‘ದೇವರ ವಾಕ್ಯವನ್ನು . . . ತುರ್ತಿನಿಂದ ಸಾರು’
1 “ತುರ್ತು” ಎಂದು ಬರೆದಿರುವ ಯಾವುದಾದರೂ ಒಂದು ವಸ್ತುವನ್ನು ನೀವು ಪಡೆದುಕೊಳ್ಳುವಲ್ಲಿ ಅದನ್ನು ನೀವು ಹೇಗೆ ವೀಕ್ಷಿಸುವಿರಿ? “ತುರ್ತು” ಎಂಬ ಪದದ ಅರ್ಥವು, “ತಕ್ಷಣವೇ ಗಮನಕೊಡುವುದು” ಎಂದಾಗಿದೆ. ಒಂದು ಒಳ್ಳೇ ಕಾರಣಕ್ಕಾಗಿಯೇ, ಅಪೊಸ್ತಲ ಪೌಲನು ‘ದೇವರ ವಾಕ್ಯವನ್ನು . . . ತುರ್ತಿನಿಂದ ಸಾರಿರಿ’ ಎಂದು ಕ್ರೈಸ್ತರಿಗೆ ಬೋಧಿಸಿದನು. (2 ತಿಮೊ. 4:2, NW) ನೀವು ಈ ಕೆಲಸಕ್ಕೆ ತಕ್ಷಣವೇ ಗಮನಕೊಡುವ ಮೂಲಕ ಪ್ರತಿಕ್ರಿಯಿಸುವಿರೋ?
2 ಸಭೆಯಲ್ಲಿರುವ ಕೆಲವು ಸಹೋದರರು ಕ್ರೈಸ್ತರಾಗಿದ್ದುಕೊಂಡು ‘ಆಲಸ್ಯ’ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆಂದು ಪೌಲನಿಗೆ ಸುದ್ದಿ ಸಿಕ್ಕಿದ್ದಿರಬಹುದು. (ರೋಮಾ. 12:11) ಇದು, ಅವರ ಕೆಲಸದಿಂದ ಸಿಗುವ ಪ್ರತಿಫಲವನ್ನು ಹಾಗೂ ಇತರರಿಗೆ ಸಹಾಯಮಾಡುವುದರಿಂದ ಸಿಗಬಹುದಾಗಿದ್ದ ಸಂತೋಷವನ್ನು ಸೀಮಿತಗೊಳಿಸುತ್ತಿತ್ತು.
3 ಸೇವೆಯ ಕುರಿತು ಯೇಸುವಿಗಿದ್ದ ದೃಷ್ಟಿಕೋನ: ಯೇಸು ತನ್ನ ಸೇವೆಯನ್ನು ಮಾಡುವುದರಲ್ಲಿ ಎಂಥ ಹರ್ಷವನ್ನು ಕಂಡುಕೊಂಡಿದ್ದನು! ಅವನು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” ಕ್ರಿಸ್ತನ ಮಾದರಿಯು ಅವನ ಶಿಷ್ಯರನ್ನು ಪ್ರಚೋದಿಸಿತು. ಅವನು ‘ಹೊಲಗಳು ಬೆಳ್ಳಗಾಗಿ ಕೊಯ್ಲಿಗೆ ಬಂದಿವೆ’ ಎಂದು ಹೇಳುವ ಮೂಲಕ ಅವರನ್ನು ಪ್ರೋತ್ಸಾಹಿಸಿದನು. (ಯೋಹಾ. 4:34, 35) ತನ್ನ ಸೇವೆಯು ಪೂರ್ಣವಾಗುವ ವರೆಗೂ ಅವನು ತುರ್ತಿನ ಪ್ರಜ್ಞೆಯನ್ನು ಕಾಪಾಡಿಕೊಂಡಿದ್ದನು ಎಂಬುದು, “ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ” ಎಂದು ತನ್ನ ಶಿಷ್ಯರಿಗೆ ಹೇಳಿದಾಗ ಸ್ಪಷ್ಟವಾಗಿ ಕಂಡುಬರುತ್ತದೆ. (ಮತ್ತಾ. 9:38) ಸಾರುವುದೇ ತನ್ನ ನೇಮಕವಾಗಿತ್ತೆಂಬುದನ್ನು ಯೇಸು ಗಣ್ಯಮಾಡಿದನು ಮತ್ತು ಅದನ್ನು ಮಾಡುವುದರಿಂದ ಯಾವುದೂ ತನ್ನನ್ನು ತಡೆಯದಂತೆ ದೃಢಸಂಕಲ್ಪ ಮಾಡಿಕೊಂಡಿದ್ದನು.
4 ನಮ್ಮ ಕುರಿತೇನು? ಸಾರುವ ಕೆಲಸದಲ್ಲಿ ಮುಂದೆ ಸಾಗಲು ಹಿಂದೆಂದಿಗಿಂತಲೂ ಈಗ ಹೆಚ್ಚು ತುರ್ತಾಗಿದೆ. ಜಗತ್ತಿನ ಅನೇಕ ಕಡೆಗಳಲ್ಲಿ, ಕೊಯ್ಲಿಗಾಗಿ ಹೊಲಗಳು ಬೆಳ್ಳಗಾಗಿವೆ. ಸಂಪೂರ್ಣ ಸಾಕ್ಷಿಯನ್ನು ನೀಡಿರುವಂತೆ ತೋರುವ ದೇಶಗಳಲ್ಲೂ, ಪ್ರತಿವರ್ಷ ಸಾವಿರಾರು ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯ ವ್ಯವಸ್ಥೆಯ ಅಂತ್ಯವು ಹೆಚ್ಚು ನಿಕಟವಾಗುತ್ತಿದ್ದಂತೆ, “ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟು ಇದೆ.” (1 ಕೊರಿಂ. 15:58, NW) ರಾಜ್ಯದ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ನಾವು ಹಿಂದೆಂದಿಗಿಂತಲೂ ಈಗ ಹೆಚ್ಚು ಹುರುಪಿನಿಂದ ನಮ್ಮನ್ನು ತೊಡಗಿಸಿಕೊಳ್ಳುವುದು ಬಹಳ ಪ್ರಾಮುಖ್ಯವಾಗಿದೆ.
5 ಮನೆಯಿಂದ ಮನೆಗೆ ಹಾಗೂ ನಮ್ಮ ಕ್ಷೇತ್ರದಲ್ಲಿರುವ ಜನರನ್ನು ಎಲ್ಲೆಲ್ಲಾ ಕಂಡುಕೊಳ್ಳಸಾಧ್ಯವೋ ಅಲ್ಲೆಲ್ಲಾ ಸುವಾರ್ತೆಯನ್ನು ಅವರಿಗೆ ಮುಟ್ಟಿಸುವುದರಲ್ಲಿ ನಾವು ಹೆಚ್ಚು ತಲ್ಲೀನರಾಗಿರೋಣ. ಸಾರುವ ಕೆಲಸದಲ್ಲಿ ನಮ್ಮಿಂದಾದಷ್ಟು ಮಟ್ಟಿಗೆ ಭಾಗವಹಿಸುವ ಮೂಲಕ, ನಮ್ಮ ಜೀವನದಲ್ಲಿ ದೇವರ ರಾಜ್ಯವನ್ನು ಪ್ರಥಮವಾಗಿ ಇಟ್ಟಿದ್ದೇವೆಂಬುದನ್ನು ಸ್ಪಷ್ಟವಾಗಿ ತೋರಿಸುವೆವು. (ಮತ್ತಾ. 6:33) ತುರ್ತಿನಿಂದ ವಾಕ್ಯವನ್ನು ಸಾರುವ ಕೆಲಸದಲ್ಲಿ ನಾವು ತೋರಿಸುವ ನಂಬಿಗಸ್ತಿಕೆಯು ಹೇರಳವಾದ ಸಂತೋಷವನ್ನು ತರುವುದು.