ಪ್ರಶ್ನಾ ಚೌಕ
◼ ಸಾರುವುದನ್ನು ನಿಲ್ಲಿಸುವಂತೆ ಅಧಿಕಾರಿಯೊಬ್ಬರು ಹೇಳುವಾಗ ಏನು ಮಾಡಬೇಕು?
ಕೆಲವೊಂದು ವಿದ್ಯಮಾನಗಳಲ್ಲಿ, ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿದ್ದ ಪ್ರಚಾರಕರ ಬಳಿ ಪೊಲೀಸರು ಬಂದು, ಅವರು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆಂದು ತಿಳಿಸಿ ಸಾರುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ. ನಿಮಗೂ ಹಾಗೆ ಹೇಳುವಲ್ಲಿ ತಡಮಾಡದೆ ವಿನಯದಿಂದ ಅಲ್ಲಿಂದ ಹೊರಟುಹೋಗಿ. (ಮತ್ತಾ. 5:41; ಫಿಲಿ. 4:5) ನಮ್ಮ ಕಾನೂನುಬದ್ಧ ಹಕ್ಕುಗಳ ಕುರಿತು ಅವರೊಂದಿಗೆ ಮಾತಿಗಿಳಿಯುವ ಮೂಲಕ ನಿಮ್ಮಷ್ಟಕ್ಕೆ ವಿಷಯಗಳನ್ನು ಇತ್ಯರ್ಥಮಾಡಲು ಪ್ರಯತ್ನಿಸಬೇಡಿ. ಸಾಧ್ಯವಿರುವಲ್ಲಿ ಆ ಪೊಲೀಸ್ ಆಫೀಸರರ ಹೆಸರನ್ನು ಮತ್ತು ಅವರು ಯಾವ ಪೊಲೀಸ್ ಠಾಣೆಗೆ ಸೇರಿದವರೆಂದು ಜಾಣ್ಮೆಯಿಂದ ತಿಳಿದುಕೊಳ್ಳಿ. ಬಳಿಕ ತಡಮಾಡದೆ ಹಿರಿಯರಿಗೆ ತಿಳಿಸಿರಿ. ಅವರು ಈ ಘಟನೆಯ ಸಂಬಂಧದಲ್ಲಿ ಬ್ರಾಂಚ್ ಆಫೀಸನ್ನು ಸಂಪರ್ಕಿಸುವರು. ಅದೇ ರೀತಿಯಲ್ಲಿ ಅಪಾರ್ಟ್‌ಮೆಂಟ್ ಬಿಲ್ಡಿಂಗ್ ಇಲ್ಲವೆ ಕಾಂಪ್ಲೆಕ್ಸ್‌ನ ಸೂಪರಿಂಟೆಂಡೆಂಟ್ ಅಥವಾ ಆ ಅಪಾರ್ಟ್‌ಮೆಂಟಿನ ಬೇರಾವುದೋ ಪ್ರತಿನಿಧಿ ಅಲ್ಲಿಂದ ಹೊರಟುಹೋಗುವಂತೆ ನಿಮಗೆ ಹೇಳುವಲ್ಲಿ ತಕ್ಷಣ ಅಲ್ಲಿಂದ ಹೊರಡಿ. ಬಳಿಕ ಹಿರಿಯರಿಗೆ ತಿಳಿಸಿ. ಅಧಿಕಾರವಿರುವವರೊಂದಿಗೆ ಮೃದು ಸ್ವಭಾವ ಹಾಗೂ ದೀನಭಾವದಿಂದ ವ್ಯವಹರಿಸುವ ಮೂಲಕ ಅನಾವಶ್ಯಕ ತೊಂದರೆಗಳನ್ನು ತಡೆಗಟ್ಟಲು ತುಂಬ ನೆರವಾಗುವುದು.—ಜ್ಞಾನೋ. 15:1; ರೋಮ. 12:18.