ಹಿರಿಯರೇ, “ಬಳಲಿ” ಬೆಂಡಾದವರನ್ನು ಚೈತನ್ಯಗೊಳಿಸುವಿರಾ?
ಅಂಜಲಿa 30ರ ಹರೆಯದ ಅವಿವಾಹಿತೆ. ಅವಳ ಮನೆಗೆ ಇನ್ನೇನು ಹಿರಿಯರು ಬರಲಿದ್ದಾರೆ. ಅವರು ಏನು ಹೇಳಲಿದ್ದಾರೋ ಎಂದು ಅಂಜಲಿಗೆ ಒಳಗೊಳಗೇ ಭಯ. ಏಕೆಂದರೆ ಅವಳು ಇತ್ತೀಚೆಗೆ ಕೆಲವು ಕೂಟಗಳನ್ನು ಹಾಜರಾಗಿರಲಿಲ್ಲ. ಆದರೆ ಅದಕ್ಕೆ ಕಾರಣವೂ ಇದೆ. ದಿನವಿಡೀ ವೃದ್ಧರನ್ನು ನೋಡಿಕೊಳ್ಳುವ ಕೆಲಸ ಮಾಡಿ ಸುಸ್ತಾಗುತ್ತಾಳೆ. ಅದರ ಜೊತೆಗೆ ತಾಯಿಯ ಆರೋಗ್ಯದ ಚಿಂತೆ ತಲೆಯಲ್ಲಿ ತುಂಬಿಕೊಂಡಿದೆ.
ಅಂಜಲಿಯನ್ನು ಭೇಟಿಮಾಡಲು ಬರುವ ಹಿರಿಯರು ನೀವಾಗಿರುವಲ್ಲಿ “ಬಳಲಿ”ಹೋಗಿರುವ ಆಕೆಯನ್ನು ಹೇಗೆ ಉತ್ತೇಜಿಸುತ್ತೀರಾ? (ಯೆರೆ. 31:25) ಸರಿ, ಅದಕ್ಕೂ ಮುನ್ನ ಇಂಥ ಪರಿಪಾಲನಾ ಭೇಟಿಗೆ ನೀವು ಹೇಗೆ ತಯಾರಿ ಮಾಡುವಿರಿ?
ಅವರ ಪರಿಸ್ಥಿತಿ ಹೇಗಿದೆ?
ನಾವೆಲ್ಲರೂ ಅನೇಕ ಸಲ ದಣಿದುಹೋಗುತ್ತೇವೆ. ಅದು ನಮ್ಮ ಕೆಲಸದಿಂದಾಗಿ ಇರಬಹುದು, ದೇವಪ್ರಭುತ್ವಾತ್ಮಕ ಜವಾಬ್ದಾರಿಗಳಿಂದಿರಬಹುದು. ಪ್ರವಾದಿ ದಾನಿಯೇಲ ಸಹ ಅರ್ಥವೇ ಆಗದ ಒಂದು ದರ್ಶನವನ್ನು ಕಂಡಾಗ ಬಳಲಿ ‘ಬೆಂಡಾದನು.’ (ದಾನಿ. 8:27) ಗಬ್ರಿಯೇಲ ದೇವದೂತ ಬಂದು ಅವನಿಗೆ ಸಹಾಯಮಾಡಿದನು. ದರ್ಶನದ ಅರ್ಥವನ್ನು ತಿಳಿಸಿದನು. ದಾನಿಯೇಲನ ಪ್ರಾರ್ಥನೆಯನ್ನು ಯೆಹೋವ ದೇವರು ಕೇಳಿದ್ದಾನೆ ಮತ್ತು ಈಗಲೂ ಅವನು ದೇವರಿಗೆ “ಅತಿಪ್ರಿಯ” ಎಂದು ಹೇಳಿ ಭರವಸೆ ತುಂಬಿದನು. (ದಾನಿ. 9:21-23) ಇನ್ನೊಂದು ಸಂದರ್ಭದಲ್ಲಿ ಸಹ ಇನ್ನೊಬ್ಬ ದೇವದೂತನು ಸರಿಯಾಗಿ ಆಯ್ಕೆಮಾಡಿದ ಮಾತುಗಳನ್ನು ಬಳಸಿದನು. ಇವು ಬೆಂಡಾಗಿಹೋಗಿದ್ದ ದಾನಿಯೇಲನನ್ನು ಬಲಪಡಿಸಿದವು.—ದಾನಿ. 10:19.
ಹಾಗೆಯೇ ಬಳಲಿಹೋದ, ನಿರುತ್ತೇಜನಗೊಂಡ ಜೊತೆಕ್ರೈಸ್ತರೊಬ್ಬರನ್ನು ಭೇಟಿಯಾಗುವ ಮೊದಲು ಅವರ ಸನ್ನಿವೇಶ ಹೇಗಿದೆ ಎಂದು ಯೋಚಿಸಿ. ಅವರಿಗೆ ಯಾವೆಲ್ಲ ಸಮಸ್ಯೆಗಳಿರಬಹುದು? ಆ ಸಮಸ್ಯೆಗಳು ಹೇಗೆ ಅವರನ್ನು ನಿತ್ರಾಣಗೊಳಿಸುತ್ತಿರಬಹುದು? ಅವರಲ್ಲಿ ಯಾವೆಲ್ಲ ಒಳ್ಳೇ ಗುಣಗಳಿವೆ? ಎಂದು ಯೋಚಿಸಿ. 20 ವರ್ಷಗಳಿಂದ ಹಿರಿಯರಾಗಿ ಸೇವೆಮಾಡುತ್ತಿರುವ ರಿಚರ್ಡ್ ಎಂಬ ಸಹೋದರ ಹೇಳುತ್ತಾರೆ: “ನಾನು ಸಹೋದರರಲ್ಲಿ ಯಾವ ಒಳ್ಳೇ ಗುಣಗಳಿವೆ ಎಂದು ಯಾವಾಗಲೂ ಯೋಚಿಸುತ್ತೇನೆ. ಮಾತ್ರವಲ್ಲ ಅವರನ್ನು ಭೇಟಿಮಾಡುವ ಮುಂಚೆ ಅವರ ಪರಿಸ್ಥಿತಿಯ ಕುರಿತು ಸೂಕ್ಷ್ಮವಾಗಿ ಯೋಚಿಸುತ್ತೇನೆ. ಇದರಿಂದ ಅವರ ಅವಶ್ಯಕತೆಗೆ ತಕ್ಕಂತೆ ಪ್ರೋತ್ಸಾಹ ನೀಡುವುದು ಹೇಗೆಂದು ತಿಳಿಯುತ್ತದೆ.” ನಿಮ್ಮೊಂದಿಗೆ ಇನ್ನೊಬ್ಬ ಹಿರಿಯರು ಬರುವುದಾದರೆ ಅವರೊಂದಿಗೆ ಈ ವಿಷಯದ ಕುರಿತು ಮೊದಲೇ ಚರ್ಚಿಸಿ.
ಮುಜುಗರವಾಗದಂತೆ ನೋಡಿಕೊಳ್ಳಿ
ತಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಯಾರಿಗೂ ಸುಲಭವಲ್ಲ, ಮುಜುಗರವಾಗುವುದು ಸಾಮಾನ್ಯ. ನೀವು ಭೇಟಿಮಾಡುವ ಸಹೋದರರಿಗೂ ಹಾಗೆಯೇ ಅನಿಸಬಹುದು. ಹಾಗಾಗಿ ಮಾತಾಡಲು ನೀವೇ ಮೊದಲ ಹೆಜ್ಜೆ ತಕ್ಕೊಳ್ಳಬೇಕು. ಆದರೆ ಹೇಗೆ? ನಿಮ್ಮ ನಿಷ್ಕಪಟ ಮುಗುಳ್ನಗೆ ಹಾಗೂ ಭರವಸೆ ತುಂಬುವ ಮಾತುಗಳು ಅವರನ್ನು ಹಾಯಾಗಿಸುವವು. 40 ವರ್ಷಗಳಿಂದ ಹಿರಿಯರಾಗಿ ಸೇವೆ ಸಲ್ಲಿಸುತ್ತಿರುವ ಸಹೋದರ ಮೈಕಲ್ ಇದನ್ನೇ ಮಾಡುತ್ತಾರೆ. ಹೋದ ಕೂಡಲೇ ಹೀಗನ್ನುತ್ತಾರೆ: “ಹಿರಿಯರಾದ ನಮಗಿರುವ ಒಳ್ಳೇ ಸುಯೋಗ ಏನಂದರೆ ಸಹೋದರ ಸಹೋದರಿಯರ ಮನೆಗೆ ಬಂದು ಅವರನ್ನು ಮಾತಾಡಿಸಿ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು. ಇದು ತುಂಬ ಸಂತೋಷ ತರುತ್ತದೆ. ನಿಮ್ಮನ್ನು ಭೇಟಿಯಾಗಲಿಕ್ಕೆ ನಾನು ಕಾಯ್ತಾ ಇದ್ದೆ.”
ಭೇಟಿಯ ಆರಂಭದಲ್ಲಿ ಅವರೊಂದಿಗೆ ಮನದಾಳದಿಂದ ಪ್ರಾರ್ಥನೆ ಮಾಡುವುದು ಸಹ ನೆರವಾಗುತ್ತದೆ. ಅಪೊಸ್ತಲ ಪೌಲ ಪ್ರಾರ್ಥನೆ ಮಾಡುವಾಗ ತನ್ನ ಸಹೋದರರ ನಂಬಿಗಸ್ತಿಕೆ, ಪ್ರೀತಿ, ತಾಳ್ಮೆಯ ಕುರಿತು ಹೇಳಿದನು. (1 ಥೆಸ. 1:2, 3) ಹಾಗೆಯೇ ನೀವು ಸಹ ಆ ಸಹೋದರರಲ್ಲಿರುವ ಒಳ್ಳೇ ಗುಣಗಳ ಕುರಿತು ಪ್ರಾರ್ಥನೆಯಲ್ಲಿ ಹೇಳಿ. ಅದು ನಂಬಿಕೆ ಕಟ್ಟುವಂಥ ಸಂಭಾಷಣೆಯನ್ನು ಮಾಡಲು ನಿಮ್ಮ ಮತ್ತು ಅವರ ಹೃದಯವನ್ನು ಸಿದ್ಧಪಡಿಸುವುದು. ನಿಮ್ಮ ಮಾತುಗಳು ಅವರನ್ನು ಕಟ್ಟಬಲ್ಲವು. ಹಿರಿಯರಾಗಿ ಸೇವೆ ಮಾಡುತ್ತಿರುವ ರೇ ಎಂಬ ಸಹೋದರ ಏನನ್ನುತ್ತಾರೆ ಕೇಳಿ: “ನಾವೇನಾದ್ರೂ ಒಳ್ಳೇದು ಮಾಡ್ತಿದ್ದೇವೆ ಎನ್ನುವುದನ್ನು ಅನೇಕ ಬಾರಿ ಮರೆತುಬಿಡುತ್ತೇವೆ. ಇನ್ನೊಬ್ಬರು ಅದನ್ನು ಗಮನಿಸಿ ಹೇಳಿದಾಗ ಮನಸ್ಸಿಗೆ ಮುದವೆನಿಸುತ್ತದೆ.”
ಆಧ್ಯಾತ್ಮಿಕ ವರ ಕೊಡಿ
ಪೌಲನಂತೆ ನೀವು ಸಹ ಭೇಟಿಮಾಡಿದ ಸಹೋದರರಿಗೆ “ಆಧ್ಯಾತ್ಮಿಕ ವರವನ್ನು” ಕೊಡಬಹುದು. ಒಂದೇ ಒಂದು ವಚನವನ್ನು ವಿವರಿಸುವ ಮೂಲಕವೂ ಅದನ್ನು ಮಾಡಬಹುದು. (ರೋಮ. 1:11) ಉದಾಹರಣೆಗೆ, ಸಹೋದರರೊಬ್ಬರು ಖಿನ್ನರಾಗಿರುವಲ್ಲಿ ಅವರಿಗೆ ತಮ್ಮ ಬಗ್ಗೆಯೇ ಅನರ್ಹ ಭಾವನೆ ಇರಬಹುದು, ತಾನು ಯಾವುದಕ್ಕೂ ಯೋಗ್ಯನಲ್ಲ ಎಂದನಿಸಬಹುದು. ಕೀರ್ತನೆಗಾರನಂತೆಯೇ, ತಾನು “ಹೊಗೆಯಲ್ಲಿ ನೇತುಹಾಕಿರುವ [ಒಣಗಿಹೋದ] ಬುದ್ದಲಿಯಂತಿದ್ದೇನೆ” ಎಂದು ಅನಿಸಬಹುದು. (ಕೀರ್ತ. 119:83, 176) ಕೀರ್ತನೆಗಾರನ ಈ ಮಾತಿನ ಬಗ್ಗೆ ನೀವು ಅವರಿಗೆ ಸಂಕ್ಷಿಪ್ತ ವಿವರಣೆ ಕೊಡಬಹುದು. ಇಂಥ ಸನ್ನಿವೇಶದಲ್ಲೂ ಆ ಸಹೋದರ ದೇವರ ಆಜ್ಞೆಗಳನ್ನು ‘ಮರೆತುಹೋಗಿಲ್ಲ’ ಎಂದು ಭರವಸೆ ತುಂಬಬಹುದು.
ಸಭೆಯಿಂದ ದೂರ ಹೋಗಿರುವ ಅಥವಾ ಆಧ್ಯಾತ್ಮಿಕ ವಿಷಯಗಳಲ್ಲಿ ಹಿಂದೆ ಬಿದ್ದಿರುವ ಸಹೋದರಿಯನ್ನು ಭೇಟಿಮಾಡಿರುವಲ್ಲಿ ಯೇಸು ಹೇಳಿರುವ ದ್ರಾಕ್ಮಾ ನಾಣ್ಯದ ದೃಷ್ಟಾಂತ ಬಳಸಿ ನೀವು ನೆರವು ನೀಡಬಹುದು. (ಲೂಕ 15:8-10) ಕಳೆದುಹೋದ ಆ ನಾಣ್ಯ ಈ ಮುಂಚೆ ಬೆಳ್ಳಿಯಿಂದ ಮಾಡಿರುವ ಒಂದು ಸುಂದರ ಸರದಲ್ಲಿ ಇದ್ದಿರಬೇಕು. ಹೀಗೆ ಮಾತನಾಡುವಲ್ಲಿ, ಆ ಸಹೋದರಿಗೆ ತಾನು ಕೂಡ ಸಭೆಯ ಒಂದು ಅಮೂಲ್ಯ ಭಾಗವಾಗಿದ್ದೇನೆ ಎಂದನಿಸುವುದು. ಅನಂತರ, ಯೆಹೋವ ದೇವರ ಪುಟ್ಟ ಕುರಿಗಳಲ್ಲಿ ಆ ಸಹೋದರಿ ಒಬ್ಬರಾಗಿದ್ದಾರೆ ಎಂಬ ಭರವಸೆ ತುಂಬಿ. ದೇವರಿಗೆ ಅವರ ಬಗ್ಗೆ ತುಂಬ ಕಾಳಜಿಯಿದೆ ಎಂದು ಮನಗಾಣಿಸಿ.
ಪರಿಪಾಲನಾ ಭೇಟಿಗೆ ಹೋದಾಗ ನೀವೇ ಎಲ್ಲ ಮಾತಾಡಬೇಡಿ. ಏಕೆಂದರೆ ಸಹೋದರ ಸಹೋದರಿಯರು ಹೆಚ್ಚಾಗಿ ಬೈಬಲ್ ವಚನಗಳ ಬಗ್ಗೆ ವಿವರಿಸಲು ಇಷ್ಟಪಡುತ್ತಾರೆ. ಹಾಗಾಗಿ ಅವರಿಗೆ ಅನ್ವಯಿಸುವ ಯಾವುದಾದರೊಂದು ವಚನ ಓದಿದ ನಂತರ ಅದರಲ್ಲಿರುವ ಒಂದು ಪದ ಅಥವಾ ಪದಗುಚ್ಛದ ಕುರಿತು ವಿವರಿಸುವಂತೆ ಕೇಳಿಕೊಳ್ಳಿ. ಉದಾಹರಣೆಗೆ, 2 ಕೊರಿಂಥ 4:16ನ್ನು ಓದುತ್ತೀರಿ ಎಂದಿಟ್ಟುಕೊಳ್ಳಿ. ಓದಿದ ನಂತರ, “ಯೆಹೋವನು ನಿಮ್ಮನ್ನು ನವೀಕರಿಸುತ್ತಿದ್ದಾನೆ ಎಂದು ನಿಮಗೆ ಯಾವ ಸಂದರ್ಭಗಳಲ್ಲಿ ಅನಿಸಿದೆ?” ಎಂದು ಕೇಳಬಹುದು. ಹೀಗೆ ಮಾತಾಡುವಾಗ “ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು” ಸಾಧ್ಯವಾಗುತ್ತದೆ.—ರೋಮ. 1:12.
ಆ ಸಹೋದರ ಅಥವಾ ಸಹೋದರಿಗೆ ಹೋಲುವ ಬೈಬಲ್ ಮಾದರಿಗಳ ಬಗ್ಗೆ ಚರ್ಚಿಸುವುದು ಸಹ ಅವರಲ್ಲಿ ಚೈತನ್ಯ ತುಂಬಬಲ್ಲದು. ಉದಾಹರಣೆಗೆ, ಬಹುದುಃಖದಿಂದ ಖಿನ್ನರಾಗಿದ್ದರೆ, ಹನ್ನ ಅಥವಾ ಎಪಪ್ರೊದೀತನ ಕುರಿತು ಚರ್ಚಿಸುವುದು ಉತ್ತಮವಾಗಿರಬಹುದು. ಅವರು ಆಗಾಗ ಖಿನ್ನರಾದರೂ ದೇವರ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದರು. (1 ಸಮು. 1:9-11, 20; ಫಿಲಿ. 2:25-30) ಹೀಗೆ ಅವರ ಪರಿಸ್ಥಿತಿ ಅನುಮತಿಸುವಲ್ಲಿ, ಅವರಂಥದ್ದೇ ಸನ್ನಿವೇಶದಲ್ಲಿದ್ದ ಬೈಬಲ್ ಮಾದರಿಗಳನ್ನು ನೀವು ಚರ್ಚಿಸಬಹುದು.
ಭೇಟಿಯ ನಂತರ ಮರೆತುಬಿಡಬೇಡಿ
ಸಹೋದರ ಸಹೋದರಿಯರ ಕಡೆಗೆ ನಿಮಗಿರುವ ಯಥಾರ್ಥ ಆಸಕ್ತಿ ಎಂದೂ ಬತ್ತಿಹೋಗದಿರಲಿ. ಪರಿಪಾಲನಾ ಭೇಟಿ ಮುಗಿದ ನಂತರವೂ ಅದು ಮುಂದುವರಿಯಲಿ. (ಅ. ಕಾ. 15:36) ಅದಕ್ಕಾಗಿ ನೀವು ಏನು ಮಾಡಬಹುದು? ಭೇಟಿ ಮುಗಿಸಿ ಬರುವ ಮುಂಚೆ, ಅವರೊಂದಿಗೆ ಪುನಃ ಸಮಯ ಕಳೆಯಲು ಏರ್ಪಾಡು ಮಾಡಬಹುದು. ಉದಾಹರಣೆಗೆ, ಅವರ ಜೊತೆ ಸೇವೆಗೆ ಹೋಗಲು ದಿನ ನಿಗದಿಪಡಿಸಬಹುದು. ತುಂಬ ವರ್ಷಗಳಿಂದ ಹಿರಿಯರಾಗಿರುವ ಸಹೋದರ ಬರ್ನಾರ್ಡ್ ಹೀಗೆ ಮಾಡುತ್ತಾರೆ: ಪರಿಪಾಲನಾ ಭೇಟಿ ಮಾಡಿರುವ ಸಹೋದರ ಸಹೋದರಿಯರನ್ನು ಅವರು ಮುಂದಿನ ಸಾರಿ ಸಿಕ್ಕಾಗ, ತಾವು ಕೊಟ್ಟಿರುವ ಸಲಹೆಯಿಂದ ಸಹಾಯವಾಗಿದೆಯಾ ಎಂದು ತಿಳಿದುಕೊಳ್ಳಲು ಜಾಣ್ಮೆಯಿಂದ “ಈಗ ಹೇಗಿದೆ? ಆ ಸಲಹೆಯಿಂದ ಪ್ರಯೋಜನವಾಯಿತಾ?” ಎಂದು ಕೇಳುತ್ತಾರೆ. ಹೀಗೆ ಮಾಡುವ ಮೂಲಕ ಅವರಲ್ಲಿ ನೀವು ವೈಯಕ್ತಿಕ ಆಸಕ್ತಿ ತೋರಿಸುತ್ತೀರಿ. ಇದು, ಅವರಿಗೆ ಇನ್ನೇನಾದರೂ ನೆರವು ಬೇಕಿದೆಯಾ ಎಂದು ತಿಳಿದುಕೊಳ್ಳಲು ಸಹಾಯಮಾಡುವುದು.
ನಮ್ಮ ಸಹೋದರ ಸಹೋದರಿಯರು ಪ್ರೀತಿ, ಕಾಳಜಿಗಾಗಿ ಹಾತೊರೆಯುತ್ತಾರೆ. ತಮ್ಮನ್ನು ಯಾರಾದರೂ ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. (1 ಥೆಸ. 5:11) ಆದ್ದರಿಂದ ಪರಿಪಾಲನಾ ಭೇಟಿಗೆ ಹೋಗುವ ಮೊದಲು ಅವರ ಸನ್ನಿವೇಶದ ಕುರಿತು ಆಲೋಚಿಸಿ. ಅದರ ಬಗ್ಗೆ ಪ್ರಾರ್ಥಿಸಿ. ತಕ್ಕದಾದ ವಚನಗಳನ್ನು ಆಯ್ಕೆಮಾಡಿ. ಆಗ ನಿಮ್ಮ ಸೂಕ್ತವಾದ ಮಾತುಗಳು “ಬಳಲಿದವರನ್ನು” ಚೈತನ್ಯಗೊಳಿಸುವವು!
a ಹೆಸರುಗಳನ್ನು ಬದಲಾಯಿಸಲಾಗಿದೆ.