‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಿ’
1 ಅಪೊಸ್ತಲ ಪೌಲನು, ಹುರುಪಿನಿಂದ ಕೂಡಿದ್ದ ತನ್ನ ಶುಶ್ರೂಷೆಯ ಕೊನೆಯ ವರ್ಷಗಳಲ್ಲಿ, ತಿಮೊಥೆಯ ಮತ್ತು ತೀತನೊಂದಿಗೆ ತುಂಬ ನಿಕಟವಾಗಿ ಕೆಲಸಮಾಡಿದನು. ಇವರಿಬ್ಬರಿಗೂ ಅವನು ಪ್ರತ್ಯೇಕವಾಗಿ ಉತ್ತೇಜನದಾಯಕ ಮಾತುಗಳನ್ನು ಬರೆದನು. “ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವದರಲ್ಲಿ ಜಾಗರೂಕರಾಗಿ”ಬೇಕೆಂದು ಅವನು ತೀತನಿಗೆ ಹೇಳಿದನು. (ತೀತ 3:8) ಮತ್ತು ತಿಮೊಥೆಯನಿಗೆ, ದೇವರ ಮೇಲೆ ನಿರೀಕ್ಷೆಯಿಡುವವರು ‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರು’ ಆಗಿರಬೇಕೆಂದು ಹೇಳಿದನು. (1 ತಿಮೊ. 6:17, 18) ಇದು ನಮ್ಮೆಲ್ಲರಿಗೂ ಅತ್ಯುತ್ಕೃಷ್ಟವಾದ ಬುದ್ಧಿವಾದವಾಗಿದೆ! ಆದರೆ ನಮ್ಮ ಜೀವಿತಗಳಲ್ಲಿ ಸತ್ಕಾರ್ಯಗಳನ್ನು ಮಾಡುವಂತೆ ನಮ್ಮನ್ನು ಯಾವುದು ಪ್ರಚೋದಿಸುತ್ತದೆ? ಮತ್ತು ಮುಂಬರಲಿರುವ ದಿನಗಳಲ್ಲಿ ನಾವು ನಿರ್ದಿಷ್ಟವಾಗಿ ಯಾವ ಕ್ರಿಯೆಗಳನ್ನು ಮಾಡಬಹುದು?
2 ಸಕ್ರಿಯೆಗಳಲ್ಲಿ ಐಶ್ವರ್ಯವಂತರಾಗಿರುವುದಕ್ಕಾಗಿ ಬೇಕಾಗಿರುವ ಪ್ರಚೋದನೆಯು, ಯೆಹೋವನಲ್ಲಿನ ನಮ್ಮ ನಂಬಿಕೆ ಹಾಗೂ ಪ್ರೀತಿ, ಮತ್ತು ಆತನು ನಮಗೆ ಕೊಟ್ಟಿರುವ ಅದ್ಭುತಕರವಾದ ನಿರೀಕ್ಷೆಯಿಂದ ಬರುತ್ತದೆ. (1 ತಿಮೊ. 6:18; ತೀತ 2:11) ಯೇಸು ತನ್ನ ತಂದೆಯನ್ನು ನಿರ್ದೋಷೀಕರಿಸಲು ಸಾಧ್ಯವಾಗುವಂತೆ ಮತ್ತು ಎಲ್ಲ ಅರ್ಹ ಮಾನವರಿಗಾಗಿ ನಿತ್ಯಜೀವದ ಮಾರ್ಗವನ್ನು ತೆರೆಯಲು ಸಾಧ್ಯವಾಗುವಂತೆ ಯೆಹೋವನು ತನ್ನ ಮಗನನ್ನು ಭೂಮಿಗೆ ಕಳುಹಿಸಿದನೆಂಬುದನ್ನು, ವಿಶೇಷವಾಗಿ ವರ್ಷದ ಈ ಸಮಯದಲ್ಲಿ ನಮಗೆ ಜ್ಞಾಪಕ ಹುಟ್ಟಿಸಲಾಗುತ್ತದೆ. (ಮತ್ತಾ. 20:28; ಯೋಹಾ. 3:16) ಮಾರ್ಚ್ 28ರಂದು ಕ್ರಿಸ್ತನ ಮರಣದ ಜ್ಞಾಪಕಾಚರಣೆಯಲ್ಲಿ ಇದನ್ನು ತುಂಬ ಸ್ಪಷ್ಟವಾಗಿ ವಿವರಿಸಲಾಗುವುದು. ನಿತ್ಯಜೀವವನ್ನು ಪಡೆದುಕೊಳ್ಳಲು ನಮಗಿರುವ ನಿರೀಕ್ಷೆಗೆ ಪ್ರತಿಕ್ರಿಯೆಯಲ್ಲಿ, ನಾವು ‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಲು’ ನಮ್ಮಿಂದಾದದ್ದೆಲ್ಲವನ್ನು ಮಾಡಲು ಪ್ರಚೋದಿಸಲ್ಪಡುವುದಿಲ್ಲವೊ? ಖಂಡಿತವಾಗಿಯೂ ಪ್ರಚೋದಿಸಲ್ಪಡುವೆವು! ಆದರೆ ನಾವು ಈಗ ಯಾವ ಸತ್ಕಾರ್ಯಗಳನ್ನು ಮಾಡಬಲ್ಲೆವು?
3 ಮಾರ್ಚ್ನಲ್ಲಿ ಮತ್ತು ಮುಂದಿನ ತಿಂಗಳುಗಳಲ್ಲಿ ಮಾಡಬಹುದಾದ ಸತ್ಕಾರ್ಯಗಳು: ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳಿಗೆ ಇಡೀ ವರ್ಷದಲ್ಲೇ ಅತಿ ಪ್ರಾಮುಖ್ಯ ಘಟನೆಯಾಗಿರುವ ಜ್ಞಾಪಕಾಚರಣೆಗೆ ನಾವು ಖಂಡಿತವಾಗಿಯೂ ಹಾಜರಾಗುವೆವು. (ಲೂಕ 22:19) ಆದರೆ ಆ ಸಂದರ್ಭದ ಆನಂದವನ್ನು ನಾವು ಸಾಧ್ಯವಿರುವಷ್ಟು ಹೆಚ್ಚು ಜನರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. 2002 ವರ್ಷಪುಸ್ತಕದಲ್ಲಿರುವ (ಇಂಗ್ಲಿಷ್) ಸೇವಾ ವರದಿಯನ್ನು ನೋಡಿರಿ. ಭೂಸುತ್ತಲೂ ಇರುವ ಅನೇಕ ದೇಶಗಳಲ್ಲಿ ಕಳೆದ ವರ್ಷದ ಜ್ಞಾಪಕಾಚರಣೆಯ ಹಾಜರಿಯು, ಪ್ರಚಾರಕರ ಸಂಖ್ಯೆಗಿಂತಲೂ ಮೂರು, ನಾಲ್ಕು, ಐದು ಅಥವಾ ಅದಕ್ಕಿಂತ ಹೆಚ್ಚು ಪಟ್ಟು ಅಧಿಕವಾಗಿರುವುದನ್ನು ನೀವು ನೋಡುವಿರಿ. ತಮ್ಮ ಟೆರಿಟೊರಿಯಲ್ಲೆಲ್ಲ ಜ್ಞಾಪಕಾಚರಣೆಯ ಆಮಂತ್ರಣ ಪತ್ರಿಕೆಗಳನ್ನು ವಿಸ್ತಾರವಾಗಿ ಹಂಚಲಿಕ್ಕಾಗಿ ಆ ಸಭೆಗಳಲ್ಲಿದ್ದವರೆಲ್ಲರೂ ಖಂಡಿತವಾಗಿಯೂ ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಬೇಕಾಯಿತು. ಆದುದರಿಂದ, ಇಂದು ಮತ್ತು ಮಾರ್ಚ್ 28ರ ನಡುವಿನ ಅವಧಿಯಲ್ಲಿ, ನಾವು ಜನರಿಗೆ ರಕ್ಷಣೆಯ ನಿರೀಕ್ಷೆಯ ಬಗ್ಗೆ ಅವರು ಕಲಿಯುವಂತೆ ಸಹಾಯಮಾಡುತ್ತಾ, ಅವರನ್ನು ಜ್ಞಾಪಕಾಚರಣೆಗೆ ಆಮಂತ್ರಿಸುವುದರಲ್ಲಿ ಸಾಧ್ಯವಿರುವಷ್ಟು ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತೇವೆ.
4 ಏಪ್ರಿಲ್ ತಿಂಗಳಿನಲ್ಲಿ ಶಾಲೆಗಳಿಗೆ ರಜೆಯಿದ್ದು, ಮಕ್ಕಳಿಗೂ ಹೆತ್ತವರಿಗೂ ತುಂಬ ಬಿಡುವಿನ ಸಮಯವು ಸಿಗುವುದರಿಂದ ಅವರು ಆರಾಮದಿಂದಿರುವರು. ಈ ಅನುಕೂಲಕರ ಸನ್ನಿವೇಶಗಳನ್ನು ನಾವು ‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಲು’ ಹೇಗೆ ವಿನಿಯೋಗಿಸಬಹುದು? ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುತ್ತಾ, ‘ಸತ್ಕ್ರಿಯೆಗಳಲ್ಲಿ ಆಸಕ್ತರಾಗಿರುವುದನ್ನು’ ಮುಂದುವರಿಸುವ ಮೂಲಕವೇ. (ತೀತ 2:14; ಮತ್ತಾ. 24:14) ನಿಮಗೆ ಮಾರ್ಚ್ ತಿಂಗಳಿನಲ್ಲಿ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯವಿಲ್ಲದಿರುವಲ್ಲಿ, ನೀವು ಅದನ್ನು ಏಪ್ರಿಲ್ ಮತ್ತು/ಇಲ್ಲವೇ ಮೇ ತಿಂಗಳಿನಲ್ಲಿ ಮಾಡಬಹುದೊ? ನೀವು ಮಾರ್ಚ್ ತಿಂಗಳಿನಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿರುವುದಾದರೆ, ನೀವು ಅದನ್ನು ಮುಂದಿನ ತಿಂಗಳುಗಳಲ್ಲೂ ಮುಂದುವರಿಸಬಲ್ಲಿರೊ?
5 ಐಹಿಕವಾಗಿ ಕೆಲಸಮಾಡುವವರಲ್ಲಿ ಕೆಲವರು, ಕೆಲಸಕ್ಕೆ ಹೋಗುತ್ತಿರುವಾಗ ಬೀದಿ ಸಾಕ್ಷಿಕಾರ್ಯ ಮಾಡುತ್ತಾ ಇಲ್ಲವೇ ಮುಂಜಾನೆ ಬೇಗನೆ ಆರಂಭಿಸುವ ವ್ಯಾಪಾರದ ಸ್ಥಳಗಳಲ್ಲಿ ಕೆಲಸಮಾಡುತ್ತಿರುವ ಜನರನ್ನು ಸಂದರ್ಶಿಸುವ ಮೂಲಕ, ಸೇವೆಯಲ್ಲಿ ಒಂದು ಇಲ್ಲವೇ ಹೆಚ್ಚು ತಾಸುಗಳನ್ನು ಕಳೆಯಸಾಧ್ಯವಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಇನ್ನೂ ಕೆಲವರು, ತಮ್ಮ ಮಧ್ಯಾಹ್ನದ ಊಟದ ವೇಳೆಯನ್ನು ಸಾಕ್ಷಿ ನೀಡಲಿಕ್ಕಾಗಿ ಶೆಡ್ಯೂಲ್ ಮಾಡುತ್ತಾರೆ. ಕೆಲವರಿಗೆ ಆ ಅವಧಿಯಲ್ಲಿ ಒಬ್ಬ ಜೊತೆ ಕಾರ್ಮಿಕನೊಂದಿಗೆ ಬೈಬಲ್ ಅಧ್ಯಯನ ನಡೆಸಲು ಸಾಧ್ಯವಾಗಿದೆ. ಗೃಹಿಣಿಯರಾಗಿರುವ ಅನೇಕ ಮಂದಿ ಸಹೋದರಿಯರು, ಶಾಲೆಗಳು ನಡೆಯುತ್ತಿರುವ ಅವಧಿಯಲ್ಲೂ ಕ್ಷೇತ್ರ ಸೇವೆಗಾಗಿ ಸಮಯವನ್ನು ಬದಿಗಿರಿಸಲು ಶಕ್ತರಾಗಿದ್ದಾರೆ ಮತ್ತು ಶಾಲೆಗಳಿಗೆ ರಜೆ ಇರುವಾಗ ಅದಕ್ಕಾಗಿ ಇನ್ನೂ ಹೆಚ್ಚು ಸಮಯವನ್ನು ಬದಿಗಿರಿಸಲು ಶಕ್ತರಾಗಿದ್ದಾರೆ. ತಮ್ಮ ಮನೆಕೆಲಸಗಳನ್ನು ಮಾಡಿ ಮುಗಿಸಲಿಕ್ಕಾಗಿ ಅವರು ಕೆಲವು ದಿನಗಳಂದು ಸ್ವಲ್ಪ ಬೇಗನೆ ಏಳುವ ಮೂಲಕ, ದಿನದಲ್ಲಿ ಅವರಿಗೆ ಸಾರುವ ಹಾಗೂ ಕಲಿಸುವ ಕೆಲಸಕ್ಕಾಗಿ ಹೆಚ್ಚು ಸಮಯ ಸಿಗುತ್ತದೆ.—ಎಫೆ. 5:15, 16.
6 ನಿಮಗೆ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಾಗದಿದ್ದರೂ, ಶುಶ್ರೂಷೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗುವಂತೆ ನೀವು ಒಂದು ವೈಯಕ್ತಿಕ ಶೆಡ್ಯೂಲನ್ನು ಮಾಡಬಹುದು. “ಒಳ್ಳೇದನ್ನು ಮಾಡುವುದರಲ್ಲಿ, ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರುವುದರಲ್ಲಿ, ಉದಾರಿಗಳಾಗಿರುವುದರಲ್ಲಿ” ಮತ್ತು ಸತ್ಯವನ್ನು ಇತರರೊಂದಿಗೆ “ಹಂಚಿಕೊಳ್ಳಲು ಸಿದ್ಧರಾಗಿರುವುದರಲ್ಲಿ” ನಿಮ್ಮಿಂದಾದದ್ದೆಲ್ಲವನ್ನೂ ಮಾಡುತ್ತಾ ಇರಿ.—1 ತಿಮೊ. 6:18, NW.
7 ಶಿಷ್ಯರನ್ನಾಗಿ ಮಾಡುವ ಸತ್ಕಾರ್ಯವನ್ನು ನೆನಪಿನಲ್ಲಿಡಿರಿ: ಪ್ರತಿ ವರ್ಷ ಜ್ಞಾಪಕಾಚರಣೆಗೆ ಬರುವ ಆಸಕ್ತ ವ್ಯಕ್ತಿಗಳಿದ್ದಾರೆ. ಸಭೆಯಲ್ಲಿರುವ ಕೆಲವರು, ಜ್ಞಾಪಕಾಚರಣೆಗೆ ಹಾಜರಾಗುತ್ತಿರುವ ಆದರೆ ಈಗ ಅಧ್ಯಯನ ಮಾಡದೇ ಇರುವವರಿಗೆ ಗಮನವನ್ನು ಕೊಡಸಾಧ್ಯವಿದೆಯೊ? ಆತ್ಮಿಕ ಪ್ರಗತಿಯನ್ನು ಮಾಡುವಂತೆ ಸಹಾಯಮಾಡುವ ಉದ್ದೇಶದಿಂದ ಅವರನ್ನು ಪುನಃ ಭೇಟಿಮಾಡಸಾಧ್ಯವೊ? ಜ್ಞಾಪಕಾಚರಣೆಗೆ ಹಾಜರಾದವರಲ್ಲಿ ಕೆಲವರು ಸಾಕ್ಷಿಗಳ ಸಂಬಂಧಿಕರಾಗಿರಬಹುದು. ಇನ್ನಿತರರು, ಹಿಂದೆ ಒಂದು ಸಮಯದಲ್ಲಿ ಅಧ್ಯಯನ ಮಾಡಿರುವವರಾಗಿರಬಹುದು ಮತ್ತು ಇವರು ಪುನಃ ಅಧ್ಯಯನವನ್ನು ಆರಂಭಿಸಲು ಹಾಗೂ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಇವರಿಗೆ ಕೇವಲ ಸ್ವಲ್ಪ ಪ್ರೋತ್ಸಾಹನೆಯ ಅಗತ್ಯವಿರಬಹುದು. ಅವರು ನಮ್ಮೊಂದಿಗೆ ಯೆಹೋವನ ಸಕ್ರಿಯ ಸೇವಕರಾಗುವುದನ್ನು ನೋಡುವಾಗ ನಮಗೆ ಎಷ್ಟು ಆನಂದವಾಗುವುದು!
8 ಮಾರ್ಚ್ನಲ್ಲಿ ಮತ್ತು ಮುಂದಿನ ತಿಂಗಳುಗಳಲ್ಲಿ ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ, ನಾವು ಪುನಃ ಭೇಟಿಮಾಡಸಾಧ್ಯವಿರುವ ಆಸಕ್ತ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಕೊಳ್ಳುವ ಹೆಚ್ಚಿನ ಸಾಧ್ಯತೆಯಿದೆ. ನಿಮ್ಮ ಮೊದಲ ಭೇಟಿಯಲ್ಲಿ, ಅವರೊಂದಿಗೆ ಒಂದು ಪ್ರಶ್ನೆಯನ್ನು ಬಿಟ್ಟುಬರಲು ಪ್ರಯತ್ನಿಸಿರಿ. ಅದಕ್ಕೆ ಉತ್ತರವನ್ನು ಮುಂದಿನ ಭೇಟಿಯಲ್ಲಿ ನೀಡುವೆವು ಎಂದು ಮಾತುಕೊಡಿರಿ. ನಾವಿದನ್ನು ಮಾಡುವಾಗ, ಒಂದು ಪುನರ್ಭೇಟಿಗಾಗಿ ಮಾರ್ಗವು ಸಿದ್ಧವಾಗುವುದು. ನಾವು ಎಷ್ಟು ಬೇಗ ಪುನರ್ಭೇಟಿಯನ್ನು ಮಾಡುತ್ತೇವೊ ಅಷ್ಟು ಒಳ್ಳೇದು. ಮೊದಲ ಭೇಟಿಯಲ್ಲೇ ನಾವು ಒಂದು ಅಧ್ಯಯನವನ್ನು ಆರಂಭಿಸಲು ಶಕ್ತರಾಗಿರದಿದ್ದರೆ, ಸಾಧ್ಯವಿರುವಲ್ಲಿ ಮುಂದಿನ ಭೇಟಿಯಲ್ಲೇ ಅದನ್ನು ಮಾಡಲು ಪ್ರಯತ್ನಿಸಬಹುದು.
9 ನಾವು ಬೀದಿ ಸಾಕ್ಷಿಕಾರ್ಯವನ್ನು ನಡೆಸುತ್ತಿರುವಾಗ, ಜನರೊಂದಿಗೆ ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಪ್ರಯತ್ನಿಸುವುದರ ಬಗ್ಗೆ ಯಾವಾಗಲೂ ಅರಿವುಳ್ಳವರಾಗಿರಬೇಕು. ಅನೇಕ ಪ್ರಚಾರಕರು ಬೀದಿ ಸಾಕ್ಷಿಕಾರ್ಯದಲ್ಲಿ ತೊಡಗಿರುವಾಗ, ಆಸಕ್ತ ಜನರು ಅವರಿಗೆ ತಮ್ಮ ಹೆಸರುಗಳನ್ನು, ವಿಳಾಸಗಳನ್ನು ಮತ್ತು ಟೆಲಿಫೋನ್ ನಂಬರ್ಗಳನ್ನು ಕೊಟ್ಟಿದ್ದಾರೆ. ಆ ವ್ಯಕ್ತಿಯು ನಿಮ್ಮ ಟೆರಿಟೊರಿಯಲ್ಲಿ ವಾಸಿಸದಿರುವಲ್ಲಿ, ರಾಜ್ಯ ಸಭಾಗೃಹದಲ್ಲಿರುವ ಪ್ಲೀಸ್ ಫಾಲೊ ಅಪ್ (S-43) ಎಂಬ ಫಾರ್ಮ್ ಅನ್ನು ತೆಗೆದುಕೊಂಡು, ಅದನ್ನು ತುಂಬಿಸಿ, ಸಭೆಯ ಸೆಕ್ರಿಟರಿಗೆ ಕೊಡಿರಿ. ಅವನು, ಆ ವ್ಯಕ್ತಿಯು ಯಾವ ಸಭೆಯ ಟೆರಿಟೊರಿಯಲ್ಲಿ ವಾಸಿಸುತ್ತಿದ್ದಾನೊ ಆ ಸಭೆಗೆ ಅದನ್ನು ರವಾನಿಸುವನು. ಸೆಕ್ರಿಟರಿಗೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ಈ ಕೆಲಸವನ್ನು ನಿರ್ವಹಿಸಲಿಕ್ಕಾಗಿ ಅವನು ಫಾರ್ಮ್ ಅನ್ನು ಬ್ರಾಂಚ್ ಆಫೀಸ್ಗೆ ಕಳುಹಿಸುವನು. ಈ ವಿಧದಲ್ಲಿ ಆ ಆಸಕ್ತಿಯನ್ನು ಬೆಳೆಸಸಾಧ್ಯವಿದೆ.
10 ವಿಳಾಸದ ಬದಲಿಗೆ ನಿಮಗೆ ಟೆಲಿಫೋನ್ ನಂಬರ್ ಕೊಡಲ್ಪಟ್ಟಿರುವಲ್ಲಿ, ಆ ವ್ಯಕ್ತಿಗೆ ಫೋನ್ ಮಾಡುವ ಮೂಲಕ ಪುನರ್ಭೇಟಿ ಮಾಡಿರಿ. ನೀವೇನನ್ನು ಚರ್ಚಿಸಲು ಬಯಸುತ್ತೀರೋ ಆ ವಿಷಯವನ್ನು ಸಾಕಷ್ಟು ಸಮಯಕ್ಕೆ ಮುಂಚೆಯೇ ತಯಾರಿಸಿರಿ. ಬೇಗನೆ ತೆರೆದು ನೋಡಲಾಗುವಂತೆ ನಿಮ್ಮ ರೀಸನಿಂಗ್ ಪುಸ್ತಕವನ್ನು ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರ್ರಿ. ಟೆಲಿಫೋನ್ನಲ್ಲಿ ಜನರೊಂದಿಗೆ ಅಧ್ಯಯನ ನಡೆಸುವುದರಲ್ಲಿ ಕೆಲವರಿಗೆ ಒಳ್ಳೇ ಯಶಸ್ಸು ಸಿಕ್ಕಿದೆ. ಮನೆಯಲ್ಲಿ ಭೇಟಿಯಾಗಲು ಕಷ್ಟಕರವಾಗಿದ್ದವರೊಂದಿಗೂ ಹೀಗೆ ಮಾಡಲು ಸಾಧ್ಯವಾಗಿದೆ. ಒಬ್ಬ ಸಹೋದರಿಯು ತಾನು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭೇಟಿಯಾಗುತ್ತಿದ್ದ ಆಸಕ್ತ ಮಹಿಳೆಯರಿಂದ ಟೆಲಿಫೋನ್ ನಂಬರುಗಳನ್ನು ಕೇಳಿ ಪಡೆಯಲಾರಂಭಿಸಿದಳು, ಮತ್ತು ಫಲಸ್ವರೂಪವಾಗಿ ಅವಳು ಎರಡು ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಶಕ್ತಳಾದಳು.
11 ನಿಷ್ಕ್ರಿಯರಿಗೆ ಸಹಾಯಮಾಡುವುದರಲ್ಲಿ ಹಿರಿಯರೊಂದಿಗೆ ಸಹಕರಿಸಿರಿ: ಇವರಿಗೆ ಪ್ರೀತಿಪರ ಗಮನವನ್ನು ಕೊಡುವುದರಲ್ಲಿ ಹಿರಿಯರಿಗೆ ತುಂಬ ಆಸಕ್ತಿಯಿದೆ. ಇಂಥ ನಿಷ್ಕ್ರಿಯ ವ್ಯಕ್ತಿಗಳಲ್ಲಿ ಅನೇಕರು ಸ್ವತಃ ತಾವೇ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾ, ಈಗಾಗಲೇ ಸಭಾ ಕೂಟಗಳಿಗೆ ಪುನಃ ಹಾಜರಾಗಲಾರಂಭಿಸಿದ್ದಾರೆ. ಕೀರ್ತನೆ 91ರಲ್ಲಿ ವರ್ಣಿಸಲ್ಪಟ್ಟಿರುವ ಆತ್ಮಿಕ ಭದ್ರತೆಯನ್ನು ಆನಂದಿಸಲಿಕ್ಕಾಗಿ ಯೆಹೋವನ ಸಂಸ್ಥೆಯೊಂದಿಗೆ ಆಪ್ತವಾದ ಸಹವಾಸವನ್ನು ಮಾಡಲು ಪ್ರಯತ್ನಿಸುವುದರ ಆವಶ್ಯಕತೆ ಅವರಿಗೆ ಮನದಟ್ಟಾಗಿದೆ. ಇವರಲ್ಲಿ ಕೆಲವರು ಈಗಾಗಲೇ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ. ಈ ತಿಂಗಳಿನಲ್ಲಿ ಇನ್ನಿತರ ನಿಷ್ಕ್ರಿಯ ವ್ಯಕ್ತಿಗಳು ಜ್ಞಾಪಕಾಚರಣೆಗೆ ಹಾಜರಾಗುವಲ್ಲಿ, ಅವರು ಒಂದು ವೈಯಕ್ತಿಕವಾದ ಬೈಬಲ್ ಅಧ್ಯಯನವನ್ನು ಸಂತೋಷದಿಂದ ಸ್ವೀಕರಿಸಬಹುದು. ಹಾಗಿರುವಲ್ಲಿ, ಸಹಾಯವನ್ನು ಪಡೆದುಕೊಳ್ಳಲು ಬಯಸುವವರೊಂದಿಗೆ ಯಾರಾದರೂ ಅಧ್ಯಯನ ಮಾಡುವಂತೆ ಹಿರಿಯರು ಏರ್ಪಾಡುಗಳನ್ನು ಮಾಡುವರು. ಈ ರೀತಿಯಲ್ಲಿ ಸಹಾಯಮಾಡುವಂತೆ ನೀವು ಆಮಂತ್ರಿಸಲ್ಪಟ್ಟರೆ, ನಿಮ್ಮ ಸಹಕಾರವನ್ನು ತುಂಬ ಗಣ್ಯಮಾಡಲಾಗುವುದು.—ರೋಮಾ. 15:1, 2.
12 ‘ಸತ್ಕ್ರಿಯೆಗಳನ್ನು ಮಾಡುತ್ತಾ’ ಇರಿ: ಒಂದು ಅಥವಾ ಹೆಚ್ಚು ತಿಂಗಳುಗಳ ವರೆಗೆ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಪಾಲ್ಗೊಂಡಿರುವ ಅನೇಕರು, ಮುಂದಿನ ತಿಂಗಳುಗಳಲ್ಲಿ ತಮ್ಮ ಕ್ಷೇತ್ರ ಚಟುವಟಿಕೆಯು ಹೆಚ್ಚಾಗಿರುವುದನ್ನು ಕಂಡುಕೊಂಡಿದ್ದಾರೆ. ಪುನಃ ಭೇಟಿಮಾಡಬೇಕೆಂದು ಅವರಿಗನಿಸಿದಂಥ ಆಸಕ್ತ ಜನರನ್ನು ಅವರು ಭೇಟಿಮಾಡಿದರು. ಆದುದರಿಂದ, ಆ ಆಸಕ್ತ ವ್ಯಕ್ತಿಗಳನ್ನು ಪುನಃ ಸಂಪರ್ಕಿಸಲಿಕ್ಕಾಗಿ ಅನೇಕ ಬಾರಿ ಕ್ಷೇತ್ರ ಸೇವೆಗೆ ಹೋಗಲಿಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ಇದು ಅವರನ್ನು ಪ್ರಚೋದಿಸಿತು. ಕೆಲವರು ಅಧ್ಯಯನಗಳನ್ನು ಆರಂಭಿಸಿದರು, ಮತ್ತು ಇದು ಅವರು ಶುಶ್ರೂಷೆಯಲ್ಲಿ ಇನ್ನೂ ಹೆಚ್ಚಾಗಿ ಪಾಲ್ಗೊಳ್ಳುವಂತೆ ಸಹಾಯಮಾಡಿತು.
13 ಇನ್ನೂ ಕೆಲವರಿಗೆ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಎಷ್ಟೊಂದು ಆನಂದ ಸಿಕ್ಕಿತೆಂದರೆ, ಅವರು ತಮ್ಮ ಆದ್ಯತೆಗಳನ್ನು ಪುನಃ ಪರಿಶೀಲಿಸುವಂತೆ ಪ್ರಚೋದಿಸಲ್ಪಟ್ಟರು. ಇದರ ಫಲಿತಾಂಶವಾಗಿ ಕೆಲವರು ತಮ್ಮ ಐಹಿಕ ಕೆಲಸವನ್ನು ಕಡಿಮೆಗೊಳಿಸಲು ಮತ್ತು ಸತತವಾಗಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಲು ಶಕ್ತರಾದರು. ಇನ್ನಿತರರು ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಲು ಶಕ್ತರಾಗಿದ್ದಾರೆ. ಅವರು ತಮ್ಮ ನಿರೀಕ್ಷೆಯನ್ನು, ಲೋಕವು ನೀಡುವಂಥ ವಿಷಯಗಳ ಮೇಲಲ್ಲ ಬದಲಾಗಿ ಪೂರ್ಣವಾಗಿ ದೇವರ ಮೇಲೆ ಇಡಲು ಶಕ್ತರಾಗಿದ್ದರು. “ಉದಾರಿಗಳೂ, ಹಂಚಿಕೊಳ್ಳಲು ಸಿದ್ಧರೂ” ಆಗಿರುವುದು, ಯೆಹೋವನಿಂದ ಹೇರಳವಾದ ಆಶೀರ್ವಾದಗಳನ್ನು ತಂದಿತು ಮತ್ತು “ನಿಜವಾದ ಜೀವವನ್ನು” ಅನುಭವಿಸುವ ತಮ್ಮ ನಿರೀಕ್ಷೆಯನ್ನು ಬಲಪಡಿಸಿತೆಂಬುದನ್ನು ಅವರು ಕಂಡುಕೊಂಡರು. (1 ತಿಮೊ. 6:18, 19, NW) ಹೌದು, ಹೆಚ್ಚೆಚ್ಚು ಮಂದಿ ಪಯನೀಯರ್ ಸೇವೆಯನ್ನು ಮಾಡುತ್ತಿರುವಾಗ, ಇಡೀ ಸಭೆಯು ಪ್ರಯೋಜನಹೊಂದುತ್ತದೆ. ಪಯನೀಯರರು ತಮ್ಮ ಅನುಭವಗಳ ಬಗ್ಗೆ ಮಾತಾಡುವ ಮತ್ತು ಬೇರೆಯವರು ತಮ್ಮೊಂದಿಗೆ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ ಮತ್ತು ಇದು ಸಭೆಯಲ್ಲಿ ಉಚ್ಚ ಮಟ್ಟದ ಆತ್ಮಿಕ ವಾತಾವರಣವನ್ನು ಉಂಟುಮಾಡುತ್ತದೆ.
14 ಈ ಜ್ಞಾಪಕಾಚರಣೆಯ ಅವಧಿಯಲ್ಲಿ ಮತ್ತು ಮುಂದಕ್ಕೆ ನಾವೆಲ್ಲರೂ ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ, ‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರೋಣ.’ ಒಂದು ನೀತಿಯ ಹೊಸ ಲೋಕದಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ಕೊಡುವುದರಲ್ಲಿ ಯೆಹೋವನು ಏನು ಮಾಡಿದ್ದಾನೋ ಅದಕ್ಕಾಗಿ ನಾವು ಆತನಿಗೆ ನಮ್ಮ ಗಣ್ಯತೆಯನ್ನು ತೋರಿಸೋಣ.—2 ಪೇತ್ರ 3:13.