“ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು”
1 “ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ [“ನಂಬಿಕೆಯ,” ಪಾದಟಿಪ್ಪಣಿ] ಶ್ರೇಷ್ಠ ಹೋರಾಟವನ್ನು ಮಾಡು” ಎಂದು ಅಪೊಸ್ತಲ ಪೌಲನು ತಿಮೊಥೆಯನಿಗೆ ಬುದ್ಧಿವಾದವನ್ನು ನೀಡಿದನು. (1 ತಿಮೊ. 6:12) ಸ್ವತಃ ಪೌಲನೇ ಈ ಮಾತುಗಳಿಗನುಸಾರ ನಡೆದುಕೊಂಡನು. ತಾನು ಸ್ವತಃ ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ ಎಂದು ಭರವಸೆಯಿಂದ ಅವನು ತನ್ನ ಜೀವಿತದ ಕೊನೆಯಲ್ಲಿ ಹೇಳಿದನು. (2 ತಿಮೊ. 4:6-8) ಎಲ್ಲ ರೀತಿಯಲ್ಲೂ ಅವನು ಕೆಚ್ಚೆದೆಯಿಂದಲೂ, ಧೈರ್ಯದಿಂದಲೂ, ತಾಳ್ಮೆಯಿಂದಲೂ ಶುಶ್ರೂಷೆಯನ್ನು ಮುಂದುವರಿಸಿಕೊಂಡು ಹೋದನು. ಅವನ ಉದಾಹರಣೆಯನ್ನು ಅನುಕರಿಸುವ ಮೂಲಕ, ಕ್ರೈಸ್ತ ನಂಬಿಕೆಗಾಗಿ ಮಾಡುವ ಹೋರಾಟದಲ್ಲಿ ನಾವು ಸಹ ನಮ್ಮ ಕೈಲಾದಷ್ಟನ್ನು ಮಾಡುತ್ತಿದ್ದೇವೆ ಎಂಬ ಸಂತೃಪ್ತಿಯು ನಮಗಿರುವುದು.
2 ಕಠಿನ ಪರಿಶ್ರಮಪಡಿರಿ: ಪೌಲನು ಶುಶ್ರೂಷೆಯಲ್ಲಿ ಕಠಿನವಾಗಿ ಪರಿಶ್ರಮಿಸಿದನು. (1 ಕೊರಿಂ. 15:10) ಹಾಗೆಯೇ ನಾವು ಕೂಡ ನಮ್ಮ ಟೆರಿಟೊರಿಯಲ್ಲಿರುವ ಎಲ್ಲ ಯೋಗ್ಯ ಜನರನ್ನು ಹುಡುಕುವುದಕ್ಕೆ ಪ್ರಯತ್ನಿಸುವಾಗ ಪೌಲನಂತೆ ನಾವು ಸಹ ಪರಿಶ್ರಮಿಸುತ್ತಿದ್ದೇವೆ. (ಮತ್ತಾ. 10:11) ಅಂತಹವರಲ್ಲಿ ಕೆಲವರನ್ನು ಸಂದರ್ಶಿಸಬೇಕೆಂದರೆ, ನಾವು ಬೆಳಗ್ಗೆ ಬೇಗನೆ ಎದ್ದೇಳಬೇಕಾಗಬಹುದು. ಆಗ ರಸ್ತೆಯಲ್ಲಿ ಭೇಟಿಯಾಗುವವರಿಗೆ ಸಾಕ್ಷಿಯನ್ನು ಕೊಡಬಹುದು. ಇಲ್ಲವೇ ಜನರು ಮಧ್ಯಾಹ್ನ ಅಥವಾ ಸಂಜೆ ಕೆಲಸದಿಂದ ಮನೆಗಳಿಗೆ ಹಿಂದಿರುಗುತ್ತಿರುವಾಗ ಅವರನ್ನು ಭೇಟಿಮಾಡಲು ಹೋಗಬೇಕಾಗಬಹುದು.
3 ಕ್ಷೇತ್ರ ಸೇವೆಗಾಗಿ ನಾವು ನಮ್ಮ ಪುಸ್ತಕ ಅಭ್ಯಾಸದ ಗುಂಪಿನೊಂದಿಗೆ ಒಟ್ಟುಗೂಡುವಾಗ ಸರಿಯಾದ ಸಮಯಕ್ಕೆ ಅಲ್ಲಿರಲು ಸ್ವಶಿಸ್ತು ಹಾಗೂ ಒಳ್ಳೆಯ ಶೆಡ್ಯೂಲ್ ಅಗತ್ಯವಾಗಿರುತ್ತದೆ. ಉದಾಹರಣೆಗೆ, ಬೆತೆಲ್ ಕುಟುಂಬದಲ್ಲಿರುವ ಕೆಲವು ಸದಸ್ಯರು ವಾರಾಂತ್ಯಗಳಲ್ಲಿ ನೇಮಿಸಲ್ಪಟ್ಟ ಸಭೆಗಳೊಂದಿಗೆ ಕೇವಲ ಕ್ಷೇತ್ರ ಸೇವೆಗೆ ಹೋಗಲು ಸುಮಾರು 1 ಘಂಟೆಗಿಂತಲೂ ಹೆಚ್ಚು ಕಾಲ ಪ್ರಯಾಣವನ್ನು ಮಾಡುತ್ತಾರೆ. ಅಷ್ಟುಮಾತ್ರವಲ್ಲದೆ, ನಮ್ಮ ಸಭೆಯಲ್ಲಿರುವ ಕೆಲವು ಪ್ರಚಾರಕರು ಹಾಗೂ ಕುಟುಂಬಗಳು ತುಂಬ ದೂರದಿಂದ ಬರಬೇಕಾಗಿರುವುದಾದರೂ ಸರಿಯಾದ ಸಮಯದಲ್ಲಿ ಅಲ್ಲಿರುವುದು ನಿಜವಾಗಿಯೂ ಮೆಚ್ಚತಕ್ಕದ್ದೇ. ಅವರ ಶ್ರದ್ಧೆ ಹಾಗೂ ವೈಯಕ್ತಿಕ ಸಂಘಟನೆಯು ಅನುಕರಿಸಲು ಯೋಗ್ಯವಾದದ್ದಾಗಿವೆ.
4 ಎಲ್ಲ ಆಸಕ್ತ ಜನರನ್ನು ಪುನಃ ಭೇಟಿಮಾಡಲು ನಾವು ಪ್ರಚೋದಿಸಲ್ಪಡಬೇಕು. ರಸ್ತೆಯಲ್ಲಿ ಅಥವಾ ಅನೌಪಚಾರಿಕ ಸಂದರ್ಭಗಳಲ್ಲಿ ನಾವು ಯಾರಿಗಾದರೂ ಸಾಹಿತ್ಯಗಳನ್ನು ಕೊಡುವಲ್ಲಿ, ಆ ವ್ಯಕ್ತಿಯ ವಿಳಾಸ ಅಥವಾ ಟೆಲಿಫೋನ್ ನಂಬರನ್ನು ಪಡೆದುಕೊಳ್ಳಲು ನಾವು ಪ್ರಯತ್ನ ಮಾಡಬೇಕು. ಅನಂತರ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸುವ ಉದ್ದೇಶದೊಂದಿಗೆ ಅವನಿಗೆ ಫೋನ್ ಮಾಡಸಾಧ್ಯವಿದೆ.
5 ಕ್ಷೇತ್ರಸೇವೆಗೆ ಕ್ರಮವಾಗಿ ಹೋಗಿರಿ: ಪೌಲನು ಸಾರುವ ಕೆಲಸದಲ್ಲಿ ಕ್ರಮಬದ್ಧನಾಗಿದ್ದನು ಹಾಗೂ ಅದನ್ನು ಸಂಪೂರ್ಣವಾಗಿ ಮಾಡುತ್ತಿದ್ದನು. (ರೋಮಾ. 15:19) ನಿಮ್ಮ ವಿಷಯದಲ್ಲಿ ಏನು? ನೀವು ಸೇವೆಗೆ ಕ್ರಮವಾಗಿ ಹೋಗುತ್ತೀರೋ? ಈ ತಿಂಗಳಿನಲ್ಲಿ ನೀವು ಈಗಾಗಲೇ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಿದ್ದೀರೋ? ಆಗಸ್ಟ್ ತಿಂಗಳಿನಲ್ಲಿ ತಮ್ಮ ಗುಂಪಿನ ಎಲ್ಲ ಸದಸ್ಯರು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದನ್ನು ನೋಡುವುದರಲ್ಲಿ ಸಭಾ ಪುಸ್ತಕ ಅಭ್ಯಾಸದ ಚಾಲಕರು ಆಸಕ್ತರಾಗಿದ್ದಾರೆ. ಈ ಸಂಬಂಧದಲ್ಲಿ ಅವರು ನಿಮಗೆ ಸಹಾಯಮಾಡುವರು.
6 ಸುವಾರ್ತೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದರಲ್ಲಿ ಪೌಲನ ಮಾದರಿಯನ್ನು ಅನುಕರಿಸುವ ಮೂಲಕ ನಾವು, ‘ನಂಬಿಕೆಯ ಹೋರಾಟವನ್ನು ಮಾಡುತ್ತಾ’ ಮುಂದುವರಿಯುವೆವು.