“ಕರ್ತನ ಸೇವೆಯಲ್ಲಿ ಪರಿಶ್ರಮಿಸುತ್ತಿರುವ ಸ್ತ್ರೀಯರು”
1 ಪೌಲನು ಈ ಮೇಲಿನ ಮಾತುಗಳನ್ನು ರೋಮಾಪುರದ ಸಭೆಯಲ್ಲಿ ಪರಿಶ್ರಮಿಸುತ್ತಿದ್ದ ಇಬ್ಬರು ಸಹೋದರಿಯರಾದ ತ್ರುಫೈನಳಿಗೂ ತ್ರುಫೋಸಳಿಗೂ ಸಂಬೋಧಿಸಿದನು. ಮತ್ತೊಬ್ಬ ಸಹೋದರಿಯಾದ ಪೆರ್ಸೀಸಳು “ಕರ್ತನ ಸೇವೆಯಲ್ಲಿ ಬಹಳಷ್ಟು ಪರಿಶ್ರಮಪಟ್ಟಳು” (NW) ಎಂದು ಅವನು ಹೇಳಿದನು. ಇದೇ ರೀತಿಯಲ್ಲಿ, ಪೊಯಿಬೆ ‘ಅನೇಕರಿಗೆ ಸಹಾಯಮಾಡಿದಳು’ ಎಂದು ಅವನು ಅವಳ ಬಗ್ಗೆ ಒಳ್ಳೆಯ ಹೇಳಿಕೆಯನ್ನು ನೀಡಿದನು. (ರೋಮಾ. 16:2, 12) ಶಾಸ್ತ್ರವಚನಗಳಲ್ಲಿ, ದೊರ್ಕಳನ್ನು “ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದ” ಒಬ್ಬ ಸ್ತ್ರೀಯೋಪಾದಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. (ಅ. ಕೃ. 9:36) ಆತ್ಮಿಕ ಸ್ತ್ರೀಯರು ಸಭೆಗೆ ಎಂತಹ ಒಂದು ಆಶೀರ್ವಾದವಾಗಿದ್ದಾರೆ!
2 ನಮ್ಮ ಸಭೆಯಲ್ಲಿ ಪರಿಶ್ರಮಿಸುತ್ತಿರುವ ಸಹೋದರಿಯರನ್ನು ನಾವು ಗಣ್ಯಮಾಡುತ್ತೇವೋ? ಪ್ರಚಾರಕಾರ್ಯದಲ್ಲಿ ಅತ್ಯಧಿಕ ಭಾಗವನ್ನು ಇವರು ಪೂರೈಸುತ್ತಾರೆ, ಅಧಿಕಾಂಶ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಾರೆ ಮತ್ತು ಹೊಸಬರಲ್ಲಿ ಅನೇಕರಿಗೆ ಸಹಾಯವನ್ನು ನೀಡುತ್ತಾರೆ. ಮಕ್ಕಳು ಆತ್ಮಿಕ ಪ್ರಗತಿಯನ್ನು ಮಾಡುವಂತೆ ನೆರವು ನೀಡುವುದರಲ್ಲೂ ಇವರು ಗಮನಾರ್ಹವಾದ ಸಮಯವನ್ನು ವ್ಯಯಿಸುತ್ತಾರೆ. ಸಭೆಯಲ್ಲಿ ಪ್ರೀತಿ, ಸಂತೋಷ, ಸಮಾಧಾನ, ಮತ್ತು ಹುರುಪಿನ ಆತ್ಮವನ್ನು ಪ್ರವರ್ಧಿಸುವುದರಲ್ಲಿ ಈ ಕ್ರೈಸ್ತ ಸ್ತ್ರೀಯರು ತಮ್ಮಿಂದ ಸಾಧ್ಯವಾದುದನ್ನು ಮಾಡುತ್ತಾರೆ. ತಮ್ಮ ಪತಿಯರು ಹಾಗೂ ಕುಟುಂಬದ ಇತರ ಸದಸ್ಯರು ಯೆಹೋವನ ಸೇವೆಯಲ್ಲಿ ಹೆಚ್ಚಿನದ್ದನ್ನು ಮಾಡಸಾಧ್ಯವಾಗುವಂತೆ ಇವರು ಅನೇಕ ವಿಧಗಳಲ್ಲಿ ಬೆಂಬಲಿಗರಾಗಿರುತ್ತಾರೆ.
3 ಪೂರ್ಣಸಮಯದ ಸೇವೆಯಲ್ಲಿರುವ ಸಹೋದರಿಯರು: ಕರ್ತನ ಸೇವೆಯಲ್ಲಿ ಪರಿಶ್ರಮಿಸುತ್ತಿರುವವರಲ್ಲಿ ಸಂಚರಣ ಮೇಲ್ವಿಚಾರಕರ ಪತ್ನಿಯರು ಸಹ ಸೇರಿದ್ದಾರೆ. ಇವರಲ್ಲಿ ಅನೇಕರು ತಮ್ಮ ನೇಮಕಗಳಲ್ಲಿನ ಸೇವೆಯನ್ನು ಉತ್ತಮಗೊಳಿಸುವುದರಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಪತಿಯರು ಸಭೆಗಳಿಗೆ ಭೇಟಿನೀಡುತ್ತಿರುವಾಗ, ಇವರು ಪ್ರಚಾರಕಾರ್ಯದಲ್ಲಿ ಕಾರ್ಯಮಗ್ನರಾಗಿದ್ದು, ಅನೇಕ ಸಹೋದರಿಯರಿಗೆ ಪ್ರೋತ್ಸಾಹನೆಯನ್ನು ನೀಡುತ್ತಾರೆ. ಯೆಹೋವನ ಸಂಸ್ಥೆಯಲ್ಲಿ ಹುರುಪಿನಿಂದ ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಬೆತೆಲ್ ಸಹೋದರಿಯರನ್ನು ಸಹ ನಾವು ಕಡೆಗಣಿಸದಿರೋಣ. ಅಷ್ಟುಮಾತ್ರವಲ್ಲದೆ, ನಮ್ಮ ರೆಗ್ಯುಲರ್ ಪಯನೀಯರ್ ಸಹೋದರಿಯರು, ದೇವರನ್ನು ಸ್ತುತಿಸುವುದರಲ್ಲಿ ತಮ್ಮ ನಂಬಿಗಸ್ತ ಪ್ರಯತ್ನಗಳಿಂದ ಸತ್ಯವನ್ನು ಕಲಿತುಕೊಳ್ಳುವಂತೆ ಸಾವಿರಾರು ಜನರಿಗೆ ಸಹಾಯಮಾಡುತ್ತಿದ್ದಾರೆ.
4 ಈ ನಂಬಿಗಸ್ತ ಸ್ತ್ರೀಯರು ತಮ್ಮ ಸ್ವ-ತ್ಯಾಗದ ಜೀವನಶೈಲಿಯಲ್ಲಿ ಸಂಪೂರ್ಣ ಸಂತೃಪ್ತಿಯನ್ನು ಕಂಡುಕೊಳ್ಳುತ್ತಾರೆ. (1 ತಿಮೊ. 6:6, 8) ಇವರು ಶ್ಲಾಘನೆಗೆ ಹಾಗೂ ನಾವು ಕೊಡಸಾಧ್ಯವಿರುವ ಯಾವುದೇ ಪ್ರೋತ್ಸಾಹನೆ ಮತ್ತು ಬೆಂಬಲಕ್ಕೆ ಅರ್ಹರಾಗಿದ್ದಾರೆ.
5 ಕ್ರೈಸ್ತ ಸ್ತ್ರೀಯರು ಯೆಹೋವನ ಸಂಸ್ಥೆಗೆ ಅತ್ಯಮೂಲ್ಯ ಆಸ್ತಿಯಾಗಿದ್ದಾರೆ. ಇವರು ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಾ, ಎಲ್ಲರಿಗೂ ಒಂದು ಆಶೀರ್ವಾದವಾಗಿ ಪರಿಣಮಿಸಿದ್ದಾರೆ. ಇಂತಹ ಸ್ತ್ರೀಯರಿಗೆ ಗಣ್ಯತೆ ತೋರಿಸುವುದನ್ನು ಮುಂದುವರಿಸೋಣ ಮತ್ತು ಇವರು ‘ಕರ್ತನ ಸೇವೆಯಲ್ಲಿ ಪರಿಶ್ರಮಿಸುತ್ತಿರುವಂತೆ’ ಯೆಹೋವನು ಇವರ ಮೇಲೆ ಆಶೀರ್ವಾದವನ್ನು ಸುರಿಸಲಿ ಎಂದು ಪ್ರಾರ್ಥಿಸೋಣ.