ಬಡತನ ನಿರ್ಮೂಲನಾ ಯತ್ನಗಳು
ಶ್ರೀಮಂತರು ಈಗಾಗಲೇ ಬಡತನ ನಿರ್ಮೂಲ ಮಾಡಿದ್ದಾರೆ. ಯಾರದ್ದು? ತಮ್ಮದ್ದನ್ನು! ಆದರೆ ಇಡೀ ಮಾನವಕುಲವನ್ನು ಬಡತನದ ಸಂಕೋಲೆಯಿಂದ ಬಿಡಿಸಲು ಮಾಡಲಾಗಿರುವ ಯತ್ನಗಳು ನೆಲಕಚ್ಚಿವೆ. ಏಕೆ? ಏಕೆಂದರೆ ತಮ್ಮ ಸಂಪತ್ತು, ಸ್ಥಾನಕ್ಕೆ ಯಾರಿಂದಲೂ ಯಾವುದರಿಂದಲೂ ಕುತ್ತು ಬರುವುದು ಸಾಮಾನ್ಯವಾಗಿ ಶ್ರೀಮಂತರಿಗೆ ಇಷ್ಟವಿರುವುದಿಲ್ಲ. “ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ” ಎಂಬ ಪುರಾತನ ಇಸ್ರಾಯೇಲ್ ಜನಾಂಗದ ರಾಜ ಸೊಲೊಮೋನನ ಮಾತುಗಳು ಸತ್ಯ.—ಪ್ರಸಂಗಿ 4:1.
ವರ್ಚಸ್ಸು, ಅಧಿಕಾರವುಳ್ಳ ಜನರು ಸಮಾಜವನ್ನು ಬದಲಾಯಿಸಿ ಜಗತ್ತಿನ ಬಡತನವನ್ನು ನಿರ್ಮೂಲಮಾಡಬಲ್ಲರೇ? “ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ. ವಕ್ರವಾದದ್ದನ್ನು ಸರಿಮಾಡುವದು ಅಸಾಧ್ಯ” ಎಂದು ರಾಜ ಸೊಲೊಮೋನನು ದೇವಪ್ರೇರಣೆಯಿಂದ ಬರೆದನು. (ಪ್ರಸಂಗಿ 1:14, 15) ಬಡತನ ನಿರ್ಮೂಲನದ ಆಧುನಿಕ ಯತ್ನಗಳನ್ನು ನೋಡಿದರೆ ಆ ಮಾತು ನಿಜವೆಂದು ಗೊತ್ತಾಗುತ್ತದೆ.
‘ಸಕಲರಿಗೂ ಸಮೃದ್ಧಿ’ ಸಿದ್ಧಾಂತಗಳು
19ನೇ ಶತಮಾನದಲ್ಲಿ ಕೆಲವು ರಾಷ್ಟ್ರಗಳು ವ್ಯಾಪಾರ, ಕೈಗಾರಿಕೆಗಳ ಮೂಲಕ ಅಪಾರ ಸಂಪತ್ತನ್ನು ಗಿಟ್ಟಿಸಿದವು. ಆಗ ವರ್ಚಸ್ಸುಳ್ಳ ಕೆಲವು ಜನರು ಬಡತನದ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ಮಾಡತೊಡಗಿದರು. ಭೂಮಿಯ ಸಂಪನ್ಮೂಲಗಳನ್ನು ಸಕಲರಿಗೂ ಸಮಾನವಾಗಿ ಹಂಚುವ ವಿಷಯಕ್ಕೆ ಗಮನಹರಿಸಿದರು.
ಸಮಾಜವಾ ಇಲ್ಲವೆ ಕಮ್ಯುನಿಸಮ್ ಒಂದು ಅಂತಾರಾಷ್ಟ್ರೀಯ ವರ್ಗರಹಿತ ಸಮಾಜವನ್ನು ಸ್ಥಾಪಿಸಬಹುದೆಂದು ಕೆಲವರು ನೆನಸಿದರು. ಆ ಸಮಾಜದಲ್ಲಿ ಸಂಪತ್ತನ್ನು ನ್ಯಾಯವಾಗಿ ಎಲ್ಲರಿಗೆ ಹಂಚಬಹುದೆಂಬುದು ಅವರ ಎಣಿಕೆಯಾಗಿತ್ತು. ಖಂಡಿತವಾಗಿ ಈ ವಿಚಾರಗಳು ಧನಿಕರ ನಿದ್ದೆಗೆಡಿಸಿದವು. ಆದರೆ “ಪ್ರತಿಯೊಬ್ಬನೂ ತನ್ನಿಂದಾದದ್ದನ್ನು ಸಮಾಜಕ್ಕೆ ಕೊಟ್ಟು ತನ್ನ ಅಗತ್ಯಕ್ಕೆ ಬೇಕಾದದ್ದನ್ನು ಮಾತ್ರ ಸಮಾಜದಿಂದ ತೆಗೆದುಕೊಳ್ಳಬೇಕು” ಎಂಬ ವಿಚಾರ ಜನಮನ್ನಣೆ ಪಡೆಯಿತು. ಲೋಕವನ್ನು ಒಂದು ‘ಪರಿಪೂರ್ಣ ಸಮಾಜ’ವಾಗಿ ಮಾಡಲಿಕ್ಕಾಗಿ ಎಲ್ಲ ರಾಷ್ಟ್ರಗಳೂ ಸಮಾಜವಾದವನ್ನು ಸ್ವೀಕರಿಸುವವೆಂದು ಅನೇಕರು ನಿರೀಕ್ಷಿಸಿದ್ದರು. ಕೆಲವು ಧನಿಕ ರಾಷ್ಟ್ರಗಳು ಸಮಾಜವಾದದ ಕೆಲವೊಂದು ಅಂಶಗಳನ್ನು ಸ್ವೀಕರಿಸಿ, ಸಮಾಜಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಎಲ್ಲ ಪ್ರಜೆಗಳನ್ನೂ ಇವು “ಹುಟ್ಟಿನಿಂದ ಸಾವಿನ ವರೆಗೆ” ಆರೈಕೆಮಾಡುವವೆಂಬಂತೆ ತೋರಿತು. ಜೀವಕ್ಕೆ ಮಾರಕವಾದ ಬಡತನವನ್ನು ತಮ್ಮ ದೇಶದಿಂದ ಕಿತ್ತೆಸೆದಿದ್ದೇವೆಂದು ಈ ರಾಷ್ಟ್ರಗಳು ಹೇಳಿಕೊಳ್ಳುತ್ತವೆ.
ಆದರೆ ಸಮಾಜವಾದವು, ನಿಸ್ವಾರ್ಥ ಸಮಾಜವನ್ನು ಸೃಷ್ಟಿಸುವ ತನ್ನ ಗುರಿಯನ್ನು ಸಾಧಿಸಲೇ ಇಲ್ಲ. ಪ್ರಜೆಗಳು ಬರೇ ತಮಗಾಗಿ ಅಲ್ಲ ಬದಲಾಗಿ ಸಮಾಜದ ಪ್ರಯೋಜನಕ್ಕಾಗಿ ದುಡಿಯುವರೆಂಬ ಗುರಿ ಕನ್ನಡಿಯೊಳಗಿನ ಗಂಟಾಗಿ ಉಳಿಯಿತು. ಬಡವರಿಗೆ ಉದಾರ ನೆರವು ಕೊಟ್ಟರೆ ಅವರಲ್ಲಿ ಕೆಲವರು ಮೈಬಗ್ಗಿಸಿ ಕೆಲಸಮಾಡುವುದಿಲ್ಲವೆಂದು ಹೇಳುತ್ತಾ ನೆರವು ಕೊಡುವುದರ ಬಗ್ಗೆ ಕೆಲವರಿಗೆ ಅಸಮಾಧಾನವಿತ್ತು. ಅಂತೂ ಬೈಬಲಿನ ಈ ಮಾತುಗಳು ಸತ್ಯವೆಂದು ರುಜುವಾದವು: “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ. . . . ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು, ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ.”—ಪ್ರಸಂಗಿ 7:20, 29.
ಅನೇಕ ಜನರಿಗಿದ್ದ ಇನ್ನೊಂದು ನಿರೀಕ್ಷೆಯನ್ನು ದಿ ಅಮೆರಿಕನ್ ಡ್ರೀಮ್ ಎಂದು ಕರೆಯಲಾಗುತ್ತಿತ್ತು. ಅಮೆರಿಕವು, ಶ್ರಮಪಟ್ಟು ದುಡಿಯುವ ಯಾವುದೇ ವ್ಯಕ್ತಿಯನ್ನು ಧನಿಕನಾಗಿಸಬಲ್ಲ ಸ್ಥಳವಾಗಬೇಕೆಂಬ ಕನಸು ಅದಾಗಿತ್ತು. ಯುನೈಟೆಡ್ ಸ್ಟೇಟ್ಸ್ ಶ್ರೀಮಂತ ರಾಷ್ಟ್ರವಾದದ್ದು ಅದರ ಪ್ರಜಾಪ್ರಭುತ್ವ, ಖಾಸಗಿ ಉದ್ಯಮ, ಮುಕ್ತ ವ್ಯಾಪಾರದಂಥ ಕಾರ್ಯನೀತಿಗಳಿಂದ ಎಂದು ನೆನಸಿ ಭೂಸುತ್ತಲೂ ಅನೇಕ ರಾಷ್ಟ್ರಗಳು ಆ ಕಾರ್ಯನೀತಿಗಳನ್ನೇ ಅಳವಡಿಸಿಕೊಂಡವು. ಹಾಗಿದ್ದರೂ, ಆ ಎಲ್ಲ ರಾಷ್ಟ್ರಗಳು ಅಮೆರಿಕದಂತೆ ಧನಿಕರಾಗಲಿಲ್ಲ ಏಕೆಂದರೆ ಉತ್ತರ ಅಮೆರಿಕ ಸಂಪತ್ತನ್ನು ಗಳಿಸಿದ್ದು ಬರೇ ಅದರ ರಾಜಕೀಯ ವ್ಯವಸ್ಥೆಯಿಂದಾಗಿ ಅಲ್ಲ. ಅದಕ್ಕಿದ್ದ ಬೃಹತ್ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಅನುಕೂಲವಾಗಿದ್ದ ಭೂಮಾರ್ಗ, ಜಲಮಾರ್ಗಗಳೂ ಮುಖ್ಯ ಪಾತ್ರ ವಹಿಸಿದ್ದವು. ಅಲ್ಲದೆ, ಈ ಲೋಕದ ಸ್ಪರ್ಧಾತ್ಮಕ ಆರ್ಥಿಕ ವ್ಯವಸ್ಥೆಯು ಸಮೃದ್ಧಿಗಳಿಸುವ ಜಯಶಾಲಿ ದೇಶಗಳನ್ನು ಮಾತ್ರವಲ್ಲ ಕಂಗಾಲಾಗುವ ಪರಾಜಿತ ದೇಶಗಳನ್ನೂ ಹುಟ್ಟುಹಾಕುತ್ತದೆ. ಇಂಥ ಬಡ ರಾಷ್ಟ್ರಗಳಿಗೆ ನೆರವುಕೊಡಲು ಧನಿಕ ರಾಷ್ಟ್ರಗಳನ್ನು ಪ್ರೋತ್ಸಾಹಿಸಸಾಧ್ಯವೇ?
ಮಾರ್ಷಲ್ ಯೋಜನೆ—ಬಡತನಕ್ಕೆ ಕೊನೆ ತಂದಿತೇ?
IIನೇ ಮಹಾಯುದ್ಧದ ಬಳಿಕ ಯೂರೋಪ್ ಜರ್ಜರಿತವಾಗಿತ್ತು. ಹೆಚ್ಚಿನ ಜನರು ಹೊಟ್ಟೆಗಿಲ್ಲದ ಸ್ಥಿತಿಯಲ್ಲಿದ್ದರು. ಯೂರೋಪ್‌ನಲ್ಲಿ ಸಮಾಜವಾದವು ಜನಪ್ರಿಯವಾಗುವುದನ್ನು ಕಂಡು ಯು.ಎಸ್. ಸರಕಾರಕ್ಕೆ ಚಿಂತೆಹತ್ತಿತು. ಆದ್ದರಿಂದ ಯು.ಎಸ್. ಕಾರ್ಯನೀತಿಗಳನ್ನು ಸ್ವೀಕರಿಸಲು ಸಿದ್ಧವಿದ್ದ ಯೂರೋಪಿಯನ್ ದೇಶಗಳ ಕೈಗಾರಿಕೆ, ಕೃಷಿ ಕೆಲಸವನ್ನು ಯುದ್ಧಪೂರ್ವ ಸ್ಥಿತಿಗೆ ತರಲು ಅದು ನಾಲ್ಕು ವರ್ಷಗಳ ವರೆಗೆ ತುಂಬ ಹಣಸಹಾಯ ಮಾಡಿತು. ಯೂರೋಪ್ ಪುನಶ್ಚೇತನದ ಈ ಕಾರ್ಯಕ್ರಮಕ್ಕೆ ‘ಮಾರ್ಷಲ್ ಯೋಜನೆ’ ಎಂದು ಹೆಸರಿಡಲಾಯಿತು. ಹೀಗೆ ಪಶ್ಚಿಮ ಯೂರೋಪಿನಲ್ಲಿ ಅಮೆರಿಕದ ಪ್ರಭಾವ ಹೆಚ್ಚಾಗುತ್ತಾ ಹೋಯಿತು. ಜೀವಕ್ಕೆ ಮಾರಕವಾಗಿರುವಂಥ ರೀತಿಯ ಬಡತನ ಇಳಿಮುಖಗೊಂಡಿತು. ಈ ಯೋಜನೆ ಜಾಗತಿಕ ಬಡತನಕ್ಕೂ ಕೊನೆತಂದಿತೇ?
ಮಾರ್ಷಲ್ ಯೋಜನೆ ಸಾಫಲ್ಯ ಕಂಡಾಗ ಅಮೆರಿಕನ್ ಸರ್ಕಾರ ಲೋಕದಾದ್ಯಂತ ಬಡ ದೇಶಗಳಿಗೆ ಸಹಾಯಹಸ್ತ ಚಾಚತೊಡಗಿತು. ಕೃಷಿ, ಆರೋಗ್ಯಾರೈಕೆ, ಶಿಕ್ಷಣ, ಸಾರಿಗೆ ವ್ಯವಸ್ಥೆಗಳ ಅಭಿವೃದ್ಧಿಗೆ ನೆರವುನೀಡಿತು. ಈ ನೆರವಿನ ಹಿಂದೆ ತಮ್ಮ ಸ್ವಾರ್ಥವೂ ಅಡಗಿದೆಯೆಂದು ಸ್ವತಃ ಅಮೆರಿಕವೇ ಮುಕ್ತವಾಗಿ ತಿಳಿಸಿತು. ಇತರ ದೇಶಗಳೂ ವಿದೇಶಗಳಿಗೆ ಆರ್ಥಿಕ ನೆರವು ನೀಡಿ ತಮ್ಮ ಪ್ರಭಾವ ಹೆಚ್ಚಿಸುವುದರತ್ತ ಚಿತ್ತಹರಿಸಿದವು. ಮಾರ್ಷಲ್ ಯೋಜನೆಗೆ ಸುರಿಸಲಾದ ಹಣಕ್ಕಿಂತ ಎಷ್ಟೊ ಪಟ್ಟು ಜಾಸ್ತಿ ಹಣವನ್ನು 60 ವರ್ಷಗಳಲ್ಲಿ ಸುರಿಸಲಾಯಿತು. ಹಾಗಿದ್ದರೂ ಫಲಿತಾಂಶ ನಿರಾಶಾಜನಕವಾಗಿತ್ತು. ಆದರೆ ಕೆಲವೊಂದು ಬಡ ರಾಷ್ಟ್ರಗಳು ರಾಶಿರಾಶಿ ಸಂಪತ್ತನ್ನು ಗಳಿಸಿದವು, ಉದಾಹರಣೆಗೆ ಪೂರ್ವ ಏಷ್ಯದಲ್ಲಿನ ಕೆಲವು ದೇಶಗಳಲ್ಲಿ ಮಕ್ಕಳ ಶಿಕ್ಷಣ ಏಳಿಗೆ ಹೊಂದಿತು ಮಾತ್ರವಲ್ಲ ಮಕ್ಕಳ ಸಾವಿನ ಸಂಖ್ಯೆ ತಗ್ಗಿತು. ಆದರೂ ಅನೇಕ ರಾಷ್ಟ್ರಗಳು ಇನ್ನೂ ಕಡು ಬಡತನದಿಂದ ನರಳುತ್ತಿದ್ದವು.
ವಿದೇಶಿ ನೆರವಿನಿಂದ ಬಡತನ ಕೊನೆಗೊಳ್ಳಲಿಲ್ಲ—ಏಕೆ?
ಬಡ ರಾಷ್ಟ್ರಗಳ ಬಡತನ ನಿರ್ಮೂಲನಕ್ಕೆ ನೆರವಾಗುವುದಕ್ಕಿಂತ ಧನಿಕ ರಾಷ್ಟ್ರಗಳಿಗೆ ಯುದ್ಧದಿಂದ ಪುನಶ್ಚೇತನಗೊಳ್ಳುವಂತೆ ನೆರವಾಗುವುದು ಸುಲಭವಾಗಿತ್ತು. ಯೂರೋಪಿನಲ್ಲಿ ಕೈಗಾರಿಕೆ, ವ್ಯಾಪಾರ, ಸಾರಿಗೆವ್ಯವಸ್ಥೆ ಈವಾಗಲೇ ಇದ್ದವು. ಅಲ್ಲಿನ ಆರ್ಥಿಕ ವ್ಯವಸ್ಥೆಗೆ ಸ್ವಲ್ಪ ಪುಷ್ಟಿ ಕೊಡಬೇಕಿತ್ತು ಅಷ್ಟೇ. ಬೇರೆ ಬಡ ದೇಶಗಳಲ್ಲಾದರೊ ವಿದೇಶಿ ನೆರವಿನಿಂದಾಗಿ ರಸ್ತೆಗಳನ್ನು, ಶಾಲೆಗಳನ್ನು, ಚಿಕಿತ್ಸಾಲಯಗಳನ್ನು ಕಟ್ಟಿದರೂ ಜನರು ಇನ್ನೂ ಕಡು ಬಡತನದಲ್ಲಿದ್ದರು. ಯಾಕೆಂದರೆ ಆ ದೇಶಗಳಲ್ಲಿ ವ್ಯಾಪಾರ, ನೈಸರ್ಗಿಕ ಸಂಪನ್ಮೂಲಗಳು ಇರಲಿಲ್ಲ ಅಲ್ಲದೆ ವ್ಯಾಪಾರಕ್ಕೆ ಅನುಕೂಲವಾದ ಭೂಮಾರ್ಗ, ಜಲಮಾರ್ಗಗಳು ಇರಲಿಲ್ಲ.
ಬಡತನ-ಚಕ್ರ ತೀರ ಜಟಿಲವಾಗಿದ್ದು, ಅದನ್ನು ಸುಲಭವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಕಾಯಿಲೆ ಬಡತನಕ್ಕೆ ನಡೆಸುತ್ತದೆ, ಬಡತನ ಕಾಯಿಲೆಯನ್ನು ಬರಿಸುತ್ತದೆ. ನ್ಯೂನಪೋಷಣೆಯಿಂದ ನರಳುವ ಮಕ್ಕಳು ಶಾರೀರಿಕವಾಗಿ, ಮಾನಸಿಕವಾಗಿ ಎಷ್ಟು ದುರ್ಬಲರಾಗುತ್ತಾರೆಂದರೆ ಅವರು ದೊಡ್ಡವರಾದಾಗ ತಮ್ಮ ಸ್ವಂತ ಮಕ್ಕಳನ್ನು ಪೋಷಿಸಲೂ ಶಕ್ತರಾಗುವುದಿಲ್ಲ. ಅಲ್ಲದೆ, ಧನಿಕ ರಾಷ್ಟ್ರಗಳು ತಮ್ಮ ಮಿಕ್ಕಿದ ಆಹಾರವನ್ನು ‘ನೆರವು’ ಎಂಬ ಹೆಸರಿನಲ್ಲಿ ಬಡ ದೇಶಗಳಿಗೆ ಸುರಿಯುವಾಗ, ಆ ಬಡ ದೇಶಗಳ ರೈತರು ಮತ್ತು ಚಿಲ್ಲರೆ ವ್ಯಾಪಾರಿಗಳು ದಿವಾಳಿಯಾಗುತ್ತಾರೆ. ಇದು ಇನ್ನಷ್ಟು ಬಡತನಕ್ಕೆ ನಡೆಸುತ್ತದೆ. ಬಡ ದೇಶಗಳ ಸರ್ಕಾರಗಳಿಗೆ ಹಣ ಕಳುಹಿಸುವುದರಿಂದ ಬಡತನದ ಇನ್ನೊಂದು ಚಕ್ರ ಶುರುವಾಗುತ್ತದೆ. ಅದೇನೆಂದರೆ, ವಿದೇಶಿ ನೆರವನ್ನು ಕಬಳಿಸುವವರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ, ಭ್ರಷ್ಟಾಚಾರ ಬಡತನವನ್ನು ಹೆಚ್ಚಿಸುತ್ತದೆ. ಆದರೆ ವಿದೇಶಿ ನೆರವು ನೆಲಕಚ್ಚುವುದು ಮುಖ್ಯವಾಗಿ ಅದು ಬಡತನದ ಬೇರನ್ನು ಕಿತ್ತುತೆಗೆಯದಿರುವ ಕಾರಣವೇ.
ಬಡತನದ ಬೇರು
ರಾಷ್ಟ್ರಗಳು, ಸರ್ಕಾರಗಳು, ವ್ಯಕ್ತಿಗಳು ಬರೇ ತಮ್ಮ ಹಿತವನ್ನೇ ಕಾಪಾಡುವ ನಿಟ್ಟಿನಲ್ಲಿ ಕಾರ್ಯವೆಸಗುವಾಗ ಕಡು ಬಡತನ ಉಂಟಾಗುತ್ತದೆ. ಉದಾಹರಣೆಗೆ, ಶ್ರೀಮಂತ ದೇಶಗಳ ಸರ್ಕಾರಗಳು ಜಾಗತಿಕ ಬಡತನ ಕೊನೆಗಾಣಿಸುವುದಕ್ಕೆ ಅಷ್ಟೊಂದು ಮಹತ್ವ ಕೊಡುವುದಿಲ್ಲ. ಈ ಸರ್ಕಾರಗಳನ್ನು ಜನರೇ ಚುನಾಯಿಸಿರುವುದರಿಂದ ತಮ್ಮ ಮತದಾರರನ್ನು ಖುಷಿಯಾಗಿರಿಸಲು ಅವು ಪ್ರಯತ್ನಿಸಬೇಕು. ಹಾಗಾಗಿ, ಬಡ ದೇಶಗಳ ರೈತರು ಅವರ ಉತ್ಪನ್ನಗಳನ್ನು ತಮ್ಮ ದೇಶಗಳಲ್ಲಿ ಮಾರುವಂತೆ ಈ ಸರ್ಕಾರಗಳು ಬಿಡುವುದಿಲ್ಲ. ಹೀಗೆ ತಮ್ಮ ದೇಶಗಳ ರೈತರು ದಿವಾಳಿಯಾಗದಂತೆ ತಡೆಯುತ್ತಾರೆ. ಅಷ್ಟುಮಾತ್ರವಲ್ಲ ಈ ಧನಿಕ ದೇಶಗಳ ಶಾಸಕರು ತಮ್ಮ ರೈತರಿಗೆ ತುಂಬ ಸಹಾಯಧನ ಕೊಟ್ಟು, ಹೀಗೆ ಅವರು ತಮ್ಮ ಸರಕನ್ನು ಬಡ ದೇಶಗಳ ರೈತರಿಗಿಂತ ಕಡಿಮೆ ಬೆಲೆಯಲ್ಲಿ ವಿಕ್ರಯಿಸಲು ನೆರವಾಗುತ್ತಾರೆ.
ಹಾಗಾದರೆ ಜನರು ಹಾಗೂ ಸರ್ಕಾರಗಳ ಸ್ವಾರ್ಥಪರ ಸ್ವಭಾವವೇ ಬಡತನದ ಬೇರು ಎಂಬುದು ಸ್ಪಷ್ಟ. ಬೈಬಲನ್ನು ಬರೆದವರಲ್ಲಿ ಒಬ್ಬನಾದ ಸೊಲೊಮೋನನು ಇದನ್ನು ಈ ಮಾತುಗಳಲ್ಲಿ ಹೇಳಿದನು: ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡುತ್ತಾನೆ.’—ಪ್ರಸಂಗಿ 8:9.
ಹೀಗಿರುವಾಗ ಬಡತನ ಬವಣೆ ಕೊನೆಗೊಳ್ಳುವುದೆಂದು ನಿರೀಕ್ಷಿಸಸಾಧ್ಯವೇ? ಮಾನವ ಸ್ವಭಾವವನ್ನೇ ಬದಲಾಯಿಸಬಲ್ಲ ಯಾವುದಾದರೂ ಸರ್ಕಾರವಿದೆಯೇ? (w11-E 06/01)
[ಪುಟ 6ರಲ್ಲಿರುವ ಚೌಕ]
ಬಡತನ ತಡೆಗೆ ನಿಯಮ
ಯೆಹೋವ ದೇವರು ಪುರಾತನ ಇಸ್ರಾಯೇಲ್ ಜನಾಂಗಕ್ಕೆ ನಿಯಮಗಳನ್ನು ಕೊಟ್ಟಿದ್ದನು. ಅದನ್ನವರು ಪಾಲಿಸುತ್ತಿದ್ದಲ್ಲಿ ಹೆಚ್ಚಿನ ಬಡತನವನ್ನು ತಡೆಗಟ್ಟಸಾಧ್ಯವಿತ್ತು. ಆ ನಿಯಮಕ್ಕನುಸಾರ ಪ್ರತಿಯೊಂದು ಕುಟುಂಬಕ್ಕೆ (ಯಾಜಕ ಗೋತ್ರವಾಗಿದ್ದ ಲೇವಿ ಕುಟುಂಬಗಳನ್ನು ಬಿಟ್ಟು) ಜಮೀನನ್ನು ಆಸ್ತಿಯಾಗಿ ನೀಡಲಾಗುತ್ತಿತ್ತು. ವಂಶಪಾರಂಪರ್ಯವಾಗಿ ಬಂದ ಆಸ್ತಿ ಕುಟುಂಬದಲ್ಲೇ ಉಳಿಯುತ್ತಿತ್ತು ಏಕೆಂದರೆ ಯಾರೂ ತಮ್ಮ ಜಮೀನನ್ನು ಶಾಶ್ವತವಾಗಿ ವಿಕ್ರಯಿಸಬಾರದೆಂಬ ನಿಯಮವಿತ್ತು. ಆದರೆ ಕಾಯಿಲೆ, ವಿಪತ್ತು, ಸೋಮಾರಿತನ ಮುಂತಾದ ಕಾರಣಗಳಿಂದ ಯಾರಾದರೂ ತನ್ನ ಜಮೀನನ್ನು ವಿಕ್ರಯಿಸಿದರೆ, ಅದನ್ನು ಅವನಿಗೆ ಅಥವಾ ಅವನ ಕುಟುಂಬಕ್ಕೆ ಜೂಬಿಲಿ ಸಂವತ್ಸರದಲ್ಲಿ ಅಂದರೆ 50ನೇ ವರ್ಷದಲ್ಲಿ ಧರ್ಮಾರ್ಥವಾಗಿ ಹಿಂದಿರುಗಿಸಬೇಕೆಂದು ವಿಧಿಸಲಾಗಿತ್ತು. ಹೀಗೆ ಯಾವುದೇ ಕುಟುಂಬ ತಲೆಮಾರುಗಳ ತನಕ ಬಡತನದಲ್ಲಿ ನರಳಬೇಕಾಗಿರಲಿಲ್ಲ.—ಯಾಜಕಕಾಂಡ 25:10, 23.
ದೇವರ ನಿಯಮದಲ್ಲಿದ್ದ ಇನ್ನೊಂದು ದಯಾಭರಿತ ಏರ್ಪಾಡೇನೆಂದರೆ ಆರ್ಥಿಕ ಕಷ್ಟಕ್ಕೆ ಬಿದ್ದಿದ್ದ ವ್ಯಕ್ತಿ ತನ್ನನ್ನೇ ದಾಸನಾಗಿ ಮಾರಬಹುದಿತ್ತು. ಅವನಿಗೆ ಈ ಮಾರಾಟದ ಹಣವು ಮುಂಗಡವಾಗಿಯೇ ಸಿಗುತ್ತಿತ್ತಾದ್ದರಿಂದ ಅವನು ತನ್ನ ಸಾಲಗಳನ್ನು ತೀರಿಸಿಬಿಡಬಹುದಿತ್ತು. ಏಳನೇ ವರ್ಷದೊಳಗೆ ಅವನು ಸಾಲ ತೀರಿಸಿ ತನ್ನನ್ನು ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಅವನನ್ನು ಕೊಂಡುಕೊಂಡಿದ್ದ ಧಣಿ ಅವನನ್ನು ಬಿಡುಗಡೆಮಾಡಬೇಕಾಗಿತ್ತು. ಜೊತೆಗೆ, ಅವನು ಪುನಃ ಒಮ್ಮೆ ಸಾಗುವಳಿ ಮಾಡಲು ಶಕ್ತನಾಗುವಂತೆ ಬಿತ್ತನೆ ಬೀಜ ಹಾಗೂ ಜಾನುವಾರುಗಳನ್ನು ಕೊಡಬೇಕಿತ್ತು. ಅಲ್ಲದೆ, ಜೊತೆ ಇಸ್ರಾಯೇಲ್ಯರಿಂದ ಬಡವನೊಬ್ಬನು ಸಾಲ ತೆಗೆದುಕೊಂಡರೆ ಅವನಿಂದ ಬಡ್ಡಿ ವಸೂಲಿಮಾಡಬಾರದೆಂದು ದೇವರ ನಿಯಮವಿತ್ತು. ಜನರು ತಮ್ಮ ಹೊಲಗಳ ಅಂಚುಗಳಲ್ಲಿ ಬೆಳೆದದ್ದನ್ನು ಕೊಯ್ಯದೆ ಬಿಡುವಂತೆಯೂ ಆಜ್ಞಾಪಿಸಲಾಗಿದ್ದರಿಂದ ಅದನ್ನು ಬಡ ಜನರು ಬಂದು ಸಂಗ್ರಹಿಸಬಹುದಿತ್ತು. ಹೀಗೆ, ಯಾವ ಇಸ್ರಾಯೇಲ್ಯನಿಗೂ ಭಿಕ್ಷೆಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ.—ಧರ್ಮೋಪದೇಶಕಾಂಡ 15:1-14; ಯಾಜಕಕಾಂಡ 23:22.
ಹಾಗಿದ್ದರೂ ಕೆಲವು ಇಸ್ರಾಯೇಲ್ಯರು ಬಡತನದ ಬವಣೆಗೊಳಗಾದರೆಂದು ಇತಿಹಾಸ ತೋರಿಸುತ್ತದೆ. ಹೀಗೇಕಾಯಿತು? ಇಸ್ರಾಯೇಲ್ ಜನಾಂಗವು ಯೆಹೋವ ದೇವರ ನಿಯಮವನ್ನು ಪಾಲಿಸಲಿಲ್ಲ. ಫಲಸ್ವರೂಪವಾಗಿ, ಇಂದಿನ ಅನೇಕ ದೇಶಗಳಲ್ಲಿರುವಂತೆ ಅಂದೂ ಕೆಲವು ಜನರು ಶ್ರೀಮಂತ ಜಮೀನ್ದಾರರಾದರು, ಇನ್ನೂ ಕೆಲವರು ಜಮೀನಿಲ್ಲದೆ ನಿರ್ಗತಿಕ ಬಡವರಾದರು. ಇಸ್ರಾಯೇಲ್ಯರಲ್ಲಿ ಬಡತನ ಆರಂಭವಾದದ್ದು ಅವರಲ್ಲಿ ಕೆಲವರು ದೇವರ ನಿಯಮವನ್ನು ಅಲಕ್ಷಿಸಿ, ಇತರರ ಹಿತಕ್ಕಿಂತ ತಮ್ಮ ಸ್ವಾರ್ಥಕ್ಕೆ ಪ್ರಾಶಸ್ತ್ಯ ಕೊಟ್ಟದ್ದರಿಂದಲೇ.—ಮತ್ತಾಯ 22:37-40.