ಭಾನುವಾರಗಳಂದು ಶುಶ್ರೂಷೆಯಲ್ಲಿ ಪಾಲಿಗರಾಗಬಲ್ಲಿರೊ?
1. ಫಿಲಿಪ್ಪಿಯಲ್ಲಿ ಪೌಲ ಮತ್ತವನ ಸಂಗಡಿಗರು ಮಾಡಿದ ಕೆಲಸದಿಂದ ನಾವೇನು ಕಲಿಯಬಲ್ಲೆವು?
1 ಫಿಲಿಪ್ಪಿಯಲ್ಲಿದ್ದ ಹೆಚ್ಚಿನ ಯೆಹೂದ್ಯರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದದ್ದು ಸಬ್ಬತ್ ದಿನದಂದು. ಪೌಲ ಮತ್ತವನ ಸಂಗಡಿಗರು ಅವರ ಮಿಷನೆರಿ ಸಂಚಾರವೊಂದರಲ್ಲಿ ಆ ಪಟ್ಟಣಕ್ಕೆ ಬಂದಿದ್ದರು. ಶುಶ್ರೂಷೆಯಲ್ಲಿ ತುಂಬ ಶ್ರಮಿಸಿದ್ದ ಅವರು ಆ ಸಬ್ಬತ್ ದಿನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ ಖಂಡಿತ ಯಾರೂ ಅವರನ್ನು ಟೀಕಿಸುತ್ತಿದ್ದಿರಲಿಲ್ಲ. ಆದರೆ ಅಂದು ಯೆಹೂದ್ಯರು ಪಟ್ಟಣದ ಹೊರಗೆ ಪ್ರಾರ್ಥನೆಗಾಗಿ ಸೇರಿಬರುತ್ತಾರೆಂದು ಅವರಿಗೆ ಗೊತ್ತಿತ್ತು. ಆದ್ದರಿಂದ ಅಲ್ಲಿ ಹೋಗಿ ಸಾರಲು ಆ ಅವಕಾಶವನ್ನು ಬಳಸಿದರು. ಅಲ್ಲಿ ಲುದ್ಯ ಅವರ ಮಾತುಗಳನ್ನು ಆಲಿಸಿದಳು. ಆಕೆಯೂ ಆಕೆಯ ಮನೆಯವರೆಲ್ಲರೂ ದೀಕ್ಷಾಸ್ನಾನ ಪಡೆದರು. ಆಗ ಪೌಲನಿಗೂ ಅವನ ಸಂಗಡಿಗರಿಗೂ ಎಷ್ಟು ಸಂತೋಷವಾಗಿದ್ದಿರಬೇಕು! (ಅ. ಕಾ. 16:13-15) ಇಂದು ಅನೇಕರು ಭಾನುವಾರ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ನಾವು ಈ ದಿನದ ಒಂದು ಭಾಗವನ್ನು ಅವರಿಗೆ ಸಾರಲು ಬಳಸಬಹುದೇ?
2. ಭಾನುವಾರದಂದು ಸಾರುವ ಕೆಲಸ ಮಾಡಲು ಯೆಹೋವನ ಜನರು ಯಾವ ಸವಾಲುಗಳನ್ನು ಎದುರಿಸಿ ಜಯಿಸಿದರು?
2 ಭಾನುವಾರದ ಸಾರುವಿಕೆಗಾಗಿ ಹೋರಾಟ: ಪ್ರತಿ ಭಾನುವಾರದ ಒಂದು ಭಾಗವನ್ನು ಶುಶ್ರೂಷೆಯಲ್ಲಿ ಕಳೆಯುವಂತೆ ಯೆಹೋವನ ಜನರಿಗೆ 1927ರಲ್ಲಿ ಉತ್ತೇಜಿಸಲಾಯಿತು. ತಕ್ಷಣವೇ ಈ ಸಾರುವಿಕೆಗೆ ವಿರೋಧ ಬಂತು. ಸಾಕ್ಷಿಗಳು ಭಾನುವಾರದ ಸಬ್ಬತ್ ನಿಯಮಗಳನ್ನು ಉಲ್ಲಂಘಿಸುತ್ತಾರೆ, ಶಾಂತಿ ಭಂಗಮಾಡುತ್ತಾರೆ, ಲೈಸೆನ್ಸ್ ಇಲ್ಲದೆ ಮಾರಾಟ ಮಾಡುತ್ತಾರೆ ಎಂಬ ಆರೋಪಗಳ ಮೇಲೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಅನೇಕರನ್ನು ದಸ್ತಗಿರಿ ಮಾಡಲಾಯಿತು. ಆದರೆ ಯೆಹೋವನ ಜನರು ಹಿಮ್ಮೆಟ್ಟಲಿಲ್ಲ. 1930ರ ದಶಕದಲ್ಲಿ ಅವರು “ಗುಂಪು ಕಾರ್ಯಾಚರಣೆಗಳ” ಏರ್ಪಾಡು ಮಾಡಿದರು. ಅಂದರೆ ಒಂದು ಟೆರಿಟೊರಿಯ ಸುತ್ತಮುತ್ತಲಿನ ಸಭೆಗಳ ಪ್ರಚಾರಕರು ಒಟ್ಟುಸೇರಿ ಒಮ್ಮೆಲೆ ಆ ಟೆರಿಟೊರಿಯನ್ನು ಆವರಿಸಿಬಿಡುತ್ತಿದ್ದರು. ಪ್ರಚಾರಕರನ್ನು ದಸ್ತಗಿರಿಮಾಡುವ ಸಂದರ್ಭಗಳಲ್ಲಿ ಎಷ್ಟೊಂದು ಪ್ರಚಾರಕರಿರುತ್ತಿದ್ದರೆಂದರೆ ಅಧಿಕಾರಿಗಳಿಗೆ ಅವರನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಸಹೋದರರು ಮಾಡಿದ ತ್ಯಾಗಗಳನ್ನು ನೀವು ನಿಜವಾಗಿ ಮೆಚ್ಚುತ್ತೀರೊ? ಅವರ ಹುರುಪನ್ನು ಅನುಕರಿಸಲು ಬಯಸುತ್ತೀರೊ?
3. ಶುಶ್ರೂಷೆಯಲ್ಲಿ ಭಾಗವಹಿಸಲು ಭಾನುವಾರ ಉತ್ತಮ ದಿನವಾಗಿದೆ ಏಕೆ?
3 ಸಾರಲು ಅತ್ಯುತ್ತಮ ದಿನ: ಕೆಲಸಕ್ಕೆ ಹೋಗುವ ಹೆಚ್ಚಿನ ಜನರು ಭಾನುವಾರ ಮನೆಯಲ್ಲಿರುತ್ತಾರೆ. ಸಾಮಾನ್ಯವಾಗಿ ಹೆಚ್ಚು ಹಾಯಾಗಿರುತ್ತಾರೆ. ಚರ್ಚಿಗೆ ಹೋಗುವ ಕೆಲವರು ಸಹ ಆ ದಿನದಂದು ದೇವರ ಕುರಿತ ವಿಷಯಗಳನ್ನು ಮಾತಾಡಲು ಹೆಚ್ಚು ಇಷ್ಟಪಟ್ಟಾರು. ನಮಗೆ ಭಾನುವಾರ ಕೂಟಗಳಿರುವಲ್ಲಿ ಹೇಗೂ ನಮ್ಮ ಉಡುಪು, ತೋರಿಕೆ ಶುಶ್ರೂಷೆಗೆ ತಕ್ಕದ್ದಾಗಿರುವುದರಿಂದ, ಕೂಟದ ಮುಂಚೆ ಇಲ್ಲವೆ ನಂತರ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ನಾವೇಕೆ ಯೋಜಿಸಬಾರದು? ಅಗತ್ಯವಿದ್ದರೆ ಸ್ವಲ್ಪ ಊಟ/ತಿಂಡಿ ತಕ್ಕೊಂಡು ಹೋಗಬಹುದು.
4. ಭಾನುವಾರದ ಒಂದು ಭಾಗವನ್ನು ಶುಶ್ರೂಷೆಯಲ್ಲಿ ಕಳೆಯುವುದರಿಂದ ನಮಗೆ ಯಾವ ಆನಂದ ಸಿಗುವುದು?
4 ಭಾನುವಾರದ ಒಂದು ಭಾಗವನ್ನು ನಾವು ಶುಶ್ರೂಷೆಯಲ್ಲಿ ಬಳಸಿದರೂ, ಅಗತ್ಯವಿರುವ ವಿಶ್ರಾಂತಿಯನ್ನು ಪಡೆಯಲು ನಮಗೆ ಇನ್ನೂ ಸ್ವಲ್ಪ ಸಮಯ ಉಳಿದಿರುವುದು. ಹೀಗೆ ನಮಗೆ ವಿಶ್ರಾಂತಿಯೂ ಸಿಗುವುದು, ಜೊತೆಗೆ ಪವಿತ್ರ ಸೇವೆಯಲ್ಲಿ ಪಾಲ್ಗೊಂಡಿದ್ದೇವೆಂಬ ತೃಪ್ತಿಯೂ ಇರುವುದು. (ಜ್ಞಾನೋ. 3:24) ಲುದ್ಯಳಂಥ ವ್ಯಕ್ತಿ ನಮಗೆ ಭೇಟಿಯಾಗಬಹುದೊ ಏನೋ!