ಒಬ್ಬ ಮುಸ್ಲಿಮನಿಗೆ ನೀವು ಏನನ್ನು ಹೇಳುವಿರಿ?
1 ಒಬ್ಬ ಮುಸ್ಲಿಮನಿಗೆ ಸಾಕ್ಷಿನೀಡುವ ಸಂದರ್ಭ ನಿಮಗೆ ಯಾವಾಗಲಾದರೂ ಸಿಕ್ಕಿದೆಯೋ? ಸಿಕ್ಕಿರುವಲ್ಲಿ, ಮುಸ್ಲಿಮರಿಗೆ ದೇವರಲ್ಲಿ ಬಹಳ ಶ್ರದ್ಧೆಯಿದೆ ಎಂಬುದನ್ನು ನೀವು ಕಂಡುಕೊಂಡಿರಬಹುದು. ಹೀಗಿದ್ದರೂ, ಯೆಹೋವನ ಪ್ರವಾದಿಗಳಿಂದ ಮುಂತಿಳಿಸಲ್ಪಟ್ಟಿರುವ, ಭೂಮಿಯ ಮೇಲೆ ಬರಲಿರುವ ಪರದೈಸದ ಬಗ್ಗೆ ಅವರಿಗೆ ಏನೇನೂ ಗೊತ್ತಿಲ್ಲ ಮತ್ತು ನಾವು ಅವರೊಂದಿಗೆ ಅದೇ ನಿರೀಕ್ಷೆಯನ್ನು ಹಂಚಿಕೊಳ್ಳಲು ಬಯಸುತ್ತೇವೆ. (1 ತಿಮೊ. 2:3, 4) ಈ ಕೆಳಗೆ ಕೊಡಲ್ಪಟ್ಟಿರುವ ಮಾಹಿತಿಯು ಒಂದು ಒಳ್ಳೆಯ ಸಾಕ್ಷಿಯನ್ನು ಕೊಡಲು ನಿಮಗೆ ಸಹಾಯಮಾಡಬಹುದು.
2 ಮುಸ್ಲಿಮರು ಅಲ್ಲಾಹನಲ್ಲಿ ಅಥವಾ ದೇವರಲ್ಲಿ ನಂಬಿಕೆಯಿಡುತ್ತಾರೆ ಮತ್ತು ಮಹಮ್ಮದ್ ದೇವರ ಪ್ರವಾದಿಯೆಂದು ಅವರು ನಂಬುತ್ತಾರೆ. ಅವರ ಪವಿತ್ರ ಗ್ರಂಥವು ಕುರಾನ್ ಆಗಿದ್ದು, ಅವರ ಧರ್ಮವು ಇಸ್ಲಾಮ್ ಎಂದು ಕರೆಯಲ್ಪಡುತ್ತದೆ. ಇಸ್ಲಾಮ್ ಎಂದರೆ “ಅಧೀನತೆ” ಎಂದರ್ಥ. ಸುಳ್ಳಾಡುವಿಕೆ ಮತ್ತು ವಿಗ್ರಹಗಳ ಆರಾಧನೆ ತಪ್ಪು, ದೇವರು ಒಬ್ಬನೇ, ಆತನು ತ್ರಯೈಕ್ಯದ ಭಾಗವಾಗಿಲ್ಲ ಎಂದು ಕುರಾನ್ ತಿಳಿಸುತ್ತದೆ. ಅಷ್ಟುಮಾತ್ರವಲ್ಲದೆ, ಆತ್ಮದ ಅಮರತ್ವ, ನರಕಾಗ್ನಿ ಮತ್ತು ಸ್ವರ್ಗೀಯ ಪರದೈಸದ ಕುರಿತು ಸಹ ಅದು ಕಲಿಸುತ್ತದೆ. ಬೈಬಲ್ ದೇವರ ವಾಕ್ಯವೆಂದು ಮುಸ್ಲಿಮರು ಅಂಗೀಕರಿಸುವುದಾದರೂ ಅದರಲ್ಲಿ ಬದಲಾವಣೆಗಳು ಮಾಡಲ್ಪಟ್ಟಿವೆ ಎಂದು ಅವರು ನೆನಸುತ್ತಾರೆ. ಆದರೆ, ಕುರಾನ್ ಇಂದಿನ ವರೆಗೂ ಮೂಲ ಭಾಷೆಯಲ್ಲೇ ಇದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳು ಮಾಡಲ್ಪಟ್ಟಿಲ್ಲವೆಂಬುದು ಅವರ ಅಭಿಪ್ರಾಯವಾಗಿದೆ.
3 ಸ್ನೇಹಪರರೂ, ಜಾಣ್ಮೆಯಿಂದ ಮಾತಾಡುವವರೂ ಮತ್ತು ವಿವೇಚನಾಪರರೂ ಆಗಿರಿ: ಒಬ್ಬ ಮುಸ್ಲಿಮನನ್ನು ಸಂಭಾಷಣೆಯಲ್ಲಿ ಒಳಗೂಡಿಸುತ್ತಿರುವಾಗ, ಅವನೊಂದಿಗೆ ಸ್ನೇಹಪರರೂ ಜಾಣ್ಮೆಯುಳ್ಳವರೂ ಆಗಿರಿ. (ಜ್ಞಾನೋ. 25:15) ಮುಸ್ಲಿಮರ ನಂಬಿಕೆಗಳು ಅವರಲ್ಲಿ ದೃಢವಾಗಿ ಬೇರೂರಿಸಲ್ಪಟ್ಟಿವೆ ಮತ್ತು ಆ ನಂಬಿಕೆಗಳಲ್ಲಿ ಹೆಚ್ಚಿನವುಗಳನ್ನು ಕಂಠಪಾಠ ಮಾಡುವ ಮೂಲಕ ಕಲಿತುಕೊಂಡಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ಆದುದರಿಂದ, ಧಾರ್ಮಿಕ ಬೋಧನೆಗಳ ಕುರಿತು ವಿಚಾರಮಾಡುವುದು ಮತ್ತು ದೇವರ ಚಿತ್ತವೇನಾಗಿದೆ ಎಂಬುದನ್ನು ಸ್ವತಃ ಪರೀಕ್ಷಿಸಿ ನೋಡುವುದು, ಅವರ ಆತ್ಮಿಕ ಬೆಳವಣಿಗೆಯ ಭಾಗವಾಗಿರುವುದಿಲ್ಲ. (ರೋಮಾ. 12:2) ಮುಸ್ಲಿಮರಿಗೆ ಸಹಾಯಮಾಡಲು, ಸಹನೆ ಮತ್ತು ತಿಳುವಳಿಕೆಯು ಅತ್ಯಗತ್ಯವಾಗಿದೆ.—1 ಕೊರಿಂ. 9:19-23.
4 ನೀವು ಕ್ರೈಸ್ತಪ್ರಪಂಚಕ್ಕೆ ಸೇರಿದವರು ಎಂಬ ಅಭಿಪ್ರಾಯವನ್ನು ಒಬ್ಬ ಮುಸ್ಲಿಮ್ ವ್ಯಕ್ತಿಯ ಮನಸ್ಸಿನಲ್ಲಿ ಮೂಡಿಸುವಂತಹ ಅಭಿವ್ಯಕ್ತಿಗಳನ್ನು ಉಪಯೋಗಿಸದಂತೆ ಎಚ್ಚರವಹಿಸಿರಿ. ನೀವು ಕ್ಯಾತೊಲಿಕ್ ಅಥವಾ ಪ್ರಾಟೆಸ್ಟಂಟ್ ಧರ್ಮಕ್ಕೆ ಸೇರಿದವರಲ್ಲ, ಬದಲಾಗಿ ನೀವು ಭಿನ್ನರಾಗಿದ್ದೀರೆಂಬುದನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿರಿ. ಬೈಬಲ್ ದೇವರ ವಾಕ್ಯವಾಗಿದೆಯೆಂದು ಅವರಿಗೆ ಹೇಳಿರಿ. “ದೇವರ ಮಗನು” ಎಂಬ ಶಬ್ದವು ಅನೇಕ ಮುಸ್ಲಿಮರಿಗೆ ಇಷ್ಟವಾಗುವುದಿಲ್ಲವಾದ್ದರಿಂದ, ಸಾಮಾನ್ಯವಾಗಿ ಒಬ್ಬನು ಆತ್ಮಿಕ ಪ್ರಗತಿಯನ್ನು ಮಾಡುವಷ್ಟರ ತನಕ ಈ ಶಬ್ದವನ್ನು ಉಪಯೋಗಿಸದೇ ಇರುವುದು ಅಥವಾ ಇದರ ಬಗ್ಗೆ ಚರ್ಚಿಸದಿರುವುದು ಒಳ್ಳೇದು. ಆದರೆ, ನೀವು ಯೇಸುವನ್ನು ಒಬ್ಬ ಪ್ರವಾದಿಯೋಪಾದಿ ಅಥವಾ ಸಂದೇಶವಾಹಕನೋಪಾದಿ ಸಂಬೋಧಿಸುತ್ತಾ ಅವನ ಕುರಿತು ಮಾತಾಡಸಾಧ್ಯವಿದೆ. ಅವರೊಂದಿಗೆ ವಾದಮಾಡಬೇಡಿ. ಮನೆಯವನಿಗೆ ಕೋಪ ಬರುತ್ತಿರುವಂತೆ ತೋರುವಲ್ಲಿ, ವಿನಯಪೂರ್ವಕವಾಗಿ ತತ್ಕ್ಷಣವೇ ಅಲ್ಲಿಂದ ಹೊರಟುಹೋಗಿ.
5 ಒಂದು ಗುಂಪಿನೊಂದಿಗಲ್ಲ, ಬದಲಾಗಿ ಒಬ್ಬ ವ್ಯಕ್ತಿಯೊಂದಿಗೆ ಮಾತಾಡುವುದು ಅತ್ಯುತ್ತಮವಾಗಿದೆ. ಸಾಮಾನ್ಯವಾಗಿ ಸ್ತ್ರೀಯರು ಸ್ತ್ರೀಯರಿಗೆ ಮತ್ತು ಪುರುಷರು ಪುರುಷರಿಗೆ ಸಾಕ್ಷಿನೀಡುವುದು ಸೂಕ್ತವಾಗಿದೆ. ಆದರೆ ಕೆಲವೊಮ್ಮೆ ಈ ವಿಷಯದಲ್ಲಿ ಮನೆಯವರಿಗೆ ಯಾವುದೇ ಅಭ್ಯಂತರವಿರದಿದ್ದರೂ, ಇದರ ವಿಷಯದಲ್ಲಿ ನಮ್ಮ ವಿವೇಚನಾಶಕ್ತಿಯನ್ನು ಉಪಯೋಗಿಸುವುದು ಒಳ್ಳೇದು. ಅಷ್ಟುಮಾತ್ರವಲ್ಲ, ಸ್ತ್ರೀಯರು ಧರಿಸುವ ಅಸಭ್ಯ ಉಡುಪುಗಳ ಮತ್ತು ಕೇಶಾಲಂಕಾರದ ಬಗ್ಗೆ ಸೂಕ್ಷ್ಮ ಪ್ರತಿಕ್ರಿಯೆ ತೋರಿಸುತ್ತಾರೆ. ಆದುದರಿಂದ ಸಹೋದರಿಯರು ಇದರ ಕುರಿತು ಎಚ್ಚರವಹಿಸಬೇಕು.—1 ಕೊರಿಂ. 10:31-33.
6 ಅವರೊಂದಿಗೆ ಮಾತಾಡಬಹುದಾದ ವಿಷಯಗಳು: ದೇವರ ಮತ್ತು ಆತನ ಪ್ರೀತಿಯ ಮಹತ್ವದ ಬಗ್ಗೆ ಮನಬಿಚ್ಚಿ ಮಾತಾಡಿರಿ. ನೀವು ಸತ್ಯಾರಾಧಕರಾಗಿದ್ದೀರಿ, ದೇವರು ಒಬ್ಬನೇ (ತ್ರಯೈಕ್ಯನಲ್ಲ) ಮತ್ತು ವಿಗ್ರಹಗಳ ಆರಾಧನೆ ತಪ್ಪು ಎಂದು ತಿಳಿಸಲು ಹಿಂಜರಿಯದಿರಿ. ಇಂದು ಲೋಕದಲ್ಲಿರುವ ದುಷ್ಟತನದ ಕುರಿತು, ಅಂದರೆ ಯುದ್ಧಗಳು, ಅಂತರ್ ಕಲಹಗಳು, ಕುಲಸಂಬಂಧಿತ ದ್ವೇಷ, ಹಾಗೂ ಅನೇಕ ಧಾರ್ಮಿಕ ಜನರ ನಡುವೆ ಸುಲಭವಾಗಿ ವ್ಯಕ್ತವಾಗುವಂತಹ ಕಪಟತನದ ಕುರಿತು ಅವರೊಂದಿಗೆ ಮಾತಾಡಿರಿ.
7 ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ ಎಂಬ ಶೀರ್ಷಿಕೆಯುಳ್ಳ ಬ್ರೋಷರ್, ಮುಸ್ಲಿಮರೊಂದಿಗೆ ಸಂಭಾಷಣೆಗಳನ್ನು ಆರಂಭಿಸಲು ಉಪಯೋಗಿಸಸಾಧ್ಯವಿರುವ ವಿಷಯದ ಕುರಿತು ಹೆಚ್ಚಿನ ಒಳನೋಟವನ್ನು ನಿಮಗೆ ಕೊಡುತ್ತದೆ. ಎಲ್ಲಿ ಸ್ವತಂತ್ರವಾಗಿ ಬೈಬಲನ್ನು ಅಭ್ಯಾಸಿಸಬಹುದೋ ಅಂತಹ ಸ್ಥಳಗಳಲ್ಲಿ ಜೀವಿಸುತ್ತಿರುವ ಮುಸ್ಲಿಮರಿಗೆ ಹಿಡಿಸುವಂತಹ ರೀತಿಯಲ್ಲಿ ಈ ಬ್ರೋಷರ್ ಸಿದ್ಧಗೊಳಿಸಲ್ಪಟ್ಟಿದೆ.
8 ಈ ರೀತಿಯ ನಿರೂಪಣೆಯನ್ನು ನೀವು ಉಪಯೋಗಿಸಬಹುದು:
◼“ಮುಸ್ಲಿಮರೊಂದಿಗೆ ಮಾತಾಡುವ ವಿಶೇಷ ಪ್ರಯತ್ನವನ್ನು ನಾನಿಂದು ಮಾಡುತ್ತಿದ್ದೇನೆ. ನಾನು ನಿಮ್ಮ ಧರ್ಮದ ಕುರಿತು ಓದುತ್ತಿದ್ದೇನೆ ಮತ್ತು ಮುಸ್ಲಿಮರು ಒಬ್ಬನೇ ಸತ್ಯ ದೇವರಲ್ಲಿ ಮತ್ತು ಎಲ್ಲ ಪ್ರವಾದಿಗಳಲ್ಲಿ ನಂಬಿಕೆಯನ್ನು ಇಡುತ್ತಾರೆಂಬ ನನ್ನ ಎಣಿಕೆಯು ಸರಿಯಾಗಿದೆ ಎಂದು ನೆನಸುತ್ತೇನೆ. [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಭೂಮಿಯು ಪರದೈಸವಾಗಿ ರೂಪಾಂತರಗೊಳ್ಳುವುದನ್ನು ಮುಂತಿಳಿಸುವ ಒಂದು ಪುರಾತನ ಪ್ರವಾದನೆಯ ಕುರಿತು ನಿಮಗೆ ತಿಳಿಸಲು ನಾನು ಬಯಸುತ್ತೇನೆ. ಪ್ರವಾದಿಯು ಬರೆದಿರುವ ವಿಷಯವನ್ನು ನಾನು ನಿಮಗೆ ಓದಿಹೇಳಲೋ? [ಯೆಶಾಯ 11:6-9ನ್ನು ಓದಿರಿ.] ಈ ಬ್ರೋಷರಿನಲ್ಲಿ ಕಂಡುಬರುವ ಕುರಾನಿನ ಒಂದು ಉದ್ಧರಣೆಯನ್ನು ಈ ಪ್ರವಾದನೆಯು ನನ್ನ ನೆನಪಿಗೆ ತರುತ್ತದೆ.” ದೇವರ ಮಾರ್ಗದರ್ಶನ ಎಂಬ ಬ್ರೋಷರಿನ 9ನೆಯ ಪುಟವನ್ನು ತೆರೆದು, ನೀತಿವಂತರು ಭೂಮಿಗೆ ಬಾಧ್ಯರಾಗುವರು ಎಂಬುದನ್ನು ಸೂಚಿಸುವಂತಹ ದಪ್ಪ ಅಕ್ಷರದಲ್ಲಿರುವ ಉಲ್ಲೇಖವನ್ನು ಓದಿರಿ. ಆಸಕ್ತಿಯು ತೋರಿಸಲ್ಪಡುವುದಾದರೆ, ಅದರ ಎದುರಿನ ಪುಟದಲ್ಲಿರುವ 7ರಿಂದ 9ನೇ ಪ್ಯಾರಗ್ರಾಫ್ಗಳನ್ನು ಚರ್ಚಿಸುವ ಮೂಲಕ ಸಂಭಾಷಣೆಯನ್ನು ಮುಂದುವರಿಸಿರಿ. ಬ್ರೋಷರನ್ನು ಅವರೊಂದಿಗೆ ಬಿಟ್ಟುಹೋಗಿ ಮತ್ತು ಪುನರ್ಭೇಟಿಗಾಗಿ ಏರ್ಪಾಡನ್ನು ಮಾಡಿರಿ.—ಇನ್ನೊಂದು ನಿರೂಪಣೆಗಾಗಿ, ಫೆಬ್ರವರಿ 1998ರ ನಮ್ಮ ರಾಜ್ಯದ ಸೇವೆಯ ಪುಟ 6, ಪ್ಯಾರಗ್ರಾಫ್ 23ನ್ನು ನೋಡಿರಿ.
9 ದೇವರ ಮಾರ್ಗದರ್ಶನ ಎಂಬ ಬ್ರೋಷರನ್ನು ಪರಿಗಣಿಸುವಂತೆ ನೀವು ಯಾರಿಗಾದರೂ ಹೇಳುವಾಗ, ಅದನ್ನು ಒಂದು ಬೈಬಲ್ ಅಭ್ಯಾಸವೆಂದಲ್ಲ, ಬದಲಾಗಿ ಒಂದು ಚರ್ಚೆಯೆಂದು ಕರೆಯುವುದು ಒಳ್ಳೇದು. ಇಡೀ ಬ್ರೋಷರಿನ ಚರ್ಚೆಯನ್ನು ಮುಗಿಸಿದ ನಂತರ, ವಿದ್ಯಾರ್ಥಿಯು ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ಅಭ್ಯಾಸಿಸಲು ತಯಾರಾಗಿರಬೇಕು. ವಿಶೇಷವಾಗಿ ಮುಸ್ಲಿಮರಿಗೋಸ್ಕರವಾಗಿಯೇ ರಚಿಸಲ್ಪಟ್ಟಿರುವ ಇನ್ನಿತರ ಪ್ರಕಾಶನಗಳು ಯಾವುವೆಂದರೆ, ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ ಎಂಬ ಶೀರ್ಷಿಕೆಯುಳ್ಳ ಟ್ರ್ಯಾಕ್ಟ್ ಮತ್ತು ದೇವರಿಗೆ ನಿಜವಾದ ಅಧೀನತೆಯನ್ನು ತೋರಿಸಲಿಕ್ಕಾಗಿರುವ ಸಮಯ (ಇಂಗ್ಲಿಷ್) ಎಂಬ ಪುಸ್ತಿಕೆಯೇ.
10 ಇಸ್ಲಾಮ್ ಧರ್ಮದ ನಂಬಿಕೆಗಳ ಕುರಿತಾದ ಈ ಜ್ಞಾನ ಮತ್ತು ಸೂಕ್ಷ್ಮಸಂವೇದಿಗಳಾಗಿರುವ ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ, ಮುಸ್ಲಿಮರಿಗೆ ನಾವು ನೀಡುವ ಸಾಹಿತ್ಯಗಳ ಆಯ್ಕೆಯ ವಿಷಯದಲ್ಲಿ ಹಾಗೂ ನಾವು ಅವರಿಗೆ ಸಾಕ್ಷಿಯನ್ನು ನೀಡುವ ವಿಧದಲ್ಲಿ ವಿವೇಚನೆಯನ್ನು ತೋರಿಸಸಾಧ್ಯವಿದೆ. ಯೆಹೋವನ ಹೆಸರನ್ನು ಹೇಳಿಕೊಳ್ಳುವ ಮೂಲಕ ರಕ್ಷಣೆಯನ್ನು ಪಡೆದುಕೊಳ್ಳಲು ಎಲ್ಲ ರೀತಿಯ ಜನರಿಗೆ ಸಹಾಯಮಾಡಲು ನಾವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುತ್ತಾ ಇರಲಿ.—ಅ. ಕೃ. 2:21.