ನಿಮ್ಮ ಸಭೆಗೆ ಒಂದು ದೊಡ್ಡ ಟೆರಿಟೊರಿ ಇದೆಯೊ?
1 ಯೂದಾಯದಲ್ಲಿದ್ದ ನಗರಗಳಿಂದ ಹಿಡಿದು ಗಲಿಲಾಯದ ಗ್ರಾಮೀಣ ಪ್ರದೇಶಗಳ ವರೆಗೆ, ಪ್ರಾಚೀನ ಇಸ್ರಾಯೇಲಿನ ದೊಡ್ಡ ಟೆರಿಟೊರಿಯಾದ್ಯಂತ ಯೇಸು ವಿಸ್ತಾರವಾದ ಸಾಕ್ಷಿಯನ್ನು ಕೊಟ್ಟನು. (ಮಾರ್ಕ 1:38, 39; ಲೂಕ 23:5) ನಾವು ಕೂಡ ಸಾಧ್ಯವಿರುವಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ತಲಪಿಸಬೇಕು. (ಮಾರ್ಕ 13:10) ಆದರೆ ಭಾರತದಲ್ಲಿರುವ ಕ್ಷೇತ್ರದ ಒಂದು ಚಿಕ್ಕ ಭಾಗವನ್ನೇ ಸಭೆಗಳಿಗೆ ನೇಮಿಸಲಾಗಿದೆ ಮತ್ತು ಈ ಟೆರಿಟೊರಿಗಳನ್ನೂ ಸಂಪೂರ್ಣವಾಗಿ ಮತ್ತು ವ್ಯವಸ್ಥಿತವಾಗಿ ಆವರಿಸುವ ಅಗತ್ಯ ಈಗಲೂ ಇದೆಯೆಂಬುದನ್ನು ವರದಿಗಳು ತೋರಿಸುತ್ತಾ ಇವೆ. ಹೆಚ್ಚು ಜನರನ್ನು ತಲಪಲಿಕ್ಕಾಗಿ ನಾವೇನು ಮಾಡಸಾಧ್ಯವಿದೆ?
2 ಜಾಗರೂಕತೆಯಿಂದ ಯೋಜನೆ ಮಾಡಿರಿ: ಸೇವಾ ಮೇಲ್ವಿಚಾರಕನು ಮತ್ತು ಟೆರಿಟೊರಿ ಸೇವಕನು, ಸಭೆಯ ಟೆರಿಟೊರಿಯನ್ನು ನಕ್ಷೆಗಳಲ್ಲಿ ವಿಭಾಗಿಸಿ, ಪ್ರತಿಯೊಂದು ನಕ್ಷೆಯಲ್ಲಿ 200ರಿಂದ ಹಿಡಿದು 300 ಮನೆಗಳು ಮಾತ್ರ ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಅಲ್ಲದೆ, ಒಂದು ವರ್ಷದಲ್ಲಿ ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚು ಟೆರಿಟೊರಿಯು ತಮ್ಮ ಬಳಿಯಿಲ್ಲವೆಂಬುದನ್ನು ಸಹ ಅವರು ಖಚಿತಪಡಿಸಿಕೊಳ್ಳಬಹುದು. ನಿರ್ದಿಷ್ಟ ಕ್ಷೇತ್ರಗಳಲ್ಲಿ ಹಠವಾದಿ ವ್ಯಕ್ತಿಗಳು ನಮ್ಮ ಸಾರುವ ಪ್ರಯತ್ನಗಳನ್ನು ನಿರಂತರವಾಗಿ ವಿರೋಧಿಸುತ್ತಾರೆಂದು ಅವರಿಗೆ ಗೊತ್ತಿರುವಲ್ಲಿ, ಪ್ರಾಯಶಃ ಅವರು ಅಂಥ ಕ್ಷೇತ್ರಗಳನ್ನು, ಎಲ್ಲಿ ಜನರು ಕಿವಿಗೊಡಲು ಸಂತೋಷಪಡುವರೊ ಆ ನೇಮಿಸಲ್ಪಟ್ಟಿರದ ಟೆರಿಟೊರಿಗಳಿಗಾಗಿ ಅದಲುಬದಲುಮಾಡಬಹುದು. (ಲೂಕ 9:5, 6ನ್ನು ಹೋಲಿಸಿರಿ) ಆದರೆ ಈ ವಿಷಯದಲ್ಲಿ ಅವರು ವಿವೇಚನಾಶಕ್ತಿಯನ್ನು ಉಪಯೋಗಿಸಬೇಕು. ಏಕೆಂದರೆ ಕೆಲವೊಮ್ಮೆ ಒಂದು ಕ್ಷೇತ್ರದಲ್ಲಿ ವಿರೋಧವನ್ನು ಕೆರಳಿಸುವವನು ಕೇವಲ ಒಬ್ಬ ವ್ಯಕ್ತಿಯಾಗಿರಬಹುದು. ಹಾಗಿರುವಲ್ಲಿ, ನಕ್ಷೆಯ ಮೇಲೆ ಅವನ ಮನೆ ಅಥವಾ ಬೀದಿಯ ಮೇಲೆ “ಸಂದರ್ಶಿಸಬಾರದು” ಎಂಬ ಗುರುತನ್ನು ಹಾಕಿಡಬಹುದು, ಮತ್ತು ಆ ಕ್ಷೇತ್ರದ ಉಳಿದ ಭಾಗವನ್ನು ವಿವೇಚನೆಯಿಂದ ಯಾವುದೇ ಅಭ್ಯಂತರವಿಲ್ಲದೆ ಆವರಿಸಬಹುದು.
3 ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಹೆಚ್ಚೆಚ್ಚು ಸಮಯವನ್ನು ಕಳೆಯುವಂತೆ ಇಡೀ ಸಭೆಯನ್ನು ಉತ್ತೇಜಿಸಸಾಧ್ಯವಿದೆ. ಅನೇಕವೇಳೆ ಸಿದ್ಧರಾಗಲಿಕ್ಕಾಗಿ ಮತ್ತು ಕ್ಷೇತ್ರ ಸೇವಾ ಕೂಟಕ್ಕೆ ಹಾಜರಾಗಲಿಕ್ಕಾಗಿ ನಾವು ಬಹಳಷ್ಟು ಸಮಯವನ್ನು ವಿನಿಯೋಗಿಸುತ್ತೇವೆ. ಆದರೆ ಇಷ್ಟೆಲ್ಲ ಪ್ರಯತ್ನವನ್ನು ಮಾಡಿದ ನಂತರ, ನಾವು ನಮ್ಮ ನೆರೆಯವರನ್ನು ಸಂದರ್ಶಿಸುವುದರಲ್ಲಿ ಕೇವಲ ಒಂದು ತಾಸು ಅಥವಾ ಅದಕ್ಕಿಂತಲೂ ಕಡಿಮೆ ಸಮಯವನ್ನು ಕಳೆದರೆ ಅದೆಷ್ಟು ದುಃಖಕರ ಸಂಗತಿಯಾಗಿದೆ! ನಮಗೆ ಬೈಬಲ್ ಅಧ್ಯಯನಗಳು ಇಲ್ಲವೆ ಪುನರ್ಭೇಟಿಗಳು ಇರಬಹುದು, ಆದರೆ ನಮ್ಮ ನೇಮಿತ ಟೆರಿಟೊರಿಯಲ್ಲಿ ಎರಡು ಇಲ್ಲವೇ ಮೂರು ತಾಸುಗಳ ವರೆಗೆ ಕೆಲಸಮಾಡಿದ ನಂತರ ನಾವು ಇವುಗಳನ್ನು ಮಾಡಸಾಧ್ಯವಿದೆ. ಜೋಪಡಿಗಳಿರುವ ಕ್ಷೇತ್ರಗಳು ಮತ್ತು ತುಂಬ ಜನನಿಬಿಡವಾದ ಕಾಲೊನಿಗಳಲ್ಲಿ, ನೂರಾರು ಜನರು ತಮ್ಮ ಮನೆಗಳಲ್ಲಿ ಮತ್ತು ಸುತ್ತಲೂ ಇದ್ದೇ ಇರುತ್ತಾರೆ. ಅಂಥ ಕ್ಷೇತ್ರಗಳು ಸುರಕ್ಷಿತವಾಗಿರುವಲ್ಲಿ, ನಾವು ಒಬ್ಬೊಬ್ಬರಾಗಿ ಸೇವೆಮಾಡುವುದು ಉಪಯುಕ್ತವಾಗಿರುವುದಿಲ್ಲವೊ? ನಮ್ಮ ಜೊತೆ ಸಾಕ್ಷಿಗಳು ನಮ್ಮ ದೃಷ್ಟಿಗೆ ಬೀಳುವಷ್ಟು ದೂರದಲ್ಲೇ ಇದ್ದು ಕೆಲಸಮಾಡುವುದು ಸುಲಭ. ಹೀಗೆ ಪ್ರತ್ಯೇಕವಾಗಿ ಕೆಲಸಮಾಡುವುದರಿಂದ ನಾವು ಎರಡರಷ್ಟು ಟೆರಿಟೊರಿಯನ್ನು ಆವರಿಸಲು ಮತ್ತು ಪ್ರತಿಯೊಂದು ಮನೆಯಲ್ಲಿ ಸಾಕ್ಷಿಕೊಡುವುದರಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳಲು ಶಕ್ತರಾಗಿರುವೆವು.
4 ಒಳ್ಳೆಯ ಯೋಜನೆಯನ್ನು ಮಾಡುವುದರಲ್ಲಿ, ಟೆರಿಟೊರಿಗೆ ಸೂಕ್ತವಾದ ಭಾಷೆಯ ಸಾಹಿತ್ಯವನ್ನು ನಮ್ಮ ಬಳಿ ಇಟ್ಟುಕೊಳ್ಳುವುದು ಸಹ ಸೇರಿರುತ್ತದೆ. ಮಹಾನಗರಗಳಲ್ಲಿ, ಪ್ರತಿಯೊಂದು ನಕ್ಷೆಯ ಕಾರ್ಡಿನ ಮೇಲೆ ಅಲ್ಲಿ ಅಗತ್ಯವಿರುವ ಭಾಷೆಗಳನ್ನು ಗುರುತಿಸುವುದು ಸಹ ಆವಶ್ಯಕವಾಗಿರಬಹುದು. ಹೀಗೆ ಮಾಡುವುದರಿಂದ, ಪುಸ್ತಕ ಅಧ್ಯಯನದ ಮೇಲ್ವಿಚಾರಕರು ತಮ್ಮ ಗುಂಪುಗಳು ಉತ್ತಮವಾಗಿ ಸಜ್ಜಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.
5 ಪೂರ್ಣ ಸಹಕಾರವನ್ನು ಕೊಡಿರಿ: ಒಂದು ದೊಡ್ಡ ಟೆರಿಟೊರಿಯನ್ನು ಆವರಿಸಲಿಕ್ಕಾಗಿ ಸಭೆಯಲ್ಲಿರುವ ಎಲ್ಲರ ಸಹಕಾರ ಆವಶ್ಯಕ. ಮಾತಾಡಲು ಸಿದ್ಧಮನಸ್ಸುಳ್ಳ ಮನೆಯವರು ಸಿಗುವಾಗ ಒಳ್ಳೆಯ ವಿವೇಚನಾಶಕ್ತಿಯನ್ನು ಬಳಸಬೇಕು. ಟೆರಿಟೊರಿಯಲ್ಲಿರುವವರೆಲ್ಲರ ಬಳಿ ಹೋಗುವ ಅಗತ್ಯದ ಕುರಿತಾಗಿ ಯಾವಾಗಲೂ ಪ್ರಜ್ಞೆಯುಳ್ಳವರಾಗಿರಿ. ಮತ್ತು ನಿಮ್ಮ ಕ್ಷೇತ್ರ ಸೇವಾ ಗುಂಪಿನಲ್ಲಿ ನಿಮಗಾಗಿ ಕಾಯುತ್ತಿರುವವರಿಗಾಗಿ ಪರಿಗಣನೆಯನ್ನು ತೋರಿಸಿರಿ. ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ನಿಮ್ಮ ಸಂಭಾಷಣೆಯನ್ನು ಇನ್ನೂ ಸ್ವಲ್ಪ ಸಮಯ ಮುಂದುವರಿಸಲು ಬಯಸುತ್ತಿರುವುದಾದರೆ, ಗುಂಪಿನಲ್ಲಿ ಉಳಿದವರು ತಮ್ಮ ಕ್ಷೇತ್ರ ಸೇವೆಯನ್ನು ಮುಂದುವರಿಸುವಂತೆ ಯಾವುದಾದರೂ ಏರ್ಪಾಡುಗಳನ್ನು ಮಾಡಸಾಧ್ಯವಿದೆಯೊ?
6 ಎಲ್ಲ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಲಿಕ್ಕಾಗಿ ಖಚಿತವಾದ ಏರ್ಪಾಡುಗಳನ್ನು ಮಾಡಿರಿ. ವಿಳಾಸವನ್ನಲ್ಲದೆ, ಆ ಆಸಕ್ತ ವ್ಯಕ್ತಿಯ ಫೋನ್ ನಂಬರನ್ನು ಸಹ ಪಡೆಯಲು ಪ್ರಯತ್ನಿಸಿರಿ. ಹೀಗೆ ನೀವು ಅವರನ್ನು ಪುನಃ ಸಂಪರ್ಕಿಸಿ, ಫೋನ್ ಮೂಲಕ ಹೆಚ್ಚಿನ ಸಾಕ್ಷಿಯನ್ನು ಕೊಡಲು ಶಕ್ತರಾಗುವಿರಿ. ರಸ್ತೆಗಳಿಗೆ ಹೆಸರುಗಳಿಲ್ಲದಿದ್ದರೆ ಇಲ್ಲವೆ ಮನೆಗಳಿಗೆ ನಂಬರ್ ಇಲ್ಲದಿದ್ದರೆ, ಜಾಗ್ರತೆಯಿಂದ ಒಂದು ನಕ್ಷೆಯನ್ನು ಬರೆಯಿರಿ ಅಥವಾ ಪುನರ್ಭೇಟಿಗೆ ಹೋಗುವಾಗ ಆ ಆಸಕ್ತ ವ್ಯಕ್ತಿಯನ್ನು ಹೇಗೆ ಕಂಡುಹಿಡಿಯಬಹುದೆಂಬ ಒಂದು ವಿವರಣೆಯನ್ನು ಬರೆಯಿರಿ.
7 “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ” ಎಂಬ ಯೇಸುವಿನ ಸೂಚನೆಗಳನ್ನು ಪಾಲಿಸುವುದು ನಮಗೆ ಎಂಥ ಒಂದು ಸುಯೋಗವಾಗಿದೆ! (ಮತ್ತಾ. 10:11) ಈ ಅತ್ಯಂತ ಪ್ರತಿಫಲದಾಯಕ ಕೆಲಸದಲ್ಲಿ ನೀವು ನಿಮ್ಮನ್ನೇ ಸಿದ್ಧಮನಸ್ಸಿನಿಂದ ಅರ್ಪಿಸಿಕೊಳ್ಳುತ್ತಿರುವಾಗ, ಯೆಹೋವನು ಖಂಡಿತವಾಗಿಯೂ ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು!