ನಮ್ಮ ವಾಚಕರಿಗೆ
ಈ ಸಂಚಿಕೆಯಿಂದ ಆರಂಭಿಸಿ, ಎಚ್ಚರ! ಪತ್ರಿಕೆಯ ಶೈಲಿಯಲ್ಲಿ (ಫಾರ್ಮ್ಯಾಟ್) ಕೆಲವು ಬದಲಾವಣೆಗಳು ಕಂಡುಬರುವವು. ಕೆಲವು ನಿರ್ದಿಷ್ಟ ವಿಷಯಗಳು ಬದಲಾದರೂ, ಹೆಚ್ಚಿನ ವಿಷಯಗಳು ಹಾಗೆಯೇ ಇರುತ್ತವೆ.
ಅನೇಕ ದಶಕಗಳಿಂದ ಎಚ್ಚರ! ಪತ್ರಿಕೆಯ ಉದ್ದೇಶವು ಬದಲಾಗಿರುವುದಿಲ್ಲ. ಪುಟ 4ರಲ್ಲಿ ವಿವರಿಸಲ್ಪಟ್ಟಿರುವ ಪ್ರಕಾರ, “ಇದು ಪ್ರಕಾಶಿಸಲ್ಪಟ್ಟಿರುವುದು ಇಡೀ ಕುಟುಂಬದ ಜ್ಞಾನೋದಯಕ್ಕಾಗಿ.” ಲೋಕದ ಘಟನೆಗಳನ್ನು ಪರೀಕ್ಷಿಸುವುದು, ವಿವಿಧ ಸಂಸ್ಕೃತಿಗಳ ಜನರ ಕುರಿತು ತಿಳಿಸುವುದು, ಸೃಷ್ಟಿಯ ಅದ್ಭುತಗಳನ್ನು ವರ್ಣಿಸುವುದು, ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವುದು ಇಲ್ಲವೆ ವಿಜ್ಞಾನಿಗಳಲ್ಲದ ಜನರಿಗೆ ವಿಜ್ಞಾನದ ಕುರಿತು ವಿವರಿಸುವುದು ಮುಂತಾದ ವಿಷಯಗಳನ್ನು ಎಚ್ಚರ! ಪತ್ರಿಕೆಯು ನಮ್ಮ ವಾಚಕರಿಗೆ ತಿಳಿಸುತ್ತಾ ಮುಂದುವರಿಸುವುದು. ಈ ರೀತಿಯಲ್ಲಿ ಅವರಿಗೆ, ನಮ್ಮ ಸುತ್ತಲಿನ ಲೋಕದಲ್ಲಿ ಸಂಭವಿಸುವ ಘಟನೆಗಳ ಕುರಿತು ಎಚ್ಚರಿಕೆಯನ್ನು ಮೂಡಿಸುತ್ತದೆ.
ಇಸವಿ 1946, ಆಗಸ್ಟ್ 22ರ ತಿಂಗಳಿನ ಸಂಚಿಕೆಯಲ್ಲಿ ಎಚ್ಚರ! ಪತ್ರಿಕೆಯು ಹೀಗೆ ಮಾತುಕೊಟ್ಟಿತು: “ಸತ್ಯಕ್ಕೆ ನಿಷ್ಠೆಯಿಂದ ಅಂಟಿಕೊಳ್ಳುವುದು ಎಚ್ಚರ! ಪತ್ರಿಕೆಯ ಅತ್ಯಂತ ಪ್ರಾಮುಖ್ಯ ಗುರಿಯಾಗಿದೆ.” ಆ ಮಾತಿಗನುಸಾರ, ಎಚ್ಚರ! ಪತ್ರಿಕೆಯು ಯಾವಾಗಲೂ ಪ್ರಾಮಾಣಿಕ ಮಾಹಿತಿಯನ್ನು ಪ್ರಕಟಪಡಿಸಲು ಪ್ರಯತ್ನಿಸಿದೆ. ಇದನ್ನು ಪೂರೈಸುವ ಉದ್ದೇಶದಿಂದ, ಲೇಖನಗಳು ನಿಷ್ಕೃಷ್ಟವಾಗಿವೆಯೊ ಎಂದು ಖಾತ್ರಿಪಡಿಸಿಕೊಳ್ಳಲು ಅವುಗಳನ್ನು ಆಳವಾಗಿ ಸಂಶೋಧನೆಮಾಡಿ, ಜಾಗರೂಕತೆಯಿಂದ ಪರಿಶೀಲಿಸಲಾಗುತ್ತದೆ. ಆದರೆ ಈ ಪತ್ರಿಕೆಯು ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ವಿಧದಲ್ಲಿ “ಸತ್ಯಕ್ಕೆ ನಿಷ್ಠೆಯಿಂದ” ಅಂಟಿಕೊಂಡಿದೆ.
ಎಚ್ಚರ! ಪತ್ರಿಕೆಯು ಸದಾ ತನ್ನ ವಾಚಕರ ಗಮನವನ್ನು ಬೈಬಲಿನತ್ತ ಸೆಳೆದಿದೆ. ಹಾಗಿದ್ದರೂ, ಈ ಸಂಚಿಕೆಯಿಂದ ಆರಂಭಿಸಿ, ಮುಂಚೆಗಿಂತ ಹೆಚ್ಚು ಬೈಬಲ್ ಆಧರಿತ ಲೇಖನಗಳು ಎಚ್ಚರ! ಪತ್ರಿಕೆಯಲ್ಲಿ ಪ್ರಕಟವಾಗಲಿವೆ. (ಯೋಹಾನ 17:17) ಇಂದು ನಾವು ಅರ್ಥಭರಿತ ಮತ್ತು ಯಶಸ್ವಿ ಜೀವನವನ್ನು ನಡೆಸುವಂತೆ ಬೈಬಲಿನ ಪ್ರಾಯೋಗಿಕ ಸಲಹೆಯು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ತೋರಿಸುವ ಲೇಖನಗಳನ್ನು ಎಚ್ಚರ! ಪತ್ರಿಕೆಯು ಪ್ರಕಟಪಡಿಸುತ್ತಾ ಮುಂದುವರಿಯುವುದು. ಉದಾಹರಣೆಗೆ, ಬಹಳಷ್ಟು ಬೈಬಲ್ ಆಧರಿತ ಮಾರ್ಗದರ್ಶನವು, “ಯುವ ಜನರು ಪ್ರಶ್ನಿಸುವುದು . . . ” ಹಾಗೂ “ಬೈಬಲಿನ ದೃಷ್ಟಿಕೋನ” ಎಂಬ ಲೇಖನಗಳಿಂದ ಒದಗಿಸಲ್ಪಟ್ಟಿದೆ ಮತ್ತು ಈ ಲೇಖನಗಳು ಈ ಪತ್ರಿಕೆಯ ಕ್ರಮದ ವೈಶಿಷ್ಟ್ಯಗಳಾಗಿ ಮುಂದುವರಿಯುವವು. ಇದಕ್ಕೆ ಕೂಡಿಕೆಯಾಗಿ, ನಿಯಮರಾಹಿತ್ಯದಿಂದ ತುಂಬಿದ ಸದ್ಯದ ವಿಷಯಗಳ ವ್ಯವಸ್ಥೆಯು ಬೇಗನೆ ತೆಗೆದುಹಾಕಲ್ಪಟ್ಟು ಶಾಂತಿಭರಿತ ಹೊಸ ಲೋಕವು ಬರಲಿದೆ ಎಂಬ ಬೈಬಲಿನ ವಾಗ್ದಾನದ ಕಡೆಗೆ ಎಚ್ಚರ! ಪತ್ರಿಕೆಯು ವಾಚಕರ ಗಮನವನ್ನು ಸೆಳೆಯುತ್ತಾ ಮುಂದುವರಿಯುವುದು.—ಪ್ರಕಟನೆ 21:3, 4.
ಹಾಗಾದರೆ ಇನ್ಯಾವ ಬದಲಾವಣೆಗಳಿರುವವು? ಎಚ್ಚರ! ಪತ್ರಿಕೆಯು 82 ಭಾಷೆಗಳಲ್ಲಿ ಲಭ್ಯವಿದೆ. ಇಷ್ಟರ ತನಕ ಅದು ಅನೇಕ ಭಾಷೆಗಳಲ್ಲಿ ಪಾಕ್ಷಿಕವಾಗಿ ಪ್ರಕಟವಾಗುತ್ತಿತ್ತು. ಆದರೆ ಈ ಸಂಚಿಕೆಯಿಂದ ಆರಂಭಿಸಿ, ಎಚ್ಚರ! ಪತ್ರಿಕೆಯು ಹೆಚ್ಚಿನ ಭಾಷೆಗಳಲ್ಲಿ ಮಾಸಿಕವಾಗಿ ಪ್ರಕಟವಾಗಲಿದೆ.a 1946ರಿಂದ ಈ ಪತ್ರಿಕೆಯ ಒಂದು ವೈಶಿಷ್ಟ್ಯವಾಗಿರುವ “ಜಗತ್ತನ್ನು ಗಮನಿಸುವುದು” ಎಂಬ ಲೇಖನವು ಈಗಲೂ ಪ್ರತಿ ಸಂಚಿಕೆಯಲ್ಲಿ ಬರಲಿದೆ, ಆದರೆ ಎರಡು ಪುಟಗಳ ಲೇಖನವಾಗಿರುವ ಬದಲು ಅದು ಒಂದು ಪುಟದ್ದಾಗಿರುವುದು. ಪುಟ 31ರಲ್ಲಿ “ನೀವು ಹೇಗೆ ಉತ್ತರಿಸುವಿರಿ?” ಎಂಬ ಕ್ರಮವಾಗಿ ಬರಲಿರುವ ಹೊಸ ಆಸಕ್ತಿಕರ ವೈಶಿಷ್ಟ್ಯವನ್ನು ನಾವು ಪರಿಚಯಪಡಿಸುತ್ತಿದ್ದೇವೆ. ಅದರಲ್ಲಿ ಏನೆಲ್ಲ ಸೇರಿರುವುದು ಮತ್ತು ನೀವು ಅದನ್ನು ಹೇಗೆ ಉಪಯೋಗಿಸಬಲ್ಲಿರಿ?
ಕೆಲವು ತ್ರೈಮಾಸಿಕ ಸಂಚಿಕೆಗಳು, “ನೀವು ಹೇಗೆ ಉತ್ತರಿಸುವಿರಿ?” ಎಂಬ ವೈಶಿಷ್ಟ್ಯವನ್ನು ಹೊಂದಿರುತ್ತವೆ. ಈ ಪುಟದ ಕೆಲವು ಭಾಗಗಳು ಚಿಕ್ಕ ಮಕ್ಕಳಿಗೆ ಇಷ್ಟವಾಗುವವು; ಇತರ ಭಾಗಗಳು ಹೆಚ್ಚು ಪ್ರಗತಿಮಾಡಿರುವ ಬೈಬಲ್ ವಿದ್ಯಾರ್ಥಿಗಳ ಜ್ಞಾಪಕಶಕ್ತಿಯನ್ನು ಪರೀಕ್ಷಿಸುವವು. “ಇತಿಹಾಸದಲ್ಲಿ ಯಾವಾಗ ಸಂಭವಿಸಿತು?” ಎಂಬ ಭಾಗವು, ನಿರ್ದಿಷ್ಟ ಬೈಬಲ್ ವ್ಯಕ್ತಿಗಳು ಯಾವಾಗ ಜೀವಿಸಿದರು ಮತ್ತು ಪ್ರಾಮುಖ್ಯ ಘಟನೆಗಳು ಯಾವಾಗ ಸಂಭವಿಸಿದವು ಎಂಬುದನ್ನು ಸಮಯ-ರೇಖೆಯೊಂದಿಗೆ ಹೊಂದಿಸಲು ನಿಮಗೆ ಸಹಾಯಕಾರಿಯಾಗಿರುವುದು. “ಈ ಸಂಚಿಕೆಯಿಂದ” ಎಂಬ ಭಾಗದಲ್ಲಿನ ಪ್ರಶ್ನೆಗಳಿಗೆ ಪತ್ರಿಕೆಯಾದ್ಯಂತ ಉತ್ತರಗಳನ್ನು ಕಂಡುಕೊಳ್ಳಬಹುದು. ಆದರೆ ಇತರ ಪ್ರಶ್ನೆಗಳಿಗೆ ಉತ್ತರಗಳನ್ನು ಅದೇ ಪುಟದಲ್ಲಿ ಕಂಡುಕೊಳ್ಳಸಾಧ್ಯವಿದೆ. ಆ ಉತ್ತರಗಳನ್ನು ತಲೆಕೆಳಗಾಗಿ ಮುದ್ರಿಸಲಾಗಿರುವುದು. ಆ ಉತ್ತರಗಳನ್ನು ನೋಡುವ ಮೊದಲು ನೀವಾಗಿಯೆ ಸ್ವಲ್ಪ ಸಂಶೋಧನೆಯನ್ನು ಮಾಡಿ, ನೀವೇನನ್ನು ಕಲಿತುಕೊಂಡಿರೊ ಅದನ್ನು ಇತರರೊಂದಿಗೆ ಏಕೆ ಹಂಚಿಕೊಳ್ಳಬಾರದು? “ನೀವು ಹೇಗೆ ಉತ್ತರಿಸುವಿರಿ?” ಎಂಬ ಈ ಹೊಸ ವೈಶಿಷ್ಟ್ಯವನ್ನು ನಿಮ್ಮ ಕುಟುಂಬ ಬೈಬಲ್ ಚರ್ಚೆಗಳಲ್ಲಿ ಇಲ್ಲವೆ ಬೈಬಲಿನ ಗುಂಪು ಚರ್ಚೆಗಳಲ್ಲಿಯೂ ಉಪಯೋಗಿಸಬಹುದು.
ಸುಮಾರು 60 ವರುಷಗಳ ಹಿಂದೆ, ಎಚ್ಚರ! ಪತ್ರಿಕೆಯು ಈ ವಾಗ್ದಾನವನ್ನು ಮಾಡಿತು: “ಚರ್ಚಿಸಲ್ಪಡುವ ವಿಚಾರಗಳ ವಿಷಯದಲ್ಲಿ ಈ ಪತ್ರಿಕೆಯು, ಸ್ಥಳಿಕ ದೃಷ್ಟಿಕೋನವನ್ನು ಒದಗಿಸುವ ಬದಲು ಲೋಕವ್ಯಾಪಕ ದೃಷ್ಟಿಕೋನದಿಂದ ಮಾಹಿತಿಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸುವುದು. ಸರ್ವ ದೇಶಗಳಲ್ಲಿರುವ ಎಲ್ಲ ಪ್ರಾಮಾಣಿಕ ಜನರಿಗೆ ಇದು ಆಸಕ್ತಿದಾಯಕವಾಗಿರುವುದು. . . . ಈ ಪತ್ರಿಕೆಯ ವಿಚಾರ ಮತ್ತು ಒಳವಿಷಯಗಳು . . . ದೊಡ್ಡ ಸಂಖ್ಯೆಯಲ್ಲಿ ಆಬಾಲವೃದ್ಧರೆನ್ನದೆ ಎಲ್ಲರಿಗೂ ಬೋಧಪ್ರದವೂ, ಶೈಕ್ಷಣಿಕವೂ ಮತ್ತು ಆಸಕ್ತಿಯನ್ನು ಕೆರಳಿಸುವಂಥದ್ದೂ ಆಗಿರುವುದು.” ಕೊಟ್ಟ ಮಾತನ್ನು ಎಚ್ಚರ! ಪತ್ರಿಕೆಯು ಕಾಪಾಡಿಕೊಂಡು ಬಂದಿದೆ ಎಂಬುದನ್ನು ಲೋಕದ ಸುತ್ತಲಿರುವ ವಾಚಕರು ಒಪ್ಪಿಕೊಳ್ಳುತ್ತಾರೆ. ಮುಂದಕ್ಕೂ ಇದು ಹೀಗೆ ಮಾಡುತ್ತಾ ಮುಂದುವರಿಯುವುದು ಎಂಬ ಆಶ್ವಾಸನೆಯನ್ನು ನಾವು ನಿಮಗೆ ನೀಡುತ್ತೇವೆ. (g 1/06)
ಪ್ರಕಾಶಕರು
[ಪಾದಟಿಪ್ಪಣಿ]
a ಕೆಲವು ಭಾಷೆಗಳಲ್ಲಿ ಎಚ್ಚರ! ಪತ್ರಿಕೆಯು ತ್ರೈಮಾಸಿಕವಾಗಿ ಪ್ರಕಟಿಸಲ್ಪಡುತ್ತಿದೆ ಮತ್ತು ಅಂಥ ಎಲ್ಲ ಸಂಚಿಕೆಗಳಲ್ಲಿ ನಾವು ಈ ಲೇಖನದಲ್ಲಿ ಚರ್ಚಿಸಿದ ವೈಶಿಷ್ಟ್ಯಗಳು ಕಂಡುಬರಲಿಕ್ಕಿಲ್ಲ.
[ಪುಟ 3ರಲ್ಲಿರುವ ಚಿತ್ರಗಳು]
ಈ ಪತ್ರಿಕೆಯು 1919ರಲ್ಲಿ “ದ ಗೋಲ್ಡನ್ ಏಜ್” ಎಂದು ಕರೆಯಲ್ಪಡುತ್ತಿತ್ತು. 1937ರಲ್ಲಿ “ಕಾನ್ಸಲೇಷನ್” ಎಂಬುದಾಗಿ ಹೆಸರು ಬದಲಾಯಿಸಲ್ಪಟ್ಟಿತು ಮತ್ತು 1946ರಲ್ಲಿ “ಎಚ್ಚರ!” ಎಂಬ ಹೆಸರು ಕೊಡಲ್ಪಟ್ಟಿತು
[ಪುಟ 4ರಲ್ಲಿರುವ ಚಿತ್ರಗಳು]
“ಎಚ್ಚರ!” ಪತ್ರಿಕೆಯು ದೀರ್ಘಕಾಲದಿಂದ ತನ್ನ ವಾಚಕರ ಗಮನವನ್ನು ಬೈಬಲಿನತ್ತ ಸೆಳೆದಿದೆ
[ಕೃಪೆ]
ಬಂದೂಕುಗಳು: U.S. National Archives photo; ಹಸಿದಿರುವ ಮಗು: WHO photo by W. Cutting