ಸುವಾರ್ತೆಯನ್ನು ನೀಡುವದು—ಕುಟುಂಬವಾಗಿ
1 ಪವಿತ್ರ ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸುವ ಒಂದು ಸಮರ್ಪಿತ ಕುಟುಂಬ—ತಂದೆ, ತಾಯಿ ಮತ್ತು ಮಕ್ಕಳು ದೇವರನ್ನು ಪೂರ್ಣಾತ್ಮದಿಂದ ಸೇವಿಸುತ್ತಾ ಇರುವುದು—ಯೆಹೋವನ ಮಹಾ ನಾಮಕ್ಕೆ ಸ್ತುತಿಯಂತಿದೆ. ಅಂಥ ಅನೇಕ ಕುಟುಂಬಗಳು ಯೆಹೋವನ ಸಾಕ್ಷಿಗಳ ಲೋಕ ವ್ಯಾಪಕ ಸಭೆಗಳಲ್ಲಿ ಕಂಡುಬರುವದು ನಮಗೆ ಸಂತೋಷ.
2 ತಂದೆಗೆ ತನ್ನ ಕುಟುಂಬದ ಆತ್ಮಿಕ ಅಗತ್ಯತೆಗಳನ್ನು ನೋಡಿಕೊಳ್ಳುವ ಮೊದಲ ಜವಾಬ್ದಾರಿಕೆ ಇದೆಂಬದು ನಿಶ್ಚಯ. (1 ಕೊರಿ. 11:3) ಅವನ ಹೆಂಡತಿ ಮತ್ತು ಮಕ್ಕಳ ಸಹಕಾರದೊಂದಿಗೆ, ಅವನ ಕುಟುಂಬವು ಬೇರೆಯವರ ಮೇಲೆ ಬಲವಾದ ಪ್ರಭಾವವನ್ನು ಹಾಕಬಲ್ಲದು. (ಮತ್ತಾ. 5:16) ಈ ಸಹಕಾರವನ್ನು ತೋರಿಸುವ ಕೆಲವು ಕ್ಷೇತ್ರಗಳು ಯಾವುವು?
ಹೆತ್ತವರು ನೇತೃತ್ವ ತಕ್ಕೊಳ್ಳುವುದು
3 ಅನೇಕ ಸಂದರ್ಭಗಳಲ್ಲಿ, ತಂದೆಯು ಒಬ್ಬ ಹಿರಿಯನು ಅಥವಾ ಶುಶ್ರೂಷೆ ಸೇವಕನು ಆಗಿರುತ್ತಾನೆ. ಆಗ, ಕುಟುಂಬದ ಅಭಿರುಚಿಗಳಿಗೆ ಮಾತ್ರವಲ್ಲದೆ ಸ್ವಲ್ಪ ಸಮಯ ಮತ್ತು ಗಮನವನ್ನು ಸಭಾವಿಷಯಗಳಿಗೂ ಅವನು ಕೊಡಬೇಕಾಗುತ್ತದೆ. ಅದರ್ದಿಂದ, ಕುಟುಂಬವನ್ನು ಅವನು ದುರ್ಲಕ್ಷಿಸದಂತೆ ತನಗೆ ದೊರೆಯುವ ಸಮಯವನ್ನು ಅವನು ಸಮಪಾಲು ಮಾಡಬೇಕು. ಅವನಿಗಿರುವ ಸೀಮಿತ ಸಮಯದ ಮೇಲೆ ಹಾಕಲ್ಪಡುವ ನಿರ್ಭಂಧಗಳಿಂದಾಗಿ ಇದೇನೂ ಸುಲಭ ಸಾಧ್ಯವಲ್ಲ. ಆದರೆ ಅವನ ಕುಟುಂಬವು ಅವನ ಮುಖ್ಯ ಜವಾಬ್ದಾರಿಯಾಗಿರುವದರಿಂದ, ಅವನು ತನಗೆ ಸಿಗುವ ಬಹುಮೂಲ್ಯ ಸಮಯದಲ್ಲಿ ಕೆಲವನ್ನು ತನ್ನ ಕುಟುಂಬದೊಂದಿಗೆ ಅಭ್ಯಾಸದಲ್ಲಿ, ಕ್ಷೇತ್ರಸೇವೆಯಲ್ಲಿ, ಕೂಟಗಳಲ್ಲಿ ಮತ್ತು ತಕ್ಕದಾದ ಮನೋರಂಜನೆಯಲ್ಲಿ ಕ್ರಮವಾಗಿ ಕಳೆಯಬೇಕು. ಪರಿಸ್ಥಿತಿಗಳು ಮತ್ತು ಇತರ ಜವಾಬ್ದಾರಿಕೆಗಳು ತಂದೆಯ ಕಾಲತಖ್ತೆಯನ್ನು ಕೆಲವು ಸಾರಿ ಬದಲಿಸಬಹುದು. ಆದರೆ ಕುಟುಂಬ ಸದಸ್ಯರೊಂದಿಗೆ ಅವನು ಪ್ರತಿತಿಂಗಳು ಕ್ಷೇತ್ರಸೇವೆಯಲ್ಲಿ ಸಮಯ ಕಳೆಯ ಶಕ್ತನಾದಾಗ ಅದೆಷ್ಟು ಪ್ರತಿಫಲದಾಯಕ!
4 ಪತ್ನಿಯಿಂದ ಸಹಕಾರವು ಬಹು ಮುಖ್ಯವು. ಮಕ್ಕಳನ್ನು ಶುಶ್ರೂಷೆಯಲ್ಲಿ ತರಬೇತು ಮಾಡಲು ಸಹಾಯಮಾಡುವ ಮೂಲಕ ಬಹು ಮಹತ್ವದ ರೀತಿಯಲ್ಲಿ ಅವಳು ತನ್ನ ಪತಿಯ ಸಹಕಾರಿಣಿಯಾಗುವಳು. ಆಕೆಯ ಆದರ್ಶ ಹುರುಪು ಮತ್ತು ಭಕ್ತಿಯು ಮಕ್ಕಳ ಮೇಲೆ ಬಲು ಪ್ರಭಾವವನ್ನು ಬೀರಿ, ಅವರು ಸೇವೆಗಾಗಿ ಗಣ್ಯತೆಯಲ್ಲಿ ಬೆಳೆಯುವರು.—2 ತಿಮೋ. 3:14, 15.
5 ಏಕ ಹೆತ್ತವರು ಆತ್ಮಿಕ ಜವಾಬ್ದಾರಿಕೆಯ ಹೊರೆಯನ್ನು ಹೊತ್ತು ಶುಶ್ರೂಷೆಯಲ್ಲಿ ಮಕ್ಕಳನ್ನು ಯಶಸ್ವಿಯಾಗಿ ತರಬೇತು ಮಾಡಿದ ಅನೇಕ ಉತ್ತಮ ಆದರ್ಶ ಪರಿಸ್ಥಿತಿಗಳಿವೆ. ತಮ್ಮ ತಂದೆ ಯಾ ತಾಯಿಯ ಅತ್ಯುತ್ತಮ ಮಾದರಿಯಿಂದಾಗಿ ಅನೇಕ ಯುವ ಜನರು ಸತ್ಯಕ್ಕಾಗಿ ದೃಢ ಸ್ಥಾನವನ್ನು ತಕೊಂಡಿದ್ದಾರೆ, ಪೂರ್ಣ ಸಮಯದ ಸೇವೆಗೂ ಇಳಿದಿದ್ದಾರೆ.
ಮಕ್ಕಳ ಜವಾಬ್ದಾರಿಕೆ
6 ಮಕ್ಕಳ ಜವಾಬ್ದಾರಿಕೆಯ ಕುರಿತೇನು? ದೇವರ ಪರಿಪೂರ್ಣ ಕುಮಾರನಾದ ಯೇಸು ಸಹಾ, ಇನ್ನೂ ಚಿಕ್ಕವನಾಗಿದ್ದಾಗಲೂ, ತನ್ನ ಹೆತ್ತವರ ಮಾರ್ಗದರ್ಶನೆ ಮತ್ತು ಉಪದೇಶಕ್ಕೆ ಅಧೀನನಾಗಿದ್ದನು. (ಲೂಕ2:51) ಆದ್ದರಿಂದ, ಕುಟುಂಬವು ಒಟ್ಟಾಗಿ ಸೇವೆಮಾಡುವಂತೆ ತಂದೆ ಮತ್ತು ತಾಯಿ ಏರ್ಪಡಿಸುವಾಗ, ಮಕ್ಕಳು ಹೆತ್ತವರೊಂದಿಗೆ ಸಹಕರಿಸುವ ಮೂಲಕ ತಮ್ಮ ದೇವಭಕ್ತಿಯನ್ನು ತೋರಿಸುವ ಹಂಗಿನಲ್ಲಿರುವರು. —ಎಫೆ. 6:1-3.
7 ಕುಟುಂಬವಾಗಿ ಒಟ್ಟಿಗೆ ಆರಾಧಿಸುವುದು—ಅಭ್ಯಾಸಮಾಡುವುದು, ಶುಶ್ರೂಷೆಯಲ್ಲಿ ಭಾಗವಹಿಸುವುದು ಮತ್ತು ಕೂಟಗಳಿಗೆ ಹಾಜರಾಗುವುದು—ಇದರಿಂದ ಕುಟುಂಬ ಚಕ್ರದ ಪ್ರೀತಿ ಮತ್ತು ಐಕ್ಯತೆಯು ಬಲಗೊಳ್ಳುವುದು. ಹೆತ್ತವರು ಮತ್ತು ಮಕ್ಕಳು ಈ ಸಂಬಂಧದಲ್ಲಿ ಸಮಾನ ಜವಾಬ್ದಾರಿಕೆಯುಳ್ಳವರಾಗಿದ್ದಾರೆ.