬ್ಬ ಇಸ್ರಾಯೇಲ್ಯನು ಹೀಗೆ ಪ್ರಾರ್ಥಿಸಿದನು: “ದೇವರೇ, ಪೂರ್ವಕಾಲದಲ್ಲಿ ನಮ್ಮ ಪಿತೃಗಳ ದಿನದಲ್ಲಿ ನೀನು ನಡಿಸಿದ ಮಹತ್ಕಾರ್ಯಗಳ ವಿಷಯವನ್ನು ಕೇಳಿದ್ದೇವೆ; ಅವರೇ ನಮಗೆ ತಿಳಿಸಿದರು.”—ಕೀರ್ತ. 44:1.

ಯೆಹೋವನ ಸಾಕ್ಷಿಗಳ ಕಳೆದ 100 ವರ್ಷಗಳ ಅಥವಾ ಅದಕ್ಕೂ ಸ್ವಲ್ಪ ಹಿಂದಿನ ಇತಿಹಾಸ ಸಹ ಇಂದಿನ ಯುವಪೀಳಿಗೆಗೆ ‘ಪೂರ್ವಕಾಲದ್ದು’ ಎಂದನಿಸಬಹುದು. ಹಾಗಾದರೆ ಹೆತ್ತವರೇ, ನೀವು ನಿಮ್ಮ ಮಕ್ಕಳಿಗೆ ಆ ಇತಿಹಾಸವನ್ನು ತಿಳಿಸುವಾಗ ಅದಕ್ಕೆ ಹೇಗೆ ಜೀವತುಂಬಬಲ್ಲಿರಿ? ಇದಕ್ಕಾಗಿ ಕೆಲವು ಹೆತ್ತವರು ಮಾಡುವ ಪ್ರಯತ್ನವನ್ನು ಪರಿಗಣಿಸಿ. ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಪುಸ್ತಕ, ವರ್ಷಪುಸ್ತಕ (ಇಂಗ್ಲಿಷ್‌), ನಮ್ಮ ಪತ್ರಿಕೆಗಳಲ್ಲಿ ಮೂಡಿಬರುವ ಜೀವನಕಥೆಗಳು, ದೇವಪ್ರಭುತ್ವಾತ್ಮಕ ಇತಿಹಾಸದ ಇತರ ವರದಿಗಳು ಮತ್ತು ಆಧುನಿಕ ದಿನದ ದೇವಜನರ ಕುರಿತು ತಿಳಿಸುವ ಹೊಸ ಡಿವಿಡಿಗಳನ್ನು ಅವರು ಬಳಸುತ್ತಾರೆ. ಹಿಂದಿನ ಸೋವಿಯಟ್‌ ರಾಷ್ಟ್ರಗಳಲ್ಲಿ ಮತ್ತು ನಾಸಿ ಜರ್ಮನಿಯಲ್ಲಿ ನಮ್ಮ ಸಹೋದರರು ಅನುಭವಿಸಿದ ಕಷ್ಟಹಿಂಸೆಗಳ ಕುರಿತ ವಿಡಿಯೋಗಳು, ಪರೀಕ್ಷೆಗಳನ್ನು ಎದುರಿಸುವಾಗ ಯೆಹೋವನ ಮೇಲೆ ಆತುಕೊಳ್ಳುವಂತೆ ಕುಟುಂಬದ ಸದಸ್ಯರಿಗೆ ಕಲಿಸುತ್ತವೆ. ಇಂಥ ವಿಷಯಗಳನ್ನು ನಿಮ್ಮ ಕುಟುಂಬ ಆರಾಧನೆಯ ಸಂಜೆಯಲ್ಲಿ ಒಳಗೂಡಿಸಿರಿ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳ ನಂಬಿಕೆ ಬಲಗೊಳ್ಳುತ್ತದೆ. ಸಮಗ್ರತೆಯ ಪರೀಕ್ಷೆಗಳಲ್ಲೂ ಅವರು ಜಯಹೊಂದುವರು.

ಯೆಹೋವನ ಸಾಕ್ಷಿಗಳ ಇತಿಹಾಸದ ಕುರಿತು ಒಂದು ಉದ್ದ ಭಾಷಣ ಕೊಡುವಲ್ಲಿ ಮಕ್ಕಳಿಗೆ ಬೇಗನೆ ಬೇಸರಹಿಡಿದೀತು. ಆದ್ದರಿಂದ ಮಕ್ಕಳನ್ನೂ ಒಳಗೂಡಿಸಿರಿ. ಉದಾಹರಣೆಗೆ, ತನಗೆ ಹಿಡಿಸುವ ಒಂದು ದೇಶವನ್ನು ಆರಿಸಿಕೊಳ್ಳುವಂತೆ ನಿಮ್ಮ ಮಗನಿಗೆ ಹೇಳಿ. ಅನಂತರ, ಆ ದೇಶದ ದೇವಪ್ರಭುತ್ವಾತ್ಮಕ ಇತಿಹಾಸದ ಬಗ್ಗೆ ಸಂಶೋಧನೆ ಮಾಡಿ, ಕಲಿತ ವಿಷಯವನ್ನು ಮನೆಮಂದಿಗೆ ತಿಳಿಸುವಂತೆ ಕೇಳಿಕೊಳ್ಳಿ. ಅಲ್ಲದೆ, ನಿಮ್ಮ ಸಭೆಯಲ್ಲಿ ದೀರ್ಘ ಸಮಯದಿಂದ ನಂಬಿಗಸ್ತರಾಗಿ ಸೇವೆಸಲ್ಲಿಸುತ್ತಿರುವ ಕ್ರೈಸ್ತರನ್ನು ಸಹ ನಿಮ್ಮ ಕುಟುಂಬ ಆರಾಧನೆಗೆ ಒಮ್ಮೆ ಆಮಂತ್ರಿಸಬಹುದು. ಪ್ರಾಯಶಃ ನಿಮ್ಮ ಮಗಳು ಅವರನ್ನು ಇಂಟರ್‌ವ್ಯೂ ಮಾಡುತ್ತಾ ಅವರ ಅನುಭವವನ್ನು ಕೇಳಬಹುದು. ಅಥವಾ ಬ್ರಾಂಚ್‌ನ ನಿರ್ಮಾಣಕಾರ್ಯ, ಅಂತಾರಾಷ್ಟ್ರೀಯ ಅಧಿವೇಶನ ಅಥವಾ ಮನೆಮನೆ ಶುಶ್ರೂಷೆಯಲ್ಲಿ ಫೋನೋಗ್ರಾಫ್‌ನ ಬಳಕೆಯಂಥ ಮಹತ್ವಪೂರ್ಣ ದೇವಪ್ರಭುತ್ವಾತ್ಮಕ ಘಟನೆಗಳ ಚಿತ್ರಗಳನ್ನು ಬಿಡಿಸುವಂತೆ ನಿಮ್ಮ ಮಕ್ಕಳಿಗೆ ಹೇಳಬಹುದು.

‘ಪ್ರತಿಯೊಂದು ಅಂಗದ’ ಕಾರ್ಯನಿರ್ವಹಣೆಯ ಬಗ್ಗೆ ಕಲಿಯಿರಿ

ಅಪೊಸ್ತಲ ಪೌಲನು ಕ್ರೈಸ್ತ ಸಭೆಯನ್ನು ದೇಹಕ್ಕೆ ಹೋಲಿಸುತ್ತಾ ಅಂದದ್ದು: “ಇಡೀ ದೇಹವು, ಅಗತ್ಯವಿರುವುದನ್ನು ಒದಗಿಸುವಂಥ ಪ್ರತಿಯೊಂದು ಕೀಲಿನ ಮೂಲಕ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಸಹಕರಿಸುವಂತೆ ಮಾಡಲ್ಪಟ್ಟಿದೆ ಮತ್ತು ಪ್ರತಿಯೊಂದು ಅಂಗವು ಸೂಕ್ತವಾದ ಪ್ರಮಾಣದಲ್ಲಿ ಅದರದರ ಕಾರ್ಯವನ್ನು ಮಾಡುವ ಮೂಲಕ ಪ್ರೀತಿಯಲ್ಲಿ ತನ್ನದೇ ಅಭಿವೃದ್ಧಿಗೋಸ್ಕರ ದೇಹದ ಬೆಳವಣಿಗೆಗೆ ನೆರವಾಗುತ್ತದೆ.” (ಎಫೆ. 4:16) ಮಾನವ ದೇಹ ಹೇಗೆ ಕೆಲಸಮಾಡುತ್ತದೆಂದು ಕಲಿಯುವುದು ಸೃಷ್ಟಿಕರ್ತನ ಕಡೆಗೆ ನಮಗಿರುವ ಗಣ್ಯತೆಯನ್ನೂ ಗೌರವವನ್ನೂ ಹೆಚ್ಚಿಸುತ್ತದೆ. ಅಂತೆಯೇ ಲೋಕವ್ಯಾಪಕ ಸಭೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಪರಿಗಣಿಸುವಲ್ಲಿ ‘ದೇವರ ಬಹುಪ್ರಕಾರವಾದ ವಿವೇಕವನ್ನು’ ಕಂಡು ಬೆಕ್ಕಸಬೆರಗಾಗುವೆವು.—ಎಫೆ. 3:10.

ತನ್ನ ಸಂಘಟನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಯೆಹೋವನು ತಿಳಿಸಿದ್ದಾನೆ. ಉದಾಹರಣೆಗೆ, ಅದರ ಸ್ವರ್ಗೀಯ ಭಾಗ ಹೇಗೆ ಕಾರ್ಯನಡೆಸುತ್ತದೆಂದು ಹೇಳುವಾಗ ಆತನು ಒಂದು ಪ್ರಕಟನೆಯನ್ನು ಮೊದಲು ಯೇಸು ಕ್ರಿಸ್ತನಿಗೆ ಕೊಟ್ಟನು. ಅನಂತರ “[ಯೇಸು] ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಅದನ್ನು ತನ್ನ ದಾಸನಾದ ಯೋಹಾನನಿಗೆ ಸಂಕೇತಗಳಲ್ಲಿ ಪ್ರಸ್ತುತಪಡಿಸಿದನು.” (ಪ್ರಕ. 1:1, 2) ತನ್ನ ಸಂಘಟನೆಯ ಅದೃಶ್ಯ ಭಾಗವು ಹೇಗೆ ಕಾರ್ಯನಡೆಸುತ್ತದೆಂದು ದೇವರು ತಿಳಿಯಪಡಿಸಿರುವಾಗ ಭೂಮಿಯ ಮೇಲೆ ಅದರ ‘ಪ್ರತಿಯೊಂದು ಅಂಗವು ಅದರದರ ಕಾರ್ಯವನ್ನು’ ಹೇಗೆ ನಿರ್ವಹಿಸುತ್ತದೆಂದು ನಾವು ತಿಳಿಯುವಂತೆ ಆತನು ಖಂಡಿತ ಬಯಸುತ್ತಾನಲ್ಲವೇ?

ಉದಾಹರಣೆಗೆ, ಸರ್ಕಿಟ್‌ ಮೇಲ್ವಿಚಾರಕರು ನಿಮ್ಮ ಸಭೆಯನ್ನು ಸದ್ಯದಲ್ಲೇ ಭೇಟಿಮಾಡಲಿಕ್ಕಿರುವುದಾದರೆ ಸಂಚರಣ ಮೇಲ್ವಿಚಾರಕರ ಕರ್ತವ್ಯ, ಅವರು ಪಡೆಯುವ ಆಶೀರ್ವಾದಗಳು ಮತ್ತು ನಮ್ಮಲ್ಲಿ ಪ್ರತಿಯೊಬ್ಬರಿಗೆ ಅವರು ಸಹಾಯಮಾಡುವ ವಿಧದ ಬಗ್ಗೆ ನಿಮ್ಮ ಕುಟುಂಬದೊಂದಿಗೆ ಚರ್ಚಿಸಬಾರದೇಕೆ? ಅಲ್ಲದೆ, ಕ್ಷೇತ್ರಸೇವಾ ವರದಿಯನ್ನು ಕೊಡುವುದು ಏಕೆ ಪ್ರಾಮುಖ್ಯ? ದೇವರ ಸಂಘಟನೆಗೆ ಹಣ ಎಲ್ಲಿಂದ ಬರುತ್ತದೆ? ಆಡಳಿತ ಮಂಡಲಿ ಹೇಗೆ ಸಂಘಟಿತವಾಗಿದೆ? ಅದು ಹೇಗೆ ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತದೆ? ಎಂಬಂಥ ಪ್ರಶ್ನೆಗಳನ್ನೂ ಪರಿಗಣಿಸಬಹುದು.

ಯೆಹೋವನ ಸಂಘಟನೆ ಹೇಗೆ ಸಂಘಟಿತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಡಿಮೆಪಕ್ಷ ಮೂರು ವಿಧಗಳಲ್ಲಿ ನಮಗೆ ಪ್ರಯೋಜನಕರ: ನಮಗೋಸ್ಕರ ಶ್ರಮಪಟ್ಟು ಕೆಲಸಮಾಡುವವರಿಗಾಗಿ ಗಣ್ಯತೆ ಹೆಚ್ಚುತ್ತದೆ. (1 ಥೆಸ. 5:12, 13) ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನು ಬೆಂಬಲಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. (ಅ. ಕಾ. 16:4, 5) ಅಲ್ಲದೆ, ಎಲ್ಲ ಏರ್ಪಾಡುಗಳಿಗೂ ನಿರ್ಣಯಗಳಿಗೂ ಬೈಬಲ್‌ ಆಧಾರ ಇರುವುದನ್ನು ಗಮನಿಸುವಾಗ ಮುಂದಾಳುತ್ವ ವಹಿಸುವವರಲ್ಲಿ ನಮ್ಮ ಭರವಸೆ ಹೆಚ್ಚಾಗುತ್ತದೆ.—ಇಬ್ರಿ. 13:7.

“ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ”

“ಚೀಯೋನ್‌ ಸಂಸ್ಥಾನದ ಸುತ್ತಲು ಸಂಚರಿಸಿ ಅದರ ಬುರುಜುಗಳನ್ನು ಲೆಕ್ಕಿಸಿರಿ. ಅದರ ಪ್ರಾಕಾರಗಳನ್ನು ಚೆನ್ನಾಗಿ ನೋಡಿರಿ; ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ. ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ . . . ತಿಳಿಸುವಿರಿ.” (ಕೀರ್ತ. 48:12-14) ಇಲ್ಲಿ ಕೀರ್ತನೆಗಾರನು ಇಸ್ರಾಯೇಲ್ಯರಿಗೆ ಯೆರೂಸಲೇಮನ್ನು ಸೂಕ್ಷ್ಮವಾಗಿ ಗಮನಿಸುವಂತೆ ಉತ್ತೇಜಿಸುತ್ತಿದ್ದನು. ವಾರ್ಷಿಕ ಹಬ್ಬಗಳಿಗಾಗಿ ಆ ಪವಿತ್ರ ಪಟ್ಟಣಕ್ಕೆ ಹೋಗಿ ಅಲ್ಲಿನ ಭವ್ಯ ಆಲಯವನ್ನು ಕಣ್ಣಾರೆ ಕಂಡ ಇಸ್ರಾಯೇಲ್ಯ ಕುಟುಂಬಗಳು ತಮ್ಮ ಮಧುರ ನೆನಪನ್ನು ಹಂಚಿಕೊಂಡದ್ದನ್ನು ಸ್ವಲ್ಪ ಊಹಿಸಿರಿ. ಹೌದು ಆ ಬಗ್ಗೆ ‘ಮುಂದಣ ಸಂತತಿಯವರಿಗೆ ತಿಳಿಸಲು’ ಅವರು ಪ್ರಚೋದಿಸಲ್ಪಟ್ಟಿರಬೇಕು.

ಶೆಬದ ರಾಣಿಯ ಕುರಿತು ಯೋಚಿಸಿರಿ. ಸೊಲೊಮೋನನ ವೈಭವಯುತ ಆಳ್ವಿಕೆ ಮತ್ತು ಅಪಾರ ವಿವೇಕದ ಕುರಿತು ಆಕೆ ಕೇಳಿಸಿಕೊಂಡಾಗ ಮೊದಲು ಸಂಶಯಪಟ್ಟಳು. ಆದರೆ ಅದೆಲ್ಲಾ ಸತ್ಯವೆಂದು ಯಾವುದು ಆಕೆಗೆ ಮನವರಿಕೆ ಮಾಡಿತು? “ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ” ಎಂದಳಾಕೆ. (2 ಪೂರ್ವ. 9:6) ಹೌದು, ನಾವು “ಕಣ್ಣಾರೆ ನೋಡುವ” ವಿಷಯವು ನಮ್ಮನ್ನು ಗಾಢವಾಗಿ ಪ್ರಭಾವಿಸಬಲ್ಲದು.

ನಿಮ್ಮ ಮಕ್ಕಳು ಯೆಹೋವನ ಸಂಘಟನೆಯ ಮಹತ್ಕಾರ್ಯಗಳನ್ನು ‘ಕಣ್ಣಾರೆ ನೋಡಲು’ ನೀವು ಹೇಗೆ ಸಹಾಯಮಾಡಬಲ್ಲಿರಿ? ನೀವಿರುವ ಸ್ಥಳಕ್ಕೆ ಸಮೀಪವಾದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸನ್ನು ಭೇಟಿನೀಡಲು ಪ್ರಯತ್ನಿಸಿರಿ. ಮ್ಯಾಂಡೀ ಮತ್ತು ಬೆತನೀ ಎಂಬ ಸಹೋದರಿಯರ ಉದಾಹರಣೆಯನ್ನು ಪರಿಗಣಿಸಿ. ಅವರಿದ್ದ ಸ್ಥಳದಿಂದ ಬೆತೆಲ್‌ ಗೃಹಕ್ಕೆ ಸುಮಾರು 1,500 ಕಿ.ಮೀ. ದೂರವಿತ್ತು. ಹಾಗಿದ್ದರೂ ಅವರು ಕುಟುಂಬಸಮೇತ ಬೆತೆಲ್‌ಗೆ ಆಗಾಗ್ಗೆ ಭೇಟಿನೀಡುತ್ತಿದ್ದರು. ಆ ಮಕ್ಕಳು ಹೇಳಿದ್ದು: “ಬೆತೆಲ್‌ಗೆ ಹೋಗುವುದಕ್ಕೆ ಮುನ್ನ ನಾವು ನೆನಸಿದ್ದು ಅದು ವೃದ್ಧಜನರಿಗಾಗಿರುವ ಸ್ಥಳ, ಅಲ್ಲಿಯವರೆಲ್ಲಾ ತುಂಬ ಗಂಭೀರ ಸ್ವಭಾವದ ಜನರು ಅಂತ. ಆದರೆ ಅಲ್ಲಿ ಯೆಹೋವನಿಗಾಗಿ ಸಂತೋಷದಿಂದ ಶ್ರಮಪಟ್ಟು ಕೆಲಸಮಾಡುತ್ತಿದ್ದ ಯೌವನಸ್ಥರನ್ನೂ ನಾವು ಭೇಟಿಯಾದೆವು! ಯೆಹೋವನ ಸಂಘಟನೆ ನಾವು ನೆನಸಿದಷ್ಟು ಚಿಕ್ಕದಲ್ಲ ತುಂಬ ದೊಡ್ಡದೆಂದು ಕಣ್ಣಾರೆ ನೋಡಿದೆವು. ಬೆತೆಲ್‌ಗೆ ನೀಡಿದ ಪ್ರತಿಯೊಂದು ಭೇಟಿಯು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳಸಿಕೊಳ್ಳುವಂತೆ ಮಾಡಿತು ಮತ್ತು ಆತನಿಗೆ ಸೇವೆಸಲ್ಲಿಸಲು ಇನ್ನಷ್ಟು ಹುರಿದುಂಬಿಸಿತು.” ದೇವರ ಸಂಘಟನೆಯನ್ನು ನಿಕಟವಾಗಿ ನೋಡಿದ್ದು ಮ್ಯಾಂಡೀ ಮತ್ತು ಬೆತನೀಯವರನ್ನು ಪಯನೀಯರ್‌ ಸೇವೆ ಆರಂಭಿಸುವಂತೆ ಪ್ರಚೋದಿಸಿತು. ಮಾತ್ರವಲ್ಲ, ಬೆತೆಲ್‌ನಲ್ಲಿ ಸ್ವಲ್ಪ ಸಮಯಕ್ಕೆ ಸ್ವಯಂಸೇವಕರಾಗಿ ಕೆಲಸಮಾಡಲು ಸಹ ಅವರನ್ನು ಆಮಂತ್ರಿಸಲಾಯಿತು.

ಯೆಹೋವನ ಸಂಘಟನೆಯನ್ನು ‘ನೋಡಲು’ ನಮಗೆ ಇನ್ನೊಂದು ವಿಧವೂ ಇದೆ. ಅದು ಪ್ರಾಚೀನ ಇಸ್ರಾಯೇಲ್ಯರಿಗೆ ಲಭ್ಯವಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ, ದೇವರ ಸಂಘಟನೆಯ ವಿಭಿನ್ನ ವೈಶಿಷ್ಟ್ಯಗಳನ್ನು ಬಣ್ಣಿಸುವ ವಿಡಿಯೋಗಳನ್ನು ಮತ್ತು ಡಿವಿಡಿಗಳನ್ನು ದೇವಜನರು ಪಡಕೊಂಡರು. ಉದಾಹರಣೆಗೆ: ದೈವಿಕ ಬೋಧನೆಯಿಂದ ಐಕ್ಯರು, ನಮ್ಮ ಸಹೋದರರ ಇಡೀ ಬಳಗ, ಭೂಮಿಯ ಕಟ್ಟಕಡೆಯ ವರೆಗೆ, ಯೆಹೋವನ ಸಾಕ್ಷಿಗಳು—ಸುವಾರ್ತೆಯನ್ನು ಸಾರಲು ಸಂಘಟಿತರು ಇತ್ಯಾದಿ.a ಬೆತೆಲ್‌ ಸದಸ್ಯರು, ಪರಿಹಾರ ಕಾರ್ಯದಲ್ಲಿ ಕೆಲಸಮಾಡುವ ಸ್ವಯಂಸೇವಕರು, ಮಿಷನೆರಿಗಳು ಮತ್ತು ಅಧಿವೇಶನಗಳನ್ನು ಯೋಜಿಸಿ ಸಂಘಟಿಸುವ ಸಹೋದರರು ಪಡುವ ಕಠಿಣ ಶ್ರಮವನ್ನು ನೀವು ಮತ್ತು ನಿಮ್ಮ ಕುಟುಂಬವು ನೋಡುವಲ್ಲಿ ಲೋಕವ್ಯಾಪಕ ಸಹೋದರ ಬಳಗಕ್ಕಾಗಿ ನಿಮ್ಮ ಹೃದಯದಲ್ಲಿ ಗಣ್ಯತೆ ಬೆಳೆಯುವುದು ಖಂಡಿತ.

ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ಸ್ಥಳೀಕ ಕ್ರೈಸ್ತರನ್ನು ಬೆಂಬಲಿಸುವುದರಲ್ಲಿ ದೇವಜನರ ಪ್ರತಿಯೊಂದು ಸಭೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ‘ಲೋಕದಲ್ಲಿರುವ ನಿಮ್ಮ ಸಹೋದರರ ಇಡೀ ಬಳಗವನ್ನು’ ಜ್ಞಾಪಿಸಿಕೊಳ್ಳಲು ನಿಮ್ಮ ಕುಟುಂಬದೊಂದಿಗೆ ಸಮಯ ತಕ್ಕೊಳ್ಳಿರಿ. ಇದು “ನಂಬಿಕೆಯಲ್ಲಿ ಸ್ಥಿರರಾಗಿ” ನಿಲ್ಲಲು ಮತ್ತು ಹರ್ಷಿಸಲು ಸಕಾರಣವಿದೆಯೆಂದು ಮನಗಾಣಲು ನಿಮಗೂ ನಿಮ್ಮ ಮಕ್ಕಳಿಗೂ ನೆರವಾಗುವುದು.—1 ಪೇತ್ರ 5:9.

[ಪಾದಟಿಪ್ಪಣಿ]

a ಇವು ಕನ್ನಡದಲ್ಲಿ ಲಭ್ಯವಿಲ್ಲ.

[ಪುಟ 18ರಲ್ಲಿರುವ ಚೌಕ/ಚಿತ್ರ]

ದೇವರ ಸಂಘಟನೆ ಅಧ್ಯಯನಕ್ಕೆ ತಕ್ಕ ವಿಷಯ

ಯೆಹೋವನ ಸಂಘಟನೆಯ ಇತಿಹಾಸ ಮತ್ತು ಅದು ಕಾರ್ಯನಿರ್ವಹಿಸುವ ವಿಧದ ಕುರಿತು ಕಲಿಯಲು ನಮಗೆ ಹೇರಳ ಸಹಾಯಕಗಳಿವೆ. ಈ ನಿಟ್ಟಿನಲ್ಲಿ ಆರಂಭದ ಹೆಜ್ಜೆಯನ್ನು ತಕ್ಕೊಳ್ಳಲು ಕೆಳಗಿನ ಪ್ರಶ್ನೆಗಳು ನಿಮಗೆ ಸಹಾಯಕರ:

☞ ಆಧುನಿಕ ದಿನದ ಸಂಚರಣ ಮೇಲ್ವಿಚಾರಕರ ಕೆಲಸ ಹೇಗೆ ಆರಂಭವಾಯಿತು?—1996, ನವೆಂಬರ್‌ 15ರ ಕಾವಲಿನಬುರುಜು ಪುಟ 10-15.

☞ 1941ರಲ್ಲಿ ನಡೆದ ದೇವಪ್ರಭುತ್ವಾತ್ಮಕ ಸಮ್ಮೇಳನದಲ್ಲಿ ‘ಮಕ್ಕಳ ದಿನದಂದು’ ಯಾವ ವಿಷಯ ಗಮನಾರ್ಹವಾಗಿತ್ತು?—2001, ಜುಲೈ 15ರ ಕಾವಲಿನಬುರುಜು ಪುಟ 8.

☞ ಆಡಳಿತ ಮಂಡಲಿಯು ಹೇಗೆ ನಿರ್ಣಯಗಳನ್ನು ಮಾಡುತ್ತದೆ?—2008, ಮೇ 15ರ ಕಾವಲಿನಬುರುಜು ಪುಟ 29.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ