“ದೇವರ ವಾಕ್ಯದ ಬೋಧಕರು” 2001ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1 “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಒಬ್ಬ ತಂದೆಯಂತೆ ಪ್ರಚೋದಿಸುವ ಯೆಹೋವನನ್ನು ಮಹಾ ಬೋಧಕನೆಂದು ಪ್ರವಾದಿಯಾದ ಯೆಶಾಯನು ವರ್ಣಿಸುತ್ತಾನೆ. (ಯೆಶಾ. 30:20, 21) ಆದರೆ ನಮ್ಮ ಪ್ರಯೋಜನಕ್ಕಾಗಿ ಹೇಳಲ್ಪಡುವ ಯೆಹೋವನ ಮಾತುಗಳನ್ನು ನಾವು ಹೇಗೆ ಕೇಳಿಸಿಕೊಳ್ಳುತ್ತೇವೆ? ಯೆಹೋವನು ಬೈಬಲಿನ ಪುಟಗಳ ಮೂಲಕವಲ್ಲದೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಬೈಬಲಾಧರಿತ ಪ್ರಕಾಶನಗಳು, ಕೂಟಗಳು, ಸರ್ಕಿಟ್ ಸಮ್ಮೇಳನಗಳು ಹಾಗೂ ಜಿಲ್ಲಾ ಅಧಿವೇಶನಗಳ ಮೂಲಕವಾಗಿಯೂ ತನ್ನ ಜನರೊಂದಿಗೆ ಮಾತಾಡುತ್ತಾನೆ. (ಮತ್ತಾ. 24:45) ನಾವು ನಡೆಯಬೇಕಾದ ಮಾರ್ಗದಲ್ಲಿ ನಮ್ಮನ್ನು ಮಾರ್ಗದರ್ಶಿಸುತ್ತಾ ಇರುವುದಕ್ಕಾಗಿ ನಾವು ಯೆಹೋವನಿಗೆ ಆಭಾರಿಗಳಾಗಿರಬೇಕು.
2 ಪ್ರತಿ ವರ್ಷ, ಜಿಲ್ಲಾ ಅಧಿವೇಶನಗಳು ಜೊತೆ ವಿಶ್ವಾಸಿಗಳೊಂದಿಗೆ ಒಟ್ಟುಗೂಡುವ ಹಾಗೂ ಯೆಹೋವನ ಉಪದೇಶಗಳನ್ನು ಗಮನಕೊಟ್ಟು ಕೇಳಿಸಿಕೊಳ್ಳುವ ಅವಕಾಶವನ್ನು ನಮಗೆ ಒದಗಿಸುತ್ತವೆ. ಕಳೆದ ವರ್ಷ, 32,349 ಮಂದಿ ಆತ್ಮಿಕವಾಗಿ ಚೈತನ್ಯದಾಯಕವಾಗಿದ್ದ “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನಕ್ಕೆ ಹಾಜರಾದರು. 2001ನೇ ಇಸವಿಯಲ್ಲಿ “ದೇವರ ವಾಕ್ಯದ ಬೋಧಕರು” ಎಂಬ ಮೂರು ದಿನದ ಜಿಲ್ಲಾ ಅಧಿವೇಶನಗಳು ದೇಶದಾದ್ಯಂತ ನಡೆಯಲಿವೆ. ಈ ಅಧಿವೇಶನಕ್ಕೆ ಹಾಜರಾಗುವುದಕ್ಕಾಗಿ ನೀವು ಏರ್ಪಾಡುಗಳನ್ನು ಮಾಡಲು ಎದುರುನೋಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ಆದುದರಿಂದ, ನಿಮಗೆ ಸಹಾಯಮಾಡುವುದಕ್ಕಾಗಿ ಈ ಮುಂದಿನ ಸೂಚನೆಗಳನ್ನು ಒದಗಿಸುತ್ತಿದ್ದೇವೆ.
3 ನಿಮ್ಮ ರೂಮಿನ ಅಗತ್ಯಗಳಿಗಾಗಿ: ಅಧಿವೇಶನವು ನಡೆಯುವ ನಗರದಲ್ಲಿ ನೀವು ಉಳಿಯಲು ವಸತಿಯನ್ನು ಕಂಡುಕೊಳ್ಳುವಂತೆ ಸಹಾಯಮಾಡಲು ಮತ್ತು ಮಾಹಿತಿಯನ್ನು ನೀಡಲು, ಪ್ರತಿಯೊಂದು ಅಧಿವೇಶನದಲ್ಲೂ ರೂಮಿಂಗ್ ಡಿಪಾರ್ಟ್ಮೆಂಟ್ನ ಸೌಲಭ್ಯವಿದೆ. ವಸತಿಗಾಗಿ ಏರ್ಪಾಡುಗಳನ್ನು ಮಾಡುವ ವಿಷಯದಲ್ಲಿ ಮುಂಚಿತವಾಗಿಯೇ ಸರಿಯಾಗಿ ಯೋಜನೆಮಾಡಿ. ನಿಮ್ಮ ಸಭೆಯ ಸೆಕ್ರಿಟರಿಯು, ರೂಮ್ ರಿಕ್ವೆಸ್ಟ್ ಫಾರ್ಮ್ ಅನ್ನು ನಿಮಗೆ ಒದಗಿಸುವರು. ಅಗತ್ಯವಿರುವ ಮಾಹಿತಿಯನ್ನು ಅದರಲ್ಲಿ ಭರ್ತಿಮಾಡಿದ ಮೇಲೆ, ಅದನ್ನು ನಿಮ್ಮ ಸಭೆಯ ಸೆಕ್ರಿಟರಿಗೆ ನೀಡಬಹುದು. ನಂತರ ನೀವು ಹಾಜರಾಗುವ ಅಧಿವೇಶನದ ಮುಖ್ಯಕಾರ್ಯಾಲಯಕ್ಕೆ ಅದನ್ನು ಅವರು ಕಳುಹಿಸಿಕೊಡುವರು. ನಿಮ್ಮ ರಿಕ್ವೆಸ್ಟ್ ಫಾರ್ಮ್ನೊಂದಿಗೆ, ನಿಮ್ಮ ವಿಳಾಸ ಹಾಗೂ ಅಂಚೆಚೀಟಿಯಿರುವ ಒಂದು ಲಕೋಟೆಯನ್ನು ಯಾವಾಗಲೂ ಕಳುಹಿಸಿ. ಒಂದು ನಗರದಲ್ಲಿ ಒಂದಕ್ಕಿಂತ ಹೆಚ್ಚು ಅಧಿವೇಶನಗಳು ನಡೆಯುವುದಾದರೆ, ನೀವು ಹಾಜರಾಗುವ ಅಧಿವೇಶನದ ತಾರೀಖನ್ನು ಬರೆಯಲು ಮರೆಯದಿರಿ.
4 ಯೆಹೋವನ ಸಾಕ್ಷಿಗಳ ಕುರಿತು ಹೋಟೆಲು ಸಿಬ್ಬಂದಿಗೆ ಹೇಗನಿಸುತ್ತದೆ? ಯೆಹೋವನ ಜನರ ಒಳ್ಳೇ ನಡವಳಿಕೆಯ ಕುರಿತಾಗಿ ತಿಳಿಸಿದ ಬಳಿಕ, ಅಮೆರಿಕದ ಮಿಡ್ವೆಸ್ಟ್ನಲ್ಲಿರುವ ಒಂದು ಹೋಟೆಲಿನ ಜನರಲ್ ಮ್ಯಾನೇಜರ್ ಹೇಳಿದ್ದು: “ಗುರುವಾರದಂದು ಯೆಹೋವನ ಸಾಕ್ಷಿಗಳು ನಮ್ಮ ಹೋಟೆಲಿನಲ್ಲಿ ಉಳಿಯಲು ಬರುವುದನ್ನು ನೋಡಿದಾಕ್ಷಣ, ನಾನು ಸೋಮವಾರ ಬೆಳಗ್ಗಿನ ವರೆಗೆ ವಾರಾಂತ್ಯದಲ್ಲಿ ರಜೆಗಾಗಿ ಹೋಗಿಬಿಡುತ್ತೇನೆ. ಏಕೆಂದರೆ, ಯಾವುದೇ ಸಮಸ್ಯೆಗಳು ಉಂಟಾಗುವುದಾದರೂ ಅವು ಚಿಕ್ಕಪುಟ್ಟವಾಗಿರುತ್ತವೆಂದು ನನಗೆ ಗೊತ್ತಿದೆ. ನಿಮ್ಮಂಥ ಜನರನ್ನು ಇಲ್ಲಿ ಇರಿಸಿಕೊಳ್ಳುವುದು ನನಗೆ ಯಾವಾಗಲೂ ಸಂತೋಷವೇ.” ಒಂದು ಹೋಟೆಲಿನ ಸೇಲ್ಸ್ ಮಹಿಳೆಯು ಉದ್ಗರಿಸಿದ್ದು: “ಅವರು ತುಂಬ ಒಳ್ಳೇ ಜನ. ಅವರೆಲ್ಲರೂ ಎಷ್ಟೊಂದು ಸೌಜನ್ಯಶೀಲರಾಗಿದ್ದಾರೆ!” ನಮ್ಮ ಸಹೋದರರ ಕುರಿತು ಈ ಹೇಳಿಕೆಗಳನ್ನು ಕೇಳಿಸಿಕೊಳ್ಳುವಾಗ ನಮಗೆ ಹೆಮ್ಮೆಯಾಗುವುದಿಲ್ಲವೇ? ತನ್ನ ನಾಮಕ್ಕೆ ಮಹಿಮೆಯನ್ನು ತರುವ ರೀತಿಯಲ್ಲಿ ನಾವು ವರ್ತಿಸುವುದನ್ನು ಯೆಹೋವ ದೇವರು ನೋಡುವಾಗ, ಆತನಿಗೆಷ್ಟು ಸಂತೋಷವಾಗುತ್ತದೆ ಎಂಬುದನ್ನು ಊಹಿಸಿನೋಡಿ!
5 ವೃದ್ಧರಿಗೆ ಮತ್ತು ವಿಶೇಷ ಅಗತ್ಯವಿರುವವರಿಗೆ ಕಾಳಜಿಯನ್ನು ತೋರಿಸುವುದು: ವೃದ್ಧರು, ದುರ್ಬಲರು ಹಾಗೂ ವಿಶೇಷ ಅಗತ್ಯವಿರುವ ಇತರರ ಅಸಮಾನ್ಯವಾದ ಪರಿಸ್ಥಿತಿಯನ್ನು ಅರಿತಿರುವ ಸಂಬಂಧಿಕರು, ಹಿರಿಯರು ಮತ್ತು ಸಭೆಯಲ್ಲಿರುವ ಇತರರು, ಅಂಥವರು ಅಧಿವೇಶನಕ್ಕೆ ಹಾಜರಾಗುವಂತೆ ಸಹಾಯಮಾಡುವ ಮೂಲಕ, ತಮ್ಮ ಪ್ರೀತಿಪರ ಚಿಂತೆ ಮತ್ತು ಅಕ್ಕರೆಯನ್ನು ತೋರಿಸಸಾಧ್ಯವಿದೆ. (1 ತಿಮೊಥೆಯ 5:4ನ್ನು ಹೋಲಿಸಿರಿ.) ಕಾರ್ಯಕ್ರಮದ ಪೂರ್ಣ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ, ಅವರು ಅನುಕೂಲಕರವಾದ ಸ್ಥಳದಲ್ಲಿ ಆರಾಮವಾಗಿ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ. ಅಂಥವರಿಗೆ ಸಹಾಯಹಸ್ತವನ್ನು ನೀಡಲು ವ್ಯಕ್ತಿಗತವಾಗಿ ಸಹೋದರ ಸಹೋದರಿಯರು ಸಂತೋಷದಿಂದ ಮುಂದೆಬಂದರೆ ಎಷ್ಟು ಚೆನ್ನಾಗಿರುವುದು! ಅವರಿಗೆ ಊಟಮಾಡಲು ಸಹಾಯಮಾಡುವುದು, ಕುಡಿಯಲು ನೀರನ್ನು ತಂದುಕೊಡುವುದು ಇಲ್ಲವೇ ಶೌಚಾಲಯಕ್ಕೆ ಕರೆದುಕೊಂಡು ಹೋಗಲು ಸಹಾಯಮಾಡುವುದು ಕೂಡ ಅದರಲ್ಲಿ ಒಳಗೂಡಿರಬಹುದು. ವೃದ್ಧರನ್ನು ಮತ್ತು ವಿಶೇಷ ಅಗತ್ಯಗಳಿರುವವರನ್ನು ನೋಡಿಕೊಳ್ಳುವ ಈ ಸುಯೋಗದಲ್ಲಿ ಅನೇಕರು ಪಾಲ್ಗೊಳ್ಳಬಹುದು. ಹೀಗೆ ಮಾಡುವ ಮೂಲಕ, ಸಾಮಾನ್ಯವಾಗಿ ಎಲ್ಲಾ ಸಮಯಗಳಲ್ಲಿ ಅಂಥವರನ್ನು ನೋಡಿಕೊಳ್ಳುವ ಸಂಬಂಧಿಕರು ಇಲ್ಲವೇ ಸಭೆಯ ಪ್ರಚಾರಕರು ಸೇರಿದಂತೆ ಎಲ್ಲರೂ ಕಾರ್ಯಕ್ರಮದಿಂದ ಪ್ರಯೋಜನವನ್ನು ಹೊಂದುವರು. ಈ ನಿರ್ದೇಶನಕ್ಕನುಸಾರ ಕ್ರಿಯೆಗೈಯುವುದರಿಂದ, ನಮ್ಮ ಕ್ರೈಸ್ತ ಸಹೋದರರಿಗಾಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಹಾಗೂ ತಾನು-ಮೊದಲು ಎಂಬ ಲೋಕದ ಮನೋಭಾವದಿಂದ ದೂರವಿರಲು ನಮಗೊಂದು ಅವಕಾಶವು ಸಿಗುತ್ತದೆ.—1 ಕೊರಿಂ. 10:24.
6 ಮುಕ್ತಾಯ: ನಿಮ್ಮ ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವ ಸಮಯವು ಹತ್ತಿರವಾದಂತೆ, ಕಾರ್ಯಕ್ರಮದಿಂದ ಸಂಪೂರ್ಣವಾಗಿ ಪ್ರಯೋಜನವನ್ನು ಪಡೆದುಕೊಳ್ಳಲು ಮತ್ತು ಮೂರು ದಿನಗಳ ಎಲ್ಲ ಸೆಷನ್ಗಳಿಗೂ ನೀವು ಹಾಜರಾಗಲು ಸಾಧ್ಯವಾಗಲಿ ಎಂಬ ಭಿನ್ನಹವನ್ನು ಪ್ರಾರ್ಥನೆಯಲ್ಲಿ ಯೆಹೋವನ ಮುಂದಿಡಿ. ರಜೆಗಾಗಿ ಸಾಕಷ್ಟು ಸಮಯದ ಮುಂಚೆಯೇ ವಿನಂತಿಸುವಂತೆ ನೋಡಿಕೊಳ್ಳಿ. ಜಿಲ್ಲಾ ಅಧಿವೇಶನಗಳು ನಡೆಯಲಿರುವ ತಾರೀಖುಗಳು ಪ್ರಕಟಿಸಲ್ಪಟ್ಟ ಕೂಡಲೆ ನೀವಿದನ್ನು ಮಾಡಬಹುದು. ಏಕೆಂದರೆ ಸಾಮಾನ್ಯವಾಗಿ ಕೊನೆ ಗಳಿಗೆಯಲ್ಲಿ ರಜೆಯನ್ನು ಕೇಳುವುದಾದರೆ ಅದು ಸಿಗಲಾರದು. ನಮ್ಮ ಆತ್ಮಿಕ ಉಪದೇಶಕ್ಕಾಗಿಯೂ ನಮ್ಮ ನಂಬಿಕೆಯನ್ನು ಕಟ್ಟುವುದಕ್ಕಾಗಿಯೂ, ನಂಬಿಗಸ್ತನೂ ವಿವೇಕಿಯೂ ಆದ ಆಳು “ದೇವರ ವಾಕ್ಯದ ಬೋಧಕರು” ಎಂಬ ಜಿಲ್ಲಾ ಅಧಿವೇಶನವನ್ನು ಈ ವರ್ಷಕ್ಕಾಗಿ ಏರ್ಪಾಡುಮಾಡಿದೆ. ಆದುದರಿಂದ, ‘ಸಮ್ಮೇಳವಾಗಿ ದೇವರನ್ನು ಕೊಂಡಾಡಿರಿ’ ಎಂಬ ಕೀರ್ತನೆಗಾರನ ಬುದ್ಧಿಮಾತನ್ನು ಅನುಸರಿಸುವ ಮೂಲಕ, ಕಾರ್ಯಕ್ರಮಕ್ಕೆ ಹಾಜರಿರಲು ಈಗಲೇ ನಿಮ್ಮ ಯೋಜನೆಗಳನ್ನು ಮಾಡಲಾರಂಭಿಸಿರಿ!—ಕೀರ್ತ. 68:26.
[ಪುಟ 3 ರಲ್ಲಿರುವ ಚೌಕ]
ಕಾರ್ಯಕ್ರಮದ ಸಮಯಗಳು
ಶುಕ್ರವಾರ ಮತ್ತು ಶನಿವಾರ
ಬೆಳಗ್ಗೆ 9:30 - ಸಾಯಂಕಾಲ 5:00
ಭಾನುವಾರ
ಬೆಳಗ್ಗೆ 9:30 - ಸಾಯಂಕಾಲ 4:00