“ದಿನಂಪ್ರತಿ” ಯೆಹೋವನನ್ನು ಕೊಂಡಾಡಿರಿ
1 ರಾಜ ದಾವೀದನು ಯೆಹೋವನಿಗೆ ಮಾಡಿದ ಒಂದು ವಾಗ್ದಾನವು ಕೀರ್ತನೆ 145:2ರಲ್ಲಿದೆ: “ದಿನಂಪ್ರತಿ ನಿನ್ನನ್ನು ಕೀರ್ತಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು.” ನಮ್ಮ ಸ್ವರ್ಗೀಯ ತಂದೆಯನ್ನು ಕೊಂಡಾಡಿ, ಸ್ತುತಿಸಲು ನಮಗೂ ಕಾರಣವಿದೆ! ಆದರೆ ಯೆಹೋವನ ಪರಮಾಧಿಕಾರವನ್ನು “ದಿನಂಪ್ರತಿ” ಘನತೆಗೇರಿಸುವುದರಲ್ಲಿ ನಾವು ಹೇಗೆ ದಾವೀದನ ಮಾದರಿಯನ್ನು ಅನುಕರಿಸಬಲ್ಲೆವು?
2 ನಮ್ಮ ಹೃದಯಗಳನ್ನು ಯೆಹೋವನಿಗಾಗಿ ಗಣ್ಯತೆಯಿಂದ ತುಂಬಿಸುವುದು: ದೇವರ ವಾಕ್ಯದ ಕ್ರಮವಾದ ಅಧ್ಯಯನವು, ಯೆಹೋವನು ನಮಗಾಗಿ ಮಾಡಿರುವ, ಮಾಡುತ್ತಿರುವ ಮತ್ತು ಇನ್ನೂ ಮಾಡಲಿರುವ ವಿಷಯಕ್ಕಾಗಿ ನಮ್ಮ ಕೃತಜ್ಞತೆಯನ್ನು ಹೆಚ್ಚಿಸುತ್ತದೆ. ನಾವು ಆತನ ಅದ್ಭುತಕರವಾದ ಕ್ರಿಯೆಗಳಿಗಾಗಿ ಗಣ್ಯತೆಯಲ್ಲಿ ವೃದ್ಧಿಸಿದಂತೆ, ಆತನ ಒಳ್ಳೆಯತನದ ಕುರಿತಾಗಿ ಸ್ವತಃ ತುಂಬಿತುಳುಕುವುದನ್ನು ನಾವು ಕಂಡುಕೊಳ್ಳುವೆವು. (ಕೀರ್ತ. 145:7) ನಾವು ಯೆಹೋವನನ್ನು ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ಅತ್ಯಾಸಕ್ತಿಯಿಂದ ಸ್ತುತಿಸುವೆವು.
3 ದೈನಿಕ ಸಂಭಾಷಣೆಯಲ್ಲಿ ಯೆಹೋವನನ್ನು ಸ್ತುತಿಸಿರಿ: ನೆರೆಯವರು, ಶಾಲಾಸಂಗಾತಿಗಳು, ಜೊತೆಕೆಲಸಗಾರರು, ಮತ್ತು ನಾವು ದಿನವೂ ಸಂಧಿಸುವ ಇತರರೊಂದಿಗೆ ಸಂಭಾಷಿಸುವಾಗ, ಅವರೊಂದಿಗೆ ನಮ್ಮ ನಿರೀಕ್ಷೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ನಾವು ಕಂಡುಕೊಳ್ಳಬಹುದು. ನೆರೆಯವನೊಬ್ಬನು ಸಮಾಜದಲ್ಲಿನ ಅಪರಾಧದ ಕುರಿತು ಚಿಂತೆಯನ್ನು ವ್ಯಕ್ತಪಡಿಸಬಹುದು; ಶಾಲಾಸಂಗಾತಿಯೊಬ್ಬನು ಅಮಲೌಷಧದ ದುರುಪಯೋಗ ಅಥವಾ ಅನೈತಿಕತೆಯ ಕುರಿತು ಆತಂಕಗೊಂಡಿರಬಹುದು; ಜೊತೆಕೆಲಸಗಾರನೊಬ್ಬನು ಯಾವುದೊ ರಾಜಕೀಯ ವಿವಾದಾಂಶದ ಕುರಿತು ಒಂದು ಅಭಿಪ್ರಾಯವನ್ನು ತಿಳಿಸಬಹುದು. ಈಗ ತೆಗೆದುಕೊಳ್ಳಬೇಕಾದ ಯೋಗ್ಯವಾದ ಮಾರ್ಗಕ್ರಮವನ್ನು ತೋರಿಸುವ ದೇವರ ವಾಕ್ಯದಲ್ಲಿನ ಮೂಲತತ್ವಗಳು ಮತ್ತು ವಾಗ್ದಾನಗಳನ್ನು ಮತ್ತು ಈ ಸಮಸ್ಯೆಗಳಿಗಾಗಿರುವ ಅಂತಿಮ ಪರಿಹಾರವನ್ನು ನಾವು ಸೂಚಿಸಬಲ್ಲೆವು. “ಸರಿಯಾದ ಸಮಯದಲ್ಲಿ” ನುಡಿಯಲ್ಪಟ್ಟ ಇಂತಹ ಮಾತುಗಳು ಒಂದು ಆಶೀರ್ವಾದವಾಗಿರಬಲ್ಲವು!—ಜ್ಞಾನೋ. 15:23, NW.
4 ಯೆಹೋವನ ಕುರಿತು ಪೂರ್ಣ ಸಮಯ ಮಾತಾಡಿರಿ: ಯೆಹೋವನಿಗಾಗಿ ಆಳವಾದ ಗಣ್ಯತೆಯಿರುವ ವ್ಯಕ್ತಿಯು, ಸಾಧ್ಯವಾದಷ್ಟು ಇತರ ಅನೇಕರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಬಯಸುತ್ತಾನೆ. (ಕೀರ್ತ. 40:8-10) ಈ ಸಂಬಂಧದಲ್ಲಿ, ‘ನನ್ನ ಪರಿಸ್ಥಿತಿಗಳು ಅನುಮತಿಸುವ ಎಲ್ಲವನ್ನು ನಾನು ಮಾಡುತ್ತಿದ್ದೇನೊ?’ ಎಂಬುದಾಗಿ ನಾವು ಸ್ವತಃ ಕೇಳಿಕೊಳ್ಳಬೇಕು. ಕೆಲವೊಂದು ಯುಕ್ತವಾದ ಹೊಂದಾಣಿಕೆಗಳೊಂದಿಗೆ ತಾವು ಕ್ರಮದ ಪಯನೀಯರರಾಗಲು ಶಕ್ತರಾಗಿದ್ದೇವೆಂದು ಅನೇಕರು ಕಂಡುಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಗಳು ಅದಕ್ಕೆ ಅನುಮತಿ ನೀಡದಿದ್ದಲ್ಲಿ, ನಾವು ಆಕ್ಸಿಲಿಯರಿ ಪಯನೀಯರರೋಪಾದಿ ನಮೂದಿಸಿಕೊಳ್ಳಬಲ್ಲೆಲ್ಲಿವೊ?
5 ಯೆಹೋವನನ್ನು ಕೊಂಡಾಡುವುದರಲ್ಲಿ ನಮ್ಮನ್ನು ಜೊತೆಸೇರುವಂತೆ ಹೊಸಬರಿಗೆ ಸಹಾಯಮಾಡಿರಿ: ಯೇಸುವಿನ ಮರಣದ ಜ್ಞಾಪಕಾಚರಣೆಯು, ಯೆಹೋವನಿಗೆ ಆಭಾರಿಗಳಾಗಿದ್ದು, ಆತನ ನಾಮವನ್ನು ಸ್ತುತಿಸಲಿಕ್ಕಾಗಿರುವ ಕಾರಣಗಳ ಕುರಿತು ನಮ್ಮನ್ನು ಸದಾ ಜ್ಞಾಪಿಸುತ್ತದೆ. ಯೆಹೋವನ ರಾಜತ್ವದ ಕುರಿತು ಬಹಿರಂಗವಾಗಿ ಮಾತಾಡುವುದರಲ್ಲಿ ನಮ್ಮ ಜೊತೆಸೇರುವಂತೆ ನಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಉತ್ತೇಜಿಸಲು, ಇದು ವಿಶೇಷವಾಗಿ ಒಂದು ಸುಸಮಯವಾಗಿದೆ. ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಲ್ಲಿ, 173-5ನೇ ಪುಟಗಳಲ್ಲಿರುವ 7-9ನೆಯ ಪ್ಯಾರಗ್ರಾಫ್ಗಳಲ್ಲಿ ತಿಳಿಸಲ್ಪಟ್ಟಿರುವ ವಿಷಯದ ಮೇಲೆ ಪ್ರಾರ್ಥನಾಪೂರ್ವಕವಾಗಿ ಚಿಂತನೆ ಮಾಡುವಂತೆ ಅವರನ್ನು ಪ್ರೇರೇಪಿಸಿರಿ. ಅವರು ಅರ್ಹರಾಗುವಲ್ಲಿ, ತಾವು ಅನುಭವದ ಕೊರತೆಯುಳ್ಳವರೆಂಬ ಕಾರಣದಿಂದ ಮಾತ್ರ ಸಾರುವುದರಿಂದ ವಿಮುಖರಾಗಲು ಅವರಿಗೆ ಯಾವ ಕಾರಣವೂ ಇರುವುದಿಲ್ಲ. ರಾಜ್ಯ ಸಾರುವಿಕೆಯ ಕೆಲಸವು ಹೇಗೆ ಮಾಡಲ್ಪಡುತ್ತದೆ ಎಂಬುದನ್ನು ತೋರಿಸಲು, ಸಮರ್ಥರಾದ ಪ್ರಚಾರಕರು ಇದ್ದಾರೆ. ಸುವಾರ್ತೆಯನ್ನು ಮಾತಾಡಲು ಹೊಸಬರು ಧೈರ್ಯವನ್ನು ಒಟ್ಟುಗೂಡಿಸಬಲ್ಲರಾದರೆ, ಯೆಹೋವನು ಅವರಿಗೆ ಸಹಾಯಮಾಡುವನೆಂಬ ವಿಷಯದಲ್ಲಿ ಅವರು ಭರವಸೆಯಿಂದಿರಬಲ್ಲರು.—ಅ. ಕೃ. 4:31; 1 ಥೆಸ. 2:2.
6 ದಿನಂಪ್ರತಿ ನಾವು ಯೆಹೋವನನ್ನು ಕೊಂಡಾಡಲು ಪ್ರಯತ್ನಿಸುವಾಗ, ನಮಗೆ ಅಷ್ಟೇ ಅಲ್ಲದೆ ಇತರರಿಗೂ ಅನಂತ ಪ್ರಯೋಜನಗಳನ್ನು ನಾವು ತರುತ್ತೇವೆ.