“ನಿಮ್ಮ ಕೈಲಾದದ್ದೆಲ್ಲವನ್ನೂ ಮಾಡಿರಿ”
1 ನಾವು ನಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಾಗ, ನಮ್ಮಲ್ಲಿರುವ ಅತಿ ಉತ್ತಮವಾದುದನ್ನು ಆತನಿಗೆ ಕೊಡುವೆವೆಂದು ನಾವು ಮಾತುಕೊಟ್ಟೆವು. ಸೂಕ್ತವಾಗಿಯೇ, ಪ್ರಥಮ ಶತಮಾನದ ಕ್ರೈಸ್ತರು ಯೆಹೋವನ ಮುಂದೆ ತಮ್ಮ ನಿಲುವನ್ನು ಖಚಿತಪಡಿಸಿಕೊಳ್ಳುವುದರಲ್ಲಿ ತಮ್ಮ ಕೈಲಾದದ್ದೆಲ್ಲವನ್ನೂ ಮಾಡುವಂತೆ ಅಪೊಸ್ತಲ ಪೇತ್ರನು ಅವರನ್ನು ಉತ್ತೇಜಿಸಿದನು. (2 ಪೇತ್ರ 1:10) ಇಂದು ಯೆಹೋವನನ್ನು ಸೇವಿಸುವುದರಲ್ಲಿ ಆತನನ್ನು ಪ್ರಸನ್ನಗೊಳಿಸಲು ನಾವು ನಿಶ್ಚಯವಾಗಿಯೂ ನಮ್ಮ ಕೈಲಾದದ್ದೆಲ್ಲವನ್ನೂ ಮಾಡಲು ಬಯಸುತ್ತೇವೆ. ಇದರಲ್ಲಿ ಏನು ಒಳಗೂಡಿದೆ? ಯೆಹೋವನೊಂದಿಗಿನ ನಮ್ಮ ಸಂಬಂಧವು ಗಾಢವಾದಂತೆ ಮತ್ತು ಆತನು ನಮಗಾಗಿ ಮಾಡಿರುವ ಎಲ್ಲಾ ಸಂಗತಿಗಳ ಕುರಿತು ನಾವು ಮನನ ಮಾಡಿದಂತೆ, ನಾವು ಆತನ ಸೇವೆಯಲ್ಲಿ ಅತ್ಯುತ್ತಮವಾದುದನ್ನು ಮಾಡುವಂತೆ ನಮ್ಮ ಹೃದಯವು ಯಾವಾಗಲೂ ನಮ್ಮನ್ನು ಪ್ರಚೋದಿಸುತ್ತದೆ. ನಾವು ನಮ್ಮ ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಸಾಧ್ಯವಿರುವಲ್ಲಿ, ಅದರ ಪ್ರಮಾಣವನ್ನು ಹೆಚ್ಚಿಸಲು ಬಯಸುತ್ತೇವೆ.—ಕೀರ್ತ. 34:8; 2 ತಿಮೊ. 2:15.
2 ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಬಯಸಿದ ಒಬ್ಬ ಯುವ ಸಹೋದರನು, ದೇವರ ವಾಕ್ಯದ ಒಂದು ಕ್ರಮವಾದ ಅಧ್ಯಯನವು, ಯೆಹೋವನಿಗಾಗಿರುವ ಅವನ ಗಣ್ಯತೆಯನ್ನು ಗಾಢವಾಗಿಸಿತು ಮತ್ತು ಅವನಲ್ಲಿ ಹೆಚ್ಚಿನ ಹುರುಪನ್ನು ಬೇರೂರಿಸಿತೆಂಬುದನ್ನು ಕಂಡುಕೊಂಡನು. ಇದು ಅವನನ್ನು ಪಯನೀಯರ್ ಸೇವೆಗೆ ಅರ್ಜಿ ಹಾಕುವಂತೆ ಪ್ರಚೋದಿಸಿತು. ಅಪರಿಚಿತರೊಂದಿಗೆ ಮಾತಾಡುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಿದ್ದ ಒಬ್ಬ ಸಹೋದರಿಯು, ರೀಸನಿಂಗ್ ಪುಸ್ತಕದಲ್ಲಿರುವ ಕೆಲವೊಂದು ನಿರೂಪಣೆಗಳನ್ನು ರೂಢಿಮಾಡಿಕೊಂಡಳು ಮತ್ತು ಶೀಘ್ರದಲ್ಲೇ, ತನ್ನ ಶುಶ್ರೂಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಳು. ಸತ್ಯವನ್ನು ಸ್ವೀಕರಿಸಿದ ಒಬ್ಬ ದಂಪತಿಗಳೊಂದಿಗೆ ಅವಳು ಒಂದು ಬೈಬಲ್ ಅಭ್ಯಾಸವನ್ನು ನಡಿಸಲು ಶಕ್ತಳಾದಳು.
3 ನೀವೇನನ್ನು ಮಾಡಬಲ್ಲಿರೊ ಅದರಲ್ಲಿ ಹರ್ಷಿಸಿರಿ: ನಮ್ಮಲ್ಲಿ ಕೆಲವರು, ನ್ಯೂನ ಆರೋಗ್ಯ, ಕುಟುಂಬ ವಿರೋಧ, ಬಡತನ, ಅಥವಾ ಟೆರಿಟೊರಿಯಲ್ಲಿ ಎದುರಾಗುವ ಉದಾಸೀನಭಾವದಂತಹ ಕಷ್ಟಕರ ಪರಿಸ್ಥಿತಿಗಳನ್ನು ಅನುಭವಿಸುತ್ತೇವೆ. ಈ ಕಡೇ ದಿವಸಗಳಲ್ಲಿ ಸಾಮಾನ್ಯವಾಗಿರುವ ಅನೇಕ ಇತರ ಸಮಸ್ಯೆಗಳು ನಮ್ಮ ಸೇವೆಯನ್ನು ಅಡ್ಡಗಟ್ಟಬಹುದು. (ಲೂಕ 21:34, NW ಪಾದಟಿಪ್ಪಣಿ; 2 ತಿಮೊ. 3:1) ನಾವು ಯೆಹೋವನಿಗೆ ಮಾಡಿದ ಸಮರ್ಪಣೆಯಲ್ಲಿ ತಪ್ಪಿಬಿದ್ದಿದ್ದೇವೆಂದು ಇದು ಅರ್ಥೈಸುತ್ತದೊ? ನಾವು ನಮ್ಮ ಕೈಲಾದದ್ದೆಲ್ಲವನ್ನೂ ಮಾಡುತ್ತಿರುವಲ್ಲಿ ಅದು ಹಾಗಿರುವುದಿಲ್ಲ.
4 ಇತರರು ಏನನ್ನು ಸಾಧಿಸಲು ಶಕ್ತರಾಗಿದ್ದಾರೊ ಅದರ ಆಧಾರದ ಮೇಲೆ ನಮ್ಮ ಯೋಗ್ಯತೆಯನ್ನು ನಿರ್ಣಯಿಸುವುದು ವಿವೇಕಯುತವಲ್ಲ. ಬದಲಾಗಿ, “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ” ಎಂದು ಶಾಸ್ತ್ರವಚನಗಳು ನಮ್ಮನ್ನು ಉತ್ತೇಜಿಸುತ್ತವೆ. ನಾವು ಶಕ್ತರಾಗಿರುವಷ್ಟರ ಮಟ್ಟಿಗೆ ನಮ್ಮನ್ನು ಪೂರ್ಣವಾಗಿ ನೀಡಿಕೊಳ್ಳುವುದು, ಯೆಹೋವನನ್ನು ಪ್ರಸನ್ನಗೊಳಿಸುತ್ತದೆ ಮತ್ತು ನಮಗೆ “ಹೆಚ್ಚಳಪಡುವದಕ್ಕೆ ಆಸ್ಪದ”ಕೊಡುತ್ತದೆ.—ಗಲಾ. 6:4; ಕೊಲೊ. 3:23, 24.
5 ‘ದೇವರ ಎದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಲು [‘ನಮ್ಮ ಕೈಲಾದದ್ದೆಲ್ಲವನ್ನೂ ಮಾಡಲು,’ NW]’ ಪೇತ್ರನ ಮಾತುಗಳನ್ನು ನಾವು ಪಾಲಿಸುವಂತಾಗಲಿ. (2 ಪೇತ್ರ 3:14) ಆ ಆತ್ಮವು ನಮ್ಮಲ್ಲಿ ಸುರಕ್ಷಿತವಾದ ಅನಿಸಿಕೆಯನ್ನುಂಟುಮಾಡುವುದು ಮತ್ತು ಅದು ಯೆಹೋವನು ಮಾತ್ರ ಕೊಡಸಾಧ್ಯವಿರುವ ಮನಶ್ಶಾಂತಿಯನ್ನು ನಮಗೆ ತರುವುದು.—ಕೀರ್ತ. 4:8.