“ದೇವರ ವಾಕ್ಯದ ಪ್ರಕಾರ ನಡೆಯುವವರು” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1 “ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.” (ಕೀರ್ತ. 35:18) ನಮ್ಮ ಅಧಿವೇಶನಗಳಲ್ಲಿ ದೈವಿಕ ಉಪದೇಶವನ್ನು ಪಡೆದುಕೊಳ್ಳಲಿಕ್ಕಾಗಿ, ಇಂದು ಸಾವಿರಗಟ್ಟಲೆ ಜನರು ವ್ಯವಸ್ಥಿತವಾದ ರೀತಿಯಲ್ಲಿ ಒಟ್ಟುಗೂಡಿಬರುವುದನ್ನು ದಾವೀದನು ನೋಡುತ್ತಿದ್ದಿದ್ದರೆ ಅವನೆಷ್ಟು ರೋಮಾಂಚನಗೊಳ್ಳುತ್ತಿದ್ದನು ಎಂಬುದನ್ನು ಊಹಿಸಿಕೊಳ್ಳಿರಿ! ಭಾರತದಲ್ಲಿ, 1999ರ ನವೆಂಬರ್ ತಿಂಗಳ ಮಧ್ಯಭಾಗದಿಂದ 2000ದ ಜನವರಿ ಆರಂಭದ ವರೆಗೆ “ದೇವರ ಪ್ರವಾದನ ವಾಕ್ಯ” ಎಂಬ 27 ಅಧಿವೇಶನಗಳು ನಡೆಸಲ್ಪಟ್ಟವು. ಈ ಅಧಿವೇಶನಗಳಿಗೆ ಹಾಜರಾದ 30,462 ಮಂದಿಯಲ್ಲಿ ನೀವೂ ಇದ್ದಿರೊ? ಈ ವರ್ಷದ ಕೊನೆಯಷ್ಟಕ್ಕೆ “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನಗಳು ಯೋಜಿಸಲ್ಪಟ್ಟಿವೆ. “ತಮ್ಮ ಆತ್ಮಿಕ ಆವಶ್ಯಕತೆಯ ಪ್ರಜ್ಞೆಯುಳ್ಳವರೂ” ‘ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕೇಳಿಸಿಕೊಳ್ಳಲು’ ಅತ್ಯಾಸಕ್ತಿಯುಳ್ಳವರೂ ಸಂತೋಷಭರಿತರೂ ಆಗಿರುವ ಯೆಹೋವನ ಜೊತೆ ಸ್ತುತಿಗಾರರೊಂದಿಗೆ ಒಟ್ಟುಗೂಡಿಬರುವ ಹೊಸ ಸಂದರ್ಭಗಳನ್ನು ಅವು ನಮಗೆ ಒದಗಿಸುವವು.—ಮತ್ತಾ. 5:3, NW; ಪ್ರಕ. 2:29.
2 ನಿಮ್ಮ ರೂಮಿಂಗ್ ಆವಶ್ಯಕತೆಗಳಿಗಾಗಿ: ಅಗತ್ಯವಿರುವ ಮಾಹಿತಿಯನ್ನು ನಿಮಗೆ ಒದಗಿಸಲಿಕ್ಕಾಗಿ ಮತ್ತು ಅಧಿವೇಶನ ನಡೆಯುವ ನಗರದಲ್ಲಿ ವಸತಿ ಸೌಕರ್ಯವನ್ನು ಪಡೆದುಕೊಳ್ಳುವಂತೆ ಸಹಾಯ ಮಾಡಲಿಕ್ಕಾಗಿ, ಪ್ರತಿ ಅಧಿವೇಶನದಲ್ಲಿ ಒಂದು ರೂಮಿಂಗ್ ಡಿಪಾರ್ಟ್ಮೆಂಟ್ ಇದೆ. ನಿಮ್ಮ ವಸತಿ ಸೌಕರ್ಯದ ಏರ್ಪಾಡುಗಳನ್ನು ಮಾಡುವ ವಿಷಯದಲ್ಲಿ ಸಾಕಷ್ಟು ಮುಂದಾಗಿಯೇ ಯೋಜಿಸಿರಿ. ನಿಮ್ಮ ಸಭೆಯ ಸೆಕ್ರಿಟರಿಯು ನಿಮಗೆ ಒಂದು ರೂಮ್ ರಿಕ್ವೆಸ್ಟ್ ಫಾರ್ಮ್ ಅನ್ನು ಕೊಡಬಲ್ಲನು. ನೀವು ಅದರಲ್ಲಿ ಅಗತ್ಯವಿರುವ ಮಾಹಿತಿಯನ್ನು ತುಂಬಿಸಿದ ಬಳಿಕ, ಆ ಫಾರ್ಮನ್ನು ನೀವು ನಿಮ್ಮ ಸಭೆಯ ಸೆಕ್ರಿಟರಿಗೆ ಕೊಡಬಹುದು ಮತ್ತು ನೀವು ಯಾವ ಅಧಿವೇಶನಕ್ಕೆ ಹಾಜರಾಗುತ್ತೀರೋ ಆ ಅಧಿವೇಶನ ಕಾರ್ಯಾಲಯಕ್ಕೆ ಅವನು ಅದನ್ನು ಕಳುಹಿಸುವನು. ನಿಮ್ಮ ರೂಮಿಂಗ್ ವಿನಂತಿಯನ್ನು ಕಳುಹಿಸುವಾಗ, ಸ್ಟ್ಯಾಂಪ್ ಹಚ್ಚಲ್ಪಟ್ಟಿದ್ದು, ನಿಮ್ಮ ವಿಳಾಸವಿರುವ ಒಂದು ಲಕೋಟೆಯನ್ನು ಸಹ ಅದರೊಂದಿಗೆ ಸೇರಿಸಿರಿ. ಒಂದಕ್ಕಿಂತಲೂ ಹೆಚ್ಚು ಅಧಿವೇಶನಗಳು ಒಂದೇ ನಗರದಲ್ಲಿ ನಡೆಸಲ್ಪಡುವಲ್ಲಿ, ನೀವು ಹಾಜರಾಗಲಿರುವ ಅಧಿವೇಶನದ ತಾರೀಖುಗಳನ್ನು ಸೂಚಿಸಲು ಮರೆಯದಿರಿ.
3 ವೃದ್ಧರ ಹಾಗೂ ವಿಶೇಷ ಆವಶ್ಯಕತೆಗಳುಳ್ಳವರ ಆರೈಕೆಮಾಡುವುದು: ವೃದ್ಧರು, ನಿರ್ಬಲರು, ಮತ್ತು ವಿಶೇಷ ಆವಶ್ಯಕತೆಗಳುಳ್ಳ ಇತರರ ಅಶಕ್ತ ಸ್ಥಿತಿಗತಿಗಳ ಬಗ್ಗೆ ಗೊತ್ತಿರುವ ಅವರ ಸಂಬಂಧಿಕರು, ಹಿರಿಯರು, ಮತ್ತು ಇನ್ನಿತರರು, ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಇಂಥವರಿಗೆ ಸಹಾಯ ಮಾಡುವ ಮೂಲಕ ತಮ್ಮ ಪ್ರೀತಿಪರ ಚಿಂತೆಯನ್ನು ಹಾಗೂ ಕಾಳಜಿಯನ್ನು ತೋರಿಸಸಾಧ್ಯವಿದೆ. (1 ತಿಮೊಥೆಯ 5:4ನ್ನು ಹೋಲಿಸಿರಿ.) ಅವರು ಕಾರ್ಯಕ್ರಮದಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿರುವಂತಹ ಅನುಕೂಲಕರವಾದ ಸ್ಥಳದಲ್ಲಿ ಆರಾಮವಾಗಿ ಕುಳಿತುಕೊಂಡಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿರಿ. ಇಂಥವರಿಗೆ ಸಹಾಯ ಮಾಡಲಿಕ್ಕಾಗಿ ವ್ಯಕ್ತಿಗತವಾಗಿ ಸಹೋದರ ಸಹೋದರಿಯರು ತಮ್ಮ ಸಹಾಯಹಸ್ತವನ್ನು ನೀಡಿದರೆ ಎಷ್ಟು ಒಳ್ಳೇದು! ಅವರು ಊಟಮಾಡುವಂತೆ ಸಹಾಯ ಮಾಡುವುದು, ಕುಡಿಯಲಿಕ್ಕಾಗಿ ನೀರನ್ನು ತಂದುಕೊಡುವುದು ಅಥವಾ ಅವರನ್ನು ಶೌಚಾಲಯಕ್ಕೆ ಕರೆದುಕೊಂಡುಹೋಗುವಂತಹ ಕೆಲಸಗಳು ಇದರಲ್ಲಿ ಒಳಗೂಡಿರಬಹುದು. ವೃದ್ಧರನ್ನು ಅಥವಾ ವಿಶೇಷ ಆವಶ್ಯಕತೆಗಳುಳ್ಳವರನ್ನು ನೋಡಿಕೊಳ್ಳುವ ಈ ಸುಯೋಗದಲ್ಲಿ ಅನೇಕರು ಪಾಲ್ಗೊಳ್ಳುವ ಮೂಲಕ, ಅಂಥವರ ಆರೈಕೆಯನ್ನು ಸಾಮಾನ್ಯವಾಗಿ ಎಲ್ಲ ಸಮಯಗಳಲ್ಲಿ ಮಾಡುವಂತಹ ಅವರ ಸಂಬಂಧಿಕರು ಇಲ್ಲವೆ ಸಭಾ ಪ್ರಚಾರಕರನ್ನು ಒಳಗೊಂಡು ಎಲ್ಲರೂ ಕಾರ್ಯಕ್ರಮದಿಂದ ಪ್ರಯೋಜನವನ್ನು ಪಡೆದುಕೊಳ್ಳುವರು.
4 ಮೂರು ದಿನಗಳೂ ಹಾಜರಿರಲು ಏರ್ಪಾಡನ್ನು ಮಾಡಿರಿ: ನೀವು ಆತ್ಮಿಕ ವಿಷಯಗಳಿಗೆ ಗಮನ ಕೊಡದಂತೆ ಮಾಡಲು ಸೈತಾನನು ಪ್ರಯತ್ನಿಸಿದ್ದಾನೋ? ಅನೇಕ ಸಹೋದರ ಸಹೋದರಿಯರು ಮತ್ತು ಅವರ ಕುಟುಂಬಗಳು, ಅತ್ಯಾವಶ್ಯಕವಾಗಿರುವ ಆತ್ಮಿಕ ಆಹಾರವನ್ನು ಪಡೆದುಕೊಳ್ಳುವ ಸದವಕಾಶವನ್ನು ಕಳೆದುಕೊಳ್ಳುತ್ತಿವೆ ಎಂಬುದು ದುಃಖಕರ ಸಂಗತಿಯಾಗಿದೆ. ಹೇಗೆ? ಜಿಲ್ಲಾ ಅಧಿವೇಶನದ ಶುಕ್ರವಾರದ ಕಾರ್ಯಕ್ರಮಗಳಿಗೆ ಹಾಜರಾಗದಿರುವ ಮೂಲಕವೇ. ಕೆಲವು ಸಂದರ್ಭಗಳಲ್ಲಿ, ನಮ್ಮ ಸಹೋದರರಲ್ಲಿ ಹೆಚ್ಚಿನವರು ಶುಕ್ರವಾರದ ಕಾರ್ಯಕ್ರಮವು ಒದಗಿಸುವಂತಹ ಆತ್ಮಿಕ ಉಪದೇಶ ಹಾಗೂ ಸಹವಾಸವನ್ನು ಪಡೆದುಕೊಳ್ಳುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ.
5 ಅಧಿವೇಶನಕ್ಕೆ ಹೋಗಲು ಅಗತ್ಯವಿರುವಂತಹ ರಜೆಯನ್ನು ವಿನಂತಿಸಲಿಕ್ಕಾಗಿ ತಮ್ಮ ಧಣಿಗಳ ಬಳಿಗೆ ಹೋಗಲು ಕೆಲವು ಸಹೋದರರು ಹಿಂಜರಿಯುತ್ತಿರುವ ಸಾಧ್ಯತೆಯಿದೆ. ನಿಮ್ಮ ಸನ್ನಿವೇಶವೂ ಇದೇ ಆಗಿದೆಯೊ? ಈ ವಿಚಾರದ ಕುರಿತು ನೀವು ಯೆಹೋವನಿಗೆ ಪ್ರಾರ್ಥಿಸಿ, ನಿಮ್ಮ ಸನ್ನಿವೇಶದ ಬಗ್ಗೆ ನಿಮ್ಮ ಧಣಿಗೆ ವಿವರಿಸಲು ನೀವು ಏಕೆ ಧೈರ್ಯಮಾಡಬಾರದು? ಇದೇ ರೀತಿಯ ಸನ್ನಿವೇಶದಲ್ಲಿದ್ದಾಗ ನೆಹೆಮೀಯನಿಗೆ ದೊರಕಿದ ಸಕಾರಾತ್ಮಕ ಫಲಿತಾಂಶವನ್ನು ಜ್ಞಾಪಿಸಿಕೊಳ್ಳಿರಿ. (ನೆಹೆ. 2:1-6) ನೀವು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುವುದಾದರೆ, ಜೀವಿತದ ಆವಶ್ಯಕತೆಗಳನ್ನು ಆತನು ಒದಗಿಸುವನು ಎಂಬುದನ್ನು ಅರಿತುಕೊಂಡವರಾಗಿ, ನಿಮಗೆ ಸಹಾಯ ಮಾಡಲು ನಮ್ಮ ಸ್ವರ್ಗೀಯ ತಂದೆಗಿರುವ ಸಿದ್ಧಮನಸ್ಸಿನಲ್ಲಿ ನಂಬಿಕೆಯಿಡಿರಿ.—ಮತ್ತಾ. 6:32ಬಿ, 33.
6 ನಮ್ಮ ಅಧಿವೇಶನಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತವೆ? ಪೂರ್ವ ಅಮೆರಿಕದ ಒಬ್ಬ ಸಹೋದರಿಯು ಬರೆದದ್ದು: “1999ರ ಜಿಲ್ಲಾ ಅಧಿವೇಶನಕ್ಕಾಗಿ ನಿಮಗೆ ತುಂಬ ಉಪಕಾರ. ವರ್ಷಕ್ಕೆ ಒಮ್ಮೆ ಮಾತ್ರ ನಾನು ಭೇಟಿಯಾಗುವಂತಹ ಸಹೋದರರೊಂದಿಗೆ ಸಹವಾಸಮಾಡುವುದು ನನಗೆ ಅತ್ಯಾನಂದವನ್ನು ಉಂಟುಮಾಡುತ್ತದೆ. ಹದಿಪ್ರಾಯದ ಗರ್ಭಿಣಿಯಾಗಿದ್ದಾಗ ನನಗೆ ಸತ್ಯದ ಪರಿಚಯವಾಯಿತು, ಮತ್ತು ನನ್ನೊಂದಿಗೆ ಬೈಬಲ್ ಅಭ್ಯಾಸಮಾಡುತ್ತಿದ್ದ ವ್ಯಕ್ತಿಯು ನನ್ನನ್ನು ಮೊದಲ ಅಧಿವೇಶನಕ್ಕೆ ಕರೆದುಕೊಂಡುಹೋದಾಗ ನನಗಾದ ಅನುಭವವನ್ನು ಈಗಲೂ ನಾನು ತುಂಬ ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತೇನೆ. ‘ಸಹಸ್ರಾರು ಸಹೋದರರು’ ಎಂಬ ರಾಜ್ಯ ಗೀತವನ್ನು ಹಾಡುತ್ತಿದ್ದಾಗ, ಆ ಕ್ರೀಡಾಂಗಣದಲ್ಲಿ ನಾನು ಆಕಾಶದಲ್ಲಿದ್ದ ಮೋಡಗಳ ಕಡೆಗೆ ನೋಡಿ, ತುಂಬ ಅತ್ತುಬಿಟ್ಟೆ. ‘ತುಂಬ ಒಳ್ಳೆಯವರಾಗಿರುವ ಇಷ್ಟೊಂದು ಜನರು ನನ್ನ ಸುತ್ತಲೂ ಇರುವಾಗ, ಯೆಹೋವನು ಹೇಗೆ ನನ್ನನ್ನು ಆರಿಸಿಕೊಂಡನು?’ ಎಂದು ನಾನು ನನ್ನಷ್ಟಕ್ಕೇ ಪ್ರಶ್ನಿಸಿಕೊಂಡೆ. ಅದೇ ದಿನ ನಾನು ಪೂರ್ಣವಾಗಿ ಯೆಹೋವನ ಸೇವೆಮಾಡುವ ನಿರ್ಧಾರಮಾಡಿದೆ.” ಎಷ್ಟು ಹೃದಯಸ್ಪರ್ಶಿ ಅನುಭವ! ಯೆಹೋವನ ಶುದ್ಧ ಜನರೊಂದಿಗೆ ಸಹವಾಸಿಸುವುದು ಖಂಡಿತವಾಗಿಯೂ ಹರ್ಷದಾಯಕವಾಗಿದೆ, ಅಲ್ಲವೆ?
7 ಕಡೇ ದಿವಸಗಳ ಅಂತ್ಯಭಾಗದಲ್ಲಿ ಜೀವಿಸುತ್ತಿರುವ ನಮಗೆ, ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಮಗೆ ಈ ವಾರ್ಷಿಕ ಜಿಲ್ಲಾ ಅಧಿವೇಶನಗಳ ಅಗತ್ಯವಿದೆ. ಇದು ನಮ್ಮ ಆತ್ಮಿಕ ಆರೋಗ್ಯ ಮತ್ತು ಸಮತೂಕವನ್ನು ಕಾಪಾಡಿಕೊಳ್ಳಲಿಕ್ಕಾಗಿ ಯೆಹೋವನಿಂದ ಮಾಡಲ್ಪಟ್ಟ ಒಂದು ಒದಗಿಸುವಿಕೆಯಾಗಿದೆ. ಆದುದರಿಂದ, “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಈ ವರ್ಷದ ಜಿಲ್ಲಾ ಅಧಿವೇಶನಕ್ಕೆ ಮೂರು ದಿನಗಳೂ ಹಾಜರಾಗಲಿಕ್ಕಾಗಿ ದೃಢನಿರ್ಧಾರವನ್ನು ಮಾಡಿರಿ. ನಿಮ್ಮ ದೃಢನಿರ್ಧಾರವನ್ನು ನೀವು ಹೇಗೆ ಕಾರ್ಯರೂಪಕ್ಕೆ ಹಾಕಬಲ್ಲಿರಿ? ಇಡೀ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಕೆಲಸದಿಂದ ರಜೆಯನ್ನು ಕೊಡುವಂತೆ ಮುಂಚಿತವಾಗಿಯೇ ನಿಮ್ಮ ಧಣಿಯ ಬಳಿ ವಿನಂತಿಸಿಕೊಳ್ಳಿರಿ. ನಿಮಗೆ ಹಣಕಾಸಿನ ತೊಂದರೆಯಿರುವಲ್ಲಿ, ಹಾಜರಾಗಲು ಅಗತ್ಯವಿರುವ ಹಣವನ್ನು ಈಗಿನಿಂದಲೇ ಬದಿಗಿರಿಸಲು ಪ್ರಾರಂಭಿಸಿರಿ. ಯಾವುದೇ ತಡೆಯನ್ನು ಜಯಿಸಲಿಕ್ಕಾಗಿ ನಿಮಗೆ ಸಹಾಯ ಮಾಡುವಂತೆ ಯೆಹೋವನ ಬಳಿ ಕೇಳಿಕೊಳ್ಳಿರಿ. ನೀವು ಹಾಗೆ ಮಾಡುವಾಗ, ನಿಮ್ಮ ಸಹೋದರ ಸಹೋದರಿಯರ ಪ್ರೀತಿಪರ ಸಹವಾಸದಲ್ಲಿ ಆನಂದಿಸಲು ಹಾಗೂ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಂದ ಬರುವ ನಿತ್ಯಜೀವದ ವಾಕ್ಯಗಳನ್ನು ಕೇಳಿಸಿಕೊಳ್ಳಲು ನೀವು ಮುನ್ನೋಡಸಾಧ್ಯವಿದೆ.—ಯೋಹಾನ 6:68ನ್ನು ಹೋಲಿಸಿರಿ.
[ಪುಟ 3 ರಲ್ಲಿರುವ ಚೌಕ]
ಕಾರ್ಯಕ್ರಮದ ಸಮಯಗಳು
ಶುಕ್ರವಾರ ಮತ್ತು ಶನಿವಾರ
ಬೆಳಗ್ಗೆ 9:30 - ಸಾಯಂಕಾಲ 5:00
ಭಾನುವಾರ
ಬೆಳಗ್ಗೆ 9:30 - ಸಾಯಂಕಾಲ 4:00