ಯೇಸುವಿನ ಅನುಕರಣೆಯಲ್ಲಿ ದಿನಾಲು ಸತ್ಯವನ್ನು ಘೋಷಿಸುತ್ತಿರುವುದು
1 ಯೇಸು ಭೂಮಿಗೆ ಬಂದಾಗ, ಪೂರೈಸಲು ನಿರ್ದಿಷ್ಟವಾದ ಕೆಲಸವೊಂದು ಆತನಿಗಿತ್ತು. ಅದು ಗಮನಾರ್ಹವಾಗಿ ಸರಳವಾಗಿತ್ತು: ‘ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದೇ.’ (ಯೋಹಾ. 18:37) ತನ್ನ ತಂದೆಯ ಅದ್ಭುತಕರವಾದ ಗುಣಗಳ ಮತ್ತು ಉದ್ದೇಶಗಳ ಕುರಿತಾದ ಸತ್ಯವನ್ನು ಆತನು ಘೋಷಿಸಿದನು. ಈ ಕೆಲಸವು ಆತನಿಗೆ ಆಹಾರದಂತಿತ್ತು; ಆ ಕೆಲಸದ ಮೇಲೆ ಆತನ ಇಡೀ ಜೀವನವು ಕೇಂದ್ರೀಕರಿಸಿತ್ತು. (ಯೋಹಾ. 4:34) ಯೇಸು “ದಿನಾಲು ದೇವಾಲಯದಲ್ಲಿ ಉಪದೇಶಮಾಡುತ್ತಿದ್ದನು” ಎಂದು ಲೂಕನು ವರದಿಸಿದನು. (ಲೂಕ 19:47) ಯೇಸು ಲಭ್ಯವಿದ್ದ ಸಮಯದ ಅಧಿಕತಮ ಉಪಯೋಗವನ್ನು ಮಾಡಿದನು. (ಯೋಹಾ. 9:4) ತನ್ನ ಮರಣಕ್ಕೆ ಸ್ವಲ್ಪ ಮುಂಚೆ, ಆತನು ತನ್ನ ತಂದೆಗೆ ಹೀಗೆ ತಿಳಿಯಪಡಿಸಲು ಶಕ್ತನಾಗಿದ್ದನು: “ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು.”—ಯೋಹಾ. 17:4.
2 ಯೆಹೋವನು ಮಾಡಿರುವ ಸಕಲ ವಿಷಯಗಳಿಗಾಗಿ ನಮ್ಮ ಹೃದಯಗಳು ಗಣ್ಯತೆಯಿಂದ ತುಂಬಿರುವಾಗ, ನಮಗೆ ಅದೇ ರೀತಿಯಲ್ಲಿ ಪ್ರತಿನಿತ್ಯ ಆತನ ಕುರಿತಾಗಿ ಮಾತಾಡಲೇಬೇಕೆಂದನಿಸುತ್ತದೆ. ಯಾರು ಧೈರ್ಯದಿಂದ “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದು ತಿಳಿಯಪಡಿಸಿದರೋ, ಆ ಯೇಸುವಿನ ಶಿಷ್ಯರಂತೆಯೇ ನಾವಾಗುತ್ತೇವೆ. (ಅ. ಕೃ. 4:20) “ಪ್ರತಿ ದಿನ . . . ಅವರು ಎಡೆಬಿಡದೆ ಮುಂದುವರಿಸಿದರು,” ಎಂಬುದಾಗಿ ದಾಖಲೆಯು ಹೇಳುವುದರಿಂದ, ಯೆಹೋವನ ಕುರಿತಾದ ಅವರ ಮಾತಾಡುವಿಕೆಯು ನಿರಂತರವಾಗಿತ್ತು. (ಅ. ಕೃ. 5:42, NW) ‘ನನ್ನ ಬೋಧಕನಾದ, ಯೇಸುವಿನ ಒಬ್ಬ ಅನುಯಾಯಿ ನಾನಾಗಿದ್ದೇನೋ?’ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು.
3 ಜರೂರಿಯಿಂದ ಸಾರುತ್ತಿರುವುದು: ಭೂಮಿಯಲ್ಲೆಲ್ಲಾ ರಾಜ್ಯ ಸಂದೇಶವು ತಿಳಿಯಪಡಿಸಲ್ಪಟ್ಟ ಮೇಲೆ “ಆಗ ಅಂತ್ಯವು ಬರುವದು” ಎಂದು ಯೇಸು ಮುಂತಿಳಿಸಿದನು. (ಮತ್ತಾ. 24:14) ಇದು ನಮ್ಮ ಕೆಲಸದ ಪ್ರಮುಖತೆಯನ್ನು ಮತ್ತು ಜರೂರಿಯನ್ನು ನಮ್ಮ ಮೇಲೆ ಅಚ್ಚೊತ್ತಬೇಕು. ಅಕ್ಷರಾರ್ಥಕವಾಗಿ ಲಕ್ಷಾಂತರ ಜೀವಗಳು ಗಂಡಾಂತರದಲ್ಲಿರುವುದರಿಂದ, ಮಾಡಲಿಕ್ಕೆ ಅತ್ಯಂತ ಪ್ರಮುಖವಾದ ಅಥವಾ ಪ್ರಯೋಜನಕರವಾದ ಮತ್ತೊಂದು ವಿಷಯವನ್ನು ನಾವು ಕಂಡುಕೊಳ್ಳೆವು. ಈ ವಿಷಯಗಳ ವ್ಯವಸ್ಥೆಯು ತನ್ನ ಅಂತ್ಯವನ್ನು ಸಮೀಪಿಸುತ್ತಿರುವುದರಿಂದ, ಕೆಲಸವನ್ನು ಸಂಪೂರ್ಣಗೊಳಿಸಲು ಉಳಿದಿರುವ ಸಮಯವು ಸಂಕುಚಿತಗೊಳಿಸಲ್ಪಟ್ಟಿದೆ!
4 ಕುರಿಸದೃಶ ಜನರ ಒಟ್ಟುಗೂಡಿಸುವಿಕೆಯನ್ನು ಯೆಹೋವನು ತ್ವರೆಗೊಳಿಸುತ್ತಿರುವುದನ್ನು ವರದಿಗಳು ತೋರಿಸುತ್ತವೆ. (ಯೆಶಾ. 60:22) ಲೋಕದ ಅನೇಕ ಭಾಗಗಳಲ್ಲಿ, ಅಕ್ಷರಾರ್ಥಕವಾಗಿ ಜನರು ಸತ್ಯಕ್ಕೆ ಒಟ್ಟುಗೂಡುತ್ತಿದ್ದಾರೆ, ಅವರು ಹರ್ಷಭರಿತರಾಗಿ ಕಾರ್ಯತಃ ಹೀಗೆ ಪ್ರಕಟಪಡಿಸುತ್ತಿದ್ದಾರೆ: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ”! (ಜೆಕ. 8:23) ಗತಕಾಲದಲ್ಲಿನ ಬೇರೆ ಯಾವುದೇ ಸಮಯಕ್ಕಿಂತ ಹೆಚ್ಚಾಗಿ, ಯೇಸುವಿನ ಮಾತುಗಳು ಸತ್ಯವಾಗಿವೆ: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; . . . ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಮತ್ತಾ. 9:37, 38) ಯಾರು “ದೇವಾಲಯದಲ್ಲಿ ದೇವರನ್ನು ಸತತವಾಗಿ ಕೊಂಡಾ”ಡುತ್ತಿದ್ದರೋ ಆ ಯೇಸುವಿನ ಹಿಂಬಾಲಕರಂತೆ ಹುರುಪುಳ್ಳವರಾಗಿರಲು ಅದು ನಮ್ಮನ್ನು ಪ್ರೇರೇಪಿಸುವುದಿಲ್ಲವೋ?—ಲೂಕ 24:53, NW.
5 ದಿನಾಲು ಸತ್ಯವನ್ನು ತಿಳಿಯಪಡಿಸಿರಿ: ನಾವು ಪ್ರತಿನಿತ್ಯವೂ, ಇತರರಿಗೆ ಸತ್ಯವನ್ನು ಹಂಚಲಿಕ್ಕಿರುವ ಮಾರ್ಗಗಳಿಗಾಗಿ ಹುಡುಕುತ್ತಿರಬೇಕು. ಅವಕಾಶಗಳು ಸುಲಭವಾಗಿ ದೊರೆಯುತ್ತವೆ. ನೀವು ನಿಮ್ಮ ಷಾಪಿಂಗ್ ಮಾಡುವಾಗ, ಆ ಅಂಗಡಿಯವನಿಗೆ ಕಿರುಹೊತ್ತಗೆಯೊಂದನ್ನು ನೀಡುವುದರ ಕುರಿತಾಗಿ ಯೋಚಿಸಿದ್ದೀರೋ? ಅಥವಾ ಮನೆಯಲ್ಲಿ ಕಂಡುಕೊಳ್ಳಲಶಕ್ತರಾದ ಯಾರಾದರೊಬ್ಬರಿಗೆ ಪತ್ರವನ್ನು ಬರೆಯುವುದರ ಕುರಿತಾಗಿ ಏನು? ಯಾರು ಪ್ರತಿಕ್ರಿಯಿಸುವವರಾಗಿರಬಹುದು ಎಂದು ನೀವು ನೆನಸುತ್ತೀರೋ ಆ ಒಬ್ಬ ಸ್ನೇಹಿತನಿಗೆ ಅಥವಾ ಪರಿಚಯಸ್ಥರಿಗೆ ಫೋನ್ ಮಾಡಲು ಕೆಲವೊಂದು ನಿಮಿಷಗಳನ್ನು ನೀವು ತೆಗೆದುಕೊಳ್ಳಸಾಧ್ಯವಿದೆಯೋ? ಸಂಭವನೀಯವಾಗಿ, ಪ್ರತಿ ದಿನವೂ ನಿಮ್ಮ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿರುವ ಇತರ ಅನೇಕ ಅವಕಾಶಗಳ ಬಗ್ಗೆ ನೀವು ಯೋಚಿಸಬಲ್ಲಿರಿ. ನೀವು ಪ್ರಯತ್ನವನ್ನು ಮಾಡಿ ಸ್ವಲ್ಪ ಧೈರ್ಯವನ್ನು ಪ್ರದರ್ಶಿಸುವುದಾದರೆ, ಯೆಹೋವನು ನಿಮಗೆ ಸಹಾಯಮಾಡುವನು.—1 ಥೆಸ. 2:2.
6 ಆದುದರಿಂದ, ಪ್ರತಿ ದಿನದ ಚಟುವಟಿಕೆಗಳನ್ನು ನಾವು ಪ್ರಾರಂಭಿಸಿದ ಹಾಗೆ, ನಾವು ನಮ್ಮನ್ನು ‘ಇಂದು ಅವಕಾಶವೊಂದು ತೆರೆಯಲ್ಪಡುವುದಾದರೆ ನನ್ನ ನಿರೀಕ್ಷೆಯನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ನಾನು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವೆನೋ?’ ಎಂಬುದಾಗಿ ಕೇಳಿಕೊಳ್ಳಬೇಕು. ತಾನು ಏಕೆ ಭೂಮಿಗೆ ಕಳುಹಿಸಲ್ಪಟ್ಟೆನೆಂದು ವಿವರಿಸಿದ ಯೇಸುವಿನ ಮನೋಭಾವವನ್ನು ಅನುಕರಿಸಿರಿ: “ದೇವರ ರಾಜ್ಯದ ಸುವಾರ್ತೆಯನ್ನು ನಾನು ತಿಳಿಯಪಡಿಸಲೇಬೇಕು.” (ಲೂಕ 4:43, NW) ನಾವು ನಮ್ಮ ಬೋಧಕನಂತೆ ಇರಲು ಬಯಸುವುದಾದರೆ, ನಾವು ಅದನ್ನೇ ಮಾಡುವೆವು.—ಲೂಕ 6:40.