ಕೆಲಸವನ್ನು ಮಾಡಿಮುಗಿಸಲು ನಮ್ಮೆಲ್ಲರ ಅಗತ್ಯವಿದೆ
1 ಯೇಸು ಕ್ರಿಸ್ತನ ಪ್ರತಿಯೊಬ್ಬ ಶಿಷ್ಯನು, ರಾಜ್ಯದ ಸಾರುವಿಕೆಯ ಕೆಲಸವನ್ನು ಬೆಂಬಲಿಸಲು ಮತ್ತು ಅದರಲ್ಲಿ ಭಾಗವಹಿಸಲು ತಾನು ಮಾಡುವ ಪ್ರಯತ್ನಗಳು ಬಹಳ ಪ್ರಾಮುಖ್ಯವಾಗಿವೆ ಎಂಬುದನ್ನು ಗ್ರಹಿಸಿಕೊಳ್ಳಬೇಕು. ರಾಜ್ಯದ ಫಲವನ್ನು ತನ್ನ ಶಿಷ್ಯರು ವಿವಿಧ ಪ್ರಮಾಣಗಳಲ್ಲಿ ನೀಡುವರು ಎಂಬುದನ್ನು ಯೇಸು ಗ್ರಹಿಸಿದನು. (ಮತ್ತಾ. 13:23) ಸಾರುವ ಚಟುವಟಿಕೆಯ ಒಂದು ದೊಡ್ಡ ಭಾಗವು ಅನೇಕ ಶ್ರಮದಾಯಕ ಪಯನೀಯರರ ಮೂಲಕ ನಿರ್ವಹಿಸಲ್ಪಡುತ್ತ ಇರುವುದಾದರೂ, ಸಾಧ್ಯವಾದಷ್ಟು ಫಲವನ್ನು ಕೊಡುವ ಮೂಲಕ ದೇವರನ್ನು ಮಹಿಮೆಪಡಿಸಲು ಉತ್ಸಾಹದಿಂದ ಮುಂದುವರಿಯುವವರೆಲ್ಲರೂ ಪ್ರಶಂಸಾರ್ಹರು.—ಯೋಹಾ. 15:8.
2 ಸಾಮೂಹಿಕ ಪ್ರಯತ್ನಗಳು ಹೆಚ್ಚನ್ನು ಸಾಧಿಸುತ್ತವೆ: ತನ್ನ ಎಲ್ಲ ಶಿಷ್ಯರ ಒಟ್ಟುಗೂಡಿದ ಪ್ರಯತ್ನಗಳು, ತನ್ನ ಕೆಲಸಗಳಿಗಿಂತಲೂ ಮಹತ್ತಾದ ಕೆಲಸಗಳನ್ನು ಉತ್ಪಾದಿಸುವವು ಎಂದು ಯೇಸು ಮುಂತಿಳಿಸಿದನು. (ಯೋಹಾ. 14:12) ನಾವು ರಾಜ್ಯದ ಸಾರುವಿಕೆಯಲ್ಲಿ ಮಾಡಸಾಧ್ಯವಿರುವುದನ್ನು, ನಮ್ಮ ವೈಯಕ್ತಿಕ ಪರಿಸ್ಥಿತಿಗಳು ಸೀಮಿತಗೊಳಿಸಲಿ ಇಲ್ಲವೆ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ನಮ್ಮನ್ನು ಅನುಮತಿಸಲಿ, ಕೆಲಸವನ್ನು ಮಾಡಿಮುಗಿಸಲು ನಮ್ಮೆಲ್ಲರ ಅಗತ್ಯವಿದೆ. ಇದು ಪೌಲನು ಹೇಳಿದಂತೆಯೇ ಇದೆ: “ದೇಹವೆಲ್ಲಾ ಆತನ ದೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.”—ಎಫೆ. 4:16.
3 ತಮ್ಮ ಪ್ರಯತ್ನಗಳು ಹೆಚ್ಚಿನ ನೆರವನ್ನು ನೀಡಿರುವುದಿಲ್ಲವೆಂದು ಕೆಲವರಿಗೆ ಅನಿಸಬಹುದು. ಹಾಗಿದ್ದರೂ, ನಮ್ಮ ಸೇವೆಯು ಮನಪೂರ್ವಕವಾದದ್ದು ಎಂಬುದೇ ಯೆಹೋವನ ದೃಷ್ಟಿಯಲ್ಲಿ ಮಹತ್ತರವಾದ ಸಂಗತಿಯಾಗಿದೆ. ಆತನಿಗಾಗಿ ನಾವು ಮಾಡುವ ಸಕಲ ವಿಷಯವೂ, ಅಮೂಲ್ಯವಾದದ್ದೂ ಗಣ್ಯಮಾಡಲ್ಪಡುವಂತಹದ್ದೂ ಆಗಿದೆ.—ಲೂಕ 21:1-4ನ್ನು ಹೋಲಿಸಿರಿ.
4 ಕೆಲಸವನ್ನು ಬೆಂಬಲಿಸುತ್ತಾ ಇರಿ: ಲೋಕವ್ಯಾಪಕ ಕೆಲಸಕ್ಕೆ ಭೌತಿಕವಾಗಿ ಸಹಾಯ ನೀಡುವ ಸುಯೋಗವು ನಮಗೆಲ್ಲರಿಗೂ ಇದೆ. ರಾಜ್ಯದ ಕೆಲಸವನ್ನು ಬೆಂಬಲಿಸುವುದರಲ್ಲಿ ಒಳಗೂಡಿರುವ ಶಾರೀರಿಕ ಶ್ರಮದಲ್ಲಿಯೂ ಕೆಲವರು ನೆರವು ನೀಡಬಲ್ಲರು. ಕೂಟಗಳಲ್ಲಿ ಚೆನ್ನಾಗಿ ತಯಾರಿಸಲಾದ ಹೇಳಿಕೆಗಳನ್ನು ನೀಡಲು ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸಲು ಪ್ರತಿಯೊಬ್ಬರೂ ಪ್ರಯತ್ನಿಸಸಾಧ್ಯವಿದೆ. ಇತರರನ್ನು ಉತ್ತೇಜಿಸಲಿಕ್ಕಾಗಿರುವ ಅವಕಾಶಗಳ ಸದುಪಯೋಗವನ್ನು ಮಾಡುವ ಮೂಲಕ, ಸಭೆಯ ಆತ್ಮಿಕತೆಗೆ ನಾವು ಅಮೂಲ್ಯವಾದ ದಾನವನ್ನು ಮಾಡುತ್ತೇವೆ, ಮತ್ತು ಇದು ಸಭೆಗೆ ಒಪ್ಪಿಸಲ್ಪಟ್ಟಿರುವ ಕೆಲಸವನ್ನು ಪೂರೈಸಲಿಕ್ಕಾಗಿರುವ ಅದರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
5 ನಿಶ್ಚಯವಾಗಿಯೂ, ಕೆಲಸವನ್ನು ಮಾಡಿಮುಗಿಸಲು ನಮ್ಮೆಲ್ಲರ ಅಗತ್ಯವಿದೆ. ಇದಕ್ಕಾಗಿ ತನ್ನ ಅಗತ್ಯವಿಲ್ಲವೆಂದು ಯಾರೊಬ್ಬನೂ ನೆನಸಬಾರದು. ಯೆಹೋವನ ಸೇವೆಯಲ್ಲಿ ನಾವು ಮಾಡುವ ಚಿಕ್ಕದೊಡ್ಡ ಪ್ರಯತ್ನಗಳು, ನಮ್ಮನ್ನು ದೇವರ ಏಕಮಾತ್ರ ಸತ್ಯಾರಾಧಕರನ್ನಾಗಿ ಪ್ರತ್ಯೇಕಿಸುತ್ತದೆ. (ಮಲಾ. 3:18) ಯೆಹೋವನನ್ನು ಘನಪಡಿಸುವುದರಲ್ಲಿ ಮತ್ತು ಆತನನ್ನು ಅರಿತು, ಸೇವಿಸುವಂತೆ ಇತರರಿಗೆ ಸಹಾಯಮಾಡುವುದರಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಅರ್ಥಭರಿತವಾದ ಒಂದು ಪಾಲು ಇರಸಾಧ್ಯವಿದೆ.