ನಿಮ್ಮ ಆತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳಿ
1 ನಮ್ಮ ಮುಂಬರುತ್ತಿರುವ “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನವು, ನಮ್ಮ ಆತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳಲಿಕ್ಕಾಗಿ ಒಂದು ಅತ್ಯುತ್ತಮವಾದ ಸಂದರ್ಭವನ್ನು ಕೊಡುತ್ತದೆ. ಆರೋಗ್ಯಕರವಾದ ಒಂದು ಶಾರೀರಿಕ ಊಟದಂತೆ, ಈ ಕಾರ್ಯಕ್ರಮವು ಆತ್ಮಿಕವಾಗಿ ನಮ್ಮನ್ನು “ನಂಬಿಕೆಯ . . . ವಾಕ್ಯಗಳಲ್ಲಿ” ಖಂಡಿತವಾಗಿಯೂ ಪುಷ್ಟಿಗೊಳಿಸುವುದು. (1 ತಿಮೊ. 4:6) ನಾವು ಯೆಹೋವನ ಹತ್ತಿರಕ್ಕೆ ಬರುವಂತೆ ಅದು ನಮ್ಮನ್ನು ಶಕ್ತಗೊಳಿಸುವುದು. ಮತ್ತು ನಮ್ಮ ಜೀವಿತಗಳಲ್ಲಿ ಬರುವಂಥ ಪರೀಕ್ಷೆಗಳನ್ನು ನಿಭಾಯಿಸಲು ಸಹಾಯಮಾಡಲಿಕ್ಕಾಗಿ ಬುದ್ಧಿವಾದ ಹಾಗೂ ಪ್ರೋತ್ಸಾಹವನ್ನು ಅಲ್ಲಿ ಪಡೆದುಕೊಳ್ಳುವಂತೆ ನಾವು ನಿರೀಕ್ಷಿಸಬಹುದು. ಯೆಹೋವನು ನಮಗೆ ಆಶ್ವಾಸನೆ ನೀಡುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” (ಕೀರ್ತ. 32:8) ಜೀವನದಲ್ಲಿ ಆತನ ಪ್ರೀತಿಪರ ಮಾರ್ಗದರ್ಶನವನ್ನು ಹೊಂದಿರಲು ನಾವೆಷ್ಟು ಆಶೀರ್ವದಿತರಾಗಿದ್ದೇವೆ! ಅಧಿವೇಶನ ಕಾರ್ಯಕ್ರಮದಿಂದ ಅತ್ಯಧಿಕವಾದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ತೆಗೆದುಕೊಳ್ಳಬೇಕಾದ ಕೆಲವು ಪ್ರಾಯೋಗಿಕ ಹೆಜ್ಜೆಗಳನ್ನು ಪರಿಗಣಿಸೋಣ.
2 ನಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ: ನಮ್ಮಲ್ಲಿ ಪ್ರತಿಯೊಬ್ಬನಿಗೂ ತನ್ನ ಸಾಂಕೇತಿಕ ಹೃದಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯಿದೆ. (ಜ್ಞಾನೋ. 4:23) ಇದು ಸ್ವಶಿಸ್ತನ್ನು ಪಾಲಿಸುವುದನ್ನು ಮತ್ತು ನಮ್ಮ ಆಂತರಿಕ ಅನಿಸಿಕೆಗಳ ಕುರಿತು ನಾವು ಪ್ರಾಮಾಣಿಕರಾಗಿರುವುದನ್ನು ಅಗತ್ಯಪಡಿಸುತ್ತದೆ. ಅಧಿವೇಶನವು ಯೆಹೋವನೊಂದಿಗಿನ ನಮ್ಮ ಸಂಬಂಧದ ವಿಷಯದಲ್ಲಿ ಮನನಮಾಡುವ ಸಮಯ, ‘ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡುವ’ ಸಮಯವಾಗಿದೆ. ‘ವಾಕ್ಯವು ಬೇರೂರುವಂತೆ’ ನಮ್ಮ ಹೃದಯವನ್ನು ಸಿದ್ಧಪಡಿಸಲಿಕ್ಕಾಗಿ, ನಮ್ಮನ್ನು ಪರಿಶೋಧಿಸಿ ನೋಡುವಂತೆ, ನಮ್ಮಲ್ಲಿ ತಿದ್ದುಪಾಟನ್ನು ಅಗತ್ಯಪಡಿಸುವ ಯಾವುದೇ “ಕೇಡಿನ ಮಾರ್ಗ”ವನ್ನು ಗುರುತಿಸುವಂತೆ, ಮತ್ತು ನಮ್ಮನ್ನು “ಸನಾತನಮಾರ್ಗದಲ್ಲಿ” ನಡೆಸುವಂತೆ ನಾವು ಯೆಹೋವನ ಬಳಿ ಬೇಡಿಕೊಳ್ಳಬೇಕು.—ಯಾಕೋ. 1:21, 25; ಕೀರ್ತ. 139:23, 24.
3 ಕಿವಿಗೊಡಿರಿ ಮತ್ತು ಮನನಮಾಡಿರಿ: ತನ್ನ ಮಾತುಗಳಿಗೆ ಏಕಾಗ್ರ ಗಮನವನ್ನು ಕೊಟ್ಟದ್ದಕ್ಕಾಗಿ ಯೇಸು ಮರಿಯಳನ್ನು ಶ್ಲಾಘಿಸುತ್ತಾ, “ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ” ಎಂದು ಹೇಳಿದನು. (ಲೂಕ 10:39, 42) ನಮಗೂ ತದ್ರೀತಿಯ ಮಾನಸಿಕ ಪ್ರವೃತ್ತಿ ಇರುವುದಾದರೆ, ಕ್ಷುಲ್ಲಕವಾದ ವಿಷಯಗಳು ನಮ್ಮನ್ನು ಅಪಕರ್ಷಿಸುವಂತೆ ನಾವು ಬಿಡೆವು. ನಾವು ನಮ್ಮ ಆಸನಗಳಲ್ಲಿ ಕುಳಿತಿದ್ದು ಇಡೀ ಕಾರ್ಯಕ್ರಮವನ್ನು ಗಮನಕೊಟ್ಟು ಕಿವಿಗೊಡುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವೆವು. ನಾವು ಅನಾವಶ್ಯಕವಾಗಿ ಮಾತಾಡದಿರುವೆವು ಮತ್ತು ಆಚೀಚೆ ಓಡಾಡದಿರುವೆವು, ಹಾಗೂ ಇತರರನ್ನು ನಮ್ಮ ಸೆಲ್ಯುಲರ್ ಫೋನ್ಗಳು, ಪೇಜರ್ಗಳು, ಕ್ಯಾಮರಗಳು ಹಾಗೂ ಕ್ಯಾಮ್ಕಾರ್ಡರ್ಗಳಿಂದ ಅಪಕರ್ಷಿಸದಂತೆ ಎಚ್ಚರ ವಹಿಸುವೆವು.
4 ನಾವು ಭಾಷಣಗಳಿಗೆ ಕಿವಿಗೊಡುವಾಗ, ವಿಷಯವಸ್ತು ಹೇಗೆ ವಿಕಸಿಸಲ್ಪಡುತ್ತದೆ ಎಂಬುದನ್ನು ಪರಿಶೀಲಿಸಿ ನೋಡಲಿಕ್ಕಾಗಿ ಚುಟುಕಾದ ಟಿಪ್ಪಣಿಗಳನ್ನು ಬರೆದುಕೊಳ್ಳುವುದು ಉತ್ತಮ. ನಾವು ಏನನ್ನು ಕೇಳಿಸಿಕೊಳ್ಳುತ್ತಿದ್ದೇವೋ ಅದನ್ನು, ನಾವು ಈಗಾಗಲೇ ಏನನ್ನು ಅರಿತಿದ್ದೇವೋ ಅದರೊಂದಿಗೆ ಜೋಡಿಸಬೇಕು. ಇದು ನಾವು ವಿಷಯವನ್ನು ಅರ್ಥಮಾಡಿಕೊಳ್ಳಲು ಮತ್ತು ಮನಸ್ಸಿನಲ್ಲಿಟ್ಟುಕೊಳ್ಳಲು ಸಹಾಯಮಾಡುವುದು. ನಾವು ಟಿಪ್ಪಣಿಗಳನ್ನು ಪುನಃ ಪರಿಶೀಲಿಸುವಾಗ, ವಿಷಯಭಾಗವನ್ನು ಅನ್ವಯಿಸಿಕೊಳ್ಳುವ ಉದ್ದೇಶದೊಂದಿಗೆ ಹಾಗೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬನು ಹೀಗೆ ಕೇಳಿಕೊಳ್ಳುವುದು ಸೂಕ್ತ: ‘ಯೆಹೋವನೊಂದಿಗಿನ ನನ್ನ ಸಂಬಂಧವನ್ನು ಇದು ಹೇಗೆ ಬಾಧಿಸುತ್ತದೆ? ನನ್ನ ಜೀವನದಲ್ಲಿ ನಾನು ಯಾವ ಹೊಂದಾಣಿಕೆಗಳನ್ನು ಮಾಡಬೇಕಾಗಿದೆ? ನಾನು ಈ ಮಾರ್ಗದರ್ಶನವನ್ನು ಇತರರೊಂದಿಗಿನ ನನ್ನ ವ್ಯವಹಾರದಲ್ಲಿ ಹೇಗೆ ಉಪಯೋಗಿಸಬಲ್ಲೆ? ಇದನ್ನು ನನ್ನ ಶುಶ್ರೂಷೆಯಲ್ಲಿ ಹೇಗೆ ಉಪಯೋಗಿಸುವೆ?’ ನಾವು ವಿಶೇಷವಾಗಿ ಆನಂದಿಸಿರುವ ಅಂಶಗಳ ಕುರಿತು ಇತರರೊಂದಿಗೆ ಚರ್ಚಿಸಿರಿ. ಇವುಗಳನ್ನು ಮಾಡುವುದು, ಯೆಹೋವನ ನುಡಿಗಳನ್ನು ‘ನಮ್ಮ ಹೃದಯದೊಳಗೆ’ ಇಟ್ಟುಕೊಳ್ಳುವಂತೆ ನಮಗೆ ಸಹಾಯಮಾಡುವುದು.—ಜ್ಞಾನೋ. 4:20, 21.
5 ನಾವು ಕಲಿತುಕೊಳ್ಳುವ ವಿಷಯಗಳನ್ನು ಅನ್ವಯಿಸೋಣ: ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದ ನಂತರ ಒಬ್ಬ ಪ್ರತಿನಿಧಿಯು ಹೇಳಿದ್ದು: “ಕಾರ್ಯಕ್ರಮವು ವೈಯಕ್ತಿಕವಾಗಿ ಮನಮುಟ್ಟುವಂಥದ್ದಾಗಿತ್ತು. ಅದು ಒಬ್ಬ ವ್ಯಕ್ತಿಯು ತನ್ನ ಮತ್ತು ತನ್ನ ಕುಟುಂಬದ ಹೃದಯದ ಸ್ಥಿತಿಯನ್ನು ಪರಿಶೋಧಿಸಿ ನೋಡುವಂತೆ, ಮತ್ತು ಅಗತ್ಯಕ್ಕನುಸಾರ ಪ್ರೀತಿಪರ ಶಾಸ್ತ್ರೀಯ ಸಹಾಯವನ್ನು ನೀಡುವಂತೆ ಪ್ರಚೋದಿಸಿತು. ಇದು ನಾನು ಸಭೆಗೆ ಇನ್ನೂ ಹೆಚ್ಚಿನ ನೆರವನ್ನು ಕೊಡುವ ನನ್ನ ಹೊಣೆಗಾರಿಕೆಯ ವಿಷಯದಲ್ಲಿ ಹೆಚ್ಚು ಪ್ರಜ್ಞೆಯುಳ್ಳವನಾಗಿರುವಂತೆ ಮಾಡಿದೆ.” ವಾಸ್ತವದಲ್ಲಿ ನಮ್ಮಲ್ಲೂ ಅನೇಕರಿಗೆ ಅದೇ ಅನಿಸಿಕೆಯಾಗಿರಬಹುದು. ಆದರೆ ಕೇವಲ ಉತ್ತೇಜಿಸಲ್ಪಟ್ಟವರಾಗಿ ಮತ್ತು ಚೈತನ್ಯಗೊಳಿಸಲ್ಪಟ್ಟವರಾಗಿ ಹಿಂದೆರಳುವುದು ಸಾಕಾಗುವುದಿಲ್ಲ. ಯೇಸು ಹೇಳಿದ್ದು: “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.” (ಓರೆ ಅಕ್ಷರಗಳು ನಮ್ಮವು.) (ಯೋಹಾ. 13:17) ನಮಗೆ ವೈಯಕ್ತಿಕವಾಗಿ ಅನ್ವಯವಾಗುವ ಅಂಶಗಳನ್ನು ನಾವು ಶ್ರದ್ಧೆಯಿಂದ ಕಾರ್ಯರೂಪಕ್ಕೆ ಹಾಕಬೇಕು. (ಫಿಲಿ. 4:9) ನಮ್ಮ ಆತ್ಮಿಕ ಅಗತ್ಯವನ್ನು ಸಂಪೂರ್ಣವಾಗಿ ಪೂರೈಸಿಕೊಳ್ಳುವ ಕೀಲಿ ಕೈ ಇದೇ ಆಗಿದೆ.
[ಪುಟ 5 ರಲ್ಲಿರುವ ಚೌಕ]
ನೀವು ಕೇಳಿಸಿಕೊಳ್ಳುವ ವಿಷಯಗಳ ಕುರಿತು ಮನನಮಾಡಿರಿ:
■ ಯೆಹೋವನೊಂದಿಗಿನ ನನ್ನ ಸಂಬಂಧವನ್ನು ಇದು ಹೇಗೆ ಬಾಧಿಸುತ್ತದೆ?
■ ಇತರರೊಂದಿಗಿನ ನನ್ನ ವ್ಯವಹಾರಗಳನ್ನು ಇದು ಹೇಗೆ ಪ್ರಭಾವಿಸುತ್ತದೆ?
■ ನಾನಿದನ್ನು ನನ್ನ ಜೀವನದಲ್ಲಿ ಮತ್ತು ಶುಶ್ರೂಷೆಯಲ್ಲಿ ಹೇಗೆ ಅನ್ವಯಿಸಬಲ್ಲೆ?