ಪತ್ರಿಕೆ ಸ್ವೀಕರಿಸಿದವರೊಂದಿಗೆ ಬೈಬಲ್ ಅಧ್ಯಯನ ಪ್ರಾರಂಭಿಸುವ ವಿಧ
1. ಪತ್ರಿಕೆಗಳನ್ನು ನೀಡುವಾಗ ನಮ್ಮ ಗುರಿ ಏನು?
1 ಶುಶ್ರೂಷೆಯಲ್ಲಿ ಸಾಮಾನ್ಯವಾಗಿ ಶನಿವಾರಗಳಂದು ನಾವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುತ್ತೇವೆ. ಇದು, ಪ್ರಾಮಾಣಿಕ ಹೃದಯದ ಜನರಿಗೆ ಸತ್ಯವನ್ನು ತಲುಪಿಸುವ ಕೇವಲ ಮೊದಲ ಹೆಜ್ಜೆಯಾಗಿದೆ. ಪುನರ್ಭೇಟಿ ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿ ಬೈಬಲ್ ಅಧ್ಯಯನವನ್ನು ಹೇಗೆ ಪ್ರಾರಂಭಿಸಬಹುದೆಂಬ ಕೆಲವು ಸಲಹೆಗಳು ಈ ಕೆಳಗಿವೆ. ಅವುಗಳನ್ನು ನಿಮ್ಮ ಟೆರಿಟೊರಿಗೆ ತಕ್ಕಂತೆ ಹೊಂದಿಸಿಕೊಂಡು ನಿಮ್ಮ ಸ್ವಂತ ಮಾತುಗಳಲ್ಲಿ ಹೇಳಬಹುದು. ಬೇರೊಂದು ವಿಧಾನವು ನಿಮಗೆ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಲ್ಲಿ ಹಿಂಜರಿಯದೆ ಅದನ್ನು ಉಪಯೋಗಿಸಿರಿ.
2. ಬೈಬಲ್ ಅಧ್ಯಯನ ಆರಂಭಿಸಲು ಬೈಬಲ್ ಬೋಧಿಸುತ್ತದೆ ಪುಸ್ತಕದ ಆರಂಭದ ಪುಟಗಳನ್ನು ನಾವು ಹೇಗೆ ಬಳಸಸಾಧ್ಯವಿದೆ?
2 ಆರಂಭದ ಪುಟಗಳನ್ನು ಬಳಸಿ: ಪುನರ್ಭೇಟಿಯಲ್ಲಿ ನೀವು ಈ ರೀತಿ ಹೇಳಬಹುದು: “ನಾನು ನಿಮಗೆ ಕೊಟ್ಟ ಪತ್ರಿಕೆಗಳು ಬೈಬಲ್ನ ಕಡೆಗೆ ಗಮನ ಸೆಳೆಯುತ್ತವೆ. ಬೈಬಲ್ ವಾಚನ ಅಷ್ಟು ಅವಶ್ಯವೇಕೆ ಎಂಬುದನ್ನು ಗಮನಿಸಿ.” ಯೆಶಾಯ 48:17, 18; ಯೋಹಾನ 17:3 ಅಥವಾ ಸೂಕ್ತವಾಗಿರುವ ಬೇರೊಂದು ವಚನ ಓದಿ. ಅನಂತರ, ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಮನೆಯವನಿಗೆ ಪರಿಚಯಿಸಿ ಅದರ ಒಂದು ಪ್ರತಿಯನ್ನು ಅವನಿಗೆ ಕೊಟ್ಟ ಬಳಿಕ ನೀವು ಹೀಗೆ ಮುಂದುವರಿಸಬಹುದು:
◼ “ಭವಿಷ್ಯದ ಕುರಿತು ಬೈಬಲ್ ನಮಗೆ ನಿಜ ನಿರೀಕ್ಷೆಯನ್ನು ಕೊಡುತ್ತದೆ.” 4-5ನೇ ಪುಟಗಳನ್ನು ತೋರಿಸುತ್ತಾ ಮನೆಯವನಿಗೆ ಹೀಗೆ ಕೇಳಿ: “ಇವುಗಳಲ್ಲಿ ಯಾವ ಮಾತುಗಳು ಸತ್ಯವಾಗುವುದನ್ನು ನೀವು ನೋಡ ಬಯಸುತ್ತೀರಿ?” ಮನೆಯವನು ಆರಿಸಿದ ಶಾಸ್ತ್ರಾಧಾರಿತ ವಾಗ್ದಾನವನ್ನು ಚರ್ಚಿಸುವ ಅಧ್ಯಾಯದ ಕಡೆಗೆ ಅವನ ಗಮನ ತಿರುಗಿಸಿರಿ ಮತ್ತು ಅವನು ಒಪ್ಪುವುದಾದರೆ ಒಂದೆರಡು ಪ್ಯಾರಗಳನ್ನು ಚುಟುಕಾಗಿ ಪರಿಗಣಿಸಿರಿ.
◼ ಅಥವಾ ನೀವು ಹೀಗೆ ಹೇಳಬಹುದು: “ಜೀವನದ ಅತಿ ಪ್ರಾಮುಖ್ಯ ಪ್ರಶ್ನೆಗಳನ್ನು ಬೈಬಲ್ ಉತ್ತರಿಸುತ್ತದೆ.” ಮನೆಯವನ ಗಮನವನ್ನು 6ನೇ ಪುಟಕ್ಕೆ ತಿರುಗಿಸಿರಿ. ಆ ಪುಟದ ಕೆಳಭಾಗದಲ್ಲಿರುವ ಯಾವುದೇ ಪ್ರಶ್ನೆಗಳ ಕುರಿತು ಅವನು ಎಂದಾದರೂ ಯೋಚಿಸಿದ್ದುಂಟೋ ಎಂದು ಕೇಳಿ. ಅದಕ್ಕೆ ಉತ್ತರ ನೀಡುವ ಅಧ್ಯಾಯವನ್ನು ತೆರೆದು ಸಂಕ್ಷಿಪ್ತವಾಗಿ ಒಂದೆರಡು ಪ್ಯಾರಗಳನ್ನು ಚರ್ಚಿಸಿರಿ.
◼ ಅಥವಾ ಪರಿವಿಡಿಯಲ್ಲಿರುವ ಕೆಲವು ಶೀರ್ಷಿಕೆಗಳನ್ನು ತೋರಿಸಿ ಅವರಿಗೆ ಯಾವ ವಿಷಯವು ಆಸಕ್ತಿಯದ್ದಾಗಿದೆ ಎಂದು ನೀವು ಕೇಳಬಹುದು. ಅವರು ಬಯಸುವ ಅಧ್ಯಾಯವನ್ನು ತೆರೆದು ಸಂಕ್ಷಿಪ್ತವಾಗಿ ಬೈಬಲ್ ಅಧ್ಯಯನ ವಿಧಾನವನ್ನು ಪ್ರತ್ಯಕ್ಷಾಭಿನಯಿಸಿರಿ.
3. (ಎ) ಹದಗೆಡುತ್ತಿರುವ ಲೋಕದ ಪರಿಸ್ಥಿತಿಗಳು (ಬಿ) ಕುಟುಂಬ (ಸಿ) ಬೈಬಲ್ನ ಭರವಸಾರ್ಹತೆ, ಈ ವಿಷಯಗಳ ಕುರಿತ ಪತ್ರಿಕೆಗಳನ್ನು ನೀಡಿದ ಬಳಿಕ ನಾವೊಂದು ಬೈಬಲ್ ಅಧ್ಯಯನವನ್ನು ಹೇಗೆ ಪ್ರಾರಂಭಿಸಬಲ್ಲೆವು?
3 ಮೊದಲ ಭೇಟಿಯಲ್ಲೇ ಒಂದು ಪ್ರಶ್ನೆ ಕೇಳಿ: ಮೊದಲ ಭೇಟಿಯಲ್ಲೇ ಪುನರ್ಭೇಟಿಗಾಗಿ ತಳಪಾಯ ಹಾಕುವುದು ಇನ್ನೊಂದು ವಿಧಾನವಾಗಿದೆ. ಮನೆಯವನು ಪತ್ರಿಕೆಗಳನ್ನು ಸ್ವೀಕರಿಸಿದ ನಂತರ ಒಂದು ಪ್ರಶ್ನೆಯನ್ನು ಕೇಳಿ, ಅದನ್ನು ಮುಂದಿನ ಭೇಟಿಯಲ್ಲಿ ಉತ್ತರಿಸುವಿರೆಂದು ಮಾತುಕೊಡಿ. ನೀವು ಹೇಳಿದಂತೆಯೇ ಪುನಃ ಹೋಗಲು ನಿಶ್ಚಿತ ಏರ್ಪಾಡುಗಳನ್ನು ಮಾಡಿ ತಪ್ಪದೆ ಹೋಗಿರಿ. (ಮತ್ತಾ. 5:37) ಪುನಃ ಹೋದಾಗ ಕಳೆದ ಭೇಟಿಯಲ್ಲಿ ಕೇಳಿದ ಪ್ರಶ್ನೆಯನ್ನು ಮನೆಯವನ ನೆನಪಿಗೆ ತನ್ನಿ. ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅದರ ಉತ್ತರವನ್ನು ಸಂಕ್ಷಿಪ್ತವಾಗಿ ಓದಿ ಚರ್ಚಿಸಿ. ಚರ್ಚಿಸುವಾಗ ಅವನು ಅನುಸರಿಸುವಂತೆ ಅವನಿಗೂ ಒಂದು ಪುಸ್ತಕ ಕೊಡಿ. ಕೆಲವು ಉದಾಹರಣೆಗಳು ಇಲ್ಲಿವೆ:
◼ ನೀವು ನೀಡಿದ ಪತ್ರಿಕೆಯು ಹದಗೆಡುತ್ತಿರುವ ಲೋಕದ ಪರಿಸ್ಥಿತಿಗಳ ಕುರಿತಾಗಿರುವುದಾದರೆ ನೀವು ಹೀಗೆ ಹೇಳಬಹುದು: “ದೇವರು ಈ ಭೂಮಿಯಲ್ಲಿ ಯಾವ ಬದಲಾವಣೆಗಳನ್ನು ತರುವನು ಎಂಬ ಪ್ರಶ್ನೆಗೆ ಬೈಬಲ್ ಕೊಡುವ ಉತ್ತರವನ್ನು ನಾವು ಮುಂದಿನ ಸಲ ಚರ್ಚಿಸೋಣ.” ನೀವು ಹಿಂದಿರುಗಿದಾಗ ಪುಟ 4-5ನ್ನು ಬಳಸಿ. ಅಥವಾ, “ದುರಂತಗಳು ದೇವರ ಇಚ್ಛೆಯಿಂದಾಗುತ್ತವೊ?” ಎಂಬ ಪ್ರಶ್ನೆ ಕೇಳಿರಿ. ಪುನರ್ಭೇಟಿಯಲ್ಲಿ ಮನೆಯವನಿಗೆ 1ನೇ ಅಧ್ಯಾಯದ 7-8ನೇ ಪ್ಯಾರಗಳನ್ನು ತೋರಿಸಿರಿ.
◼ ನೀವು ನೀಡಿದ ಪತ್ರಿಕೆಯು ಕುಟುಂಬದ ಕುರಿತಾಗಿರುವುದಾದರೆ, ನಿಮ್ಮ ಸಂಭಾಷಣೆಯ ಕೊನೆಯಲ್ಲಿ ಈ ಪ್ರಶ್ನೆ ಕೇಳಬಹುದು: “ಕುಟುಂಬ ಜೀವನವನ್ನು ಇನ್ನಷ್ಟು ಸಂತೋಷಕರವನ್ನಾಗಿ ಮಾಡಲು ಪ್ರತಿಯೊಬ್ಬ ಸದಸ್ಯನು ಏನು ಮಾಡಬಲ್ಲನು?” ನೀವು ಪುನಃ ಹೋದಾಗ 14ನೇ ಅಧ್ಯಾಯದ 4ನೇ ಪ್ಯಾರವನ್ನು ಪರಿಗಣಿಸಿರಿ.
◼ ನೀವು ನೀಡಿದ ಪತ್ರಿಕೆ ಬೈಬಲ್ನ ಭರವಸಾರ್ಹತೆಯ ಕುರಿತಾಗಿರುವುದಾದರೆ, ಮುಂದಿನ ಚರ್ಚೆಗಾಗಿ ಈ ಪ್ರಶ್ನೆ ಕೇಳಬಹುದು: “ಬೈಬಲ್ ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆಯೊ?” ಪುನರ್ಭೇಟಿಯಲ್ಲಿ 2ನೇ ಅಧ್ಯಾಯದ 8ನೇ ಪ್ಯಾರವನ್ನು ಪರಿಗಣಿಸಿರಿ.
4. ಮನೆಯವನು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಸ್ವೀಕರಿಸದಿದ್ದರೆ ನಾವೇನು ಮಾಡಬೇಕು?
4 ಪ್ರತಿ ಚರ್ಚೆಯ ಕೊನೆಯಲ್ಲಿ ಮುಂದಿನ ಭೇಟಿಯಲ್ಲಿ ನೀವು ಉತ್ತರಿಸಲಿರುವ ಇನ್ನೊಂದು ಪ್ರಶ್ನೆಯನ್ನು ಕೇಳಿರಿ. ಒಮ್ಮೆ ಕ್ರಮದ ಅಧ್ಯಯನ ಸ್ಥಾಪಿಸಲ್ಪಟ್ಟಾಗ ಪುಸ್ತಕವನ್ನು ಆರಂಭದಿಂದ ಕೊನೆಯತನಕ ಯಥಾಕ್ರಮದಲ್ಲಿ ಪರಿಗಣಿಸಿರಿ. ಮನೆಯವನು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಸ್ವೀಕರಿಸದಿದ್ದರೆ ಆಗೇನು? ಆಗಲೂ ನೀವು ಅವನಿಗೆ ಪತ್ರಿಕೆ ಕೊಡುತ್ತಾ, ಶಾಸ್ತ್ರಾಧಾರಿತ ಚರ್ಚೆಗಳನ್ನು ಮುಂದುವರಿಸಬಹುದು. ನೀವು ಅವನ ಆಸಕ್ತಿಯನ್ನು ಬೆಳೆಸುತ್ತಾ ಹೋದಂತೆ ಕ್ರಮೇಣ ಅವನು ಒಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಾನು.
5. ಜನರಿಗೆ ಕೇವಲ ಪತ್ರಿಕೆಗಳನ್ನು ನೀಡುವುದಕ್ಕಿಂತ ಹೆಚ್ಚಿನದ್ದನ್ನು ಮಾಡಲು ನಾವೇಕೆ ಪ್ರಯತ್ನಿಸಬೇಕು?
5 ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಬೈಬಲ್ ನಿಜವಾಗಿಯೂ ಏನನ್ನು ಕಲಿಸುತ್ತದೆ ಎಂಬುದರ ಕುರಿತು ಕಲಿಯಲು ಒಬ್ಬನ ಆಸಕ್ತಿಯನ್ನು ಎಬ್ಬಿಸಬಹುದು. ಹಾಗಾಗಿ ಪತ್ರಿಕೆಗಳನ್ನು ಸ್ವೀಕರಿಸಿದ ಜನರೊಂದಿಗೆ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ವಿಶೇಷ ಪ್ರಯತ್ನಮಾಡಿರಿ. ಹೀಗೆ ನಾವು ಯೇಸುವಿನ ಈ ಅಪ್ಪಣೆಗೆ ವಿಧೇಯರಾಗುತ್ತೇವೆ: “ಶಿಷ್ಯರನ್ನಾಗಿ ಮಾಡಿರಿ . . . ಅವರಿಗೆ ಉಪದೇಶ ಮಾಡಿರಿ.”—ಮತ್ತಾ. 28:19, 20.