ಯುವಜನರೇ, ಪ್ರತಿಫಲ ತರುವ ಗುರಿಗಳನ್ನಿಡಿ
1 ಜೀವನದಲ್ಲಿ ನೀವು ಯಾವ್ಯಾವ ಗುರಿಗಳನ್ನಿಟ್ಟಿದ್ದೀರಿ? ಎಷ್ಟೋ ತರುಣ ತರುಣಿಯರು ಆಧ್ಯಾತ್ಮಿಕ ಗುರಿಗಳನ್ನು ಇಡುವುದೇ ಇಲ್ಲ. ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅವನ್ನು ಸಾಧಿಸಿದಾಗ ಸಿಗುವ ಸಂತೋಷ, ಸಾರ್ಥಕ ಭಾವದಿಂದ ಅವರು ವಂಚಿತರಾಗುತ್ತಿದ್ದಾರೆ. ಆದರೆ ನಿಮಗದನ್ನು ಸವಿಯುವ ಆಸೆ ಇದೆಯಾ?
2 ನಮ್ಮ ಯುವಜನತೆಯಲ್ಲಿ ಎಷ್ಟೋ ಮಂದಿ ಅತ್ಯಾಧುನಿಕ ಶಿಕ್ಷಣ ಹಾಗೂ ಇನ್ನಿತರ ಲೌಕಿಕ ಗುರಿಗಳ ಹಿಂದೆ ಹೋಗುವುದು ವ್ಯರ್ಥ ಎಂದು ಗ್ರಹಿಸಿದ್ದಾರೆ. ಅಂಥ ಗುರಿಗಳಿಂದ ಯಾವುದೇ ಲಾಭವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ದೈವಿಕ ಶಿಕ್ಷಣ, ಆಧ್ಯಾತ್ಮಿಕ ಗುರಿಗಳು ತೃಪ್ತಿ, ಸಾರ್ಥಕತೆಯನ್ನು ತಂದುಕೊಡುತ್ತದೆ. ಮುಂದೆ ಶಾಶ್ವತ ಜೀವನವನ್ನು ಪಡೆಯಲು ನೆರವಾಗುತ್ತದೆ.—ಪ್ರಸಂ. 12:1, 13.
3 ಆಧ್ಯಾತ್ಮಿಕ ಗುರಿಗಳು: ಯುವಜನರೇ, ಪ್ರಯೋಜನಕ್ಕೆ ಬರುವಂಥ ಜ್ಞಾನವನ್ನು ಸಂಪಾದಿಸುತ್ತಿದ್ದಿರಾ? ಜ್ಞಾನೋಕ್ತಿ 2:1-5 ನಮಗೆ “ದೈವಜ್ಞಾನವನ್ನು” ಸಂಪಾದಿಸುವಂತೆ ಸಲಹೆ ನೀಡುತ್ತೆ. ಬೈಬಲನ್ನು ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ದೇವರ ಜ್ಞಾನ ಸಿಗುತ್ತೆ. ನೀವು ಯೆಹೋವನಿಗೆ ಮತ್ತಷ್ಟು ಆಪ್ತರಾಗಲೆಂದೇ ಸಿದ್ಧಗೊಳಿಸಿದ ಬೈಬಲಾಧರಿತ ಪ್ರಕಾಶನಗಳನ್ನು ನಿಯಮಿತವಾಗಿ ಓದುವ ರೂಢಿ ಬೆಳೆಸಿಕೊಳ್ಳಿ. ಆಗ ವಿಷ್ಯಗಳು ನಿಮ್ಮ ಹೃದಯದಾಳಕ್ಕೆ ಹೋಗುವುದು. ದೇವರ ಜ್ಞಾನವನ್ನು ಹೆಚ್ಚೆಚ್ಚು ತಿಳಿದುಕೊಂಡು, ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವಿರಿ. ಹಾಗೆ ಮಾಡಿದರೆ ಮುಂದೆ ಏನೇ ಸವಾಲು ಎದುರಾದಾಗ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಶಕ್ತರಾಗುವಿರಿ.
4 ಇದೆಲ್ಲವನ್ನು ಒಂದೇ ದಿನದಲ್ಲಿ ಸಾಧಿಸುವುದು ಅಸಾಧ್ಯ. ತಾಳ್ಮೆ ಅಗತ್ಯ. ಆಧ್ಯಾತ್ಮಿಕ ಪಕ್ವತೆಗೆ ಬರಲು ಸಮಯ ಹಿಡಿಯುತ್ತದೆ. ಆದರೆ ಒಂದೊಂದೇ ಗುರಿಗಳನ್ನಿಟ್ಟು ಪ್ರಗತಿ ಮಾಡುತ್ತಾ ಬಂದರೆ ನೀವು ಆಧ್ಯಾತ್ಮಿಕವಾಗಿ ಪ್ರಬುದ್ಧರಾಗಬಲ್ಲಿರಿ.
5 ನೀವು ಸೇವಾ ಸುಯೋಗಗಳನ್ನು ಪಡೆಯಲು ಶ್ರಮಿಸುತ್ತಿದ್ದೀರಾ? ಪ್ರತಿವಾರ ಮನೆಮನೆ ಸೇವೆಯಲ್ಲಿ ಇಂತಿಷ್ಟು ತಾಸು ಕಳೆಯಲೇಬೇಕೆಂಬ ಗುರಿ ಇಟ್ಟಿದ್ದೀರಾ? ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನ ಮಾಡುವುದರಲ್ಲಿ ಪರಿಣತ ಬೋಧಕನಾಗಬೇಕೆಂಬ ಗುರಿ ಇಟ್ಟಿದ್ದೀರಾ? ಶಾಲೆ/ಕಾಲೇಜಿಗೆ ರಜೆ ಸಿಕ್ಕಿದಾಗ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬೇಕೆಂಬ ಗುರಿ ಇಟ್ಟಿದ್ದೀರಾ? ಒಂದು ವರ್ಷದಲ್ಲಿ ಅಥವಾ ಮುಂದಿನ ಕೆಲವು ವರ್ಷಗಳೊಳಗೆ ಏನು ಸಾಧಿಸಬೇಕೆಂಬ ಗುರಿ ಇಟ್ಟಿದ್ದೀರಿ? ರೆಗ್ಯುಲರ್ ಪಯನೀಯರ್ ಆಗಬೇಕು ಅಥವಾ ಬೆತೆಲ್ನಲ್ಲಿ ಸೇವೆ ಮಾಡಬೇಕು ಎನ್ನುವುದು ನಿಮ್ಮ ಗುರಿಯಾ? ನೀವೊಬ್ಬ ಯುವ ಸಹೋದರನಾಗಿದ್ದಲ್ಲಿ ಶುಶ್ರೂಷಾ ಸೇವಕನಾಗುವ, ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆಗೆ ಹಾಜರಾಗುವ, ಮುಂದೆ ಹಿರಿಯನಾಗುವ ಗುರಿಯಿಟ್ಟಿದ್ದೀರಾ? ಮನಸ್ಸಿನಲ್ಲಿ ಪಕ್ಕಾ ಗುರಿಗಳನ್ನಿಟ್ಟು ಅದನ್ನು ಸಾಧಿಸಲು ಶ್ರಮಿಸಿದರೆ ನಿಮ್ಮ ಜೀವನವನ್ನು ಉಪಯುಕ್ತ ರೀತಿಯಲ್ಲಿ ಬಳಸಲು ಸಾಧ್ಯವಾಗುವುದು.
6 ಸಾಧಿಸಲು ಸಾಧ್ಯವಿರುವ ಗುರಿಗಳನ್ನಿಡಿ. ಆಧ್ಯಾತ್ಮಿಕ ಗುರಿಗಳನ್ನು ಮುಟ್ಟುವುದರತ್ತ ಸಾಗುತ್ತಿರುವಾಗ ಯೆಹೋವ ದೇವರ ಮನಸ್ಸನ್ನು ಸಂತೋಷ ಪಡಿಸುವಿರಿ. ಇವೆಲ್ಲವನ್ನು ಯೆಹೋವನಿಗೆ ಉತ್ತಮವಾದದ್ದನ್ನು ಕೊಡಬೇಕೆಂಬ ಹೇತುವಿನಿಂದ ಮಾಡಿ. ನಿಮ್ಮ ಶ್ರಮ ವ್ಯರ್ಥವಾಗದು. ಇಂದೂ ಮುಂದೂ ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನು.—ಫಿಲಿ. 4:13.