ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
“ದೇವರ ಆಜ್ಞೆಗಳನ್ನು ಕೈಕೊಂಡು, ಬಾಳಿರಿ.” ಇದು, 1999ರ ಜನವರಿಯಲ್ಲಿ ಆರಂಭವಾಗಲಿರುವ ಎರಡು ದಿನದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಶೀರ್ಷಿಕೆಯಾಗಿದೆ. (ಜ್ಞಾನೋ. 4:4) ದೇವರ ಆಜ್ಞೆಗಳಿಗೆ ವಿಧೇಯರಾಗಿರುವುದು ಏಕೆ ಭಾರದಾಯಕವಲ್ಲ ಎಂಬುದನ್ನು ಅದು ಒತ್ತಿಹೇಳುವುದು. ಇನ್ನೂ ಹೆಚ್ಚಾಗಿ, ದೇವರ ಚಿತ್ತವನ್ನು ಮಾಡುವುದು, ಚೈತನ್ಯ ಮತ್ತು ನಿಜ ಸಂತೋಷ ಹಾಗೂ ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ಹೇಗೆ ಕೊಡುತ್ತದೆಂಬುದನ್ನು ಅದು ತೋರಿಸುವುದು.—ಮತ್ತಾ. 11:28-30; ಯೋಹಾ. 13:17.
ಕ್ರಿಸ್ತನ ಆಜ್ಞೆಗೆ ವಿಧೇಯರಾಗಿ, ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವವರು, ಅಧ್ಯಕ್ಷ ಮೇಲ್ವಿಚಾರಕರೊಂದಿಗೆ ಮಾತಾಡಬೇಕು, ಮತ್ತು ಅವರು ಅಗತ್ಯವಿರುವ ಏರ್ಪಾಡುಗಳನ್ನು ಮಾಡುವರು.—ಮತ್ತಾ. 28:19, 20.
ದೇವರಿಗಾಗಿ ಮತ್ತು ನಮ್ಮ ಸಹೋದರರಿಗಾಗಿ ನಾವು ಪ್ರೀತಿಯನ್ನು ತೋರಿಸಸಾಧ್ಯವಿರುವ ವ್ಯಾವಹಾರಿಕ ವಿಧಗಳನ್ನು ಒಂದು ಭಾಷಣಮಾಲೆಯು ವಿವರಿಸುವುದು. (ಯೋಹಾ. 13:34, 35; 1 ಯೋಹಾ. 5:3) ಕೀರ್ತನೆ 19 ಮತ್ತು 119ನೆಯ ಅಧ್ಯಾಯಗಳಿಂದ ತೆಗೆಯಲ್ಪಟ್ಟ ಹೃದಯ ಪ್ರೇರಕ ಸಲಹೆಯನ್ನು ಕಾರ್ಯಕ್ರಮದಲ್ಲಿ ಸೇರಿಸಲಾಗುವುದು. ಈ ಕೀರ್ತನೆಗಳಲ್ಲಿನ ಪ್ರೇರಿತ ಬುದ್ಧಿವಾದವು, ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಟ್ಟಿತ್ತಾದರೂ, ಅದು ನಮಗೆ ಇಂದು ಹೇಗೆ ವೈಯಕ್ತಿಕವಾಗಿ ಪ್ರಯೋಜನವನ್ನು ತರುತ್ತದೆಂಬುದನ್ನು ನಾವು ನೋಡುವೆವು.
ಜಿಲ್ಲಾ ಮೇಲ್ವಿಚಾರಕರು ಕೊಡುವ ಬಹಿರಂಗ ಭಾಷಣದ ಶೀರ್ಷಿಕೆಯು, ‘ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳಿರಿ’ ಎಂದಾಗಿದೆ. (ಪ್ರಸಂ. 12:13) ಸರ್ಕಿಟ್ ಮೇಲ್ವಿಚಾರಕರ ಕೊನೆಯ ಭಾಷಣವು, ಯುವ ಜನರು ಈಗಲೇ ಅತ್ಯುತ್ತಮವಾದ ಒಂದು ಜೀವನವನ್ನು ನಡೆಸಬಹುದಾದ ವಿಧವನ್ನು ಮತ್ತು ಒಂದು ನಿತ್ಯ ಭವಿಷ್ಯತ್ತಿನಲ್ಲಿ ಅವರು ಭರವಸೆಯನ್ನಿಡಬಲ್ಲ ಕಾರಣವನ್ನು ತೋರಿಸುವುದು. ಪ್ರೀತಿಯ “ರಾಜಾಜ್ಞೆ”ಗನುಸಾರವಾಗಿ ಜೀವಿಸುವುದರಿಂದ ಬರುವ ಅನೇಕ ಪ್ರಯೋಜನಗಳನ್ನು, ಒಂದೊಂದಾಗಿ ಹೇಳುವ ಮೂಲಕ ಜಿಲ್ಲಾ ಮೇಲ್ವಿಚಾರಕರು ಕಾರ್ಯಕ್ರಮವನ್ನು ಸಮಾಪ್ತಿಗೊಳಿಸುತ್ತಾರೆ. (ಯಾಕೋ. 2:8) ಖಂಡಿತವಾಗಿಯೂ, ಇದು ಯಾರೊಬ್ಬರೂ ತಪ್ಪಿಸಲು ಇಷ್ಟಪಡದ ಒಂದು ಸಮ್ಮೇಳನ ಕಾರ್ಯಕ್ರಮವಾಗಿದೆ!