ಸ್ನೇಹಪರ ಸಂಭಾಷಣೆಗಳು ಹೃದಯ ಮುಟ್ಟುತ್ತವೆ
1 ಸಂಭಾಷಣೆಯ ಅರ್ಥ “ಮಾತಿನ ಮೂಲಕ ವಿಚಾರಗಳ ವಿನಿಮಯ.” ಜನರಿಗೆ ಸಂಬಂಧಪಟ್ಟ ಒಂದು ವಿಷಯದ ಬಗ್ಗೆ ಸ್ನೇಹಪರ ಸಂಭಾಷಣೆ ಆರಂಭಿಸುವಾಗ ಅವರಿಗೆ ನಮ್ಮ ಮಾತಲ್ಲಿ ಆಸಕ್ತಿ ಹುಟ್ಟುತ್ತದೆ. ರಾಜ್ಯ ಸಂದೇಶವನ್ನು ಅವರ ಹೃದಯಕ್ಕೆ ಮುಟ್ಟಿಸಲು ನೆರವಾಗುತ್ತದೆ. ನಾವೇ ಪ್ರವಚನ ಮಾಡುತ್ತಾ ಇರುವ ಬದಲು ಜನರನ್ನು ಸ್ನೇಹಪರ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿಯೆಂದು ಅನುಭವದಿಂದ ತಿಳಿದುಬಂದಿದೆ.
2 ಸ್ನೇಹಪರ ಸಂಭಾಷಣೆ ಆರಂಭಿಸುವ ವಿಧ: ಇತರರನ್ನು ಸಂಭಾಷಣೆಯಲ್ಲಿ ತೊಡಗಿಸಲಿಕ್ಕಾಗಿ ನಾವು ಹಲವಾರು ದೊಡ್ಡದೊಡ್ಡ ವಿಚಾರಗಳ, ವಚನಗಳ ಉದ್ದ ಸರಣಿಯನ್ನು ಪ್ರಸ್ತಾಪಿಸಬೇಕೆಂದು ಅರ್ಥವಲ್ಲ. ಮನೆಯವರು ನಮ್ಮೊಟ್ಟಿಗೆ ಮಾತಾಡುವಂತೆ ಮಾಡಬೇಕು ಅಷ್ಟೇ. ಉದಾಹರಣೆಗೆ ನಮ್ಮ ಪಕ್ಕದ ಮನೆಯವರೊಟ್ಟಿಗೆ ಹೇಗೆ ಸ್ನೇಹಪರ ಸಂಭಾಷಣೆ ನಡೆಸುತ್ತೇವೆಂದು ಯೋಚಿಸಿ. ಇಬ್ಬರಿಗೂ ಯಾವುದೇ ಬಿಗುಮಾನ ಇರುವುದಿಲ್ಲ, ಆರಾಮವಾಗಿ ಮಾತಾಡುತ್ತೇವೆ. ಮುಂದೇನು ಹೇಳಬೇಕು ಅಂತ ನಾವು ಯೋಚಿಸುತ್ತಾ ಇರುವುದಿಲ್ಲ. ಬದಲಾಗಿ ಅವರು ಹೇಳುವ ವಿಷಯಗಳಿಗೆ ಸಹಜ ರೀತಿಯಲ್ಲಿ ಸ್ಪಂದಿಸುತ್ತಾ ಇರುತ್ತೇವೆ. ಅವರು ಮಾತಾಡುತ್ತಿರುವಾಗ ನಾವು ನಿಜವಾದ ಆಸಕ್ತಿ ತೋರಿಸಿದರೆ ಅವರಿಗೆ ನಮ್ಮೊಟ್ಟಿಗೆ ಮಾತಾಡುತ್ತಾ ಇರಲು ಮನಸ್ಸಾಗುತ್ತದೆ. ಇತರರಿಗೆ ಸಾಕ್ಷಿಕೊಡುತ್ತಿರುವಾಗಲೂ ನಾವು ಇದನ್ನೇ ಮಾಡುತ್ತಿರಬೇಕು.
3 ಸ್ನೇಹಪರ ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಅಪರಾಧ, ಯುವಜನರ ಸಮಸ್ಯೆ, ಸ್ಥಳೀಯ ಸಮಸ್ಯೆ, ಲೋಕದ ಪರಿಸ್ಥಿತಿಯಂಥ ವಿಷಯಗಳನ್ನು ಬಳಸಬಹುದು. ಹವಾಮಾನದ ಕುರಿತು ಹೇಳಿಯೂ ಮಾತುಕತೆ ಆರಂಭಿಸಬಹುದು. ಜನರ ಬದುಕನ್ನು ನೇರವಾಗಿ ಪ್ರಭಾವಿಸುವಂಥ ವಿಷಯಗಳು ಅವರ ಆಸಕ್ತಿಯನ್ನು ಕೆರಳಿಸುವುದರಲ್ಲಿ ಪರಿಣಾಮಕಾರಿ ಆಗಿರುತ್ತವೆ. ಮನೆಯವರು ಸಂಭಾಷಣೆಯಲ್ಲಿ ತೊಡಗಿದ ಬಳಿಕ ಸೌಮ್ಯವಾಗಿ ಅದನ್ನು ರಾಜ್ಯದ ಸಂದೇಶದೆಡೆಗೆ ತಿರುಗಿಸಬಹುದು.
4 ಬಿಗುಮಾನವಿಲ್ಲದೆ ಆರಾಮವಾಗಿ ಸಂಭಾಷಣೆ ನಡೆಸಲು ಮುನ್ತಯಾರಿ ಅಗತ್ಯವಿಲ್ಲ ಎಂದಲ್ಲ. ತಯಾರಿ ಬೇಕೇ ಬೇಕು. ಹಾಗಿದ್ದರೂ, ತುಂಬ ಕಟ್ಟುನಿಟ್ಟಾದ ಹೊರಮೇರೆಯನ್ನು ತಯಾರಿಸುವ ಇಲ್ಲವೆ ಮಾತಾಡುವ ವಿಷಯವನ್ನು ಚೆನ್ನಾಗಿ ಬಾಯಿಪಾಠ ಮಾಡಿ ಹೋಗುವ ಅಗತ್ಯವಿಲ್ಲ. ಹೀಗೆ ಮಾಡಿದರೆ ಸಂಭಾಷಣೆಯನ್ನು ಸನ್ನಿವೇಶಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲು ಆಗಲಿಕ್ಕಿಲ್ಲ. (1 ಕೊರಿಂಥ 9:20-23 ಹೋಲಿಸಿ.) ತಯಾರಿ ಮಾಡುವ ಅತ್ಯುತ್ತಮ ವಿಧ ಒಂದೆರಡು ಬೈಬಲಾಧಾರಿತ ವಿಷಯಗಳನ್ನು ಆಯ್ಕೆಮಾಡುವುದೇ. ನಿಮ್ಮ ಸಂಭಾಷಣೆಗಳನ್ನು ಇವುಗಳ ಸುತ್ತ ಹೆಣೆದುಕೊಳ್ಳಲು ಪ್ರಯತ್ನಿಸಿ.
5 ಸ್ನೇಹಪರ ಸಂಭಾಷಣೆ ಮಾಡಲು ಅಗತ್ಯ ಗುಣಗಳು: ನಾವು ಸಂಭಾಷಣೆ ಮಾಡುವಾಗ ಉತ್ಸುಕತೆ ಹಾಗೂ ಯಥಾರ್ಥಭಾವದಿಂದ ಮಾತಾಡಬೇಕು. ಹರ್ಷಚಿತ್ತ ಮತ್ತು ನಗುಮುಖದ ಮೂಲಕ ಈ ಗುಣಗಳನ್ನು ತೋರಿಸಬಹುದು. ನಮ್ಮ ಬಳಿಯಿರುವ ಸಂದೇಶವು ಜಗತ್ತಲ್ಲೇ ಅತ್ಯುತ್ತಮವಾದದ್ದು. ಸಹೃದಯದ ಜನರಿಗೆ ತುಂಬ ಆಕರ್ಷಣೀಯವಾದದ್ದು. ಸಂತೋಷದ ಸುದ್ದಿಯನ್ನು ಹಂಚುವ ಯಥಾರ್ಥ ಆಸೆಯಿಂದ ನಾವು ಅವರಲ್ಲಿ ಆಸಕ್ತಿ ತೋರಿಸುತ್ತಿದ್ದೇವೆಂದು ಅವರು ಗ್ರಹಿಸಲು ಶಕ್ತರಾಗಬೇಕು. ಆಗ ಅವರು ನಮಗೆ ಕಿವಿಗೊಡಲು ಮನಸ್ಸುಮಾಡಬಹುದು.—2 ಕೊರಿಂ. 2:17.
6 ಸಂಭಾಷಣೆಯಲ್ಲಿ ತೊಡಗುವುದು ಒಂದು ಹರ್ಷಕರ ಅನುಭವ ಆಗಿರಬೇಕು. ಆದ್ದರಿಂದಲೇ ನಾವು ರಾಜ್ಯ ಸಂದೇಶವನ್ನು ದಯೆಯಿಂದ, ಜಾಣ್ಮೆಯಿಂದ ತಿಳಿಸಬೇಕು. (ಗಲಾ. 5:22; ಕೊಲೊ. 4:6) ಒಂದುವೇಳೆ ನಾವು ಈ ಬಾರಿ ಮನೆಯವರ ಹೃದಯವನ್ನು ಮುಟ್ಟಲು ಸಾಧ್ಯವಾಗದಿದ್ದರೂ, ಅಲ್ಲಿಂದ ಹೊರಡುವಾಗ ಅವರ ಮನಸ್ಸಲ್ಲಿ ನಮ್ಮ ಬಗ್ಗೆ ಒಳ್ಳೇ ಅಭಿಪ್ರಾಯವಿರುವಂತೆ ನೋಡಿಕೊಳ್ಳಿ. ಹೀಗೆ ಮಾಡಿದರೆ, ಮುಂದಿನ ಬಾರಿ ಸಾಕ್ಷಿಯೊಬ್ಬರು ಅವರೊಟ್ಟಿಗೆ ಮಾತಾಡುವಾಗ ಅವರಿಂದ ಹೆಚ್ಚು ಉತ್ತಮ ಪ್ರತಿಕ್ರಿಯೆ ಸಿಗಬಹುದು.
7 ಸ್ನೇಹಪರ ಸಂಭಾಷಣೆಯನ್ನು ಆರಂಭಿಸಲಿಕ್ಕಾಗಿ ಒಂದು ದೊಡ್ಡ ಉಪನ್ಯಾಸ ಕೊಡುವುದರಲ್ಲಿ ಪರಿಣಿತರಾಗುವ ಅಗತ್ಯವಿಲ್ಲ. ಎದುರಿಗಿರುವ ವ್ಯಕ್ತಿಗೆ ಮುಖ್ಯವೆಂದನಿಸುವ ವಿಷಯದಲ್ಲಿ ಆಸಕ್ತಿ ಕೆರಳಿಸಿದರೆ ಸಾಕು. ನಾವು ಮುನ್ತಯಾರಿ ಮಾಡುವಲ್ಲಿ ಜನರನ್ನು ಸ್ನೇಹಪರ ಸಂಭಾಷಣೆಗಳಲ್ಲಿ ತೊಡಗಿಸಲು ಸಿದ್ಧರಾಗಿರುವೆವು. ನಾವು ಭೇಟಿಯಾಗುವ ಜನರೊಂದಿಗೆ ರಾಜ್ಯದ ಅನಂತ ಆಶೀರ್ವಾದಗಳ ಕುರಿತ ಸರ್ವೋತ್ತಮ ಸುದ್ದಿಯನ್ನು ಹಂಚೋಣ. ಹೀಗೆ ಅವರ ಹೃದಯಗಳನ್ನು ಮುಟ್ಟಲು ಪ್ರಯತ್ನಿಸೋಣ.—2 ಪೇತ್ರ 3:13.