“ಹುರುಪಿನ ರಾಜ್ಯ ಘೋಷಕರು” 2002ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1 “ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.” (ಕೀರ್ತ. 122:1) ಕೀರ್ತನೆಗಾರನ ಈ ಅಭಿವ್ಯಕ್ತಿಯನ್ನು ಪರಿಶೀಲಿಸುತ್ತಿರುವಾಗ ಈ ವಿಷಯಗಳನ್ನು ಗಮನಿಸಿರಿ: (1) ಯೆಹೋವನನ್ನು ಆರಾಧಿಸುವಂತೆ ಅವನು ಆಮಂತ್ರಿಸಲ್ಪಟ್ಟಾಗ ಅವನಿಗಾದ ಅನಿಸಿಕೆ, (2) ಸತ್ಯಾರಾಧನೆಯ ಕುರಿತು ಅವನಷ್ಟೇ ಅತ್ಯಾಸಕ್ತಿಯುಳ್ಳ ಅವನ ಒಳ್ಳೇ ಸಂಗಡಿಗರು ಮತ್ತು (3) ಆಮಂತ್ರಣವನ್ನು ನೀಡಲಿಕ್ಕಾಗಿ, ಕೂಡಿಬರಲಿಕ್ಕಾಗಿ ಮತ್ತು ದೇವರ ಮಂದಿರಕ್ಕೆ ಪ್ರಯಾಣಿಸಲಿಕ್ಕಾಗಿ ಮಾಡಬೇಕಾದಂಥ ಯೋಜನೆ.
2 ನಮ್ಮ ಮುಂದಿನ ಅಧಿವೇಶನಕ್ಕಾಗಿ ಯೋಜನೆಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಕೇಳಿಸಿಕೊಳ್ಳುವಾಗ ನಮ್ಮ ಭಾವನೆಗಳು ಸಹ ಕೀರ್ತನೆಗಾರನ ಮಾತುಗಳನ್ನೇ ಪ್ರತಿಧ್ವನಿಸುತ್ತವಲ್ಲವೊ? ಹಿಂದಿನ ಅಧಿವೇಶನಗಳ ಆನಂದವನ್ನು ಮತ್ತು ಯೆಹೋವನ ಜೊತೆ ಆರಾಧಕರೊಂದಿಗೆ ಒಂದು ವಿಶೇಷ ಕೂಟದಲ್ಲಿ ಪುನಃ ಜೊತೆಗೂಡುವ ಪ್ರತೀಕ್ಷೆಯನ್ನು ನಾವು ಜ್ಞಾಪಕಕ್ಕೆ ತರುವಾಗ, ನಮ್ಮಲ್ಲಿ ನಿರೀಕ್ಷೆಯು ತುಂಬುತ್ತದೆ. 2002-2003 ಇಸವಿಗಳಿಗಾಗಿ ಭಾರತದಲ್ಲಿ “ಹುರುಪಿನ ರಾಜ್ಯ ಘೋಷಕರು” ಎಂಬ ಮೂರು ದಿನಗಳ ಜಿಲ್ಲಾ ಅಧಿವೇಶನಗಳಿಗಾಗಿ ಏರ್ಪಾಡುಗಳನ್ನು ಮಾಡಲಾಗಿದೆ. ಅದಕ್ಕೆ ಹಾಜರಾಗಲು ಮತ್ತು ನಮಗಾಗಿ ಕಾದಿರುವ ಆತ್ಮಿಕ ಔತಣದ ಪೂರ್ಣ ಪ್ರಯೋಜನವನ್ನು ಪಡೆಯಲು ಯೋಜನೆಗಳನ್ನು ಮಾಡುವ ಸಮಯವು ಇದೇ ಆಗಿದೆ.
3 “ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆ”ಯು, ಅಧಿವೇಶನದಲ್ಲಿ ಬಡಿಸಲ್ಪಡುವ ಸಮಯೋಚಿತ ಆತ್ಮಿಕ ಆಹಾರವನ್ನು ಈಗಾಗಲೇ ತಯಾರಿಸಲು ಆರಂಭಿಸಿದೆ. (ಲೂಕ 12:42) ಗತ ವರ್ಷಗಳಲ್ಲಿ, ಚಿಕ್ಕ ಅಧಿವೇಶನಗಳಿಗಾಗಿ ಏರ್ಪಾಡುಗಳು ಮಾಡಲ್ಪಟ್ಟಿದ್ದರಿಂದ, ಅದು ಹೊಸಬರಿಗೆ ಹಾಜರಾಗಲು ಸುಲಭವಾಗಿತ್ತು ಮತ್ತು ನೂರಾರು ಚಿಕ್ಕ ನಗರಗಳಲ್ಲಿ ಸಾರ್ವಜನಿಕರು ಯೆಹೋವನ ಸಾಕ್ಷಿಗಳನ್ನು ಪ್ರತಿನಿಧಿಸುವ ಒಂದು ದೊಡ್ಡ ಗುಂಪನ್ನು ಹತ್ತಿರದಿಂದ ಗಮನಿಸಲು ಶಕ್ತರಾದರು. ಈ ವರ್ಷ ಅಧಿವೇಶನಗಳು ಹೆಚ್ಚು ದೊಡ್ಡದಾಗಿರುವವು. ಇದು ಅನೇಕ ಸ್ಥಳಗಳಿಂದ ಇತರ ಸಾಕ್ಷಿಗಳು ಬಂದು ಸಾಹಚರ್ಯದಲ್ಲಿ ಆನಂದಿಸುವ ಅವಕಾಶವನ್ನು ಕೊಡುವುದು. ಪ್ರತಿಯೊಂದು ಸಭೆಯನ್ನು, ಈ ದೊಡ್ಡ ಅಧಿವೇಶನಗಳಲ್ಲೊಂದಕ್ಕೆ ನೇಮಿಸಲಾಗುವುದು. ಆದರೆ ದೂರದ ಉತ್ತರ ಮತ್ತು ಉತ್ತರೇಶಾನ್ಯ ಪ್ರದೇಶಗಳಿಗಾಗಿ ಕೆಲವೊಂದು ಚಿಕ್ಕ ಅಧಿವೇಶನಗಳನ್ನು ಶೆಡ್ಯೂಲ್ ಮಾಡಲಾಗಿದೆ. ಹಾಜರಾಗುತ್ತಿರುವವರಿಗೆ ಅನುಕೂಲಕರವಾದ ತಂಗುವ ಸ್ಥಳಗಳು ಇಲ್ಲವೆ ಡಾರ್ಮಿಟರಿ ನಮೂನೆಯ ವಸತಿಸೌಕರ್ಯವನ್ನು ಪಡೆಯಲಿಕ್ಕಾಗಿ ಏರ್ಪಾಡುಗಳನ್ನು ಮಾಡಲಾಗುತ್ತಿದೆ. ಅಷ್ಟುಮಾತ್ರವಲ್ಲದೆ, “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆ”ಯುವಂತೆ ವಿಭಿನ್ನ ಇಲಾಖೆಗಳನ್ನು ಸಹೋದರರು ಈಗಾಗಲೇ ಸಂಘಟಿಸಲು ಆರಂಭಿಸಿದ್ದಾರೆ. (1 ಕೊರಿಂ. 14:40) ನಮ್ಮ ಪ್ರಯೋಜನ ಮತ್ತು ಸೌಕರ್ಯಕ್ಕಾಗಿ ಈಗಾಗಲೇ ಇಷ್ಟೊಂದು ವ್ಯವಸ್ಥೆಗಳು ಮಾಡಲ್ಪಟ್ಟಿರುವಾಗ, ಆ ಅಧಿವೇಶನಕ್ಕಾಗಿ ತಯಾರಿಸಲು ವೈಯಕ್ತಿಕವಾಗಿ ನಾವೇನು ಮಾಡಬಲ್ಲೆವು?
4 ಎಲ್ಲ ಮೂರು ದಿನಗಳೂ ಹಾಜರಿರುವಂತೆ ಈಗಲೇ ಯೋಜನೆಯನ್ನು ಮಾಡಿರಿ: ಈ ವರ್ಷದ ಹೆಚ್ಚಿನ ಅಧಿವೇಶನಗಳನ್ನು, ದೀಪಾವಳಿ ಮತ್ತು ಡಿಸೆಂಬರ್ ರಜೆಯ ಸಮಯದಲ್ಲಿ ಶೆಡ್ಯೂಲ್ ಮಾಡಲಾಗಿದೆ. ಹೀಗಿದ್ದರೂ, ನಿಮ್ಮ ನೇಮಿತ ಅಧಿವೇಶನಕ್ಕೆ ಪ್ರಯಾಣಿಸಿ ಎಲ್ಲ ದಿನಗಳಿಗೆ ಹಾಜರಾಗುವಂತೆ ನೀವು ನಿಮ್ಮ ಧಣಿಯಿಂದ ಬಿಡುವನ್ನು ಕೇಳಬೇಕಾಗಬಹುದು. ಕೆಲವು ಧಣಿಗಳು “ಮೆಚ್ಚಿಸಲು ಕಷ್ಟಕರ” ಸ್ವಭಾವದವರೆಂಬುದನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. (1 ಪೇತ್ರ 2:18, NW) ಆದರೆ ನಮ್ಮ ಅಧಿವೇಶನಗಳು ತುಂಬ ಪ್ರಾಮುಖ್ಯವಾಗಿವೆ, ಮತ್ತು ಇಡೀ ಕಾರ್ಯಕ್ರಮಕ್ಕೆ ಹಾಜರಿರಲು ನಾವು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಬಯಸುತ್ತೇವೆ. ಒಳ್ಳೆಯ ಫಲಿತಾಂಶವನ್ನು ಪಡೆಯಲಿಕ್ಕಾಗಿ ಆತನ ಮಾರ್ಗದರ್ಶನವನ್ನು ಕೋರುತ್ತಾ, ಇಂಥ ವಿಷಯಗಳ ಕುರಿತಾಗಿ ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡಿರಿ.—ನೆಹೆ. 2:4.
5 ಕುಟುಂಬದಲ್ಲಿ ಎಲ್ಲರೂ ಹಾಜರಾಗುವಂತೆ ಯೋಜನೆಯನ್ನು ಮಾಡಿರಿ: ನಿಮ್ಮ ಕುಟುಂಬ ಸಮೇತ ಪ್ರಯಾಣ ಮಾಡಿ, ಅಧಿವೇಶನದ ನಗರದಲ್ಲಿ ಉಳಿಯಲಿಕ್ಕಾಗಿ ತಗಲುವ ಖರ್ಚುವೆಚ್ಚವು, ನಮ್ಮಲ್ಲಿ ಅನೇಕರಿಗೆ ಒಂದು ಸವಾಲಾಗಿರುವುದು. ಜಾಗರೂಕತೆಯ ಯೋಜನೆಯನ್ನು ಮಾಡುವುದು, ಹಣಕಾಸಿನ ಒತ್ತಡಗಳನ್ನು ತಗ್ಗಿಸಲು ಸಹಾಯಮಾಡಬಲ್ಲದು. ಈಗಿನಿಂದ ಹಿಡಿದು ಅಧಿವೇಶನದ ತನಕ ಇರುವ ಸಮಯದಲ್ಲಿ ನಾವು ಪ್ರತಿದಿನ ಕೇವಲ ಐದು ರೂಪಾಯಿಗಳನ್ನು ಬದಿಗಿರಿಸಲು ಶಕ್ತರಾಗುವುದಾದರೆ, ಇದು ನಮ್ಮ ಪ್ರಯಾಣ ಮತ್ತು ವಸತಿವ್ಯವಸ್ಥೆಯ ಖರ್ಚುಗಳನ್ನು ಪೂರೈಸಬಲ್ಲದೆಂಬುದನ್ನು ನಾವು ಕಂಡುಕೊಳ್ಳಬಹುದು.—1 ಕೊರಿಂಥ 16:2ನ್ನು ಹೋಲಿಸಿರಿ.
6 ನಿಮ್ಮ ರೂಮಿಂಗ್ ಆವಶ್ಯಕತೆಗಳು: ಪ್ರತಿಯೊಂದು ಅಧಿವೇಶನಕ್ಕೆ ಒಂದು ರೂಮಿಂಗ್ ಇಲಾಖೆ ಇರುತ್ತದೆ. ಇದು ನಿಮಗೆ ಅಧಿವೇಶನ ನಗರದಲ್ಲಿ ವಸತಿಸೌಕರ್ಯದ ಬಗ್ಗೆ ಮಾಹಿತಿಯನ್ನು ಕೊಡುವುದು ಮತ್ತು ಅದಕ್ಕಾಗಿ ವ್ಯವಸ್ಥೆಗಳನ್ನು ಮಾಡಲು ಸಹಾಯಮಾಡುವುದು. ನಿಮ್ಮ ವಸತಿಸೌಕರ್ಯಕ್ಕಾಗಿ ಏರ್ಪಾಡುಗಳನ್ನು ಮಾಡುವುದರ ಸಂಬಂಧದಲ್ಲಿ ಸಾಕಷ್ಟು ಮುಂಚಿತವಾಗಿ ಯೋಜಿಸಿರಿ. ನಿಮ್ಮ ಸಭೆಯ ಸೆಕ್ರಿಟರಿಯು, ನಿಮಗೆ ಒಂದು ರೂಮ್ ರಿಕ್ವೆಸ್ಟ್ ಫಾರ್ಮ್ ಅನ್ನು ಒದಗಿಸಬಲ್ಲನು. ಬೇಕಾಗಿರುವ ಮಾಹಿತಿಯನ್ನು ಅದರಲ್ಲಿ ತುಂಬಿಸಿದ ನಂತರ, ನಿಮ್ಮ ಸಭೆಯ ಸೆಕ್ರಿಟರಿಗೆ ಅದನ್ನು ಕೊಡಿರಿ, ಮತ್ತು ಅವನು ಅದನ್ನು ನೀವು ಹಾಜರಾಗುತ್ತಿರುವ ಅಧಿವೇಶನದ ಮುಖ್ಯಕಾರ್ಯಾಲಯಕ್ಕೆ ಕಳುಹಿಸುವನು. ನಿಮ್ಮ ಈ ವಿನಂತಿಯೊಂದಿಗೆ ಯಾವಾಗಲೂ ಅಂಚೆಚೀಟಿ ಮತ್ತು ನಿಮ್ಮ ವಿಳಾಸವಿರುವ ಒಂದು ಲಕೋಟೆಯನ್ನು ಲಗತ್ತಿಸಿರಿ. ಡಾರ್ಮಿಟರಿ ನಮೂನೆಯ ವಸತಿಸೌಕರ್ಯಕ್ಕಾಗಿ ಕನಿಷ್ಠ ಬೆಲೆಯು, ಒಂದು ರಾತ್ರಿ ಒಬ್ಬ ವ್ಯಕ್ತಿಗೆ 50 ರೂಪಾಯಿಗಳಾಗಿರುವುದು. ನೀವು ಎಷ್ಟು ಹಣವನ್ನು ಕೊಡಲು ಶಕ್ತರಾಗಿದ್ದೀರಿ ಎಂಬುದನ್ನು ಹೇಳುವಾಗ ದಯವಿಟ್ಟು ಇದನ್ನು ನೆನಪಿನಲ್ಲಿಡಿರಿ. ನಿಮಗೆ ಸಹೋದರರ ಮನೆಗಳಲ್ಲಿ ತಂಗುವ ವ್ಯವಸ್ಥೆ ಮಾಡಲ್ಪಟ್ಟಿರುವಲ್ಲಿ, ಆ ಸ್ಥಳೀಯ ಕುಟುಂಬಗಳು ತೋರಿಸುವ ಅತಿಥಿಸತ್ಕಾರವನ್ನು, ಅವರು ಅದನ್ನು ಹೇಗಾದರೂ ತೋರಿಸಲೇಬೇಕು ಎಂಬ ರೀತಿಯಲ್ಲಿ ಮಾಮೂಲಿ ಸಂಗತಿಯಾಗಿ ಎಣಿಸಬೇಡಿರಿ. ಅವರಿಗಾಗುತ್ತಿರಬಹುದಾದ ಹೆಚ್ಚಿನ ಖರ್ಚುಗಳನ್ನು ತಗ್ಗಿಸಲಿಕ್ಕಾಗಿ ಸಹಾಯಾರ್ಥವಾಗಿ ಏನನ್ನಾದರೂ ನೀಡಲು ಸಿದ್ಧರಿರಿ.
7 ಸಭೆಯ ಸುತ್ತ ಕಣ್ಣೋಡಿಸಿ: ಒಬ್ಬ ಸಹೋದರ ಅಥವಾ ಸಹೋದರಿಗೆ ಆರ್ಥಿಕ ತಾಪತ್ರಯವಿರುವುದರಿಂದ, ಅವನಿಗೆ ಅಥವಾ ಅವಳಿಗೆ ಅಧಿವೇಶನಕ್ಕೆ ಹಾಜರಾಗುವುದು ಕಷ್ಟಕರವಾಗಿರುವುದೆಂದು ನಮಗೆ ಗೊತ್ತಿರುವಲ್ಲಿ, ನಾವು ನಮ್ಮ ಪ್ರೀತಿಯನ್ನು ‘ವಿಶಾಲಗೊಳಿಸಿ’ ಸ್ವಲ್ಪ ನೆರವನ್ನು ನೀಡಬಲ್ಲೆವೊ? (2 ಕೊರಿಂ. 6:12, 13; ಧರ್ಮೋ. 15:7) 2 ಕೊರಿಂಥ 8:14ರಲ್ಲಿ ಪೌಲನು ಇದೇ ರೀತಿಯ ಮನೋವೃತ್ತಿಯನ್ನು ಉತ್ತೇಜಿಸಿದನು. ಅಂಥವರನ್ನು ನಿಮ್ಮೊಂದಿಗೆ ಅಧಿವೇಶನಕ್ಕೆ ಪ್ರಯಾಣಿಸುವಂತೆ ಏಕೆ ಆಮಂತ್ರಿಸಬಾರದು? ಅವರು ಪಯನೀಯರರಾಗಿರುವಲ್ಲಿ, ಪ್ರಯಾಣದುದ್ದಕ್ಕೂ ನಿಮ್ಮೊಂದಿಗೆ ಹಂಚಿಕೊಳ್ಳಲಿಕ್ಕಾಗಿ ಅವರ ಬಳಿ ಬಹಳಷ್ಟು ಒಳ್ಳೆಯ ಅನುಭವಗಳಿರಬಹುದು. ಅವರು ಸಭೆಯ ಹಿರಿಯ ಸದಸ್ಯರಾಗಿರುವಲ್ಲಿ, ನೀವು ಹಿಂದೆಂದೂ ಕೇಳಿಸಿಕೊಂಡಿರದಂಥ ಅದ್ಭುತವಾದ ದೇವಪ್ರಭುತ್ವಾತ್ಮಕ ಇತಿಹಾಸ ಅವರಲ್ಲಿರಬಹುದು. ಈ ಸಹೋದರ ಸಹೋದರಿಯರೊಂದಿಗಿನ ಸಹವಾಸವು, ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಒಂದು ಒಳ್ಳೆಯ ಪ್ರಭಾವವನ್ನು ಬೀರುವುದಿಲ್ಲವೊ? ನಿಮ್ಮ ಉದಾರಭಾವವನ್ನು ಅವರೂ ಗಣ್ಯಮಾಡುವರು ಮತ್ತು ನಿಮಗೆ ಯೆಹೋವನಿಂದ ಪ್ರತಿಫಲ ಸಿಗುವುದು.—ಜ್ಞಾನೋ. 28:27; ಮತ್ತಾ. 10:42.
8 ಒಬ್ಬ ಸ್ವಯಂಸೇವಕರಾಗಿ ಸಿದ್ಧಮನಸ್ಸಿನಿಂದ ಪ್ರತಿಕ್ರಿಯಿಸಿರಿ: ಅಧಿವೇಶನ ನಗರಗಳಲ್ಲಿರುವ ಸ್ಥಳಿಕ ಸಭೆಗಳಿಗೆ, ಅಧಿವೇಶನಕ್ಕೆ ಹಲವಾರು ದಿನಗಳ ಮುಂಚೆಯೇ, ನಿವೇಶನವನ್ನು ಸಿದ್ಧಗೊಳಿಸಲಿಕ್ಕಾಗಿ ಅನೇಕ ಅವಕಾಶಗಳಿರುವವು. “ದೈವಿಕ ಬೋಧನೆಯ ಮೂಲಕ ಐಕ್ಯರು” ಎಂಬ ವಿಡಿಯೋವನ್ನು ನಿಮ್ಮ ಕುಟುಂಬದೊಂದಿಗೆ ವೀಕ್ಷಿಸಿ, ಯೋಜಿಸಲ್ಪಟ್ಟಿರುವ ವಿಸ್ತಾರವಾದ ಕೆಲಸದಲ್ಲಿ ಪಾಲ್ಗೊಳ್ಳಲು ನೀವೇಕೆ ದೃಢನಿರ್ಧಾರವನ್ನು ಮಾಡಬಾರದು? ಇದಕ್ಕಾಗಿ ಹೆಚ್ಚಿನ ರಜೆಗಳನ್ನು ತೆಗೆದುಕೊಳ್ಳಬೇಕಾಗಬಹುದು, ಆದರೆ ಅದರಲ್ಲಿ ಪಾಲ್ಗೊಳ್ಳುವವರಿಗಾಗಿ ಎಂಥ ಆಶೀರ್ವಾದಗಳು ಕಾದಿರಿಸಲ್ಪಟ್ಟಿವೆ. ಅಧಿವೇಶನದ ಸಮಯದಲ್ಲಿ, ಡಿಪಾರ್ಟ್ಮೆಂಟ್ಗಳು ಸರಾಗವಾಗಿ ಕಾರ್ಯನಡೆಸುವಂತೆ ನೂರಾರು ಸ್ವಯಂಸೇವಕರ ಅಗತ್ಯವೂ ಇರುವುದು. ಸಭಾಂಗಣದೊಳಗಿರುವ ಅಟೆಂಡೆಂಟರು, ಆಸನಗಳ ಬಗ್ಗೆ ನಿರ್ದೇಶನವನ್ನು ಕೊಡುವರು ಮತ್ತು ಕ್ಲೀನಿಂಗ್ ಡಿಪಾರ್ಟ್ಮೆಂಟ್ಗೆ ಶುಚಿತ್ವದ ವಿಷಯದಲ್ಲಿ ನಮಗಿರುವ ಒಳ್ಳೇ ಹೆಸರನ್ನು ಎತ್ತಿಹಿಡಿಯುತ್ತಾ, ನಮ್ಮ ತಾತ್ಕಾಲಿಕ ಆರಾಧನಾ ಸ್ಥಳವನ್ನು ನಾವು ಅಲ್ಲಿ ಬರುವ ಮುಂಚೆ ಇದ್ದುದಕ್ಕಿಂತಲೂ ಹೆಚ್ಚು ಶುಚಿಯಾಗಿ ಬಿಟ್ಟುಹೋಗುವ ಸುಯೋಗವಿದೆ. ನಾವು ಈ ಡಿಪಾರ್ಟ್ಮೆಂಟ್ಗಳಿಗೆ, ಅಥವಾ ನಮ್ಮ ಬೆಂಬಲವನ್ನು ಉಪಯೋಗಿಸಬಲ್ಲ ಬೇರಾವುದೇ ಡಿಪಾರ್ಟ್ಮೆಂಟ್ಗಳಿಗೆ ನೆರವು ನೀಡಬಲ್ಲೆವೊ? ನಿಮ್ಮ ಸಹೋದರರೊಂದಿಗೆ “ಒಂದೇ ಮನಸ್ಸಿನಿಂದ” ಸೇವೆಸಲ್ಲಿಸಲಿಕ್ಕಾಗಿ ನಿಮ್ಮ ಸಹಾಯವನ್ನು ಕೊಡಲು ಮುಂದೆ ಬರುವಿರೊ?—ಚೆಫ. 3:9.
9 ನಾವೇನು ಮಾಡುತ್ತಿದ್ದೇವೊ ಅದನ್ನು ಜನರು ನಿಜವಾಗಿಯೂ ಗಮನಿಸುತ್ತಾರೊ? ಹಿಂದಿನ ವರ್ಷದ ಒಂದು ಜಿಲ್ಲಾ ಅಧಿವೇಶನದ ಸಮಯದಲ್ಲಿ, ಸುಮಾರು 20 ವರ್ಷಗಳ ಹಿಂದೆ ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡುವುದನ್ನು ನಿಲ್ಲಿಸಿದ್ದ ಒಬ್ಬ ವ್ಯಕ್ತಿಯು ಒಂದು ಹೋಟೇಲಿನಲ್ಲಿ ಕೆಲಸಮಾಡುತ್ತಿದ್ದನು. ತಾನು ಬೈಬಲ್ ಅಧ್ಯಯನವನ್ನು ಪುನಃ ಆರಂಭಿಸುವುದು ಮತ್ತು ಕೂಟಗಳಿಗೆ ಹೋಗಲಾರಂಭಿಸುವುದರ ಬಗ್ಗೆ ತಾನು ಯೋಚಿಸುತ್ತಿದ್ದೇನೆಂದು ಅವನು ಕೆಲವು ಸಾಕ್ಷಿಗಳಿಗೆ ಹೇಳಿದನು. ಏಕೆ? ಸಾಕ್ಷಿಗಳು ಆ ಹೋಟೇಲಿನಲ್ಲಿ ತಂಗಿದ್ದ ದಿನಗಳಂದು ಅವನೊಂದಿಗೆ ಪ್ರೀತಿಯಿಂದ ವ್ಯವಹರಿಸಿದ್ದರಿಂದಲೇ. “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು” ಎಂದು ಯೇಸು ಕೊಟ್ಟ ಬುದ್ಧಿವಾದವನ್ನು ನಾವು ಪಾಲಿಸುತ್ತಿರುವುದನ್ನು ನೋಡುವಾಗ, ನಮ್ಮ ಸ್ವರ್ಗೀಯ ತಂದೆಯು ಎಷ್ಟು ಹೆಮ್ಮೆಪಡುತ್ತಿರಬಹುದು!—ಮತ್ತಾ. 5:16.
10 ಯೆಹೋವನ ಆರಾಧನಾ ಸ್ಥಳಕ್ಕೆ ಹೋಗುವುದನ್ನು ಆನಂದದಿಂದ ಎದುರುನೋಡುತ್ತಿದ್ದ ರಾಜ ದಾವೀದನ ಮನೋಭಾವವನ್ನು ನಾವು ಪ್ರತಿಬಿಂಬಿಸೋಣ. ನಮ್ಮ ಜಿಲ್ಲಾ ಅಧಿವೇಶನಗಳು, ಆತ್ಮಿಕ ಆಹಾರದ ಒಂದು ಪ್ರಮುಖ ಮೂಲವಾಗಿವೆ ಮತ್ತು ಪ್ರೀತಿಯ ಸಾಹಚರ್ಯಕ್ಕಾಗಿ ಸರಿಸಾಟಿಯಿಲ್ಲದ ಸಂದರ್ಭಗಳಾಗಿವೆ. ಆದುದರಿಂದ, “ಹುರುಪಿನ ರಾಜ್ಯ ಘೋಷಕರು” ಎಂಬ ಜಿಲ್ಲಾ ಅಧಿವೇಶನದ ಎಲ್ಲ ಮೂರು ದಿನಗಳ ಕಾರ್ಯಕ್ರಮಗಳಿಗೆ ಹಾಜರಿರುವಂತೆ ನಿಮ್ಮ ಏರ್ಪಾಡುಗಳನ್ನು ಮಾಡುವುದನ್ನು ಆರಂಭಿಸುವಂತೆ ನಾವು ಉತ್ಸಾಹದಿಂದ ಕರೆಕೊಡುತ್ತೇವೆ!