ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಎಷ್ಟು ವಿಷಯಭಾಗವನ್ನು ಆವರಿಸಬೇಕು?
1 ಯೇಸು ಬೋಧಿಸುತ್ತಿದ್ದಾಗ ತನ್ನ ಶಿಷ್ಯರ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಂಡು “ಅವರು ಗ್ರಹಿಸಲು ಶಕ್ತರಾಗಿರುವ” ವಿಷಯಗಳನ್ನು ಮಾತ್ರ ಕಲಿಸುತ್ತಿದ್ದನು. (ಮಾರ್ಕ 4:33; ಯೋಹಾ. 16:12) ಅದೇ ರೀತಿ ಇಂದು ದೇವರ ವಾಕ್ಯದ ಬೋಧಕರು, ಬೈಬಲ್ ಅಧ್ಯಯನದ ಒಂದು ಅವಧಿಯಲ್ಲಿ ಎಷ್ಟು ವಿಷಯಭಾಗವನ್ನು ಆವರಿಸಬೇಕು ಎಂಬುದನ್ನು ನಿರ್ಧರಿಸುವ ಅಗತ್ಯವಿದೆ. ಹೀಗೆ ನಿರ್ಧರಿಸುವಾಗ ಬೋಧಕನು ತನ್ನ ಮತ್ತು ವಿದ್ಯಾರ್ಥಿಯ ಸಾಮರ್ಥ್ಯ ಹಾಗೂ ಪರಿಸ್ಥಿತಿಗಳನ್ನು ಮನಸ್ಸಿನಲ್ಲಿಡಬೇಕು.
2 ಬಲವಾದ ನಂಬಿಕೆಯನ್ನು ಕಟ್ಟಿರಿ: ಒಂದು ವಿಷಯವನ್ನು ಗ್ರಹಿಸಲು ಕೆಲವು ವಿದ್ಯಾರ್ಥಿಗಳಿಗೆ ಒಂದೇ ಅಧ್ಯಯನ ಅವಧಿ ಸಾಕಾದರೆ ಇನ್ನಿತರ ವಿದ್ಯಾರ್ಥಿಗಳಿಗೆ ಎರಡು ಅಥವಾ ಮೂರು ಅಧ್ಯಯನ ಅವಧಿಗಳು ಬೇಕಾಗಬಹುದು. ವಿಷಯಭಾಗವನ್ನು ಬೇಗಬೇಗ ಆವರಿಸುವ ಬದಲು ವಿದ್ಯಾರ್ಥಿಯು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡುವುದೇ ಹೆಚ್ಚು ಮಹತ್ವದ್ದು. ಏಕೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ಈ ಹೊಸ ನಂಬಿಕೆಗೆ ದೇವರ ವಾಕ್ಯದಿಂದ ಬಲವಾದ ಆಧಾರ ಸಿಗಬೇಕು.—ಜ್ಞಾನೋ. 4:7; ರೋಮ. 12:2.
3 ನೀವು ಪ್ರತಿ ವಾರ ಅಧ್ಯಯನ ನಡೆಸುವಾಗ ವಿದ್ಯಾರ್ಥಿಯು ದೇವರ ವಾಕ್ಯದಿಂದ ಕಲಿಯುತ್ತಿರುವ ವಿಷಯವನ್ನು ಅರ್ಥಮಾಡಿಕೊಂಡು ಸ್ವೀಕರಿಸುವಂತೆ ನೆರವಾಗಲು ಸಾಕಷ್ಟು ಸಮಯವನ್ನು ಅವನೊಂದಿಗೆ ಕಳೆಯಿರಿ. ಅವನು ಕಲಿಯುತ್ತಿರುವ ಸತ್ಯಗಳ ಪೂರ್ಣ ಮೌಲ್ಯವನ್ನು ಗ್ರಹಿಸಲಾಗದಷ್ಟು ವೇಗದಲ್ಲಿ ಅಧ್ಯಯನ ನಡೆಸಬೇಡಿ. ಮುಖ್ಯ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಲಿಕ್ಕಾಗಿ ಮತ್ತು ನಂಬಿಕೆಗಳಿಗೆ ಆಧಾರ ಕೊಡುವ ಮುಖ್ಯ ವಚನಗಳನ್ನು ಪರಿಗಣಿಸಲಿಕ್ಕಾಗಿ ಸಾಕಷ್ಟು ಸಮಯ ವ್ಯಯಿಸಿ.—2 ತಿಮೊ. 3:16, 17.
4 ಮುಖ್ಯ ವಿಷಯಕ್ಕೆ ಅಂಟಿಕೊಳ್ಳಿ: ನಾವು ಸಾಕಷ್ಟು ಸಮಯ ಕೊಟ್ಟು ಅಧ್ಯಯನ ನಡೆಸಬೇಕೇನೋ ನಿಜ. ಆದರೆ ಅದೇ ಸಮಯದಲ್ಲಿ ಮುಖ್ಯ ವಿಷಯ ಬಿಟ್ಟು ಬೇರಾವುದೋ ವಿಷಯಕ್ಕೆ ಹೋಗಲೂಬಾರದು. ವಿದ್ಯಾರ್ಥಿಗೆ ತನ್ನ ವೈಯಕ್ತಿಕ ವಿಚಾರಗಳ ಕುರಿತು ತುಂಬ ಹೊತ್ತು ಮಾತಾಡುವ ಅಭ್ಯಾಸವಿದ್ದರೆ ಅವುಗಳ ಬಗ್ಗೆ ಅಧ್ಯಯನದ ನಂತರ ಮಾತಾಡೋಣ ಎಂದು ಹೇಳಿ ಅಧ್ಯಯನ ಮುಂದುವರಿಸಿ.—ಪ್ರಸಂ. 3:1.
5 ಇನ್ನೊಂದು ಕಡೆ ನಾವೂ ಸತ್ಯಕ್ಕಾಗಿರುವ ಹುರುಪಿನಿಂದಾಗಿ ಅಧ್ಯಯನದ ಸಮಯದಲ್ಲಿ ತುಂಬ ಮಾತಾಡುತ್ತಿರಬಹುದು. ಅದನ್ನು ಕಮ್ಮಿ ಮಾಡಲು ಕಷ್ಟವಾಗಬಹುದಾದರೂ ಪ್ರಯತ್ನಮಾಡಿ. (ಕೀರ್ತ. 145:6, 7) ಆಗೊಮ್ಮೆ ಈಗೊಮ್ಮೆ ಹೆಚ್ಚಿನ ಅಂಶವೊಂದನ್ನು ಅಥವಾ ಅನುಭವವನ್ನು ತಿಳಿಸಿದರೆ ಪ್ರಯೋಜನವಾದೀತು. ಆದರೆ ಅವು ಜಾಸ್ತಿಯಾಗಿರಬಾರದು ಅಥವಾ ಉದ್ದುದ್ದವಾಗಿರಬಾರದು. ಬೈಬಲಿನ ಮೂಲಭೂತ ಬೋಧನೆಗಳ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಇದು ತಡೆಯಾಗಬಹುದು.
6 ಪ್ರತಿಯೊಂದು ಅಧ್ಯಯನ ಅವಧಿಯಲ್ಲಿ ಸೂಕ್ತವಾಗಿರುವಷ್ಟು ವಿಷಯಭಾಗವನ್ನು ಆವರಿಸುವ ಮೂಲಕ ‘ಯೆಹೋವನ ಜ್ಞಾನಪ್ರಕಾಶದಲ್ಲಿ ನಡೆಯಲು’ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇವೆ.—ಯೆಶಾ. 2:5.