ಕ್ರೈಸ್ತ ಕುರುಬರು ನಿಮಗೆ ಸೇವೆ ಸಲ್ಲಿಸುವ ವಿಧ
ಅನೇಕ ಸ್ಥಳಗಳಲ್ಲಿ ಕುರುಬರು ಒಂದು ಹಿಂಡನ್ನು ಹೇಗೆ ಉಪಚರಿಸುತ್ತಾರೆಂಬುದನ್ನು ಗಮನಿಸಸಾಧ್ಯವಿದೆ. ಅವರು ಕುರಿಗಳನ್ನು ನಡೆಸುತ್ತಾರೆ, ಸಂರಕ್ಷಿಸುತ್ತಾರೆ ಮತ್ತು ಅವುಗಳಿಗಾಗಿ ಒದಗಿಸುತ್ತಾರೆ. ಇದು ಕ್ರೈಸ್ತ ಹಿರಿಯರಿಗೆ ಆಸಕ್ತಿಯ ವಿಷಯವಾಗಿದೆ, ಏಕೆಂದರೆ ಅವರ ಕೆಲಸವು ಕುರಿಪಾಲನಾ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ. ನಿಶ್ಚಯವಾಗಿಯೂ, “ದೇವರ . . . ಸಭೆಯನ್ನು ಪರಿಪಾಲಿಸು”ವುದು ಮತ್ತು “ಎಲ್ಲಾ ಹಿಂಡಿನ ವಿಷಯದಲ್ಲಿ . . . ಎಚ್ಚರಿಕೆಯಾಗಿ”ರುವುದು ಅವರ ಹೊಣೆಯಾಗಿದೆ.—ಅ. ಕೃತ್ಯಗಳು 20:28.
ನೀವು ಕ್ರೈಸ್ತ ಸಭೆಯ ಒಬ್ಬ ಸದಸ್ಯರಾಗಿರುವಲ್ಲಿ, ಆತ್ಮಿಕ ಕುರುಬರು ಹೇಗೆ ನಿಮಗೆ ಸೇವೆಸಲ್ಲಿಸಬಲ್ಲರು? ಮತ್ತು ನಿಮ್ಮ ಪರವಾಗಿ ಮಾಡುವ ಅವರ ಪ್ರಯತ್ನಗಳಿಗೆ ನೀವು ಹೇಗೆ ಪ್ರತಿಕ್ರಿಯಿಸಬೇಕು? ಸಭೆಗೆ ಅವರ ಸಹಾಯದ ಅಗತ್ಯವಿದೆ ಏಕೆ?
ಯಾವುದರ ವಿರುದ್ಧವಾಗಿ ಸಂರಕ್ಷಣೆ?
ಪ್ರಾಚೀನ ಸಮಯಗಳಲ್ಲಿ, ಸಿಂಹಗಳು ಮತ್ತು ಇತರ ಕಾಡು ಪ್ರಾಣಿಗಳು ಹಿಂಡುಗಳನ್ನು ಅಪಾಯಕ್ಕೊಳಪಡಿಸಿ ಒಂದೊಂದಾಗಿರುವ ಕುರಿಗಳನ್ನು ಕೊಂದು ತಿಂದವು. ಕುರುಬರು ಸಂರಕ್ಷಣೆಯನ್ನು ಒದಗಿಸಬೇಕಿತ್ತು. (1 ಸಮುವೇಲ 17:34, 35) ಒಳ್ಳೇದು, ಪಿಶಾಚನಾದ ಸೈತಾನನು, “ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:8) ಅವನು ಕೋಪದಿಂದ, ಪೂರ್ತಿಯಾಗಿ ಯೆಹೋವನ ಭೂಸಂಸ್ಥೆಯ ವಿರುದ್ಧ ಮಾತ್ರವಲ್ಲ, ದೇವರ ಒಬ್ಬೊಬ್ಬ ಸೇವಕನ ವಿರುದ್ಧವೂ ಯುದ್ಧ ಮಾಡುತ್ತಾನೆ. ಸೈತಾನನ ಗುರಿಯು ಏನಾಗಿದೆ? ಅವನು ಯೆಹೋವನ ಜನರನ್ನು ನಿರಾಶೆಗೊಳಿಸಲು ಮತ್ತು ಅವರನ್ನು “ದೇವರ ಆಜ್ಞೆಗಳನ್ನು ಕೈಕೊಂಡು ನಡೆ”ಯುವುದರಿಂದ ಮತ್ತು “ಯೇಸುವಿನ ವಿಷಯವಾದ ಸಾಕ್ಷಿಯನ್ನು” ನೆರವೇರಿಸುವುದರಿಂದ ತಡೆಯಬಯಸುತ್ತಾನೆ.—ಪ್ರಕಟನೆ 12:17.
ಯೆಹೋವನು ಪ್ರಾಚೀನ ಇಸ್ರಾಯೇಲಿನ ಸರಕಾರೀ ಕುರುಬರ ಮೇಲೆ ಅಲಕ್ಷ್ಯದ ಆರೋಪವನ್ನು ಹೊರಿಸಿದನು, ಏಕೆಂದರೆ ಆತನ ಕುರಿಗಳು “ಕಾಡಿನ ಸಕಲಮೃಗಗಳಿಗೆ ತುತ್ತಾದವು.” (ಯೆಹೆಜ್ಕೇಲ 34:8) ಆದರೂ, ಕ್ರೈಸ್ತ ಹಿರಿಯರಿಗೆ, ಅಲಕ್ಷ್ಯದಿಂದಾಗಿ ಅಥವಾ ಸೈತಾನನ, ಲೋಕದ ಅಥವಾ ಧರ್ಮಭ್ರಷ್ಟ “ತೋಳ”ಗಳ ಪ್ರಭಾವದಿಂದಾಗಿ ಯಾರೂ ನಷ್ಟವಾಗದಂತೆ ಸಭೆಯಲ್ಲಿರುವವರನ್ನು ಸಂರಕ್ಷಿಸುವ ಹೃತ್ಪೂರ್ವಕ ಬಯಕೆಯಿದೆ. (ಅ. ಕೃತ್ಯಗಳು 20:29, 30) ಹಿಂಡಿನ ಎಲ್ಲ ಸದಸ್ಯರು ಸ್ವಸ್ಥಚಿತ್ತರಾಗಿಯೂ ಎಚ್ಚರವಾಗಿಯೂ ಇರುವಂತೆ ಈ ಕುರುಬರು ಹೇಗೆ ಸಹಾಯ ಮಾಡುತ್ತಾರೆ? ಒಂದು ವಿಧಾನವು, ರಾಜ್ಯ ಸಭಾಗೃಹದ ವೇದಿಕೆಯಿಂದ ಚೆನ್ನಾಗಿ ತಯಾರಿಸಿದ ಶಾಸ್ತ್ರೀಯ ಭಾಷಣಗಳನ್ನು ನೀಡುವ ಮೂಲಕವೇ. ಮತ್ತೊಂದು ವಿಧಾನವು, ಕೂಟಗಳ ಮುಂಚೆ ಮತ್ತು ಅನಂತರ ಸಕಾರಾತ್ಮಕ, ಉತ್ತೇಜನದಾಯಕವಾದ ಸಂಭಾಷಣೆಗಳ ಮೂಲಕವಾಗಿದೆ. ಇನ್ನೂ ಪರಿಣಾಮಕಾರಿಯಾದ ಮತ್ತೊಂದು ವಿಧಾನವು, “ಕುರಿಗಳನ್ನು” ವೈಯಕ್ತಿಕವಾಗಿ ಮನೆಯಲ್ಲಿ ಸಂದರ್ಶಿಸುವ ಮೂಲಕವಾಗಿದೆ. (ಹೋಲಿಸಿ ಕೀರ್ತನೆ 95:7.) ಆದರೆ ಒಂದು ಕುರಿಪಾಲನಾ ಭೇಟಿ ಎಂದರೇನು? ಅಂತಹ ಒಂದು ಸಂದರ್ಶನವು ಹೇಗೆ ನಡೆಸಲ್ಪಡಬೇಕು? ಮತ್ತು ಯಾರನ್ನು ಸಂದರ್ಶಿಸತಕ್ಕದ್ದು?
ಒಂದು ಕುರಿಪಾಲನಾ ಭೇಟಿ ಎಂದರೇನು?
ಒಂದು ಕುರಿಪಾಲನಾ ಭೇಟಿಯು, ಅಪ್ರಯೋಜಕ ವಿಷಯಗಳ ಕುರಿತಾದ ಸಂಭಾಷಣೆಯನ್ನೊಳಗೊಂಡ ಬರಿಯ ಒಂದು ಸ್ನೇಹಶೀಲ ಸಂದರ್ಶನವಾಗಿರುವುದಿಲ್ಲ. ಒಬ್ಬ ಹಿರಿಯನು ಗಮನಿಸಿದ್ದು: “ಒಂದು ಶಾಸ್ತ್ರವಚನವನ್ನು ಓದುವುದರಲ್ಲಿ ಅಥವಾ ನಿರ್ದಿಷ್ಟವಾದ ಒಬ್ಬ ಬೈಬಲ್ ವ್ಯಕ್ತಿಯ ಕುರಿತಾದ ಚರ್ಚೆಯಲ್ಲಿ ಹೆಚ್ಚಿನ ಪ್ರಚಾರಕರು ಸಂಪೂರ್ಣವಾಗಿ ಆನಂದಿಸುತ್ತಾರೆ. ನಿಶ್ಚಯವಾಗಿ, ಹಿರಿಯನೊಬ್ಬನೇ ಮಾತಾಡುವುದಿಲ್ಲ. ಸಂದರ್ಶಿಸಲ್ಪಡುತ್ತಿರುವ ರಾಜ್ಯ ಪ್ರಚಾರಕನು ಬೈಬಲಿನ ಕುರಿತಾದ ತನ್ನ ವಿಚಾರಗಳನ್ನು ವ್ಯಕ್ತಪಡಿಸುವುದರಲ್ಲಿ ಸಾಮಾನ್ಯವಾಗಿ ಆನಂದಿಸುತ್ತಾನೆ ಮತ್ತು ಇದನ್ನು ಮಾಡುವುದು ಅವನ ಸ್ವಂತ ನಂಬಿಕೆಯನ್ನು ಬಲಪಡಿಸುತ್ತದೆ. ಆತ್ಮೋನ್ನತಿ ಮಾಡುವ ಲೇಖನವೊಂದನ್ನು ಚರ್ಚಿಸಲು, ಹಿರಿಯನು ತನ್ನೊಂದಿಗೆ ಒಂದು ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯನ್ನು ಕೊಂಡೊಯ್ಯಬಹುದು. ಬಹುಶಃ ಈ ಆತ್ಮಿಕ ಚರ್ಚೆಯೇ, ಒಂದು ಕುರಿಪಾಲನಾ ಭೇಟಿಯನ್ನು ಒಂದು ಸ್ನೇಹಶೀಲ ಭೇಟಿಯಿಂದ ಪ್ರತ್ಯೇಕಿಸುತ್ತದೆ.”
ಮತ್ತೊಬ್ಬ ಅನುಭವಸ್ಥ ಹಿರಿಯನು ಹೇಳಿಕೆ ನೀಡಿದ್ದು: “ಸಂದರ್ಶನದ ಮುಂಚೆ, ಹಿರಿಯನು ತಾನು ಭೇಟಿಮಾಡಲಿರುವ ಪ್ರಚಾರಕನ ಅಗತ್ಯಗಳ ಕುರಿತು ಯೋಚಿಸುತ್ತಾ ಸ್ವಲ್ಪ ಸಮಯವನ್ನು ವ್ಯಯಿಸುತ್ತಾನೆ. ಯಾವ ವಿಷಯವು ಪ್ರಚಾರಕನ ಆತ್ಮೋನ್ನತಿ ಮಾಡಬಲ್ಲದು? ಪ್ರಾಮಾಣಿಕವಾದ ಪ್ರಶಂಸೆಯು ಕುರಿಪಾಲನಾ ಭೇಟಿಗಳ ಆವಶ್ಯಕ ಭಾಗವಾಗಿದೆ, ಏಕೆಂದರೆ ಅದು ತಾಳಿಕೊಳ್ಳುವಂತೆ ಒಬ್ಬ ವ್ಯಕ್ತಿಯನ್ನು ಬಲಪಡಿಸುತ್ತದೆ.” ಹೌದು, ಒಂದು ಕುರಿಪಾಲನಾ ಭೇಟಿಯು, ಸಭೆಯಲ್ಲಿರುವ ಯಾವುದೇ ವ್ಯಕ್ತಿಯು ಮಾಡಬಹುದಾದ ಒಂದು ಸ್ನೇಹಪರ ಸಂದರ್ಶನಕ್ಕಿಂತ ಹೆಚ್ಚಿನದ್ದಾಗಿದೆ.
ಒಬ್ಬ ಕುರುಬನು ನಿಮ್ಮನ್ನು ಏಕೆ ಸಂದರ್ಶಿಸುತ್ತಾನೆ?
ಹಿರಿಯನೊಬ್ಬನು ಒಂದು ಮನೆಯನ್ನು ಸಂದರ್ಶಿಸುವಾಗ, ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಲು ಮತ್ತು ನಂಬಿಕೆಯಲ್ಲಿ ದೃಢರಾಗಿರುವಂತೆ ಅವರಿಗೆ ಸಹಾಯ ಮಾಡಲು ಅವನು ಸಿದ್ಧನಾಗಿರುತ್ತಾನೆ. (ರೋಮಾಪುರ 1:11) ಆದುದರಿಂದ ಒಬ್ಬರು ಅಥವಾ ಇಬ್ಬರು ಹಿರಿಯರು ನಿಮ್ಮನ್ನು ಸಂದರ್ಶಿಸಲು ಬಯಸುವಾಗ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಒಬ್ಬ ಸಂಚರಣಾ ಮೇಲ್ವಿಚಾರಕನು ಹೇಳಿದ್ದು: “ಒಂದು ಸಮಸ್ಯೆ ಇರುವಾಗ ಮಾತ್ರ, ಕುರಿಪಾಲನಾ ಭೇಟಿಗಳು ಮಾಡಲ್ಪಡುವಲ್ಲಿ, ಪ್ರಸ್ತಾಪಿಸಲ್ಪಟ್ಟ ಸಂದರ್ಶನಕ್ಕೆ ಆರಂಭಿಕ ಪ್ರತಿಕ್ರಿಯೆಯು, ‘ನಾನು ಯಾವ ತಪ್ಪನ್ನು ಮಾಡಿದ್ದೇನೆ?’ ಎಂದಾಗಿರಬಹುದು.” ಪ್ರೀತಿಯ ಆತ್ಮಿಕ ಕುರುಬರು, ಕೀರ್ತನೆಗಾರನ ಕಾಳಜಿ ವಹಿಸಿದ ಮತ್ತು ವಿಶೇಷವಾಗಿ ಸಂಕಟ ಹಾಗೂ ವಿಶೇಷ ಅಗತ್ಯದ ಸಮಯಗಳಲ್ಲಿ, ಯಾವಾಗಲೂ ‘ಅವನ ಪ್ರಾಣವನ್ನು ಉಜ್ಜೀವಿಸಮಾಡಿದ’ ಯೆಹೋವನನ್ನು ಅನುಕರಿಸುತ್ತಾರೆ.—ಕೀರ್ತನೆ 23:1-4.
ಒಂದು ಕುರಿಪಾಲನಾ ಭೇಟಿಯ ಉದ್ದೇಶವು, ‘ಕೆಡವಿಹಾಕುವದಲ್ಲ, ಕಟ್ಟುವದಾಗಿದೆ.’ (2 ಕೊರಿಂಥ 13:10) ಸಂದರ್ಶಿಸಲ್ಪಡುತ್ತಿರುವವನ ತಾಳ್ಮೆ, ಹುರುಪು, ಮತ್ತು ನಂಬಿಗಸ್ತ ಕೆಲಸಕ್ಕಾಗಿ ಗಣ್ಯತೆಯ ಮಾತುಗಳು, ನಿಶ್ಚಯವಾಗಿ ಉತ್ತೇಜನದಾಯಕವಾಗಿವೆ. ಒಬ್ಬ ಹಿರಿಯನು ಗಮನಿಸಿದ್ದು: “ಒಂದು ಕುರಿಪಾಲನಾ ಭೇಟಿಯ ಸಮಯದಲ್ಲಿ, ಒಬ್ಬನು ಸಮಸ್ಯೆಗಳನ್ನು ಕಂಡುಹಿಡಿಯುವ ಮತ್ತು ಚರ್ಚಿಸುವ ಉದ್ದೇಶದಿಂದ ಬಂದಿದ್ದಾನೆಂಬ ಅಭಿಪ್ರಾಯವನ್ನು ಕೊಡುವುದು ಒಳ್ಳೆಯದಲ್ಲ. ನಿಶ್ಚಯವಾಗಿ, ಸ್ವತಃ ಪ್ರಚಾರಕನೇ ಯಾವುದೊ ವಿಶೇಷವಾದ ಕಷ್ಟದ ಕುರಿತು ಮಾತಾಡಬಯಸಬಹುದು. ಮತ್ತು ಕುರಿಯೊಂದು ಕುಂಟುತ್ತ ನಡೆಯುತ್ತಿರುವುದಾದರೆ ಅಥವಾ ಹಿಂಡಿನಿಂದ ತನ್ನನ್ನು ಬೇರ್ಪಡಿಸಿಕೊಳ್ಳುತ್ತಿರುವುದಾದರೆ, ಸಹಾಯ ಮಾಡಲು ಹಿರಿಯನು ಏನನ್ನಾದರೂ ಮಾಡುವ ಅಗತ್ಯವಿದೆ.”
ನಿಸ್ಸಂದೇಹವಾಗಿ ಕ್ರೈಸ್ತ ಕುರುಬರು, ಈ ಮಾತುಗಳಲ್ಲಿ ವರ್ಣಿಸಲ್ಪಟ್ಟಂತೆ ಇರುವ ಯಾವುದೇ ವ್ಯಕ್ತಿಯ ಕುರಿತಾಗಿ ವಿಶೇಷ ಕಾಳಜಿ ವಹಿಸುವರು: “ತಪ್ಪಿಸಿಕೊಂಡದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು.” (ಯೆಹೆಜ್ಕೇಲ 34:16) ಹೌದು, ಕುರಿಗಳನ್ನು ಹುಡುಕಿಕೊಂಡು ಹೋಗಬೇಕಾದೀತು, ಹಿಂದೆ ತರಬೇಕಾದೀತು, ಅವುಗಳಿಗೆ ಬ್ಯಾಂಡೆಜ್ ಕಟ್ಟಬೇಕಾದೀತು ಅಥವಾ ಬಲಗೊಳಿಸಲ್ಪಡಬೇಕಾದೀತು. ಇಸ್ರಾಯೇಲಿನ ಕುರುಬರು ಈ ಜವಾಬ್ದಾರಿಗಳನ್ನು ಅಲಕ್ಷಿಸಿದರು. ಇಂತಹ ಕೆಲಸವನ್ನು ಮಾಡುವುದು, ನಿರ್ದಿಷ್ಟವಾದೊಂದು ಕುರಿಯ ಹತ್ತಿರಕ್ಕೆ ಬಂದು, ಅದರ ಅಗತ್ಯಗಳನ್ನು ಪೂರೈಸುವುದನ್ನು ಕೇಳಿಕೊಳ್ಳುತ್ತದೆ. ಮೂಲಭೂತವಾಗಿ, ಇದು ಇಂದಿನ ಪ್ರತಿಯೊಂದು ಕುರಿಪಾಲನಾ ಭೇಟಿಯ ವ್ಯತ್ಯಾಸವನ್ನು ತೋರಿಸುವ ವೈಶಿಷ್ಟ್ಯವಾಗಿರಬೇಕು.
ಆರೋಗ್ಯವಂತ ಕುರಿಗಳಿಗೆ ಆರೈಕೆಯ ಅಗತ್ಯವಿದೆ
ಆಧುನಿಕ ದಿನದ ಆತ್ಮಿಕ ಕುರುಬರು, ಆರೋಗ್ಯವಂತ ಕುರಿಗಳಿಗೆ ವಿಶೇಷವಾದ ಗಮನವನ್ನು ತೋರಿಸುವ ಅಗತ್ಯವಿಲ್ಲವೆಂದು ನಾವು ತೀರ್ಮಾನಿಸಬೇಕೊ? ಒಳ್ಳೇದು, ಒಂದು ಅಕ್ಷರಾರ್ಥ ಕುರಿಯು ತೊಂದರೆಯೊಳಗೆ ಸಿಕ್ಕಿಕೊಂಡಾಗ, ಅದಕ್ಕೆ ಕುರುಬನಲ್ಲಿ ಭರವಸೆಯಿರುವುದಾದರೆ ಸಹಾಯ ನೀಡುವುದು ಹೆಚ್ಚು ಸುಲಭವಾಗಿರುತ್ತದೆ. ಒಂದು ಕೈಪಿಡಿ ಗಮನಿಸುವುದೇನೆಂದರೆ, “ಕುರಿಗಳು ಸ್ವಾಭಾವಿಕವಾಗಿ ಮಾನವರಿಂದ ದೂರವಿರುತ್ತವೆ, ಮತ್ತು ಅವುಗಳ ಭರವಸೆಯನ್ನು ಪಡೆಯುವುದು ಯಾವಾಗಲೂ ಸುಲಭವಲ್ಲ.” ಇತರ ವಿಷಯಗಳಲ್ಲಿ, ಕುರಿಗಳ ಭರವಸೆಯನ್ನು ಗೆಲ್ಲುವುದಕ್ಕಾಗಿ ಈ ಮೂಲಭೂತ ಮಾರ್ಗದರ್ಶನೆಯನ್ನು ಅದೇ ಪುಸ್ತಕವು ಸೂಚಿಸುತ್ತದೆ: “ಕುರಿಗಳೊಂದಿಗೆ ಕ್ರಮವಾಗಿ ಮಾತಾಡಿರಿ. ಅವು ಧ್ವನಿಯ ಪರಿಚಯ ಮಾಡಿಕೊಳ್ಳುತ್ತವೆ, ಇದು ಅವುಗಳಿಗೆ ಪುನರಾಶ್ವಾಸನೆಯನ್ನು ಕೊಡುತ್ತದೆ. ಹುಲ್ಲುಗಾವಲಲ್ಲಿ ಕುರಿಗಳನ್ನು ಅನೇಕ ವೇಳೆ ಸಂದರ್ಶಿಸಿರಿ.”—ಆಲೆಸ್ ಫ್ಯೂರ್ ಡಾಸ್ ಶಾಫ್ ಹಾಂಟ್ಬುಕ್ ಫ್ಯೂರ್ ಆರ್ಟ್ಗೆರೆಕ್ಟೆ ಹಾಲ್ಟುಂಗ್ (ಕುರಿಗಳಿಗಾಗಿ ಸರ್ವಸ್ವ. ಅವುಗಳನ್ನು ಯೋಗ್ಯವಾಗಿ ಇಡುವುದು ಹೇಗೆಂಬುದರ ಮೇಲೆ ಕೈಪಿಡಿ).
ಆದುದರಿಂದ, ಕುರುಬ ಮತ್ತು ಕುರಿಗಳ ನಡುವೆ ಒಂದು ನಂಬಿಕೆಯ ಸಂಬಂಧವು ಅಸ್ತಿತ್ವದಲ್ಲಿರಬೇಕಾದರೆ, ವೈಯಕ್ತಿಕ ಸಂಪರ್ಕವು ಅವಶ್ಯವಾಗಿದೆ. ಕ್ರೈಸ್ತ ಸಭೆಯಲ್ಲೂ ಅದು ಸತ್ಯವಾಗಿದೆ. ಒಬ್ಬ ಹಿರಿಯನು ಗಮನಿಸಿದ್ದು: “ಸಭೆಯಲ್ಲಿ, ಕುರಿಗಳನ್ನು ಕ್ರಮವಾಗಿ ಸಂದರ್ಶಿಸುವ ಹಿರಿಯನೆಂದು ವಿದಿತವಾಗಿರುವುದು, ಸಮಸ್ಯೆಗಳಿರುವ ಒಬ್ಬನ ಭೇಟಿಮಾಡುವುದನ್ನು ಸುಲಭವಾಗಿ ಮಾಡುತ್ತದೆ.” ಆದಕಾರಣ, ಕುರಿಗಳಿಗೆ ರಾಜ್ಯ ಸಭಾಗೃಹದಲ್ಲಿ ಮಾತ್ರ ಉಣಿಸಲು ಮತ್ತು ಆರೈಕೆ ಮಾಡಲು, ಆತ್ಮಿಕ ಕುರುಬರು ಪ್ರಯತ್ನಿಸಬಾರದು. ಪರಿಸ್ಥಿತಿಗಳು ಅನುಮತಿಸುವ ಮಟ್ಟಿಗೆ, ಕುರಿಗಳ ಮನೆಗಳಲ್ಲಿ ಕುರಿಪಾಲನಾ ಭೇಟಿಗಳನ್ನು ಮಾಡುವ ಮೂಲಕ ಹಿರಿಯರು ಅವುಗಳ ಪರಿಚಯ ಮಾಡಿಕೊಳ್ಳಬೇಕು. ಒಬ್ಬ ಕ್ರೈಸ್ತನು ಜ್ಞಾಪಿಸಿಕೊಳ್ಳುವುದೇನೆಂದರೆ, ತಾನೊಬ್ಬ ಹೊಸದಾಗಿ ನೇಮಕಗೊಂಡ ಹಿರಿಯನಾಗಿದ್ದಾಗ, ಅಧ್ಯಕ್ಷ ಮೇಲ್ವಿಚಾರಕನು ತನಗೆ ಟೆಲಿಫೋನ್ ಮಾಡಿ, ಒಂದು ಭಯಂಕರ ರಸ್ತೆಯ ಅಪಘಾತದಲ್ಲಿ ತನ್ನ ಮಗಳನ್ನು ಈಗ ತಾನೇ ಕಳೆದುಕೊಂಡಿದ್ದ ಒಬ್ಬ ಸಹೋದರನನ್ನು ಸಂದರ್ಶಿಸಿ, ಸಾಂತ್ವನ ನೀಡುವಂತೆ ಕೇಳಿಕೊಂಡನು. ಹಿರಿಯನು ಅಂಗೀಕರಿಸುವುದು: “ನಾನು ಆ ಸಹೋದರನಿಗೆ ಯಾವುದೇ ಭೇಟಿಯನ್ನು ಮಾಡಿರಲಿಲ್ಲ ಮತ್ತು ಅವನು ಎಲ್ಲಿ ಜೀವಿಸಿದನೆಂದೂ ನನಗೆ ಗೊತ್ತಿರಲಿಲ್ಲವಾದ ಕಾರಣ ನನಗೆಷ್ಟು ವಿಷಾದವೆನಿಸಿತು! ಒಬ್ಬ ಪಕ್ವತೆ ಪಡೆದ ಹಿರಿಯನು ನನ್ನೊಂದಿಗೆ ಬರಲು ತನ್ನನ್ನು ನೀಡಿಕೊಂಡಾಗ, ಅದೊಂದು ಉಪಶಮನವಾಗಿತ್ತು.” ಹೌದು, ಹಿರಿಯರು ಕುರಿಪಾಲನಾ ಭೇಟಿಗಳಲ್ಲಿ ಒಬ್ಬರು ಮತ್ತೊಬ್ಬರಿಗೆ ಸಹಾಯ ನೀಡುತ್ತಾರೆ.
ನಿರ್ದಿಷ್ಟ ಕುರಿಪಾಲನಾ ಭೇಟಿಗಳನ್ನು ಮಾಡುವುದರಲ್ಲಿ ಮತ್ತು ಅವುಗಳಿಗಾಗಿ ತಯಾರಿಸುವುದರಲ್ಲಿ, ಹಿರಿಯನೊಬ್ಬನು, ಒಬ್ಬ ಮೇಲ್ವಿಚಾರಕನ “ಒಳ್ಳೇ ಕೆಲಸ”ಕ್ಕಾಗಿ ಪ್ರಯತ್ನಿಸುತ್ತಿರುವ ಶುಶ್ರೂಷಾ ಸೇವಕನಿಂದ ಜೊತೆಗೂಡಲ್ಪಡಬಹುದು. (1 ತಿಮೊಥೆಯ 3:1, 13) ಹಿರಿಯನೊಬ್ಬನು ಕುರಿಪಾಲನಾ ಭೇಟಿಗಳಲ್ಲಿ ಕುರಿಗಳ ಸೇವೆ ಹೇಗೆ ಮಾಡುತ್ತಾನೆಂದು ನೋಡುವುದನ್ನು ಒಬ್ಬ ಶುಶ್ರೂಷಾ ಸೇವಕನು ಎಷ್ಟು ಗಣ್ಯಮಾಡುತ್ತಾನೆ! ಹಿರಿಯರು ಮತ್ತು ಶುಶ್ರೂಷಾ ಸೇವಕರು, ಕ್ರೈಸ್ತ ಪ್ರೀತಿ ಮತ್ತು ಐಕ್ಯದ ಬಂಧಗಳನ್ನು ಬಲಗೊಳಿಸುತ್ತಾ, ಹೀಗೆ ಸಭೆಯಲ್ಲಿರುವ ಎಲ್ಲರಿಗೆ ಹೆಚ್ಚು ಸಮೀಪವಾಗುತ್ತಾರೆ.—ಕೊಲೊಸ್ಸೆ 3:14.
ಕುರಿಪಾಲನಾ ಭೇಟಿಗಳಿಗಾಗಿ ಸಮಯವನ್ನು ಯೋಜಿಸುವುದು
ಹಿರಿಯರ ಒಂದು ಮಂಡಳಿಯು, ಕುರಿಪಾಲನಾ ಭೇಟಿಗಳನ್ನು ಸಭಾ ಪುಸ್ತಕ ಅಭ್ಯಾಸದ ಚಾಲಕರಿಗೆ ಬಿಟ್ಟಾಗ, ಕೆಲವು ಗುಂಪುಗಳಲ್ಲಿದ್ದ ಎಲ್ಲ ಪ್ರಚಾರಕರು ಆರು ತಿಂಗಳುಗಳೊಳಗೆ ಸಂದರ್ಶಿಸಲ್ಪಟ್ಟರು, ಆದರೆ ಇತರ ಗುಂಪುಗಳಲ್ಲಿ ಯಾರೂ ಸಂದರ್ಶಿಸಲ್ಪಡಲಿಲ್ಲ. ಇದು ಒಬ್ಬ ಹಿರಿಯನನ್ನು ಹೀಗೆ ಹೇಳುವಂತೆ ಪ್ರೇರೇಪಿಸಿತು: “ಕೆಲವು ಹಿರಿಯರು ಆರಂಭ ಹೆಜ್ಜೆಯನ್ನು ತೆಗೆದುಕೊಂಡು ಬಹಳಷ್ಟು ಕುರಿಪಾಲನಾ ಕೆಲಸವನ್ನು ಮಾಡುವಂತೆ ತೋರುತ್ತದೆ, ಆದರೆ ಇತರರಿಗೆ ಹಾಗೆ ಮಾಡಲು ತಮ್ಮ ಜೊತೆ ಹಿರಿಯರ ಉತ್ತೇಜನದ ಅಗತ್ಯವಿದೆ.” ಆದುದರಿಂದ ಕೆಲವು ಹಿರಿಯರ ಮಂಡಳಿಗಳು, ನಿರ್ದಿಷ್ಟಪಡಿಸಲಾದ ಸಮಯಾವಧಿಯೊಳಗೆ ಎಲ್ಲ ಪ್ರಚಾರಕರು ಕುರುಬರಿಂದ ಸಂದರ್ಶಿಸಲ್ಪಡುವಂತೆ ಏರ್ಪಾಡುಗಳನ್ನು ಮಾಡುತ್ತವೆ.
ನಿಶ್ಚಯವಾಗಿ, ಸಭೆಯಲ್ಲಿರುವ ಯಾರಾದರೊಬ್ಬರನ್ನು ವಿಶೇಷವಾದ ಏರ್ಪಾಡುಗಳು ಮಾಡಲ್ಪಡಲು ಕಾಯದೆ, ಒಬ್ಬ ಹಿರಿಯನು ಅಥವಾ ಬೇರೆ ಯಾವುದೇ ಪ್ರಚಾರಕನು ಸಂದರ್ಶಿಸಸಾಧ್ಯವಿದೆ. ಒಂದು ಕುರಿಪಾಲನಾ ಭೇಟಿಯನ್ನು ಮಾಡುವ ಮೊದಲು, ಒಬ್ಬ ಹಿರಿಯನು ಫೋನ್ ಮಾಡಿ, ಹೇಳುವುದು, “ನಾನು ಪ್ರತಿ ತಿಂಗಳು ಒಂದು ಕುಟುಂಬವನ್ನು ಭೇಟಿಮಾಡುತ್ತೇನೆ. ಮುಂದಿನ ತಿಂಗಳು ಯಾವ ಸಮಯದಲ್ಲಾದರೂ ನಾನು ನಿಮ್ಮನ್ನು ಸುಮಾರು ಒಂದು ಗಂಟೆಗಾಗಿ ಸಂದರ್ಶಿಸಸಾಧ್ಯವಿದೆಯೊ? ಇದು ನಿಮಗೆ ಯಾವಾಗ ಅನುಕೂಲಕರವಾಗಿರುವುದು?”
ಕುರಿಪಾಲನಾ ಭೇಟಿಗಳ ಆಶೀರ್ವಾದಗಳು
ಈ ದುಷ್ಟ ವ್ಯವಸ್ಥೆಯಿಂದ ಒತ್ತಡಗಳು ಹೆಚ್ಚಾಗುತ್ತಾ ಮುಂದುವರಿದಂತೆ, ವಿವೇಚನೆಯುಳ್ಳ ಕುರುಬರಿಂದ ಮಾಡಲ್ಪಡುವ ಉತ್ತೇಜನದಾಯಕ ಸಂದರ್ಶನಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಮಿಸುತ್ತವೆ. ಕುರಿಪಾಲನಾ ಭೇಟಿಗಳ ಮುಖಾಂತರ ಹಿಂಡಿನಲ್ಲಿರುವವರೆಲ್ಲರಿಗೆ ಉತ್ತೇಜನ ಹಾಗೂ ಸಹಾಯವು ನೀಡಲ್ಪಟ್ಟಾಗ, ಪ್ರತಿಯೊಂದು ಕುರಿಗೆ ಸುರಕ್ಷಿತ ಹಾಗೂ ಭದ್ರವಾದ ಅನಿಸಿಕೆಯಾಗುತ್ತದೆ.
ಎಲ್ಲ ರಾಜ್ಯ ಪ್ರಚಾರಕರು ಕುರುಬರಿಂದ ಕ್ರಮವಾಗಿ ಸಂದರ್ಶಿಸಲ್ಪಟ್ಟ ಒಂದು ಸಭೆಯ ಕುರಿತು, ಹೀಗೆ ವರದಿಸಲಾಯಿತು: “ಪ್ರಚಾರಕರು ಕುರಿಪಾಲನಾ ಭೇಟಿಗಳ ಕುರಿತು ಬಹಳ ಸಕಾರಾತ್ಮಕ ಭಾವವುಳ್ಳವರಾದರು. ಹಿಂದಿನ ಸಂದರ್ಶನದಲ್ಲಿ ಆತ್ಮೋನ್ನತಿ ಮಾಡಿದ ಚರ್ಚೆಯಲ್ಲಿ ಪ್ರಚಾರಕನು ಆನಂದಿಸಿದ್ದ ಕಾರಣ, ತಾವು ಮತ್ತೊಂದು ಭೇಟಿಯನ್ನು ಯಾವಾಗ ಮಾಡುವಿರೆಂದು ಕೇಳಲು ಹಿರಿಯರಲ್ಲಿ ಒಬ್ಬರನ್ನು ಸಮೀಪಿಸುವುದು, ಒಬ್ಬ ಪ್ರಚಾರಕನಿಗೆ ಸಾಮಾನ್ಯ ವಿಷಯವಾಗಿತ್ತು. ಕುರಿಪಾಲನಾ ಭೇಟಿಗಳು ಸಭೆಯ ಆತ್ಮವನ್ನು ಉತ್ತಮಗೊಳಿಸಲು ಸಹಾಯ ಮಾಡಿದ ಅಂಶಗಳಲ್ಲಿ ಒಂದಾಗಿದ್ದವು.” ಕುರುಬರು ಇಂತಹ ಒಂದು ವಿಧದಲ್ಲಿ ಪ್ರೀತಿಯಿಂದ ಶುಶ್ರೂಷೆ ಮಾಡುವಾಗ, ಸಭೆಯು, ಪ್ರೀತಿ, ಐಕ್ಯ ಮತ್ತು ಅನುರಾಗದಲ್ಲಿ ಬೆಳೆಯಸಾಧ್ಯವೆಂದು ಇತರ ವರದಿಗಳು ಸೂಚಿಸುತ್ತವೆ. ಎಂತಹ ಒಂದು ಆಶೀರ್ವಾದ!
ಕ್ರೈಸ್ತ ಕುರುಬರು, ಕುರಿಯ ಆತ್ಮಿಕ ಸುಕ್ಷೇಮವನ್ನು ಪ್ರವರ್ಧಿಸಲು ಸಂದರ್ಶಿಸುತ್ತಾರೆ. ಹಿರಿಯರು ತಮ್ಮ ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಲು ಮತ್ತು ಬಲಪಡಿಸಲು ಬಯಸುತ್ತಾರೆ. ಒಂದು ಸಂದರ್ಶನದ ಸಮಯದಲ್ಲಿ, ಸಲಹೆಯನ್ನು ಅಗತ್ಯಪಡಿಸುವ ಒಂದು ಗಂಭೀರವಾದ ಸಮಸ್ಯೆಯು ಪ್ರಕಟಗೊಳ್ಳುವುದಾದರೆ, ವಿಶೇಷವಾಗಿ ಹಿರಿಯನು ಒಬ್ಬ ಶುಶ್ರೂಷಾ ಸೇವಕನೊಂದಿಗಿರುವಾಗ, ಮತ್ತೊಂದು ಸಮಯದಲ್ಲಿ ಚರ್ಚೆಗಾಗಿ ಏರ್ಪಾಡುಗಳನ್ನು ಮಾಡುವುದು ಅತ್ಯುತ್ತಮವಾಗಿರಬಹುದು. ಯಾವುದೇ ಸಂದರ್ಭದಲ್ಲಿ, ಕುರಿಪಾಲನಾ ಸಂದರ್ಶನವನ್ನು ಒಂದು ಪ್ರಾರ್ಥನೆಯ ಮೂಲಕ ಕೊನೆಗೊಳಿಸುವುದು ಸೂಕ್ತವಾಗಿದೆ.
ಹತ್ತಿರದ ಭವಿಷ್ಯತ್ತಿನಲ್ಲಿ ಒಬ್ಬ ಆತ್ಮಿಕ ಕುರುಬನು ನಿಮ್ಮ ಮನೆಗೆ ಭೇಟಿ ಮಾಡಬಯಸುತ್ತಾನೊ? ವಿಷಯವು ಹಾಗಿರುವಲ್ಲಿ, ನಿಮಗಾಗಿ ಕಾದಿರುವ ಉತ್ತೇಜನದ ಸಂತೋಷಕರ ನಿರೀಕ್ಷೆಯಲ್ಲಿರಿ. ಅವನು ನಿಮ್ಮ ಸೇವೆಮಾಡಲು ಮತ್ತು ನಿತ್ಯ ಜೀವಕ್ಕೆ ನಡೆಸುವ ಹಾದಿಯ ಮೇಲೆ ಉಳಿಯುವ ನಿಮ್ಮ ನಿರ್ಧಾರದಲ್ಲಿ ನಿಮ್ಮನ್ನು ಬಲಪಡಿಸಲು ಬರುತ್ತಿದ್ದಾನೆ.—ಮತ್ತಾಯ 7:13, 14.
[ಪುಟ 26 ರಲ್ಲಿರುವ ಚೌಕ]
ಕುರಿಪಾಲನಾ ಭೇಟಿಗಳಿಗಾಗಿ ಸೂಚನೆಗಳು
◻ ಕಾರ್ಯನಿಶ್ಚಯವನ್ನು ಮಾಡಿರಿ: ಒಂದು ಕಾರ್ಯನಿಶ್ಚಯವನ್ನು ಮಾಡುವುದು ಸಾಮಾನ್ಯವಾಗಿ ಒಳ್ಳೆಯದು. ಗಂಭೀರವಾದೊಂದು ಸಮಸ್ಯೆಯನ್ನು ನಿರ್ವಹಿಸಲು ಹಿರಿಯನು ಯೋಜಿಸುವುದಾದರೆ, ಇದರ ಕುರಿತು ಪ್ರಚಾರಕನಿಗೆ ಮುಂಚಿತವಾಗಿಯೇ ತಿಳಿಸುವುದು ಯೋಗ್ಯವಾಗಿರುವುದು.
◻ ತಯಾರಿ: ವ್ಯಕ್ತಿಯ ಸ್ವಭಾವ ಮತ್ತು ಸನ್ನಿವೇಶವನ್ನು ಪರಿಗಣಿಸಿರಿ. ಹೃತ್ಪೂರ್ವಕ ಪ್ರಶಂಸೆಯನ್ನು ನೀಡಿರಿ. ಒಂದು ಉತ್ತೇಜನದಾಯಕ, ನಂಬಿಕೆಯನ್ನು ಬಲಪಡಿಸುವ “ಆತ್ಮಿಕ ಕೊಡುಗೆ”ಯನ್ನು ನೀಡುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿರಿ.—ರೋಮಾಪುರ 1:11, 12, NW.
◻ ಯಾರನ್ನು ಜೊತೆಗೆ ಕರೆದುಕೊಂಡು ಹೋಗುವುದು: ಮತ್ತೊಬ್ಬ ಹಿರಿಯನನ್ನು ಅಥವಾ ಅರ್ಹತೆಯಿರುವ ಒಬ್ಬ ಶುಶ್ರೂಷಾ ಸೇವಕನನ್ನು.
◻ ಸಂದರ್ಶನದ ಸಮಯದಲ್ಲಿ: ಹಿರಿಯನು ಮೃದುಸ್ವಭಾವಿಯೂ, ಪ್ರೀತಿಪರನೂ, ಸಕಾರಾತ್ಮಕನೂ ಮತ್ತು ಮಣಿಯುವಂತಹವನೂ ಆಗಿರಬೇಕು. ಕುಟುಂಬದ ಕುರಿತು, ಅದರ ಸುಕ್ಷೇಮ ಮತ್ತು ಮುಂತಾದವುಗಳ ಕುರಿತು ಕೇಳಿರಿ. ಜಾಗರೂಕರಾಗಿ ಆಲಿಸಿರಿ. ಗಂಭೀರವಾದ ಸಮಸ್ಯೆಗಳು ಏಳುವಲ್ಲಿ, ವಿಶೇಷವಾದ ಕುರಿಪಾಲನಾ ಭೇಟಿಗಾಗಿ ಏರ್ಪಡಿಸುವುದು ಅತ್ಯುತ್ತಮವಾಗಿರಬಹುದು.
◻ ಭೇಟಿಯ ಕಾಲಾವಧಿ: ಒಪ್ಪಿಕೊಂಡ ಸಮಯಕ್ಕೆ ಅಂಟಿಕೊಂಡಿರಿ, ಮತ್ತು ನಿಮ್ಮ ಅತಿಥೇಯನು ಸಂದರ್ಶನವನ್ನು ಇನ್ನೂ ಆನಂದಿಸುತ್ತಿರುವಾಗ ಅಲ್ಲಿಂದ ಹೊರಡಿ.
◻ ಸಂದರ್ಶನವನ್ನು ಕೊನೆಗೊಳಿಸುವುದು: ಒಂದು ಪ್ರಾರ್ಥನೆಯು ಸೂಕ್ತವಾಗಿದೆ ಮತ್ತು ನಿಜವಾಗಿಯೂ ಗಣ್ಯಮಾಡಲ್ಪಡುತ್ತದೆ.—ಫಿಲಿಪ್ಪಿ 4:6, 7.
[ಪುಟ 24 ರಲ್ಲಿರುವ ಚಿತ್ರ]
ಕ್ರೈಸ್ತ ಕುರುಬರು ಆತ್ಮಿಕ ಸಂರಕ್ಷಣೆಯನ್ನು ಒದಗಿಸುತ್ತಾರೆ
[ಪುಟ 26 ರಲ್ಲಿರುವ ಚಿತ್ರಗಳು]
ಕುರಿಪಾಲನಾ ಭೇಟಿಗಳು, ಆತ್ಮಿಕ ಉತ್ತೇಜನಕ್ಕಾಗಿ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ