ನೀವು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೀರೋ?
1 ಇಂದು ಕೋಟ್ಯಂತರ ಜನರು ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದು ಮತ್ತು ಸಂತೋಷದಿಂದ ಹೇಗೆ ಬಾಳಿಬದುಕುವುದು ಎಂಬದನ್ನು ತಿಳಿದುಕೊಳ್ಳಲು ತುಂಬ ಆಸಕ್ತರಾಗಿದ್ದಾರೆ. ತಮ್ಮ ಜೀವಿತಗಳನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತಾಗಿ ತಿಳಿದುಕೊಳ್ಳಲು ಇವರು ಸ್ವ-ಸಹಾಯಕ ಪುಸ್ತಕಗಳ ಬೆನ್ನಟ್ಟುತ್ತಿರುತ್ತಾರೆ. ಇಲ್ಲವೇ ಸಲಹೆಗಾಗಿ ಸಂಘಸಂಸ್ಥೆಗಳ ಕದಗಳನ್ನು ತಟ್ಟುತ್ತಿರುತ್ತಾರೆ. ಇವುಗಳಿಂದ ಅಲ್ಪಸ್ವಲ್ಪ ಪ್ರಯೋಜನವು ಸಿಕ್ಕಿದೆ ಎಂದು ಕೆಲವರು ಹೇಳಬಹುದು. ಆದರೆ, ಇಂದಿರುವ ಜೀವನದ ಗುಣಮಟ್ಟವನ್ನು ನೋಡುವಾಗ, ಕಲಿಸುವುದಕ್ಕಾಗಿ ಹಮ್ಮಿಕೊಂಡಿರುವ ಮಾನವನ ಕಾರ್ಯಕ್ರಮಗಳಿಂದಾಗಿ ಜನಸಾಮಾನ್ಯರು ನಿಜವಾಗಿಯೂ ಸುಖಶಾಂತಿ ಮತ್ತು ಸಂತುಷ್ಟಿಯಿಂದ ಜೀವಿಸುತ್ತಿದ್ದಾರೋ? ಖಂಡಿತವಾಗಿಯೂ ಇಲ್ಲ!—1 ಕೊರಿಂ. 3:18-20.
2 ಮತ್ತೊಂದು ಕಡೆಯಲ್ಲಿ ನಮ್ಮ ಸೃಷ್ಟಿಕರ್ತನು, ಕೇಳಿಸಿಕೊಳ್ಳಲು ಇಷ್ಟಪಡುವವರಿಗೆಲ್ಲ ಹೆಚ್ಚು ಸಹಾಯಕಾರಿಯಾಗಿರುವ ಬೋಧನೆಯನ್ನು ಉಚಿತವಾಗಿ ಕೊಡುತ್ತಿದ್ದಾನೆ. ತಾನು ಕಲಿಸುತ್ತಿರುವ ವಿಷಯಗಳಿಂದ ಪ್ರತಿಯೊಬ್ಬರೂ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂಬುದು ಯೆಹೋವನ ಇಚ್ಛೆಯಾಗಿದೆ. ಅದಕ್ಕಾಗಿ, ನೀತಿಯ ಮಾರ್ಗದಲ್ಲಿ ನಡೆಯುವಂತೆ ಮಾನವರಿಗೆ ದಾರಿ ತೋರಿಸಲು ಆತನು ಉದಾರ ಹೃದಯದಿಂದ ತನ್ನ ಪ್ರೇರಿತ ವಾಕ್ಯವನ್ನು ಕೊಟ್ಟಿದ್ದಾನೆ. ಹಾಗೂ ಭೂಮಿಯಲ್ಲೆಲ್ಲ ತನ್ನ ರಾಜ್ಯದ ಸುವಾರ್ತೆಯು ಸಾರಲ್ಪಡುವಂತೆ ಏರ್ಪಾಡನ್ನು ಮಾಡಿದ್ದಾನೆ. (ಕೀರ್ತ. 19:7, 8; ಮತ್ತಾ. 24:14; 2 ತಿಮೊ. 3:16) ಯೆಹೋವನ ಆಜ್ಞೆಗಳಿಗೆ ಗಮನವನ್ನು ಕೊಡುವುದರ ಮೂಲಕ ಜೀವನದಲ್ಲಿ ನಿಜವಾಗಿಯೂ ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ.—ಯೆಶಾ. 48:17, 18.
3 ಯೆಹೋವನ ಮಾರ್ಗದರ್ಶನೆಯು, ಈ ಲೋಕದಲ್ಲಿರುವ ಎಲ್ಲ ಸ್ವ-ಸಹಾಯಕ ಪುಸ್ತಕಗಳು ಅಥವಾ ಸ್ವ-ಸುಧಾರಣಾ ಯೋಜನೆಗಳಿಗಿಂತಲೂ ಹೆಚ್ಚು ಉತ್ಕೃಷ್ಟವಾಗಿದೆ. ಆತನ ವಾಕ್ಯದಲ್ಲಿ ಕಂಡುಬರುವ ಮತ್ತು ಆತನ ಸಂಸ್ಥೆಯು ಕಲಿಸುವ ವಿಷಯಗಳನ್ನು ಪೂರ್ತಿಯಾಗಿ ಸದುಪಯೋಗಿಸಿಕೊಳ್ಳುವುದಾದರೆ, ನಾವು ನಿಜವಾದ ಸಹಾಯ ಹಾಗೂ ಚಿರಕಾಲದ ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿದೆ.—1 ಪೇತ್ರ 3:10-12.
4 ಸಭಾ ಕೂಟಗಳಿಂದ ಪ್ರಯೋಜನವನ್ನು ಪಡೆದುಕೊಳ್ಳಿರಿ: ಇಂದು ಯೆಹೋವನು ತನ್ನ ಮಾರ್ಗಗಳ ಕುರಿತು ನಮಗೆ ಕಲಿಸುವುದರಲ್ಲಿ ನಿಜವಾಗಿಯೂ ಆಸಕ್ತನಾಗಿದ್ದಾನೆ. ಆತನ ಬೋಧನೆಗೆ ಗಮನ ಕೊಡುವುದರ ಮೂಲಕ ನಾವು ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ. ಯೆಹೋವನ ಪ್ರೀತಿಪರ ಕಾಳಜಿಗೆ ನಮ್ಮ ಐದು ಸಾಪ್ತಾಹಿಕ ಕೂಟಗಳೇ ಸಾಕ್ಷಿಯಾಗಿವೆ. ನಾವು ಸಭಾ ಕೂಟಗಳಿಗೆ ಹಾಜರಾಗುವಾಗ ದೇವರ ಕುರಿತಾದ ನಮ್ಮ ಜ್ಞಾನವು ಇನ್ನೂ ಹೆಚ್ಚಾಗುತ್ತದೆ. ನಾವು ಯೆಹೋವನಿಗೆ ಹೆಚ್ಚು ಹತ್ತಿರವಾಗುವ ಮೂಲಕ, ಕೆಟ್ಟ ವಿಷಯಗಳಿಂದ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ ಎಂಬುದನ್ನು ನಾವು ಕಲಿತುಕೊಳ್ಳುತ್ತೇವೆ. ಈ ರೀತಿಯಲ್ಲಿ ನಮ್ಮ ಆತ್ಮೋನ್ನತಿಯು ಆಗುತ್ತದೆ.
5 ಕೂಟಗಳಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಸಭಾ ಕೂಟಗಳಲ್ಲಿ ನಾವು ಹೃದಯವನ್ನು “ವಿಶಾಲ”ಗೊಳಿಸಲು ಸಾಧ್ಯವಾಗುತ್ತದೆ. (2 ಕೊರಿಂ. 6:13) ಇದು, ಸಭೆಯಲ್ಲಿರುವ ಇತರರನ್ನು ಚೆನ್ನಾಗಿ ತಿಳಿದುಕೊಳ್ಳುವುದಕ್ಕೆ ಅವಕಾಶವನ್ನು ನೀಡುತ್ತದೆ. ಅಪೊಸ್ತಲ ಪೌಲನು ರೋಮಾಪುರದವರಿಗೆ ತನ್ನ ಪತ್ರದಲ್ಲಿ ಬರೆದಂತೆ, ನಾವು ಒಬ್ಬರು ಇನ್ನೊಬ್ಬರಿಗೆ ಪ್ರೋತ್ಸಾಹವನ್ನು ನೀಡುವುದರಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ. (ರೋಮಾ. 1:11, 12) ಕ್ರೈಸ್ತರೊಂದಿಗೆ ಸಹವಾಸ ಮಾಡದೇ ಇರುವುದನ್ನು ರೂಢಿಯಾಗಿ ಮಾಡಿಕೊಳ್ಳುತ್ತಿದ್ದಿರಬಹುದಾದ ಸಹೋದರ ಸಹೋದರಿಯರಿಗೆ ಅಪೊಸ್ತಲನು ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಬಲವಾದ ಬುದ್ಧಿವಾದವನ್ನು ನೀಡಿದನು.—ಇಬ್ರಿ. 10:24, 25.
6 ಇತರರ ಯೋಗಕ್ಷೇಮದ ಕುರಿತಾಗಿ ಚಿಂತಿಸುವುದರಿಂದ ನಾವು ಜೀವಿತದಲ್ಲಿ ಸುಖಸಂತೃಪ್ತಿಯನ್ನು ಕಂಡುಕೊಳ್ಳಸಾಧ್ಯವಿದೆ. ಇತರರ ಜೀವನದಲ್ಲಿ ಸಂತೋಷದ ಹೊನಲನ್ನು ಹರಿಸಲು ನಾವು ಅವಕಾಶಗಳಿಗಾಗಿ ಹುಡುಕಬೇಕು ಎಂಬ ಉತ್ತೇಜನವು ನಮಗೆ ನೀಡಲ್ಪಟ್ಟಿದೆ. ಆದುದರಿಂದ ಕ್ರೈಸ್ತ ಕೂಟಗಳು ಸ್ವತಃ ನಮಗೆ ಹಾಗೂ ನಾವು ಯಾರೊಂದಿಗೆ ಒಳ್ಳೆಯ ಸಾಹಚರ್ಯವನ್ನು ಬೆಳೆಸಿಕೊಳ್ಳುತ್ತೇವೋ ಅವರಿಗೂ ಖಂಡಿತವಾಗಿ ಪ್ರಯೋಜನವನ್ನು ತರುತ್ತವೆ. ಅಂದರೆ, ನಾವು ಕೂಟಗಳಲ್ಲಿ ಹೃತ್ಪೂರ್ವಕವಾಗಿ ಭಾಗವಹಿಸಬೇಕು ಅಷ್ಟೇ.
7 ತಿಮೊಥೆಯನಿಗೆ ಸಲಹೆಯನ್ನು ನೀಡಿದಾಗ ಇಂತಹದ್ದೇ ವಿಷಯವನ್ನು ಅಪೊಸ್ತಲ ಪೌಲನು ಹೇಳಿದನು. ಅವನು ಬರೆದುದು: “ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ [“ತರಬೇತಿಗೊಳಿಸಿಕೋ,” NW].” (1 ತಿಮೊ. 4:7) ನಾವು ನಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಸಾಧ್ಯವಿದೆ: ‘ನಾನು ಸ್ವತಃ ನನಗೆ ತರಬೇತಿ ನೀಡಿಕೊಳ್ಳುತ್ತಿದ್ದೇನೋ? ಸಭಾ ಕೂಟಗಳಲ್ಲಿ ಕೇಳಿಸಿಕೊಳ್ಳುತ್ತಿರುವ ವಿಷಯಗಳಿಂದ ನಾನು ಪ್ರಯೋಜನವನ್ನು ಪಡೆದುಕೊಳ್ಳಲು ಕಲಿತುಕೊಳ್ಳುತ್ತಿದ್ದೇನೋ?’ ಕೂಟಗಳಲ್ಲಿ ನಾವು ಕೇಳಿಸಿಕೊಳ್ಳುವ ವಿಷಯಗಳಿಗೆ ಗಮನವನ್ನು ಕೊಡುವಲ್ಲಿ ಹಾಗೂ ಕಲಿತ ವಿಷಯಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುವಲ್ಲಿ ಈ ಪ್ರಶ್ನೆಗಳಿಗೆ ನಾವು ಹೌದು ಎಂಬ ಉತ್ತರವನ್ನು ಕೊಡಬಲ್ಲೆವು. ಸಹೋದರರು ನಮಗೆ ಕಲಿಸುತ್ತಿದ್ದಾರೆ ಎಂದೆಣಿಸುವ ಬದಲಿಗೆ, ನಿಜವಾಗಿಯೂ ಯೆಹೋವನು ತನ್ನ ಜನರ ಮಹಾನ್ ಬೋಧಕನಾಗಿದ್ದಾನೆಂಬುದನ್ನು ನಮ್ಮ ನಂಬಿಕೆಯ ಕಣ್ಣುಗಳಿಂದ ನಾವು ನೋಡಲು ಶಕ್ತರಾಗಿರಬೇಕು.—ಯೆಶಾ. 30:20.
8 ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟ: ಕ್ರೈಸ್ತ ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲು ಈ ಎರಡು ಕೂಟಗಳು ನಮಗೆ ಸಹಾಯಮಾಡುತ್ತವೆ. ದೇವಪ್ರಭುತ್ವ ಶುಶ್ರೂಷಾ ಶಾಲೆಯು ಆ ಉದ್ದೇಶಕ್ಕಾಗಿಯೇ ಇದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕ್ರಮವಾಗಿ ಬೋಧನೆ ಹಾಗೂ ಸಲಹೆಯನ್ನು ಪಡೆದುಕೊಳ್ಳುತ್ತಾರೆ. ಇದು ಸಾರ್ವಜನಿಕ ಭಾಷಣಗಾರರೋಪಾದಿ ಹಾಗೂ ದೇವರ ವಾಕ್ಯದ ಬೋಧಕರೋಪಾದಿ ನಿಮ್ಮ ಪ್ರಗತಿಯನ್ನು ತೋರಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. ಆದರೆ ಈ ಶಾಲೆಯಿಂದ ನೀವು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು, ಶಾಲೆಯಲ್ಲಿ ನಿಮ್ಮ ಹೆಸರನ್ನು ನಮೂದಿಸಬೇಕು. ಮತ್ತು ಅದಕ್ಕೆ ಹಾಜರಾಗಿ, ಅದರಲ್ಲಿ ಕ್ರಮವಾಗಿ ಭಾಗವಹಿಸಬೇಕು ಹಾಗೂ ತನುಮನದಿಂದ ನೇಮಕಗಳನ್ನು ನಿರ್ವಹಿಸಬೇಕು. ಅಲ್ಲಿ ಕೊಡಲ್ಪಡುವ ಸಲಹೆಯನ್ನು ಸ್ವೀಕರಿಸಿ, ಅನ್ವಯಿಸಿಕೊಳ್ಳುವಾಗ ಅದು ನಿಮಗೆ ಪ್ರಗತಿಯನ್ನು ಮಾಡುವಂತೆ ಸಹಾಯಮಾಡುವುದು.
9 ಕ್ರೈಸ್ತ ಶುಶ್ರೂಷೆಯು ಎಷ್ಟು ಮಹತ್ತ್ವವುಳ್ಳದ್ದಾಗಿದೆ ಎಂಬುದನ್ನು ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಹೇಗೆ ಪಾಲ್ಗೊಳ್ಳಸಾಧ್ಯವಿದೆ ಎಂಬುದನ್ನು ಸೇವಾ ಕೂಟವು ನಮಗೆ ಕಲಿಸುತ್ತದೆ. ಈ ಎರಡು ಕೂಟಗಳಲ್ಲಿ ಕಲಿಸಲ್ಪಡುವ ವಿಷಯಗಳಿಂದ ನೀವು ಮತ್ತು ನಿಮ್ಮ ಕುಟುಂಬದವರು ಸಂಪೂರ್ಣವಾಗಿ ಲಾಭವನ್ನು ಪಡೆದುಕೊಳ್ಳುತ್ತಿದ್ದೀರೋ? “ಕುಟುಂಬವಾಗಿ ನಾವು ದೈನಿಕ ವಚನವನ್ನು ಓದಬೇಕು ಎಂಬುದನ್ನು ಒಂದು ಸೇವಾ ಕೂಟದಲ್ಲಿ ಹೇಳಲಾಯಿತು. ಅದಕ್ಕೆ ಮುಂಚೆ ನಾವು ಇದನ್ನು ಮಾಡುತ್ತಿರಲಿಲ್ಲ, ಆದರೆ ಅದನ್ನು ಕೇಳಿಸಿಕೊಂಡ ನಂತರ ನಾವು ದೈನಿಕ ವಚನವನ್ನು ಓದುತ್ತಿದ್ದೇವೆ” ಎಂದು ಒಬ್ಬ ಕ್ರೈಸ್ತ ದಂಪತಿ ಹೇಳುತ್ತಾರೆ. ಇದರಿಂದ ಅವರು ಯಾವ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ? ಅವರು ಹೇಳುವುದು: “ಊಟದ ಮೇಜಿನಲ್ಲಿ ನಮ್ಮ ಮಾತುಕತೆಯು ನಿಜವಾಗಿಯೂ ಸಂತೋಷವನ್ನು ತರುವಂತಹದ್ದಾಗಿದೆ. ರಾತ್ರಿಯೂಟದ ಸಮಯದಲ್ಲಿ ನಾವೀಗ ವಾದವಿವಾದವನ್ನು ಮಾಡುವುದಿಲ್ಲ.” ಕೂಟಗಳಿಂದ ಪುಟ್ಟ ಮಕ್ಕಳು ಸಹ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೋ? ಖಂಡಿತವಾಗಿಯೂ. “ನಮ್ಮ ಮಕ್ಕಳು ಕೂಟಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದಾರೆ. ನಮ್ಮ ಆರು ವರ್ಷದ ಮಗನು ಒಂದು ದಿವಸ ಸುಳ್ಳು ಹೇಳುತ್ತಿದ್ದದ್ದನ್ನು ನಾವು ಕಂಡುಕೊಂಡೆವು. ಆದರೆ ಅದೇ ವಾರದ ಕೂಟದಲ್ಲಿ, ಸುಳ್ಳು ಹೇಳುವುದರ ಬಗ್ಗೆ ಉಪದೇಶ ಭಾಷಣವನ್ನು ನೀಡಲಾಯಿತು. ಆಗ ನಮ್ಮ ಮಗನು ತಾನು ತಪ್ಪುಮಾಡಿದ್ದೇನೆ ಎಂಬುದನ್ನು ತನ್ನ ಮುಖಚರ್ಯೆಯಲ್ಲಿ ತೋರಿಸುತ್ತಾ, ತಲೆಯೆತ್ತಿ ತನ್ನ ತಂದೆಯನ್ನು ನೋಡಿ, ತನ್ನ ಸೀಟಿನಲ್ಲಿ ಮುದುರಿ ಕುಳಿತುಕೊಂಡನು. ಅವನು ತಕ್ಕ ಪಾಠವನ್ನು ಕಲಿತುಕೊಂಡನು. ಇದಾದ ನಂತರ ಅವನೆಂದೂ ಸುಳ್ಳು ಹೇಳಲಿಲ್ಲ” ಎಂದು ಅವನ ತಾಯಿಯು ಹೇಳುತ್ತಾರೆ.
10 ಶುಶ್ರೂಷೆಯಲ್ಲಿ ನಾವು ಹೇಗೆ ಪ್ರಗತಿಯನ್ನು ಮಾಡಬಹುದು ಎಂಬುದರ ಬಗ್ಗೆ ಸಲಹೆಗಳನ್ನು ಸೇವಾ ಕೂಟದಲ್ಲಿ ನೀಡಲಾಗುತ್ತದೆ ಎಂಬುದು ಒಬ್ಬ ಪಯನೀಯರ್ ಸಹೋದರಿಗೆ ಸಂತೋಷದ ವಿಷಯವಾಗಿದೆ. ಅದು ಏಕೆ? ಅವಳು ವಿವರಿಸುವುದು: “ನಾನು ಸೇವೆಯಲ್ಲಿ ಒಂದೇ ಪ್ರಸಂಗವನ್ನು ಪುನಃ ಪುನಃ ಹೇಳುತ್ತೇನೆ. ನಮ್ಮ ರಾಜ್ಯ ಸೇವೆಯಲ್ಲಿ ಕೊಡಲ್ಪಟ್ಟಿರುವ ಸಲಹೆಗಳು ಪ್ರಾಯೋಗಿಕವಲ್ಲ ಎಂದು ನಾನು ಕೆಲವೊಮ್ಮೆ ನೆನಸುತ್ತೇನೆ. ಆದರೆ ಸೇವಾ ಕೂಟದಲ್ಲಿ, ನಾವು ಅವುಗಳನ್ನು ಉಪಯೋಗಿಸಿ ನೋಡಬೇಕು ಎಂಬುದನ್ನು ಕೇಳಿಸಿಕೊಳ್ಳುವಾಗ, ಅಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ನಾನು ಅನ್ವಯಿಸಬೇಕು ಎಂಬ ಹುರುಪು ನನ್ನಲ್ಲಿ ಪುಟಿದೇಳುತ್ತದೆ. ಇದು ನಿಜವಾಗಿಯೂ ಶುಶ್ರೂಷೆಯನ್ನು ಉತ್ತೇಜನಕಾರಿಯಾಗಿ ಮಾಡುತ್ತದೆ!” ಪ್ರಥಮ ಭೇಟಿಯಲ್ಲೇ ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸಲು ಕೊಡಲ್ಪಟ್ಟ ಸಲಹೆಯನ್ನು ಹಲವಾರು ವಾರಗಳ ವರೆಗೆ ಪಾಲಿಸಿದ ಅನಂತರ, ಸಹಾಯಕ್ಕಾಗಿ ಮೊರೆಯಿಡುತ್ತಿದ್ದ ಒಬ್ಬ ಹುಡುಗಿಯೊಡನೆ ಪ್ರಥಮ ಭೇಟಿಯಲ್ಲೇ ಈ ಸಹೋದರಿಯು ಅಭ್ಯಾಸವೊಂದನ್ನು ಪ್ರಾರಂಭಿಸಿದಳು.
11 ನಿಮ್ಮ ವೈಯಕ್ತಿಕ ಆಯ್ಕೆಗಳ ಕುರಿತ ಬೈಬಲಿನ ಸಲಹೆಯನ್ನು ನೀವು ಭಾಷಣವೊಂದರಲ್ಲಿ ಕೇಳಿಸಿಕೊಳ್ಳುವಾಗ, ಯೆಹೋವನೇ ಸ್ವತಃ ನಿಮ್ಮೊಂದಿಗೆ ಮಾತಾಡುತ್ತಿದ್ದಾನೆ ಎಂಬುದನ್ನು ನೀವು ಗ್ರಹಿಸುತ್ತೀರೋ? ಒಬ್ಬ ಸಹೋದರನಿಗೆ ಹಾಗೆ ಅನಿಸಿತು. ಅವನು ಹೇಳಿದ್ದು: “ಇತ್ತೀಚೆಗೆ ಒಂದು ಕೂಟದಲ್ಲಿ, ಕ್ರೈಸ್ತರಿಗೆ ಯಾವ ರೀತಿಯ ಮನೋರಂಜನೆಯು ಯೋಗ್ಯವಾಗಿದ್ದವು, ಮತ್ತು ಯಾವುದು ಅಯೋಗ್ಯವಾಗಿದ್ದವು ಎಂಬ ವಿಷಯವನ್ನು ಒಬ್ಬ ಸಹೋದರನು ತನ್ನ ಭಾಷಣದಲ್ಲಿ ತಿಳಿಸಿದನು. ಟೆಲಿವಿಷನಿನಲ್ಲಿ ಬಾಕ್ಸಿಂಗ್ ಅನ್ನು ನೋಡಲು ನಾನು ತುಂಬ ಇಷ್ಟಪಡುತ್ತಿದ್ದೆ. ಆದರೆ ಆ ಕೂಟದ ಅನಂತರ, ಆ ಆಟವು ಕ್ರೈಸ್ತರಿಗೆ ಯೋಗ್ಯವಲ್ಲದ ಆಟಗಳಲ್ಲಿ ಒಂದಾಗಿದೆ ಎಂಬುದು ನನಗೆ ಗೊತ್ತಾಯಿತು. ಅಂದಿನಿಂದ ನಾನು ಅದನ್ನು ನೋಡುವುದನ್ನು ಬಿಟ್ಟುಬಿಟ್ಟೆ.” ಹೌದು, ಈ ಸಹೋದರನು ಹಿಂಸಾತ್ಮಕವಾದ ವಿಷಯಕ್ಕಾಗಿ ಒಂದು ರೀತಿಯ ಮೋಹವನ್ನು ಬೆಳೆಸಿಕೊಂಡಿದ್ದನಾದರೂ, ಯೆಹೋವನ ಮಾರ್ಗದರ್ಶನೆಗೆ ನಮ್ರನಾಗಿ ಪ್ರತಿಕ್ರಿಯಿಸಿದನು.—ಕೀರ್ತ. 11:5.
12 ಬಹಿರಂಗ ಭಾಷಣ, ಕಾವಲಿನಬುರುಜು ಅಭ್ಯಾಸ ಮತ್ತು ಸಭಾ ಪುಸ್ತಕ ಅಭ್ಯಾಸ: ಪ್ರತಿ ವಾರವೂ ನಾವು ಕೇಳಿಸಿಕೊಳ್ಳುವ ಬಹಿರಂಗ ಭಾಷಣದಲ್ಲಿ ಅನೇಕ ಬೈಬಲ್ ವಿಷಯಗಳು ಒಳಗೂಡಿರುತ್ತವೆ. ಈ ಭಾಷಣಗಳಿಂದ ನೀವೇನು ಕಲಿತುಕೊಳ್ಳುತ್ತಿದ್ದೀರಿ? ತನಗೆ ಸಿಕ್ಕಿದ್ದ ಪ್ರಯೋಜನಗಳ ಕುರಿತಾಗಿ ಒಬ್ಬ ಕ್ರೈಸ್ತ ಪತಿಯು ಹೀಗೆ ಹೇಳುತ್ತಾನೆ: “ಒಂದು ಬಹಿರಂಗ ಭಾಷಣದಲ್ಲಿ ಆತ್ಮದ ಎಲ್ಲ ಫಲಗಳ ಕುರಿತು ಚರ್ಚಿಸಲಾಯಿತು. ಈ ಫಲಗಳನ್ನು ಬೆಳೆಸಿಕೊಳ್ಳಲು, ತಾನು ಒಂದು ಗುಣವನ್ನು ಆಯ್ಕೆಮಾಡಿಕೊಂಡು, ಒಂದು ವಾರದ ತನಕ ಆ ಗುಣವನ್ನು ಪ್ರದರ್ಶಿಸಲು ಪ್ರಯತ್ನಿಸಿದೆ ಎಂದು ಆ ಭಾಷಣಕರ್ತನು ಹೇಳಿದನು. ಆ ವಾರದ ಕೊನೆಯಲ್ಲಿ, ತಾನು ಈ ಗುಣವನ್ನು ದಿನನಿತ್ಯದ ಜೀವನದಲ್ಲಿ ಯಾವ ರೀತಿಯಲ್ಲಿ ತೋರಿಸಿದೆ ಎಂಬುದನ್ನು ಅವನು ಚಿಂತನೆಮಾಡಿ ನೋಡುತ್ತಿದ್ದನು. ಮುಂದಿನ ವಾರ ಮತ್ತೊಂದು ಗುಣವನ್ನು ಆಯ್ಕೆಮಾಡಿ, ಅದನ್ನು ತೋರಿಸಲು ಅವನು ಪ್ರಯತ್ನಿಸುತ್ತಿದ್ದನು. ಈ ವಿಷಯವು ನಿಜವಾಗಿಯೂ ನನಗೆ ತುಂಬ ಇಷ್ಟವಾಯಿತು. ಮತ್ತು ಸ್ವತಃ ನಾನು ಹಾಗೇ ಮಾಡಲು ಪ್ರಾರಂಭಿಸಿದೆ.” ಕಲಿತಂತಹ ವಿಷಯಗಳ ಎಂತಹ ಉತ್ತಮ ಅನ್ವಯ!
13 ಜೀವನದ ಅನೇಕ ಸನ್ನಿವೇಶಗಳಲ್ಲಿ ಬೈಬಲಿನ ಸಿದ್ಧಾಂತಗಳನ್ನು ಅನ್ವಯಿಸಿಕೊಳ್ಳಲು, ಕಾವಲಿನಬುರುಜು ಪತ್ರಿಕೆಯ ಅಭ್ಯಾಸವು ನಮಗೆ ಕಲಿಸುತ್ತದೆ. ಜೀವನದಲ್ಲಿ ಕಷ್ಟಕಾರ್ಪಣ್ಯಗಳಿರುವುದಾದರೂ, ಇದು ನಮ್ಮ ಹೃದಮನಗಳಲ್ಲಿ ಭೋರ್ಗರೆತವಿಲ್ಲದ ಪ್ರಶಾಂತ ಅಲೆಗಳು ಬೀಸುವಂತೆ ಸಹಾಯಮಾಡುತ್ತದೆ. ಪ್ರಗತಿಯನ್ನು ಹೊಂದುತ್ತಿರುವ ಸತ್ಯದ ಕುರಿತಾಗಿ ಇತ್ತೀಚಿನ ಮಾಹಿತಿಯನ್ನು ಕಾವಲಿನಬುರುಜು ಅಭ್ಯಾಸವು ನೀಡುತ್ತದೆ. ಉದಾಹರಣೆಗೆ, 1999, ಮೇ 1ರ ಕಾವಲಿನಬುರುಜು ಪತ್ರಿಕೆಯ ಲೇಖನಗಳಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಲಿಲ್ಲವೋ? ಆ ಲೇಖನಗಳ ಶೀರ್ಷಿಕೆಗಳು ಹೀಗಿದ್ದವು: “ಈ ಸಂಗತಿಗಳು ಸಂಭವಿಸಲೇಬೇಕು,” “ಓದುವವನು ವಿವೇಚನೆಯನ್ನು ಉಪಯೋಗಿಸಲಿ,” ಮತ್ತು “ಜಾಗರೂಕರೂ ಕಾರ್ಯತತ್ಪರರೂ ಆಗಿರಿ!” ಈ ಅಭ್ಯಾಸಗಳು ವೈಯಕ್ತಿಕವಾಗಿ ನಿಮ್ಮನ್ನು ಹೇಗೆ ಪ್ರಭಾವಿಸಿದವು? ಭವಿಷ್ಯತ್ತಿನ ಬಗ್ಗೆ ಯೇಸು ನೀಡಿರುವ ಎಚ್ಚರಿಕೆಯನ್ನು ನೀವು ಹೃದಯಕ್ಕೆ ತೆಗೆದುಕೊಂಡಿದ್ದೀರಿ ಎಂಬುದನ್ನು ನೀವು ನಿಮ್ಮ ಕ್ರಿಯೆಗಳ ಮೂಲಕ ತೋರಿಸುತ್ತೀರೋ? ‘ಹಾಳುಮಾಡುವ ಅಸಹ್ಯವಸ್ತುವು ಪವಿತ್ರ ಸ್ಥಾನದಲ್ಲಿ ನಿಂತಿರುವದನ್ನು’ ನಾವು ನೋಡುವಾಗ ಮುಂದೆ ಎದುರಿಸಬಹುದಾದ ಪರೀಕ್ಷೆಗಳಿಗಾಗಿ ನೀವು ನಿಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೀರೋ? (ಮತ್ತಾ. 24:15-22) ನಿಮ್ಮ ಗುರಿಗಳು ಮತ್ತು ಜೀವನದ ಪಥವು ಅದನ್ನು ತೋರಿಸುತ್ತಿದೆಯೇ? ಅಷ್ಟುಮಾತ್ರವಲ್ಲ, ಭೌತಿಕ ವಸ್ತುಗಳನ್ನು ಕೂಡಿಸಿಟ್ಟುಕೊಳ್ಳದೆ, ಯೆಹೋವನ ಹೆಸರನ್ನು ಪವಿತ್ರೀಕರಿಸುವುದೇ ನಿಮಗೆ ಅತಿಪ್ರಾಮುಖ್ಯ ಸಂಗತಿಯಾಗಿದೆ ಎಂಬುದನ್ನು ನಿಮ್ಮ ಜೀವನವು ತೋರಿಸುತ್ತದೋ? ಕಾವಲಿನಬುರುಜು ಪತ್ರಿಕೆಯ ಅಭ್ಯಾಸದಲ್ಲಿ, ಈಗಲೇ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ಅನೇಕ ವಿಷಯಗಳನ್ನು ಕಲಿತುಕೊಳ್ಳುತ್ತಿದ್ದೇವಲ್ಲವೋ?
14 ಪ್ರತಿ ವಾರವೂ ಸಭಾ ಪುಸ್ತಕ ಅಭ್ಯಾಸದಲ್ಲಿ ನಾವು ಏನೆಲ್ಲಾ ವಿಷಯಗಳನ್ನು ಕಲಿತುಕೊಳ್ಳುತ್ತೇವೆ ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ. ಈಗ ಸದ್ಯಕ್ಕೆ ನಾವು ದಾನಿಯೇಲನ ಪುಸ್ತಕವನ್ನು ಅಭ್ಯಾಸಮಾಡುತ್ತಿದ್ದೇವೆ. ಈ ಪುಸ್ತಕವನ್ನು ನಾವು ಸುಮಾರು ನಾಲ್ಕು ತಿಂಗಳುಗಳಿಂದ ಅಭ್ಯಾಸಮಾಡುತ್ತಿದ್ದೇವೆ. ಇದರಿಂದ ಪ್ರತಿ ವಾರವೂ ನಮ್ಮ ನಂಬಿಕೆಯು ಬೆಳೆಯುತ್ತಿರುವುದನ್ನು ನಾವು ನೋಡುತ್ತಿಲ್ಲವೇ? ಯೆಹೋವನ ಅಚ್ಚುಮೆಚ್ಚಿನ ಪ್ರವಾದಿಯಾದ ದಾನಿಯೇಲನಂತೆ, ನಾವು ಸಹ ತಾಳಿಕೊಳ್ಳುವಂತೆ ನಮ್ಮ ನಂಬಿಕೆಯು ಬಲಗೊಳ್ಳುತ್ತದೆ.
15 ಸಂತೋಷವಾಗಿ ಜೀವಿಸಲು ಯೆಹೋವನು ನಮಗೆ ಕಲಿಸುತ್ತಾನೆ: ದೇವರ ಆಜ್ಞೆಗಳಿಗೆ ನಾವು ಗಮನವನ್ನು ಕೊಡುವಾಗ ಅನೇಕ ಮನೋವ್ಯಥೆಗಳಿಂದ ತಪ್ಪಿಸಿಕೊಳ್ಳುತ್ತೇವೆ. ಅಷ್ಟು ಮಾತ್ರವಲ್ಲದೆ, ನಮ್ಮ ಜೀವನವು ಎಷ್ಟು ಸಂತೋಷಭರಿತವಾದುದು ಎಂಬುದನ್ನು ಅನುಭವದಿಂದ ತಿಳಿದುಕೊಳ್ಳುತ್ತೇವೆ. ನಾವು ಯೆಹೋವನ ಮಾರ್ಗದರ್ಶನೆಯನ್ನು ಪಾಲಿಸುವಾಗ, ನಾವು ಕೇವಲ ಪ್ರೇಕ್ಷಕರಾಗಿರದೆ ಆತನ ಕೆಲಸದಲ್ಲಿ ಭಾಗಿಗಳಾಗಿರುತ್ತೇವೆ. ಹೌದು, ದೇವರ ಕೆಲಸವನ್ನು ಮಾಡುತ್ತಿರುವವರೆಲ್ಲರು ಸಂತೋಷಭರಿತ ಜನರು.—1 ಕೊರಿಂ. 3:9; ಯಾಕೋ. 1:25.
16 ಸಭಾ ಕೂಟಗಳಲ್ಲಿ ಕೇಳಿಸಿಕೊಳ್ಳುವ ವಿಷಯಗಳನ್ನು ನಿಮ್ಮ ಜೀವಿತದಲ್ಲಿ ನೀವು ಹೇಗೆ ಅನ್ವಯಿಸಿಕೊಳ್ಳಬಹುದು ಎಂಬುದರ ಬಗ್ಗೆ ಯೋಚನೆಮಾಡಿ ನೋಡಿರಿ. (ಯೋಹಾ. 13:17) ಉಲ್ಲಾಸದಿಂದಲೂ ತನುಮನದಿಂದಲೂ ಯೆಹೋವನ ಸೇವೆಮಾಡಿರಿ. ಆಗ ನಿಮ್ಮ ಜೀವನದಲ್ಲಿ ಸಂತೋಷದ ಹೊನಲೇ ಹರಿಯುವುದು. ಅಷ್ಟುಮಾತ್ರವಲ್ಲದೆ, ನಿಮ್ಮ ಜೀವಿತವು ಸಂಪದ್ಭರಿತವಾಗಿರುವುದು ಹಾಗೂ ಹೆಚ್ಚು ಅರ್ಥವನ್ನು ಹೊಂದಿರುವುದು. ಹೌದು, ಖಂಡಿತವಾಗಿಯೂ ನೀವು ಪ್ರಯೋಜನವನ್ನು ಹೊಂದುವಿರಿ.