ಕಿರುಹೊತ್ತಗೆಗಳನ್ನು ಉಪಯೋಗಿಸುವ ಮೂಲಕ ನಿಮ್ಮ ಬೆಳಕನ್ನು ಪ್ರಕಾಶಿಸಿರಿ
1 ಮಾನವರಾದ ನಾವು ಮತ್ತು ನಾವು ಜೀವಿಸುತ್ತಿರುವಂತಹ ಈ ಭೂಮಿಯು, ಅಭೂತಪೂರ್ವವಾದ ಮತ್ತು ಅತಿ ಹಾನಿಕರವಾದ ಅವಧಿಯನ್ನು ಅನುಭವಿಸುತ್ತಿದೆಯೆಂದು ಹೆಚ್ಚಿನ ಜನರು ಈಗ ಒಪ್ಪಿಕೊಳ್ಳುತ್ತಾರೆ. ಪರಿಸ್ಥಿತಿಗಳನ್ನು ಸರಿಪಡಿಸಲು ಮಾಡಲ್ಪಡುವ ಮಾನವ ಪ್ರಯತ್ನಗಳು ನಿಜವಾಗಿ ಯಶಸ್ವಿಯಾಗುವವೊ? ಇದು ಹೆಚ್ಚಿನ ಜನರು ಒಂದಲ್ಲ ಒಂದು ಸಮಯದಲ್ಲಿ ಕೇಳುವಂತಹ ಒಂದು ಪ್ರಶ್ನೆಯಾಗಿದೆ. (ಯೆರೆ. 10:23) ಭವಿಷ್ಯತ್ತಿಗೆ ಸಂಬಂಧಪಟ್ಟಂತೆ, ವ್ಯಾಪಕವಾದ ವೈವಿಧ್ಯವುಳ್ಳ ಪರಿಸ್ಥಿತಿಗಳನ್ನು ಮಾನವಕುಲವು ಆಶಾಹೀನತೆಯ ವಿಚಾರಗಳೊಂದಿಗೆ ಎದುರಿಸುತ್ತಿದೆ. ಈ ಲೋಕದ ಧರ್ಮಗಳು, ರಾಜಕೀಯವು, ಮತ್ತು ವಾಣಿಜ್ಯ ವ್ಯವಸ್ಥೆಗಳು ಯಾವುದೇ ನಿರೀಕ್ಷೆಯನ್ನು ನೀಡುವುದಿಲ್ಲ. ಈ ಲೋಕವು ಪಾರಾಗುವುದೋ? ಮತ್ತು, ಶಾಂತಿಭರಿತವಾದ ಒಂದು ಹೊಸ ಲೋಕವು ಇರುವುದೊ? ಇವು ಉತ್ತರಿಸಲ್ಪಡಬೇಕಾದ ಪ್ರಶ್ನೆಗಳಾಗಿವೆ.
2 ಸ್ವಾವಲಂಬನೆ ಮತ್ತು ಸ್ವತಃ ದುರಸ್ತಿಗೊಳಿಸುವ ಅಂತರ್ನಿವಿಷ್ಟ ವ್ಯವಸ್ಥೆಗಳಿರುವ ಭೂಮಿಯ ಭವಿಷ್ಯತ್ತಿನ ಕುರಿತಾಗಿ ಮತ್ತು ಅದರ ಸೃಷ್ಟಿಕರ್ತನು ತನ್ನ ವಾಕ್ಯವಾದ ಬೈಬಲಿನಲ್ಲಿ ಕೊಟ್ಟಿರುವ ಅಚಲವಾದ ವಾಗ್ದಾನಗಳ ಕುರಿತಾಗಿ ಯೆಹೋವನ ಸಾಕ್ಷಿಗಳು ಆಶಾವಾದಿಗಳಾಗಿದ್ದಾರೆ. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ಕೀರ್ತನೆ 37:29 ಪ್ರಕಟಿಸುತ್ತದೆ. ನಾವು ಇಂದು ನೋಡುತ್ತಿರುವ ಗಲಿಬಿಲಿಯ ಹಿನ್ನೆಲೆಯಲ್ಲಿ, ಈ ವಾಗ್ದಾನವು ಹೆಚ್ಚಿನ ಜನರಿಗೆ ಒಂದು ಪ್ರಸನ್ನಕರ ಆಶ್ಚರ್ಯ ಮತ್ತು ಸ್ವಾಗತಾರ್ಹ ವಾರ್ತೆಯಾಗಿರುವುದು. ಕಡಿಮೆ ಪಕ್ಷ ಅದು ಒಂದು ಒಳ್ಳೆಯ ಸಂಭಾಷಣಾ ವಿಷಯವಾಗಿದೆ. ಆಸಕ್ತಿಕರವಾಗಿ ಅದು, ಈ ಲೋಕವು ಪಾರಾಗುವುದೋ? ಎಂಬ ಶಿರೋನಾಮವುಳ್ಳ ಕಿರುಹೊತ್ತಗೆಯ ವಿಷಯವಾಗಿದೆ. ಈ ಸರಳ ಮತ್ತು ಆಕರ್ಷಕವಾದ ಕಿರುಹೊತ್ತಗೆಯನ್ನು ನಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆಯೆಂದು ಸಂಚರಣಾ ಮೇಲ್ವಿಚಾರಕರಿಂದ ಬರುವ ಅನುಭವಗಳು ತೋರಿಸುತ್ತವೆ. ಇತರ ಕಿರುಹೊತ್ತಗೆಗಳು ಕೂಡ, ಸಂಭಾಷಣೆಗಳನ್ನು ಆರಂಭಿಸಲು ಉತ್ತಮ ಅವಕಾಶಗಳನ್ನು ನೀಡುತ್ತವೆ ಮತ್ತು ಅನೇಕ ವೇಳೆ ಆಸಕ್ತಿಕರ ಬೈಬಲ್ ಚರ್ಚೆಗಳಿಗೆ ನಡಿಸುತ್ತವೆ.
3 ವಿಭಿನ್ನ ಸಮುದಾಯಗಳಲ್ಲಿನ ಹೆಚ್ಚಿನ ಜನರಿಗೆ, ಒಂದು ಕಾಲದಲ್ಲಿ ಸಂಭವಿಸಿದ ಮತ್ತು ಭಕ್ತಿಹೀನ ಜನರನ್ನು ನಾಶಮಾಡಿದ ಭೌಗೋಳಿಕ ಜಲಪ್ರಳಯದ ಕುರಿತಾಗಿ ಅರಿವಿದೆ. ಈ ಲೋಕವು ಪಾರಾಗುವುದೋ? ಎಂಬ ಕಿರುಹೊತ್ತಗೆಯು, ಆ ಘಟನೆಯ ಕುರಿತಾದ ಬೈಬಲ್ ವೃತ್ತಾಂತವನ್ನು ತಿಳಿಸುತ್ತದೆ, ಮತ್ತು ಇದು ಒಂದು ಸಂಭಾಷಣೆಗೆ ಆರಂಭವಾಗಿರಸಾಧ್ಯವಿದೆ. ನಾವು ಜೀವಿಸುತ್ತಿರುವ ಕಠಿನ ಸಮಯಗಳಿಂದಾಗಿ ಈ ವಿಷಯವು ಹೆಚ್ಚು ಅರ್ಥಭರಿತವಾಗುತ್ತದೆ. (2 ತಿಮೊ. 3:1) ಕಿರುಹೊತ್ತಗೆಗಳನ್ನು ಯಶಸ್ವಿಯಾಗಿ ನೀಡಿ, ಸತ್ಯವನ್ನು ಕಲಿಯುವಂತೆ ಜನರಿಗೆ ಸಹಾಯ ಮಾಡುವ ಸಹೋದರರ ಉತ್ತೇಜನಕಾರಿ ವರದಿಗಳನ್ನು ನಾವು ಅನೇಕ ವೇಳೆ ಕೇಳುತ್ತೇವೆ.
4 “ಬೆಳಕು ವಾಹಕರು” ಜಿಲ್ಲಾ ಅಧಿವೇಶನದಲ್ಲಿ, “ನಿಮ್ಮ ಬೆಳಕನ್ನು ಪ್ರಕಾಶಿಸುವುದು” ಎಂಬ ಶಿರೋನಾಮದ ಭಾಷಣಮಾಲೆಯಲ್ಲಿ, ಈ ಅತ್ಯಾವಶ್ಯಕ ಸಾಧನಗಳ ಉಪಯೋಗವನ್ನು ಒತ್ತಿಹೇಳಿದ ಒಂದು ಭಾಷಣವು ಒಳಗೂಡಿತ್ತೆಂಬುದನ್ನು ನೀವು ಜ್ಞಾಪಿಸಿಕೊಳ್ಳಬಹುದು. “ಕಿರುಹೊತ್ತಗೆಗಳಲ್ಲಿರುವ ಚಿಕ್ಕ, ನೇರ, ಮತ್ತು ಗ್ರಹಿಸಲು ಸುಲಭವಾದ ಸಂದೇಶವು ಅನೇಕ ವೇಳೆ ಫಕ್ಕನೆ ಗಮನಸೆಳೆದು, ಉಪಯುಕ್ತ ಫಲಿತಾಂಶಗಳನ್ನು ಉತ್ಪಾದಿಸುತ್ತದೆ” ಎಂದು ಅದು ಹೇಳಿತು. (w81 3/1, ಪು. 32; w83 11/1 ಪು. 27) ಇದೇ ಅಧಿವೇಶನದಲ್ಲಿ, ಈ ಲೋಕವು ಪಾರಾಗುವುದೋ? ಎಂಬ ಕಿರುಹೊತ್ತಗೆಯು ಬಿಡುಗಡೆಗೊಳಿಸಲ್ಪಟ್ಟಿತು. ಶಾಂತಿಭರಿತ ಹೊಸ ಲೋಕದಲ್ಲಿ ಜೀವನ, ಪ್ರಮೋದವನಕ್ಕೆ ನಡಿಸುವ ದಾರಿಯನ್ನು ಕಂಡುಕೊಳ್ಳುವ ವಿಧ (ಇಂಗ್ಲಿಷ್), ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ?, ಕುಟುಂಬ ಜೀವನವನ್ನು ಆನಂದಿಸಿರಿ, ಮತ್ತು ಖಿನ್ನ ವ್ಯಕ್ತಿಗಳಿಗಾಗಿ ಸಾಂತ್ವನ ಎಂಬಂತಹ ಇತರ ಕಿರುಹೊತ್ತಗೆಗಳು, ಅಷ್ಟೇ ಆಸಕ್ತಿಭರಿತವೂ, ಸಂಭಾಷಣೆಯನ್ನು ಆರಂಭಿಸಲು ಉಪಯುಕ್ತವೂ ಆಗಿವೆ. ವಾಚ್ ಟವರ್ ಸೊಸೈಟಿಯ ಆರಂಭದ ದಿನಗಳಲ್ಲಿದ್ದಂತೆಯೇ, ಇಂದೂ ಅನೇಕ ರಾಜ್ಯ ಘೋಷಕರು, ದೇವರ ರಾಜ್ಯದ ಸಂದೇಶವನ್ನು ಒಂದು ಸರಳ ಮತ್ತು ಅನೌಪಚಾರಿಕ ವಿಧದಲ್ಲಿ ಹಬ್ಬಿಸಲಿಕ್ಕಾಗಿ ಕಿರುಹೊತ್ತಗೆಗಳನ್ನು ಪ್ರಯೋಜನಕರವಾದ ರೀತಿಯಲ್ಲಿ ಉಪಯೋಗಿಸುತ್ತಾರೆ.
5 ಪ್ರಥಮ ಸಂದರ್ಶನದಲ್ಲೇ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಪ್ರಯತ್ನಿಸಿರಿ: ಪ್ರಥಮ ಸಂದರ್ಶನದಲ್ಲೇ ಬೈಬಲ್ ಅಭ್ಯಾಸಗಳನ್ನು ಆರಂಭಿಸಲಿಕ್ಕಾಗಿ, ಕಿರುಹೊತ್ತಗೆಗಳು ಆದರ್ಶಪ್ರಾಯವಾಗಿ ವಿನ್ಯಾಸಿಸಲ್ಪಟ್ಟಿವೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು, ತಾನು ಸಂದರ್ಶಿಸುತ್ತಿದ್ದ ಸಭೆಯ ಸದಸ್ಯರು ತನ್ನ ಸಂದರ್ಶನದ ವಾರದಲ್ಲಿ, ಮನೆಯವರೊಂದಿಗೆ ಮಾತಾಡುವಾಗ ಆರಂಭದಲ್ಲಿ ಕಿರುಹೊತ್ತಗೆಗಳನ್ನು ಉಪಯೋಗಿಸುವ ಮೂಲಕ 64 ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಿದರೆಂದು ವರದಿಸಿದನು. ಇನ್ನೊಬ್ಬನು ಬರೆಯುವುದು, “ನನ್ನ ಹೆಚ್ಚಿನ ಚರ್ಚೆಗಳನ್ನು ಕಿರುಹೊತ್ತಗೆಯೊಂದಿಗೆ ಆರಂಭಿಸಿ, ಅನಂತರ ನಿರೂಪಣೆಗೆ ಮುಂದುವರಿಯುವ ಮೂಲಕ ನಾನು ಉತ್ತಮ ಯಶಸ್ಸನ್ನು ಗಳಿಸುತ್ತಿದ್ದೇನೆ.” ಕಿರುಹೊತ್ತಗೆಯಲ್ಲಿನ ಕೆಲವು ಪ್ಯಾರಗ್ರಾಫ್ಗಳನ್ನು ಚರ್ಚಿಸುವ ಮೂಲಕ ಒಂದು ಬೈಬಲ್ ಅಭ್ಯಾಸವನ್ನು ಪ್ರಥಮ ಸಂದರ್ಶನದಲ್ಲೇ ಆರಂಭಿಸಲು ಪ್ರಯತ್ನಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಅನಂತರ, ಮುಂದಿನ ಭೇಟಿಯಲ್ಲಿ ಇನ್ನೂ ಕೆಲವು ಪ್ಯಾರಗ್ರಾಫ್ಗಳನ್ನು ಚರ್ಚಿಸುತ್ತಾ ಕೊನೆಯಲ್ಲಿ ಕಿರುಹೊತ್ತಗೆಯನ್ನು ಚರ್ಚಿಸಿ ಮುಗಿಸಿರಿ. ಅಷ್ಟರೊಳಗೆ ಆ ಮನೆಯವನು, ಜ್ಞಾನ ಪುಸ್ತಕದಲ್ಲಿ ಅಥವಾ ಅಪೇಕ್ಷಿಸು ಬ್ರೋಷರಿನಲ್ಲಿ ಒಂದು ಅಭ್ಯಾಸವನ್ನು ಸ್ವೀಕರಿಸುವ ಪ್ರವೃತ್ತಿಯುಳ್ಳವನಾಗಿರಬಹುದು. ಅಥವಾ ಆ ಮನೆಯವನು, ಶಾಂತಿಭರಿತ ಹೊಸ ಲೋಕದಲ್ಲಿ ಜೀವನದಂತಹ ಇನ್ನೊಂದು ಕಿರುಹೊತ್ತಗೆಯ ಮೇಲೆ ಆಧಾರಿತವಾದ ಇಂತಹ ಚರ್ಚೆಗಳನ್ನು ಮುಂದುವರಿಸಲು ಬಯಸಬಹುದು.
6 ಕಿರುಹೊತ್ತಗೆಗಳನ್ನು ಕೂಲಂಕಷವಾಗಿ ಪರೀಕ್ಷಿಸಿರಿ. ನಮ್ಮ ಕಿರುಹೊತ್ತಗೆಗಳ ಸುಂದರವಾದ ಆವರಣ ಚಿತ್ರಗಳು ಮತ್ತು ಗಮನವನ್ನು ಸೆರೆಹಿಡಿಯುವ ಶೀರ್ಷಿಕೆಗಳಿಂದ ಯಾರೂ ಆಕರ್ಷಿತರಾಗಬಹುದು. ನೀವು ಕೆಲವು ಕಿರುಹೊತ್ತಗೆಗಳನ್ನು ನಿಮ್ಮ ಶರ್ಟ್ ಅಥವಾ ಕೋಟಿನ ಜೇಬು, ಪರ್ಸ್ ಅಥವಾ ಬ್ರೀಫ್ಕೇಸ್ನಲ್ಲಿ ಸುಲಭವಾಗಿ ಒಯ್ಯಬಲ್ಲಿರಿ. ಹೀಗೆ ಅವು, ಕೇವಲ ನಮ್ಮ ಕ್ರಮದ ಶುಶ್ರೂಷೆಯಲ್ಲಿ ಮಾತ್ರವಲ್ಲ, ಬದಲಾಗಿ ಜನರನ್ನು ಕಂಡುಕೊಳ್ಳಬಹುದಾದ ಸ್ಥಳಗಳಲ್ಲೆಲ್ಲಾ ಜನರಿಗೆ ನೀಡಲು ಕೈಗೆಟುಕುವಂತೆ ಇರುತ್ತವೆ. (yb89 ಪುಟ 59) ಎಲ್ಲಾ ಸಮಯಗಳಲ್ಲಿ ಮತ್ತು ಎಲ್ಲಾ ಸ್ಥಳಗಳಲ್ಲಿ, ಎಲ್ಲಾ ರೀತಿಯ ಜನರೊಂದಿಗೆ ಬುದ್ಧಿಮತ್ತೆಯ ಸಂಭಾಷಣೆಗಳನ್ನು ಆರಂಭಿಸಲು ಅವು ಆದರ್ಶಪ್ರಾಯವಾಗಿ ತಕ್ಕದ್ದಾಗಿವೆ. ಒಂದು ಆಸಕ್ತಿಕರ ವಿಷಯದ ಮೇಲೆ ಒಂದು ಸಂಭಾಷಣೆಯನ್ನು ಆರಂಭಿಸಿ, ಅದನ್ನು ಒಂದು ಬೈಬಲ್ ಅಭ್ಯಾಸದ ಮೂಲಕ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುವುದು ಗುರಿಯಾಗಿರಬೇಕು. ಈ ಕೆಳಗಿನ ರೀತಿಯಲ್ಲಿ ವಿಷಯವನ್ನು ಹೇಳುವ ಮೂಲಕ ಬೈಬಲ್ ಅಭ್ಯಾಸಗಳನ್ನು ಪ್ರಥಮ ಸಂದರ್ಶನದಲ್ಲೇ ಅಥವಾ ಒಂದು ಪುನರ್ಭೇಟಿಯಲ್ಲಿ ಆರಂಭಿಸಬಹುದು:
ಪ್ರಚಾರಕ: ನಮಸ್ಕಾರ. ನಾವಿಂದು ಜನರೊಂದಿಗೆ ಜೀವನದ ಗುಣಮಟ್ಟದ ಕುರಿತಾಗಿ ಮಾತಾಡುತ್ತಿದ್ದೇವೆ. ನಿಮಗೆ ಅದರಲ್ಲಿ ತೃಪ್ತಿಯಿದೆಯೊ?
ಮನೆಯವನು: ಅನೇಕ ವೇಳೆ ಇಲ್ಲ.
ಪ್ರಚಾರಕ: (ಈ ಲೋಕವು ಪಾರಾಗುವುದೋ? ಎಂಬ ಕಿರುಹೊತ್ತಗೆಯನ್ನು ನೀಡುತ್ತಾ) ಏನು ಸಂಭವಿಸುತ್ತಿದೆಯೊ ಅದು ಬೈಬಲ್ ಪ್ರವಾದನೆಯ ನೆರವೇರಿಕೆಯಾಗಿದೆ ಮತ್ತು ಲೋಕದ ಅಂತ್ಯವು ನಿಕಟವಾಗಿದೆಯೆಂದು ಕೆಲವರು ನೆನಸುತ್ತಾರೆ. ನೀವೇನು ನೆನಸುತ್ತೀರಿ?
ಮನೆಯವನು: ನನಗೆ ಗೊತ್ತಿಲ್ಲ. ಅದು ಸಾಧ್ಯವಿದೆಯೆಂದು ನನಗನಿಸುತ್ತದೆ.
ಈ ಮುಂಚೆ ಒಂದು ಲೋಕವು ಅಂತ್ಯಗೊಂಡಿತ್ತು ಮತ್ತು ಈ ಲೋಕವೂ ಅಂತ್ಯಗೊಳ್ಳುವುದೆಂದು ತೋರಿಸಲು ನೀವು ಈಗ ಕಿರುಹೊತ್ತಗೆಯನ್ನು ಉಪಯೋಗಿಸಸಾಧ್ಯವಿದೆ. ಇದು ಒಂದು ಶಾಂತಿಭರಿತ ಹೊಸ ಲೋಕಕ್ಕೆ ದಾರಿ ಮಾಡಿಕೊಡುವುದೆಂಬುದನ್ನು ವಿವರಿಸಿರಿ. ಲೋಕದ ಅಂತ್ಯವು, ಅಕ್ಷರಶಃ ಆಕಾಶಗಳ ಮತ್ತು ಭೂಮಿಯ ಅಂತ್ಯವನ್ನು ಅರ್ಥೈಸುವುದಿಲ್ಲ ಬದಲಾಗಿ, ನಾವಿಂದು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ಅಂತ್ಯವನ್ನು ಅರ್ಥೈಸುತ್ತದೆಂದು ತೋರಿಸಲು ಕಿರುಹೊತ್ತಗೆಯನ್ನು ಉಪಯೋಗಿಸುತ್ತಾ, ಒಂದು ಸಂಭಾಷಣೆಯನ್ನು ಪ್ರೇರಿಸಿರಿ. ಲೋಕದ ಅಂತ್ಯವು ನಿಕಟವಾಗಿದೆಯೆಂಬ ಬೈಬಲ್ ರುಜುವಾತನ್ನು ಪರಿಗಣಿಸಲಿಕ್ಕಾಗಿ ಇನ್ನೊಂದು ಭೇಟಿಯ ಏರ್ಪಾಡು ಮಾಡಲು ಪ್ರಯತ್ನಿಸಿರಿ.
7 ಆ ವಿಷಯವನ್ನು ಪರಿಚಯಿಸಲು ಇನ್ನೊಂದು ಪ್ರಸ್ತಾವವು ಹೀಗಿರಸಾಧ್ಯವಿದೆ:
“ಈ ಲೋಕದ ಭವಿಷ್ಯತ್ತಿನ ಕುರಿತಾಗಿ ನಾವು ನಮ್ಮ ನೆರೆಯವರು ಮತ್ತು ಸ್ನೇಹಿತರೊಂದಿಗೆ ಮಾತಾಡುತ್ತಿದ್ದೇವೆ. ಈ ಲೋಕವು ಹೆಚ್ಚು ಸಮಯ ಬಾಳಲಿಕ್ಕಿಲ್ಲ ಮತ್ತು ಬೇಗನೆ ಅಂತ್ಯಗೊಳ್ಳುವುದೆಂದು ಹೆಚ್ಚಿನ ಜನರಿಗೆ ಅನಿಸುತ್ತದೆಂಬುದನ್ನು ನಾವು ಕಂಡುಕೊಳ್ಳುತ್ತೇವೆ! ನಿಮಗೆ ಹೇಗನಿಸುತ್ತದೆಂದು ನನಗೆ ಗೊತ್ತಿಲ್ಲ, ಆದರೆ ಈ ಲೋಕವು ಪಾರಾಗುವುದೆಂದು ನಂಬುವ ಕೆಲವೊಂದು ಜನರಿದ್ದಾರೆ. ನೀವೇನು ನೆನಸುತ್ತೀರಿ?” (ಉತ್ತರಕ್ಕಾಗಿ ನಿಲ್ಲಿರಿ.)
“ಈ ಆಸಕ್ತಿಕರ ವಿಷಯವನ್ನು ಚರ್ಚಿಸುವ ಈ ಕಿರುಹೊತ್ತಗೆಯನ್ನು ನೀಡಲು ನಾನು ಸಂತೋಷಿಸುತ್ತೇನೆ. ಅದರ ಶಿರೋನಾಮವು ಏನನ್ನು ಕೇಳುತ್ತದೆಂಬುದನ್ನು ಗಮನಿಸಿರಿ: ‘ಈ ಲೋಕವು ಪಾರಾಗುವುದೋ?’ ಇದಕ್ಕೆ ಒಂದು ಸಕಾರಾತ್ಮಕ ಉತ್ತರವು ನಿಜವಾಗಿ ತೃಪ್ತಿದಾಯಕವಾಗಿರುವುದೆಂದು ನೀವು ಸಮ್ಮತಿಸುವಿರಿ. ನೀವು ಮೊದಲನೆಯ ಪ್ಯಾರಗ್ರಾಫನ್ನು ಓದುವಲ್ಲಿ ನಾನದನ್ನು ಗಣ್ಯಮಾಡುವೆ.”
8 ಕಿರುಹೊತ್ತಗೆಗಳ ಸರಳತೆ ಮತ್ತು ಚರ್ಚಿಸಲ್ಪಟ್ಟಿರುವ ವಿಷಯಗಳಲ್ಲಿ ಹೆಚ್ಚಿನ ಜನರಿಗಿರುವ ಆಸಕ್ತಿಯಿಂದಾಗಿ, ಅಬಾಲವೃದ್ಧ ಪ್ರಚಾರಕರು, ಹೊಸಬರು ಮತ್ತು ಸತ್ಯದಲ್ಲಿ ದೀರ್ಘ ಸಮಯದಿಂದ ಇರುವವರು, ಕಿರುಹೊತ್ತಗೆಯ ವಿತರಣೆಯನ್ನು ಸುಲಭ ಮತ್ತು ಪುನಚೈತನ್ಯಗೊಳಿಸುವಂತಹದ್ದಾಗಿ ಕಂಡುಕೊಂಡಿದ್ದಾರೆ. ಒಂದು ಹೆಚ್ಚಿನ ಪ್ರಯೋಜನವೇನೆಂದರೆ, ಅದಕ್ಕೆ ಯಾವ ಹಣವನ್ನು ಕೇಳಲಾಗುವುದಿಲ್ಲ. ಹಣ ಕೊಡುವ ಆವಶ್ಯಕತೆಯಿಲ್ಲದ ವಿಷಯಕ್ಕೆ ಹೆಚ್ಚಿನ ಜನರು ಅನುಕೂಲಕರವಾಗಿ ಪ್ರತಿಕ್ರಿಯಿಸುತ್ತಾರೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಕೂಡಿಸುವುದು: “ಕ್ಷೇತ್ರದಲ್ಲಿನ ಫಲಿತಾಂಶಗಳು ಏನಾಗಿದ್ದವೆಂದರೆ, ಅನೇಕ ಜನರು ಹೆಚ್ಚಿನ ವಿವರಣೆಗಳಿಗಾಗಿ ಪ್ರಚಾರಕರು ಪುನಃ ಬರುವಂತೆ ಕೇಳಿಕೊಂಡರು. ತಮ್ಮ ಮನೆ ಮನೆಯ ರೆಕಾರ್ಡುಗಳಲ್ಲಿ ಪ್ರಚಾರಕರಿಗೆ ತಮ್ಮ ಸಾಮಾನ್ಯವಾದ ಸರಾಸರಿಗಿಂತಲೂ ಹೆಚ್ಚಿನ ಪುನರ್ಭೇಟಿಗಳು ಇರುವಂತೆ ತೋರುತ್ತದೆ.” ನೀವು ಕಿರುಹೊತ್ತಗೆಗಳನ್ನು ನೀಡುವುದನ್ನು ಪ್ರಯತ್ನಿಸಿದ್ದೀರೊ? ಇಲ್ಲದಿದ್ದಲ್ಲಿ, ಅದನ್ನು ಸಾಧ್ಯವಿರುವಷ್ಟು ಬೇಗನೆ ಪ್ರಯತ್ನಿಸಿ ನೋಡಬಾರದೇಕೆ?
9 ಯಾರಿಗೆ ನೀವು ಒಂದು ಕಿರುಹೊತ್ತಗೆಯನ್ನು ಕೊಟ್ಟಿದ್ದೀರೊ ಆ ವ್ಯಕ್ತಿಗಳನ್ನು ನೀವು ಪುನಃ ಸಂದರ್ಶಿಸುವಾಗ, ರೀಸನಿಂಗ್ ಪುಸ್ತಕದಲ್ಲಿರುವ ಅಂಶಗಳೊಂದಿಗೆ ಬೆಂಬಲಿಸಲ್ಪಟ್ಟು, ವಿಷಯದ ಕುರಿತಾದ ಹೆಚ್ಚು ಗಾಢವಾದ ಮಾಹಿತಿ, ಜ್ಞಾನ ಪುಸ್ತಕದ ಒಂದು ಪ್ರತಿ, ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಶಿರೋನಾಮದ ಕಿರುಹೊತ್ತಗೆ, ಮತ್ತು ಖಂಡಿತವಾಗಿ ಒಂದು ಬೈಬಲಿನೊಂದಿಗೆ ಸಜ್ಜಿತರಾಗಿರಿ. ಲೋಕವು ಪಾರಾಗುವುದು ಮಾತ್ರವಲ್ಲ, ಅದು ಎಲ್ಲಾ ಜನಾಂಗ, ಕುಲ ಮತ್ತು ಭಾಷೆಗಳಿಂದ ಬಂದಿರುವ ಪ್ರಾಮಾಣಿಕ ಹೃದಯದ ಮತ್ತು ನಮ್ರ ಜನರಿಂದ ತುಂಬಿರುವ ಒಂದು ಪ್ರಮೋದವನವಾಗಿರುವುದು ಎಂಬುದನ್ನು ನೀವು ಈ ಸಲ ವಿವರಿಸಬಹುದು. (ಪ್ರಕ. 7:9) ಭೂಮಿಯನ್ನು ಪುನಸ್ಸ್ಥಾಪಿಸಿ, ಅದರ ಮೂಲ ಸೌಂದರ್ಯವನ್ನು ಅದಕ್ಕೆ ಹಿಂದೆ ತರುವ ಯೆಹೋವನ ಭವ್ಯ ಉದ್ದೇಶದ ಮೇಲೆ ಕೇಂದ್ರೀಕರಿಸಿರಿ. ಜ್ಞಾನ ಪುಸ್ತಕದ 4 ಮತ್ತು 5ನೆಯ ಪುಟಗಳಲ್ಲಿರುವ ಚಿತ್ರ ಮತ್ತು “ನಿಮಗೆ ಒಂದು ಸಂತೋಷಕರವಾದ ಭವಿಷ್ಯವಿರಬಲ್ಲದು” ಎಂಬ ಮೊದಲನೆಯ ಅಧ್ಯಾಯದ ಶೀರ್ಷಿಕೆಯನ್ನು ಜೋಡಿಸಿರಿ. ಪ್ರಥಮ 3 ಪ್ಯಾರಗ್ರಾಫ್ಗಳನ್ನು ಪರಿಗಣಿಸುವ ಮೂಲಕ, ಸಾಧ್ಯವಿರುವಲ್ಲಿ ಒಂದು ಅಭ್ಯಾಸವನ್ನು ಆರಂಭಿಸಿರಿ. ಹಿಂದಿರುಗಿ ಬರುವಿರೆಂದು ಮಾತುಕೊಡಿರಿ.
10 ನಾವು ಕೇವಲ ಸಾಹಿತ್ಯವನ್ನು ನೀಡುವುದರಲ್ಲಿ ಆಸಕ್ತರಾಗಿದ್ದೇವೆಂದು ಜನರು ನಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ, ಚೆನ್ನಾಗಿ ಆವರಿಸಲ್ಪಟ್ಟಿರುವ ಟೆರಿಟೊರಿಗಳಲ್ಲೂ, ಈ ಲೋಕವು ಪಾರಾಗುವುದೋ? ಎಂಬ ಕಿರುಹೊತ್ತಗೆಯು ಚಮತ್ಕಾರಗಳನ್ನು ನಡಿಸಿದೆಯೆಂದು ಒಬ್ಬ ಸರ್ಕಿಟ್ ಮೇಲ್ವಿಚಾರಕನು ವರದಿಸುತ್ತಾನೆ. ಆದುದರಿಂದ ಸಕಾರಾತ್ಮಕರಾಗಿರುವ ಮತ್ತು ಯೆಹೋವನ ಮೇಲೆ ಬಹಳವಾಗಿ ಆತುಕೊಳ್ಳುವ ಮೂಲಕ, ಸತ್ಯದ ಬೀಜಗಳನ್ನು ಬಿತ್ತಲು ನಾವು ಈ ಕಿರುಹೊತ್ತಗೆಯನ್ನು ಭರವಸೆಯಿಂದ ಉಪಯೋಗಿಸಬಲ್ಲೆವು. ಈ ಕಿರುಹೊತ್ತಗೆ ಮತ್ತು ಇತರ ಕಿರುಹೊತ್ತಗೆಗಳ ಒಂದು ಒಳ್ಳೆಯ ಸರಬರಾಯಿಯನ್ನು ಇಟ್ಟುಕೊಂಡು, ನೀವು ಜನರನ್ನು ಭೇಟಿಯಾಗುವಲೆಲ್ಲಾ ಅವುಗಳನ್ನು ಸಂಭಾಷಣಾ ಪ್ರಾರಂಭಕಗಳಾಗಿ ಉಪಯೋಗಿಸಿರಿ.
11 ಒಂದು ಸಂಭಾಷಣೆಯನ್ನು ಆರಂಭಿಸುವುದು ತೀರ ಕಷ್ಟಕರವೆಂದು ಎಂದಿಗೂ ಭಾವಿಸಬೇಡಿರಿ. “ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು,” ಎಂದು ಅಪೊಸ್ತಲ ಪೌಲನು ಹೇಳಿದನೆಂಬುದನ್ನು ನೆನಪಿನಲ್ಲಿಡಿರಿ. (2 ಕೊರಿಂ. 3:5) ಜನರ ಜೀವಗಳು ಗಂಡಾಂತರದಲ್ಲಿವೆ. ದೇವರ ಜ್ಞಾನದ ಕೀಲಿಕೈಯನ್ನು ಉಪಯೋಗಿಸುವ ಮೂಲಕ, ನಿತ್ಯ ಜೀವಕ್ಕಾಗಿರುವ ಮಾರ್ಗವನ್ನು ಅವರಿಗಾಗಿ ತೆರೆಯುವುದು ನಮ್ಮ ದೇವದತ್ತ ನಿಯೋಗವಾಗಿದೆ. ನಮಗೆ ಒಂದು ಸಕಾರಾತ್ಮಕ ಮನೋಭಾವವು ಇದ್ದು, ದೇವರು ಮತ್ತು ಆತನ ಉದ್ದೇಶಗಳ ಕುರಿತಾಗಿ ನಿಷ್ಕೃಷ್ಟ ಜ್ಞಾನವನ್ನು ಎಲ್ಲಾ ರೀತಿಯ ಜನರಿಗೆ ಕೊಡಲಿಕ್ಕಾಗಿ ನಾವು ಕಿರುಹೊತ್ತಗೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವಂತಾಗಲಿ.