ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
“ವಿಶೇಷವಾಗಿ ದೇವರೆಡೆಗಿನ ಗಾಢವಾದ ಪೂಜ್ಯಭಾವ ಮತ್ತು ಭಯಾಶ್ಚರ್ಯ” ಎಂಬುದು ಭಯದ ಕುರಿತಾದ ಒಂದು ವಿವರಣೆಯಾಗಿದೆ. ಇದು, ಶಾಸ್ತ್ರವಚನಗಳಲ್ಲಿ “ವಿವೇಕದ ಆರಂಭ” ಎಂದು ಸೂಚಿಸಲ್ಪಟ್ಟಿರುವ ಹಿತಕರವಾದ ಭಯವನ್ನು ವರ್ಣಿಸುತ್ತದೆ. (ಕೀರ್ತ. 111:10, NW) ಇದಕ್ಕೆ ವ್ಯತಿರಿಕ್ತವಾಗಿ, ಮತ್ತೊಂದು ರೀತಿಯ ಭಯವು ನಮ್ಮ ಸುತ್ತಲೂ ಇರುವ ಸೈತಾನನ ಲೋಕವನ್ನು ಆವರಿಸುತ್ತದೆ. ಯೆಹೋವನ ಕಡೆಗೆ ಪೂಜ್ಯಭಾವದ ಭಯವನ್ನು ಬೆಳೆಸಿಕೊಳ್ಳುತ್ತಿರುವಾಗ, ಸೈತಾನನ ಲೋಕದ ಆ ಅಹಿತಕರವಾದ ಅನಿಸಿಕೆಯನ್ನು ನಾವು ಹೇಗೆ ದೂರಮಾಡಬಲ್ಲೆವು? ಇಸವಿ 2002ಕ್ಕಾಗಿರುವ ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು ಈ ಪ್ರಶ್ನೆಗೆ ಉತ್ತರವನ್ನು ನೀಡಲಿದೆ. “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ” ಎಂಬುದು ಅದರ ಮುಖ್ಯವಿಷಯವಾಗಿದೆ. (ಪ್ರಕ. 14:7) ಯೆಹೋವನ ಭಯವು ನಮಗೆ ವೈಯಕ್ತಿಕವಾಗಿ ಮತ್ತು ಒಂದು ಸಂಸ್ಥೆಯೋಪಾದಿ ಪ್ರಯೋಜನವನ್ನು ತರುತ್ತಿರುವ ಅನೇಕ ವಿಧಗಳನ್ನು ನಾವು ಅರ್ಥಮಾಡಿಕೊಳ್ಳುವೆವು.
ಭಯ ಎಂಬುದು ಆತಂಕ, ಧೈರ್ಯಗುಂದುವಿಕೆ ಮತ್ತು ಕಷ್ಟಕರ ಸನ್ನಿವೇಶಗಳನ್ನು ಎದುರಿಸುವುದರಿಂದ ಹಿಂಜರಿಯುವುದನ್ನು ಅರ್ಥೈಸಬಹುದಾದರೂ, ‘ಯೆಹೋವನಲ್ಲಿ ಭಯಭಕ್ತಿಯುಳ್ಳವನು ಧನ್ಯನು’ ಎಂದು ಬೈಬಲ್ ಹೇಳುತ್ತದೆ. (ಕೀರ್ತ. 128:1) ಸತ್ಯಾರಾಧನೆಗೆ ವಿರುದ್ಧವಾಗಿ ಏಳುವ ಪಂಥಾಹ್ವಾನಗಳನ್ನು ನಾವು ಹೇಗೆ ಯಶಸ್ವಿಕರವಾಗಿ ನಿಭಾಯಿಸಬಹುದು ಎಂಬುದನ್ನು ಸಮ್ಮೇಳನ ಕಾರ್ಯಕ್ರಮವು ತೋರಿಸುವುದು. ದೇವರ ಕಡೆಗೆ ಇಂತಹ ಹಿತಕರವಾದ ಭಯವನ್ನು ಬೆಳೆಸಿಕೊಳ್ಳುವಂತೆ ನಾವು ಹೊಸಬರಿಗೆ ಹೇಗೆ ಸಹಾಯಮಾಡಬಹುದು ಎಂಬುದನ್ನು ನೋಡುವೆವು. ಇದು ವಾಸ್ತವದಲ್ಲಿ ಅವರು ಆತನನ್ನು ತಮ್ಮ ಪೂರ್ಣಹೃದಯ, ಪ್ರಾಣ, ಬುದ್ಧಿ ಮತ್ತು ಶಕ್ತಿಯಿಂದ ಸೇವಿಸುವಂತೆ ಅವರನ್ನು ಪ್ರಚೋದಿಸುವುದು. (ಮಾರ್ಕ 12:30) ಮೊದಲನೆಯ ದಿನವು, “ನೀವು ಪ್ರೀತಿಸುವವರ ಇನ್ನೂ ಸಮೀಪಕ್ಕೆ ಬನ್ನಿರಿ” ಎಂಬ ಜಿಲ್ಲಾ ಮೇಲ್ವಿಚಾರಕರ ಭಾಷಣದೊಂದಿಗೆ ಕೊನೆಗೊಳ್ಳುವುದು. ಯೆಹೋವನಿಂದ, ನಮ್ಮ ಕುಟುಂಬದಿಂದ ಮತ್ತು ನಮ್ಮ ಕ್ರೈಸ್ತ ಸಹೋದರರಿಂದ ನಮ್ಮನ್ನು ಬೇರ್ಪಡಿಸಲು ಯತ್ನಿಸುವ ಪೈಶಾಚಿಕ ಪ್ರಯತ್ನಗಳ ಕುರಿತು ನಾವು ಹೇಗೆ ಎಚ್ಚರವಹಿಸಬೇಕು ಎಂಬುದನ್ನು ಅವರು ವಿವರಿಸುವರು.
“ಯೆಹೋವನಿಗೆ ಭಯಪಡಿರಿ, ಮನುಷ್ಯರಿಗಲ್ಲ” ಎಂಬುದು ಎರಡನೆಯ ದಿನದ ನಾಲ್ಕು-ಭಾಗದ ಭಾಷಣಮಾಲೆಯ ಮುಖ್ಯವಿಷಯವಾಗಿರುವುದು. ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸುವುದರಿಂದ ನಮ್ಮನ್ನು ತಡೆಗಟ್ಟಬಹುದಾದ ಅಥವಾ ಶಾಲೆ ಮತ್ತು ಕೆಲಸದ ಸ್ಥಳದಲ್ಲಿ ನಮ್ಮ ಸಮಗ್ರತೆ ಹಾಗೂ ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದರಿಂದ ನಮ್ಮನ್ನು ತಡೆಯಬಹುದಾದ ಯಾವುದೇ ಭಯವನ್ನು ನಾವು ಹೇಗೆ ಜಯಿಸಬಹುದು ಎಂಬುದನ್ನು ಅದು ವಿವರಿಸುವುದು. “ದೇವರಿಗೆ ಭಯಪಟ್ಟು, ಆತನ ಆಜ್ಞೆಗಳನ್ನು ಕೈಕೊಳ್ಳಿರಿ” ಎಂಬ ಬಹಿರಂಗ ಭಾಷಣವು, ಪ್ರಕಟನೆ 14ನೇ ಅಧ್ಯಾಯದಲ್ಲಿ ಕೊಡಲ್ಪಟ್ಟಿರುವ ಘಟನೆಗಳ ಸರಮಾಲೆಯ ಮೇಲೆ ಆಧಾರಿತವಾಗಿರುವುದು. ಸರ್ಕಿಟ್ ಸಮ್ಮೇಳನವು, “ಯೆಹೋವನ ಭಯದಲ್ಲಿ ನಡೆಯುವುದನ್ನು ಮುಂದುವರಿಸಿರಿ” ಎಂಬ ಪ್ರೋತ್ಸಾಹದಾಯಕ ನಿರ್ದೇಶನದೊಂದಿಗೆ ಕೊನೆಗೊಳ್ಳುವುದು.
ನೀವು ತಪ್ಪಿಸಿಕೊಳ್ಳಬಾರದಂಥ ಈ ಕಾರ್ಯಕ್ರಮದ ಹೆಚ್ಚಿನ ವೈಶಿಷ್ಟ್ಯಗಳು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ, ಮಾದರಿ ಸೇವಾ ಕೂಟ, ದೀಕ್ಷಾಸ್ನಾನದ ಭಾಷಣ, ಮತ್ತು ಕಾವಲಿನಬುರುಜು ಅಧ್ಯಯನದ ಸಾರಾಂಶ ಆಗಿದೆ. ನಿಮ್ಮೊಂದಿಗೆ ಹಾಜರಾಗುವಂತೆ ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನೂ ಆಮಂತ್ರಿಸಿರಿ. ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುವವರು, ಆದಷ್ಟು ಬೇಗನೆ ಇದರ ಕುರಿತು ಅಧ್ಯಕ್ಷ ಮೇಲ್ವಿಚಾರಕನಿಗೆ ಹೇಳಬೇಕು. ಈ ಪ್ರಾಮುಖ್ಯವಾದ ಕಾರ್ಯಕ್ರಮದ ಯಾವುದೇ ಭಾಗವನ್ನು ತಪ್ಪಿಸಿಕೊಳ್ಳದಿರುವ ಮೂಲಕ, ಯೆಹೋವನ ಹಿತಕರವಾದ ಭಯವನ್ನು ಪ್ರದರ್ಶಿಸಲು ಮತ್ತು ಆತನಿಗೆ ಮಹಿಮೆಯನ್ನು ಸಲ್ಲಿಸಲು ನಾವೆಲ್ಲರೂ ಬಯಸುವೆವು!