ಶುದ್ಧತೆಯು ಯೆಹೋವನಿಗೆ ಮಹಿಮೆಯನ್ನು ತರುತ್ತದೆ
1 “ಎಲ್ಲ ಪುರುಷರು ಶುದ್ಧರಾಗಿದ್ದಾರೆ ಮತ್ತು ಟೈಗಳನ್ನು ಕಟ್ಟಿಕೊಂಡಿರುತ್ತಾರೆ. ಸ್ತ್ರೀಯರು ಸಭ್ಯ ರೀತಿಯಲ್ಲಿ ಆದರೂ ಸೊಗಸಾಗಿ ಬಟ್ಟೆ ಧರಿಸುತ್ತಾರೆ.” ಒಬ್ಬ ಸೆಕ್ಯೂರಿಟಿ ಗಾರ್ಡ್ ಆಗಿರುವ ಇನ್ನೊಬ್ಬ ಪ್ರೇಕ್ಷಕನು ಹೇಳಿದ್ದು: “ಅವರು ಸುನಡತೆಯುಳ್ಳ, ಮರ್ಯಾದೆಯುಳ್ಳ, ಶುದ್ಧ, ಮತ್ತು ಅಚ್ಚುಕಟ್ಟಾದ ಜನರಾಗಿದ್ದಾರೆ. ನಾನು ನೋಡುವಂಥದ್ದು ಮನೋಹರವಾದದ್ದಾಗಿದೆ. ಈ ಕೊಳಕಾದ ಲೋಕದಲ್ಲಿ, ನೀವು ಕೊಳಕನ್ನು ತೆಗೆದುಹಾಕಲು ಶಕ್ತರಾಗಿದ್ದೀರಿ.” ಈ ಮಾತುಗಳು ಯಾವ ರೀತಿಯ ಗುಂಪನ್ನು ವರ್ಣಿಸುತ್ತಿದ್ದವು? ಒಂದು ರಾಜಕೀಯ ಒಕ್ಕೂಟವನ್ನೋ? ಒಂದು ಕ್ರಿಕೆಟ್ ಪಂದ್ಯವನ್ನೋ? ಒಂದು ಮದುವೆ ಸಮಾರಂಭವನ್ನೋ? ಖಂಡಿತವಾಗಿಯೂ ಅಲ್ಲ. ಕಳೆದ ವರ್ಷ ನಡೆದ ಒಂದು ದೊಡ್ಡ ಜಿಲ್ಲಾ ಅಧಿವೇಶನದಲ್ಲಿದ್ದ ಸಹೋದರ ಸಹೋದರಿಯರ ಒಂದು ಗುಂಪನ್ನು ಅದು ವರ್ಣಿಸುತ್ತಿತ್ತು.
2 ನಮ್ಮ ಬಗ್ಗೆ ಎಂತಹ ಉತ್ತಮವಾದ ಸಾಕ್ಷ್ಯಗಳು! ನಮ್ಮ ಸಹೋದರತ್ವದ ಬಗ್ಗೆ ಇಷ್ಟು ಉತ್ತಮವಾದ ಮಾತುಗಳನ್ನು ಹೇಳಸಾಧ್ಯವಿದೆ ಎಂಬದರ ಕುರಿತು ನಾವು ಸಂತೋಷಿತರಾಗಿಲ್ಲವೋ? ವಾಸ್ತವದಲ್ಲಿ, ಸ್ಟೇಡಿಯಂ ಅನ್ನು ಸಿದ್ಧಪಡಿಸುವುದರಲ್ಲಿ ಅವರು ಮಾಡಿದ ಕೆಲಸ ಮತ್ತು ಅವರ ಆದರ್ಶಪ್ರಾಯ ನಡವಳಿಕೆಯ ಮೂಲಕ ಈ ಒಳ್ಳೇ ವರದಿಗಳು ಕೊಡಲ್ಪಡಲು ಕಾರಣರಾಗಿದ್ದವರಲ್ಲಿ ಗುಂಪಿನಲ್ಲಿರುವ ಎಲ್ಲರಿಗೂ ಪಾಲಿತ್ತು. ನಾವು ನಮ್ಮನ್ನು ನಡೆಸಿಕೊಳ್ಳುವ ವಿಧದಿಂದ, ನಾವು ಸ್ಪಷ್ಟವಾಗಿ ಭಿನ್ನರಾಗಿದ್ದೇವೆಂದು ಲೋಕವ್ಯಾಪಕವಾಗಿ ಪ್ರಖ್ಯಾತರಾಗಿದ್ದೇವೆ. (ಮಲಾ. 3:18) ಏಕೆ? ಏಕೆಂದರೆ, “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂಬ ಯೆಹೋವನ ಆಜ್ಞೆಯನ್ನು ನಾವು ಪಾಲಿಸುತ್ತೇವೆ.—1 ಪೇತ್ರ 1:16.
3 “ಅಪರಿಶುದ್ಧ”ವಾದದ್ದನ್ನು ಪರಿಶುದ್ಧಗೊಳಿಸುವುದೇ? ಅಧಿವೇಶನಗಳಿಗಾಗಿ ಉಪಯೋಗಿಸಲು ನಾವು ಬಾಡಿಗೆಗೆ ತೆಗೆದುಕೊಳ್ಳುವ ಸೌಕರ್ಯಗಳು, ಸಾಮಾನ್ಯವಾಗಿ ಹಲವಾರು ವರ್ಷಗಳ ಸಾರ್ವಜನಿಕ ದುರುಪಯೋಗ, ವಿಧ್ವಂಸಕತೆ, ಗಲೀಜುಮಾಡುವಿಕೆ, ಮತ್ತು ಇತರ ರೀತಿಯ ಅವನತಿಗೆ ತುತ್ತಾಗಿರುತ್ತವೆ. ಶೌಚಾಲಯಗಳು, ನೇಪಥ್ಯಗಳು (ಗ್ರೀನ್ ರೂಮ್ಸ್), ಮತ್ತು ಜೊತೆಯಲ್ಲಿರುವ ಸೌಕರ್ಯಗಳು ನಮ್ಮ ಪರಿಶುದ್ಧ ದೇವರ ಮಟ್ಟಕ್ಕಿಂತಲೂ ತೀರ ಕೆಳಮಟ್ಟದಲ್ಲಿವೆ. ಅವು ಈ ಪ್ರಪಂಚದ “ಅಪರಿಶುದ್ಧ” ದೇವರನ್ನು ಚೆನ್ನಾಗಿಯೇ ಪ್ರತಿಬಿಂಬಿಸುತ್ತವೆ. (2 ಕೊರಿಂ. 4:4) ಇದನ್ನು ಬದಲಾಯಿಸಲು ನಾವೇನು ಮಾಡಬಲ್ಲೆವು?
4 ಕಾರ್ಯಕ್ರಮವು ಪ್ರಾರಂಭವಾಗುವ ಎರಡು ಅಥವಾ ಮೂರು ದಿನಗಳ ಮುಂಚೆ ಕೊಚ್ಚಿ, ಚೆನ್ನೈ, ಮತ್ತು ಮುಂಬಯಿಯಲ್ಲಿ, ಈ ನಗರಗಳು ಹಿಂದೆಂದೂ ನೋಡಿರದಂಥ ಒಂದು ರೀತಿಯಲ್ಲಿ ನಮ್ಮ ಒಕ್ಕೂಟದ ಸ್ಥಳಗಳನ್ನು ಸಿದ್ಧಪಡಿಸಲಿಕ್ಕಾಗಿ ಪ್ರತಿಯೊಂದು ಸ್ಥಳದಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಸ್ವಯಂಸೇವಕರ ಅಗತ್ಯವಿದೆ. ಆ ಮೂರು ದಿನಗಳ ಸಮಯದಲ್ಲಿ ಇನ್ನೂ ನೂರಾರು ವ್ಯಕ್ತಿಗಳು ಶೌಚಾಲಯಗಳನ್ನು ಶುಚಿಗೊಳಿಸಲಿಕ್ಕಾಗಿ, ಗ್ಯಾಲರಿಗಳನ್ನು ಗುಡಿಸಲಿಕ್ಕಾಗಿ, ಆಸನಗಳನ್ನು ತೊಳೆಯಲಿಕ್ಕಾಗಿ ಮತ್ತು ಇತರ ಆವಶ್ಯಕ ಕೆಲಸವನ್ನು ಮಾಡಲಿಕ್ಕಾಗಿ ನೇಮಿಸಲ್ಪಡುವರು. ನೀವು ಬರುವಾಗ ಖಂಡಿತವಾಗಿಯೂ ಒಂದು ಜೊತೆ ಕೆಲಸದ ಬಟ್ಟೆಯನ್ನು ತನ್ನಿರಿ. ಹೀಗೆ ಯೆಹೋವನನ್ನು ಘನಪಡಿಸುವ ಈ ವಿಶೇಷ ಸಂದರ್ಭದಲ್ಲಿ ನೀವೂ ಪಾಲ್ಗೊಳ್ಳುವಂತಾಗುವುದು.
5 ಪೂರ್ವದಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ನೆಲವನ್ನು ಗುಡಿಸುವುದಕ್ಕೆ ಮತ್ತು ಒರೆಸುವುದಕ್ಕೆ ಹಾಗೂ ಕುರ್ಚಿಗಳನ್ನು ಒರೆಸುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದಿರಬಹುದು. ಆದರೆ ಈ ವರ್ಷ ನಮ್ಮ ಅಧಿವೇಶನ ರಂಗದ ಪ್ರತಿಯೊಂದು ಮೂಲೆಯೂ ನಮ್ಮ ಪರಿಶುದ್ಧ ದೇವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತೆ ನಾವು ನೋಡಿಕೊಳ್ಳಬಯಸುತ್ತೇವೆ. ಎಲ್ಲರೂ ಪಾಲ್ಗೊಳ್ಳಬಹುದು. ಮಕ್ಕಳು ತಾವು ಎಲ್ಲಿಯಾದರೂ ಕಸಕಡ್ಡಿಯನ್ನು ನೋಡುವಲ್ಲಿ ಅದನ್ನು ತೆಗೆದು ಕಸದ ಚೀಲಗಳಲ್ಲಿ ಹಾಕುವಂತೆ ಅವರಿಗೆ ಸೂಚನೆಗಳನ್ನು ಕೊಡಬಹುದು. ಏನಾದರೂ ಚೆಲ್ಲಿಹೋಗಿರುವಲ್ಲಿ ಅಥವಾ ಒಡೆದುಹೋಗಿರುವಲ್ಲಿ ಅದನ್ನು ತೆಗೆಯುವಂತೆ ಕ್ಲೀನಿಂಗ್ ಡಿಪಾರ್ಟ್ಮೆಂಟ್ಗೆ ವರದಿಸಬಹುದು. ನಮ್ಮ ಸಹೋದರರು ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ನಂತರ, ಅವುಗಳನ್ನು ಹಾಗೆಯೇ ಶುಚಿಯಾಗಿ ಇಟ್ಟುಕೊಳ್ಳಲು ಎಲ್ಲರೂ ಸಹಕರಿಸಬಹುದು.
6 ಉಡುಪು ಮತ್ತು ಕೇಶಾಲಂಕಾರ: ಇದು ಏನನ್ನು ಸೂಚಿಸುತ್ತದೆ? ಪ್ರತಿ ವರ್ಷ ನಮ್ಮ ಸಹೋದರಸಹೋದರಿಯರು ಶುದ್ಧವಾದ ಸುವ್ಯವಸ್ಥಿತ ತೋರಿಕೆಯ ವಿಷಯದಲ್ಲಿ ಯಾವಾಗಲೂ ಉತ್ತಮವಾದ ಮಾದರಿಯನ್ನು ಇಟ್ಟಿದ್ದಾರೆ. ಎಲ್ಲರೂ ಅಧಿವೇಶನಗಳಿಗಾಗಿ ತಮ್ಮಲ್ಲಿರುವ ಅತ್ಯುತ್ತಮವಾದ ಬಟ್ಟೆಗಳನ್ನು ಹಾಕುವುದನ್ನು ವಾಡಿಕೆಯಾಗಿ ಮಾಡಿಕೊಂಡಿದ್ದಾರೆ, ಮತ್ತು ನಮ್ಮ ಸಹೋದರಿಯರು ಸೀರೆ, ಸಲ್ವಾರ್-ಕಮೀಸ್ ಅಥವಾ ಸ್ಕರ್ಟನ್ನು ಧರಿಸುವ ರೀತಿಯಲ್ಲಿ ತೋರಿಸುವ ಸಭ್ಯತೆಯನ್ನು ನಾವು ಪ್ರಶಂಸಿಸುತ್ತೇವೆ. ಯುವ ಜನರು ಕೂಡ ಈ ಲೋಕದ ಇತ್ತೀಚಿನ ಪ್ರವೃತ್ತಿ ಅಥವಾ ಫ್ಯಾಷನ್ ಅನ್ನು ಪ್ರತಿಬಿಂಬಿಸುವ ಶೈಲಿಯ ಉಡುಪುಗಳನ್ನು ಆಯ್ದುಕೊಳ್ಳದಿರುವುದಕ್ಕಾಗಿ ಅವರನ್ನೂ ಶ್ಲಾಘಿಸಬೇಕು. (ರೋಮಾ. 12:2) ಈ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ನಾವು ನಿಜವಾಗಿಯೂ ‘ದೇವರನ್ನು ಕೊಂಡಾಡಲು’ ಬಯಸುತ್ತೇವೆ ಎಂಬುದನ್ನು ಸೂಚಿಸುತ್ತೇವೆ.—1 ಪೇತ್ರ 2:12.
7 ಉಡುಪಿನ ಕುರಿತಾಗಿ ಹೇಳುವಾಗ, ಮುಂಬಯಿಯಲ್ಲಿ ನಾವು ಕುರ್ಚಿಗಳನ್ನು ಒದಗಿಸುತ್ತಿಲ್ಲ ಎಂಬುದನ್ನು ನೆನಪಿನಲ್ಲಿಡಿರಿ. ಆದುದರಿಂದ ಸ್ಟೇಡಿಯಂ ಮೆಟ್ಟಲುಗಳ ಮೇಲೆ ಆರಾಮವಾಗಿ ಕೂತುಕೊಳ್ಳಲಾಗುವಂತೆ ನಾವು ಹೆಚ್ಚು ಪ್ರಾಯೋಗಿಕವಾದ ಉಡುಪನ್ನು ಧರಿಸಿಕೊಂಡು ಬರಬೇಕಾಗಿರುವುದು. ಒಂದು ಚಾಪೆ ಅಥವಾ ಚಿಕ್ಕ ದಿಂಬನ್ನು ತರುವುದು ಕೂಡ ಒಳ್ಳೇದಾಗಿರಬಹುದು. ಕೊಚ್ಚಿಯಲ್ಲಿ ಕೂಡ, ಹೆಚ್ಚಿನವರು ಒಳಾಂಗಣದಲ್ಲಿ ಕುಳಿತುಕೊಳ್ಳುವ ಕಾರಣ, ನಮ್ಮ ಉಡುಪು ಆರಾಮದಾಯಕವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿವೇಕಪ್ರದವಾಗಿರುವುದು.
8 ನಾವೆಲ್ಲರೂ ಈ ವರ್ಷದ “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನದಲ್ಲಿ, “ಯೆಹೋವನಿಗೋಸ್ಕರ ಮೀಸಲಾದ [“ಪವಿತ್ರವಾದ,” NW] ಜನ”ರಾಗಿದ್ದೇವೆ ಎಂಬುದನ್ನು ರುಜುಪಡಿಸಲಿಕ್ಕಾಗಿ ನಮ್ಮಿಂದಾಗುವುದೆಲ್ಲವನ್ನೂ ಮಾಡೋಣ. ಮೂಡಿಸಲ್ಪಡುವ ಒಳ್ಳೆಯ ಅಭಿಪ್ರಾಯವು ಯೆಹೋವನ “ಕೀರ್ತಿಘನಮಾನ”ಗಳಿಗೆ ಹೆಚ್ಚನ್ನು ಕೂಡಿಸುವುದು.—ಧರ್ಮೋ. 26:19.
[ಪುಟ 6 ರಲ್ಲಿರುವ ಚೌಕ]
ಯೆಹೋವನನ್ನು ಮಹಿಮೆಪಡಿಸುವ ವಿಧ:
■ ಅಧಿವೇಶನ ನಿವೇಶನವನ್ನು ಶುಚಿಗೊಳಿಸಲಿಕ್ಕಾಗಿ ಸ್ವಇಷ್ಟದಿಂದ ಮುಂದೆ ಬನ್ನಿ.
■ ಎಲ್ಲವನ್ನೂ ಶುಚಿಯಾಗಿಡುವುದರಲ್ಲಿ ಸಹಕರಿಸಿರಿ.
■ ಒಬ್ಬ ದೇವರ ಶುಶ್ರೂಷಕನಿಗೆ ಯೋಗ್ಯವಾಗಿರುವ ರೀತಿಯಲ್ಲಿ ಆರಾಮದಾಯಕ ಉಡುಪನ್ನು ಧರಿಸಿರಿ.