“ಕ್ರಿಸ್ತನನ್ನು ಅನುಸರಿಸೋಣ” 2007ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1, 2. (ಎ) ಒಟ್ಟಾಗಿ ಕೂಡಿಬರುವಂತೆ ಇಸ್ರಾಯೇಲ್ಯರನ್ನು ಮೋಶೆಯು ಹೇಗೆ ಉತ್ತೇಜಿಸಿದನು? (ಬಿ) ನಾವೀಗಲೆ ಯಾವ ಪೂರ್ವತಯಾರಿಯನ್ನು ಮಾಡಬೇಕು?
1 ಧರ್ಮಶಾಸ್ತ್ರವನ್ನು ಓದುವ ಸಲುವಾಗಿ ಎಲ್ಲಾ ಇಸ್ರಾಯೇಲ್ಯರು ಮತ್ತು ಅನ್ಯಜನರು ಪ್ರತಿ ಏಳು ವರ್ಷಗಳಿಗೊಮ್ಮೆ ಒಟ್ಟಾಗಿ ಕೂಡಿಬರುವಂತೆ ಮೋಶೆಯು ಆದೇಶಿಸಿದನು. ಅದರ ಉದ್ದೇಶವೇನಾಗಿತ್ತು? ‘ಜನರೆಲ್ಲರೂ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವುದಕ್ಕಾಗಿಯೇ.’ (ಧರ್ಮೋ. 31:10-12) ಹೌದು, ಜನರು ದೊಡ್ಡ ಗುಂಪಾಗಿ ಕೂಡಿಬರುವುದು ಅಗತ್ಯವೆಂದು ಯೆಹೋವನು ಮನಗಂಡನು. ಶೀಘ್ರದಲ್ಲೇ, “ಕ್ರಿಸ್ತನನ್ನು ಅನುಸರಿಸೋಣ” ಎಂಬ ಮೂರು ದಿನದ ಜಿಲ್ಲಾ ಅಧಿವೇಶನಕ್ಕೆ ಯೆಹೋವನ ಜನರು ಮತ್ತೊಮ್ಮೆ ಕೂಡಿಬರಲಿರುವರು.
2 ನೀವು ಈಗಲೇ ಏರ್ಪಾಡುಗಳನ್ನು ಮಾಡಲು ಆರಂಭಿಸಿದ್ದೀರೊ? ನಿಮ್ಮ ಕೆಲಸದ ಮಾಲೀಕರ ಬಳಿ ರಜೆ ಕೇಳಬೇಕಾಗಿದೆಯೊ? ನಿಮ್ಮ ಬೈಬಲ್ ವಿದ್ಯಾರ್ಥಿಗಳು ಇಲ್ಲವೆ ನಂಬಿಕೆಯಲ್ಲಿಲ್ಲದ ನಿಮ್ಮ ಕುಟುಂಬ ಸದಸ್ಯರು ನಿಮ್ಮೊಂದಿಗೆ ಅಧಿವೇಶನಕ್ಕೆ ಹಾಜರಾಗಲು ನೀವು ಸಹಾಯಮಾಡಸಾಧ್ಯವಿದೆಯೊ? ಅಧಿವೇಶನವನ್ನು ಹಾಜರಾಗಲು ಸಹಾಯದ ಅಗತ್ಯವಿರುವ ಯಾರಾದರೂ ನಿಮ್ಮ ಸಭೆಯಲ್ಲಿದ್ದಾರೊ? ನಿಮ್ಮ ಸಭೆಯು ನೇಮಕವಾಗಿರದ ಬೇರೊಂದು ಅಧಿವೇಶನಕ್ಕೆ ಹಾಜರಾಗಲು ನೀವು ಯೋಜಿಸುತ್ತಿದ್ದೀರೊ? ಹೋಟೆಲಿನಲ್ಲಿ ತಂಗಬೇಕಾಗುವುದೊ? ಈ ಕೆಳಗಿನ ಮಾಹಿತಿಯು ಪೂರ್ವತಯಾರಿ ಮಾಡಲು ನಿಮಗೆ ಸಹಾಯಮಾಡುವುದು.
3. (ಎ) ಯೆಶಾಯ 25:6 ನಮ್ಮ ದಿವಸಗಳಲ್ಲಿ ಯಾವ ರೀತಿಯಲ್ಲಿ ನೆರವೇರುತ್ತಿದೆ? (ಬಿ) ಶುಕ್ರವಾರದ ಅಧಿವೇಶನದ ಹಾಜರಿಯ ಕುರಿತು ಏನನ್ನು ಕಂಡುಕೊಳ್ಳಲಾಗಿದೆ ಮತ್ತು ಅದಕ್ಕಾಗಿ ವೈಯಕ್ತಿಕವಾಗಿ ನಾವೇನು ಮಾಡತಕ್ಕದ್ದು?
3 ಮೂರು ದಿವಸಗಳಿಗೂ ಹಾಜರಾಗಿ: ಯೆಹೋವನು ತನ್ನ ಜನರಿಗೆ ಆತ್ಮಿಕ ಆಹಾರವನ್ನು ಪುಷ್ಕಳವಾಗಿ ಒದಗಿಸುತ್ತಿದ್ದಾನೆ. (ಯೆಶಾ. 25:6) ನಮ್ಮ ವಾರ್ಷಿಕ ಅಧಿವೇಶನಗಳಲ್ಲಿ ಸಿಗುವ ಆಧ್ಯಾತ್ಮಿಕ ಔತಣವೂ ಇದರಲ್ಲಿ ಸೇರಿದೆ. ಶುಕ್ರವಾರದ ಹಾಜರಿಯು ಇನ್ನೆರಡು ದಿವಸಗಳಿಗಿಂತ ಕಡಿಮೆಯಾಗಿದೆ ಎಂದು ಕಂಡುಕೊಳ್ಳಲಾಗಿದೆ. ಯೆಹೋವನ ಸಂಘಟನೆ ಏರ್ಪಡಿಸಿರುವ ಚೈತನ್ಯದಾಯಕ ಅಧಿವೇಶನದ ಮೂರು ದಿವಸಗಳಿಗೂ ಹಾಜರಾಗುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. ನಿಮ್ಮ ಐಹಿಕ ಕೆಲಸದಿಂದ ರಜೆಗಾಗಿ ವಿನಂತಿಸಬೇಕಾಗಿರುವಲ್ಲಿ, ಅದಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಅಧಿವೇಶನದ ದಿನಾಂಕ ತಿಳಿಸಲ್ಪಟ್ಟ ಕೂಡಲೇ ನಿಮ್ಮ ಮಾಲೀಕರ ಬಳಿ ರಜೆ ಕೇಳಲು “ಧೈರ್ಯ” ತೆಗೆದುಕೊಳ್ಳಿರಿ. (1 ಥೆಸ. 2:2; ನೆಹೆ. 2:4, 5) ವಾರ್ಷಿಕ ಅಧಿವೇಶನಗಳು ನಿಮ್ಮ ಆರಾಧನೆಯ ಭಾಗವಾಗಿದೆಯೆಂದು ಮಾಲೀಕನಿಗೆ ವಿವರಿಸುವುದು ಬಹುಶಃ ಸಹಾಯಕಾರಿಯಾಗಿರುವುದು. ಸಾಕಷ್ಟು ದಿವಸಗಳಿಗೆ ಮುಂಚಿತವಾಗಿಯೇ ರಜೆ ಕೇಳುವುದಾದರೆ ಮಾಲೀಕನು ಕೆಲವೊಂದು ಹೊಂದಾಣಿಕೆಗಳನ್ನು ಮಾಡಿ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸುಲಭವಾಗುವುದು.
4. ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಮತ್ತು ನಂಬಿಕೆಯಲ್ಲಿಲ್ಲದ ಕುಟುಂಬ ಸದಸ್ಯರನ್ನು ಅಧಿವೇಶನಕ್ಕಾಗಿ ಹೇಗೆ ಸಜ್ಜುಗೊಳಿಸಬಲ್ಲೆವು?
4 ನಿಮ್ಮ ಕುಟುಂಬ ಮತ್ತು ಬೈಬಲ್ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು: ನಿಮ್ಮ ಬೈಬಲ್ ವಿದ್ಯಾರ್ಥಿಯು ನಿಮ್ಮೊಂದಿಗೆ ಅಧಿವೇಶನಕ್ಕೆ ಹಾಜರಾಗಿ, “ಮಹಾ ಸಭೆಯಲ್ಲಿ” ನಮ್ಮ ಸಹೋದರರ ಕ್ರೈಸ್ತೀಯ ಪ್ರೀತಿಯನ್ನು ಸ್ವತಃ ಅನುಭವಿಸುವುದು ಎಷ್ಟು ಸಂತೋಷದ ವಿಷಯವಾಗಿರುವುದು! (ಕೀರ್ತ. 22:25) ಅವರಿಗೆ ಸಾಕಷ್ಟು ಸಮಯಕ್ಕೆ ಮುಂಚಿತವಾಗಿ ತಿಳಿಸಿರಿ. ಆಗ ಅವರು ಅಧಿವೇಶನಕ್ಕೆ ಹಾಜರಾಗಲು ಸಮಯ ಮಾಡಿಕೊಳ್ಳುವರು. ಅಧಿವೇಶನಗಳಲ್ಲಿ ನೀವು ಆನಂದಿಸುವ ವಿಷಯಗಳನ್ನು ಅವರಿಗೆ ತಿಳಿಸಿರಿ. ಈ ಮುಂಚೆ ನಡೆದಿರುವ ಅಧಿವೇಶನದ ಕೆಲವೊಂದು ದೃಶ್ಯಗಳುಳ್ಳ ನಮ್ಮ ವಿಡಿಯೋಗಳನ್ನು ಅದರಲ್ಲೂ ವಿಶೇಷವಾಗಿ ದೈವಿಕ ಬೋಧನೆಯ ಮೂಲಕ ಐಕ್ಯರು (ಇಂಗ್ಲಿಷ್) ಎಂಬ ವಿಡಿಯೋವನ್ನು ತೋರಿಸಿರಿ. ಇದರಿಂದ ಅಧಿವೇಶನದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಅವರು ತಿಳಿದಿರುವರು. ನಂಬಿಕೆಯಲ್ಲಿಲ್ಲದ ಕುಟುಂಬ ಸದಸ್ಯರಿಗೂ ನಿಮ್ಮ ಯೋಜನೆಗಳನ್ನು ತಿಳಿಸಿರಿ. ಅವರು ನಿಮ್ಮೊಂದಿಗೆ ಅಧಿವೇಶನಕ್ಕೆ ಒಂದು ದಿನವಾದರೂ ಹಾಜರಾಗಲು ಅಥವಾ ಡ್ರಾಮ ನೋಡಲು ಏರ್ಪಾಡುಮಾಡಬಹುದು.
5, 6. (ಎ) ನಾವು 1 ತಿಮೊಥೆಯ 6:18ರಲ್ಲಿ ತಿಳಿಸಲ್ಪಟ್ಟಿರುವ ಔದಾರ್ಯದ ಆತ್ಮವನ್ನು ಹೇಗೆ ತೋರಿಸಬಲ್ಲೆವು? (ಬಿ) ವಸತಿಸೌಕರ್ಯವನ್ನು ಪಡೆಯಲು ಸಹಾಯದ ಅಗತ್ಯವಿರುವವರಿಗೆ ಯಾವ ಏರ್ಪಾಡನ್ನು ಮಾಡಲಾಗಿದೆ?
5 ಸಹೋದರ ಸಹೋದರಿಯರಿಗೆ ಸಹಾಯಮಾಡುವುದು: ಅಪೋಸ್ತಲ ಪೌಲನು ಭೌತಿಕವಾಗಿ ಶ್ರೀಮಂತರಾಗಿದ್ದ ಕ್ರೈಸ್ತರಿಗೆ ಸಲಹೆನೀಡಿದ್ದು: ‘ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿರ್ರಿ.’ (1 ತಿಮೊ. 6:17, 18) ವೃದ್ಧರು ಮತ್ತು ಅಸ್ವಸ್ಥರು, ಪೂರ್ಣ ಸಮಯದ ಸೇವಕರು, ಏಕ-ಹೆತ್ತವರ ಕುಟುಂಬಗಳು ಮತ್ತು ಅಧಿವೇಶನವನ್ನು ಹಾಜರಾಗಲು ಸಹಾಯದ ಅಗತ್ಯವಿರುವವರನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ನಾವು ಪೌಲನು ಪ್ರೇರೇಪಿಸಿದ ಔದಾರ್ಯದ ಆತ್ಮವನ್ನು ತೋರಿಸಸಾಧ್ಯವಿದೆ. ಇಂಥವರ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಪ್ರಧಾನವಾಗಿ ನಂಬಿಕೆಯಲ್ಲಿರುವ ಸಂಬಂಧಿಕರದ್ದಾಗಿದೆ. ಆದರೂ, ಅಗತ್ಯವಿರುವಲ್ಲಿ ಹಿರಿಯರು ಮತ್ತು ಇನ್ನಿತರರು ವಿವೇಚನೆಯಿಂದ ಅಂಥವರಿಗೆ ಸಹಾಯ ಮಾಡಬಲ್ಲರು.—ಗಲಾ. 6:10; 1 ತಿಮೊ. 5:4.
6 ಸಭೆಯಲ್ಲಿರುವ ಯಾರಿಗಾದರೂ ವಸತಿಸೌಕರ್ಯ ಪಡೆದುಕೊಳ್ಳಲು ಸಹಾಯದ ಅಗತ್ಯವಿರುವಲ್ಲಿ, ಸಭಾ ಸೇವಾ ಕಮಿಟಿಯು ಆ ಪ್ರಚಾರಕನು ಸ್ಪೆಷಲ್ ನೀಡ್ಸ್ ರೂಮ್ ರಿಕ್ವೆಸ್ಟ್ ಫಾರ್ಮನ್ನು ಪಡೆಯಲು ಅರ್ಹನೋ ಎಂಬುದನ್ನು ನಿರ್ಧರಿಸಬೇಕು. ಇದನ್ನು ಅಧಿವೇಶನದ ರೂಮಿಂಗ್ ಇಲಾಖೆಗೆ ಕಳುಹಿಸುವುದಕ್ಕೆ ಮುಂಚೆ, ಎಲ್ಲ ಹಿರಿಯರ ಮಂಡಲಿಗಳಿಗೆ ಸಂಬೋಧಿಸಲ್ಪಟ್ಟ 2006 ಡಿಸೆಂಬರ್ 14ರ ತಾರೀಖಿನ ಪತ್ರದಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶನೆಗಳನ್ನು ಪರಿಶೀಲಿಸಬೇಕು.
7. (ಎ) ನಾವು ನಮ್ಮ ಸಭೆಯು ನೇಮಕವಾಗಿರುವ ಅಧಿವೇಶನಕ್ಕೆ ಹಾಜರಾಗಬೇಕು ಏಕೆ? (ಬಿ) ಪರಿಸ್ಥಿತಿಯ ಕಾರಣ ನೀವು ಮತ್ತೊಂದು ಅಧಿವೇಶನಕ್ಕೆ ಹಾಜರಾಗಬೇಕಾಗಿರುವಲ್ಲಿ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?
7 ಮತ್ತೊಂದು ಅಧಿವೇಶನಕ್ಕೆ ಹಾಜರಾಗುವುದು: ಭಾರತದಾದ್ಯಂತ ನಡೆಸಲ್ಪಡುವ ಅಧಿವೇಶನಗಳ ಪಟ್ಟಿಯು ಈ ಲೇಖನದಲ್ಲಿ ಕೊಡಲಾಗಿದೆ. ಸಾಕಷ್ಟು ಆಸನ ವ್ಯವಸ್ಥೆ, ಸಾಹಿತ್ಯ, ರೂಮಿಂಗ್ ಏರ್ಪಾಡುಗಳು ಮತ್ತು ಇನ್ನಿತರ ಸೌಲಭ್ಯಗಳು ಲಭ್ಯವಿವೆಯೆಂದು ಖಚಿತಪಡಿಸಿಕೊಳ್ಳಲಿಕ್ಕಾಗಿ ನಿಮ್ಮ ಸಭೆಯು ನೇಮಕವಾಗಿರುವ ಅಧಿವೇಶನಕ್ಕೆ ಹಾಜರಾಗುವಂತೆ ಪ್ರೋತ್ಸಾಹಿಸಲಾಗಿದೆ. ಪರಿಸ್ಥಿತಿಯ ಕಾರಣ ನೀವು ಮತ್ತೊಂದು ಅಧಿವೇಶನಕ್ಕೆ ಹಾಜರಾಗಬೇಕಾಗಿರುವಲ್ಲಿ ಅದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಸಭೆಯ ಕಾರ್ಯದರ್ಶಿಯನ್ನು ಸಂಪರ್ಕಿಸಿ. ಶಿಫಾರಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ ಮತ್ತು ಅಧಿಕ ಮಾಹಿತಿಗಾಗಿ ವಿನಂತಿಸುತ್ತಾ ನೀವು ಪತ್ರ ಬರೆಯುವಾಗ ಸ್ವ-ವಿಳಾಸವಿರುವ ಮತ್ತು ಸ್ಟ್ಯಾಂಪ್ ಅಂಟಿಸಿರುವ ಲಕೋಟೆಯನ್ನು ಜೊತೆಸೇರಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಒಂದುವೇಳೆ ಆ ನಗರದಲ್ಲಿ ಒಂದಕ್ಕಿಂತ ಹೆಚ್ಚು ಅಧಿವೇಶನಗಳು ನಡೆಯಲಿರುವುದಾದರೆ, ನೀವು ಹಾಜರಾಗಲು ಯೋಜಿಸುತ್ತಿರುವ ಅಧಿವೇಶನದ ತಾರೀಖುಗಳನ್ನು ಸೂಚಿಸಿರಿ.
8. ಹೋಟೆಲ್ ರೂಮ್ ಅನ್ನು ಕಾದಿರಿಸಲು ನಾವು ಯಾವ ಕ್ರಮವನ್ನು ಪಾಲಿಸಬೇಕು? (“ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ” ಎಂಬ ಚೌಕವನ್ನು ನೋಡಿ.)
8 ಹೋಟೆಲ್ ರೂಮ್ ಅನ್ನು ಕಾದಿರಿಸುವುದು: ಲಭ್ಯವಿರುವ ಹೋಟೆಲುಗಳ ಶಿಫಾರಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟನ್ನು ಅಧಿವೇಶನ ನಡೆಯುವುದಕ್ಕೆ ಸಾಕಷ್ಟು ಸಮಯಕ್ಕಿಂತ ಮುಂಚಿತವಾಗಿ ಸಭೆಯ ಮಾಹಿತಿ ಫಲಕದಲ್ಲಿ ಹಾಕಲಾಗುವುದು. “ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ” ಚೌಕದಲ್ಲಿರುವ ವಿಷಯಗಳನ್ನು ಪಾಲಿಸಿರಿ. ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ಎಲ್ಲ ಹೋಟೆಲುಗಳಿಗೆ ನೀವು ಕರೆಮಾಡಿದ ನಂತರ ರೂಮ್ಗಳು ಸಿಗದೆಹೋದಲ್ಲಿ ಅಥವಾ ಒಂದು ಹೋಟೆಲಿನ ವಿಷಯದಲ್ಲಿ ನಿಮಗೆ ಯಾವುದಾದರೂ ಸಮಸ್ಯೆಯಿರುವಲ್ಲಿ ಇದರ ಕುರಿತು ನಿಮ್ಮ ಸಭಾ ಕಾರ್ಯದರ್ಶಿಗೆ ತಿಳಿಸಿರಿ. ಅವರು ಲಿಸ್ಟ್ನ ಮೇಲ್ಭಾಗದಲ್ಲಿ ಕೊಡಲ್ಪಟ್ಟಿರುವ ಮಾಹಿತಿಯನ್ನು ಉಪಯೋಗಿಸುತ್ತಾ ನಿಮ್ಮ ಅಧಿವೇಶನದ ರೂಮಿಂಗ್ ಇಲಾಖೆಯನ್ನು ಸಂಪರ್ಕಿಸಬೇಕು, ಆದರೆ ಬ್ರಾಂಚ್ ಆಫೀಸನ್ನಲ್ಲ. ಲಿಸ್ಟ್ನಲ್ಲಿರುವ ಹೋಟೆಲ್ಗಳು ತಿಳಿಸಿದ್ದ ಬೆಲೆಗೆ ರೂಮ್ಗಳು ಲಭ್ಯವಿಲ್ಲದಿರುವಲ್ಲಿ, ಲಿಸ್ಟ್ನಲ್ಲಿ ಕೊಡಲ್ಪಟ್ಟಿರದ ಹೋಟೆಲ್ಗಳಿಗೆ ಕರೆಮಾಡುವುದಕ್ಕೆ ಬದಲಾಗಿ, ನಿಮ್ಮ ಸಭೆಯು ಅಧಿವೇಶನದ ಪರಿಷ್ಕೃತ ಲಿಸ್ಟನ್ನು ಪಡೆದುಕೊಳ್ಳುವ ವರೆಗೂ ದಯವಿಟ್ಟು ಕಾಯಿರಿ.
9, 10. (ಎ) ಅಧಿವೇಶನವನ್ನು ಹಾಜರಾಗುವುದಕ್ಕೆ ಮುಂಚೆ ನಮಗೋಸ್ಕರ ಯಾವೆಲ್ಲಾ ತಯಾರಿಮಾಡಲ್ಪಡುತ್ತದೆ? (ಬಿ) ನಮಗಾಗಿ ಮಾಡಲ್ಪಟ್ಟಿರುವ ಎಲ್ಲಾ ವಿಷಯಗಳಿಗಾಗಿ ನಾವು ಗಣ್ಯತೆಯನ್ನು ಮತ್ತು ಕೃತಜ್ಞತೆಯನ್ನು ಹೇಗೆ ತೋರಿಸಬಹುದು? (ಇಬ್ರಿಯ 13:17ನ್ನು ಓದಿ.)
9 ಏರ್ಪಾಡುಗಳೊಂದಿಗೆ ಸಹಕರಿಸಿರಿ: ಅಧಿವೇಶನವನ್ನು ಆನಂದಿಸುವ ಸಲುವಾಗಿ ಬಹಳ ಶ್ರಮಪಟ್ಟು ತಯಾರಿಗಳು ಮಾಡಲ್ಪಟ್ಟಿರುವುದನ್ನು ಅಧಿವೇಶನದ ಸ್ಥಳವನ್ನು ನೋಡಿದರೆ ನಮಗೆ ತಿಳಿದುಬರುತ್ತದೆ. ಪ್ರಿಯ ಸಹೋದರರು ಅಟೆಂಡೆಂಟರುಗಳಾಗಿ ಸೇವೆಮಾಡುತ್ತಾ, ನಮ್ಮನ್ನು ಸ್ವಾಗತಿಸುತ್ತಾರೆ, ಕಾರ್ಯಕ್ರಮದ ಪ್ರತಿಯನ್ನು ಕೊಡುತ್ತಾರೆ ಮತ್ತು ಆಸನಗಳನ್ನು ಕಂಡುಕೊಳ್ಳಲು ನಮಗೆ ಸಹಾಯಮಾಡುತ್ತಾರೆ. ಅಧಿವೇಶನದ ಸ್ಥಳವನ್ನೂ ವೇದಿಕೆಯನ್ನೂ ಶುಚಿಮಾಡಿ ಅಲಂಕರಿಸಲು ಸಹೋದರ ಸಹೋದರಿಯರು ಕೆಲಸಮಾಡುತ್ತಾರೆ. ಇದಲ್ಲದೆ ಕಾರ್ಯಕ್ರಮದ ಭಾಗಗಳನ್ನು ತಯಾರಿಸುವುದು, ಹೋಟೆಲ್ ರೂಮ್ಗಳಿಗಾಗಿ ಬೆಲೆ ಮಾತಾಡುವುದು ಮುಂತಾದ ಅನೇಕ ಪ್ರಾಮುಖ್ಯ ಕೆಲಸಗಳು ತೆರೆಮರೆಯಾಗಿರುತ್ತವೆ.
10 ಪ್ರತಿಯೊಂದು ಅಧಿವೇಶನಕ್ಕಾಗಿ ಅಗತ್ಯವಿರುವ ಏರ್ಪಾಡುಗಳನ್ನು ಮಾಡಲು ಅನೇಕರು ತಿಂಗಳುಗಟ್ಟಲೆ ಕೆಲಸಮಾಡುತ್ತಾರೆ. ಅವರು ಅಂಥ ಪ್ರಾಮುಖ್ಯ ಕೆಲಸಗಳನ್ನು ಮಾಡಲಿಕ್ಕಾಗಿ ಅವರ ಮನೆಯವರು ಕೂಡ ಸಹಕರಿಸುತ್ತಾರೆ. ನಮ್ಮ ಒಳಿತಿಗಾಗಿ ಮಾಡಲಾಗುವ ಅಂಥ ತ್ಯಾಗಗಳನ್ನು ನಾವು ವೈಯಕ್ತಿಕವಾಗಿ ಗಣ್ಯಮಾಡುತ್ತೇವೊ? ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶಕ ಸೂಚನೆಗಳನ್ನು ಮತ್ತು ಅಧಿವೇಶನಕ್ಕೆ ಮುಂಚಿತವಾಗಿ ಕೊಡಲಾಗುವ ನಿರ್ದೇಶನಗಳನ್ನು ಪೂರ್ತಿಯಾಗಿ ಪಾಲಿಸುವ ಮೂಲಕ ನಮ್ಮ ಗಣ್ಯತೆಯನ್ನು ತೋರಿಸಸಾಧ್ಯವಿದೆ. (ಇಬ್ರಿ. 13:17) ಪ್ರತಿಯೊಬ್ಬರೂ ಮನಃಪೂರ್ವಕವಾಗಿ ಸಹಕರಿಸುವುದಾದರೆ “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ” ನಡೆಯಲು ಸಾಧ್ಯವಾಗುವುದು.—1 ಕೊರಿಂ. 14:40.
11. ಅಧಿವೇಶನದ ಸ್ಥಳದಲ್ಲಿ ನಮ್ಮ ನಡತೆಯನ್ನು ಯಾವ ಶಾಸ್ತ್ರೀಯ ಮೂಲತತ್ತ್ವವು ಪ್ರಭಾವಿಸಬೇಕು?
11 ಕ್ರೈಸ್ತೀಯ ನಡತೆಯು ಪ್ರೀತಿಯ ಒಂದು ಗುರುತಾಗಿದೆ: ಅಧಿವೇಶನಕ್ಕೆ ಹಾಜರಾಗಿರುವವರಲ್ಲಿ ಕೆಲವರು ಅಟೆಂಡೆಂಟರುಗಳೊಂದಿಗೆ ಸಹಕರಿಸಲು ನಿರಾಕರಿಸುವುದನ್ನೂ ಅವರೊಂದಿಗೆ ಅಕ್ರೈಸ್ತ ರೀತಿಯಲ್ಲಿ ಮಾತಾಡುವುದನ್ನೂ ಕಂಡುಕೊಳ್ಳಲಾಗಿದೆ. ನಿಶ್ಚಯವಾಗಿಯೂ, ‘ನಾ ಮೊದಲು’ ಎಂಬ ಮನೋಭಾವವು ಒಬ್ಬನನ್ನು ಸತ್ಕಾರ್ಯ ಮಾಡುವವನಾಗಿ ಗುರುತಿಸುವುದಿಲ್ಲ. ಮಾತ್ರವಲ್ಲದೆ ಯೆಹೋವ ದೇವರಿಗೆ ಸ್ತುತಿಯನ್ನೂ ತರುವುದಿಲ್ಲ. ಆದುದರಿಂದ ನಾವು ಪ್ರೀತಿ, ತಾಳ್ಮೆ ಮತ್ತು ಸಹಕಾರ ಮನೋಭಾವವನ್ನು ತೋರಿಸೋಣ. (ಗಲಾ. 5:22, 23, 25) ಅಷ್ಟಲ್ಲದೆ, ಆಸನಗಳನ್ನು ಹಿಡಿದಿಡುವ ಸಮಸ್ಯೆಯು ಇನ್ನೂ ಮುಂದುವರಿಯುತ್ತಿದೆ. ಬೆಳಗ್ಗೆ 8:00 ಗಂಟೆಗೆ ಅಧಿವೇಶನ ಸ್ಥಳದ ಪ್ರವೇಶದ್ವಾರಗಳು ತೆರೆಯಲ್ಪಡುವಾಗ, ಕೆಲವು ಸಹೋದರ ಸಹೋದರಿಯರು “ಅತ್ಯುತ್ತಮವಾದ” ಸೀಟ್ಗಳನ್ನು ಪಡೆದುಕೊಳ್ಳಲಿಕ್ಕಾಗಿ ಓಡುವುದನ್ನು, ನುಗ್ಗುವುದನ್ನು ಮತ್ತು ತಳ್ಳುವುದನ್ನು ನೋಡಬಹುದು. ಈ ರೀತಿಯ ವರ್ತನೆಯಿಂದಾಗಿ ಕೆಲವರಿಗೆ ಗಾಯಗಳೂ ಆಗಿವೆ. ಇಡೀ ಕುಟುಂಬವಾಗಿ ಅಧಿವೇಶನಕ್ಕೆ ಬೇಗನೆ ಬಂದರೂ ಆಸನಗಳು ಭರ್ತಿಯಾಗಿರುತ್ತವೆ ಎಂದು ಕೆಲವು ಸಹೋದರರು ತಿಳಿಸಿದ್ದಾರೆ. ಅನೇಕವೇಳೆ, ರಾತ್ರಿ ತಡವಾಗಿ ಮಲಗಿ ಇನ್ನು ಏಳದಿರುವ ತಮ್ಮ ಕುಟುಂಬದವರಿಗಾಗಿ ಮತ್ತು ಸ್ನೇಹಿತರಿಗಾಗಿ ಒಬ್ಬರು ಬಂದು ಆಸನಗಳ ಸಾಲುಸಾಲುಗಳನ್ನೇ ಹಿಡಿದಿಡುತ್ತಾರೆ. ಕೆಲವಡೆ ಅಪ್ಪಿತಪ್ಪಿ ಕುರ್ಚಿಗಳು ಖಾಲಿಯಾಗಿರುವುದು ಏಕೆಂದರೆ ಅವನ್ನು ಕಾದಿರಿಸಲು ಅವರ ಬಳಿ ವಸ್ತುಗಳು ಖಾಲಿಯಾಗಿಬಿಡುವುದರಿಂದಲೇ. ಪ್ರೀತಿಯೆಂಬುದು ಸಂಪೂರ್ಣ ರೀತಿಯಲ್ಲಿ ನಿಸ್ವಾರ್ಥದಿಂದ ಇರುವುದಾಗಿದೆ. ಯೇಸು ಕ್ರಿಸ್ತನು ಸಹ ತನ್ನ ಶಿಷ್ಯರನ್ನು ಗುರುತಿಸುವ ಪ್ರಮುಖ ಚಿಹ್ನೆ ನಿಸ್ವಾರ್ಥ ಪ್ರೀತಿಯೇ ಎಂದು ತಿಳಿಸಿದನು. (ಯೋಹಾ. 13:35) ಹೆಚ್ಚೆಚ್ಚು ಆಸನಗಳನ್ನು ಹಿಡಿದಿಡುವುದು ದೇವಸದೃಶ ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸುವ ಉತ್ತಮ ಉದಾಹರಣೆಯಾಗಿರಸಾಧ್ಯವೊ? ಕ್ರೈಸ್ತೀಯ ಪ್ರೀತಿಯು ಕ್ರಿಸ್ತನ ಈ ಮಾತುಗಳನ್ನು ಅನುಸರಿಸುವಂತೆ ನಮ್ಮನ್ನು ಹುರಿದುಂಬಿಸಬೇಕು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”—ಮತ್ತಾ. 7:12.
12. (ಎ) ಯೆಹೋವನ ಜನರು ಸಭೆಯಾಗಿ ಕೂಡಿಬರುವುದು ನಮ್ಮ ದಿವಸಗಳಲ್ಲಿ ಅಷ್ಟೊಂದು ಪ್ರಾಮುಖ್ಯವೇಕೆ? (ಬಿ) ನಮ್ಮಲ್ಲಿ ಪ್ರತಿಯೊಬ್ಬರು ಇಂದಿನಿಂದಲೇ ಏನು ಮಾಡಬೇಕು?
12 ‘ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನಾವು ನೋಡುವುದರಿಂದ’ ದೇವಜನರು ಒಟ್ಟಾಗಿ ಕೂಡಿಬರುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಾಮುಖ್ಯ. (ಇಬ್ರಿ. 10:25) ನಮ್ಮ ಕ್ರೈಸ್ತೀಯ ಅಧಿವೇಶನಗಳಲ್ಲಿ ನಂಬಿಗಸ್ತನೂ ವಿವೇಕಿಯೂ ಆದ ಆಳುವರ್ಗವು ನೀಡುವ ಮಾಹಿತಿಯು, ಯೆಹೋವನು ನಮ್ಮಿಂದ ಬಯಸುವಂಥ ರೀತಿಯಲ್ಲಿ ನಾವು ‘ಕೇಳಿ ತಿಳಿದುಕೊಂಡು [ಎಲ್ಲ] ನಿಯಮಗಳನ್ನು ಅನುಸರಿಸಲು’ ಸಹಾಯಮಾಡುವುದು. (ಧರ್ಮೋ. 31:12) “ಕ್ರಿಸ್ತನನ್ನು ಅನುಸರಿಸೋಣ” ಜಿಲ್ಲಾಅಧಿವೇಶನದ ಮೂರು ದಿವಸಗಳಿಗೂ ಹಾಜರಾಗಲು ಇಂದೇ ಯೋಜನೆಗಳನ್ನು ಮಾಡಲು ಆರಂಭಿಸಿರಿ. ಹೀಗೆ, ಎಲ್ಲಾ ಆಧ್ಯಾತ್ಮಿಕ ಉಪದೇಶಗಳಿಂದಲೂ ಆನಂದಭರಿತ ಕ್ರೈಸ್ತೀಯ ಒಡನಾಟದಿಂದಲೂ ಪ್ರಯೋಜನ ಪಡೆಯಿರಿ.
[ಪುಟ 3ರಲ್ಲಿರುವಚೌಕ]
ಕಾರ್ಯಕ್ರಮದ ಸಮಯಗಳು
ಶುಕ್ರವಾರ ಮತ್ತು ಶನಿವಾರ
ಬೆಳಿಗ್ಗೆ 9:20 - ಸಾಯಂಕಾಲ 5:05
ಭಾನುವಾರ
ಬೆಳಿಗ್ಗೆ 9:20 - ಸಾಯಂಕಾಲ 4:10
[ಪುಟ 4ರಲ್ಲಿರುವಚೌಕ]
ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ
1. ಶಿಫಾರಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ದೂರವಾಣಿ ಸಂಖ್ಯೆಗಳನ್ನು ಉಪಯೋಗಿಸುತ್ತಾ ಸಾಮಾನ್ಯವಾದ ಕೆಲಸದ ವೇಳೆಯಲ್ಲಿ ಹೋಟೆಲುಗಳನ್ನು ಸಂಪರ್ಕಿಸಿರಿ.
2. ನೀವು ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗುತ್ತಿದ್ದೀರಿ ಎಂದು ಹೋಟೆಲಿನವರಿಗೆ ತಿಳಿಸಿರಿ.
3. ನೀವು ಯಾವ ತಾರೀಖಿನಂದು ರೂಮನ್ನು ಬಾಡಿಗೆಗೆ ತೆಗೆದುಕೊಳ್ಳುವಿರಿ ಮತ್ತು ಯಾವಾಗ ಖಾಲಿಮಾಡುವಿರಿ ಎಂಬುದನ್ನು ತಿಳಿಸಿ.
4. ಯಾವುದೇ ರೂಮ್ಗಳು ಲಭ್ಯವಿಲ್ಲದಿರುವುದಾದರೆ, ಲಿಸ್ಟ್ನಲ್ಲಿರುವ ಮತ್ತೊಂದು ಹೋಟೆಲಿಗೆ ಕರೆಮಾಡಿ.
5. ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ದರಕ್ಕಿಂತ ಹೆಚ್ಚಿನ ದರವು ಕೇಳಲ್ಪಡುವುದಾದರೆ ಅದಕ್ಕೆ ಒಪ್ಪಿಕೊಳ್ಳಬೇಡಿ.
6. ನಿಮ್ಮ ರಿಸರ್ವೇಷನನ್ನು ಮಾಡಿ ಮತ್ತು ಮಂಜೂರಾತಿಯನ್ನು ಕೇಳಿಕೊಳ್ಳಿ.
7. ಕ್ರೆಡಿಟ್ ಕಾರ್ಡ್, ಚೆಕ್ ಅಥವಾ ಮನಿ ಆರ್ಡರ್ ಮೂಲಕ ಹತ್ತು ದಿನಗಳೊಳಗಾಗಿ ಮುಂಗಡ ಹಣವನ್ನು ಕಳುಹಿಸಿರಿ. ನಗದು ಹಣವನ್ನು ಕಳುಹಿಸಲೇಬೇಡಿ. ಚೆಕ್ ಅಥವಾ ಮನಿ ಆರ್ಡರ್ ಮೂಲಕ ಮುಂಗಡ ಹಣವನ್ನು ಕಳುಹಿಸಿರುವಲ್ಲಿ ಮಂಜೂರಾತಿಯ ವಿವರವನ್ನು ಅದರ ಮುಂಭಾಗದಲ್ಲಿ ಬರೆಯಿರಿ.
ಪಾಲಿಸಬೇಕಾದ ಮಾರ್ಗದರ್ಶಕ ಸೂಚನೆಗಳು:
◼ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ದರಕ್ಕಿಂತ ಹೆಚ್ಚಿನ ದರವು ಕೇಳಲ್ಪಡುವುದಾದರೆ ಅದಕ್ಕೆ ಒಪ್ಪಿಕೊಳ್ಳಬೇಡಿ.
◼ ರೂಮ್ನಲ್ಲಿ ತಂಗುವವರ ಹೆಸರಿನಲ್ಲೇ ಪ್ರತಿಯೊಂದು ರೂಮನ್ನು ರಿಸರ್ವ್ ಮಾಡಿ.
◼ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ಎಲ್ಲ ಹೋಟೆಲುಗಳಿಗೆ ನೀವು ಕರೆಮಾಡಿ ರೂಮ್ಗಳು ಸಿಗದೆಹೋದಲ್ಲಿ ಮಾತ್ರ ನಿಮ್ಮ ಸಭಾ ಕಾರ್ಯದರ್ಶಿಗೆ ಇದರ ಕುರಿತು ತಿಳಿಸಿರಿ.
◼ ನೀವು ಮೊದಲು ಕಾದಿರಿಸುವ ರೂಮ್ಗಳನ್ನೇ ಉಪಯೋಗಿಸಿರಿ.—ಮತ್ತಾ. 5:37.
◼ ರಿಸರ್ವೇಷನನ್ನು ರದ್ದುಗೊಳಿಸಲೇ ಬೇಕಾದ ಪರಿಸ್ಥಿತಿ ಏಳುವಲ್ಲಿ ಆದಷ್ಟು ಬೇಗನೆ ಅದನ್ನು ಹೋಟೆಲ್ಗೆ ತಿಳಿಯಪಡಿಸಿರಿ. ರದ್ದುಗೊಳಿಸಲ್ಪಟ್ಟ ವಿವರಗಳನ್ನು ಖಂಡಿತವಾಗಿ ಪಡೆದುಕೊಳ್ಳಿ.