ನಿಮ್ಮ ರಾಜ್ಯ ಸಭಾಗೃಹವನ್ನು ನೀವು ಗೌರವಿಸುತ್ತೀರೋ?
1 “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” (ಕೀರ್ತ. 133:1) ನಮ್ಮ ರಾಜ್ಯ ಸಭಾಗೃಹದಲ್ಲಿ ನಡೆಯುವ ಕೂಟಗಳು, ನಮ್ಮ ಸಹೋದರರೊಂದಿಗೆ ಐಕ್ಯರಾಗಿರಲು ಅವಕಾಶವನ್ನು ನೀಡುತ್ತವೆ. ಇದರಿಂದ ನಾವು ಪರಸ್ಪರ ಹಿತಚಿಂತಕರಾಗಿದ್ದು, ಪ್ರೀತಿಸಲು ಹಾಗೂ ಸತ್ಕಾರ್ಯಗಳನ್ನು ಮಾಡಲು ಒಬ್ಬರನ್ನೊಬ್ಬರು ಪ್ರೇರೇಪಿಸಸಾಧ್ಯವಿದೆ.—ಇಬ್ರಿ. 10:24, 25.
2 ರಾಜ್ಯ ಸಭಾಗೃಹವು ನಮ್ಮ ಜೀವಿತದಲ್ಲಿ ಇಷ್ಟು ಪ್ರಾಮುಖ್ಯವಾದ ಸೇವೆಯನ್ನು ಸಲ್ಲಿಸುವಾಗ, ನಿಜವಾಗಿಯೂ ನಾವು ಅದಕ್ಕೆ ಗೌರವವನ್ನು ತೋರಿಸುತ್ತೇವೋ? ರಾಜ್ಯ ಸಭಾಗೃಹವು, ಸ್ಥಳಿಕ ಕ್ಷೇತ್ರದಲ್ಲಿ ಸತ್ಯಾರಾಧನೆಯ ಕೇಂದ್ರವಾಗಿದೆ. ಆದುದರಿಂದ, ನಾವು ಅದಕ್ಕೆ ಅತ್ಯಧಿಕ ಪರಿಗಣನೆಯನ್ನು ತೋರಿಸಬೇಕು. ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿ ಹಾಗೂ ಸುಸ್ಥಿತಿಯಲ್ಲಿಡುವುದರಲ್ಲಿ ನಾವೂ ಪಾಲ್ಗೊಳ್ಳಬೇಕು ಎಂಬ ಅನಿಸಿಕೆ ನಮಗಾಗಬೇಕು. ಕೆಲವೊಮ್ಮೆ ನಮ್ಮ ಪುಸ್ತಕ ಅಭ್ಯಾಸದ ಗುಂಪಿಗೆ ಸಭಾಗೃಹವನ್ನು ಸ್ವಚ್ಛಗೊಳಿಸುವ ನೇಮಕವು ಕೊಡಲ್ಪಡುತ್ತದೆ. ಆಗ, ಇದರಲ್ಲಿ ಭಾಗವಹಿಸಲು ನಮ್ಮಿಂದ ಸಾಧ್ಯವಿರುವಲ್ಲಿ, ನಾವು ಈ ಕೆಲಸವನ್ನು ಮಾಡಬೇಕು. ಇದು, ಸ್ಪಚ್ಛವಾದ ಹಾಗೂ ಆಕರ್ಷಕವಾದ ಕೂಟದ ಸ್ಥಳಕ್ಕಾಗಿರುವ ನಮ್ಮ ಗಣ್ಯತೆಯನ್ನು ತೋರ್ಪಡಿಸುತ್ತದೆ.
3 ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸುವ ನೇಮಕ ನಮಗಿರಲಿ ಅಥವಾ ಇಲ್ಲದಿರಲಿ, ಈ ಕೆಲಸದಲ್ಲಿ ನಾವೆಲ್ಲರೂ ಆಸಕ್ತಿಯನ್ನು ತೋರಿಸಸಾಧ್ಯವಿದೆ. ಹೇಗೆ? ಸಭಾಗೃಹದೊಳಗಿನ ನೆಲವನ್ನು ಗಲೀಜುಮಾಡದೆ ಇರಲಿಕ್ಕಾಗಿ, ಸಭಾಗೃಹವನ್ನು ಪ್ರವೇಶಿಸುವುದಕ್ಕೆ ಮೊದಲು ನಮ್ಮ ಪಾದರಕ್ಷೆಗಳನ್ನು ಸರಿಯಾಗಿ ಒರಸಿಕೊಂಡು ಬರುವ ಮೂಲಕವೇ. ವಿಶೇಷವಾಗಿ ಮಳೆಗಾಲದಲ್ಲಿ ಹೀಗೆ ಮಾಡಬೇಕು. ಒಂದುವೇಳೆ ನಾವು ಶೌಚಾಲಯವನ್ನು ಉಪಯೋಗಿಸುವಲ್ಲಿ, ಅಲ್ಲಿರುವ ಸಿಂಕ್ ಅನ್ನು ಉಪಯೋಗಿಸಿದ ಬಳಿಕ ನಾವು ಅದನ್ನು ಒರೆಸಬೇಕು. ಇದರಿಂದ ನಮ್ಮ ನಂತರ ಬರುವ ವ್ಯಕ್ತಿಯು ಉಪಯೋಗಿಸಲು ಅದು ಸ್ವಚ್ಛವಾಗಿರುತ್ತದೆ. ಲಿಟ್ರೇಚರ್ ಹಾಗೂ ಮ್ಯಾಗಸಿನ್ ಕೌಂಟರ್ಗಳಲ್ಲಿ ಕೆಲಸಮಾಡುವವರು, ಖಾಲಿಯಾದ ರಟ್ಟಿನ ಪೆಟ್ಟಿಗೆಗಳನ್ನು ಬೇಗನೆ ಅಲ್ಲಿಂದ ತೆಗೆಯುವ ಮೂಲಕ ಸಭಾಗೃಹದ ಸ್ವಚ್ಛತೆಯಲ್ಲಿ ತಮಗಿರುವ ಆಸಕ್ತಿಯನ್ನು ತೋರಿಸಸಾಧ್ಯವಿದೆ. ಎಲ್ಲ ಕಸವನ್ನು ಕಸದ ಡಬ್ಬಗಳಲ್ಲಿ ಹಾಕಬೇಕು. ಈ ಉದ್ದೇಶಕ್ಕಾಗಿಯೇ ಕಸದ ಡಬ್ಬಗಳನ್ನು ಒದಗಿಸಲಾಗಿದೆ. ನೆಲದ ಮೇಲೆ ಕಾಗದದ ಚೂರು ಅಥವಾ ಕಸವು ಬಿದ್ದಿರುವುದನ್ನು ನಾವು ನೋಡುವಾಗ, ಇತರರು ಅದನ್ನು ತೆಗೆಯಲಿ ಎಂದು ಕಾಯುವುದಕ್ಕೆ ಬದಲಾಗಿ, ನಾವೇ ಅದನ್ನು ತೆಗೆಯುವುದು ಒಳ್ಳೇದು.
4 ಸಮ್ಮೇಳನಗಳು ಅಥವಾ ಅಧಿವೇಶನಗಳಿಗೆ ಹಾಜರಾಗುವಾಗಲೂ ಇದೇ ಮೂಲತತ್ತ್ವಗಳು ಅನ್ವಯವಾಗುತ್ತವೆ. ಸಮ್ಮೇಳನದ ಸ್ಥಳವು ಸಹ ಶುದ್ಧಾರಾಧನೆಯ ಕೇಂದ್ರವಾಗಿದೆ. ಆದುದರಿಂದ, ಅದು ನಮ್ಮ ಸ್ವಂತ ಸಮ್ಮೇಳನ ಹಾಲ್ ಆಗಿರಲಿ ಅಥವಾ ಬೇರೆ ಕಟ್ಟಡವೇ ಆಗಿರಲಿ, ಅದಕ್ಕೆ ಗೌರವವನ್ನು ತೋರಿಸುವುದು ಅತ್ಯಗತ್ಯ. ನಾವು ಕುಳಿತುಕೊಂಡಿದ್ದ ಸ್ಥಳದಲ್ಲಿ ಕಸವನ್ನು ಬೀಳಿಸಿದ್ದೇವೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಆ ಸ್ಥಳವನ್ನು ಬಿಟ್ಟುಹೋಗುವುದಕ್ಕೆ ಮೊದಲು ಆ ಸ್ಥಳವನ್ನು ಪರೀಕ್ಷಿಸಿ ನೋಡಬೇಕು. ಇತರರಿಗೆ ಸಹಾಯಮಾಡುವ ಮನೋಭಾವ ನಮ್ಮಲ್ಲಿರಬೇಕು; ಈ ಸ್ಥಳವನ್ನು ಸ್ವಚ್ಛಗೊಳಿಸುವವರು ನಾವು ಬೀಳಿಸಿರುವ ಕಸವನ್ನು ತೆಗೆದುಹಾಕುತ್ತಾರೆ ಎಂಬ ಭಾವನೆ ನಮಗಿರಬಾರದು.
ಒಂದೇ ಸಭಾಗೃಹವನ್ನು ಉಪಯೋಗಿಸುವವರು
5 ಜಾಗವನ್ನು ಖರೀದಿಸಿ ರಾಜ್ಯ ಸಭಾಗೃಹವನ್ನು ಕಟ್ಟುವುದು ತುಂಬ ದುಬಾರಿಯಾಗಿರುವುದರಿಂದ, ಒಂದೇ ಸಭಾಗೃಹವನ್ನು ಒಂದಕ್ಕಿಂತಲೂ ಹೆಚ್ಚು ಸಭೆಗಳು ಉಪಯೋಗಿಸುತ್ತವೆ. ನಗರ ಕ್ಷೇತ್ರಗಳಲ್ಲಿ, ಒಂದೇ ಒಂದು ರಾಜ್ಯ ಸಭಾಗೃಹವನ್ನು ಐದು ಅಥವಾ ಆರು ಸಭೆಗಳು ಉಪಯೋಗಿಸುತ್ತಿರಬಹುದು. ರಾಜ್ಯ ಸಭಾಗೃಹವು ಯೆಹೋವನಿಗೆ ಸೇರಿದ್ದಾಗಿದ್ದು, ಆತನ ಆರಾಧನೆಗೋಸ್ಕರ ಉಪಯೋಗಿಸಲ್ಪಡುತ್ತದೆ ಎಂಬುದನ್ನು ಅಂಗೀಕರಿಸುತ್ತಾ, ಅದರಲ್ಲಿ ಆಸಕ್ತಿವಹಿಸಬೇಕು. ಆದುದರಿಂದ, ರಾಜ್ಯ ಸಭಾಗೃಹಕ್ಕಾಗಿ ಗೌರವವನ್ನು ತೋರಿಸುವುದರಲ್ಲಿ, ಯೆಹೋವನ ಕಡೆಗಿನ ನಮ್ಮ ಪ್ರೀತಿಯು ಮಾತ್ರವಲ್ಲ, ಇದೇ ಸಭಾಗೃಹವನ್ನು ಉಪಯೋಗಿಸುತ್ತಿರುವ ಇತರ ಸಭೆಗಳಲ್ಲಿರುವ ನಮ್ಮ ಸಹೋದರರ ಕಡೆಗಿನ ನಮ್ಮ ಪ್ರೀತಿ ಸಹ ಒಳಗೂಡಿದೆ.
6 ಸಾಮಾನ್ಯವಾಗಿ, ವಾರಕ್ಕೆ ಒಮ್ಮೆ ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸಲಾಗುತ್ತದೆ. ಆದರೆ, ಒಂದೇ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿರುವಲ್ಲಿ, ಪ್ರತಿಯೊಂದು ಸಭೆಯ ಕೂಟದ ಬಳಿಕ ಸಭಾಗೃಹವನ್ನು ಸ್ವಚ್ಛಗೊಳಿಸುವ ಆವಶ್ಯಕತೆಯಿರಬಹುದು. ಹೀಗೆ ಮಾಡುವುದರಿಂದ ಸಭಾಗೃಹವು ಸ್ವಚ್ಛವಾಗಿದ್ದು, ಮುಂದಿನ ಸಭೆಗೆ ಅನುಕೂಲಕರವಾಗಿರುವುದು. ಒಂದು ಸಭೆಯ ಕೂಟವು ಮುಗಿದ ನಂತರ ಇನ್ನೊಂದು ಸಭೆಯ ಕೂಟವು ಆರಂಭವಾಗುವಂಥ ಭಾನುವಾರಗಳಂದು ಸಹ ಈ ವಿಧಾನವು ಅನ್ವಯವಾಗುತ್ತದೆ. ಒಂದು ಸಭೆಯ ಕೂಟದ ಬಳಿಕ, ಇನ್ನೊಂದು ಸಭೆಯ ಕೂಟವು ಆರಂಭವಾಗುವುದಕ್ಕೆ ಮೊದಲು, ಸಮಯವು ಅನುಮತಿಸಿದಂತೆ ಸ್ವಲ್ಪ ಸ್ವಚ್ಛತೆಯನ್ನು ಮಾಡುವುದು ಒಳ್ಳೇದು. ಒಂದೇ ದಿನ ಅನೇಕ ಸಭೆಗಳು ಸಭಾಗೃಹವನ್ನು ಉಪಯೋಗಿಸುವಾಗ, ಯಾರೊಬ್ಬರೂ ಅದನ್ನು ಸ್ವಚ್ಛಗೊಳಿಸಲು ಗಮನಕೊಡದಿರುವಲ್ಲಿ, ಆ ದಿನದ ಅಂತ್ಯದಷ್ಟಕ್ಕೆ ಸಭಾಗೃಹವು ತುಂಬ ಗಲೀಜಾಗಿರಸಾಧ್ಯವಿದೆ.
7 ಆತ್ಮಿಕ ವಿಷಯಗಳಲ್ಲಿ ನಾವೆಲ್ಲರೂ ‘ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿರುವಂತೆಯೇ,’ ನಮ್ಮ ರಾಜ್ಯ ಸಭಾಗೃಹಗಳಿಗೆ ಗೌರವವನ್ನು ತೋರಿಸುವುದರಲ್ಲಿಯೂ ಐಕ್ಯರಾಗಿರೋಣ.—1 ಕೊರಿಂ. 1:10.