ಯೆಹೋವನ ಆಶೀರ್ವಾದವು ನಮ್ಮನ್ನು ಐಶ್ವರ್ಯವಂತರನ್ನಾಗಿ ಮಾಡುತ್ತದೆ
1 ಈ ಲೋಕದಲ್ಲಿ ಒಬ್ಬ ವ್ಯಕ್ತಿಯು ಎಷ್ಟರ ಮಟ್ಟಿಗೆ ಯಶ್ವಸಿಯಾಗಿದ್ದಾನೆ ಎಂಬುದನ್ನು ಅವನಿಗೆ ಸಿಗುವ ಸಂಬಳದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆದುದರಿಂದ, ಯಾರ ಬಳಿ ಹಣವಿದೆಯೊ ಅವರೇ ಅತಿ ಸಂತುಷ್ಟ ಹಾಗೂ ಸಂತೃಪ್ತ ಜನರಾಗಿದ್ದಾರೆಂದು ಹೆಚ್ಚಿನವರು ನೆನಸುತ್ತಾರೆ. ಆದರೆ ಹಣವು ಸಂತೋಷವನ್ನು ತರಬಲ್ಲದೆಂದು ನೆನಸುವವರ ವಿಚಾರವು ತಪ್ಪು. (ಪ್ರಸಂ. 5:12) ಯಾಕೆಂದರೆ, ಪ್ರಾಪಂಚಿಕ ರೀತಿಯಲ್ಲಿ “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವ”ರಿಗೆ ನಿರಂತರವಾದ ಸಂತೋಷವು ಇರುವುದಿಲ್ಲ. (1 ತಿಮೊ. 6:9) ಇವರಿಗೆ ವ್ಯತಿರಿಕ್ತವಾಗಿ, ಯೆಹೋವನ ಸೇವಕರು ನಿಜವಾಗಿಯೂ ಹರ್ಷಭರಿತ ಜನರಾಗಿದ್ದಾರೆ. ಅಷ್ಟುಮಾತ್ರವಲ್ಲದೆ, ಜಗತ್ತಿನಲ್ಲಿ ಅತ್ಯಂತ ಐಶ್ವರ್ಯವಂತ ಜನರೂ ಅವರೇ ಆಗಿದ್ದಾರೆ. (ಜ್ಞಾನೋ. 10:22; ಪ್ರಕ. 2:9) ಅದು ಹೇಗೆ?
2 ನಮ್ಮ ಐಶ್ವರ್ಯಕ್ಕೆ ಪುರಾವೆ: ನಮ್ಮ ಬಳಿ ಸಮೃದ್ಧ ಆತ್ಮಿಕ ಒಳನೋಟ ಮತ್ತು ದೇವರ ವಾಕ್ಯವಾದ ಬೈಬಲಿನ ತಿಳಿವಳಿಕೆಯಿದೆ. ಯೆಹೋವನು ತನ್ನ ಭೂಸಂಸ್ಥೆಯ ಮೂಲಕ, ನಮ್ಮ ನಿತ್ಯ ಒಳಿತಿಗಾಗಿ ತನ್ನ ಬಗ್ಗೆ ಹಾಗೂ ತನ್ನ ಮಗನ ಬಗ್ಗೆ ಕಲಿಸುತ್ತಾ ಇದ್ದಾನೆ. ಈ ನಿಷ್ಕೃಷ್ಟ ತಿಳಿವಳಿಕೆಯಿಂದಾಗಿ, ನಾವು ಯೆಹೋವನ ಹತ್ತಿರಕ್ಕೆ ಬಂದು, ಆತನೊಂದಿಗೆ ಆಪ್ತ ಸಂಬಂಧದಲ್ಲಿ ಆನಂದಿಸಲು ಶಕ್ತರಾಗಿದ್ದೇವೆ. (ಯಾಕೋ. 4:8) ಒಳ್ಳೇದು ಯಾವುದು ಮತ್ತು ಕೆಟ್ಟದ್ದು ಯಾವುದು ಎಂಬುದನ್ನು ಅರಿತುಕೊಳ್ಳುವುದರಿಂದ ಮತ್ತು ದೇವರ ನಿಯಮಗಳನ್ನು ಪಾಲಿಸುವುದರಿಂದ, ನಾವು ಕೆಲವೊಂದು ರೋಗಗಳು ಮತ್ತು ಅಪಾಯಗಳಿಂದ ರಕ್ಷಿಸಲ್ಪಟ್ಟಿದ್ದೇವೆ. ನಮಗೆ ಅಗತ್ಯವಿರುವುದೆಲ್ಲವನ್ನೂ ಯೆಹೋವನು ಒದಗಿಸುವನೆಂಬ ಭರವಸೆಯು ನಮಗಿದೆ. ಇದರಿಂದಾಗಿ ನಮಗೆ ದೈವಿಕ ಸಂತೃಪ್ತಿ ಹಾಗೂ ಮನಶ್ಶಾಂತಿಯಿದೆ.—ಮತ್ತಾ. 6:33.
3 ದೇವರಾತ್ಮದ ಫಲಗಳನ್ನು ನಾವು ಬೆಳೆಸಿಕೊಳ್ಳುತ್ತೇವೆ. ಇದರಿಂದಾಗಿ ನಮ್ಮ ಆತ್ಮಿಕ ಸಹೋದರತ್ವದ ಶಾಂತಿ ಮತ್ತು ಐಕ್ಯತೆಯಲ್ಲಿ ನಾವು ಆನಂದಿಸುತ್ತೇವೆ. ಮತ್ತು ನಾವು ಪ್ರೀತಿಯ ಬಲವಾದ ಬಂಧನದಲ್ಲಿ ಏಕೀಕರಿಸಲ್ಪಟ್ಟಿದ್ದೇವೆ. ಆದುದರಿಂದ, ಕಷ್ಟಕಾರ್ಪಣ್ಯ ಅಥವಾ ಆಪತ್ತುಗಳು ಬಂದೆರಗುವಾಗ, ದೇವರು ಅಥವಾ ನಮ್ಮ ಸಹೋದರರು ನಮ್ಮನ್ನು ಕೈಬಿಟ್ಟಿದ್ದಾರೆಂದು ನಾವು ಎಂದೂ ಭಾವಿಸಬಾರದು.—ಗಲಾ. 6:10.
4 ನಮ್ಮ ಜೀವಿತಗಳಿಗೆ ನಿಜವಾದ ಅರ್ಥ ಮತ್ತು ಉದ್ದೇಶವಿದೆ. ಲೋಕದ ಸುತ್ತಲೂ ನಡೆಯುತ್ತಿರುವ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನಾವು ಒಂದು ಸುಯೋಗವೆಂದೆಣಿಸುತ್ತೇವೆ. ಬೇರೆಯವರು ಸಹ ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಹೊಂದಿ, ನಮ್ಮೊಂದಿಗೆ ಶುದ್ಧಾರಾಧನೆಯಲ್ಲಿ ಐಕ್ಯರಾಗಿ ಸೇವೆಸಲ್ಲಿಸಲು ನಾವು ಸಹಾಯಮಾಡುವಾಗ, ನಮಗೆ ಶಾಶ್ವತವಾದ ಆನಂದವು ಸಿಗುತ್ತದೆ. ನಮ್ಮ ಬಳಿಯಿರುವ ಶುಶ್ರೂಷೆಯೆಂಬ ಅತ್ಯಮೂಲ್ಯವಾದ ನಿಧಿಯು ಯೆಹೋವನಿಗೆ ಗೌರವವನ್ನು ತರುತ್ತದೆ. ಅಷ್ಟುಮಾತ್ರವಲ್ಲದೆ, ಆತನ ನಾಮದ ಪವಿತ್ರೀಕರಣದಲ್ಲಿ ನಾವು ನಮ್ಮ ಪಾಲನ್ನು ಮಾಡಿದ್ದೇವೆಂಬ ತೃಪ್ತಿಯನ್ನು ಅದು ನಮಗೆ ಕೊಡುತ್ತದೆ. ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಯು ಶೀಘ್ರದಲ್ಲೇ ಸಾಕಾರಗೊಳ್ಳುವುದೆಂದು ನಮಗೆ ತಿಳಿದಿರುವುದರಿಂದ, ನಾವು ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುತ್ತೇವೆ.
5 ನಮ್ಮ ಗಣ್ಯತೆಯನ್ನು ತೋರಿಸುವುದು: ಯೆಹೋವನ ಆಶೀರ್ವಾದಗಳನ್ನು ನಾವು ಸದಾ ಗಣ್ಯಮಾಡುವವರಾಗಿರೋಣ. ಯಾಕೆಂದರೆ ಅದು ತಾನೇ ನಮ್ಮನ್ನು ಈ ಭೂಮಿಯ ಮೇಲೆ ಅತ್ಯಂತ ಐಶ್ವರ್ಯವಂತ ಜನರನ್ನಾಗಿ ಮಾಡುತ್ತದೆ. (ಜ್ಞಾನೋ. 22:4) ನಮ್ಮ ಬಳಿ ಏನೆಲ್ಲ ಇದೆಯೊ ಅದರ ಕುರಿತಾಗಿ ಯೋಚಿಸಲು ನಾವು ಪ್ರತಿದಿನ ಸ್ವಲ್ಪ ಸಮಯವನ್ನು ಬದಿಗಿರಿಸಬಹುದು. ಆಗ, ಯೆಹೋವನ ಅಪಾರ ಪ್ರೀತಿಗಾಗಿ ಆತನಿಗೆ ಉಪಕಾರ ಸಲ್ಲಿಸುವಂತೆ ಹಾಗೂ ಆತನಿಗೆ ನಮ್ಮ ಸಂಪೂರ್ಣ ಭಕ್ತಿಯನ್ನು ತೋರಿಸುತ್ತಾ ಇರುವಂತೆ ನಾವು ಪ್ರಚೋದಿಸಲ್ಪಡುವೆವು.