ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಧೈರ್ಯವನ್ನು ಒಟ್ಟುಗೂಡಿಸಿರಿ
1 ನೀವು ಪುನರ್ಭೇಟಿಗಳನ್ನು ಮಾಡುವುದರಲ್ಲಿ ಆನಂದಿಸುತ್ತೀರೊ? ಅನೇಕ ಪ್ರಚಾರಕರು ಆನಂದಿಸುತ್ತಾರೆ. ನೀವು ಆರಂಭದಲ್ಲಿ ಹೆದರುತ್ತಿದ್ದಿರಬಹುದು. ವಿಶೇಷವಾಗಿ, ಆರಂಭದಲ್ಲಿ ಸಂಪರ್ಕಿಸಲ್ಪಟ್ಟಾಗ ಸ್ವಲ್ಪವೇ ಆಸಕ್ತಿಯನ್ನು ತೋರಿಸಿದ ಮನೆಯವರನ್ನು ಪುನಃ ಸಂದರ್ಶಿಸುವಾಗ. ಆದರೆ ಪುನರ್ಭೇಟಿಗಳನ್ನು ಮಾಡುವುದರಲ್ಲಿ ‘ಸುವಾರ್ತೆಯನ್ನು ತಿಳಿಸಲಿಕ್ಕಾಗಿ ನಮ್ಮ ದೇವರ ಮೂಲಕ ನೀವು ಧೈರ್ಯವನ್ನು ಒಟ್ಟುಗೂಡಿಸಿ’ಕೊಂಡಂತೆ (NW), ಈ ಕೆಲಸವು ಎಷ್ಟು ಸುಲಭ ಮತ್ತು ಪ್ರತಿಫಲದಾಯಕವಾಗಿರಲು ಸಾಧ್ಯವಿದೆಯೆಂಬುದನ್ನು ಕಂಡುಕೊಳ್ಳಲು ನೀವು ಆಶ್ಚರ್ಯಪಟ್ಟಿದ್ದಿರಬಹುದು. (1 ಥೆಸ. 2:2) ಹೇಗೆ?
2 ವಾಸ್ತವವಾಗಿ, ಒಂದು ಪುನರ್ಭೇಟಿ ಮತ್ತು ಆರಂಭದ ಭೇಟಿಯ ನಡುವೆ ಒಂದು ಪ್ರಾಮುಖ್ಯ ವ್ಯತ್ಯಾಸವಿದೆ. ಪುನರ್ಭೇಟಿಯನ್ನು ಒಬ್ಬ ಅಪರಿಚಿತನಿಗಲ್ಲ, ಬದಲಾಗಿ ಒಬ್ಬ ಪರಿಚಿತ ವ್ಯಕ್ತಿಗೆ ಮಾಡಲಾಗುತ್ತದೆ. ಮತ್ತು ಒಬ್ಬ ಅಪರಿಚಿತನೊಂದಿಗೆ ಮಾತಾಡುವುದಕ್ಕಿಂತ, ಪರಿಚಿತನಾಗಿರುವವನೊಂದಿಗೆ ಸಂಭಾಷಿಸುವುದು ಸಾಮಾನ್ಯವಾಗಿ ಹೆಚ್ಚು ಸುಲಭ. ಈ ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಫಲಿಸುವ ಹೇರಳವಾದ ಪ್ರತಿಫಲಗಳ ಕುರಿತಾದರೊ, ಪುನರ್ಭೇಟಿಗಳು ಫಲಪ್ರದವಾದ ಮನೆ ಬೈಬಲ್ ಅಭ್ಯಾಸಗಳಿಗೆ ನಡಿಸಬಹುದು.
3 ಮನೆಯಿಂದ ಮನೆಗೆ ಸಾರುವುದು, ನಾವು ಈ ಹಿಂದೆ ಭೇಟಿ ನೀಡಿದಾಗ ಆಸಕ್ತರಾಗಿರದಿದ್ದ ಜನರನ್ನು ಸಂದರ್ಶಿಸುವುದನ್ನು ಒಳಗೊಳ್ಳುತ್ತದೆ. ಹಾಗಾದರೆ ನಾವು ಸಂದರ್ಶಿಸುತ್ತಾ ಇರುವುದೇಕೆ? ಜನರ ಪರಿಸ್ಥಿತಿಗಳು ಬದಲಾಗುವುದು ಗ್ರಾಹ್ಯ ಮತ್ತು ಹಿಂದಿನ ಭೇಟಿಯಲ್ಲಿ ಉದಾಸೀನನು ಅಥವಾ ವಿರೋಧಭಾವದವನು ಆಗಿ ತೋರಿದಂತಹ ಒಬ್ಬ ವ್ಯಕ್ತಿಯು, ನಾವು ಮುಂದಿನ ಸಲ ಸಂದರ್ಶಿಸುವಾಗ ಆಸಕ್ತನಾಗಿರಬಹುದೆಂಬುದನ್ನು ನಾವು ಗ್ರಹಿಸುತ್ತೇವೆ. ಅದನ್ನು ಮನಸ್ಸಿನಲ್ಲಿಟ್ಟವರಾಗಿ, ನಾವು ಚೆನ್ನಾಗಿ ತಯಾರಿ ಮಾಡುತ್ತೇವೆ ಮತ್ತು ನಾವು ಈ ಸಲ ಹೇಳುವ ಯಾವುದೇ ಒಂದು ವಿಷಯವು, ಒಂದು ಅನುಕೂಲಕರ ಪ್ರತಿಕ್ರಿಯೆಯನ್ನು ಉಂಟುಮಾಡಲೆಂದು ಯೆಹೋವನ ಆಶೀರ್ವಾದಕ್ಕಾಗಿ ಪ್ರಾರ್ಥಿಸುತ್ತೇವೆ.
4 ನಮ್ಮ ಮನೆಯಿಂದ ಮನೆಯ ಕೆಲಸದಲ್ಲಿ, ಈ ಹಿಂದೆ ಯಾವುದೇ ಆಸಕ್ತಿಯನ್ನು ತೋರಿಸದಿದ್ದ ವ್ಯಕ್ತಿಗೆ ನಾವು ಸಿದ್ಧಮನಸ್ಕರಾಗಿ ಸಾರುವುದಾದರೆ, ರಾಜ್ಯ ಸಂದೇಶದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸುವ ಒಬ್ಬ ವ್ಯಕ್ತಿಯನ್ನು ನಾವು ಇನ್ನೂ ಹೆಚ್ಚಿನ ಸಿದ್ಧಮನಸ್ಸಿನಿಂದ ಪುನಃ ಸಂದರ್ಶಿಸಬಾರದೊ?—ಅ. ಕೃ. 10:34, 35.
5 ಒಬ್ಬ ಪ್ರಚಾರಕನು ತಾಳ್ಮೆಯಿಂದ ನಮ್ಮ ಮನೆಗೆ ಪುನರ್ಭೇಟಿಗಳನ್ನು ಮಾಡಿದ ಕಾರಣದಿಂದ, ನಮ್ಮಲ್ಲಿ ಅನೇಕರು ಇಂದು ಸತ್ಯದಲ್ಲಿದ್ದೇವೆ. ಇವರಲ್ಲಿ ನೀವು ಒಬ್ಬರಾಗಿರುವಲ್ಲಿ, ನೀವು ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ಆ ಪ್ರಚಾರಕನ ಮೇಲೆ ನಾನು ಯಾವ ಆರಂಭಿಕ ಪ್ರಭಾವವನ್ನು ಬೀರಿದೆ? ನಾನು ರಾಜ್ಯ ಸಂದೇಶವನ್ನು ಪ್ರಥಮವಾಗಿ ಕೇಳಿದ ಕೂಡಲೇ ಅದನ್ನು ಸ್ವೀಕರಿಸಿದೆನೊ? ನಾನು ಉದಾಸೀನಭಾವದವನಾಗಿ ತೋರಿದ್ದಿರಬಹುದೊ?’ ಪುನಃ ಸಂದರ್ಶಿಸಿದಂತಹ ಪ್ರಚಾರಕನು, ನಾವು ಒಂದು ಪುನರ್ಭೇಟಿಗಾಗಿ ಅರ್ಹರಾಗಿದ್ದೇವೆಂದು ಪರಿಗಣಿಸಿ, ‘ದೇವರ ಮೂಲಕ ಧೈರ್ಯವನ್ನು ಒಟ್ಟುಗೂಡಿಸಿಕೊಂಡು,’ ಸಂದರ್ಶನವನ್ನು ಮಾಡಿ, ನಮಗೆ ಸತ್ಯವನ್ನು ಕಲಿಸುತ್ತಾ ಮುಂದುವರಿದುದಕ್ಕಾಗಿ ನಾವು ಸಂತೋಷಿತರಾಗಿರಬೇಕು. ಆರಂಭದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸುವುದಾದರೂ ಅನಂತರ ನಮ್ಮಿಂದ ತಪ್ಪಿಸಿಕೊಳ್ಳುತ್ತಿರುವಂತೆ ತೋರುವ ವ್ಯಕ್ತಿಗಳ ಕುರಿತಾಗಿ ಏನು? ಈ ಮುಂದಿನ ಅನುಭವವು ತೋರಿಸುವಂತೆ, ಒಂದು ಸಕಾರಾತ್ಮಕವಾದ ಮನೋಭಾವವು ಅತ್ಯಾವಶ್ಯಕ.
6 ಒಂದು ಮುಂಜಾನೆ ಬೀದಿ ಸಾಕ್ಷಿಕಾರ್ಯದಲ್ಲಿ ಒಳಗೊಂಡಿದ್ದಾಗ, ಇಬ್ಬರು ಪ್ರಚಾರಕರು, ಒಂದು ತಳ್ಳುಬಂಡಿಯಲ್ಲಿ ಮಗುವನ್ನು ತಳ್ಳಿಕೊಂಡು ಹೋಗುತ್ತಿದ್ದ ಒಬ್ಬ ಯುವ ಸ್ತ್ರೀಯನ್ನು ಸಂಧಿಸಿದರು. ಆ ಸ್ತ್ರೀಯು ಒಂದು ಪತ್ರಿಕೆಯನ್ನು ಸ್ವೀಕರಿಸಿ, ಆ ಸಾಕ್ಷಿಗಳನ್ನು ಮುಂದಿನ ಆದಿತ್ಯವಾರ ತನ್ನ ಮನೆಗೆ ಬರುವಂತೆ ಆಮಂತ್ರಿಸಿದಳು. ಅವರು ನೇಮಿತ ಸಮಯಕ್ಕೆ ಆಗಮಿಸಿದರು, ಆದರೆ ಆ ಮನೆಯವಳು, ತನಗೆ ಮಾತಾಡಲು ಸಮಯವಿಲ್ಲವೆಂದು ಅವರಿಗೆ ಹೇಳಿದಳು. ಆದಾಗಲೂ, ಮುಂದಿನ ವಾರ ತಾನು ಇರುವೆನೆಂದು ಅವಳು ಮಾತುಕೊಟ್ಟಳು. ಅವಳು ತನ್ನ ಭೇಟಿನಿಶ್ಚಯಕ್ಕನುಸಾರವಾಗಿ ನಡೆದುಕೊಳ್ಳುವಳೊ ಇಲ್ಲವೊ ಎಂಬುದರ ಕುರಿತಾಗಿ ಸಹೋದರಿಯರು ಸಂದೇಹಿಸಿದರು, ಆದರೆ ಅವರು ಹಿಂದಿರುಗಿ ಹೋದಾಗ, ಆ ಸ್ತ್ರೀಯು ಅವರಿಗಾಗಿ ಕಾಯುತ್ತಾ ಇದ್ದಳು. ಒಂದು ಅಭ್ಯಾಸವನ್ನು ಆರಂಭಿಸಲಾಯಿತು, ಮತ್ತು ಆ ಸ್ತ್ರೀಯ ಪ್ರಗತಿಯು ಆಶ್ಚರ್ಯಗೊಳಿಸುವಂತಹದ್ದಾಗಿತ್ತು. ಸ್ವಲ್ಪ ಸಮಯದೊಳಗೆ, ಅವಳು ಕ್ರಮವಾಗಿ ಕೂಟಗಳಿಗೆ ಹಾಜರಾಗಲು ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಆರಂಭಿಸಿದಳು. ಅವಳು ಈಗ ದೀಕ್ಷಾಸ್ನಾನ ಪಡೆದುಕೊಂಡಿದ್ದಾಳೆ.
7 ಆರಂಭದ ಭೇಟಿಯಲ್ಲಿ ತಳಪಾಯವನ್ನು ಹಾಕಿರಿ: ಒಂದು ಯಶಸ್ವೀ ಪುನರ್ಭೇಟಿಗಾಗಿ ತಳಪಾಯವು, ಅನೇಕವೇಳೆ ಆರಂಭದ ಭೇಟಿಯಲ್ಲಿ ಹಾಕಲ್ಪಡುತ್ತದೆ. ಮನೆಯವನ ಹೇಳಿಕೆಗಳನ್ನು ಜಾಗರೂಕತೆಯಿಂದ ಆಲಿಸಿರಿ. ಅವು ನಿಮಗೆ ಏನನ್ನು ತಿಳಿಸುತ್ತವೆ? ಅವನು ಧಾರ್ಮಿಕ ಪ್ರವೃತ್ತಿಯುಳ್ಳವನಾಗಿದ್ದಾನೊ? ಅವನು ಸಾಮಾಜಿಕ ವಿವಾದಾಂಶಗಳ ಕುರಿತಾಗಿ ಚಿಂತಿತನಾಗಿದ್ದಾನೊ? ಅವನು ವಿಜ್ಞಾನದಲ್ಲಿ, ಇತಿಹಾಸದಲ್ಲಿ, ಪರಿಸರದಲ್ಲಿ ಆಸಕ್ತನಾಗಿದ್ದಾನೊ? ಭೇಟಿಯ ಅಂತ್ಯದಲ್ಲಿ, ನೀವು ಒಂದು ವಿಚಾರಪ್ರೇರಕ ಪ್ರಶ್ನೆಯನ್ನು ಎಬ್ಬಿಸಬಹುದು, ಮತ್ತು ನೀವು ಹಿಂದಿರುಗಿ ಬಂದಾಗ ಬೈಬಲಿನ ಉತ್ತರವನ್ನು ಚರ್ಚಿಸುವಿರೆಂದು ಮಾತುಕೊಡಬಹುದು.
8 ಉದಾಹರಣೆಗಾಗಿ, ಒಂದು ಪ್ರಮೋದವನ ಭೂಮಿಯ ಕುರಿತಾದ ಬೈಬಲಿನ ವಾಗ್ದಾನಕ್ಕೆ ಮನೆಯವನು ಪ್ರತಿಕ್ರಿಯಿಸುವಲ್ಲಿ, ಆ ವಿಷಯದ ಕುರಿತಾದ ಹೆಚ್ಚಿನ ಚರ್ಚೆಯು ಸೂಕ್ತವಾಗಿರಬಹುದು. ನೀವು ಹೊರಡುವುದಕ್ಕೆ ಸ್ವಲ್ಪ ಮುಂಚೆ, ಹೀಗೆ ಕೇಳಬಹುದು: “ಈ ವಾಗ್ದಾನವನ್ನು ದೇವರು ನೆರವೇರಿಸುವನೆಂಬುದರ ವಿಷಯದಲ್ಲಿ ನಾವು ಹೇಗೆ ಖಚಿತರಾಗಿರಬಲ್ಲೆವು?” ಅನಂತರ ಕೂಡಿಸಿರಿ: “ಪ್ರಾಯಶಃ ನಾನು ಕುಟುಂಬದ ಉಳಿದ ಸದಸ್ಯರು ಮನೆಯಲ್ಲಿರುವಾಗ ಬಂದು, ಆಗ ಈ ಪ್ರಶ್ನೆಗೆ ಬೈಬಲಿನ ಉತ್ತರವನ್ನು ನಿಮಗೆ ತೋರಿಸಬಲ್ಲೆ.”
9 ಮನೆಯವನು, ಯಾವುದೇ ನಿರ್ದಿಷ್ಟ ವಿಷಯದಲ್ಲಿ ಆಸಕ್ತಿಯನ್ನು ತೋರಿಸಿರದಿದ್ದಲ್ಲಿ, ನಮ್ಮ ರಾಜ್ಯದ ಸೇವೆಯ ಹಿಂದಿನ ಪುಟದಲ್ಲಿ ಕೊಡಲ್ಪಟ್ಟಿರುವ ನಿರೂಪಣೆಗಳಲ್ಲಿರುವ ಪ್ರಶ್ನೆಗಳಲ್ಲಿ ಒಂದನ್ನು ನೀವು ಎಬ್ಬಿಸಸಾಧ್ಯವಿದೆ ಮತ್ತು ಅದನ್ನು ನಿಮ್ಮ ಮುಂದಿನ ಚರ್ಚೆಗಾಗಿ ಒಂದು ಆಧಾರದೋಪಾದಿ ಉಪಯೋಗಿಸಸಾಧ್ಯವಿದೆ.
10 ನಿಷ್ಕೃಷ್ಟವಾದ ಲಿಖಿತ ರೆಕಾರ್ಡುಗಳನ್ನು ಇಡಿರಿ: ನಿಮ್ಮ ಮನೆಯಿಂದ ಮನೆಯ ರೆಕಾರ್ಡು, ನಿಷ್ಕೃಷ್ಟವೂ ಪೂರ್ಣವೂ ಆದದ್ದಾಗಿರಬೇಕು. ನೀವು ಮನೆಯನ್ನು ಬಿಟ್ಟುಹೋದ ಕೂಡಲೇ ಮನೆಯವನ ಹೆಸರು ಮತ್ತು ವಿಳಾಸವನ್ನು ಬರೆದುಕೊಳ್ಳಿರಿ. ಮನೆಯ ನಂಬ್ರ ಅಥವಾ ಬೀದಿಯ ಹೆಸರನ್ನು ಊಹಿಸಿಕೊಳ್ಳಬೇಡಿರಿ—ಅದು ನಿಷ್ಕೃಷ್ಟವಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳಲು ಮಾಹಿತಿಯನ್ನು ಪರಿಶೀಲಿಸಿ ನೋಡಿರಿ. ವ್ಯಕ್ತಿಯ ಒಂದು ವರ್ಣನೆಯನ್ನು ಬರೆದುಕೊಳ್ಳಿರಿ. ನೀವು ಚರ್ಚಿಸಿದ ವಿಷಯ, ಓದಿದಂತಹ ಶಾಸ್ತ್ರವಚನಗಳು, ಬಿಟ್ಟಿರುವ ಯಾವುದೇ ಸಾಹಿತ್ಯ, ಮತ್ತು ನೀವು ಹಿಂದಿರುಗಿ ಹೋಗುವಾಗ ಉತ್ತರಿಸಲಿರುವ ಪ್ರಶ್ನೆಯನ್ನು ಬರೆದಿಟ್ಟುಕೊಳ್ಳಿರಿ. ಆರಂಭದ ಭೇಟಿಯ ದಿನ ಮತ್ತು ಸಮಯ, ಹಾಗೂ ನೀವು ಯಾವಾಗ ಹಿಂದಿರುಗುವಿರೆಂದು ಹೇಳಿದಿರೊ ಅದನ್ನು ಸೇರಿಸಿರಿ. ಈಗ ನಿಮ್ಮ ರೆಕಾರ್ಡು ಪೂರ್ಣವಾಗಿರುವುದರಿಂದ ಅದನ್ನು ಕಳೆದುಕೊಳ್ಳಬೇಡಿರಿ! ನೀವು ಅದನ್ನು ಇನ್ನೊಂದು ಸಲ ನೋಡಸಾಧ್ಯವಾಗುವಂತೆ ಒಂದು ಸುರಕ್ಷಿತ ಜಾಗದಲ್ಲಿಡಿರಿ. ಆ ವ್ಯಕ್ತಿಯ ಕುರಿತಾಗಿ ಮತ್ತು ಮುಂದಿನ ಸಲ ನೀವು ಸಂದರ್ಶನವನ್ನು ಹೇಗೆ ನಿರ್ವಹಿಸುವಿರಿ ಎಂಬುದರ ಕುರಿತಾಗಿ ಯೋಚಿಸುತ್ತಾ ಇರಿ.
11 ನಿಮ್ಮ ಉದ್ದೇಶಗಳು ಏನಾಗಿವೆಯೆಂಬುದನ್ನು ತಿಳಿದುಕೊಳ್ಳಿರಿ: ಪ್ರಥಮವಾಗಿ, ಆದರಣೀಯರೂ ಸ್ನೇಹಭಾವದವರೂ ಆಗಿರುವುದರಿಂದ ಮನೆಯವನನ್ನು ಆರಾಮವಾಗಿರುವಂತೆ ನಿಮ್ಮಿಂದ ಸಾಧ್ಯವಿರುವಂತಹದ್ದನ್ನು ಮಾಡಿರಿ. ತೀರ ಹೆಚ್ಚು ಕುತೂಹಲಿಗಳಾಗಿರದೆ, ನೀವು ಅವನಲ್ಲಿ ಒಬ್ಬ ವ್ಯಕ್ತಿಯೋಪಾದಿ ಆಸಕ್ತರಾಗಿದ್ದೀರೆಂಬುದನ್ನು ತೋರಿಸಿರಿ. ಅನಂತರ, ಹಿಂದಿನ ಭೇಟಿಯಲ್ಲಿ ನೀವು ಎಬ್ಬಿಸಿದಂತಹ ಯಾವುದೇ ಪ್ರಶ್ನೆಯ ಕುರಿತಾಗಿ ಅವನಿಗೆ ಜ್ಞಾಪಕಹುಟ್ಟಿಸಿರಿ. ಅವನ ಅಭಿಪ್ರಾಯಕ್ಕೆ ಜಾಗರೂಕತೆಯಿಂದ ಕಿವಿಗೊಡಿರಿ, ಮತ್ತು ಅವನ ಹೇಳಿಕೆಗಳಿಗಾಗಿ ಪ್ರಾಮಾಣಿಕವಾದ ಗಣ್ಯತೆಯನ್ನು ವ್ಯಕ್ತಪಡಿಸಿರಿ. ಅನಂತರ, ಬೈಬಲಿನ ದೃಷ್ಟಿಕೋನವು ಏಕೆ ವ್ಯಾವಹಾರಿಕವಾಗಿದೆಯೆಂಬುದನ್ನು ತೋರಿಸಿರಿ. ಸಾಧ್ಯವಿರುವಲ್ಲಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿರುವ ಸಂಬಂಧಿತವಾದ ಒಂದು ವಿಚಾರಕ್ಕೆ ಅವನನ್ನು ನಿರ್ದೇಶಿಸಿರಿ. ಪುನರ್ಭೇಟಿಗಳನ್ನು ಮಾಡುವ ನಿಮ್ಮ ಮುಖ್ಯ ಉದ್ದೇಶವು, ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವುದೇ ಎಂಬುದನ್ನು ಚೆನ್ನಾಗಿ ಮನಸ್ಸಿನಲ್ಲಿಟ್ಟುಕೊಳ್ಳಿರಿ.
12 ಜ್ಞಾನ ಪುಸ್ತಕದ ನೇರ ಶೈಲಿಯು, ನಮ್ಮಲ್ಲಿ ಹೆಚ್ಚಿನವರಿಗೆ ಬೈಬಲ್ ಅಭ್ಯಾಸಗಳಲ್ಲಿ, ವಿದ್ಯಾರ್ಥಿಗಳು ಕೂಟಗಳಿಗೆ ಹಾಜರಾಗಲು ಮತ್ತು ಯೆಹೋವನ ಸಂಸ್ಥೆಯೊಂದಿಗೆ ಸಹವಾಸಿಸುವಂತೆ ಉತ್ತೇಜಿಸಲು, ನಾವು ‘ಧೈರ್ಯವನ್ನು ಒಟ್ಟುಗೂಡಿಸು’ವಂತೆ ಪ್ರೇರಿಸಿದೆ. ಗತಕಾಲದಲ್ಲಿ, ನಮ್ಮೊಂದಿಗೆ ಸಹವಾಸಿಸುವಂತೆ ಆ ವ್ಯಕ್ತಿಗಳನ್ನು ಆಮಂತ್ರಿಸುವ ಮುಂಚೆ, ಅವರು ಸ್ವಲ್ಪ ಸಮಯದ ತನಕ ಅಭ್ಯಾಸಿಸುವ ವರೆಗೆ ಕಾಯುವ ಪ್ರವೃತ್ತಿಯುಳ್ಳವರಾಗಿದ್ದೆವು. ಈಗ, ಅನೇಕ ವಿದ್ಯಾರ್ಥಿಗಳು ಅವರು ಅಭ್ಯಾಸಿಸಲು ಆರಂಭಿಸಿದ ಕೂಡಲೇ ಕೂಟಗಳಿಗೆ ಹಾಜರಾಗುತ್ತಿದ್ದಾರೆ, ಮತ್ತು ಫಲಿತಾಂಶವಾಗಿ ಹೆಚ್ಚು ತ್ವರಿತಗತಿಯಲ್ಲಿ ಪ್ರಗತಿಯನ್ನು ಮಾಡುತ್ತಿದ್ದಾರೆ.
13 ಒಬ್ಬ ದಂಪತಿಗಳು, ಒಬ್ಬ ಸಹಕರ್ಮಿಗೆ ಅನೌಪಚಾರಿಕವಾಗಿ ಸಾಕ್ಷಿನೀಡಿದರು. ಅವನು ಸತ್ಯದಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದಾಗ, ಜ್ಞಾನ ಪುಸ್ತಕದಲ್ಲಿ ಒಂದು ಬೈಬಲ್ ಅಭ್ಯಾಸವನ್ನು ಪಡೆದುಕೊಳ್ಳುವಂತೆ ಅವರು ಅವನನ್ನು ಆಮಂತ್ರಿಸಿದರು. ಅದೇ ಸಮಯದಲ್ಲಿ, ಅವನ ಪ್ರಶ್ನೆಗಳಲ್ಲಿ ಹೆಚ್ಚಿನವು ಎಲ್ಲಿ ಉತ್ತರಿಸಲ್ಪಡುವವೊ, ಆ ಕೂಟಗಳಿಗೆ ಹಾಜರಾಗತಕ್ಕದ್ದೆಂದು ಅವನಿಗೆ ಹೇಳಿದರು. ಆ ಮನುಷ್ಯನು ಅಭ್ಯಾಸಮಾಡುವ ಆಮಂತ್ರಣವನ್ನು ಸಿದ್ಧಮನಸ್ಕನಾಗಿ ಸ್ವೀಕರಿಸಿದನು ಮಾತ್ರವಲ್ಲ, ವಾರದಲ್ಲಿ ಎರಡು ಸಲ ಅಭ್ಯಾಸಿಸಿದನು ಮತ್ತು ರಾಜ್ಯ ಸಭಾಗೃಹದಲ್ಲಿ ಕ್ರಮವಾಗಿ ಕೂಟಗಳಿಗೆ ಹಾಜರಾಗಲೂ ಆರಂಭಿಸಿದನು.
14 ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಉಪಯೋಗಿಸಿರಿ: “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ನಾವು ಪಡೆದೆವು. ದೇವರ ಭಯವುಳ್ಳ ಜನರೊಂದಿಗೆ—ಅವರ ಶಿಕ್ಷಣದ ಮಟ್ಟವು ಏನೇ ಆಗಿರಲಿ—ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಈ ಬ್ರೋಷರ್ ಉಪಯೋಗಕರವಾಗಿದೆ. ಬೈಬಲಿನ ಮೂಲ ಬೋಧನೆಗಳನ್ನು ಆವರಿಸುತ್ತಾ, ಅದರಲ್ಲಿ ವ್ಯಾಪಕವಾದ ಒಂದು ಅಭ್ಯಾಸ ಪಾಠಕ್ರಮ ಅಡಕವಾಗಿದೆ. ದೇವರ ಜ್ಞಾನವನ್ನು ಕೊಡುವುದರಲ್ಲಿ ಈ ಪ್ರಕಾಶನವು ಒಂದು ಅತಿ ಪರಿಣಾಮಕಾರಿ ಸಾಧನವಾಗಿರುವುದು. ಅದು ಸತ್ಯವನ್ನು ಎಷ್ಟು ಸ್ಪಷ್ಟವಾಗಿ ಮತ್ತು ಸರಳವಾಗಿ ವಿವರಿಸುತ್ತದೆಂದರೆ, ನಮ್ಮಲ್ಲಿ ಕಾರ್ಯತಃ ಪ್ರತಿಯೊಬ್ಬರೂ, ದೇವರ ಆವಶ್ಯಕತೆಗಳನ್ನು ಇತರರಿಗೆ ಕಲಿಸುವುದರಲ್ಲಿ ಅದನ್ನು ಉಪಯೋಗಿಸಲು ಶಕ್ತರಾಗಿರುವೆವು. ಸಂಭವನೀಯವಾಗಿ, ಅನೇಕ ಪ್ರಚಾರಕರಿಗೆ ಈ ಬ್ರೋಷರಿನಲ್ಲಿ ಒಂದು ಬೈಬಲ್ ಅಭ್ಯಾಸವನ್ನು ನಡಿಸುವ ಸುಯೋಗವಿರುವುದು.
15 ಜ್ಞಾನ ಪುಸ್ತಕದ ಅಭ್ಯಾಸಮಾಡಲು ತಮಗೆ ಸಮಯವಿಲ್ಲವೆಂದು ಭಾವಿಸುವ ಕೆಲವು ವ್ಯಕ್ತಿಗಳು, ಅಪೇಕ್ಷಿಸು ಬ್ರೋಷರನ್ನು ಅಭ್ಯಾಸಿಸುವುದರಲ್ಲಿ ಸಂಕ್ಷಿಪ್ತವಾದ ಸೆಷನ್ಗಳಿಗಾಗಿ ಸಿದ್ಧರಾಗಿರಬಹುದು. ಅವರೇನನ್ನು ಕಲಿಯುವರೊ ಅದರಿಂದ ಅವರು ರೋಮಾಂಚಗೊಳ್ಳುವರು! ಕೇವಲ ಎರಡು ಅಥವಾ ಮೂರು ಪುಟಗಳಲ್ಲಿ ಅವರು, ಶತಮಾನಗಳಿಂದ ಜನರು ವಿಚಾರಮಾಡಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವರು: ದೇವರು ಯಾರು? ಪಿಶಾಚನು ಯಾರು? ಭೂಮಿಗಾಗಿ ದೇವರ ಉದ್ದೇಶವು ಏನು? ದೇವರ ರಾಜ್ಯ ಏನು? ಸತ್ಯ ಧರ್ಮವನ್ನು ನೀವು ಹೇಗೆ ಕಂಡುಕೊಳ್ಳಬಲ್ಲಿರಿ? ಈ ಬ್ರೋಷರ್ ಸತ್ಯವನ್ನು ಸರಳ ಶಬ್ದಗಳಲ್ಲಿ ಪ್ರಸ್ತುತಪಡಿಸುವುದಾದರೂ, ಅದರ ಸಂದೇಶವು ತುಂಬ ಪ್ರಬಲವಾದದ್ದಾಗಿದೆ. ದೀಕ್ಷಾಸ್ನಾನ ಪಡೆದುಕೊಳ್ಳಲಿಕ್ಕಿರುವ ಅಭ್ಯರ್ಥಿಗಳೊಂದಿಗೆ ಹಿರಿಯರು ಪುನರ್ವಿಮರ್ಶಿಸುವ ಮೂಲಭೂತ ವಿಷಯಗಳನ್ನು ಅದು ಆವರಿಸುತ್ತದೆ ಮತ್ತು ಜ್ಞಾನ ಪುಸ್ತಕದಲ್ಲಿ ಹೆಚ್ಚು ಸಮಗ್ರವಾದ ಒಂದು ಅಧ್ಯಯನಕ್ಕಾಗಿ ಒಂದು ಆರಂಭದ ಸಾಧನವಾಗಿ ಕಾರ್ಯನಡಿಸಬಲ್ಲದು.
16 ಒಂದು ಪುನರ್ಭೇಟಿಯಲ್ಲಿ ಒಂದು ಅಭ್ಯಾಸವನ್ನು ಮಾಡುವಂತೆ ಕೇಳಲಿಕ್ಕಾಗಿ ನೀವು ಕೇವಲ ಹೀಗೆ ಹೇಳಬಹುದು: “ಕೇವಲ ಕೆಲವೊಂದು ನಿಮಿಷಗಳಲ್ಲಿ, ನೀವು ಪ್ರಾಮುಖ್ಯವಾದ ಒಂದು ಪ್ರಶ್ನೆಗೆ ಉತ್ತರವನ್ನು ಪಡೆಯಬಲ್ಲಿರೆಂಬುದು ನಿಮಗೆ ತಿಳಿದಿತ್ತೊ?” ಅನಂತರ, ಬ್ರೋಷರಿನ ಪಾಠಗಳ ಆರಂಭದಲ್ಲಿ ಕಂಡುಬರುವ ಒಂದು ಪ್ರಶ್ನೆಯನ್ನು ಕೇಳಿರಿ. ಉದಾಹರಣೆಗಾಗಿ, ಒಂದು ಚರ್ಚ್ ಹಿನ್ನೆಲೆಯಿರುವ ಒಬ್ಬ ವ್ಯಕ್ತಿಯನ್ನು ನೀವು ಸಂದರ್ಶಿಸುತ್ತಿರುವಲ್ಲಿ, ನೀವು ಹೀಗೆ ಹೇಳಬಹುದು: “ಗತಕಾಲದಲ್ಲಿ ಯೇಸು ಜನರನ್ನು ಗುಣಪಡಿಸಿದನೆಂಬುದು ನಮಗೆ ತಿಳಿದಿದೆ. ಆದರೆ ಭವಿಷ್ಯತ್ತಿನಲ್ಲಿ, ಯೇಸು ಅಸ್ವಸ್ಥರಿಗಾಗಿ, ವೃದ್ಧರಿಗಾಗಿ, ಸತ್ತವರಿಗಾಗಿ ಏನು ಮಾಡುವನು?” ಉತ್ತರಗಳು ಪಾಠ 5ರಲ್ಲಿ ಕಂಡುಬರುತ್ತವೆ. “ದೇವರು ಎಲ್ಲ ಪ್ರಾರ್ಥನೆಗಳನ್ನು ಆಲಿಸುತ್ತಾನೊ?” ಎಂಬ ಪ್ರಶ್ನೆಯಿಂದ ಧಾರ್ಮಿಕ ಒಲವಿರುವ ಯಾವ ವ್ಯಕ್ತಿಯೂ ಕುತೂಹಲಪಡಬಹುದು. ಅದು ಪಾಠ 7ರಲ್ಲಿ ಉತ್ತರಿಸಲ್ಪಟ್ಟಿದೆ. “ದೇವರು ಹೆತ್ತವರಿಂದ ಹಾಗೂ ಮಕ್ಕಳಿಂದ ಏನನ್ನು ಅಪೇಕ್ಷಿಸುತ್ತಾನೆ?” ಎಂಬುದನ್ನು ಕುಟುಂಬ ಸದಸ್ಯರು ತಿಳಿಯಲು ಬಯಸುವರು. ಅವರು ಪಾಠ 8ನ್ನು ಅಭ್ಯಾಸಿಸಿದಂತೆ ಅದನ್ನು ಕಂಡುಕೊಳ್ಳುವರು. ಬೇರೆ ಪ್ರಶ್ನೆಗಳು ಹೀಗಿವೆ: “ಸತ್ತವರು ಜೀವಿತರನ್ನು ಹಾನಿಪಡಿಸಬಲ್ಲರೊ?” ಎಂಬುದು ಪಾಠ 11ರಲ್ಲಿ ವಿವರಿಸಲ್ಪಟ್ಟಿದೆ; “ಕ್ರೈಸ್ತರೆಂದು ಹೇಳಿಕೊಳ್ಳುವ ಇಷ್ಟೊಂದು ಧರ್ಮಗಳು ಏಕೆ ಇವೆ?” ಇದು ಪಾಠ 13ರಲ್ಲಿ ಚರ್ಚಿಸಲ್ಪಟ್ಟಿದೆ; ಮತ್ತು ಪಾಠ 16ರಲ್ಲಿ “ದೇವರ ಸ್ನೇಹಿತರಾಗಲು ನೀವು ಏನು ಮಾಡಬೇಕು?” ಎಂಬ ವಿಷಯವು ಆವರಿಸಲ್ಪಟ್ಟಿದೆ.
17 ಬೇರೆ ಭಾಷೆಯನ್ನಾಡುವವರಿಗೆ ಸಹಾಯ ಮಾಡಿರಿ: ಬೇರೆ ಭಾಷೆಯನ್ನಾಡುವ ಮನೆಯವರ ಕುರಿತಾಗಿ ಏನು? ಸಾಧ್ಯವಿರುವಲ್ಲಿ, ಅವರಿಗೆ ಚೆನ್ನಾಗಿ ತಿಳಿದಿರುವ ಭಾಷೆಯಲ್ಲಿ ಅವರಿಗೆ ಕಲಿಸಬೇಕು. (1 ಕೊರಿಂ. 14:9) ಆ ಮನೆಯವನ ಭಾಷೆಯನ್ನು ಮಾತಾಡಬಲ್ಲ ಒಬ್ಬ ಅಥವಾ ಹೆಚ್ಚು ಪ್ರಚಾರಕರು ನಿಮ್ಮ ಸಭೆಯಲ್ಲಿರಬಹುದು. ಆದುದರಿಂದ ಅವರನ್ನು ಮನೆಯವನಿಗೆ ಪರಿಚಯಿಸಿದ ಬಳಿಕ ನೀವು ಆ ಸಂದರ್ಶನವನ್ನು ಅವರಲ್ಲೊಬ್ಬರಿಗೆ ಕೊಡಬಹುದು. ಆ ಭಾಷೆಯಲ್ಲಿ ಪ್ರಾಯಶಃ ಹತ್ತಿರದಲ್ಲೇ ಒಂದು ಸಭೆ ಅಥವಾ ಪುಸ್ತಕ ಅಭ್ಯಾಸದ ಗುಂಪು ಕೂಡ ಇರಬಹುದು. ಹತ್ತಿರದಲ್ಲಿ ಯಾವುದೇ ಸಭೆಗಳು ಅಥವಾ ಗುಂಪುಗಳು ಇರದಿದ್ದಲ್ಲಿ ಮತ್ತು ಮನೆಯವನ ಭಾಷೆಯನ್ನಾಡಬಲ್ಲ ಯಾವುದೇ ಸ್ಥಳಿಕ ಪ್ರಚಾರಕರು ಇರದಿರುವಲ್ಲಿ, ಪ್ರಚಾರಕನು ಎರಡು ಭಾಷೆಗಳಲ್ಲಿ ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸುತ್ತಾ ಮನೆಯವನೊಂದಿಗೆ ಅಭ್ಯಾಸಿಸಲು ಪ್ರಯತ್ನಿಸಸಾಧ್ಯವಿದೆ.
18 ಇಂಗ್ಲಿಷ್ ಭಾಷೆಯನ್ನಾಡುವ ಒಬ್ಬ ಪ್ರಚಾರಕನು, ವಿಯೆಟ್ನಾಮೀಸ್ ಭಾಷೆಯನ್ನಾಡುವ ಒಬ್ಬ ಪುರುಷನೊಂದಿಗೆ—ಅವನ ಹೆಂಡತಿ ಥಾಯ್ ಭಾಷೆಯನ್ನಾಡುವವಳು—ಅಭ್ಯಾಸವನ್ನು ಆರಂಭಿಸಿದನು. ಇಂಗ್ಲಿಷ್, ವಿಯೆಟ್ನಾಮೀಸ್ ಮತ್ತು ಥಾಯ್ ಭಾಷೆಗಳಲ್ಲಿನ ಪ್ರಕಾಶನಗಳು ಮತ್ತು ಬೈಬಲ್ಗಳನ್ನು ಅಭ್ಯಾಸದ ಸಮಯದಲ್ಲಿ ಉಪಯೋಗಿಸಲಾಯಿತು. ಆರಂಭದಲ್ಲಿ ಭಾಷೆಯ ತಡೆಯು ಪಂಥಾಹ್ವಾನವನ್ನು ಒಡ್ಡಿದರೂ, ಆ ಪ್ರಚಾರಕನು ಬರೆಯುವುದು: “ದಂಪತಿಗಳ ಆತ್ಮಿಕ ಬೆಳವಣಿಗೆಯು ತ್ವರಿತವಾಗಿರುತ್ತದೆ. ತಮ್ಮ ಇಬ್ಬರು ಮಕ್ಕಳೊಂದಿಗೆ ಕೂಟಗಳಿಗೆ ಹಾಜರಾಗುವ ಅಗತ್ಯವನ್ನು ಅವರು ಮನಗಂಡಿದ್ದಾರೆ, ಮತ್ತು ಅವರು ಪ್ರತಿ ರಾತ್ರಿ ಬೈಬಲನ್ನು ಒಂದು ಕುಟುಂಬದೋಪಾದಿ ಓದುತ್ತಿದ್ದಾರೆ. ಅವರ ಆರು ವರ್ಷ ಪ್ರಾಯದ ಮಗಳಿಗೆ ತನ್ನ ಸ್ವಂತ ಬೈಬಲ್ ಅಭ್ಯಾಸವನ್ನು ನಡಿಸುತ್ತಾಳೆ.”
19 ಬೇರೆ ಭಾಷೆಯನ್ನಾಡುವ ಜನರೊಂದಿಗೆ ಅಭ್ಯಾಸಿಸುವಾಗ, ನಿಧಾನವಾಗಿ ಮಾತಾಡಿರಿ, ಸ್ಪಷ್ಟವಾಗಿ ಉಚ್ಚಾರಣೆಮಾಡಿರಿ, ಮತ್ತು ಸರಳವಾದ ಶಬ್ದಗಳು ಮತ್ತು ವಾಕ್ಯರಚನೆಗಳನ್ನು ಬಳಸಿರಿ. ಆದಾಗಲೂ, ಇನ್ನೊಂದು ಭಾಷೆಯನ್ನಾಡುವ ಜನರನ್ನು ಘನತೆಯಿಂದ ಉಪಚರಿಸಬೇಕೆಂಬುದನ್ನು ಮನಸ್ಸಿನಲ್ಲಿಡಿರಿ. ಅವರು ಶಿಶುಗಳಾಗಿದ್ದಾರೊ ಎಂಬಂತೆ ಅವರನ್ನು ಉಪಚರಿಸಬಾರದು.
20 ಅಪೇಕ್ಷಿಸು ಬ್ರೋಷರಿನಲ್ಲಿರುವ ಸುಂದರ ಚಿತ್ರಗಳ ಸದುಪಯೋಗವನ್ನು ಮಾಡಿರಿ. “ಒಂದು ಚಿತ್ರವು ಒಂದು ಸಾವಿರ ಮಾತುಗಳಿಗೆ ಸಮಾನ” ಆಗಿರುವಲ್ಲಿ, ಬ್ರೋಷರಿನಲ್ಲಿರುವ ಹತ್ತಾರು ಚಿತ್ರಗಳು ಮನೆಯವನಿಗೆ ಬಹಳ ಅರ್ಥವತ್ತಾಗಿರಬಲ್ಲವು. ಅವನು ತನ್ನ ಸ್ವಂತ ಬೈಬಲಿನಲ್ಲಿ ವಚನಗಳನ್ನು ಓದುವಂತೆ ಆಮಂತ್ರಿಸಿರಿ. ನೀವು ಮಾತಾಡುವ ಭಾಷೆಯನ್ನು ತಿಳಿದಿರುವ ಒಬ್ಬ ಕುಟುಂಬ ಸದಸ್ಯನು, ಅದರ ಅರ್ಥವಿವರಣೆಮಾಡಲು ಲಭ್ಯವಿರುವ ಒಂದು ಸಮಯದಲ್ಲಿ ಅಭ್ಯಾಸವನ್ನು ನಡೆಸಲು ಸಾಧ್ಯವಿರುವಲ್ಲಿ, ಅದು ನಿಸ್ಸಂದೇಹವಾಗಿ ಉಪಯುಕ್ತವಾಗಿರುವುದು.—ನಮ್ಮ ರಾಜ್ಯದ ಸೇವೆ(ಇಂಗ್ಲಿಷ್)ಯ ಈ ಸಂಚಿಕೆಗಳನ್ನು ನೋಡಿರಿ: ನವೆಂಬರ್ 1990, ಪುಟಗಳು 3-4; ಎಪ್ರಿಲ್ 1984, ಪುಟ 8.
21 ಪುನರ್ಭೇಟಿಗಳನ್ನು ತಡವಿಲ್ಲದೆ ಮಾಡಿರಿ: ಒಂದು ಪುನರ್ಭೇಟಿಯನ್ನು ಮಾಡುವ ಮುಂಚೆ ನೀವು ಎಷ್ಟು ಸಮಯ ಕಾಯಬೇಕು? ಕೆಲವು ಪ್ರಚಾರಕರು ಆರಂಭದ ಸಂಪರ್ಕದ ಒಂದು ಅಥವಾ ಎರಡು ದಿನಗಳೊಳಗೆ ಹಿಂದಿರುಗಿ ಹೋಗುತ್ತಾರೆ. ಇತರರು ಅದೇ ದಿನದಂದು ಹಿಂದಿರುಗಿ ಹೋಗುತ್ತಾರೆ! ಅದು ತೀರ ಬೇಗವಾಗಿರುತ್ತದೊ? ಸಾಮಾನ್ಯವಾಗಿ, ಮನೆಯವರು ಆಕ್ಷೇಪಿಸುವುದಿಲ್ಲ. ಅನೇಕವೇಳೆ, ಸಂದರ್ಶನವನ್ನು ಮಾಡುತ್ತಿರುವ ಪ್ರಚಾರಕನೇ ಒಂದಿಷ್ಟು ಧೈರ್ಯದೊಂದಿಗೆ ಹೆಚ್ಚು ಸಕಾರಾತ್ಮಕವಾದ ಮನೋಭಾವವನ್ನು ವಿಕಸಿಸಿಕೊಳ್ಳಬೇಕು. ಈ ಮುಂದಿನ ಅನುಭವಗಳನ್ನು ಪರಿಗಣಿಸಿರಿ.
22 ಹದಿಮೂರು ವರ್ಷ ಪ್ರಾಯದ ಒಬ್ಬ ಪ್ರಚಾರಕನು, ಒಂದು ದಿನ ಮನೆಯಿಂದ ಮನೆಯ ಕಾರ್ಯದಲ್ಲಿ ಕೆಲಸಮಾಡುತ್ತಿದ್ದಾಗ, ಇಬ್ಬರು ಸ್ತ್ರೀಯರು ಜೊತೆಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದನು. ನಾವು ಜನರನ್ನು ಕಂಡಲ್ಲೆಲ್ಲಾ ಅವರಿಗೆ ಸಾರಬೇಕೆಂಬ ಪ್ರೋತ್ಸಾಹವನ್ನು ಲಕ್ಷ್ಯದಲ್ಲಿಟ್ಟವನಾಗಿ, ಅವನು ಬೀದಿಯಲ್ಲಿ ಹೋಗುತ್ತಿದ್ದ ಆ ಸ್ತ್ರೀಯರನ್ನು ಸಮೀಪಿಸಿದನು. ಅವರು ರಾಜ್ಯ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿದರು, ಮತ್ತು ಅವರಲ್ಲಿ ಪ್ರತಿಯೊಬ್ಬರು ಜ್ಞಾನ ಪುಸ್ತಕವನ್ನು ಸ್ವೀಕರಿಸಿದರು. ಆ ಯುವ ಸಹೋದರನು ಅವರ ವಿಳಾಸಗಳನ್ನು ಪಡೆದುಕೊಂಡು, ಎರಡು ದಿನಗಳ ನಂತರ ಹಿಂದಿರುಗಿಹೋಗಿ ಅವರಲ್ಲಿ ಪ್ರತಿಯೊಬ್ಬರೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದನು.
23 ಒಬ್ಬ ಸಹೋದರಿಯು ಮುಂದಿನ ವಾರದಲ್ಲಿ ಸಂದರ್ಶಿಸಲಿಕ್ಕಾಗಿ ಏರ್ಪಾಡುಗಳನ್ನು ಮಾಡುತ್ತಾಳೆ. ಆದರೆ ಆರಂಭದ ಸಂದರ್ಶನದ ಒಂದು ಅಥವಾ ಎರಡು ದಿನಗಳ ನಂತರ, ಅವರು ಈ ಹಿಂದೆ ಚರ್ಚಿಸಿದ ವಿಷಯದ ಮೇಲೆ ಮನೆಯವನಿಗೆ ಒಂದು ಪತ್ರಿಕೆಯನ್ನು ನೀಡಲು ಹೋಗುತ್ತಾಳೆ. ಅವಳು ಮನೆಯವನಿಗೆ ಹೇಳುವುದು: “ನಾನು ಈ ಲೇಖನವನ್ನು ನೋಡಿ, ನೀವು ಇದನ್ನು ಓದಲು ಇಷ್ಟಪಡುವಿರೆಂದು ನೆನಸಿದೆ. ನಾನು ಈಗ ನಿಮ್ಮೊಂದಿಗೆ ಮಾತಾಡಲಿಕ್ಕಾಗಿ ನಿಲ್ಲಸಾಧ್ಯವಿಲ್ಲ, ಆದರೆ ಯೋಜಿಸಲ್ಪಟ್ಟಂತೆ ನಾನು ಬುಧವಾರ ಮಧ್ಯಾಹ್ನ ಪುನಃ ಬರುವೆ. ನಿಮಗೆ ಆ ಸಮಯ ಆದೀತೊ?”
24 ಒಬ್ಬ ವ್ಯಕ್ತಿಯು ಸತ್ಯದಲ್ಲಿ ಆಸಕ್ತಿಯನ್ನು ತೋರಿಸುವಾಗ, ಅವನು ಒಂದಲ್ಲ ಒಂದು ರೀತಿಯಲ್ಲಿ ವಿರೋಧವನ್ನು ಎದುರಿಸುವನೆಂಬ ವಿಷಯದಲ್ಲಿ ನಾವು ಖಚಿತರಾಗಿರಬಲ್ಲೆವು. ಆರಂಭದ ಸಂಪರ್ಕವು ಮಾಡಲ್ಪಟ್ಟ ನಂತರ ಕೂಡಲೇ ಹಿಂದಿರುಗಿಹೋಗುವುದು, ಅವನು ಸಂಬಂಧಿಕರು, ನಿಕಟ ಮಿತ್ರರು, ಮತ್ತು ಇತರರಿಂದ ಎದುರಿಸುವಂತಹ ಯಾವುದೇ ಒತ್ತಡಗಳನ್ನು ಎದುರಿಸಿನಿಲ್ಲಲು ಅವನನ್ನು ಬಲಪಡಿಸುವುದು.
25 ಸಾರ್ವಜನಿಕ ಸ್ಥಳಗಳಲ್ಲಿ ಕಂಡುಕೊಳ್ಳಲ್ಪಡುವವರ ಆಸಕ್ತಿಯನ್ನು ವಿಕಸಿಸಿರಿ: ನಮ್ಮಲ್ಲಿ ಅನೇಕರು, ಬೀದಿಗಳಲ್ಲಿ, ವಾಹನ ನಿಲ್ಲಿಸುವ ಕ್ಷೇತ್ರಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ಶಾಪಿಂಗ್ ಕೇಂದ್ರಗಳಲ್ಲಿ, ಉದ್ಯಾನವನಗಳಲ್ಲಿ, ಇನ್ನು ಮುಂತಾದ ಸ್ಥಳಗಳಲ್ಲಿ ಸಾರುವುದರಲ್ಲಿ ಆನಂದಿಸುತ್ತೇವೆ. ಸಾಹಿತ್ಯವನ್ನು ನೀಡುವುದಕ್ಕೆ ಕೂಡಿಸಿ, ನಾವು ಆಸಕ್ತಿಯನ್ನು ವಿಕಸಿಸಿಕೊಳ್ಳುವ ಅಗತ್ಯವಿದೆ. ಆ ಉದ್ದೇಶದೊಂದಿಗೆ, ನಾವು ಭೇಟಿಯಾಗುವ ಪ್ರತಿಯೊಬ್ಬ ಆಸಕ್ತ ವ್ಯಕ್ತಿಯ ಹೆಸರು, ವಿಳಾಸ ಮತ್ತು ಸಾಧ್ಯವಿರುವಲ್ಲಿ ಟೆಲಿಫೋನ್ ನಂಬರ್ ಅನ್ನು ಪಡೆಯಲು ಪ್ರಯತ್ನವು ಮಾಡಲ್ಪಡತಕ್ಕದ್ದು. ಈ ಮಾಹಿತಿಯನ್ನು ಪಡೆಯುವುದು ನೀವು ನೆನಸುವಷ್ಟು ಕಷ್ಟಕರವಾಗಿರುವುದಿಲ್ಲ. ಸಂಭಾಷಣೆಯು ಅಂತ್ಯವಾಗುತ್ತಿರುವಂತೆಯೇ, ನಿಮ್ಮ ಟಿಪ್ಪಣಿಪುಸ್ತಕವನ್ನು ಹೊರತೆಗೆದು, ಹೀಗೆ ಕೇಳಿರಿ: “ನಾವು ಈ ಸಂಭಾಷಣೆಯನ್ನು ಬೇರೊಂದು ಸಮಯದಲ್ಲಿ ಮುಂದುವರಿಸಸಾಧ್ಯವಿರುವ ಯಾವುದಾದರೂ ಮಾರ್ಗವಿದೆಯೊ?” ಅಥವಾ ಹೀಗೆ ಹೇಳಿರಿ: “ನಿಮಗೆ ಆಸಕ್ತಿಕರವಾಗಿರುವುದೆಂದು ನನಗೆ ನಿಶ್ಚಯವಿರುವ ಒಂದು ಲೇಖನವನ್ನು ನೀವು ಓದುವಂತೆ ನಾನು ಇಷ್ಟಪಡುತ್ತೇನೆ. ನಾನು ಅದನ್ನು ನಿಮ್ಮ ಮನೆ ಅಥವಾ ಆಫೀಸಿಗೆ ತರಬಹುದೊ?” ಒಬ್ಬ ಸಹೋದರನು ಸರಳವಾಗಿ ಹೀಗೆ ಕೇಳುತ್ತಾನೆ: “ನಿಮ್ಮನ್ನು ಯಾವ ಫೋನ್ ನಂಬರ್ನಲ್ಲಿ ಸಂಪರ್ಕಿಸಬಹುದು?” ಮೂರು ತಿಂಗಳುಗಳಲ್ಲಿ, ಮೂವರು ವ್ಯಕ್ತಿಗಳನ್ನು ಬಿಟ್ಟು ಬೇರೆಲ್ಲರೂ ತಮ್ಮ ಫೋನ್ ನಂಬರನ್ನು ಕೊಡಲು ಸಂತೋಷಿಸಿದರೆಂದು ಅವನು ವರದಿಸುತ್ತಾನೆ.
26 ಆಸಕ್ತಿಯನ್ನು ಕಂಡುಕೊಳ್ಳಲು ಮತ್ತು ವಿಕಸಿಸಲು ಟೆಲಿಫೋನನ್ನು ಉಪಯೋಗಿಸಿರಿ: ಒಬ್ಬ ಪಯನೀಯರ್ ಸಹೋದರಿಯು, ಹೆಚ್ಚು ಭದ್ರತೆಯ ವ್ಯವಸ್ಥೆಯುಳ್ಳ ಕಟ್ಟಡಗಳಲ್ಲಿ ಜೀವಿಸುವ ಜನರನ್ನು ತಲಪಲು ಟೆಲಿಫೋನನ್ನು ಉಪಯೋಗಿಸುತ್ತಾಳೆ. ಅವಳು ಪುನರ್ಭೇಟಿಗಳನ್ನೂ ಅದೇ ರೀತಿಯಲ್ಲಿ ಮಾಡುತ್ತಾಳೆ. ಆರಂಭದ ಭೇಟಿಯಲ್ಲಿ ಅವಳು ಹೇಳುವುದು: “ನಿಮಗೆ ನನ್ನ ಪರಿಚಯವಿಲ್ಲವೆಂದು ನನಗೆ ತಿಳಿದಿದೆ. ಬೈಬಲಿನಿಂದ ಒಂದು ವಿಚಾರವನ್ನು ಹಂಚಿಕೊಳ್ಳಲಿಕ್ಕಾಗಿ ನಿಮ್ಮ ಕ್ಷೇತ್ರದಲ್ಲಿರುವ ಜನರನ್ನು ಸಂಪರ್ಕಿಸಲು ನಾನೊಂದು ವಿಶೇಷ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಿಮಗೆ ಸ್ವಲ್ಪ ಸಮಯವಿರುವಲ್ಲಿ, . . . ನಲ್ಲಿ ಕಂಡುಬರುವ ಒಂದು ವಾಗ್ದಾನವನ್ನು ನಿಮಗೆ ಓದಿಹೇಳಲು ಇಷ್ಟಪಡುವೆ.” ವಚನವನ್ನು ಓದಿದ ನಂತರ, ಅವಳು ಹೇಳುವುದು: “ಅಂತಹ ಸಮಯವು ಬರುವುದನ್ನು ನಾವು ನೋಡಲು ಸಾಧ್ಯವಿರುವಲ್ಲಿ ಅದು ಅದ್ಭುತಕರವಾಗಿರುವುದಿಲ್ಲವೊ? ನಾನು ಇದನ್ನು ನಿಮಗೆ ಓದಿಹೇಳುವುದರಲ್ಲಿ ಆನಂದಿಸಿದ್ದೇನೆ. ನೀವು ಕೂಡ ಅದರಲ್ಲಿ ಆನಂದಿಸಿದ್ದೀರಾದರೆ, ನಾನು ಪುನಃ ಒಮ್ಮೆ ಫೋನ್ ಮಾಡಿ, ಇನ್ನೊಂದು ವಚನವನ್ನು ಚರ್ಚಿಸಲು ಇಷ್ಟಪಡುವೆ.”
27 ಎರಡನೆಯ ಫೋನ್ ಕಾಲ್ನ ಸಮಯದಲ್ಲಿ, ಅವಳು ಮನೆಯವರಿಗೆ ತಮ್ಮ ಹಿಂದಿನ ಸಂಭಾಷಣೆಯನ್ನು ಜ್ಞಾಪಕಕ್ಕೆ ತರುತ್ತಾಳೆ ಮತ್ತು ದುಷ್ಟತನವು ತೆಗೆದುಹಾಕಲ್ಪಡುವಾಗ ಪರಿಸ್ಥಿತಿಗಳು ಹೇಗಿರುವವು ಎಂಬುದನ್ನು ಬೈಬಲಿನಿಂದ ಓದಿತಿಳಿಸಲು ಇಷ್ಟಪಡುತ್ತೇನೆಂದು ಹೇಳುತ್ತಾಳೆ. ಅನಂತರ ಅವಳು ಮನೆಯವರೊಂದಿಗೆ ಒಂದು ಸಂಕ್ಷಿಪ್ತ ಬೈಬಲ್ ಚರ್ಚೆಯನ್ನು ನಡಿಸುತ್ತಾಳೆ. ಅನೇಕ ಟೆಲಿಫೋನ್ ಸಂಭಾಷಣೆಗಳ ನಂತರ, 35 ಜನರು ಅವಳನ್ನು ತಮ್ಮ ಮನೆಗೆ ಆಮಂತ್ರಿಸಿದ್ದಾರೆ ಮತ್ತು ಏಳು ಮನೆ ಬೈಬಲ್ ಅಭ್ಯಾಸಗಳು ಆರಂಭಿಸಲ್ಪಟ್ಟಿವೆ! ಮಳೆಗಾಲದ ತಿಂಗಳುಗಳಲ್ಲಿ, ಕೆಸರುತುಂಬಿದ ಅಥವಾ ನೀರಿನಿಂದ ತುಂಬಿರುವ ರಸ್ತೆಗಳಿಂದಾಗಿ ಅಥವಾ ಅಸ್ವಸ್ಥತೆಯಿಂದಾಗಿ, ಆಸಕ್ತ ಜನರಿಗೆ ಪುನಃ ಭೇಟಿಮಾಡುವುದು ನಿಮಗೆ ಕೆಲವೊಮ್ಮೆ ಕಷ್ಟಕರವಾಗಿರುತ್ತದೊ? ಹಾಗಿರುವುದಾದರೆ, ಸಾಧ್ಯವಿರುವಲ್ಲಿ ಟೆಲಿಫೋನಿನ ಮೂಲಕ ಅವರೊಂದಿಗೆ ಸಂಪರ್ಕವನ್ನು ಏಕೆ ಇಡಬಾರದು?
28 ವ್ಯಾಪಾರದ ಸ್ಥಳಗಳಲ್ಲಿ ಕಂಡುಕೊಳ್ಳಲ್ಪಟ್ಟ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಿರಿ: ಅಂಗಡಿಯಿಂದ ಅಂಗಡಿಗೆ ಸೇವೆಮಾಡುವುದರಲ್ಲಿ, ಕೇವಲ ಪತ್ರಿಕೆಗಳನ್ನು ನೀಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಅನೇಕ ಅಂಗಡಿಯವರಿಗೆ ಸತ್ಯದಲ್ಲಿ ಒಂದು ಪ್ರಾಮಾಣಿಕ ಆಸಕ್ತಿಯಿದೆ, ಮತ್ತು ಆ ಆಸಕ್ತಿಯು ಬೆಳೆಸಲ್ಪಡಬೇಕು. ಕೆಲವು ಸಂದರ್ಭಗಳಲ್ಲಿ, ಅಲ್ಲಿಯೇ ಅವರೊಂದಿಗೆ ಒಂದು ಬೈಬಲ್ ಚರ್ಚೆಯನ್ನು ಅಥವಾ ಒಂದು ಅಭ್ಯಾಸವನ್ನೂ ನಡಿಸುವುದು ಸಾಧ್ಯವಿರಬಹುದು. ಬೇರೆ ಸಂದರ್ಭಗಳಲ್ಲಿ, ನೀವು ಮತ್ತು ಆ ಆಸಕ್ತ ವ್ಯಕ್ತಿಯು, ಮಧ್ಯಾಹ್ನ ಊಟದ ಸಮಯದಲ್ಲಿ ಅಥವಾ ಬೇರೆ ಯಾವುದೇ ಅನುಕೂಲ ಸಮಯದಲ್ಲಿ ಭೇಟಿಯಾಗಲು ಶಕ್ತರಾಗಬಹುದು.
29 ಒಬ್ಬ ಸಂಚರಣ ಮೇಲ್ವಿಚಾರಕನು, ಒಂದು ಚಿಕ್ಕ ಕಿರಾಣಿ ಅಂಗಡಿಯ ಮಾಲೀಕನನ್ನು ಭೇಟಿಯಾಗಿ, ಒಂದು ಬೈಬಲ್ ಅಭ್ಯಾಸವನ್ನು ಪ್ರತ್ಯಕ್ಷಾಭಿನಯಿಸುವ ನೀಡಿಕೆಯನ್ನಿತ್ತನು. ಆ ಪ್ರತ್ಯಕ್ಷಾಭಿನಯಕ್ಕೆ ಎಷ್ಟು ಸಮಯ ತಗಲುವುದೆಂದು ಕೇಳಲ್ಪಟ್ಟಾಗ, ಕೇವಲ 15 ನಿಮಿಷಗಳು ತಗಲುವವೆಂದು ಆ ಸಂಚರಣ ಮೇಲ್ವಿಚಾರಕನು ಹೇಳಿದನು. ಆಗ, ಅಂಗಡಿಯವನು ಬಾಗಿಲಿನಲ್ಲಿ “20 ನಿಮಿಷಗಳ ನಂತರ ಹಿಂದಿರುಗುವೆ” ಎಂಬ ಒಂದು ಫಲಕವನ್ನು ತೂಗುಹಾಕಿದನು. ಅವನು ಎರಡು ಕುರ್ಚಿಗಳನ್ನು ಎಳೆದುಕೊಂಡು, ಅವರಿಬ್ಬರೂ ಜ್ಞಾನ ಪುಸ್ತಕದ ಮೊದಲ ಐದು ಪ್ಯಾರಗ್ರಾಫ್ಗಳನ್ನು ಚರ್ಚಿಸಿದರು. ಈ ಪ್ರಾಮಾಣಿಕ ಮನುಷ್ಯನು ತಾನು ಕಲಿತಂತಹ ವಿಷಯದಿಂದ ಎಷ್ಟು ಪ್ರಭಾವಿಸಲ್ಪಟ್ಟನೆಂದರೆ, ಅವನು ಆ ಆದಿತ್ಯವಾರ, ಸಾರ್ವಜನಿಕ ಸಭೆ ಮತ್ತು ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾದನು ಮತ್ತು ಮುಂದಿನ ವಾರ ಅಭ್ಯಾಸವನ್ನು ಮುಂದುವರಿಸಲು ಒಪ್ಪಿಕೊಂಡನು.
30 ಒಂದು ವ್ಯಾಪಾರದ ಸ್ಥಳದಲ್ಲಿ ಒಂದು ಅಭ್ಯಾಸವನ್ನು ನೀಡಲು, ನೀವು ಹೀಗೆ ಹೇಳಬಹುದು: “ನಮ್ಮ ಅಭ್ಯಾಸ ಕಾರ್ಯಕ್ರಮವನ್ನು ಪ್ರತ್ಯಕ್ಷಾಭಿನಯಿಸಲು ಕೇವಲ 15 ನಿಮಿಷಗಳು ಬೇಕು. ಅದು ಅನುಕೂಲವಾಗಿರುವಲ್ಲಿ, ಅದನ್ನು ಹೇಗೆ ಮಾಡಲಾಗುತ್ತದೆಂಬುದನ್ನು ನಿಮಗೆ ತೋರಿಸಲು ಸಂತೋಷಪಡುವೆ.” ಅನಂತರ, ಸಮಯದ ಅವಧಿಗೆ ಅಂಟಿಕೊಳ್ಳಿರಿ. ವ್ಯಾಪಾರದ ಸ್ಥಳದಲ್ಲಿ ಒಂದು ದೀರ್ಘ ಚರ್ಚೆಯನ್ನು ನಡಿಸುವುದು ಸಾಧ್ಯವಿಲ್ಲದಿರುವಲ್ಲಿ, ಅಂಗಡಿಯವನನ್ನು ಅವನ ಮನೆಯಲ್ಲಿ ಭೇಟಿಯಾಗುವುದು ಹೆಚ್ಚು ಸೂಕ್ತವಾಗಿರುವುದು.
31 ಯಾವುದೇ ಸಾಹಿತ್ಯವು ನೀಡಲ್ಪಡದಿದ್ದಾಗಲೂ ಪುನಃ ಸಂದರ್ಶಿಸಿರಿ: ಸಾಹಿತ್ಯವು ನೀಡಲ್ಪಟ್ಟಿರಲಿ ಅಥವಾ ನೀಡಲ್ಪಡದಿರಲಿ, ಆಸಕ್ತಿಯ ಪ್ರತಿಯೊಂದು ಕಿಡಿಯು, ಒಂದು ಪುನರ್ಭೇಟಿಗೆ ಅರ್ಹವಾಗಿದೆ. ಖಂಡಿತವಾಗಿಯೂ, ಮನೆಯವನು ರಾಜ್ಯ ಸಂದೇಶದಲ್ಲಿ ನಿಜವಾಗಿ ಆಸಕ್ತನಾಗಿಲ್ಲವೆಂಬುದು ಸ್ಪಷ್ಟವಾಗುವಲ್ಲಿ, ನಿಮ್ಮ ಪ್ರಯತ್ನಗಳನ್ನು ಬೇರೆಲ್ಲಿಯಾದರೂ ನಿರ್ದೇಶಿಸುವುದು ಅತ್ಯುತ್ತಮ.
32 ಮನೆಯಿಂದ ಮನೆಯ ಕಾರ್ಯದಲ್ಲಿ, ಒಬ್ಬ ಸಹೋದರಿಯು, ತೀರ ಸ್ನೇಹಮಯಿಯಾಗಿದ್ದ ಆದರೆ ಪತ್ರಿಕೆಗಳ ನೀಡಿಕೆಯನ್ನು ದೃಢವಾಗಿ ನಿರಾಕರಿಸಿದ ಒಬ್ಬ ಸ್ತ್ರೀಯನ್ನು ಭೇಟಿಯಾದಳು. ಆ ಪ್ರಚಾರಕಳು ಬರೆಯುವುದು: “ಅನೇಕ ದಿನಗಳ ವರೆಗೆ ನಾನು ಅವಳ ಕುರಿತಾಗಿ ಯೋಚಿಸಿದೆ ಮತ್ತು ನಾನು ಪುನಃ ಅವಳೊಂದಿಗೆ ಮಾತಾಡಬಯಸುವೆನೆಂದು ನಿರ್ಧರಿಸಿದೆ.” ಕೊನೆಗೆ, ಆ ಸಹೋದರಿಯು ಪ್ರಾರ್ಥಿಸಿ, ಧೈರ್ಯಮಾಡಿ, ಆ ಸ್ತ್ರೀಯ ಮನೆಬಾಗಿಲನ್ನು ತಟ್ಟಿದಳು. ಅವಳ ಸಂತೋಷಕ್ಕೆ, ಮನೆಯವಳು ಅವಳನ್ನು ಮನೆಯೊಳಗೆ ಆಮಂತ್ರಿಸಿದಳು. ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು, ಮತ್ತು ಅದು ಮುಂದಿನ ದಿನ ಪುನಃ ನಡೆಸಲ್ಪಟ್ಟಿತು. ಸಮಯಾನಂತರ, ಆ ಮನೆಯವಳು ಸತ್ಯಕ್ಕೆ ಬಂದಳು.
33 ಅತಿ ಹೆಚ್ಚಾದದ್ದನ್ನು ಪೂರೈಸಲು ಮುಂದಾಗಿ ಯೋಜಿಸಿರಿ: ಪ್ರತಿ ವಾರ ಸ್ವಲ್ಪ ಸಮಯವನ್ನು ಪುನರ್ಭೇಟಿಗಳನ್ನು ಮಾಡುವದರಲ್ಲಿ ಕಳೆಯಬೇಕೆಂದು ಶಿಫಾರಸ್ಸು ಮಾಡಲಾಗುತ್ತದೆ. ಒಳ್ಳೆಯ ಯೋಜನೆಯೊಂದಿಗೆ ತೀರ ಹೆಚ್ಚಿನದ್ದನ್ನು ಪೂರೈಸಸಾಧ್ಯವಿದೆ. ನೀವು ಎಲ್ಲಿ ಮನೆಯಿಂದ ಮನೆಗೆ ಕೆಲಸಮಾಡುವಿರೊ ಅದೇ ಕ್ಷೇತ್ರದಲ್ಲಿ ಸಂದರ್ಶನಗಳನ್ನು ಮಾಡಲು ಏರ್ಪಾಡು ಮಾಡಿರಿ. ಸಾಕ್ಷಿಕಾರ್ಯದ ಪ್ರತಿಯೊಂದು ಅವಧಿಯ ನಂತರ, ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಸಮಯವನ್ನು ಬದಿಗಿರಿಸಿರಿ. ಒಂದು ಗುಂಪಾಗಿ ಕೆಲಸಮಾಡುವಾಗ, ನಿಮ್ಮ ಪುನರ್ಭೇಟಿಗಳಿಗೆ ಇತರರನ್ನು ನಿಮ್ಮ ಸಂಗಡ ಕರೆದುಕೊಂಡು ಹೋಗಲು ಏರ್ಪಡಿಸಿರಿ ಮತ್ತು ಅವರ ಪುನರ್ಭೇಟಿಗಳಿಗೆ ಅವರೊಂದಿಗೆ ಹೋಗಿರಿ. ಹೀಗೆ ಪ್ರತಿಯೊಬ್ಬರು ಇನ್ನೊಬ್ಬರ ಕೌಶಲಗಳು ಮತ್ತು ಅನುಭವದಿಂದ ಏನನ್ನಾದರೂ ಕಲಿಯಸಾಧ್ಯವಿದೆ.
34 ಪುನರ್ಭೇಟಿಗಳನ್ನು ಮಾಡುವುದರಲ್ಲಿ ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಸಫಲರಾಗಿರುವವರು ಹೇಳುವುದೇನೆಂದರೆ, ಜನರಲ್ಲಿ ಪ್ರಾಮಾಣಿಕವಾದ ಆಸಕ್ತಿಯನ್ನು ತೋರಿಸುವುದು ಮತ್ತು ಸಂದರ್ಶನವು ಮಾಡಲ್ಪಟ್ಟ ನಂತರವೂ ಅವರ ಕುರಿತಾಗಿ ಯೋಚಿಸುತ್ತಾ ಇರುವುದು ಅತ್ಯಾವಶ್ಯಕ. ಚರ್ಚಿಸಲಿಕ್ಕಾಗಿ ಒಂದು ಆಕರ್ಷಕ ಬೈಬಲ್ ವಿಷಯವನ್ನು ಹೊಂದಿರುವುದು ಮತ್ತು ಆರಂಭದ ಸಂದರ್ಶನದಲ್ಲಿ ಹೊರಡುವ ಮುಂಚೆ ಪುನರ್ಭೇಟಿಗಾಗಿ ತಳಪಾಯವನ್ನು ಹಾಕುವುದೂ ಅವಶ್ಯವಾಗಿದೆ. ಇನ್ನೂ ಹೆಚ್ಚಾಗಿ ಆ ಆಸಕ್ತಿಯನ್ನು ತಡವಿಲ್ಲದೆ ಅನುಸರಿಸಿಕೊಂಡು ಹೋಗುವುದು ಪ್ರಾಮುಖ್ಯ. ಬೈಬಲ್ ಅಭ್ಯಾಸವನ್ನು ಆರಂಭಿಸುವ ಉದ್ದೇಶವು ಯಾವಾಗಲೂ ಚೆನ್ನಾಗಿ ಮನಸ್ಸಿನಲ್ಲಿಡಲ್ಪಡಬೇಕು.
35 ಪುನರ್ಭೇಟಿಯ ಕೆಲಸದಲ್ಲಿ ಯಶಸ್ಸಿಗಾಗಿ ಬೇಕಾಗಿರುವ ಒಂದು ಅತಿ ಪ್ರಾಮುಖ್ಯ ಗುಣವು, ಧೈರ್ಯವಾಗಿದೆ. ಅದನ್ನು ಹೇಗೆ ಗಳಿಸಲಾಗುತ್ತದೆ? ಇತರರಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ನಾವು ‘ನಮ್ಮ ದೇವರ ಮೂಲಕ ಧೈರ್ಯವನ್ನು ಒಟ್ಟುಗೂಡಿಸಿ’ಕೊಳ್ಳಬೇಕೆಂದು ಹೇಳುವ ಮೂಲಕ ಅಪೊಸ್ತಲ ಪೌಲನು ಉತ್ತರಿಸುತ್ತಾನೆ. ನೀವು ಈ ಕ್ಷೇತ್ರದಲ್ಲಿ ಬೆಳೆಯಬೇಕಾದರೆ, ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಅನಂತರ ನಿಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ, ಎಲ್ಲಾ ಆಸಕ್ತಿಯನ್ನು ಅನುಸರಿಸಿಕೊಂಡು ಹೋಗಿರಿ. ಯೆಹೋವನು ನಿಶ್ಚಯವಾಗಿಯೂ ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು!
[ಪುಟ 3ರಲ್ಲಿರುವಚೌಕ]
ಪುನರ್ಭೇಟಿಗಳನ್ನು ಮಾಡುವುದರಲ್ಲಿ ಸಫಲರಾಗುವ ವಿಧ
■ ಜನರಲ್ಲಿ ಪ್ರಾಮಾಣಿಕವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ.
■ ಚರ್ಚಿಸಲಿಕ್ಕಾಗಿ ಒಂದು ಆಕರ್ಷಕ ಬೈಬಲ್ ವಿಷಯವನ್ನು ಆರಿಸಿಕೊಳ್ಳಿರಿ.
■ ಮುಂದಿನ ಪ್ರತಿಯೊಂದು ಭೇಟಿಗಾಗಿ ತಳಪಾಯವನ್ನು ಹಾಕಿರಿ.
■ ನೀವು ಹೊರಟುಹೋದ ನಂತರ ಆ ವ್ಯಕ್ತಿಯ ಕುರಿತಾಗಿ ಯೋಚಿಸುತ್ತಾ ಇರಿ.
■ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಲಿಕ್ಕಾಗಿ ಒಂದು ಅಥವಾ ಎರಡು ದಿನಗಳಲ್ಲಿ ಹಿಂದಿರುಗಿಹೋಗಿರಿ.
■ ನಿಮ್ಮ ಉದ್ದೇಶವು ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವುದಾಗಿದೆ ಎಂಬುದನ್ನು ಮನಸ್ಸಿನಲ್ಲಿಡಿ.
■ ಈ ಕೆಲಸಕ್ಕಾಗಿ ಧೈರ್ಯವನ್ನು ಒಟ್ಟುಗೂಡಿಸಿಕೊಳ್ಳಲು ಸಹಾಯಕ್ಕಾಗಿ ಪ್ರಾರ್ಥಿಸಿರಿ.