ನಿಮಗೆ ಇನ್ನೂ ಹೆಚ್ಚು ಸೇವೆ ಮಾಡಬೇಕು ಅಂತ ಅನಿಸುತ್ತಿದೆಯಾ?
1 ದೇವರ ರಾಜ್ಯವನ್ನು ಯೇಸು ಬಹಳ ಬೆಲೆಯುಳ್ಳ ನಿಕ್ಷೇಪಕ್ಕೆ ಹೋಲಿಸಿದನು. (ಮತ್ತಾ. 13:44-46) ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸ ಕೂಡ ನಿಧಿ, ನಿಕ್ಷೇಪದಂತೆ ಅಮೂಲ್ಯ. ಹಾಗಾಗಿ ಸಾರುವ ಕೆಲಸಕ್ಕೆ ನಾವು ಮೊದಲ ಆದ್ಯತೆ ಕೊಡಬೇಕು. ಸಾರುವ ಕೆಲಸದಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದರೆ ಜೀವನದಲ್ಲಿ ಬಹಳಷ್ಟು ತ್ಯಾಗ ಮಾಡಬೇಕಾಗುತ್ತದೆ. (ಮತ್ತಾ. 6:19-21) ಇನ್ನೂ ಹೆಚ್ಚು ಸೇವೆ ಮಾಡಬೇಕು ಅಂತ ನಿಮಗೆ ಅನಿಸುತ್ತಿದೆಯಾ?
2 ಏನು ಮಾಡಬೇಕು? ನೀವು ಮಾಡುತ್ತಿರುವ ಸೇವೆಯನ್ನು ಇನ್ನೂ ಜಾಸ್ತಿ ಮಾಡಲು ಅನೇಕ ವಿಷಯಗಳನ್ನು ಮಾಡಬೇಕಾಗುತ್ತದೆ: (1) ಬದುಕಿನಲ್ಲಿ ಸದಾ ಆಧ್ಯಾತ್ಮಿಕ ವಿಷಯಗಳಿಗೆ ಮೊದಲ ಸ್ಥಾನ ಕೊಡಬೇಕು (ಮತ್ತಾ. 6:33); (2) ದೇವರನ್ನು ನಂಬಬೇಕು ಮತ್ತು ಸಂಪೂರ್ಣ ಅವಲಂಬಿಸಿಕೊಂಡಿರಬೇಕು (2 ಕೊರಿಂ. 4:1, 7); (3) ನಿಷ್ಕಪಟದಿಂದ ಸತತವಾಗಿ ದೇವರನ್ನು ಪ್ರಾರ್ಥಿಸಿ ಸಹಾಯ ಕೇಳಬೇಕು (ಲೂಕ 11:8-10); (4) ಪ್ರಾರ್ಥನೆಗೆ ತಕ್ಕಂತೆ ನಮ್ಮ ಕ್ರಿಯೆಗಳಿರಬೇಕು.—ಯಾಕೋ. 2:14, 17.
3 ಸೇವೆಯನ್ನು ಹೆಚ್ಚಿಸುವ ಮಾರ್ಗಗಳು: ಪ್ರತಿ ತಿಂಗಳು ಇಂತಿಷ್ಟು ಸಮಯ ಕ್ಷೇತ್ರಸೇವೆ ಮಾಡಬೇಕು ಎನ್ನುವ ಗುರಿಯನ್ನು ನಾವೆಲ್ಲರೂ ಇಟ್ಟಿದ್ದೇವೆ. ಅದೇ ರೀತಿ ಸಿಕ್ಕಿದ ಪ್ರತಿಯೊಂದು ಅವಕಾಶವನ್ನು ಅನೌಪಚಾರಿಕ ಸಾಕ್ಷಿನೀಡಲು ಬಳಸುತ್ತಿದ್ದೀರಾ? ನಿರೂಪಣೆಯನ್ನು ಇನ್ನೂ ಚೆನ್ನಾಗಿ ನೀಡಲು ಪ್ರಯತ್ನಿಸುತ್ತಿದ್ದೀರಾ? ಪುನರ್ಭೇಟಿಗಳನ್ನು ಪರಿಣಾಮಕಾರಿಯಾಗಿ ಮಾಡಲು ಪ್ರಯತ್ನಿಸುತ್ತಿದ್ದೀರಾ? ಫಲಕಾರಿಯಾದ ಬೈಬಲ್ ಅಧ್ಯಯನಗಳನ್ನು ನಡೆಸಲು ಶ್ರಮಿಸುತ್ತಿದ್ದೀರಾ? ಆಕ್ಸಿಲಿಯರಿ ಪಯನೀಯರ್ ಸೇವೆ ಅಥವಾ ರೆಗ್ಯುಲರ್ ಪಯನೀಯರ್ ಸೇವೆ ಅಥವಾ ಪ್ರಚಾರಕರ ಅಗತ್ಯವಿರುವ ಪ್ರದೇಶಕ್ಕೆ ಹೋಗಿ ಸೇವೆ ಮಾಡಬಲ್ಲಿರಾ? ದೀಕ್ಷಾಸ್ನಾನ ಪಡೆದಿರುವ ಸಹೋದರರಾದರೆ ಶುಶ್ರೂಷಾ ಸೇವಕ ಅಥವಾ ಹಿರಿಯರಾಗುವ ಗುರಿಯಿಟ್ಟು ಸಾಧಿಸಬಲ್ಲಿರಾ? (1 ತಿಮೊ. 3:1, 10) ಬೆತೆಲ್ಗೆ ಅಥವಾ ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆಗೆ ಅಥವಾ ಕ್ರೈಸ್ತ ದಂಪತಿಗಳಿಗಾಗಿ ಬೈಬಲ್ ಶಾಲೆಗೆ ಹೋಗುವ ಗುರಿ ಇಡಬಲ್ಲಿರಾ?—ಲೂಕ 10:2.
4 ಪೂರ್ಣಕಾಲಿಕ ಉದ್ಯೋಗ ಮಾಡುತ್ತಿದ್ದ ಸಹೋದರರೊಬ್ಬರು ಕ್ರೀಡೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ರೆಗ್ಯುಲರ್ ಪಯನೀಯರ್ ಸೇವೆ ಮಾಡುವಂತೆ ಅವರನ್ನು ಉತ್ತೇಜಿಸಲಾಯಿತು. ಹಾಗಾಗಿ ಅವರು ಆಕ್ಸಿಲಿಯರಿ ಪಯನೀಯರ್ ಸೇವೆ ಶುರುಮಾಡಿದರು. ಆಮೇಲೆ ತಮ್ಮ ಜೀವನದಲ್ಲಿ ಬೇಕಾದ ಹೊಂದಾಣಿಕೆಗಳನ್ನು ಮಾಡಿಕೊಂಡು ಪೂರ್ಣ ಸಮಯ ಸೇವೆ ಆರಂಭಿಸಿದರು. ನಂತರ ಶುಶ್ರೂಷಾ ತರಬೇತಿ ಶಾಲೆ (ಈಗ ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆ) ಹಾಜರಾದರು. ಅದರಿಂದ ಅವರಿಗೆ ಸಿಕ್ಕಿದ ನೆರವಿನಿಂದಾಗಿ ಇಂದು ಅವರು ಸರ್ಕಿಟ್ ಮೇಲ್ವಿಚಾರಕರಾಗಿ ಸೇವೆ ಮಾಡಲು ಸಾಧ್ಯವಾಗಿದೆ. ಅವರಿಗೆ ಸಿಕ್ಕಿದ ಪ್ರೋತ್ಸಾಹಕ್ಕೆ ಸ್ಪಂದಿಸಿದ್ದನ್ನು ನೆನಸಿಕೊಂಡು ಸಂತೋಷ ಪಡುತ್ತಿದ್ದಾರೆ. ಮಾತ್ರವಲ್ಲ ದೇವರ ಸೇವೆಯನ್ನು ಇನ್ನೂ ಹೆಚ್ಚು ಮಾಡಬೇಕು ಅಂತ ಅವರು ತೆಗೆದುಕೊಂಡ ತೀರ್ಮಾನ ಇವತ್ತು ಅವರಿಗೆ ಬಹಳ ಆನಂದ ತಂದಿದೆ.
5 ಹೆಚ್ಚು ಸೇವೆಮಾಡಲು ತಮ್ಮನ್ನೇ ನೀಡಿಕೊಳ್ಳುವವರನ್ನು ಯೆಹೋವ ದೇವರು ಆಶೀರ್ವದಿಸುತ್ತಾನೆ. (ಯೆಶಾ. 6:8) ಇನ್ನೂ ಹೆಚ್ಚು ಸೇವೆ ಮಾಡುವುದರಿಂದ ಯಾವುದೂ ನಿಮ್ಮನ್ನು ತಡೆಯದಿರಲಿ. ಅಪಾರ ಸಂತೃಪ್ತಿ, ಚೈತನ್ಯ ನಿಮ್ಮದಾಗಲಿ.