ನಿಮ್ಮ ರೂಢಿಯೇನು?
1 ಯೆಹೋವನಿಗೆ ನಾವು ಸಲ್ಲಿಸುವ ಆರಾಧನೆಯಲ್ಲಿ ಕ್ರೈಸ್ತ ಕೂಟಗಳು ಅತಿ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತವೆ. ಆದುದರಿಂದಲೇ, “ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ” ನಾವು ಸಭೆಯಾಗಿ ಕೂಡಿಕೊಳ್ಳುವುದನ್ನು ಬಿಟ್ಟುಬಿಡದಂತೆ ಅಪೊಸ್ತಲ ಪೌಲನು ನಮ್ಮನ್ನು ಉತ್ತೇಜಿಸುವುದು ಯೋಗ್ಯವಾದದ್ದಾಗಿದೆ.—ಇಬ್ರಿ. 10:25.
2 ಕ್ರೈಸ್ತ ಕೂಟಗಳಲ್ಲಿ ನಿಮ್ಮ ಸಹೋದರರೊಂದಿಗೆ ಸಹವಾಸಮಾಡುವ ವಿಷಯದಲ್ಲಿ ನಿಮಗೂ ಸಕಾರಾತ್ಮಕ ಅನಿಸಿಕೆಗಳಿವೆಯೋ? ಈ ವಿಷಯದಲ್ಲಿ ನಿಮ್ಮ ರೂಢಿಯು ಏನನ್ನು ಪ್ರಕಟಪಡಿಸುತ್ತದೆ? ಸಭಾ ಪುಸ್ತಕ ಅಭ್ಯಾಸವನ್ನೂ ಒಳಗೂಡಿಸಿ ಎಲ್ಲ ಕೂಟಗಳಿಗೆ ನೀವು ಕ್ರಮವಾಗಿ ಹಾಜರಾಗುತ್ತೀರೋ? ಅಥವಾ ಆಗಿಂದಾಗ್ಗೆ ಕೂಟಗಳಿಗೆ ತಪ್ಪಿಸಿಕೊಳ್ಳುವುದು ನಿಮಗೆ ರೂಢಿಯಾಗಿಬಿಟ್ಟಿದೆಯೊ? ನಿಮ್ಮ ಜೀವಿತದಲ್ಲಿ ಕೂಟಗಳಿಗೆ ಯಾವ ಸ್ಥಾನವಿದೆ? ಕ್ರಮವಾಗಿ ಕೂಟಗಳಿಗೆ ಹಾಜರಾಗುವಂತೆ ನೀವು ಇತರರನ್ನು ಉತ್ತೇಜಿಸುತ್ತೀರೋ? ಜ್ಞಾಪಕಾಚರಣೆಗೆ ಹಾಜರಾದವರಿಗೆ, ಕ್ರಮವಾಗಿ ಕೂಟಕ್ಕೆ ಹಾಜರಾಗುವಂತೆ ನೀವು ಪ್ರೋತ್ಸಾಹಿಸುತ್ತಿದ್ದೀರೋ?
3 ನಮ್ಮ ದೈನಂದಿನ ಚಟುವಟಿಕೆಗಳು ಎಷ್ಟೇ ಇರಲಿ, ಪೌಲನ ಬುದ್ಧಿವಾದವನ್ನು ಕಡೆಗಣಿಸಸಾಧ್ಯವಿಲ್ಲ. ಅಸ್ವಸ್ಥತೆಯ ಕಾರಣ ಅಥವಾ ತನ್ನ ಹತೋಟಿಗೆ ಮೀರಿದ ಅನೇಕ ಸನ್ನಿವೇಶಗಳ ಕಾರಣ ಒಬ್ಬ ಕ್ರೈಸ್ತನು ಕೆಲವೊಮ್ಮೆ ಕೂಟಕ್ಕೆ ಹೋಗದಿರಬಹುದಾದರೂ, ಖಂಡಿತವಾಗಿಯೂ ಇದನ್ನು ಒಂದು ರೂಢಿಯಾಗಿ ಮಾಡಿಕೊಳ್ಳಬಾರದು. (ರೋಮಾ. 2:21) ಒಬ್ಬ ಕ್ರೈಸ್ತನು ಅನೇಕ ಜವಾಬ್ದಾರಿಗಳನ್ನು ಪೂರೈಸುವ ಹಂಗಿನಲ್ಲಿರಬಹುದು, ಇದರಲ್ಲಿ ಅನೇಕ ದೇವಪ್ರಭುತ್ವ ಚಟುವಟಿಕೆಗಳೂ ಒಳಗೂಡಿರಬಹುದು; ಆದರೂ ಅವನು ಹೆಚ್ಚು ಪ್ರಾಮುಖ್ಯವಾದ ಕಾರ್ಯಗಳು ಯಾವುವು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. (ಫಿಲಿ. 1:10) ಒಬ್ಬ ಕ್ರೈಸ್ತನಿಗಿರುವ ಹೆಚ್ಚು ಪ್ರಾಮುಖ್ಯವಾದ ವಿಷಯಗಳಲ್ಲಿ ಕ್ರೈಸ್ತ ಕೂಟಗಳೂ ಸೇರಿವೆ ಮತ್ತು ಇವು ನಮ್ಮ ಆತ್ಮಿಕ ಹಿತಕ್ಷೇಮಕ್ಕೆ ಅತ್ಯಗತ್ಯವಾಗಿವೆ.
ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ
4 ಪೌಲನು ರೋಮಾಪುರದವರಿಗೆ ಪತ್ರವನ್ನು ಬರೆದಾಗ, ಅವರನ್ನು ನೋಡಲು ತಾನು ಹಂಬಲಿಸುತ್ತಿದ್ದೇನೆಂದು ಅವನು ಹೇಳಿದನು. ಏಕೆ? ಅವರು ‘ದೃಢವಾಗುವುದಕ್ಕೋಸ್ಕರ’ ಸ್ವಲ್ಪ ಆತ್ಮಿಕ ವರವನ್ನು ಅವರಿಗೆ ಕೊಡಲಿಕ್ಕಾಗಿಯೇ. (ರೋಮಾ. 1:11) ಅವನು ಹೇಳಿದಂತೆ “ಪ್ರೋತ್ಸಾಹದ ಪರಸ್ಪರ ವಿನಿಮಯವಾಗುವಂತೆ,” ಅಥವಾ ರೆಫರೆನ್ಸ್ ಬೈಬಲ್‌ನಲ್ಲಿರುವ ಪಾದಟಿಪ್ಪಣಿಯು ಹೇಳುವಂತೆ, “ಒಟ್ಟಿಗೆ ಪ್ರೋತ್ಸಾಹವನ್ನು ಪಡೆದುಕೊಳ್ಳುವಂತೆ” ಸಹವಾಸಮಾಡುವುದು ತುಂಬ ಪ್ರಾಮುಖ್ಯವೂ ಅಗತ್ಯವಾದದ್ದೂ ಆಗಿದೆ ಎಂದು ಅವನಿಗನಿಸಿತು. (ರೋಮಾ. 1:12, NW) ಒಬ್ಬ ಅಪೊಸ್ತಲನಾಗಿದ್ದರೂ ಕ್ರೈಸ್ತ ಸಹವಾಸದ ಮೂಲಕ ಸಿಗುವ ಉತ್ತೇಜನದ ಆವಶ್ಯಕತೆಯನ್ನು ಪೌಲನು ಮನಗಂಡನು.
5 ತದ್ರೀತಿಯಲ್ಲಿ, ನಮ್ಮ ಕೂಟಗಳಲ್ಲಿ ನಾವು ಪರಸ್ಪರ ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸ್ನೇಹಪರ ನಗು ಹಾಗೂ ಹೃತ್ಪೂರ್ವಕವಾದ ಕುಶಲ ಪ್ರಶ್ನೆಯು ಇತರರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು. ಭಕ್ತಿವೃದ್ಧಿಮಾಡುವಂತಹ ಮಾತುಗಳು, ಕಾರ್ಯಕ್ರಮದಲ್ಲಿ ಚೆನ್ನಾಗಿ ತಯಾರಿಸಲ್ಪಟ್ಟ ಭಾಗಗಳು, ಇತರರು ಆತ್ಮಿಕವಾಗಿ ಪ್ರಗತಿಮಾಡುತ್ತಿರುವುದನ್ನು ನೋಡುವುದು ಮತ್ತು ಸಹೋದರರ ಮಧ್ಯೆ ಇರುವುದು ಸಹ ತುಂಬ ಪ್ರೋತ್ಸಾಹದಾಯಕವಾಗಿದೆ. ದಿನದ ಅಂತ್ಯದಲ್ಲಿ ನಾವು ತುಂಬ ಆಯಾಸಗೊಂಡಿರುವುದಾದರೂ, ಸಾಮಾನ್ಯವಾಗಿ ಕೂಟಕ್ಕೆ ಹಾಜರಾದ ಬಳಿಕ ನಮಗೆ ಹಾಯೆನಿಸುತ್ತದೆ. ನಮ್ಮ ಕಡೆಗೆ ನಮ್ಮ ಸಹೋದರರು ತೋರಿಸುವ ಕ್ರೈಸ್ತ ಸ್ನೇಹ ಹಾಗೂ ಪ್ರೀತಿಯು, ‘ನಮಗೆ ನೇಮಕವಾದ ಓಟವನ್ನು ನಾವು ಸ್ಥಿರಚಿತ್ತದಿಂದ ಓಡುವಂತೆ’ ನಮ್ಮನ್ನು ಉತ್ತೇಜಿಸುವುದು. (ಇಬ್ರಿ. 12:2) ದೇವರ ವಾಕ್ಯವನ್ನು ಗಮನವಿಟ್ಟು ಕೇಳಿಸಿಕೊಳ್ಳುವ ಮೂಲಕ, ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ ನಿರೀಕ್ಷೆಯ ಕುರಿತು ಬಹಿರಂಗವಾಗಿ ಪ್ರಕಟಪಡಿಸಲು ನಾವು ಸಿದ್ಧರಾಗಿರಸಾಧ್ಯವಿದೆ. ಕೂಟಗಳಿಗೆ ಹಾಜರಾಗುವುದರಿಂದ ಅನೇಕ ಆಶೀರ್ವಾದಗಳು ಸಿಗುತ್ತವೆ ಎಂಬುದು ಖಂಡಿತವಾಗಿಯೂ ಸತ್ಯ.
6 ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ನಮ್ಮ ನಂಬಿಕೆಗೆ ನಾವು ದೃಢವಾಗಿ ಅಂಟಿಕೊಳ್ಳಬೇಕು ಮತ್ತು ಪ್ರೀತಿಸಲು ಹಾಗೂ ಸತ್ಕಾರ್ಯಗಳನ್ನು ಮಾಡಲು ಇತರರನ್ನು ಪ್ರೋತ್ಸಾಹಿಸಬೇಕು. ನಾವೆಲ್ಲರೂ ಸಭೆಯಾಗಿ ಕೂಡಿಕೊಳ್ಳುವುದನ್ನು ರೂಢಿಯಾಗಿ ಬಿಟ್ಟುಬಿಡುವ ಹವ್ಯಾಸಕ್ಕೆ ಬಲಿಬೀಳದಿರಲು ಬಯಸುತ್ತೇವೆ. ಜ್ಞಾಪಕಾಚರಣೆಗೆ ಹಾಜರಾಗಿದ್ದವರನ್ನೂ ಒಳಗೂಡಿಸಿ, ಇತರರೂ ಕ್ರಮವಾಗಿ ಕೂಟಗಳಿಗೆ ಹಾಜರಾಗುವಂತೆ ಉತ್ತೇಜಿಸಲು ಹಾಗೂ ಅವರಿಗೆ ಸಹಾಯಮಾಡಲು ನಾವು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಬೇಕು. ಈ ರೀತಿಯಲ್ಲಿ, ಇತರರ ಕಡೆಗಿನ ನಮ್ಮ ಪ್ರೀತಿಯನ್ನು ಹಾಗೂ ಕ್ರೈಸ್ತ ಕೂಟಗಳಿಗಾಗಿರುವ ನಮ್ಮ ಗಣ್ಯತೆಯನ್ನು ನಾವು ವ್ಯಕ್ತಪಡಿಸುವೆವು.