ಕೂಟಗಳು ಯುವ ಜನರಿಗೆ ಪ್ರಯೋಜನಕಾರಿಯಾಗಿವೆ
1 ಒಬ್ಬ ಹದಿವಯಸ್ಕಳು ಹೀಗೆ ಹೇಳಿದಳು: “ಯುವ ಜನರೇ ಜೀವನದಲ್ಲಿ ತುಂಬ ಕಷ್ಟಪಡುತ್ತಾರೆ ಎಂದು ಕೆಲವೊಮ್ಮೆ ನನಗನಿಸುತ್ತದೆ. ಏಕೆಂದರೆ, ನಮ್ಮ ಸುತ್ತುಮುತ್ತಲೂ ಜಾರತ್ವವನ್ನು ಮಾಡುವ, ಮಾದಕ ಪದಾರ್ಥಗಳನ್ನು ಸೇವಿಸುವ, ಮದ್ಯಪಾನ ಮಾಡುವ ಜನರಿದ್ದಾರೆ.” ನಿಮಗೂ ಹೀಗೇ ಅನಿಸುತ್ತದೋ? ಹಾಗಿರುವಲ್ಲಿ, ಈ ಕೆಟ್ಟ ಪ್ರಭಾವಗಳ ವಿರುದ್ಧ ಹೋರಾಡಿ ಗೆಲ್ಲಲು ಯಾವುದು ಸಹಾಯಮಾಡಬಹುದು ಎಂದು ನೀವು ನೆನಸುತ್ತೀರಿ? ನಿಮಗೆ ಬಲವಾದ ನಂಬಿಕೆಯು ಬೇಕಾಗಿದೆ, ಹೌದು, ಯೆಹೋವನ ನ್ಯಾಯವಾದ ಮಾರ್ಗಗಳಲ್ಲಿ ಬಲವಾದ ನಂಬಿಕೆಯು ಬೇಕಾಗಿದೆ. ಏಕೆಂದರೆ ಇದಿಲ್ಲದೆ “ದೇವರನ್ನು ಮೆಚ್ಚಿಸುವದು ಅಸಾಧ್ಯ.” (ಇಬ್ರಿ. 11:6) ಸಭಾ ಕೂಟಗಳಿಗೆ ಹಾಜರಾಗುವುದರಿಂದ, ನಿಮ್ಮ ಕ್ರೈಸ್ತ ನಂಬಿಕೆ ಹಾಗೂ ಕೆಟ್ಟದ್ದರಿಂದ ದೂರವಿರುವ ನಿಮ್ಮ ದೃಢಸಂಕಲ್ಪವು ಮತ್ತಷ್ಟೂ ಬಲಗೊಳ್ಳುವುದು.
2 ಕೂಟಗಳು ಬಹಳಷ್ಟನ್ನು ನಿಮಗೆ ನೀಡುವವು: ಆಪ್ತ ಸ್ನೇಹಿತರೊಂದಿಗೆ ಸೇರಿ ಊಟಮಾಡುವಾಗ ಯಾವುದು ನಮಗೆ ತುಂಬ ಆನಂದವನ್ನು ಉಂಟುಮಾಡುತ್ತದೆ? ಮನಸ್ಸಿಗೆ ಮುದ ನೀಡುವ ವಾತಾವರಣದಲ್ಲಿ ಪುಷ್ಟಿದಾಯಕ ಆಹಾರ ಹಾಗೂ ಉಲ್ಲಾಸವನ್ನುಂಟುಮಾಡುವ ಸ್ನೇಹಿತರ ಒಡನಾಟವೇ ಅಲ್ಲವೇ? ಹಾಗೆಯೇ, ನಮ್ಮ ಕೂಟಗಳು ಸಹ ಅಂತಹ ಉಲ್ಲಾಸಿತ ಅನುಭವವನ್ನು ಒದಗಿಸುತ್ತವೆ. ಆದರೆ, ಅದು ಆತ್ಮಿಕ ರೀತಿಯಲ್ಲಿ ಆಗಿದೆ.
3 ಕೂಟಗಳಲ್ಲಿ ಚರ್ಚಿಸಲ್ಪಡುವ ವಿಷಯಗಳು ಆತ್ಮೋನ್ನತಿಯನ್ನು ಉಂಟುಮಾಡುವಂತಹವುಗಳು ಆಗಿವೆ. ಅಲ್ಲಿ, ನಾವು ಜೀವಿತದಲ್ಲಿ ಅನುದಿನವು ಎದುರಿಸುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಎಂಬ ವಿಷಯಗಳ ಚರ್ಚೆಯಿಂದ ಹಿಡಿದು ಮನಸೆಳೆಯುವ ಬೈಬಲ್ ಪ್ರವಾದನೆಗಳ ವರೆಗೆ ಚರ್ಚೆ ಮಾಡಲಾಗುತ್ತದೆ. ಅತ್ಯುತ್ತಮ ಜೀವನವನ್ನು ಹೇಗೆ ನಡೆಸುವುದು ಮತ್ತು ನಿಮ್ಮ ಬಾಳಿನ ಹಾದಿಯಲ್ಲಿ ಬರುವ ಕಲ್ಲುಮುಳ್ಳುಗಳನ್ನು ಹೇಗೆ ಯಶಸ್ವಿಕರವಾಗಿ ದಾಟುವುದು ಎಂಬ ಪ್ರಾಯೋಗಿಕ ಬೋಧನೆಯು ಅಲ್ಲಿ ನೀಡಲ್ಪಡುತ್ತದೆ. ಕೂಟಗಳಿಗೆ ಕೂಡಿಬರುವ ಜೊತೆ ವಿಶ್ವಾಸಿಗಳೇ ಅತ್ಯುತ್ತಮ ಒಡನಾಡಿಗಳಾಗಿದ್ದಾರೆ. ಇಂತಹವರನ್ನು ಇನ್ನೆಲ್ಲೂ ಕಂಡುಕೊಳ್ಳಸಾಧ್ಯವಿಲ್ಲ. ಮತ್ತು ಅಲ್ಲಿನ ಆತ್ಮಿಕ ವಾತಾವರಣವು ಮನಸ್ಸಿಗೆ ಹಿತವಾಗಿಯೂ ಸುರಕ್ಷೆಯ ಅನಿಸಿಕೆಯನ್ನು ನೀಡುವಂತಹದ್ದೂ ಆಗಿರುತ್ತದೆ. (ಕೀರ್ತ. 133:1) ಒಬ್ಬ ಯುವತಿಯು ಹೀಗೆ ಹೇಳಿರುವುದರಲ್ಲಿ ಆಶ್ಚರ್ಯವೇ ಇಲ್ಲ: “ನಾನು ಇಡೀ ದಿನ ಶಾಲೆಯಲ್ಲಿರುತ್ತೇನೆ. ಅಲ್ಲಿ ನಾನು ಒತ್ತಡಗಳಿಂದಾಗಿ ಬಳಲಿಹೋಗಿರುತ್ತೇನೆ. ಆದರೆ ಕೂಟಗಳು ಮರುಭೂಮಿಯಲ್ಲಿರುವ ಓಯಸೀಸ್ನಂತೆ ಇವೆ. ಅಲ್ಲಿ ನಾನು ಮರುದಿನ ಶಾಲೆಯಲ್ಲಿ ಎದುರಿಸಬಹುದಾದ ಒತ್ತಡಗಳನ್ನು ಜಯಶಾಲಿಯಾಗಿ ನಿಭಾಯಿಸಲು ಚೈತನ್ಯವನ್ನು ಪಡೆದುಕೊಳ್ಳುತ್ತೇನೆ.” ಮತ್ತೊಬ್ಬಳು ಹೇಳಿದ್ದು: “ಯೆಹೋವನನ್ನು ಪ್ರೀತಿಸುವ ಜನರೊಟ್ಟಿಗೆ ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳುವುದರಿಂದ, ಇದು ನನಗೆ ಯೆಹೋವನೊಂದಿಗೆ ಗಾಢವಾದ ಸಂಬಂಧವನ್ನು ಇಟ್ಟುಕೊಳ್ಳಲು ಸಹಾಯಮಾಡುತ್ತದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.”
4 ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಹೆಸರನ್ನು ನಮೂದಿಸಿಕೊಳ್ಳುವ ಮೂಲಕ, ನೀವು ಬೈಬಲ್ ಸಂಬಂಧಿತ ವಿಷಯವನ್ನು ಸಂಗ್ರಹಿಸಿ, ಅದನ್ನು ಒಂದು ಭಾಷಣವಾಗಿ ಮಾಡಿ, ರಾಜ್ಯ ಸಭಾಗೃಹದಲ್ಲಿರುವ ಸಭಿಕರ ಮುಂದೆ ಸಂಭಾಷಣೆಯ ರೂಪದಲ್ಲಿ ಪ್ರಸ್ತುತಪಡಿಸಲು ಕಲಿತುಕೊಳ್ಳುತ್ತೀರಿ. ಇಲ್ಲಿ ದೇವರ ವಾಕ್ಯದಲ್ಲಿರುವ ಜೀವರಕ್ಷಕ ಸತ್ಯಗಳನ್ನು ನಿಪುಣತೆಯಿಂದ ಇತರರಿಗೆ ಕಲಿಸುವುದಕ್ಕಾಗಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಇದರಿಂದ ಸಿಗುವ ಪ್ರಯೋಜನವನ್ನು ಸ್ವಲ್ಪ ಊಹಿಸಿ ನೋಡಿ! ಇಂತಹ ಅಮೂಲ್ಯವಾದ ತರಬೇತಿಯನ್ನು ಯುವ ಜನರು ಇನ್ನೆಲ್ಲಿ ಕಂಡುಕೊಳ್ಳಸಾಧ್ಯವಿದೆ?
5 ನಮ್ಮ ಕೂಟಗಳಿಂದ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು? ಕೂಟಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಮೂರು ಮುಖ್ಯ ವಿಷಯಗಳು ಒಳಗೂಡಿದೆ. ಅದೇನೆಂದರೆ, ಒಂದು ತಯಾರಿಮಾಡುವುದು, ಇನ್ನೊಂದು ಭಾಗವಹಿಸುವುದು ಮತ್ತು ಮೂರನೆಯದು ಕಲಿತ ವಿಷಯಗಳನ್ನು ಜೀವಿತದಲ್ಲಿ ಅನ್ವಯಿಸಿಕೊಳ್ಳುವುದೇ ಆಗಿದೆ.
6 ಕೂಟಗಳಿಗಾಗಿ ತಯಾರಿಮಾಡಿರಿ: ಕ್ರಮವಾಗಿ ಕೂಟಗಳಿಗೆ ತಯಾರಿಮಾಡಲು ಸಮಯವನ್ನು ಬದಿಗಿಡಿರಿ. ಪ್ರತಿಯೊಂದು ಕೂಟದಲ್ಲಿ ಚರ್ಚಿಸಲಾಗುವ ವಿಷಯವನ್ನು ತಯಾರಿಮಾಡುವುದಕ್ಕಾಗಿ ನೀವು ಬದಿಗಿಟ್ಟಿರುವ ಸಮಯವನ್ನು, ಶಾಲೆಯ ಹೋಮ್ವರ್ಕ್ ಆಗಲಿ, ಪಾರ್ಟ್ ಟೈಮ್ ಕೆಲಸವಾಗಲಿ ಇಲ್ಲವೇ ಮನೋರಂಜನೆಯಾಗಲಿ ಕಬಳಿಸದಿರಲಿ. ಮುಂದಾಗಿಯೇ ತಯಾರಿಮಾಡುವುದು ಒಂದು ಒಳ್ಳೆಯ ನಿಯತ ಕ್ರಮಕ್ಕೆ ನೆರವನ್ನು ನೀಡುತ್ತದೆ. ಮೊಟ್ಟಮೊದಲಾಗಿ, ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ಶೆಡ್ಯೂಲ್ ಮಾಡಲ್ಪಟ್ಟಿರುವ ವಾರದ ಬೈಬಲ್ ವಾಚನವನ್ನು ಕ್ರಮವಾಗಿ ಓದಿರಿ. ಪ್ರತಿ ದಿನ ನೇಮಿಸಲ್ಪಟ್ಟ ಅಧ್ಯಾಯಗಳನ್ನು ಓದಿ, ಅದರ ಕುರಿತಾಗಿ ಮನನ ಮಾಡಲು ಕೇವಲ ಕೆಲವೊಂದು ನಿಮಿಷಗಳಷ್ಟೇ ಬೇಕಾಗಿರುತ್ತದೆ. ಸಭಾ ಪುಸ್ತಕ ಅಭ್ಯಾಸಕ್ಕಾಗಿ ಹಾಗೂ ಕಾವಲಿನಬುರುಜು ಪತ್ರಿಕೆಯನ್ನು ತಯಾರಿಮಾಡಲಿಕ್ಕಾಗಿ ಸಮಯವನ್ನು ಬದಿಗಿರಿಸಿರಿ. ಕೆಲವರು ಆ ಕೂಟಗಳು ನಡೆಯುವುದಕ್ಕಿರುವ ಒಂದು ಅಥವಾ ಎರಡು ದಿನಕ್ಕೆ ಮುಂಚೆ ತಯಾರಿಮಾಡುತ್ತಾರೆ. ಸಾಧ್ಯವಾಗುವಷ್ಟರ ಮಟ್ಟಿಗೆ, ಪ್ರತಿ ವಾರ ಸೇವಾ ಕೂಟದಲ್ಲಿ ಶೆಡ್ಯೂಲ್ ಮಾಡಲ್ಪಟ್ಟಿರುವ ಭಾಗಗಳಿಗೂ ಇದೇ ರೀತಿಯಲ್ಲಿ ತಯಾರಿಮಾಡಲು ಪ್ರಯತ್ನಿಸಿರಿ.
7 ಭಾಗವಹಿಸಿರಿ: 12 ವರ್ಷ ಪ್ರಾಯದವನಾಗಿದ್ದಾಗ, ಯೇಸು ದೇವಾಲಯದಲ್ಲಿ ಉಪದೇಶವನ್ನು ಆಲಿಸುತ್ತಾ, ಪ್ರಶ್ನೆಗಳನ್ನು ಕೇಳುತ್ತಾ ಅವುಗಳಿಗೆ ಉತ್ತರಗಳನ್ನು ಕೊಡುತ್ತಾ ಇದ್ದನು ಎಂದು ಬೈಬಲು ಹೇಳುತ್ತದೆ. (ಲೂಕ 2:46, 47) ಬೇರೆ ಮಾತಿನಲ್ಲಿ ಹೇಳುವುದಾದರೆ, ಅವನು ಆ ಚರ್ಚೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಿದನು. ಕೂಟಗಳಲ್ಲಿ ಭಾಗವಹಿಸಲಿಕ್ಕಾಗಿ ನೀವು ಪ್ರಯತ್ನಿಸುವಾಗ, ಅವುಗಳಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವಿರಿ.—ಜ್ಞಾನೋ. 15:23.
8 ಕೂಟಗಳಲ್ಲಿ ಏನನ್ನು ಕಲಿಸಲಾಗುತ್ತಿದೆಯೋ ಆ ವಿಷಯಗಳನ್ನು ನೀವು ಏಕಾಗ್ರತೆಯಿಂದ ಕೇಳಿಸಿಕೊಳ್ಳುವ ಅಗತ್ಯವಿದೆ. ಕೆಲವೊಮ್ಮೆ ಒಂದು ಭಾಷಣವನ್ನು ಲೀಲಾಜಾಲವಾಗಿ ಕೊಟ್ಟುಬಿಡಬಹುದು. ಆದರೆ ಅದೇ ಭಾಷಣವನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳುವುದು ಕಷ್ಟಕರವಾಗಿರುವುದು. ಅದಕ್ಕೆ ಕಾರಣವೇನು? ಬೇರೆಯವರು ಭಾಷಣವನ್ನು ಕೊಡುತ್ತಿರುವಾಗ ನಿಮ್ಮ ಮನಸ್ಸು ಹುಚ್ಚುಕುದುರೆಯಂತೆ ಓಡುತ್ತಿರಬಹುದು. ಆದರೆ ಅದಕ್ಕೆ ನೀವು ಹೇಗೆ ಕಡಿವಾಣವನ್ನು ಹಾಕಸಾಧ್ಯವಿದೆ? ನೋಟ್ಸನ್ನು ಬರೆದುಕೊಳ್ಳುವ ಮೂಲಕವೇ. ನೀವು ಅನಂತರ ಪರಾಮರ್ಶಿಸಲು ಇಷ್ಟಪಡುವ ಮುಖ್ಯವಾದ ವಿಷಯಗಳನ್ನು ಸಂಕ್ಷಿಪ್ತವಾಗಿ ಬರೆದಿಟ್ಟುಕೊಳ್ಳಿ. ನೋಟ್ಸನ್ನು ಬರೆದುಕೊಳ್ಳುವುದರಿಂದ ನೀವು ಕಾರ್ಯಕ್ರಮದ ಮೇಲೆ ನಿಮ್ಮ ಮನಸ್ಸನ್ನು ನೆಡಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ಶಾಸ್ತ್ರವಚನಗಳನ್ನು ತೆರೆದು ನೋಡಿರಿ, ಮತ್ತು ಭಾಷಣಕರ್ತನು ಅದನ್ನು ಓದುವಾಗ ನೀವು ಸಹ ಅವನೊಂದಿಗೆ ಓದಿರಿ.
9 ಕೂಟಗಳಲ್ಲಿ ಪ್ರತಿ ಸಾರಿ ಪ್ರಶ್ನೋತ್ತರಗಳ ಚರ್ಚೆಯನ್ನು ಮಾಡುವಾಗ ಅದರಲ್ಲಿ ಪಾಲ್ಗೊಳ್ಳುವ ಗುರಿಯನ್ನಿಡಿರಿ. ನೀವು ಏನನ್ನು ಹೇಳಲು ಬಯಸುತ್ತೀರೋ ಅದನ್ನು ಜಾಗರೂಕತೆಯಿಂದ ಮೊದಲೇ ಚಿಂತನೆಮಾಡುವಾಗ, ಅದರಿಂದ ನೀವು ಇನ್ನೂ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಏಕೆಂದರೆ ಜ್ಞಾನೋಕ್ತಿ 15:28 ಹೇಳುವುದು: “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ.”
10 ಕಲಿತ ವಿಷಯಗಳನ್ನು ಅನ್ವಯಿಸಿಕೊಳ್ಳಿ: ಕೊನೆಯದಾಗಿ ನೀವು ಏನನ್ನು ಕಲಿತುಕೊಳ್ಳುತ್ತೀರೋ, ಅದು ‘ನಿಮ್ಮೊಳಗೆ ಬಲವಾಗಿ ಕೆಲಸ ನಡಿಸುತ್ತಿದೆ’ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. (1 ಥೆಸ. 2:13) ಪ್ರತಿಯೊಂದು ಕೂಟದಲ್ಲಿ ನೀವು ಕಲಿತುಕೊಳ್ಳುವ ಒಳ್ಳೆಯ ವಿಷಯಗಳನ್ನು ನೀವು ನಿಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳುವಾಗ, ನೀವು ಯೆಹೋವ ದೇವರಿಗೆ ಇನ್ನೂ ಹೆಚ್ಚು ಹತ್ತಿರವಾಗುವಿರಿ. ಆತನು ನಿಮಗೆ ಒಬ್ಬ ನಿಜ ವ್ಯಕ್ತಿಯಾಗಿರುವನು. ಮತ್ತು ನೀವು ‘ಸತ್ಯವನ್ನನುಸರಿಸಿ ನಡೆಯುತ್ತಾ’ ಅದನ್ನು ನಿಮ್ಮದನ್ನಾಗಿ ಮಾಡಿಕೊಂಡಂತೆ, ಹೆಚ್ಚಿನ ಸಂತೋಷ ಹಾಗೂ ಸಂತೃಪ್ತಿಯು ನಿಮ್ಮದಾಗುವುದು.—3 ಯೋಹಾನ 4.
11 ಯುವ ಸಹೋದರ ಸಹೋದರಿಯರೇ, ನೀವು ಕೂಟಗಳಿಗಾಗಿ ಕ್ರಮವಾಗಿ ತಯಾರಿ ಮಾಡುವಾಗ, ಅವುಗಳಲ್ಲಿ ಭಾಗವಹಿಸುವಾಗ, ಮತ್ತು ಕಲಿತ ವಿಷಯಗಳನ್ನು ಜೀವಿತದಲ್ಲಿ ಅನ್ವಯಿಸಿಕೊಳ್ಳುವಾಗ ನೀವು ನಿಜವಾಗಿಯೂ ಕೂಟಗಳನ್ನು ತುಂಬ ಆನಂದಿಸುವಿರಿ. ಅದೇ ಸಮಯದಲ್ಲಿ, ಅವುಗಳಿಂದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಿರಿ. ನಿಮ್ಮ ನಂಬಿಕೆಯು ಬಲಗೊಳ್ಳುವುದು ಮತ್ತು ನಿಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯುವ ನಿಮ್ಮ ತೀರ್ಮಾನವನ್ನು ಅದು ಬಲಗೊಳಿಸುವುದು.—ಕೀರ್ತ. 145:18.