ಉತ್ತಮ ಬೋಧಕರಲ್ಲಿ ಇರಬೇಕಾದ ಪ್ರಾಮುಖ್ಯ ಗುಣ
1. ಉತ್ತಮ ಬೋಧಕನಲ್ಲಿ ಇರಬೇಕಾದ ಅತಿ ಪ್ರಾಮುಖ್ಯ ಗುಣ ಯಾವುದು?
1 ಒಬ್ಬ ವ್ಯಕ್ತಿ ಉತ್ತಮ ಬೋಧಕನಾಗಬೇಕಾದರೆ ಅವನಲ್ಲಿ ಏನಿರಬೇಕು? ಐಹಿಕ ಶಿಕ್ಷಣವೋ? ಅನುಭವವೋ? ಸಾಮರ್ಥ್ಯವೋ? ಅಲ್ಲ. ಅವನಲ್ಲಿ ಪ್ರೀತಿ ಇರಬೇಕು. ಧರ್ಮಶಾಸ್ತ್ರವನ್ನು ನೆರವೇರಿಸುವ, ಯೇಸುವಿನ ಶಿಷ್ಯರನ್ನು ಗುರುತಿಸುವ ಹಾಗೂ ಯೆಹೋವನಲ್ಲಿರುವ ಪ್ರಮುಖ ಗುಣಗಳಲ್ಲಿ ಅತ್ಯಂತ ಪ್ರಧಾನ ಹಾಗೂ ಆಕರ್ಷಕ ಗುಣವೇ ಅದು. (ಯೋಹಾ. 13:35; ಗಲಾ. 5:14; 1 ಯೋಹಾ. 4:8) ಉತ್ತಮ ಬೋಧಕರು ಪ್ರೀತಿ ತೋರಿಸುತ್ತಾರೆ.
2. ಜನರ ಮೇಲೆ ನಮಗೆ ಪ್ರೀತಿ ಇರುವುದು ಅವಶ್ಯವೇಕೆ?
2 ಜನರನ್ನು ಪ್ರೀತಿಸಿ: ಮಹಾ ಬೋಧಕನಾದ ಯೇಸು ಜನರನ್ನು ಪ್ರೀತಿಸಿದನು. ಇದು, ಅವನಿಗೆ ಕಿವಿಗೊಡುವಂತೆ ಜನರನ್ನು ಪ್ರೇರಿಸಿತು. (ಲೂಕ 5:12, 13; ಯೋಹಾ. 13:1; 15:13) ನಮಗೆ ಜನರಲ್ಲಿ ಕಾಳಜಿಯಿದ್ದರೆ ಪ್ರತಿಯೊಂದು ಸಂದರ್ಭದಲ್ಲೂ ಸಾಕ್ಷಿ ನೀಡುವೆವು. ಹಿಂಸೆ ನಿರುತ್ಸಾಹಗಳಂಥ ಅಡ್ಡಿತಡೆಗಳಿಂದ ಹಿಂದೇಟು ಹಾಕೆವು. ಸುವಾರ್ತೆ ಸಾರುವ ಪ್ರತಿಯೊಬ್ಬರಲ್ಲಿ ನಾವು ನಿಜವಾದ ವೈಯಕ್ತಿಕ ಆಸಕ್ತಿ ತೋರಿಸುವೆವು. ಅವರ ಚಿಂತೆ ವ್ಯಾಕುಲತೆಗೆ ತಕ್ಕಂತೆ ನಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳುವೆವು. ಪ್ರತಿ ಬೈಬಲ್ ವಿದ್ಯಾರ್ಥಿಯ ಜೊತೆ ಸಾಕಷ್ಟು ಸಮಯ ವ್ಯಯಿಸುವೆವು. ಮಾತ್ರವಲ್ಲ ಪ್ರತಿ ಅಧ್ಯಯನಕ್ಕೆ ಮುಂಚಿತವಾಗಿ ತಯಾರಿಸಲು ಸಹ ಸಾಕಷ್ಟು ಸಮಯ ಕೊಡುವೆವು.
3. ಬೈಬಲ್ ಸತ್ಯಗಳಿಗಾಗಿ ನಮಗಿರುವ ಪ್ರೀತಿ ಶುಶ್ರೂಷೆಗೆ ಹೇಗೆ ಸಹಾಯಕರ?
3 ಬೈಬಲ್ ಸತ್ಯಗಳನ್ನು ಪ್ರೀತಿಸಿ: ಯೇಸು ಬೈಬಲ್ ಸತ್ಯಗಳನ್ನು ಪ್ರೀತಿಸಿದನು ಹಾಗೂ ಅವುಗಳನ್ನು ಬೊಕ್ಕಸದಂತೆ ಅಮೂಲ್ಯವಾಗಿ ಪರಿಗಣಿಸಿದನು. (ಮತ್ತಾ. 13:52) ನಾವು ಸತ್ಯವನ್ನು ಪ್ರೀತಿಸುವುದಾದರೆ ಹುಮ್ಮಸ್ಸಿನಿಂದ ಸಾಕ್ಷಿನೀಡುವೆವು. ಇದು ನಮ್ಮ ಕೇಳುಗರ ಆಸಕ್ತಿ ಕೆರಳಿಸುವುದು. ನಮ್ಮಲ್ಲಿ ಇಂಥ ಪ್ರೀತಿ ಇರುವುದಾದರೆ ನಾವು ನಮ್ಮ ವೈಯಕ್ತಿಕ ಇತಿಮಿತಿಗಳ ಮೇಲೆ ಗಮನ ಕೇಂದ್ರೀಕರಿಸುವುದಿಲ್ಲ ಬದಲಾಗಿ ತಿಳಿಸುತ್ತಿರುವ ಅತ್ಯಮೂಲ್ಯ ಸಂದೇಶದ ಮೇಲೆ ನಮ್ಮ ಗಮನ ಕೇಂದ್ರೀಕರಿಸುವೆವು. ಆಗ ನಾವು ಭಯಪಡದೆ ಧೈರ್ಯದಿಂದ ಸಾರುವೆವು.
4. ನಾವು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು?
4 ಪ್ರೀತಿಯನ್ನು ಬೆಳೆಸಿಕೊಳ್ಳಿ: ನಾವು ಜನರ ಕಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಹೇಗೆ? ಯೆಹೋವ ದೇವರು ಮತ್ತು ಆತನ ಮಗನು ತೋರಿಸಿದ ಪ್ರೀತಿಯ ಕುರಿತ ಹಾಗೂ ನಮ್ಮ ಟೆರಿಟೊರಿಯಲ್ಲಿರುವ ಜನರ ಶೋಚನೀಯ ಆಧ್ಯಾತ್ಮಿಕ ಸ್ಥಿತಿಯ ಕುರಿತ ಮನನ ಈ ನಿಟ್ಟಿನಲ್ಲಿ ಸಹಾಯಕರ. (ಮಾರ್ಕ 6:34; 1 ಯೋಹಾ. 4:10, 11) ನಿಯತ ವೈಯಕ್ತಿಕ ಅಧ್ಯಯನ ಹಾಗೂ ಮನನವು ಬೈಬಲ್ ಸತ್ಯಗಳಿಗಾಗಿ ನಮ್ಮಲ್ಲಿರುವ ಪ್ರೀತಿಯನ್ನು ಹೆಚ್ಚಿಸುವುದು. ಪ್ರೀತಿ ಪವಿತ್ರಾತ್ಮದ ಫಲದ ಅಂಶ. (ಗಲಾ. 5:22) ಹಾಗಾಗಿ ಪ್ರೀತಿಯಲ್ಲಿ ಬೆಳೆಯುತ್ತಾ ಹೋಗಲು ಪವಿತ್ರಾತ್ಮದ ಸಹಾಯಕ್ಕಾಗಿ ಯೆಹೋವನಲ್ಲಿ ಬೇಡಿಕೊಳ್ಳಬಹುದು. (ಲೂಕ 11:13; 1 ಯೋಹಾ. 5:14) ನಮ್ಮ ಐಹಿಕ ಶಿಕ್ಷಣ, ಸತ್ಯದಲ್ಲಿ ಅನುಭವ ಅಥವಾ ಸಾಮರ್ಥ್ಯಗಳು ಏನೇ ಇರಲಿ ಪ್ರೀತಿಯನ್ನು ತೋರಿಸುವ ಮೂಲಕ ನಾವು ಪರಿಣಾಮಕಾರಿ ಬೈಬಲ್ ಬೋಧಕರಾಗಬಲ್ಲೆವು.