ಗುಂಪು ಸಾಕ್ಷಿಕಾರ್ಯವು ಆನಂದವನ್ನು ತರುತ್ತದೆ
1 ಯೇಸು ಎಪ್ಪತ್ತು ಮಂದಿ ಶಿಷ್ಯರನ್ನು ಸಾರಲಿಕ್ಕಾಗಿ ಕಳುಹಿಸುವಾಗ, ಅವರು ಏನು ಹೇಳಬೇಕು ಎಂಬುದನ್ನು ಅವರಿಗೆ ಬೋಧಿಸಿದನು. ಅವರನ್ನು ಇಬ್ಬಿಬ್ಬರ ತಂಡಗಳಾಗಿ ಸಂಘಟಿಸಿ, ಅವರು ಆವರಿಸಲಿರುವ ಟೆರಿಟೊರಿಯನ್ನು ರೇಖಿಸಿಕೊಟ್ಟನು. ಇದು ಅವರು ಅನುಭವಿಸಿದ ಆನಂದಕ್ಕೆ ಹೆಚ್ಚನ್ನು ಕೂಡಿಸಿತು. (ಲೂಕ 10:1-17) ತದ್ರೀತಿಯಲ್ಲಿ, ಇಂದು ಗುಂಪು ಸಾಕ್ಷಿಕಾರ್ಯವು ದೇವಜನರನ್ನು ಸಾರುವ ಕೆಲಸಕ್ಕಾಗಿ ಸಜ್ಜುಗೊಳಿಸುತ್ತದೆ, ಸಂಘಟಿತಗೊಳಿಸುತ್ತದೆ, ಮತ್ತು ಉತ್ತೇಜನವನ್ನು ನೀಡುತ್ತದೆ.
2 ಹಿರಿಯರು ಮುಂದಾಳತ್ವ ವಹಿಸುತ್ತಾರೆ: ಎಲ್ಲರೂ ಸಾರುವ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸುವಂತೆ ಸಹಾಯಮಾಡುವುದರಲ್ಲಿ ಹಿರಿಯರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ವಾರದ ಮಧ್ಯದಲ್ಲಿನ ಸೇವೆಗಾಗಿ ಏರ್ಪಾಡುಗಳನ್ನು ಮಾಡುವುದರಲ್ಲಿ ಸೇವಾ ಮೇಲ್ವಿಚಾರಕನು ಮುಂದಾಳತ್ವ ವಹಿಸುತ್ತಾನೆ. ವಿಶೇಷವಾಗಿ ವಾರಾಂತ್ಯಗಳಲ್ಲಿ, ಪ್ರತಿಯೊಂದು ಪುಸ್ತಕ ಅಧ್ಯಯನದ ಮೇಲ್ವಿಚಾರಕನು ತನ್ನ ಗುಂಪಿನ ಚಟುವಟಿಕೆಯನ್ನು ಸಂಘಟಿಸಲು ಜವಾಬ್ದಾರನಾಗಿದ್ದಾನೆ. ಉದಾಹರಣೆಗೆ ಕಾವಲಿನಬುರುಜು ಅಧ್ಯಯನದ ನಂತರ, ಕೆಲವೊಮ್ಮೆ ಇಡೀ ಸಭೆಯು ಕ್ಷೇತ್ರ ಸೇವೆಗಾಗಿ ಕೂಡಿಬರುವಾಗ, ಪ್ರತಿಯೊಬ್ಬ ಪುಸ್ತಕ ಅಧ್ಯಯನ ಮೇಲ್ವಿಚಾರಕನು ತನ್ನ ಗುಂಪಿನ ಆವಶ್ಯಕತೆಗಳನ್ನು ನೋಡಿಕೊಳ್ಳಬೇಕು.
3 “ಮರ್ಯಾದೆಯಿಂದಲೂ ಕ್ರಮದಿಂದಲೂ”: ಕ್ಷೇತ್ರ ಸೇವೆಗಾಗಿರುವ ಕೂಟವನ್ನು ನಡೆಸುವಂತೆ ನೇಮಿಸಲ್ಪಟ್ಟಿರುವವನು, ಅದನ್ನು ಸಮಯಕ್ಕೆ ಸರಿಯಾಗಿ ಆರಂಭಿಸಬೇಕು ಮತ್ತು 10 ಅಥವಾ 15 ನಿಮಿಷಗಳೊಳಗೆ ಕೊನೆಗೊಳಿಸಬೇಕು. ಪ್ರಾರ್ಥನೆಯೊಂದಿಗೆ ಸಮಾಪ್ತಿಗೊಳಿಸುವ ಮುಂಚೆ ಅವನು (ಈ ಮುಂಚೆ ತಿಳಿಸಲ್ಪಟ್ಟಿರುವಂತೆ, ಪುಸ್ತಕ ಅಧ್ಯಯನ ಮೇಲ್ವಿಚಾರಕರೇ ಇದನ್ನು ನೋಡಿಕೊಳ್ಳುತ್ತಿರುವ ಸಂದರ್ಭದ ಹೊರತು) ಸಾಕ್ಷಿಕೊಡುವ ಗುಂಪುಗಳನ್ನು ಏರ್ಪಡಿಸುವುದು ಮತ್ತು ಟೆರಿಟೊರಿಯನ್ನು ನೇಮಿಸುವುದು ಉತ್ತಮವಾಗಿರುವುದು. ಇದು, ಪ್ರಚಾರಕರು ಟೆರಿಟೊರಿಯಲ್ಲಿ ಗುಂಪುಗೂಡುವ ಅಗತ್ಯವನ್ನು ಕಡಿಮೆಗೊಳಿಸುತ್ತದೆ. ಏಕೆಂದರೆ ಟೆರಿಟೊರಿಯಲ್ಲಿ ಗುಂಪುಗೂಡುವುದು ನಮ್ಮ ಕೆಲಸಕ್ಕೆ ಗೌರವವನ್ನು ಕುಂದಿಸುವುದು ಮಾತ್ರವಲ್ಲದೆ, ಅದನ್ನು ಇಷ್ಟಪಡದವರ ವಿರೋಧವನ್ನು ಕೈಯಾಡಿಸಿ ಕರೆದಂತಿರುವುದು. ಇದು, “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ” ಎಂದು ಪೌಲನು ಹೇಳಿದ ಬುದ್ಧಿವಾದಕ್ಕೂ ಹೊಂದಿಕೆಯಲ್ಲಿದೆ. (1 ಕೊರಿಂ. 14:40) ಈ ಕೂಟಗಳಿಗೆ ಹಾಜರಾಗುವ ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ಬರುವ ಮೂಲಕ, ಮುಂದಾಳತ್ವ ವಹಿಸುವವನೊಂದಿಗೆ ಪೂರ್ತಿ ಸಹಕರಿಸುವ ಮೂಲಕ, ಮತ್ತು ಒಮ್ಮೆ ಟೆರಿಟೊರಿಯ ನೇಮಕವನ್ನು ಪಡೆದ ತತ್ಕ್ಷಣ ಗುಂಪು ಅಲ್ಲಿಂದ ಹೊರಡುವ ಮೂಲಕ ಈ ಏರ್ಪಾಡಿನ ಯಶಸ್ಸಿಗೆ ನೆರವು ನೀಡಬಲ್ಲರು.
4 ಐಕ್ಯದಿಂದ ಒಂದುಗೂಡಿಸಲ್ಪಡುವುದು: ಗುಂಪು ಸಾಕ್ಷಿಕೊಡುವಿಕೆಯ ಏರ್ಪಾಡುಗಳು ಸಭೆಯಲ್ಲಿರುವ ಇತರರನ್ನು ಪರಿಚಯಮಾಡಿಕೊಳ್ಳುವ ಅತ್ಯುತ್ತಮ ಸಂದರ್ಭಗಳಾಗಿ ತೋರಿಬರುತ್ತವೆ. ಯಾರೋ ಒಬ್ಬರೊಂದಿಗೆ ಸೇರಿ ಸೇವೆಮಾಡಲು ಮುಂಚಿತವಾಗಿಯೇ ಏರ್ಪಾಡು ಮಾಡುವುದು ಆಕ್ಷೇಪಣೀಯವಲ್ಲವಾದರೂ ಯಾವುದೇ ಮುಂಚಿತ ಏರ್ಪಾಡುಗಳಿಲ್ಲದೆ ಕ್ಷೇತ್ರ ಸೇವಾ ಕೂಟಗಳಿಗೆ ಹಾಜರಾಗುವುದು ಪ್ರಯೋಜನದಾಯಕವಾಗಿರುವುದು. ನಾವು ಹೆಚ್ಚು ಪರಿಚಿತರಾಗಿರದ ಒಬ್ಬ ವ್ಯಕ್ತಿಯೊಂದಿಗೆ ಸೇವೆ ಮಾಡುವಂತೆ ನೇಮಿಸಲ್ಪಡಬಹುದು, ಮತ್ತು ಇದು ನಾವು ನಮ್ಮ ಪ್ರೀತಿಯಲ್ಲಿ “ವಿಶಾಲ”ವಾಗುವಂತೆ ನಮ್ಮನ್ನು ಶಕ್ಯಗೊಳಿಸುವುದು.—2 ಕೊರಿಂ. 6:11-13.
5 ಗುಂಪು ಸಾಕ್ಷಿಕಾರ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆ ಮತ್ತು “ಸತ್ಯಕ್ಕೆ ಸಹಕಾರಿ”ಗಳಾಗಿ ನಮ್ಮನ್ನು ಒಂದುಗೂಡಿಸುತ್ತದೆ. (3 ಯೋಹಾ. 8) ನಾವು ಅದರಲ್ಲಿ ಪೂರ್ತಿಯಾಗಿ ಭಾಗವಹಿಸೋಣ!