“ದೇವರ ವಾಕ್ಯವನ್ನು ಸಂಪೂರ್ಣವಾಗಿ ಸಾರು”
1 ನೀವು ಪಡೆದುಕೊಳ್ಳುವ ಯಾವುದೇ ಒಳ್ಳೆಯ ವಿಷಯಕ್ಕಾಗಿ ನಿಮಗೆ ನಿಜವಾಗಿಯೂ ಗಣ್ಯತೆಯಿರುವಾಗ, ಅದನ್ನು ನೀವು ನಿಮ್ಮ ಮನೋಭಾವ ಮತ್ತು ಕೃತ್ಯಗಳಿಂದ ವ್ಯಕ್ತಪಡಿಸುವುದಿಲ್ಲವೋ? ಖಂಡಿತವಾಗಿಯೂ ವ್ಯಕ್ತಪಡಿಸುವಿರಿ! ಮಾನವಕುಲಕ್ಕಾಗಿ ಯೆಹೋವನು ತೋರಿಸುವ ಒಳ್ಳೆಯತನದ ಮತ್ತು ಪ್ರೀತಿಪೂರ್ವಕ ದಯೆಯ ವಿಷಯದಲ್ಲಿ ಅಪೊಸ್ತಲ ಪೌಲನು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಗಮನಿಸಿರಿ. ಅವನು ಉದ್ಘೋಷಿಸಿದ್ದು: “ವರ್ಣಿಸಲಶಕ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರ”! ಆ “ವರ”ದಲ್ಲಿ ಏನು ಒಳಗೂಡಿದೆ? ನಮಗೆ ತೋರಿಸಲ್ಪಟ್ಟಿರುವ “ದೇವರ ಅತಿಶಯವಾದ ಕೃಪೆ”ಯು ಒಳಗೂಡಿದೆ, ಮತ್ತು ಇದರ ಅತಿ ಮಹತ್ತರವಾದ ವ್ಯಕ್ತಪಡಿಸುವಿಕೆಯು, ನಮ್ಮ ಪಾಪಗಳಿಗಾಗಿ ತನ್ನ ಸ್ವಂತ ಮಗನನ್ನು ಪ್ರಾಯಶ್ಚಿತ್ತವಾಗಿ ಕೊಟ್ಟ ವರವಾಗಿದೆ.—2 ಕೊರಿಂ. 9:14, 15; ಯೋಹಾ. 3:16.
2 ಪೌಲನ ಉಪಕಾರಸ್ಮರಣೆಯು ಕೇವಲ ಬಾಯಿಮಾತಿನದ್ದಾಗಿತ್ತೋ? ಖಂಡಿತವಾಗಿಯೂ ಇಲ್ಲ! ಅವನು ತನ್ನ ಗಾಢವಾದ ಗಣ್ಯತೆಯನ್ನು ಅನೇಕ ವಿಧಗಳಲ್ಲಿ ತೋರಿಸಿದನು. ಅವನು ತನ್ನ ಜೊತೆ ಕ್ರೈಸ್ತರ ಆತ್ಮಿಕ ಹಿತಕ್ಷೇಮದಲ್ಲಿ ಹೆಚ್ಚು ಆಸಕ್ತನಾಗಿದ್ದನು ಮತ್ತು ದೇವರ ಪ್ರೀತಿಪೂರ್ವಕ ದಯೆಯಿಂದ ಅವರು ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತನ್ನಿಂದಾದಷ್ಟು ಸಹಾಯವನ್ನು ಮಾಡಬಯಸಿದನು. ಇಂಥವರ ಕುರಿತು ಪೌಲನು ಹೇಳಿದ್ದು: “ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.” (1 ಥೆಸ. 2:8) ಈಗಾಗಲೇ ಸಭೆಯ ಭಾಗವಾಗಿರುವವರು ತಮ್ಮ ರಕ್ಷಣೆಯನ್ನು ಭದ್ರಪಡಿಸಿಕೊಳ್ಳುವಂತೆ ಸಹಾಯಮಾಡುವುದರೊಂದಿಗೆ, ಪೌಲನು ನೆಲ ಮತ್ತು ಸಮುದ್ರದ ಮೇಲೆ ಸಾವಿರಾರು ಮೈಲಿಗಳಷ್ಟು ಪ್ರಯಾಣ ಮಾಡುತ್ತಾ, “ನಿತ್ಯ ಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳ”ವರನ್ನು ಕಂಡುಕೊಳ್ಳಲಿಕ್ಕಾಗಿ ಹತಾಶನಾಗದೆ ಸುವಾರ್ತೆಯನ್ನು ಸಾರಿದನು. (ಅ. ಕೃ. 13:48, NW) ಯೆಹೋವನು ಪೌಲನಿಗಾಗಿ ಮಾಡಿರುವ ಎಲ್ಲ ವಿಷಯಗಳಿಗಾಗಿರುವ ಅವನ ಗಾಢವಾದ ಗಣ್ಯತೆಯು, ಅವನು “ದೇವರ ವಾಕ್ಯವನ್ನು ಸಂಪೂರ್ಣವಾಗಿ ಸಾರು”ವಂತೆ ಪ್ರೇರಿಸಿತು.—ಕೊಲೊ. 1:25, NW.
3 ಯೆಹೋವನು ನಮಗಾಗಿ ಮಾಡಿರುವ ಎಲ್ಲ ವಿಷಯಗಳಿಗಾಗಿ ನಮಗಿರುವ ಗಣ್ಯತೆಯು, ನಮ್ಮ ಸಭೆಯಲ್ಲಿ ಯಾರಿಗೆ ಸಹಾಯದ ಅಗತ್ಯವಿದೆಯೊ ಅಂಥವರಿಗೆ ಆತ್ಮಿಕ ಬೆಂಬಲವನ್ನು ನೀಡುವಂತೆ ಪ್ರೇರಿಸುವುದಿಲ್ಲವೋ? (ಗಲಾ. 6:10) ಮತ್ತು ನಮ್ಮ ಇಡೀ ಟೆರಿಟೊರಿಯಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಮ್ಮಿಂದ ಸಾಧ್ಯವಿರುವಷ್ಟು ಸಂಪೂರ್ಣವಾಗಿ ಭಾಗವಹಿಸುವಂತೆ ನಾವು ಪ್ರೇರಿಸಲ್ಪಡುವುದಿಲ್ಲವೋ?—ಮತ್ತಾ. 24:14.
4 ಗಣ್ಯತೆಯನ್ನು ತೋರಿಸಲು ಒಂದು ಅವಕಾಶ: ನಮಗಾಗಿ ಯೆಹೋವನು ಮತ್ತು ಯೇಸು ಮಾಡಿರುವ ವಿಷಯಗಳಿಗಾಗಿ ಗಣ್ಯತೆಯನ್ನು ತೋರಿಸಲು ಒಂದು ವಿಶೇಷವಾದ ಅವಕಾಶವನ್ನು ಪ್ರತಿ ವರ್ಷ ಕ್ರಿಸ್ತನ ಮರಣದ ಜ್ಞಾಪಕಾಚರಣೆಯು ನೀಡುತ್ತದೆ. ಇದು ಕೇವಲ ಮತ್ತೊಂದು ಕೂಟವೋ ಅಥವಾ ಕೇವಲ ಒಂದು ಘಟನೆಯ ಜ್ಞಾಪಕಾಚರಣೆಯೋ ಆಗಿರುವುದಿಲ್ಲ. “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂದು ಯೇಸು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಲೂಕ 22:19) ಕ್ರಿಸ್ತನ ಮರಣದ ಜ್ಞಾಪಕಾಚರಣೆಯು, ಯೇಸು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬುದರ ಕುರಿತು ಮನನಮಾಡುವ ಸಮಯವಾಗಿದೆ. ಅದು, ಅವನ ನಂಬಿಗಸ್ತ ಜೀವನ ರೀತಿ ಮತ್ತು ಯಜ್ಞಕ್ಕಾಗಿ ಅವನಿಗೆ ಕೊಡಲ್ಪಟ್ಟಿರುವ ಮಹಿಮೆ ಮತ್ತು ರಾಜತ್ವದೊಂದಿಗೆ, ಅವನು ಇಂದು ಜೀವಂತನಾಗಿ ಸಕ್ರಿಯನಾಗಿದ್ದಾನೆ ಎಂಬುದನ್ನು ಮಾನ್ಯಮಾಡುವ ಸಮಯವಾಗಿದೆ. ಈ ಆಚರಣೆಯು, ಕ್ರಿಸ್ತನು ಕ್ರೈಸ್ತ ಸಭೆಯ ವ್ಯವಹಾರಗಳನ್ನು ಮತ್ತು ಚಟುವಟಿಕೆಗಳನ್ನು ಮಾರ್ಗದರ್ಶಿಸುವಾಗ, ಅವನ ತಲೆತನಕ್ಕೆ ನಾವು ಅಧೀನತೆಯನ್ನು ತೋರಿಸುವ ಸಂದರ್ಭವೂ ಆಗಿದೆ. (ಕೊಲೊ. 1:17-20) ದೇವಜನರೆಲ್ಲರೂ ಗೌರವದಿಂದ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗಬೇಕು. ಈ ವರ್ಷ ಅದು 2002, ಮಾರ್ಚ್ 28ರ ಗುರುವಾರದಂದು ಸೂರ್ಯಾಸ್ತಮಾನದ ನಂತರ ನಡೆಯುವುದು.
5 ಕಳೆದ ವರ್ಷದ ಜ್ಞಾಪಕಾಚರಣೆಗೆ ಮುಂಚೆ ಮಾಡಲ್ಪಟ್ಟ ಶ್ರದ್ಧಾಪೂರ್ವಕ ಪ್ರಯತ್ನದಿಂದಾಗಿ, ಭಾರತದಲ್ಲಿ 52,725 ಮಂದಿಯ ಹಾಜರಿಯೊಂದಿಗೆ ನಾವು ಅತ್ಯುಚ್ಚಾಂಕವನ್ನು ಹೊಂದಿದ್ದೆವು. ಈ ವರ್ಷದ ಹಾಜರಿಯು ಎಷ್ಟಿರುವುದು? ಆದಷ್ಟು ಹೆಚ್ಚು ಜನರು ಹಾಜರಾಗುವುದು, ನಮ್ಮ ‘ಕಷ್ಟಪಡುವಿಕೆ ಮತ್ತು ಹೋರಾಡುವಿಕೆಯ’ ಮೇಲೆ ಆತುಕೊಂಡಿದೆ.—1 ತಿಮೊ. 4:10.
6 ಕರ್ತನ ಸಂಧ್ಯಾ ಭೋಜನಕ್ಕೆ ಹಾಜರಾಗುವುದರೊಂದಿಗೆ, ಕ್ಷೇತ್ರ ಸೇವೆಯಲ್ಲಿ ನಾವು ನಮ್ಮ ಚಟುವಟಿಕೆಯನ್ನು ಹೆಚ್ಚಿಸಬಹುದು. ಹತ್ತಾರು ಸಾವಿರ ಸಹೋದರ ಸಹೋದರಿಯರು ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ತಿಂಗಳುಗಳ ವರೆಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವರು ಎಂಬುದರಲ್ಲಿ ಸಂದೇಹವಿಲ್ಲ. ಕಳೆದ ಐದು ವರ್ಷಗಳಲ್ಲಿ ಪ್ರತಿ ವರ್ಷ, ಮಾರ್ಚ್ನಿಂದ ಮೇ ತಿಂಗಳಿನ ವರೆಗೆ, ಸರಾಸರಿಯಾಗಿ ಜ್ಞಾಪಕಾಚರಣೆಯ ಸಮಯದಲ್ಲಿ 1,515 ಆಕ್ಸಿಲಿಯರಿ ಪಯನೀಯರರನ್ನು ನಾವು ಹೊಂದಿದ್ದೆವು. ಈ ವರ್ಷ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಸುಯೋಗದಲ್ಲಿ ಒಳಗೂಡಸಾಧ್ಯವಾಗುವಂತೆ ನೀವು ನಿಮ್ಮ ವ್ಯವಹಾರಗಳಲ್ಲಿ ಹೊಂದಾಣಿಕೆಗಳನ್ನು ಮಾಡಬಲ್ಲಿರೋ? ಇದು, ನಾವು ಕ್ರಿಸ್ತನ ಯಜ್ಞದ ಕುರಿತಾದ ದೇವರ ಪ್ರೀತಿಪೂರ್ವಕ ಒದಗಿಸುವಿಕೆಗಾಗಿ ನಿಜವಾದ ಗಣ್ಯತೆಯನ್ನು ತೋರಿಸುವ ಅತ್ಯುತ್ತಮವಾದ ವಿಧಾನವಾಗಿರುವುದು. ಮುಂದಿನ ಅನುಭವಗಳು ತೋರಿಸುವಂತೆ ನೀವು ಯೆಹೋವನ ಆಶೀರ್ವಾದದ ಕುರಿತು ಖಾತ್ರಿಯಿಂದಿರಬಹುದು.
7 ಪೂರ್ಣ ಸಮಯದ ನೌಕರಿಯನ್ನು ಮಾಡುತ್ತಿರುವ ಒಬ್ಬ ಸಹೋದರಿಯು, ತನ್ನ ಆಕ್ಸಿಲಿಯರಿ ಪಯನೀಯರ್ ಸೇವೆಯ ಅನುಭವದ ಕುರಿತು ಕಳೆದ ಮಾರ್ಚ್ ತಿಂಗಳು ಬರೆದದ್ದು: “ಫೆಬ್ರವರಿ 2001ರ ನಮ್ಮ ರಾಜ್ಯದ ಸೇವೆಯು, ಯಾರೆಲ್ಲರ ಪರಿಸ್ಥಿತಿಗಳು ಅನುಮತಿಸುತ್ತವೋ ಅವರೆಲ್ಲರೂ ಜ್ಞಾಪಕಾಚರಣೆಯ ಸಮಯದಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ಪ್ರೋತ್ಸಾಹಿಸಿತು. ಮಾರ್ಚ್ನಲ್ಲಿ ಐದು ಶನಿವಾರಗಳಿದ್ದ ಕಾರಣ, ಇದು ನನ್ನ ಕಾಲತಖ್ತೆಯೊಂದಿಗೆ ಸರಿಯಾಗಿ ಹೊಂದಿಕೊಂಡಿತು. ಆದುದರಿಂದ ನಾನು ನನ್ನ ಅರ್ಜಿಯನ್ನು ಕೊಡಲು ತೀರ್ಮಾನಿಸಿದೆ.” ಅವಳು ತನ್ನ ತಿಂಗಳನ್ನು ಆರಂಭಿಸಿದಾಗ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವ ಗುರಿಯನ್ನು ಇಟ್ಟುಕೊಂಡಳು. ಅವಳು ಯಶಸ್ವಿಯಾದಳೋ? ಹೌದು. ಆ ತಿಂಗಳಿನಲ್ಲಿ ಸಾಕ್ಷಿಕಾರ್ಯದಲ್ಲಿ ಅವಳು 52ನೇ ತಾಸನ್ನು ಕಳೆಯುತ್ತಿದ್ದಾಗ ಅವಳಿಗೆ ಒಂದು ಬೈಬಲ್ ಅಧ್ಯಯನವು ಸಿಕ್ಕಿತು. ಈಗ ಅವಳ ಅಭಿಪ್ರಾಯವೇನು? “ಹೆಚ್ಚಿನ ಪ್ರಯತ್ನವನ್ನು ಮಾಡುವಾಗ ನಾವು ಅದ್ಭುತಕರ ಆಶೀರ್ವಾದಗಳನ್ನು ಪಡೆದುಕೊಳ್ಳುವೆವು.”
8 ಜೊತೆಯಾಗಿ ಪಯನೀಯರ್ ಸೇವೆ ಮಾಡುವ ಕುಟುಂಬಕ್ಕೆ ಸಿಗುವ ಪ್ರಯೋಜನಗಳಾವುವು? ಕಳೆದ ಏಪ್ರಿಲ್ ತಿಂಗಳಿನಲ್ಲಿ ಇದನ್ನು ಮಾಡಿದ ನಾಲ್ಕು ಮಂದಿಯ ಒಂದು ಕುಟುಂಬವು, ಆ ತಿಂಗಳು ಯಾವಾಗಲೂ ನೆನಪಿನಲ್ಲಿರುವ ತಿಂಗಳಾಗಿರುವುದು ಎಂಬುದನ್ನು ಕಂಡುಕೊಂಡಿತು. ತಾಯಿಯು ಹೇಳಿದ್ದು: “ನಾವು ಶುಶ್ರೂಷೆಯಲ್ಲಿ ಐಕ್ಯರಾಗಿದ್ದ ಕಾರಣ, ಪ್ರತಿ ದಿನಕ್ಕಾಗಿ ನಮಗೆ ಸಕಾರಾತ್ಮಕ ಹೊರನೋಟವಿತ್ತು. ಸೇವೆಯಲ್ಲಿ ನಮ್ಮ ದೈನಂದಿನ ಚಟುವಟಿಕೆಗಳ ಕುರಿತಾದ ಚರ್ಚೆಯು, ನಮ್ಮ ರಾತ್ರಿಯೂಟದ ವೇಳೆಯನ್ನು ಹೆಚ್ಚು ಸಂತೋಷಕರವಾದದ್ದಾಗಿ ಮಾಡಿತು.” ಮಗನು ಹೇಳಿದ್ದು: “ತಂದೆಯು ಸಾಮಾನ್ಯವಾಗಿ ಯಾವಾಗ ಐಹಿಕವಾಗಿ ಕೆಲಸಮಾಡುತ್ತಿದ್ದರೋ ಆ ವಾರದ ದಿನಗಳಲ್ಲಿ ಅವರೊಂದಿಗೆ ಸೇವೆ ಮಾಡುವುದರಿಂದ ನನಗೆ ಆನಂದವಾಯಿತು.” ತಂದೆಯು ಕೂಡಿಸಿದ್ದು: “ಕುಟುಂಬದ ತಲೆಯೋಪಾದಿ, ನಮ್ಮ ಈ ಸಮಯದಲ್ಲಿ ಅತಿ ಪ್ರಾಮುಖ್ಯವಾದ ಚಟುವಟಿಕೆಯಲ್ಲಿ ಒಟ್ಟಾಗಿ ಕೆಲಸಮಾಡುತ್ತಿದ್ದೇವೆ ಎಂಬ ಸಂಗತಿಯು ನನಗೆ ಸಂತೃಪ್ತಿಯನ್ನು ತಂದಿತು.” ನಿಮ್ಮ ಕುಟುಂಬವು ಒಟ್ಟಾಗಿ ಪಯನೀಯರ್ ಸೇವೆ ಮಾಡಬಹುದೋ? ಒಂದು ಕುಟುಂಬ ಚರ್ಚೆಯನ್ನು ಏರ್ಪಾಡು ಮಾಡಿ, ನಿಮ್ಮ ಇಡೀ ಮನೆವಾರ್ತೆಯು ಜ್ಞಾಪಕಾಚರಣೆಯ ಸಮಯದಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಬಹುದೋ ಎಂಬುದನ್ನು ಏಕೆ ನೋಡಬಾರದು?
9 ನಾವು ಮಾರ್ಚ್ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವೋ? ಇಸವಿ 2000ದ ಆರಂಭದಲ್ಲಿ, ನಮ್ಮ ರಾಜ್ಯದ ಸೇವೆಯು ಈ ಪ್ರಶ್ನೆಯನ್ನು ಕೇಳಿತು: “ನಾವು 2000 ಇಸವಿಯ ಏಪ್ರಿಲ್ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವೊ?” ಪ್ರತಿಕ್ರಿಯೆಯು ಏನಾಗಿತ್ತು? ಅನೇಕ ಉಚ್ಚಾಂಕಗಳನ್ನು ತಲಪಲಾಯಿತು. 3,287 ಆಕ್ಸಿಲಿಯರಿ ಪಯನೀಯರರ ಏಕ ಮಾಸಿಕ ಅತ್ಯುಚ್ಚಾಂಕವನ್ನು ತಲಪಲಾಯಿತು. ಮಾತ್ರವಲ್ಲದೆ, ಬೈಬಲ್ ಅಧ್ಯಯನಗಳಲ್ಲಿ, ತಾಸುಗಳಲ್ಲಿ, ಪ್ರಚಾರಕರಲ್ಲಿ ಮತ್ತು ಪುನರ್ಭೇಟಿಗಳಲ್ಲಿ ಹೊಸ ಅತ್ಯುಚ್ಚಾಂಕಗಳನ್ನು ನಾವು ಕಂಡೆವು. ಆ ವಿಶೇಷ ತಿಂಗಳಿನಲ್ಲಿ ಆತ್ಮಿಕ ಚಟುವಟಿಕೆಯಿಂದ ಉಂಟುಮಾಡಲ್ಪಟ್ಟ ಸಡಗರದಿಂದಾಗಿ ನಿಮ್ಮ ಸಭೆಯಲ್ಲಿದ್ದ ಅತ್ಯುತ್ಸಾಹವನ್ನು ನೀವು ಮರುಜ್ಞಾಪಿಸಿಕೊಳ್ಳಬಲ್ಲಿರೋ? ನಾವು ಈ ವರ್ಷ ಆ ಸಾಧನೆಗಳಿಗೆ ಸರಿಸಮಾನವಾದದ್ದನ್ನು ಮಾಡಬಹುದೋ ಅಥವಾ ಅವುಗಳನ್ನು ಮೀರಿಸಬಹುದೋ? ಎಲ್ಲರ ಐಕ್ಯ ಪ್ರಯತ್ನದಿಂದಾಗಿ, ಮಾರ್ಚ್ 2002ನ್ನು “ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವು.” ಆದರೆ ಮಾರ್ಚ್ ತಿಂಗಳೇ ಏಕೆ?
10 ಮಾರ್ಚ್ ತಿಂಗಳು ಏಕೆ ಚಟುವಟಿಕೆಯ ವಿಶೇಷ ತಿಂಗಳಾಗಿರಬೇಕು ಎಂಬುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದ್ದು, ಜ್ಞಾಪಕಾಚರಣೆಯು ಮಾರ್ಚ್ ತಿಂಗಳ ಕೊನೆಯಲ್ಲಿದೆ ಮತ್ತು ಇದು ತಿಂಗಳಿನ ಆರಂಭದಲ್ಲಿ, ಸಾಧ್ಯವಿರುವಷ್ಟು ಜನರನ್ನು ಹಾಜರಾಗುವಂತೆ ಸ್ವಾಗತಿಸಲು ನಮಗೆ ಸಾಕಷ್ಟು ಸಮಯವನ್ನು ಕೊಡುವುದು. ಎರಡನೆಯದ್ದು, ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಐದು ವಾರಾಂತ್ಯಗಳಿವೆ, ಮತ್ತು ಇದು ಐಹಿಕವಾಗಿ ಕೆಲಸಮಾಡುವವರು ಅಥವಾ ಶಾಲೆಗೆ ಹೋಗುವವರು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವುದನ್ನು ಸುಲಭವಾದದ್ದಾಗಿ ಮಾಡುವುದು. ಈಗಲೇ ಕುಳಿತುಕೊಂಡು, ಈ ಪುರವಣಿಯಲ್ಲಿ ಕೊಡಲ್ಪಟ್ಟಿರುವ ಕ್ಯಾಲೆಂಡರನ್ನು ಉಪಯೋಗಿಸುತ್ತಾ ಒಂದು ಕಾರ್ಯಸಾಧಕ ಶೆಡ್ಯೂಲ್ ಅನ್ನು ಏಕೆ ತಯಾರಿಸಬಾರದು? ಆಕ್ಸಿಲಿಯರಿ ಪಯನೀಯರ್ ಸೇವೆಯು ನೀವು ನೆನಸುವುದಕ್ಕಿಂತ ಹೆಚ್ಚು ಸುಲಭವಾಗಿರುವುದು. ಉದಾಹರಣೆಗಾಗಿ, ಐದು ವಾರಾಂತ್ಯಗಳಲ್ಲಿ ಪ್ರತಿ ವಾರಾಂತ್ಯಕ್ಕಾಗಿ 8 ತಾಸುಗಳನ್ನು ಯೋಜಿಸುವ ಮೂಲಕ, ಆವಶ್ಯಕವಾಗಿರುವ 50 ತಾಸುಗಳನ್ನು ಪಡೆದುಕೊಳ್ಳಲಿಕ್ಕಾಗಿ ನೀವು ಉಳಿದ ಇಡೀ ತಿಂಗಳಲ್ಲಿ ಕೇವಲ 10 ತಾಸುಗಳನ್ನು ಯೋಜಿಸಬೇಕಾಗಿದೆ.
11 “ದೇವರ ವಾಕ್ಯವನ್ನು ಸಂಪೂರ್ಣವಾಗಿ ಸಾರು”ವಂತೆ ಸಭೆಯಲ್ಲಿರುವ ಎಲ್ಲರಿಗೂ ಸಹಾಯಮಾಡಲು ಹಿರಿಯರು ಏನು ಮಾಡಬಹುದು? ಕೂಟದ ಭಾಗಗಳು ಮತ್ತು ವೈಯಕ್ತಿಕ ಸಂಭಾಷಣೆಗಳ ಮೂಲಕ ಉತ್ಸಾಹವನ್ನು ಮೂಡಿಸಿರಿ. ಸಭಾ ಪುಸ್ತಕ ಅಧ್ಯಯನದ ಮೇಲ್ವಿಚಾರಕರು ಮತ್ತು ಅವರ ಸಹಾಯಕರು, ತಮ್ಮ ಗುಂಪಿಗೆ ನೇಮಿಸಲ್ಪಟ್ಟಿರುವ ಪ್ರತಿಯೊಬ್ಬರೊಂದಿಗೂ ಮಾತಾಡಿ, ಅವರಿಗೆ ವೈಯಕ್ತಿಕ ಬೆಂಬಲವನ್ನು ನೀಡುವುದರಲ್ಲಿ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಪ್ರೋತ್ಸಾಹನೆಯಿಂದ ಕೂಡಿರುವ ಕೆಲವು ಪ್ರೀತಿಯ ಮಾತುಗಳು ಅಥವಾ ಕೆಲವು ಪ್ರಾಯೋಗಿಕ ಸಲಹೆಗಳು ಮಾತ್ರವೇ ಬೇಕಾಗಿರಬಹುದು. (ಜ್ಞಾನೋ. 25:11) ತಮ್ಮ ಶೆಡ್ಯೂಲಿನಲ್ಲಿ ಕೆಲವು ಚಿಕ್ಕಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ, ಅವರು ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸುವ ಸುಯೋಗದಲ್ಲಿ ಆನಂದಿಸಬಹುದು. ಹಲವಾರು ಸಭೆಗಳಲ್ಲಿ, ಎಲ್ಲರೂ ಅಲ್ಲದಿದ್ದರೂ ಅಧಿಕಾಂಶ ಮಂದಿ ಹಿರಿಯರು ಮತ್ತು ಶುಶ್ರೂಷಾ ಸೇವಕರು ಹಾಗೂ ಅವರ ಹೆಂಡತಿಯರು, ಜ್ಞಾಪಕಾಚರಣೆಯ ಸಮಯದಲ್ಲಿ ಒಟ್ಟಾಗಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಮೂಲಕ ಒಂದು ಉತ್ತಮವಾದ ಮಾದರಿಯನ್ನು ಇಡುತ್ತಾರೆ. ಇದು ಅಧಿಕ ಸಂಖ್ಯೆಯಲ್ಲಿ ಪ್ರಚಾರಕರು ಅವರೊಂದಿಗೆ ಸೇರಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿದೆ. ಶಾರೀರಿಕ ದೌರ್ಬಲ್ಯಗಳಿಂದಾಗಿ ಅಥವಾ ಇನ್ನಿತರ ಪರಿಸ್ಥಿತಿಗಳಿಂದಾಗಿ ಕೆಲವು ಪ್ರಚಾರಕರು ಪಯನೀಯರ್ ಸೇವೆಯನ್ನು ಮಾಡುವ ಸ್ಥಿತಿಯಲ್ಲಿಲ್ಲದಿರಬಹುದು, ಆದರೆ ಸಭೆಯ ಇತರ ಸದಸ್ಯರೊಂದಿಗೆ ಶುಶ್ರೂಷೆಯಲ್ಲಿ ತಮ್ಮಿಂದಾಗುವಷ್ಟು ಹೆಚ್ಚನ್ನು ಮಾಡುವ ಮೂಲಕ ಅವರು ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸಬಹುದು ಎಂದು ಅವರಿಗೆ ಪ್ರೋತ್ಸಾಹವನ್ನು ನೀಡಬಹುದು.
12 ಹಿರಿಯರು ಮಾಡುವ ಜಾಗರೂಕ ಯೋಜನೆಯ ಮೇಲೆ ಯಶಸ್ಸು ಆತುಕೊಂಡಿದೆ. ಕ್ಷೇತ್ರ ಸೇವೆಗಾಗಿರುವ ಕೂಟಗಳು ವಾರವಿಡೀ ಅನುಕೂಲಕರ ಸಮಯಗಳಲ್ಲಿ ಶೆಡ್ಯೂಲ್ ಮಾಡಲ್ಪಡಬೇಕು. ಸಾಧ್ಯವಿರುವಲ್ಲಿ, ಸೇವಾ ಮೇಲ್ವಿಚಾರಕನು ಸೇವೆಗಾಗಿರುವ ಕೂಟಗಳನ್ನು ನಡೆಸುವಂತೆ ಅರ್ಹ ಸಹೋದರರನ್ನು ಮುಂಚಿತವಾಗಿಯೇ ನೇಮಿಸುವನು. ಈ ಕೂಟಗಳು 10ರಿಂದ 15 ನಿಮಿಷಗಳನ್ನು ಮೀರದಂತೆ ನೋಡಿಕೊಳ್ಳಲು ಒಳ್ಳೆಯ ತಯಾರಿಯು ಆವಶ್ಯಕ; ಮತ್ತು ಈ ಸಮಯಾವಧಿಯಲ್ಲಿ ಗುಂಪುಗಳನ್ನು ಸಂಘಟಿಸುವುದು, ಟೆರಿಟೊರಿಯನ್ನು ನೇಮಿಸುವುದು, ಮತ್ತು ಪ್ರಾರ್ಥನೆಯನ್ನು ಮಾಡುವುದೆಲ್ಲವೂ ಒಳಗೂಡಿದೆ. (ಸೆಪ್ಟೆಂಬರ್ 2001ರ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ರೇಖಾಚೌಕವನ್ನು ನೋಡಿರಿ.) ತಿಂಗಳಿಗಾಗಿರುವ ಚಟುವಟಿಕೆಯ ಒಂದು ಶೆಡ್ಯೂಲ್ ಸಭೆಗೆ ಸ್ಪಷ್ಟವಾಗಿ ವಿವರಿಸಲ್ಪಡಬೇಕು ಮತ್ತು ಇನ್ಫರ್ಮೇಷನ್ ಬೋರ್ಡ್ನ ಮೇಲೆ ಹಾಕಲ್ಪಡಬೇಕು.
13 ಸಾಕಷ್ಟು ಟೆರಿಟೊರಿಯು ಲಭ್ಯಗೊಳಿಸಲ್ಪಡಬೇಕು. ಸೇವಾ ಮೇಲ್ವಿಚಾರಕನು, ಆಗಿಂದಾಗ್ಗೆ ಆವರಿಸಲ್ಪಡದ ಟೆರಿಟೊರಿಗಳಲ್ಲಿ ಕೆಲಸ ಮಾಡಲು ಏರ್ಪಾಡುಗಳನ್ನು ಮಾಡಲಿಕ್ಕಾಗಿ ಟೆರಿಟೊರಿಯನ್ನು ನೋಡಿಕೊಳ್ಳುತ್ತಿರುವ ಸಹೋದರನನ್ನು ಭೇಟಿಯಾಗಬೇಕು. ಮನೆಯಲ್ಲಿ ಸಿಗದವರನ್ನು ಭೇಟಿಯಾಗುವುದು, ಬೀದಿಗಳಲ್ಲಿ ಹಾಗೂ ಅಂಗಡಿಯಿಂದ ಅಂಗಡಿಯ ಸಾಕ್ಷಿಕಾರ್ಯ, ಮತ್ತು ಸಂಧ್ಯಾ ಸಾಕ್ಷಿಕಾರ್ಯದ ಮೇಲೆ ಒತ್ತು ನೀಡಲ್ಪಡಬೇಕು. ಸೂಕ್ತವಾಗಿರುವಲ್ಲಿ, ಕೆಲವು ಪ್ರಚಾರಕರಿಗೆ ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಸಹಾಯ ಕೊಡಬಹುದು.
14 ಅವರು ಪುನಃ ಸೇವೆ ಮಾಡುವಂತೆ ಸಹಾಯಮಾಡಿ: ನಿಮ್ಮ ಸಭೆಯಲ್ಲಿರುವ ಯಾರಾದರೂ ಈಗ ಸುವಾರ್ತೆಯನ್ನು ಸಾರುವುದರಲ್ಲಿ ಸಕ್ರಿಯರಾಗಿಲ್ಲವೋ? ಇಂಥವರು ಇನ್ನೂ ಸಭೆಯ ಭಾಗವಾಗಿದ್ದಾರೆ ಮತ್ತು ಅವರಿಗೆ ಸಹಾಯದ ಅಗತ್ಯವಿದೆ. (ಕೀರ್ತ. 119:176) ಈ ಹಳೇ ಲೋಕದ ಅಂತ್ಯವು ತುಂಬ ನಿಕಟವಾಗಿರುವುದರಿಂದ ಮತ್ತು ಹೊಸ ಲೋಕವು ಅತಿ ಸಮೀಪವಾಗಿರುವುದರಿಂದ, ನಿಷ್ಕ್ರಿಯರಾಗಿರುವವರಿಗೆ ಬೆಂಬಲವನ್ನು ನೀಡುವುದರಲ್ಲಿ ಸಕಲ ಪ್ರಯತ್ನವನ್ನು ಮಾಡಲು ನಮಗೆ ಸಕಾರಣವಿದೆ. (ರೋಮಾ. 13:11, 12) ಕಳೆದ ಐದು ವರ್ಷಗಳಲ್ಲಿ, ಪ್ರತಿ ವರ್ಷ ಸುಮಾರು 300 ಜನರು ಈ ಸಹಾಯಕ್ಕೆ ಪ್ರತಿಕ್ರಿಯಿಸಿದ್ದಾರೆ ಮತ್ತು ಪುನಃಸ್ಥಾಪಿಸಲ್ಪಟ್ಟಿದ್ದಾರೆ. ಇನ್ನೂ ಹೆಚ್ಚಿನವರು, ಅವರಿಗೆ ಆರಂಭದಲ್ಲಿದ್ದಂಥ ಪ್ರೀತಿ ಮತ್ತು ವಿಶ್ವಾಸವನ್ನು ಪುನಃ ಹೊತ್ತಿಸಿಕೊಳ್ಳುವಂತೆ ಸಹಾಯಮಾಡಲು ನಾವೇನು ಮಾಡಬಲ್ಲೆವು?—ಇಬ್ರಿ. 3:12-14.
15 ಕಳೆದ ಐದು ವರ್ಷಗಳಲ್ಲಿ ನಿಷ್ಕ್ರಿಯರಾಗಿರುವವರಿಗೆ ಹಿರಿಯರು ಹೇಗೆ ಸಹಾಯಮಾಡಬಹುದು ಎಂಬುದನ್ನು ಹಿರಿಯರ ಮಂಡಲಿಯು ಚರ್ಚಿಸಬಹುದು. (ಮತ್ತಾ. 18:12-14) ಸೆಕ್ರಿಟರಿಯು ಸಭೆಯ ಪಬ್ಲಿಷರ್ ರೆಕಾರ್ಡ್ ಕಾರ್ಡ್ಗಳನ್ನು ಪರಿಶೀಲಿಸಬೇಕು ಮತ್ತು ನಿಷ್ಕ್ರಿಯರಾಗಿರುವ ಎಲ್ಲರ ಒಂದು ಗುರುತನ್ನು ಮಾಡಿಕೊಳ್ಳಬೇಕು. ಬೆಂಬಲವನ್ನು ಒದಗಿಸಲು ಕುರಿಪಾಲನಾ ಏರ್ಪಾಡಿನ ಮೂಲಕ ವಿಶೇಷ ಪ್ರಯತ್ನವನ್ನು ಮಾಡಬೇಕು. ಒಬ್ಬ ಹಿರಿಯನು ಒಬ್ಬ ನಿರ್ದಿಷ್ಟ ಪ್ರಚಾರಕನ ಹಿಂದಿನ ಪರಿಚಯದಿಂದಾಗಿಯೋ ಅಥವಾ ಸಹವಾಸದಿಂದಾಗಿಯೋ ಅವನನ್ನು ಭೇಟಿಯಾಗಲು ಬಯಸಬಹುದು, ಅಥವಾ ಸಹಾಯಮಾಡುವಂತೆ ಇತರ ಪ್ರಚಾರಕರಿಗೆ ಹೇಳಬಹುದು. ಇವರು ಒಂದುವೇಳೆ ಈಗ ನಿಷ್ಕ್ರಿಯರಾಗಿರುವ ವ್ಯಕ್ತಿಯೊಂದಿಗೆ ಅಧ್ಯಯನ ಮಾಡಿದವರಾಗಿರಬಹುದು ಮತ್ತು ಜರೂರಿಯ ಈ ಸಮಯದಲ್ಲಿ ವಿಶೇಷ ಬೆಂಬಲವನ್ನು ನೀಡುವ ಅವಕಾಶವನ್ನು ಸಂತೋಷದಿಂದ ಸ್ವೀಕರಿಸಬಹುದು. ಪ್ರಾಯಶಃ, ನಿಷ್ಕ್ರಿಯರಾಗಿರುವ ಅನೇಕರು ದೇವರ ವಾಕ್ಯವನ್ನು ಸಾರುವುದನ್ನು ಪುನಃ ಆರಂಭಿಸಲು ಪ್ರಚೋದಿಸಲ್ಪಡಬಹುದು. ಅವರು ಅರ್ಹತೆಯನ್ನು ಪಡೆದುಕೊಳ್ಳುವುದಾದರೆ, ಅವರು ಸಾಕ್ಷಿಕಾರ್ಯವನ್ನು ಆರಂಭಿಸಲು ಜ್ಞಾಪಕಾಚರಣೆಯ ಸಮಯಕ್ಕಿಂತ ಉತ್ತಮವಾದ ಸಮಯ ಬೇರೊಂದಿಲ್ಲ!—ಹೆಚ್ಚಿನ ವಿವರಗಳಿಗಾಗಿ, ನವೆಂಬರ್ 2000ದ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ರೇಖಾಚೌಕವನ್ನು ನೋಡಿರಿ.
16 ಸಾರಲು ಇತರರು ಅರ್ಹರಾಗುತ್ತಾರೋ? “ಸಮಸ್ತಜನಾಂಗಗಳ ಇಷ್ಟವಸ್ತು”ಗಳನ್ನು ಒಳತರುವ ಮೂಲಕ ಯೆಹೋವನು ತನ್ನ ಜನರನ್ನು ಆಶೀರ್ವದಿಸುತ್ತಾ ಇದ್ದಾನೆ. (ಹಗ್ಗಾ. 2:7) ಪ್ರತಿ ವರ್ಷ ಸಾವಿರಾರು ಮಂದಿ ಅಸ್ನಾತ ಪ್ರಚಾರಕರಾಗಿ ಅರ್ಹರಾಗುತ್ತಿದ್ದಾರೆ. ಅವರು ಯಾರು? ಯೆಹೋವನ ಸಾಕ್ಷಿಗಳ ಮಕ್ಕಳು ಹಾಗೂ ಪ್ರಗತಿಪರ ಬೈಬಲ್ ವಿದ್ಯಾರ್ಥಿಗಳೇ. ಅವರು ಸುವಾರ್ತೆಯ ಪ್ರಚಾರಕರಾಗಲು ಅರ್ಹರಾಗಿದ್ದಾರೆ ಎಂಬುದನ್ನು ನಾವು ಹೇಗೆ ತಿಳಿದುಕೊಳ್ಳಬಹುದು?
17 ಯೆಹೋವನ ಸಾಕ್ಷಿಗಳ ಮಕ್ಕಳು: ಅನೇಕ ಮಕ್ಕಳು ಹಲವಾರು ವರ್ಷಗಳಿಂದ ಮನೆಯಿಂದ ಮನೆಯ ಸೇವೆಯಲ್ಲಿ ತಮ್ಮ ಹೆತ್ತವರೊಂದಿಗೆ ಹೋಗುತ್ತಿದ್ದರೂ, ಅವರು ಇನ್ನೂ ಅಸ್ನಾತ ಪ್ರಚಾರಕರಾಗಿಲ್ಲ. ಅವರು ಅಸ್ನಾತ ಪ್ರಚಾರಕರಾಗಲು ಮಾರ್ಚ್ ಒಳ್ಳೆಯ ಸಮಯವಾಗಿರಬಲ್ಲದು. ನಿಮ್ಮ ಮಗು ಅರ್ಹವಾಗಿದೆ ಎಂಬುದು ನಿಮಗೆ ಹೇಗೆ ತಿಳಿದುಬರುವುದು? “ಒಬ್ಬ ಚಿಕ್ಕ ಹುಡುಗನು ತನ್ನ ನಡತೆಯಲ್ಲಿ ಆದರ್ಶಪ್ರಾಯನಾಗಿದ್ದು ಸುವಾರ್ತೆಯ ವಿಷಯ ಇತರರಿಗೆ ಮಾತಾಡುವುದರ ಮೂಲಕ ತನ್ನ ವಿಶ್ವಾಸವನ್ನು, ಹೃದಯದಿಂದ ಪ್ರಚೋದಿಸಲ್ಪಟ್ಟವನಾಗಿ, ವ್ಯಕ್ತಪಡಿಸು”ವಾಗಲೇ ಇದು ತಿಳಿದುಬರುವುದು ಎಂದು ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕವು 100ನೇ ಪುಟದಲ್ಲಿ ಹೇಳುತ್ತದೆ. ನಿಮ್ಮ ಮಗು ಅರ್ಹವಾಗಿದೆ ಎಂದು ನಿಮಗನಿಸುವುದಾದರೆ, ಸಭಾ ಸೇವಾ ಕಮಿಟಿಯಲ್ಲಿರುವ ಒಬ್ಬ ಹಿರಿಯನೊಂದಿಗೆ ಮಾತಾಡಿರಿ.
18 ಅರ್ಹ ಬೈಬಲ್ ವಿದ್ಯಾರ್ಥಿಗಳು: ಒಬ್ಬ ಬೈಬಲ್ ವಿದ್ಯಾರ್ಥಿಯು ಜ್ಞಾನವನ್ನು ಪಡೆದುಕೊಂಡು, ಒಂದಿಷ್ಟು ಸಮಯ ಕೂಟಗಳಿಗೆ ಹಾಜರಾದ ನಂತರ, ಅವನು ಒಬ್ಬ ರಾಜ್ಯ ಪ್ರಚಾರಕನಾಗಲು ಬಯಸಬಹುದು. ಇಂತಹ ಒಬ್ಬ ವಿದ್ಯಾರ್ಥಿಯೊಂದಿಗೆ ನೀವು ಅಧ್ಯಯನವನ್ನು ನಡೆಸುತ್ತಿರುವುದಾದರೆ, ಈ ಪ್ರಶ್ನೆಗಳನ್ನು ಪರಿಗಣಿಸಿರಿ: ಅವನು ತನ್ನ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಹೊಂದಿಕೆಯಲ್ಲಿ ಪ್ರಗತಿಯನ್ನು ಮಾಡುತ್ತಿದ್ದಾನೋ? ಅನೌಪಚಾರಿಕವಾಗಿ ಅವನು ತನ್ನ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಆರಂಭಿಸಿದ್ದಾನೋ? ಅವನು “ನೂತನಸ್ವಭಾವವನ್ನು” ಧರಿಸಿಕೊಳ್ಳುತ್ತಿದ್ದಾನೋ? (ಕೊಲೊ. 3:9, 10) ನಮ್ಮ ಶುಶ್ರೂಷೆ ಪುಸ್ತಕದ 97-9ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಅಸ್ನಾತ ಪ್ರಚಾರಕರಿಗಾಗಿರುವ ಅರ್ಹತೆಗಳನ್ನು ಅವನು ಪಡೆದಿದ್ದಾನೋ? ಹೌದಾದರೆ, ನಿಮ್ಮನ್ನು ಮತ್ತು ವಿದ್ಯಾರ್ಥಿಯನ್ನು ಇಬ್ಬರು ಹಿರಿಯರು ಭೇಟಿಮಾಡುವಂತೆ ಏರ್ಪಾಡುಗಳನ್ನು ಮಾಡಲಿಕ್ಕಾಗಿ ನೀವು ಸಭಾ ಸೇವಾ ಕಮಿಟಿಯನ್ನು ಸಂಪರ್ಕಿಸಬೇಕು. ಅವನು ಅರ್ಹನಾಗುವುದಾದರೆ, ಅವನು ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸಲು ಆರಂಭಿಸಬಹುದು ಎಂಬುದನ್ನು ಆ ಇಬ್ಬರು ಹಿರಿಯರು ಅವನಿಗೆ ತಿಳಿಸುವರು.
19 ಏಪ್ರಿಲ್ ಮತ್ತು ಮೇ ತಿಂಗಳುಗಳ ಕುರಿತಾಗಿ ಏನು? ಇವು ಕೂಡ ಕ್ಷೇತ್ರ ಸೇವೆಯಲ್ಲಿ ಹೆಚ್ಚಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳತಕ್ಕ ವಿಶೇಷ ತಿಂಗಳುಗಳಾಗಿವೆ. ಮಾರ್ಚ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವವರು, ಏಪ್ರಿಲ್ ಮತ್ತು/ಅಥವಾ ಮೇ ತಿಂಗಳಿನಲ್ಲಿ ಕೂಡ ಅದನ್ನೇ ಮಾಡಬಹುದು. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ, ಕ್ಷೇತ್ರ ಸೇವೆಯಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುವುದಕ್ಕೆ ಆದ್ಯತೆಯನ್ನು ಕೊಡುವೆವು. ಈ ಪತ್ರಿಕೆಗಳನ್ನು ಓದಿದ ವ್ಯಕ್ತಿಗಳ ಜೀವಿತದ ಮೇಲೆ ಅವು ಎಷ್ಟೊಂದು ಪ್ರಯೋಜನಕರ ಪರಿಣಾಮಗಳನ್ನು ಬೀರಿವೆ! ಲೋಕವ್ಯಾಪಕವಾಗಿ ಅನುಭವಿಸಲ್ಪಡುವ ಮಹಾ ಅಭಿವೃದ್ಧಿಯನ್ನು ಸಾಧಿಸುವುದರಲ್ಲಿ ಈ ಪತ್ರಿಕೆಗಳು ಒಂದು ದೊಡ್ಡ ಪಾತ್ರವನ್ನು ವಹಿಸಿವೆ. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಪತ್ರಿಕೆಗಳನ್ನು ನೀಡಲು ಒಂದು ವಿಶೇಷ ಪ್ರಯತ್ನವು ಮಾಡಲ್ಪಡುವುದು. ಅದರಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಈಗಲೇ ಯೋಜನೆಗಳನ್ನು ಮಾಡಿ.
20 ಹೆಚ್ಚಿನ ಸಾರುವಿಕೆಯ ಚಟುವಟಿಕೆಯು ಯೋಜಿಸಲ್ಪಟ್ಟಿರುವ ಕಾರಣ, ನೀವು ಸಭೆಯ ಮೂಲಕವಾಗಿ ಪಡೆದುಕೊಳ್ಳುವ ಪತ್ರಿಕೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆಯೋ? ಸೇವಾ ವರ್ಷವಿಡೀ, ಪತ್ರಿಕಾ ದಿನವೆಂದು ಹೆಸರಿಸಲ್ಪಟ್ಟಿರುವ ಪ್ರತಿ ಶನಿವಾರದಂದು ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುತ್ತೇವೆ. ಆದರೂ, ಹೆಚ್ಚಿನವರು ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಪಾಲ್ಗೊಳ್ಳಲಿರುವ ಕಾರಣ ಮತ್ತು ಇಡೀ ಎರಡು ತಿಂಗಳು ನಾವು ಪತ್ರಿಕೆಗಳನ್ನು ನೀಡಲಿರುವ ಕಾರಣ, ಸಭೆಯೊಂದಿಗೆ ನಿಮ್ಮ ಪತ್ರಿಕಾ ವಿನಂತಿಯನ್ನು ಹೆಚ್ಚಿಸಿಕೊಳ್ಳುವುದು ಆವಶ್ಯಕವಾಗಿರಬಹುದು. ವಿಷಯವು ಹೀಗಿರುವುದಾದರೆ, ನಿಮ್ಮ ಸಭೆಯಲ್ಲಿರುವ ಪತ್ರಿಕಾ ಸೇವಕನಿಗೆ ಒಡನೆಯೇ ತಿಳಿಸಿರಿ. ಅದೇ ಸಮಯದಲ್ಲಿ, ಎಲ್ಲರ ಉಪಯೋಗಕ್ಕಾಗಿ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್ನ ಸಾಕಷ್ಟು ಸರಬರಾಯಿ ಇದೆಯೋ ಎಂಬುದನ್ನು ಸಾಹಿತ್ಯ ಸೇವಕನು ಖಚಿತಪಡಿಸಿಕೊಳ್ಳಬೇಕು.
21 ನಮ್ಮ ರಾಜ್ಯದ ಸೇವೆಯಲ್ಲಿ “ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?” ಎಂಬ ಮುಖ್ಯ ವಿಷಯವಿರುವ ಒದಗಿಸುವಿಕೆಗಾಗಿ ಅನೇಕರು ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಆ ಮಾದರಿ ಪತ್ರಿಕಾ ನಿರೂಪಣೆಗಳನ್ನು ಕಲಿತುಕೊಳ್ಳುವ ಮೂಲಕ ನೀವು ಈ ಒದಗಿಸುವಿಕೆಯ ಪ್ರಯೋಜನವನ್ನು ಪಡೆದುಕೊಂಡಿದ್ದೀರೋ? ಪ್ರತಿ ವಾರ ನಿಮ್ಮ ಕುಟುಂಬ ಬೈಬಲ್ ಅಧ್ಯಯನದ ಒಂದು ಭಾಗವನ್ನು, ಈ ನಿರೂಪಣೆಗಳನ್ನು ಪ್ರ್ಯಾಕ್ಟಿಸ್ ಮಾಡಲಿಕ್ಕಾಗಿ ಏಕೆ ಉಪಯೋಗಿಸಿಕೊಳ್ಳಬಾರದು?
22 ಈ ಜ್ಞಾಪಕಾಚರಣೆಯ ಕಾಲಾವಧಿಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಿ: ಅಪೊಸ್ತಲ ಪೌಲನ ಹಾಗೆ, ಈ ಜ್ಞಾಪಕಾಚರಣೆಯ ಸಮಯದಲ್ಲಿ ಯೋಜಿಸಲ್ಪಟ್ಟಿರುವ ಆತ್ಮಿಕ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ, ನಾವು ಯೆಹೋವನ “ವರ್ಣಿಸಲಶಕ್ಯವಾದ . . . ವರ”ವನ್ನು ಎಷ್ಟು ಗಣ್ಯಮಾಡುತ್ತೇವೆ ಎಂಬುದನ್ನು ಆತನಿಗೆ ತೋರಿಸೋಣ. ಇದರಲ್ಲಿ, (1) ವರ್ಷದ ಅತಿ ಪ್ರಾಮುಖ್ಯ ಘಟನೆಯಾಗಿರುವ ಕರ್ತನ ಸಂಧ್ಯಾ ಭೋಜನಕ್ಕೆ, 2002, ಮಾರ್ಚ್ 28ರ ಗುರುವಾರದಂದು ಹಾಜರಾಗುವುದು; (2) ನಿಷ್ಕ್ರಿಯರಾಗಿರುವವರು “ಮೊದಲು [ಅವರಿಗಿದ್ದ] ಪ್ರೀತಿಯನ್ನು” ಪುನಃ ಹೊತ್ತಿಸಿಕೊಳ್ಳಲು ಅವರಿಗೆ ಸಹಾಯಮಾಡುವುದು (ಪ್ರಕ. 2:4; ರೋಮಾ. 12:11); (3) ಅರ್ಹರಾಗುವ ನಮ್ಮ ಮಕ್ಕಳು ಮತ್ತು ಯಾವುದೇ ಬೈಬಲ್ ವಿದ್ಯಾರ್ಥಿಗಳು ಅಸ್ನಾತ ಪ್ರಚಾರಕರಾಗಲು ಅವರಿಗೆ ಬೆಂಬಲ ನೀಡುವುದು; ಮತ್ತು (4) ಸಾಧ್ಯವಿರುವಷ್ಟು ಸಂಪೂರ್ಣವಾಗಿ ಸೌವಾರ್ತಿಕ ಕೆಲಸದಲ್ಲಿ ಪಾಲ್ಗೊಳ್ಳುವುದು, ಪ್ರಾಯಶಃ ಮಾರ್ಚ್ ಮತ್ತು ತದನಂತರದ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವುದೂ ಒಳಗೂಡಿದೆ.—2 ತಿಮೊ. 4:5.
23 ನಾವೆಲ್ಲರೂ ಈ ಜ್ಞಾಪಕಾಚರಣೆಯ ಸಮಯದಲ್ಲಿ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರುವುದರಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತಾಗಲಿ ಎಂಬುದು ನಮ್ಮ ಹೃತ್ಪೂರ್ವಕ ಪ್ರಾರ್ಥನೆಯಾಗಿದೆ. ಮತ್ತು ಹೀಗೆ ಯೆಹೋವನು ನಮಗಾಗಿ ಮಾಡಿರುವ ಎಲ್ಲ ವಿಷಯಗಳಿಗಾಗಿ ನಮ್ಮ ಗಣ್ಯತೆಯ ಗಾಢತೆಯನ್ನು ನಾವು ತೋರಿಸುತ್ತಿರುವೆವು.
[ಪುಟ 6 ರಲ್ಲಿರುವ ಚೌಕ]
ಮಾರ್ಚ್ 2002ಕ್ಕಾಗಿ ವೈಯಕ್ತಿಕ ಕ್ಷೇತ್ರ ಸೇವಾ ಶೆಡ್ಯೂಲ್
ಭಾನುವಾರ ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರ
1 2
ಪತ್ರಿಕಾ ದಿನ
3 4 5 6 7 8 9
ಪತ್ರಿಕಾ ದಿನ
10 11 12 13 14 15 16
ಪತ್ರಿಕಾ ದಿನ
17 18 19 20 21 22 23
ಪತ್ರಿಕಾ ದಿನ
24 25 26 27 28 29 30
ಜ್ಞಾಪಕಾಚರಣೆ ಪತ್ರಿಕಾ ದಿನ
ಸೂರ್ಯಾಸ್ತಮಾನದ
31 ನಂತರ
ಮಾರ್ಚ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ನೀವು ಒಟ್ಟು 50 ತಾಸುಗಳನ್ನು ಶೆಡ್ಯೂಲ್ ಮಾಡಬಲ್ಲಿರೋ?