“ಸಕಲ ಸತ್ಕಾರ್ಯಕ್ಕೆ ಸಂಪೂರ್ಣವಾಗಿ ಸನ್ನದ್ಧರಾಗುವುದು”
1 ಇಂದು ಯೆಹೋವನ ಜನರು, ಸಮೃದ್ಧವಾದ ಆತ್ಮಿಕ ಆಹಾರದ ಪುಷ್ಕಳತೆಯಿಂದ ಆಶೀರ್ವದಿಸಲ್ಪಟ್ಟಿದ್ದಾರೆ. (ಯೆಶಾ. 25:6) ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನ ಮತ್ತು ಸಭಾ ಕೂಟಗಳು, ಸಮ್ಮೇಳನಗಳು, ಹಾಗೂ ಅಧಿವೇಶನಗಳ ಮೂಲಕ ಅನುಭವಿಸಸಾಧ್ಯವಿರುವ ಶಾಸ್ತ್ರೀಯ ವಿಷಯವು ಬಹಳಷ್ಟು ಇದೆ. ಆದರೆ ನಾವು “ಪೂರ್ಣ ರೀತಿಯಲ್ಲಿ ಸಮರ್ಥರಾಗುತ್ತ, ಸಕಲ ಸತ್ಕಾರ್ಯಕ್ಕೆ ಸಂಪೂರ್ಣವಾಗಿ ಸನ್ನದ್ಧ”ರಾಗುವ ದೃಷ್ಟಿಕೋನದಿಂದ, ಈ ಎಲ್ಲ ಆತ್ಮಿಕ ಆಹಾರದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೇವೊ?—2 ತಿಮೊ. 3:17, NW.
2 ಈಗಾಗಲೇ ಅರ್ಧ ಮುಗಿದು ಹೋಗಿರುವ 1998ನೆಯ ಇಸವಿಯ ಆತ್ಮಿಕ ಮೆನೂ (ಭಕ್ಷ್ಯಪಟ್ಟಿ)ವಿನ ಕುರಿತು ಸ್ವಲ್ಪ ಯೋಚಿಸಿರಿ! ಸಾಪ್ತಾಹಿಕ ಸಭಾ ಕೂಟಗಳ ಮುಖಾಂತರ, ನಾವು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿನ 23 ಪುಸ್ತಕಗಳ ಮುಖ್ಯಾಂಶಗಳಲ್ಲಿ ಕೆಲವನ್ನು ಆವರಿಸುತ್ತಿದ್ದೇವೆ; ಬೈಬಲ್ ಜ್ಞಾನದ 22 ವಿಭಿನ್ನ ಅಂಶಗಳು ಹಾಗೂ ಕ್ರೈಸ್ತ ಗುಣಗಳ ವಿಷಯವಾಗಿ, ಕಾವಲಿನಬುರುಜು ಪತ್ರಿಕೆಯಲ್ಲಿನ ಮುಖ್ಯ ಅಧ್ಯಯನ ಲೇಖನಗಳನ್ನು ಹೊರತುಪಡಿಸಿ, ಬೇರೆ ಲೇಖನಗಳಲ್ಲಿ ಕಂಡುಕೊಳ್ಳಲ್ಪಡುವ ಮಾಹಿತಿಯನ್ನು ಪುನರ್ವಿಮರ್ಶಿಸುತ್ತೇವೆ; ಮತ್ತು ಕ್ಷೇತ್ರ ಸೇವೆಯಲ್ಲಿ ನಮಗೆ ಸಹಾಯ ಮಾಡಲಿರುವ, ಸಂಭಾಷಣೆಗಾಗಿರುವ 48 ವಿಷಯಗಳನ್ನು ಪರಿಗಣಿಸುತ್ತಿದ್ದೇವೆ. ಜ್ಞಾನ ಹಾಗೂ ಕುಟುಂಬ ಸಂತೋಷ ಪುಸ್ತಕಗಳನ್ನು ನಾವು ಇಡೀಯಾಗಿ—ಪ್ರತಿಯೊಂದು ಪ್ಯಾರಗ್ರಾಫನ್ನು—ಪುನರ್ವಿಮರ್ಶಿಸುತ್ತಿದ್ದೇವೆ. ಇದರೊಂದಿಗೆ, ನಮ್ಮ ರಾಜ್ಯದ ಸೇವೆಯ 12 ಸಂಚಿಕೆಗಳು, 52 ಕಾವಲಿನಬುರುಜು ಅಧ್ಯಯನ ಲೇಖನಗಳು, ಮತ್ತು ವಿವಿಧ ಬೈಬಲ್ ವಿಷಯಗಳ ಕುರಿತು ಬಹುಮಟ್ಟಿಗೆ 52 ಬಹಿರಂಗ ಭಾಷಣಗಳಿಂದ ನಾವು ಪೋಷಿಸಲ್ಪಡುತ್ತಿದ್ದೇವೆ. ಇದರ ಜೊತೆಗೆ, ಸಮಾಚಾರಭರಿತ ಅಧಿವೇಶನ ಹಾಗೂ ಸಮ್ಮೇಳನ ಕಾರ್ಯಕ್ರಮಗಳು ಸೇರಿರುತ್ತವೆ. ಆತ್ಮಿಕ ಸುವಿಷಯಗಳ ಎಂತಹ ಒಂದು ಪುಷ್ಕಳತೆ ನಮಗೆ ಲಭ್ಯವಿದೆ!
3 ಯೆಹೋವನ ಒದಗಿಸುವಿಕೆಗಳಿಗೆ ಗಣ್ಯತೆ ತೋರಿಸಿರಿ: ಸಂಪೂರ್ಣವಾಗಿ ಪ್ರಯೋಜನ ಪಡೆಯಲಿಕ್ಕಾಗಿ, ಯೆಹೋವನು ಇಂತಹ ಆತ್ಮಿಕ ಸಮೃದ್ಧಿಯನ್ನು ಏಕೆ ಒದಗಿಸುತ್ತಾನೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಸುವಿಷಯಗಳನ್ನು ನಮ್ಮದಾಗಿಸಿಕೊಳ್ಳುವುದರಿಂದ, ನಮ್ಮ ನಂಬಿಕೆಯು ಕಟ್ಟಲ್ಪಡುತ್ತದೆ ಮತ್ತು ಆತನೊಂದಿಗಿನ ನಮ್ಮ ಸಂಬಂಧವು ಬಲಗೊಳಿಸಲ್ಪಡುತ್ತದೆ. (1 ತಿಮೊ. 4:6) ಹಾಗಿದ್ದರೂ, ಆತ್ಮಿಕ ಆಹಾರವು ಕೇವಲ ನಮ್ಮ ಉಪದೇಶಕ್ಕಾಗಿ ಲಭ್ಯಗೊಳಿಸಲ್ಪಡುವುದಿಲ್ಲ. ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಅದು ನಮ್ಮನ್ನು ಪ್ರಚೋದಿಸುತ್ತದೆ, ಮತ್ತು ಸುವಾರ್ತೆಯ ಶುಶ್ರೂಷಕರೋಪಾದಿ ಹಾಗೆ ಮಾಡುವುದರಲ್ಲಿ ಫಲಪ್ರದರಾಗಿರುವಂತೆ ನಮ್ಮನ್ನು ಸಜ್ಜುಗೊಳಿಸುತ್ತದೆ.—2 ತಿಮೊ. 4:5.
4 ನಾವು ನಮ್ಮ ಆತ್ಮಿಕ ಅಗತ್ಯಗಳನ್ನು ಕಡೆಗಣಿಸದೆ, ಯೆಹೋವನ ಮೇಜಿನಿಂದ ಬರುವ ಸಮೃದ್ಧವೂ ಆತ್ಮಿಕವಾಗಿ ತೃಪ್ತಿದಾಯಕವೂ ಆದ ಒದಗಿಸುವಿಕೆಗಳಿಗಾಗಿ ಸದಾ ಹಂಬಲವನ್ನು ಬೆಳೆಸಿಕೊಳ್ಳುತ್ತಿರೋಣ. (ಮತ್ತಾ. 5:3; 1 ಪೇತ್ರ 2:2) ಸಂಪೂರ್ಣವಾಗಿ ಪ್ರಯೋಜನ ಪಡೆಯಲಿಕ್ಕಾಗಿ, ಕ್ರಮವಾದ ವೈಯಕ್ತಿಕ ಹಾಗೂ ಕುಟುಂಬ ಬೈಬಲ್ ಅಧ್ಯಯನ ಮತ್ತು ಕೂಟದ ಹಾಜರಿಯಂತಹ ಪ್ರಮುಖ ವಿಷಯಗಳಿಗೆ ಸಾಕಷ್ಟು ಸಮಯವನ್ನು ಬದಿಗಿರಿಸುವುದು ಆವಶ್ಯಕವಾಗಿದೆ. (ಎಫೆ. 5:15, 16) ಇಬ್ರಿಯ 13:20, 21ರಲ್ಲಿ ದಾಖಲಿಸಲ್ಪಟ್ಟಂತೆ, ಹಾಗೆ ಮಾಡುವುದರ ಸಂತೋಷಕರ ಪ್ರತಿಫಲಗಳು, ಪೌಲನು ನಂಬಿಗಸ್ತ ಹೀಬ್ರು ಕ್ರೈಸ್ತರಿಗೆ ಬರೆದ ಪ್ರೇರಿತ ಉತ್ತೇಜನಕ್ಕನುಗುಣವಾಗಿ ಇರುವವು.