ಬೈಬಲಿನ ಮೇಲೆ ಹೆಚ್ಚಿನ ಒತ್ತು!
1. ಕಾವಲಿನಬುರುಜು ಪತ್ರಿಕೆಯು ಪ್ರಧಾನವಾಗಿ ಯಾರಿಗಾಗಿ ಪ್ರಕಟಿಸಲ್ಪಟ್ಟಿತು, ಮತ್ತು ದ ಗೋಲ್ಡನ್ ಏಜ್ ಯಾರಿಗಾಗಿ ಪ್ರಕಟಿಸಲ್ಪಟ್ಟಿತು?
1 ಇಸವಿ 1919ರ ಅಕ್ಟೋಬರ್ 1ರಂದು ದ ಗೋಲ್ಡನ್ ಏಜ್ (ಸುವರ್ಣ ಯುಗ) ಪತ್ರಿಕೆಯ ಪ್ರಥಮ ಸಂಚಿಕೆಯು ಪ್ರಕಟಿಸಲ್ಪಟ್ಟಿತು. ಇದು ಸಾರುವ ಕೆಲಸದಲ್ಲಿ ಅತ್ಯಮೂಲ್ಯವಾದ ಸಾಧನವಾಗಿ ಪರಿಣಮಿಸಿತು. ಏಕೆ? ಏಕೆಂದರೆ ಇದು ವಿಶೇಷವಾಗಿ ಸಾರ್ವಜನಿಕರಿಗಾಗಿ ವಿನ್ಯಾಸಿಸಲ್ಪಟ್ಟಿತ್ತು. ಆದರೆ ಕಾವಲಿನಬುರುಜು ಪತ್ರಿಕೆಯ ವಿಷಯದಲ್ಲಿ ಹೀಗಿರಲಿಲ್ಲ. ಹಲವಾರು ವರ್ಷಗಳ ವರೆಗೆ, ಇದು ಹೆಚ್ಚಿನಾಂಶ ‘ಚಿಕ್ಕ ಹಿಂಡಿಗಾಗಿ’ ತಯಾರಿಸಲ್ಪಟ್ಟ ಪ್ರತಿಕೆಯೆಂದು ವೀಕ್ಷಿಸಲಾಗಿತ್ತು. (ಲೂಕ 12:32) ರಾಜ್ಯ ಪ್ರಚಾರಕರು ಈ ಹೊಸ ಪ್ರಕಾಶನವನ್ನು ಎಷ್ಟು ಉತ್ಸಾಹದಿಂದ ಸ್ವೀಕರಿಸಿದರೆಂದರೆ, ಅನೇಕ ವರ್ಷಗಳ ವರೆಗೆ ಕಾವಲಿನಬುರುಜು ಪತ್ರಿಕೆಗಿಂತ ಈ ಗೋಲ್ಡನ್ ಏಜ್ ಪತ್ರಿಕೆಯ ವಿತರಣೆಯೇ ಹೆಚ್ಚಾಗಿತ್ತು.
2. ದ ಗೋಲ್ಡನ್ ಏಜ್ ಪತ್ರಿಕೆಯ ಇಂದಿನ ಹೆಸರು ಯಾವುದು, ಮತ್ತು ಆರಂಭದಿಂದ ಅದರ ಉದ್ದೇಶವು ಏನಾಗಿತ್ತು?
2 ದ ಗೋಲ್ಡನ್ ಏಜ್ ಪತ್ರಿಕೆಯು, ಅದರ ಹೆಸರೇ ಸೂಚಿಸುವಂತೆ ಮಾನವಕುಲಕ್ಕೆ ಒಂದು ಸುವರ್ಣ ಯುಗವನ್ನು ತರಲಿರುವ ಕ್ರಿಸ್ತನ ಸಹಸ್ರ ವರ್ಷದ ಆಳಿಕೆಯು ಮಾತ್ರ ಜನರ ಸಮಸ್ಯೆಗಳಿಗೆ ನಿಜ ಪರಿಹಾರವಾಗಿದೆ ಎಂಬುದನ್ನು ತೋರಿಸುವ ಉದ್ದೇಶದೊಂದಿಗೆ ಪ್ರಕಟಿಸಲ್ಪಟ್ಟಿತು. ಹಿಂಬಾಲಿಸಿ ಬಂದ ದಶಕಗಳಲ್ಲಿ, ಸಮಯಗಳ ಬದಲಾಗುತ್ತಿರುವ ಸನ್ನಿವೇಶಕ್ಕನುಸಾರವಾಗಿ ದ ಗೋಲ್ಡನ್ ಏಜ್ ಪತ್ರಿಕೆಯಲ್ಲಿ ಹಲವಾರು ಹೊಂದಾಣಿಕೆಗಳು ಮಾಡಲ್ಪಟ್ಟವು. 1937ರಲ್ಲಿ ಅದರ ಹೆಸರು ಕಾನ್ಸಲೇಷನ್ (ಸಾಂತ್ವನ) ಎಂದು ಬದಲಾಯಿಸಲ್ಪಟ್ಟಿತು. ಮತ್ತು 1946ರಲ್ಲಿ, ನಮಗೆ ಇಂದು ತಿಳಿದಿರುವ ಅವೇಕ್! (ಎಚ್ಚರ!) ಎಂಬ ಹೆಸರನ್ನು ಅದು ಪಡೆದುಕೊಂಡಿತು.
3. ಯಾವ ಪ್ರವಾದನೆಯ ನೆರವೇರಿಕೆಯಲ್ಲಿ ಅವೇಕ್! ಪತ್ರಿಕೆಯು ಪ್ರಬಲವಾದ ಸಾಧನವಾಗಿ ಪರಿಣಮಿಸಿದೆ?
3 ಇಸವಿ 1919ರಿಂದ ಮಾಡಲ್ಪಡುತ್ತಿರುವ ಮಹಾ ಸಾಕ್ಷಿಕಾರ್ಯಕ್ಕೆ ಈ ಪತ್ರಿಕೆಯು ಆರಂಭದಿಂದಲೇ ಮಹತ್ತರವಾದ ರೀತಿಯಲ್ಲಿ ನೆರವನ್ನು ನೀಡಿದೆ. (ಮತ್ತಾ. 24:14) ಆದರೂ, ನಮ್ಮ ಈ ಸಮಯಗಳು ಎಷ್ಟು ತುರ್ತಿನದ್ದಾಗಿವೆ ಎಂಬುದನ್ನು ಗಮನಿಸುವಾಗ, ಅವೇಕ್! ಪತ್ರಿಕೆಯ ಪ್ರಕಾಶನದಲ್ಲಿ ಹೆಚ್ಚಿನ ಹೊಂದಾಣಿಕೆಗಳನ್ನು ಮಾಡುವುದು ವಿವೇಕಯುತವಾಗಿ ತೋರುತ್ತದೆ.
4. (ಎ) “ಯೆಹೋವನ ಸಿಟ್ಟಿನ ದಿನದಲ್ಲಿ” ಒಬ್ಬನು ಮರೆಯಾಗಲು ಬಯಸುವುದಾದರೆ ಅವನಿಂದ ಏನು ಅಗತ್ಯಪಡಿಸಲ್ಪಡುತ್ತದೆ? (ಬಿ) ಪ್ರಕಟನೆ 14:6, 7ರಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ, ‘ಆಕಾಶಮಧ್ಯದಲ್ಲಿ ಹಾರಿಹೋಗುತ್ತಿರುವ ದೇವದೂತನು’ ಏನನ್ನು ಮಾಡುವಂತೆ ಎಲ್ಲರಿಗೂ ಕರೆಕೊಡುತ್ತಾನೆ?
4 ಧಾರ್ಮಿಕತೆಯನ್ನು ಒಳಗೊಂಡಿರದ ವೈವಿಧ್ಯಮಯ ಲೇಖನಗಳನ್ನು ಅವೇಕ್! ಪತ್ರಿಕೆಯು ರಸವತ್ತಾದ ರೀತಿಯಲ್ಲಿ ಪ್ರಸ್ತುತಪಡಿಸುವುದರಿಂದ, ಲಕ್ಷಾಂತರ ಮಂದಿ ಇದನ್ನು ಓದಿ ಆನಂದಿಸುತ್ತಾರೆ. ಮತ್ತು ಪ್ರತಿ ವರ್ಷ ಜ್ಞಾಪಕಾಚರಣೆಗೆ ಹಾಜರಾಗುವವರಲ್ಲಿ ಬಹುತೇಕ ಮಂದಿ ಅವೇಕ್! ಪತ್ರಿಕೆಯ ಕ್ರಮವಾದ ಓದುಗರಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೂ, “ಯೆಹೋವನ ಸಿಟ್ಟಿನ ದಿನದಲ್ಲಿ” ಯಾವನಾದರೂ ಮರೆಯಾಗಲು ಬಯಸುವುದಾದರೆ, ಅವನು ನಮ್ಮ ಪ್ರಕಾಶನಗಳನ್ನು ಕ್ರಮವಾಗಿ ಓದುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಲಿಕ್ಕಾಗಿ ಅವನಿಗೆ ಸಹಾಯದ ಅಗತ್ಯವಿದೆ.—ಚೆಫ. 2:3; ಪ್ರಕ. 14:6, 7.
5. (ಎ) ಇಸವಿ 2006ರ ಜನವರಿ ತಿಂಗಳಿನ ಸಂಚಿಕೆಯಿಂದಾರಂಭಿಸುತ್ತಾ, ಅವೇಕ್! ಪತ್ರಿಕೆಯಲ್ಲಿ ಯಾವುದಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುವುದು? (ಬಿ) ಅನೇಕರು ಏನನ್ನು ಮಾಡುವಂತೆ ಪ್ರಚೋದಿಸಲ್ಪಡಬಹುದು, ಮತ್ತು ಇದು ಯಾವ ಪ್ರವಾದನಾ ನೆರವೇರಿಕೆಯ ಫಲಿತಾಂಶವಾಗಿರುವುದು?
5 ಆದುದರಿಂದ, 2006ರ ಜನವರಿ ತಿಂಗಳಿನಿಂದ, ಅವೇಕ್! ಪತ್ರಿಕೆಯು ದೇವರ ರಾಜ್ಯದ ಮೇಲೆ ಹೆಚ್ಚಿನ ಒತ್ತನ್ನು ನೀಡುವುದು. ಅದು, ಓದುಗರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಬೈಬಲಿನಲ್ಲಿ ಹುಡುಕುವಂತೆ ಹೆಚ್ಚು ನೇರವಾಗಿ ತಿಳಿಸುವುದು ಮತ್ತು ಸದ್ಯದ ಘಟನೆಗಳ ಕುರಿತು ಬೈಬಲ್ ನೀಡುವ ವಿವರಣೆಯನ್ನು ಹೆಚ್ಚು ಪ್ರಮುಖವಾಗಿ ಎತ್ತಿತೋರಿಸುವುದು. ಈ ರೀತಿಯಲ್ಲಿ, ಓದುಗರು ಪ್ರಸ್ತುತ ಘಟನೆಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವರು ಮತ್ತು ಪ್ರಾಯಶಃ ತಾವು ಓದುವ ವಿಷಯಗಳಿಂದಾಗಿ ಅವರು ಯೆಹೋವನ ಕುರಿತು ಹೆಚ್ಚನ್ನು ಕಲಿತುಕೊಳ್ಳಲು ಪ್ರಚೋದಿಸಲ್ಪಡುವರು.—ಜೆಕ. 8:23.
6, 7. (ಎ) ಒಂದನೇ ಥೆಸಲೊನೀಕ 2:13ನ್ನು ಅನ್ವಯಿಸಿಕೊಳ್ಳುವಂತೆ ಅವೇಕ್! ಪತ್ರಿಕೆಯು ಹೆಚ್ಚಿನ ಜನರಿಗೆ ಹೇಗೆ ಸಹಾಯಮಾಡಲಿರುವುದು? (ಬಿ) ಭವಿಷ್ಯದಲ್ಲಿ ಇಂಗ್ಲಿಷ್ ಅವೇಕ್! ಪತ್ರಿಕೆಯು ಎಷ್ಟು ಸಮಯಾಂತರದಲ್ಲಿ ಪ್ರಕಟಿಸಲ್ಪಡುವುದು, ಮತ್ತು ಈ ಬದಲಾವಣೆಯು ಎಷ್ಟು ಭಾಷೆಗಳ ಮೇಲೆ ಪರಿಣಾಮ ಬೀರುವುದು?
6 ಅವೇಕ್! ಪತ್ರಿಕೆಯು ಜನಸಾಮಾನ್ಯರ ಆಸಕ್ತಿಗೆ ತಕ್ಕಂಥ ಲೇಖನಗಳನ್ನು ಮುದ್ರಿಸುವುದನ್ನು ಮುಂದುವರಿಸುತ್ತದೆ ನಿಜ. ಆದರೆ, ಹೆಚ್ಚಿನ ಒತ್ತು ಬೈಬಲಿಗೆ ನೀಡಲ್ಪಡುವುದು. (1 ಥೆಸ. 2:13) ಕಾವಲಿನಬುರುಜುವಿನಲ್ಲಿ ಬೈಬಲಿಗೆ ಸಂಬಂಧಪಟ್ಟ ಆಳವಾದ ಮಾಹಿತಿಯು ಇರುವುದರಿಂದ ಮತ್ತು ಈಗ ಅವೇಕ್! ಪತ್ರಿಕೆಯು ಸಹ ಹೆಚ್ಚಾಗಿ ಬೈಬಲಿಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡಲಿರುವುದರಿಂದ, ಇಂಗ್ಲಿಷ್ ಅವೇಕ್! ಪತ್ರಿಕೆಯನ್ನು ಇನ್ನು ಮುಂದೆ ತಿಂಗಳಿಗೆ ಎರಡು ಬಾರಿ ಪ್ರಕಟಿಸುವುದು ಅಗತ್ಯವೆಂದು ತೋರುವುದಿಲ್ಲ. ಆದುದರಿಂದ, 2006ರ ಜನವರಿ ತಿಂಗಳಿನ ಸಂಚಿಕೆಯಿಂದಾರಂಭಿಸುತ್ತಾ, ಇಂಗ್ಲಿಷ್ ಅವೇಕ್! ಪತ್ರಿಕೆಯು ಮಾಸಿಕ ಪತ್ರಿಕೆಯಾಗಿ ಪ್ರಕಟಿಸಲ್ಪಡುವುದು. ಇದರಿಂದಾಗಿ ನಮ್ಮ ಸಾಹಿತ್ಯದ ತಯಾರಿಕೆ, ಭಾಷಾಂತರ, ಮತ್ತು ರವಾನಿಸುವಿಕೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಷಯಗಳು ಸರಳೀಕರಿಸಲ್ಪಡುವವು.
7 ಈ ಬದಲಾವಣೆಯು, ಅವೇಕ್! ಪ್ರಕಾಶಿಸಲ್ಪಡುತ್ತಿರುವ 40 ಪ್ರತಿಶತ ಭಾಷೆಗಳ ಮೇಲೆ ಪರಿಣಾಮ ಬೀರುವುದು. ಹೆಚ್ಚಿನ ಭಾಷೆಗಳಲ್ಲಿ ಅವೇಕ್! ಪತ್ರಿಕೆಯು ಈಗಾಗಲೇ ಮಾಸಿಕ ಅಥವಾ ತ್ರೈಮಾಸಿಕ ಪತ್ರಿಕೆಯಾಗಿದೆ. ಕಾವಲಿನಬುರುಜುವಿನ ಪ್ರಕಟಿಸುವಿಕೆಯಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.
8. ಪ್ರಚಾರಕರು ಕಾವಲಿನಬುರುಜುವಿನೊಂದಿಗೆ ಅವೇಕ್! ಪತ್ರಿಕೆಯನ್ನು ಹೇಗೆ ಉಪಯೋಗಿಸಸಾಧ್ಯವಿದೆ?
8 ಪ್ರಚಾರಕರು ಆ ತಿಂಗಳಲ್ಲಿ ಪ್ರಕಟಿಸಲ್ಪಡುವ ಕಾವಲಿನಬುರುಜುವಿನ ಯಾವುದೇ ಸಂಚಿಕೆಯೊಂದಿಗೆ ಪ್ರತಿ ತಿಂಗಳ ಅವೇಕ್! ಪತ್ರಿಕೆಯನ್ನು ನೀಡಬಹುದು. ಅವೇಕ್! ಪತ್ರಿಕೆಯನ್ನು ನೀಡುತ್ತಿರುವವರು, ಈಗ ಮಾಡಲ್ಪಡುತ್ತಿರುವಂತೆ ತಿಂಗಳಿನ ಮಧ್ಯದಲ್ಲಿ ತಮ್ಮ ನಿರೂಪಣೆಯನ್ನು ಬದಲಾಯಿಸದೆ ಒಂದೇ ಸಂಚಿಕೆಯನ್ನು ತಿಂಗಳಿನಾದ್ಯಂತ ಉಪಯೋಗಿಸಸಾಧ್ಯವಿದೆ.
9. ಅವೇಕ್! ಪತ್ರಿಕೆಯು ಯಾವ ಪಾತ್ರವನ್ನು ವಹಿಸುತ್ತಾ ಮುಂದುವರಿಯುವುದು?
9 ಇಸವಿ 1919ರಲ್ಲಿ ಪ್ರಥಮ ಸಂಚಿಕೆಯು ಪ್ರಕಟಿಸಲ್ಪಟ್ಟಂದಿನಿಂದ, ದ ಗೋಲ್ಡನ್ ಏಜ್ ಅನಂತರ ಕಾನ್ಸಲೇಷನ್ ಮತ್ತು ಈಗ ಅವೇಕ್! ಎಂದು ಕರೆಯಲ್ಪಡುವ ಈ ಪತ್ರಿಕೆಯು ಸಾರುವ ಕೆಲಸದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಪರಿಷ್ಕೃತ ರೂಪದಲ್ಲಿ ಛಾಪಿಸಲ್ಪಡಲಿರುವ ಈ ಪತ್ರಿಕೆಯ ವಿತರಣೆಯನ್ನು ಯೆಹೋವನು ಆಶೀರ್ವದಿಸುವುದನ್ನು ಮುಂದುವರಿಸಲಿ ಮತ್ತು ಈ ಪತ್ರಿಕೆಯು ದೇವರ ರಾಜ್ಯವನ್ನು ತಮ್ಮ ಏಕಮಾತ್ರ ನಿರೀಕ್ಷೆಯನ್ನಾಗಿ ಮಾಡಿಕೊಳ್ಳುವಂತೆ ‘ಸಕಲ ಜನಾಂಗ ಕುಲ ಪ್ರಜೆಗಳ ಮತ್ತು ಸಕಲಭಾಷೆಗಳನ್ನಾಡುವ’ ಜನರಿಗೆ ಸಹಾಯಮಾಡಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ.—ಪ್ರಕ. 7:9.