ಪ್ರಶ್ನಾ ರೇಖಾಚೌಕ
◼ ಕ್ಷೇತ್ರ ಸೇವೆಗಾಗಿರುವ ಕೂಟಗಳಲ್ಲಿ ಯಾವ ಮಾಹಿತಿಯು ಒದಗಿಸಲ್ಪಡಬೇಕು?
ಕ್ಷೇತ್ರ ಸೇವೆಗಾಗಿರುವ ಕೂಟದ ಉದ್ದೇಶವು ಅದನ್ನು ಅನುಸರಿಸಿಬರುವ ಚಟುವಟಿಕೆಯ, ಅಂದರೆ ಶುಶ್ರೂಷೆಯ ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯಮಾಡುವುದೇ ಆಗಿದೆ. ಆದುದರಿಂದ, ಚಾಲಕನು ಒಳ್ಳೆಯ ತಯಾರಿಯನ್ನು ಮಾಡಿರಬೇಕು ಮತ್ತು ಪ್ರೋತ್ಸಾಹದಾಯಕವಾಗಿರುವ, ನಿರ್ದಿಷ್ಟವಾದ ಮತ್ತು ಪ್ರಾಯೋಗಿಕವಾದ ವಿಷಯವನ್ನು ಹಂಚಿಕೊಳ್ಳಲು ಅವನು ಸಿದ್ಧನಾಗಿರಬೇಕು. ದಿನದ ವಚನವು ನೇರವಾಗಿ ಸಾರುವ ಚಟುವಟಿಕೆಯ ಕುರಿತು ಮಾತಾಡುತ್ತಿರುವುದಾದರೆ, ಅದನ್ನು ಓದಿ ಸಂಕ್ಷಿಪ್ತವಾಗಿ ಚರ್ಚಿಸಬಹುದು. ಆದರೂ, ಕೂಟವು ಪ್ರಮುಖವಾಗಿ ಶುಶ್ರೂಷೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ, ಸಾಕ್ಷಿಕಾರ್ಯದಲ್ಲಿ ಭಾಗವಹಿಸಲು ಬಂದಿರುವವರೆಲ್ಲರಿಗೂ ಆ ದಿನ ತಮ್ಮ ಶುಶ್ರೂಷೆಯನ್ನು ಪೂರೈಸುವುದರಲ್ಲಿ ಹೆಚ್ಚು ಉತ್ತಮವಾಗಿ ತಯಾರಾಗಿರುವಂತೆ ಸಹಾಯಮಾಡಬೇಕು.—2 ತಿಮೊ. 4:5.
ಸದ್ಯದ ನೀಡುವಿಕೆ ಯಾವುದು ಮತ್ತು ಅದನ್ನು ಹೇಗೆ ನೀಡಬಹುದು ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವಂತೆ, ನಮ್ಮ ರಾಜ್ಯದ ಸೇವೆಯಿಂದ ಯುಕ್ತವಾದ ಅಂಶಗಳು ಚರ್ಚಿಸಲ್ಪಡಬಹುದು. ಪತ್ರಿಕಾ ದಿನದಂದು, “ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು” ಎಂಬ ರೇಖಾಚೌಕದಲ್ಲಿರುವ ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಬಹುದು. ಇನ್ನಿತರ ಕಾರ್ಯಾಚರಣೆಗಳಿಗಾಗಿ, ಸ್ಥಳಿಕ ಟೆರಿಟೊರಿಗೆ ಸೂಕ್ತವಾಗಿರುವ ಒಂದು ಅಥವಾ ಎರಡು ಪೀಠಿಕೆಗಳನ್ನು ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯಿಂದ ಎತ್ತಿತೋರಿಸಬಹುದು. ಶುಶ್ರೂಷೆಯ ಒಂದು ಅಂಶವನ್ನು, ಉದಾಹರಣೆಗೆ ಬೈಬಲನ್ನು ಮನೆಯಿಂದ ಮನೆಯ ಸೇವೆಯಲ್ಲಿ ಹೇಗೆ ಉಪಯೋಗಿಸುವುದು, ಸಂಭವನೀಯ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸುವುದು, ಬೈಬಲ್ ಅಭ್ಯಾಸದ ಒಂದು ನೀಡುವಿಕೆಯನ್ನು ಹೇಗೆ ಮಾಡುವುದು, ಅಥವಾ ಕಂಡುಕೊಳ್ಳಲ್ಪಟ್ಟ ಆಸಕ್ತಿಯನ್ನು ಹೇಗೆ ಮುಂದುವರಿಸಿಕೊಂಡು ಹೋಗುವುದು ಎಂಬುದನ್ನು ಚರ್ಚಿಸಬಹುದು ಅಥವಾ ಪ್ರತ್ಯಕ್ಷಾಭಿನಯಿಸಬಹುದು.
ಸೇವೆಗಾಗಿರುವ ಕೂಟಗಳು 10 ಅಥವಾ 15 ನಿಮಿಷಗಳನ್ನು ಮೀರಿ ಹೋಗಬಾರದು, ಮತ್ತು ಈ ಸಮಯದಲ್ಲಿ ಗುಂಪುಗಳನ್ನು ಸಂಘಟಿಸುವುದು, ಟೆರಿಟೊರಿಯನ್ನು ನೇಮಿಸುವುದು, ಹಾಗೂ ಪ್ರಾರ್ಥನೆಯನ್ನು ಮಾಡುವುದೂ ಒಳಗೂಡಿದೆ. ಎಲ್ಲರೂ ಕಳುಹಿಸಲ್ಪಡುವಾಗ, ಕೂಡಿಬಂದಿರುವ ಎಲ್ಲರಿಗೂ ಅವರು ಯಾರ ಜೊತೆಯಲ್ಲಿ ಮತ್ತು ಎಲ್ಲಿ ಕೆಲಸಮಾಡಬೇಕೆಂಬುದು ಗೊತ್ತಿರಬೇಕು. ಸಾಕ್ಷಿಕೊಡುತ್ತಿರುವ ಪ್ರತಿಯೊಂದು ಪ್ರಚಾರಕರ ಜೋಡಿಯು ತಮ್ಮ ಟೆರಿಟೊರಿಗೆ ತಡಮಾಡದೇ ಹೋಗಲಿಕ್ಕಾಗಿ, ಅವರು ಎಲ್ಲಿ ಕೆಲಸಮಾಡುವಂತೆ ನಿರೀಕ್ಷಿಸಲಾಗಿದೆ ಎಂಬುದನ್ನು ಅವರಿಗೆ ಟೆರಿಟೊರಿ ಮ್ಯಾಪ್ ಕಾರ್ಡ್ (S-12)ನಿಂದ ತೋರಿಸಬೇಕು. ಇದು, ದೊಡ್ಡ ಗುಂಪುಗಳು ಟೆರಿಟೊರಿಯೊಳಗೆ ಹೋಗಿ, ಅನಂತರ ಅಲ್ಲಿ ತಮ್ಮ ವೈಯಕ್ತಿಕ ನೇಮಕಗಳನ್ನು ಸಾರ್ವಜನಿಕರ ಮುಂದೆ ಪಡೆದುಕೊಳ್ಳುವುದನ್ನು ತಪ್ಪಿಸುವುದು. ಕೂಟವು ಇಷ್ಟು ಅಲ್ಪಾವಧಿಯದ್ದಾಗಿರುವ ಕಾರಣ, ಎಲ್ಲರೂ ಸರಿಯಾದ ಸಮಯಕ್ಕೆ ಬರುವುದು ಪ್ರಾಮುಖ್ಯವಾದದ್ದಾಗಿದೆ. ಸೇವೆಗಾಗಿರುವ ಕೂಟವು ಒಂದು ಸಭಾ ಕೂಟದ ನಂತರ, ಉದಾಹರಣೆಗೆ ಕಾವಲಿನಬುರುಜು ಅಭ್ಯಾಸದ ನಂತರವಿರುವುದಾದರೆ, ಅದು ಇನ್ನೂ ಸಂಕ್ಷಿಪ್ತವಾಗಿರಬೇಕು. ದಿನದ ವಚನವನ್ನು ಚರ್ಚಿಸುವ ಅಗತ್ಯವಿಲ್ಲ, ಏಕೆಂದರೆ ಈಗಾಗಲೇ ಒಂದು ಉತ್ತಮವಾದ ಶಾಸ್ತ್ರೀಯ ಚರ್ಚೆಯು ಆನಂದಿಸಲ್ಪಟ್ಟಿದೆ.
ದೀಕ್ಷಾಸ್ನಾನ ಪಡೆದಿರುವ ಅರ್ಹ ಸಹೋದರರು ಪ್ರತಿಯೊಂದು ಸೇವೆಗಾಗಿರುವ ಕೂಟವನ್ನು ನಡಿಸುವಂತೆ ಮುಂಚಿತವಾಗಿಯೇ ನೇಮಿಸಲ್ಪಡಬೇಕು. ನಿರ್ದಿಷ್ಟವಾದ ಒಂದು ದಿನದಂದು ಮುಂದಾಳತ್ವ ವಹಿಸಲು ಇವರಲ್ಲಿ ಯಾರೂ ಲಭ್ಯವಿಲ್ಲದಿರುವಲ್ಲಿ, ಇಂತಹ ಅಗತ್ಯವು ಏಳುವಾಗ ಯಾವ ದೀಕ್ಷಾಸ್ನಾನಿತ ಸಹೋದರಿಯು ಇದನ್ನು ನಡಿಸಬೇಕು ಎಂಬುದನ್ನು ಹಿರಿಯರು ಗೊತ್ತುಪಡಿಸಬೇಕು. ಸಹೋದರಿಯು ಕುಳಿತುಕೊಂಡೇ ಇದ್ದು ತನ್ನ ಸ್ವಂತ ಹೇಳಿಕೆಗಳನ್ನು ಸಂಕ್ಷಿಪ್ತವಾಗಿಡುತ್ತಾ, ದಿನದ ವಚನದ ಅಥವಾ ಕ್ಷೇತ್ರ ಸೇವೆಗೆ ಸಂಬಂಧಿಸುವ ಬೇರಾವುದೇ ಅಂಶಗಳ ಗುಂಪು ಚರ್ಚೆಯನ್ನು ಆರಂಭಿಸಬಹುದು. ಅವಳು ಒಂದು ತಲೆ ಮುಸುಕನ್ನು ಹಾಕಿಕೊಳ್ಳಬೇಕು.
ಕ್ಷೇತ್ರ ಸೇವೆಗಾಗಿರುವ ಕೂಟಗಳು, ನಾವು ಪ್ರೋತ್ಸಾಹಿಸಲ್ಪಡಲು ಮತ್ತು ಶುಶ್ರೂಷೆಯಲ್ಲಿ ಭಾಗವಹಿಸಲು ಸನ್ನದ್ಧರಾಗಲು ಅತ್ಯುತ್ತಮವಾದ ಸಂದರ್ಭಗಳಾಗಿವೆ. ಚಾಲಕನು ಎಷ್ಟು ಚೆನ್ನಾಗಿ ತಯಾರಿಸುತ್ತಾನೊ, ಎಲ್ಲರೂ ಅಷ್ಟೇ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುವರು.