ಪಯನೀಯರ್ ಸೇವೆ ಮಾಡಲು ನಿಮ್ಮಿಂದಾಗುತ್ತಾ?
1 “ಬೇರೆ ಯಾವುದೇ ಕೆಲಸದಲ್ಲೂ ಇಂಥ ಸಂತೋಷ ಕಂಡುಕೊಳ್ಳೋಕೆ ಸಾಧ್ಯನೇ ಇಲ್ಲ!” ಎಂದು ಪಯನೀಯರ್ ಸೇವೆಯನ್ನು ತಮ್ಮ ಜೀವನವನ್ನಾಗಿ ಮಾಡಿಕೊಂಡಿರುವ ಲಕ್ಷಾಂತರ ಯೆಹೋವನ ಸಾಕ್ಷಿಗಳು ಹೆಮ್ಮೆಯಿಂದ ಹೇಳುತ್ತಾರೆ. ‘ನಾನೂ ಈ ಪಯನೀಯರ್ ಸೇವೆ ಮಾಡಕ್ಕಾಗುತ್ತಾ?’ ಎಂದು ಯಾವಾಗಲಾದರೂ ಪ್ರಾರ್ಥನಾಪೂರ್ವಕವಾಗಿ ಯೋಚಿಸಿದ್ದೀರೋ? ಸಮರ್ಪಣೆ ಮಾಡಿಕೊಂಡಾಗ, ಇನ್ನು ಮುಂದೆ ನಾವು ಸಂಪೂರ್ಣವಾಗಿ ಯೆಹೋವನಿಗಾಗಿ ಜೀವಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಹಾಗೆಂದ ಮೇಲೆ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಮ್ಮ ಪೂರ್ಣ ಬೆಂಬಲ ಕೊಡುವುದರ ಕುರಿತು ನಾವೆಲ್ಲರೂ ಯೋಚಿಸಲೇಬೇಕಲ್ವಾ? ಆ ರೀತಿ ಯೋಚಿಸಲು ಪಯನೀಯರ್ ಸೇವೆಯ ಬಗ್ಗೆ ಸಾಮಾನ್ಯವಾಗಿ ಕೇಳುವ ಕೆಲವು ಪ್ರಶ್ನೆಗಳನ್ನು ನಾವೀಗ ಪರಿಗಣಿಸೋಣ.
ಪ್ರಶ್ನೆ 1: “ಪಯನೀಯರ್ ಸೇವೆ ಎಲ್ಲರ ಕೈಯಲ್ಲೂ ಆಗಲ್ಲ ಅಂತ ಕೆಲವರು ಹೇಳ್ತಾರೆ. ಇನ್ನು ನನ್ನ ಕೈಯಲ್ಲಾಗುತ್ತಾ?”
2 ಇದಕ್ಕೆ ಉತ್ತರ ನಿಮ್ಮ ಸನ್ನಿವೇಶ ಮತ್ತು ಶಾಸ್ತ್ರಾಧಾರಿತ ಅರ್ಹತೆಗಳ ಮೇಲಾಧರಿಸಿದೆ. ಅನಾರೋಗ್ಯದ ಮತ್ತು ಸದ್ಯದ ಜೀವನದ ತೊಂದರೆಗಳಿಂದಾಗಿ ಎಷ್ಟೋ ಜನರಿಗೆ ತಿಂಗಳಲ್ಲಿ 70 ತಾಸು ಸೇವೆಯಲ್ಲಿ ಕಳೆಯಲು ಸಾಧ್ಯವಾಗದಿರಬಹುದು. ಆದರೆ ಅವರು ಸಾಧ್ಯವಾದಾಗೆಲ್ಲ ಹೆಚ್ಚು ಸೇವೆಯನ್ನು ಮಾಡಲು ಪ್ರಯತ್ನಿಸುತ್ತಾರೆ. ಅವಕಾಶ ಸಿಕ್ಕಾಗ ವರ್ಷದಲ್ಲಿ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುತ್ತಿದ್ದಾರೆ. ಹೀಗೆ ಹೆಚ್ಚು ಸೇವೆ ಮಾಡುವುದರಿಂದ ಸಿಗುವ ಆನಂದವನ್ನು ಸವಿಯುತ್ತಿದ್ದಾರೆ. (ಗಲಾ. 6:9) ಪೂರ್ಣ ಸಮಯದ ಸೇವೆ ಮಾಡಲು ಕೆಲವರ ಪರಿಸ್ಥಿತಿ ಈಗ ಅಡ್ಡಗೋಡೆಯಂತಿದ್ದರೂ ಪಯನೀಯರ್ ಆತ್ಮವನ್ನು ಬೆಳೆಸಿಕೊಳ್ಳಲು ಇತರರಿಗೆ ಸಹಾಯ ಮಾಡುತ್ತಿದ್ದಾರೆ. ಇಂಥ ಹುರುಪಿನ ಪ್ರಚಾರಕರು ಸಭೆಗೆ ಆಶೀರ್ವಾದವಾಗಿದ್ದಾರೆ.
3 ಮತ್ತೊಂದೆಡೆ, ಜೀವನದಲ್ಲಿ ಅಷ್ಟೊಂದು ಜವಾಬ್ದಾರಿಗಳಿರದ ಕೆಲವರು ತಮ್ಮ ಆದ್ಯತೆಗಳನ್ನು ಬದಲಾಯಿಸಿಕೊಂಡು ಪಯನೀಯರ್ ಸೇವೆ ಮಾಡುತ್ತಿದ್ದಾರೆ. ನಿಮ್ಮ ಕುರಿತೇನು? ನೀವು ಶಾಲೆ ಮುಗಿಸಿರುವ ಯುವ ಪ್ರಾಯದವರಾಗಿದ್ದೀರಾ? ಮಕ್ಕಳ ಜವಾಬ್ದಾರಿ ಇಲ್ಲದ ದಂಪತಿಗಳಾಗಿದ್ದೀರಾ? ಕೆಲಸದಿಂದ ನಿವೃತ್ತರಾಗಿದ್ದೀರಾ? ನಿಮ್ಮ ಗಂಡ ಒಬ್ಬರೇ ಕುಟುಂಬದ ಆರ್ಥಿಕ ಅಗತ್ಯತೆಗಳನ್ನು ನೋಡಿಕೊಳ್ಳಲು ಸಾಧ್ಯನಾ? ಹಾಗಾದರೆ ನೀವೇಕೆ ಪಯನೀಯರ್ ಸೇವೆ ಬಗ್ಗೆ ಒಮ್ಮೆ ಯೋಚಿಸಬಾರದು? ಈ ಸೇವೆಯನ್ನು ಮಾಡೋದು ಬಿಡೋದು ಪ್ರತಿಯೊಬ್ಬರೂ ಸ್ವತಃ ಮಾಡಬೇಕಾದ ನಿರ್ಣಯ. ಆದರೆ ಪ್ರಶ್ನೆ, ಈ ಸೇವೆಗಾಗಿ ನೀವೇನಾದರೂ ಬದಲಾವಣೆ ಮಾಡಿಕೊಳ್ಳಲು ಸಾಧ್ಯನಾ?
4 ಸೈತಾನನು ಈ ಲೋಕದ ಅಪಕರ್ಷಣೆಗಳನ್ನು ಉಪಯೋಗಿಸಿ, ಸ್ವಾರ್ಥಪರ ಜೀವನ ನಡೆಸುವಂತೆ ಮಾಡುತ್ತಾನೆ. ಈ ಲೋಕದ ಭಾಗವಾಗದೆ ಇರಲು ನಾವು ದೃಢ ಮನಸ್ಸು ಮಾಡುವುದಾದರೆ, ತನ್ನ ರಾಜ್ಯವನ್ನು ನಮ್ಮ ಜೀವನದಲ್ಲಿ ಪ್ರಥಮವಾಗಿಡಲು, ಎಲ್ಲ ದೇವಪ್ರಭುತ್ವಾತ್ಮಕ ಸೇವೆಗಳನ್ನು ಎಟುಕಿಸಿಕೊಳ್ಳಲು ಮತ್ತು ಅದರಲ್ಲಿ ಆನಂದಿಸಲು ಯೆಹೋವನು ಖಂಡಿತ ಸಹಾಯಮಾಡುವನು. ನಿಮ್ಮಿಂದ ಸಾಧ್ಯವಿದ್ದರೆ, ಪಯನೀಯರ್ ಸೇವೆಗಾಗಿ ಏಕೆ ಹೊಂದಾಣಿಕೆ ಮಾಡಬಾರದು?
ಪ್ರಶ್ನೆ 2: “ನಾನು ಪೂರ್ಣ ಸಮಯದ ಸೇವೆಗೆ ಇಳಿದರೆ ಜೀವನಕ್ಕೆ ಏನು ಮಾಡೋದು?”
5 ಅನೇಕ ದೇಶಗಳಲ್ಲಿ ದಿನನಿತ್ಯದ ಜೀವನಕ್ಕೆ ಬೇಕಾದಷ್ಟು ಹಣ ಗಳಿಸಲು ಕೂಡ ಹೆಚ್ಚೆಚ್ಚು ತಾಸು ಕೆಲಸ ಮಾಡಬೇಕಿದೆ. ಹೀಗಿದ್ದರೂ ಅನೇಕ ವರ್ಷಗಳಿಂದ ಎಷ್ಟೋ ಸಹೋದರರು ಪಯನೀಯರ್ ಸೇವೆ ಮಾಡುತ್ತಾ ಬಂದಿದ್ದಾರೆ ಮತ್ತು ಯೆಹೋವನು ಅವರನ್ನು ಕಾಪಾಡುತ್ತಾ ಬಂದಿದ್ದಾನೆ. ನೀವೊಬ್ಬ ಯಶಸ್ವಿ ಪಯನೀಯರ್ ಆಗಬೇಕಾದರೆ ನಂಬಿಕೆ ಮತ್ತು ಸ್ವತ್ಯಾಗ ಅತ್ಯಗತ್ಯ. (ಮತ್ತಾ. 17:20) ‘ಯೆಹೋವನಲ್ಲಿ ಬೇಡಿಕೊಳ್ಳುವವರಿಗೆ ಯಾವುದೇ ಒಳ್ಳೆಯ ವಿಷಯಗಳ ಕೊರತೆ ಇರುವುದಿಲ್ಲ’ ಎಂಬ ಆಶ್ವಾಸನೆ ಕೀರ್ತನೆ 34:10ರಲ್ಲಿದೆ. (ಪವಿತ್ರ ಬೈಬಲ್) ಆದ್ದರಿಂದ ಪಯನೀಯರ್ ಸೇವೆಗೆ ಇಳಿಯುವವರೆಲ್ಲರೂ ಯೆಹೋವನು ತಮ್ಮ ಅಗತ್ಯಗಳನ್ನು ಖಂಡಿತ ಒದಗಿಸುತ್ತಾನೆ ಎಂದು ಸಂಪೂರ್ಣವಾಗಿ ನಂಬಬೇಕು. ಈಗಾಗಲೇ ಯೆಹೋವನು ಎಲ್ಲಾ ನಂಬಿಗಸ್ತ ಪಯನೀಯರರ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾನೆ. (ಕೀರ್ತ. 37:25) ಆದರೆ 2 ಥೆಸಲೊನೀಕ 3:8, 10 ಮತ್ತು 1 ತಿಮೊಥೆಯ 5:8ರಲ್ಲಿರುವ ಮೂಲತತ್ವದ ಪ್ರಕಾರ ಪಯನೀಯರರು ಯಾರಿಂದಲೂ ಆರ್ಥಿಕ ಸಹಾಯ ನಿರೀಕ್ಷಿಸಬಾರದು.
6 ಪಯನೀಯರ್ ಸೇವೆ ಮಾಡಲು ಯೋಚಿಸುವವರು ಯೇಸು ಹೇಳಿದಂತೆ ‘ಮೊದಲು ಕುಳಿತುಕೊಂಡು ಲೆಕ್ಕ ಮಾಡಬೇಕು.’ (ಲೂಕ 14:28) ಈ ರೀತಿ ಮಾಡುವುದು ವಿವೇಕಯುತವಾಗಿರುತ್ತದೆ. ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಪಯನೀಯರ್ ಸೇವೆ ಮಾಡುತ್ತಿರುವವರ ಜೊತೆ ಮಾತಾಡಿ. ಯೆಹೋವನು ಅವರನ್ನು ಹೇಗೆ ಕಾಪಾಡುತ್ತಾ ಬಂದಿದ್ದಾನೆಂದು ತಿಳಿದುಕೊಳ್ಳಿ. ಉದಾಹರಣೆಗೆ, ಸಂಚರಣ ಮೇಲ್ವಿಚಾರಕರನ್ನು ಕೇಳಬಹುದು, ಅವರು ಅನುಭವಸ್ಥ ಪಯನೀಯರರು. ಪೂರ್ಣ ಸಮಯದ ಸೇವೆಯಲ್ಲಿ ಯಶಸ್ವಿಗಳಾಗುವುದು ಹೇಗೆ ಎಂದು ತಿಳಿಸಲು ಅವರು ಸಂತೋಷಿಸುತ್ತಾರೆ.
7 ಇಂದು ಲೋಕ, ಆಡಂಬರ ಜೀವನದ ಆಸೆಯ ಬಲೆಗೆ ಬಿದ್ದಿದೆ. ಆ ಒತ್ತಡ ನಮ್ಮ ಮೇಲೂ ದಿನೇ ದಿನೇ ಹೆಚ್ಚುತ್ತಿದೆ. ಆದರೆ ನಾವು ದೀನರಾಗಿದ್ದು ಪೂರ್ಣ ಸಮಯದ ಸೇವೆಯನ್ನು ಮಾನ್ಯ ಮಾಡುವುದಾದರೆ ನಮಗಿರುವುದರಲ್ಲೇ ತೃಪ್ತರಾಗಿರುವೆವು. (1 ತಿಮೊ. 6:8) ಜೀವನವನ್ನು ಸರಳವಾಗಿಟ್ಟು, ಅನಗತ್ಯ ವಿಷಯಗಳಿಂದ ದೂರವಿರುವ ಪಯನೀಯರರಿಗೆ ಸೇವೆಯಲ್ಲಿ ಕಳೆಯಲು ಹೆಚ್ಚು ಸಮಯ ಸಿಗುತ್ತದೆ. ಜೊತೆಗೆ ಇತರರಿಗೆ ಸತ್ಯವನ್ನು ಕಲಿಸುವುದರಿಂದ ಅಪರಿಮಿತ ಸಂತೋಷ ಹಾಗೂ ಆಧ್ಯಾತ್ಮಿಕ ಬಲ ಸಿಗುತ್ತದೆ. ಹಾಗಂತ ಅವರು ಸನ್ಯಾಸಿಗಳಂತೆ ಜೀವಿಸುತ್ತಿಲ್ಲ. ಬದಲಿಗೆ ಹಣದ ಬಗ್ಗೆ ಅವರಿಗಿರುವ ಈ ಸಮತೂಕದ ನೋಟದಿಂದಾಗಿ ಸೇವೆಯಲ್ಲಿ ಸಂತೋಷಿಸುತ್ತಿದ್ದಾರೆ.
8 ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ, ಈ ದುಷ್ಟ ಲೋಕಕ್ಕೆ ಉಳಿದಿರುವ ಸಮಯ ತುಂಬ ಕಡಿಮೆ ಎಂದು ಗ್ರಹಿಸುವುದಾದರೆ, ಜನರಿಗೆ ಸುವಾರ್ತೆ ಸಾರಬೇಕೆಂಬ ನಮ್ಮ ಹಂಬಲ ಖಂಡಿತ ಹೆಚ್ಚಾಗುತ್ತದೆ. ಇದಕ್ಕಾಗಿ ನಾವು ಸ್ವತ್ಯಾಗ ಮಾಡಿ, ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿಕೊಳ್ಳುತ್ತೇವೆ. ನಿಮ್ಮ ಈಗಿನ ಆರ್ಥಿಕ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ನಿಮ್ಮ ಚಿಂತೆಯನ್ನು ಯೆಹೋವನ ಮೇಲೆ ಹಾಕುವುದರಿಂದ ಪೂರ್ಣ ಸಮಯದ ಸೇವೆ ಮಾಡಬಹುದು. ಪಯನೀಯರ್ ಸೇವೆ ಮಾಡಲು ನೀವು ಕೆಲವೊಂದು ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಬೇಕಾದರೂ ಯೆಹೋವನು ಕೊಡುವ ಹೇರಳ ಆಶೀರ್ವಾದಗಳಲ್ಲಿ ಖಂಡಿತ ಆನಂದಿಸುವಿರಿ.—ಕೀರ್ತ. 145:16
ಪ್ರಶ್ನೆ 3: ನಾನಿನ್ನೂ ಹದಿವಯಸ್ಸಿನಲ್ಲಿದ್ದೇನೆ, ಈಗಲೇ ಪಯನೀಯರ್ ಸೇವೆ ಬಗ್ಗೆ ಯೋಚಿಸಬೇಕಾ?
9 ಶಾಲೆ ಇನ್ನೇನು ಮುಗಿಯುತ್ತಿರುವಾಗಲೇ ಸಾಮಾನ್ಯವಾಗಿ ಎಲ್ಲರೂ ತಮ್ಮ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ನೀವು ಸಹ ಸುಭದ್ರ, ಸಂತೋಷಕರ ಮತ್ತು ಸಂತೃಪ್ತಿಕರ ಜೀವನ ಬೇಕೆಂದು ಬಯಸಬಹುದು. ಶಾಲೆಯಲ್ಲಿ ಶಿಕ್ಷಕರು ಹೆಚ್ಚು ಹಣ ಗಳಿಸಲು ನಿಮ್ಮನ್ನು ಪ್ರೇರಿಸಿ, ವರ್ಷಾನುಗಟ್ಟಲೆ ಉನ್ನತ ಶಿಕ್ಷಣ ಪಡೆಯವಂತೆ ಸಲಹೆ ಕೊಡಬಹುದು. ಆದರೆ ಯೆಹೋವನ ಸೇವೆಯನ್ನು ಪೂರ್ಣವಾಗಿ ಮಾಡಬೇಕೆಂದು ನಿಮ್ಮ ಸುಶಿಕ್ಷಿತ ಮನಸ್ಸಾಕ್ಷಿ ನಿಮ್ಮನ್ನು ಪ್ರೇರಿಸುತ್ತದೆ. (ಪ್ರಸಂ. 12:1) ಮುಂದೊಂದು ದಿನ ಮದುವೆ ಮಾಡಿಕೊಂಡು ಒಂದು ಕುಟುಂಬ ಪ್ರಾರಂಭಿಸುವ ಯೋಚನೇನೂ ನಿಮಗಿರಬಹುದು. ಇಂಥ ಸಂದರ್ಭದಲ್ಲಿ ನೀವೇನು ಮಾಡುವಿರಿ?
10 ನಿಮ್ಮ ಭವಿಷ್ಯ ಹೇಗಿರುತ್ತೆ ಅನ್ನುವುದು ಹೆಚ್ಚಿನಾಂಶ ನೀವೀಗ ಮಾಡುವ ನಿರ್ಣಯದ ಮೇಲಿದೆ. ನೀವೀಗಾಗಲೇ ಒಬ್ಬ ಸ್ನಾತ ಸಾಕ್ಷಿಯಾಗಿರುವಲ್ಲಿ ನಿಮ್ಮನ್ನೇ ನೀವು ಯೆಹೋವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದೀರಿ. (ಇಬ್ರಿ. 10:7) ದೇವರ ಸೇವೆ ಮಾಡುವ ಒಂದು ಅವಕಾಶ, ವರ್ಷದಲ್ಲಿ ಒಂದು ಅಥವಾ ಹೆಚ್ಚು ತಿಂಗಳು ಆಕ್ಸಿಲಿಯರಿ ಪಯನಿಯರ್ ಸೇವೆ ಮಾಡುವುದಾಗಿದೆ. ನೀವೇಕೆ ಇದನ್ನು ಮಾಡಬಾರದು? ಹೀಗೆ ಮಾಡಿದರೆ ರೆಗ್ಯುಲರ್ ಪಯನೀಯರ್ ಸೇವೆಯಲ್ಲಿನ ಆನಂದವನ್ನು ಸವಿಯುವಿರಿ, ಅದರಲ್ಲಿರುವ ಜವಾಬ್ದಾರಿಗಳ ಬಗ್ಗೆಯೂ ತಿಳಿದುಕೊಳ್ಳುವಿರಿ. ಎಲ್ಲದಕ್ಕಿಂತ ಮುಖ್ಯವಾಗಿ ಜೀವನದಲ್ಲಿ ನೀವೇನು ಮಾಡಬೇಕು ಎಂಬ ವಿಷಯ ಸ್ಪಷ್ಟವಾಗುವುದು. ಶಾಲೆಯ ನಂತರ ನಿಮ್ಮ ಪೂರ್ಣ ಸಮಯವನ್ನು ಕಸಿದುಕೊಳ್ಳುವ ಉದ್ಯೋಗದ ಬದಲು ನೀವೇಕೆ ಪಯನೀಯರ್ ಸೇವೆ ಆರಂಭಿಸಬಾರದು? ಪಯನೀಯರ್ ಸೇವೆಯನ್ನು ಮುಂದೂಡಿದ ಎಷ್ಟೋ ಜನ ‘ನಾನಿನ್ನೂ ಬೇಗ ಆರಂಭಿಸಬೇಕಿತ್ತು’ ಎಂದು ಪರಿತಪಿಸುತ್ತಿದ್ದಾರೆ.
11 ಅವಿವಾಹಿತರಾಗಿರುವಾಗ ಸಿಗುವ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ. ಇದರಿಂದ ಪೂರ್ಣ ಸಮಯದ ಸೇವೆಯಲ್ಲಿ ನೀವು ಹೆಚ್ಚು ಆನಂದಿಸುವಿರಿ. ಒಂದುವೇಳೆ ಮುಂದೊಂದು ದಿನ ಮದುವೆಯಾಗುವ ಯೋಚನೆ ನಿಮಗಿರುವಲ್ಲಿ, ಪಯನೀಯರ್ ಸೇವೆ ನಿಮ್ಮ ವಿವಾಹದಲ್ಲಿ ಸಂತೋಷಕ್ಕೆ ಭದ್ರ ಬುನಾದಿಯಾಗುವುದು. ನೀವು ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರೌಢರಾದಾಗ ಪಯನೀಯರ್ ಸೇವೆಯನ್ನೇ ಮಾಡುತ್ತಾ ಮುಂದುವರಿಯುವಿರಿ. ಜೊತೆಗೆ, ನಿಮ್ಮಂತೆಯೇ ಸೇವೆಗೆ ಆದ್ಯತೆ ಕೊಡುವ ಸಂಗಾತಿಯನ್ನು ಆಯ್ಕೆ ಮಾಡುವಿರಿ. ಜೊತೆಯಾಗಿ ಪಯನೀಯರ್ ಸೇವೆ ಮಾಡಿದ ಎಷ್ಟೋ ದಂಪತಿಗಳು ಸರ್ಕಿಟ್ ಕೆಲಸ ಮಾಡುತ್ತಿದ್ದಾರೆ, ಮಿಷನೆರಿಗಳಾಗಿದ್ದಾರೆ. ಜೀವನದ ಸಂತೃಪ್ತಿ ಸೇವೆಯಲ್ಲಿದೆ ಅನ್ನುವುದು ಎಷ್ಟು ನಿಜ ಅಲ್ವಾ!
12 ನೀವು ಸ್ವಲ್ಪ ಕಾಲ ಪಯನೀಯರ್ ಸೇವೆ ಮಾಡಿದರೂ ಅಥವಾ ಅನೇಕ ವರ್ಷಗಳ ಕಾಲ ಮಾಡಿದರೂ ಒಂದಂತೂ ನಿಜ, ಇಡೀ ಪ್ರಪಂಚದಲ್ಲೇ ಬೇರೆಲ್ಲೂ ಸಿಗದಂತಹ ಶಿಕ್ಷಣ ಮತ್ತು ತರಬೇತಿ ನಿಮಗೆ ಪಯನೀಯರ್ ಸೇವೆಯಿಂದ ದೊರೆಯುವುದು. ಈ ಸೇವೆ ಶಿಸ್ತನ್ನು, ಕ್ರಮಬದ್ಧತೆಯನ್ನು, ಜನರೊಂದಿಗೆ ವ್ಯವಹರಿಸುವ ರೀತಿಯನ್ನು, ಯೆಹೋವನ ಮೇಲೆ ಆತುಕೊಳ್ಳುವುದನ್ನು, ತಾಳ್ಮೆ ಮತ್ತು ದಯೆಯಂಥ ಗುಣಗಳನ್ನು ಕಲಿಸುತ್ತದೆ. ಇದು ಭಾರೀ ಜವಾಬ್ದಾರಿಗಳನ್ನು ನಿಭಾಯಿಸಲು ನಿಮ್ಮನ್ನು ಸಮರ್ಥರನ್ನಾಗಿ ಮಾಡುವುದು.
13 ಜೀವನದಲ್ಲಿ ಯಾವಾಗ ಏನಾಗುತ್ತೆ ಅಂತ ಹೇಳಲಾಗುವುದಿಲ್ಲ. ಯೆಹೋವನ ವಾಗ್ದಾನಗಳನ್ನು ಬಿಟ್ಟು ಬೇರೆ ಯಾವುದೇ ವಿಷಯವೂ ಶಾಶ್ವತವಲ್ಲ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿರುವುದರಿಂದ ಜೀವನದಲ್ಲಿ ನೀವೇನು ಮಾಡಬೇಕೆಂದು ನಿರ್ಧರಿಸಲು ಇದೇ ಸರಿಯಾದ ಸಮಯ. ಆದ್ದರಿಂದ ಪಯನೀಯರ್ ಸೇವೆಯ ಬಗ್ಗೆ ಗಂಭೀರವಾಗಿ ಯೋಚಿಸಿ. ಪಯನೀಯರ್ ಸೇವೆಯನ್ನು ನಿಮ್ಮ ಜೀವನದ ಮಾರ್ಗವಾಗಿ ಮಾಡಿಕೊಂಡರೆ ಭವಿಷ್ಯದಲ್ಲಿ ನಿಮಗೆ ಎಳ್ಳಷ್ಟೂ ಬೇಸರವಾಗುವುದಿಲ್ಲ.
ಪ್ರಶ್ನೆ 4: “ಪ್ರತಿ ತಿಂಗಳು 70 ತಾಸು ಮಾಡೋದು ಕಷ್ಟ ಅಲ್ವ? ಒಂದುವೇಳೆ ನನ್ನ ಕೈಲಿ ಆಗದೆ ಹೋದರೆ?”
14 ರೆಗ್ಯುಲರ್ ಪಯನೀಯರ್ ಸೇವೆಗೆ ಅರ್ಜಿ ತುಂಬಿಸುವಾಗ “ವರ್ಷಕ್ಕೆ 840 ತಾಸುಗಳನ್ನು ತಲುಪಲು ಸಾಧ್ಯವಾಗುವಂತೆ ನೀವು ನಿಮ್ಮ ವೈಯಕ್ತಿಕ ವಿಷಯಗಳನ್ನು ಏರ್ಪಡಿಸಿದ್ದೀರೋ?” ಎಂಬ ಪ್ರಶ್ನೆಗೆ ಉತ್ತರಿಸಲೇಬೇಕು. ಆ ತಾಸುಗಳನ್ನು ತಲುಪಲು ದಿನಕ್ಕೆ ಎರಡೂವರೆ ತಾಸು ಸೇವೆ ಮಾಡಬೇಕು. ಇದನ್ನು ಮಾಡಲು ಒಳ್ಳೆಯ ಯೋಜನೆ ಮತ್ತು ಶಿಸ್ತು ಅತ್ಯಗತ್ಯ. ಹೆಚ್ಚಿನ ಪಯನೀಯರರು ತಾಸುಗಳನ್ನು ತಲುಪಲು ತಮಗೆ ಹೊಂದಿಕೊಳ್ಳುವಂಥ ಒಂದು ಶೆಡ್ಯೂಲನ್ನು ಮಾಡಿಕೊಂಡು ಅದಕ್ಕೆ ಸರಿಯಾಗಿ ಕೆಲಸ ಮಾಡಲು ಕೆಲವೇ ತಿಂಗಳುಗಳಲ್ಲಿ ಕಲಿತುಕೊಳ್ಳುತ್ತಾರೆ.
15 “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂದು ಪ್ರಸಂಗಿ 9:11 ಹೇಳುತ್ತದೆ. ಗಂಭೀರ ಕಾಯಿಲೆ ಮತ್ತು ಮುಂಗಾಣದ ಘಟನೆಗಳಿಂದಾಗಿ ಪಯನೀಯರರು ತಾಸುಗಳನ್ನು ತಲುಪಲು ಆಗದಿರಬಹುದು. ಈ ರೀತಿಯ ಅನನುಕೂಲ ಪರಿಸ್ಥಿತಿ ದೀರ್ಘ ಸಮಯದವರೆಗೆ ಮುಂದುವರಿಯದಿದ್ದರೆ ಮತ್ತು ಸೇವಾ ವರ್ಷದ ಆರಂಭದಲ್ಲೇ ಸಂಭವಿಸಿದರೆ ಆ ಉಳಿದ ತಾಸುಗಳನ್ನು ಮುಗಿಸುವಂಥ ಹೊಸ ಶೆಡ್ಯೂಲನ್ನು ಮಾಡಿ ಹೆಚ್ಚು ಸಮಯ ಸೇವೆ ಮಾಡಿದರಾಯಿತು. ಆದರೆ ಸೇವಾ ವರ್ಷದ ಕೊನೆಯಲ್ಲಿ ಒಂದು ಗಂಭೀರ ಸಮಸ್ಯೆ ತಲೆಯೆತ್ತಿದರೆ ಮತ್ತು ತಾಸುಗಳನ್ನು ಮುಗಿಸಲು ಆಗದೇ ಇದ್ದರೆ ಏನು ಮಾಡುವುದು?
16 ಆರೋಗ್ಯ ಸಮಸ್ಯೆ ಅಥವಾ ಬೇರೆ ಯಾವುದಾದರೂ ತುರ್ತು ಪರಿಸ್ಥಿತಿಯಿಂದಾಗಿ ಕೆಲವು ತಿಂಗಳು ತಾಸುಗಳನ್ನು ತಲುಪಲು ಆಗದೇ ಇದ್ದರೆ ಸಭೆಯ ಸೇವಾ ಕಮಿಟಿಯನ್ನು ಸಂಪರ್ಕಿಸಿ, ನಿಮ್ಮ ಸಮಸ್ಯೆಯನ್ನು ವಿವರಿಸಿ. ಈ ಕಮಿಟಿಯಲ್ಲಿರುವ ಹಿರಿಯರು ನಿಮ್ಮ ಪರಿಸ್ಥಿತಿಯನ್ನು ಪರಿಶೀಲಿಸಿ ಸಮಂಜಸ ಎಂದೆಣಿಸಿದರೆ, ತಾಸುಗಳನ್ನು ತಲುಪದ ಹೊರತಾಗಿಯೂ ನಿಮ್ಮನ್ನು ಪಯನೀಯರರಾಗಿ ಮುಂದುವರಿಯುವಂತೆ ಬಿಡಬಹುದು. ಉಳಿದ ತಾಸುಗಳನ್ನು ಮಾಡಬೇಕಾಗಿಲ್ಲ ಎಂದು ಸಭೆಯ ಕಾರ್ಯದರ್ಶಿ ಸಭೆಯ ಪ್ರಚಾರಕ ದಾಖಲೆ ಕಾರ್ಡ್ನಲ್ಲಿ ನಮೂದಿಸುತ್ತಾನೆ. ಇದು ನಿಮ್ಮ ಪರಿಸ್ಥಿತಿಯನ್ನು ಮನಸ್ಸಿನಲ್ಲಿಟ್ಟು ನಿಮಗೆ ನೀಡಲಾದ ವಿಶೇಷ ಪರಿಗಣನೆಯಾಗಿರುತ್ತದೆ.
17 ಅನುಭವಿ ಪಯನೀಯರರು ಸೇವಾ ವರ್ಷದ ಆರಂಭದಲ್ಲೇ ಹೆಚ್ಚು ತಾಸುಗಳನ್ನು ಮಾಡಿ ಮುಗಿಸುತ್ತಾರೆ. ಅವರು ಪಯನೀಯರ್ ಸೇವೆಗೆ ಆದ್ಯತೆ ಕೊಟ್ಟು, ಹೆಚ್ಚು ಪ್ರಾಮುಖ್ಯವಲ್ಲದ ವಿಷಯಗಳನ್ನು ಬಿಟ್ಟುಬಿಡುತ್ತಾರೆ. ಒಬ್ಬ ಪಯನೀಯರನು ಸರಿಯಾದ ಯೋಜನೆ ಮಾಡದೆ ಇದ್ದರೆ ಅಥವಾ ಮಾಡಿದ ಯೋಜನೆಗಳಿಗೆ ಅಂಟಿಕೊಳ್ಳದೆ ಇದ್ದರೆ, ಬಾಕಿ ಉಳಿದ ತಾಸುಗಳನ್ನು ತಲುಪುವುದು ಅವನ ಸ್ವಂತ ಜವಾಬ್ದಾರಿಯಾಗಿರುತ್ತದೆ. ಅವನು ಯಾವುದೇ ವಿಶೇಷ ರಿಯಾಯಿತಿಯನ್ನು ನಿರೀಕ್ಷಿಸಬಾರದು.
18 ಆರೋಗ್ಯ ಸಮಸ್ಯೆ, ಕುಟುಂಬ ಜವಾಬ್ದಾರಿ ಮತ್ತು ಇನ್ನಿತರ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ಪಯನೀಯರರ ಪರಿಸ್ಥಿತಿ ಬದಲಾಗಬಹುದು. ಎಷ್ಟೇ ಪ್ರಯತ್ನ ಮಾಡಿದರೂ ಬಾಕಿ ಇರುವ ತಾಸುಗಳನ್ನು ತಲುಪಲು ಸಾಧ್ಯವಾಗದಿರಬಹುದು. ಇಂಥ ಪರಿಸ್ಥಿತಿಯಲ್ಲಿ ಪಯನೀಯರ್ ಸೇವೆ ನಿಲ್ಲಿಸಿ ಪ್ರಚಾರಕರಾಗಿ ಸಾಧ್ಯಾವಾದಾಗೆಲ್ಲ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವುದು ವಿವೇಕಯುತ. ಪರಿಸ್ಥಿತಿ ಅನುಮತಿಸದಿದ್ದಾಗಲೂ ಅವರನ್ನು ಪಯನೀಯರರಾಗಿ ಮುಂದುವರಿಯುವಂತೆ ಬಿಡುವ ಯಾವುದೇ ಏರ್ಪಾಡಿಲ್ಲ.
ಪ್ರಶ್ನೆ 5: ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಅದರಿಂದ ಸಂತೋಷಾನೂ ಸಿಗಬೇಕು. ಅಂಥ ತೃಪ್ತಿ ಪಯನೀಯರ್ ಸೇವೆಯಿಂದ ಸಿಗುತ್ತಾ?
19 ‘ಯೆಹೋವ ದೇವರು ನನಗೆ ಆಪ್ತನು, ನಾನು ಆತನನ್ನು ನಂಬಿಗಸ್ತಿಕೆಯಿಂದ ಆರಾಧಿಸುತ್ತಿದ್ದೇನೆ’ ಎಂಬ ಅರಿವು ನಮಗಿದ್ದರೆ ಜೀವನದಲ್ಲಿ ನಿಜ ಸಂತೋಷ ಇರುತ್ತದೆ. ಯೇಸು “ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ” ಚಿತ್ರಹಿಂಸೆಯನ್ನು ಸಹಿಸಿಕೊಂಡನು. (ಇಬ್ರಿ. 12:2) ಆತನಿಗೆ ಆ ಸಂತೋಷ ದೇವರ ಚಿತ್ತವನ್ನು ಮಾಡುವುದರಲ್ಲಿ ಸಿಕ್ಕಿತು. (ಕೀರ್ತ. 40:8) ನಮ್ಮ ಜೀವನದಲ್ಲಿ ಹೆಚ್ಚಿನ ಸಮಯವನ್ನು ಯೆಹೋವನ ಆರಾಧನೆಯಲ್ಲಿ ಕಳೆಯುವುದಾದರೆ ಈ ವಿಷಯಗಳ ವ್ಯವಸ್ಥೆಯಲ್ಲೂ ನಾವು ಆನಂದದಿಂದ ಇರಬಹುದು. ಜೊತೆಗೆ ಸರಿಯಾದದ್ದನ್ನೇ ಮಾಡುತ್ತಿದ್ದೇವೆಂಬ ಅರಿವು ನಮಗಿರುತ್ತದೆ. ಕೊಡುವುದರಲ್ಲಿ ಇರುವ ಸಂತೋಷವನ್ನು ಪಡೆಯುವ ಅತ್ಯುತ್ತಮ ಮಾರ್ಗ ದೇವರ ರಾಜ್ಯದಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳುವುದು ಹೇಗೆಂದು ಬೇರೆಯವರಿಗೆ ಬೋಧಿಸುವುದೇ ಆಗಿದೆ.—ಅ. ಕಾ. 20:35
20 ಆರಂಭದಲ್ಲಿ ತಿಳಿಸಲಾದ ಪಯನೀಯರ್ ಹೇಳುವುದು: “ನೀವು ಬೈಬಲ್ ಅಧ್ಯಯನ ಮಾಡಿದ ವ್ಯಕ್ತಿ ಯೆಹೋವನನ್ನು ಆರಾಧಿಸುತ್ತಿರುವುದನ್ನು ನೋಡುವುದಕ್ಕಿಂತ ಹೆಚ್ಚಿನ ಸಂತೋಷ ಬೇರೆ ಯಾವುದರಲ್ಲಿ ಸಿಗುತ್ತದೆ? ದೇವರ ವಾಕ್ಯ ಜನರ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಅವರ ಹೃದಯಗಳನ್ನು ಪ್ರಚೋದಿಸುವುದನ್ನು ನೋಡುವುದು ಎಷ್ಟು ರೋಮಾಂಚನಕಾರಿ ವಿಷಯ! ಇದರಿಂದ ನಮ್ಮ ನಂಬಿಕೆಯೂ ಬಲಗೊಳ್ಳುತ್ತದೆ. (ಕಾವಲಿನಬುರುಜು ಅಕ್ಟೋಬರ್ 15, 1997, ಪುಟ 18-23ನ್ನು ನೋಡಿ.) ಈಗ ಹೇಳಿ, ನಿಮಗೆ ಯಾವುದರಿಂದ ಆನಂದ ಸಿಗುತ್ತದೆ? ಈ ಲೋಕ ಕೊಡುವ ಕ್ಷಣಿಕ ಸುಖದಿಂದನಾ? ಅಥವಾ ಶಾಶ್ವತ ಪ್ರಯೋಜನ ತರುವ ವಿಷಯಗಳಿಂದನಾ? ಪಯನೀಯರ್ ಸೇವೆ ಮಾಡಿದರೆ ಜೀವನದಲ್ಲಿ ಸಾಧನೆ ಮಾಡಿದ್ದೇವೆಂಬ ಸಂತೃಪ್ತಿ, ನಿಜ ಸಂತೋಷ ಸಿಗುತ್ತದೆ.
ಪ್ರಶ್ನೆ 6: “ಪಯನೀಯರ್ ಸೇವೆ ಮಾಡಿದ್ರೇನೇ ನಿತ್ಯಜೀವ ಸಿಗುತ್ತೆ ಅಂತೇನಿಲ್ವಲ್ಲಾ? ಮತ್ತೆ ನಾನು ಪಯನೀಯರ್ ಆಗಬೇಕಂತ ಬೇರೆಯವರು ಯಾಕೆ ಹೇಳ್ಬೇಕು?”
21 ಪಯನೀಯರ್ ಸೇವೆ ಮಾಡೋದು ಮಾಡದೆ ಇರೋದು ನಿಮ್ಮ ಸ್ವಂತ ನಿರ್ಣಯ. ಈ ವಿಷಯದಲ್ಲಿ ಯೆಹೋವನು ಬಿಟ್ಟರೆ ಮತ್ತೆ ಯಾರೂ ತೀರ್ಪು ಮಾಡಲು ಸಾಧ್ಯವಿಲ್ಲ. (ರೋಮ. 14:4) ನೀವು ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಶಕ್ತಿಯಿಂದ ಆತನ ಸೇವೆ ಮಾಡಬೇಕೆಂದು ಯೆಹೋವನು ಅಪೇಕ್ಷಿಸುವುದರಲ್ಲಿ ನ್ಯಾಯವಿದೆ. (ಮಾರ್ಕ 12:30; ಗಲಾ. 6:4, 5) ಸಂತೋಷವಾಗಿ ಕೊಡುವವರನ್ನು ಆತನು ಪ್ರೀತಿಸುತ್ತಾನೆಯೇ ಹೊರತು ಒತ್ತಾಯದಿಂದ ಅಥವಾ ಬೇಸರದಿಂದ ತನ್ನ ಸೇವೆ ಮಾಡುವವರನ್ನಲ್ಲ. (2 ಕೊರಿಂ. 9:7; ಕೊಲೊ. 3:23) ಯೆಹೋವನ ಮತ್ತು ಜನರ ಮೇಲಿನ ಪ್ರೀತಿಯೇ ಪೂರ್ಣ ಸಮಯದ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ನಿಮ್ಮನ್ನು ಪ್ರಚೋದಿಸಬೇಕು. (ಮತ್ತಾ. 9:36-38; ಮಾರ್ಕ 12:30, 31) ನಿಮಗೂ ಈ ಪ್ರೀತಿ ಇದ್ದರೆ ಪಯನೀಯರ್ ಸೇವೆಯ ಬಗ್ಗೆ ಗಂಭೀರವಾಗಿ ಯೋಚಿಸುವುದು ಸೂಕ್ತವಾಗಿದೆ.
ಪ್ರಶ್ನೆ 7: “ಹಿರಿಯರು ಯಾವೆಲ್ಲಾ ಸಹಾಯವನ್ನು ನೀಡುತ್ತಾರೆ?”
22 ಸಭೆಯಲ್ಲಿರುವ ಎಲ್ಲಾ ಹಿರಿಯರು ಅದರಲ್ಲೂ ಮುಖ್ಯವಾಗಿ ಸೇವಾ ಕಮಿಟಿಯಲ್ಲಿರುವವರು ಪಯನೀಯರರ ಬಗ್ಗೆ ವೈಯಕ್ತಿಕ ಆಸಕ್ತಿ ತೋರಿಸುತ್ತಾರೆ. ಪಯನೀಯರರು ಸೇವೆಯಲ್ಲಿ ಮಾಡಬೇಕಾದ ಎಲ್ಲಾ ವಿಷಯಗಳನ್ನು ಚೆನ್ನಾಗಿ ನಿರ್ವಹಿಸುತ್ತಾರಾ? ಪುನರ್ಭೇಟಿ ಅಥವಾ ಬೈಬಲ್ ಅಧ್ಯಯನ ಮಾಡಲು ಅವರಿಗೆ ತರಬೇತಿ ನೀಡಬೇಕಾ? ಪವಿತ್ರಾತ್ಮದ ಗುಣಗಳನ್ನು ತಮ್ಮ ಜೀವನದಲ್ಲಿ ತೋರಿಸುತ್ತಾ ಇತರರೊಂದಿಗೆ ಹೊಂದಿಕೊಂಡು ಶಾಂತಿಯಿಂದ ವರ್ತಿಸುತ್ತಿದ್ದಾರಾ? (ರೋಮ. 14:19) ಯಾರಿಗಾದರೂ ತಮ್ಮ ಪರಿಸ್ಥಿತಿಗೆ ಸರಿಬೀಳುವ ಶೆಡ್ಯೂಲನ್ನು ಮಾಡಿಕೊಳ್ಳಲು ಸಹಾಯ ಬೇಕಾ? ಅವರಿಗೆ ಉತ್ತಮ ವೈಯಕ್ತಿಕ ಅಧ್ಯಯನ ರೂಢಿ ಇದೆಯಾ? ಕೂಟಗಳಲ್ಲಿ ಭಾಗವಹಿಸುತ್ತಾರಾ? ಈ ಪ್ರಶ್ನೆಗಳು ಪಯನೀಯರರಿಗೆ ಯಾವ ಸಹಾಯ ಬೇಕೆಂದು ತಿಳಿದುಕೊಳ್ಳಲು ಹಿರಿಯರಿಗೆ ನೆರವಾಗುತ್ತವೆ. ಪಯನೀಯರರಿಗೆ ಸಹಾಯಮಾಡಲು ತಮ್ಮಿಂದಾದದ್ದೆಲ್ಲವನ್ನೂ ಮಾಡಲು ಬಯಸುವ ಹಿರಿಯರು ಅವರಿಗೆ ಯಾವುದರ ಅಗತ್ಯವಿದೆ ಮತ್ತು ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ವಿವೇಚಿಸಿ ತಿಳಿದುಕೊಳ್ಳುತ್ತಾರೆ. ಜೊತೆಗೆ, ಈ ಹಿರಿಯರು ಅವರೊಂದಿಗೆ ಆಗಾಗ ಮಾತಾಡುತ್ತಿರುತ್ತಾರೆ.
23 ಪಯನೀಯರರು ತಮಗಿರುವ ಉನ್ನತ ಮಟ್ಟಗಳನ್ನು ಅನುಸರಿಸುತ್ತಿದ್ದಾರಾ ಅನ್ನುವುದನ್ನು ಹಿರಿಯರು ಖಾತ್ರಿಪಡಿಸಿಕೊಳ್ಳುತ್ತಾರೆ. ಅದರಲ್ಲಿ ನಿಗದಿತ ತಾಸುಗಳನ್ನು ಪೂರ್ತಿಗೊಳಿಸುವುದೂ ಸೇರಿದೆ. ಅದೇ ಸಮಯದಲ್ಲಿ ಕೆಲವು ಅಲ್ಪಾವಧಿಯ ಸಮಸ್ಯೆಗಳಿಂದಾಗಿ ಪಯನೀಯರ್ ಒಬ್ಬರಿಂದ ಆ ತಾಸುಗಳನ್ನು ಪೂರ್ತಿ ಮಾಡಲು ಆಗದಿದ್ದರೆ ಪಯನೀಯರ್ ಸೇವೆಯನ್ನು ನಿಲ್ಲಿಸುವಂತೆ ಶಿಫಾರಸ್ಸು ಮಾಡುವ ಬದಲಿಗೆ ಹಿರಿಯರು ಅವರಿಗೆ ಸಹಾಯ ನೀಡುತ್ತಾರೆ. ಪಯನೀಯರರಿಗೆ ಸಮಸ್ಯೆಗಳು ಎದುರಾದರೆ ಅದು ಅನೇಕ ತಿಂಗಳು ಮುಂದುವರಿಯಲು ಹಿರಿಯರು ಬಿಡುವುದಿಲ್ಲ ಬದಲಿಗೆ ಕೂಡಲೇ ನೆರವು ನೀಡುತ್ತಾರೆ. ಸಹಾಯ ನೀಡಲು ತಡವಾದಲ್ಲಿ ಅವರು ಇನ್ನೆಂದೂ ತಾಸುಗಳನ್ನು ಪೂರ್ತಿ ಮಾಡಲು ಆಗದಷ್ಟು ಹಿಂದೆ ಬೀಳಬಹುದು. ಇದರಿಂದ ಅವರು ನಿರುತ್ತೇಜನಗೊಂಡು ತನ್ನ ಸೇವೆಯನ್ನೇ ನಿಲ್ಲಿಸಿಬಿಡಬಹುದು.
24 ಸಮಸ್ಯೆ ಎದುರಿಸುತ್ತಿರುವ ಪಯನೀಯರನೊಂದಿಗೆ ಮಾತಾಡಿದ ನಂತರ, ಈ ಸಮಸ್ಯೆ ಸರಿಯಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ, ಪಯನೀಯರನು ಬಾಕಿ ಉಳಿದ ತಾಸುಗಳನ್ನು ಆ ಸೇವಾ ವರ್ಷದಲ್ಲೇ ಪೂರ್ತಿ ಮಾಡಬಲ್ಲನು ಎಂದು ಹಿರಿಯರಿಗೆ ಅನಿಸಬಹುದು. ವಿಷಯ ಹಾಗಿರುವಲ್ಲಿ ಹಿರಿಯರು ಅವರಿಗೆ ಪ್ರೋತ್ಸಾಹ ಮತ್ತು ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತಾರೆ. ಆದರೆ ಅವನಿಗೆ ದೊಡ್ಡ ಸಮಸ್ಯೆಯೇ ಎದುರಾಗಿದ್ದು ಈ ಕಾರಣದಿಂದ ತಾಸುಗಳನ್ನು ಆ ಸೇವಾ ವರ್ಷದಲ್ಲಿ ಪೂರ್ತಿ ಮಾಡಲು ಸಾಧ್ಯವೇ ಇಲ್ಲದಿರುವಲ್ಲಿ ಆಗೇನು? ಇಂಥ ಸಂದರ್ಭದಲ್ಲಿ ಆ ಪಯನೀಯರನು ವಿಶೇಷ ಪರಿಗಣನೆಗೆ ಅರ್ಹನೋ ಅಲ್ಲವೋ ಎಂದು ಹಿರಿಯರು ನಿರ್ಧರಿಸಬೇಕು. ವಿಶೇಷ ಪರಿಗಣನೆ ತೋರಿಸಲು ಸರಿಯಾದ ಕಾರಣವಿದೆ ಎಂದು ಅವರಿಗನಿಸುವುದಾದರೆ ಅದನ್ನು ಸಭೆಯ ಪ್ರಚಾರಕ ದಾಖಲೆ ಕಾರ್ಡ್ನಲ್ಲಿ ಬರೆಯಬೇಕು. ಬಾಕಿ ಉಳಿದ ತಾಸುಗಳ ಬಗ್ಗೆ ಚಿಂತಿಸದೆ ಮುಂದಿನ ದಿನಗಳ ತಾಸುಗಳನ್ನು ಸರಿಯಾಗಿ ಪೂರ್ತಿ ಮಾಡುವಂತೆ ಹಿರಿಯರು ಅವನನ್ನು ಉತ್ತೇಜಿಸುತ್ತಾರೆ. ಸಮಸ್ಯೆ ತುಂಬ ಸಮಯದವರೆಗೆ ಇರುವಂಥದ್ದಾಗಿದ್ದು ಪಯನೀಯರ್ ಸೇವೆಯನ್ನು ನಿಲ್ಲಿಸುವುದು ಉತ್ತಮವೆಂದು ಹಿರಿಯರಿಗನಿಸುವುದಾದರೆ ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಭರ್ತಿ ಮಾಡಿ ಬ್ರಾಂಚ್ ಆಫೀಸಿಗೆ ವರದಿಸಬೇಕು.
ಪ್ರಶ್ನೆ 8: ರೆಗ್ಯುಲರ್ ಪಯನೀಯರ್ ಆಗಲು ನಾನೇನು ಮಾಡಬೇಕು?
25 ರೆಗ್ಯುಲರ್ ಪಯನೀಯರ್ ಆಗಬೇಕೆಂದರೆ ದೀಕ್ಷಾಸ್ನಾನವಾಗಿ ಕನಿಷ್ಠ ಪಕ್ಷ ಆರು ತಿಂಗಳುಗಳಾಗಿರಬೇಕು ಮತ್ತು ಕ್ರಮದ ಪ್ರಚಾರಕನಾಗಿರಬೇಕು. ವರ್ಷಕ್ಕೆ 840 ತಾಸು ಸೇವೆ ಮಾಡಬೇಕು, ಉತ್ತಮ ನೈತಿಕ ಮಟ್ಟಗಳನ್ನು ಹೊಂದಿದ್ದು, ಮಾದರಿ ಕ್ರೈಸ್ತನಾಗಿರಬೇಕು. (od ಪು. 113-14) ಮಾದರಿ ಕ್ರೈಸ್ತನಾಗಿರುವುದರಲ್ಲಿ ಏನು ಒಳಗೂಡಿದೆ? ಪಯನೀಯರ್ ಸೇವೆಗೆ ಅರ್ಜಿ ಸಲ್ಲಿಸುವವರಲ್ಲಿ ಯಾವ ಗುಣಗಳಿರಬೇಕೆಂದು ಹಿರಿಯರು ನಿರೀಕ್ಷಿಸುತ್ತಾರೆ?
26 ನಡೆ-ನುಡಿಯಲ್ಲಿ ನಾವು ಮಾದರಿಯಾಗಿರಬೇಕು ಅಂದರೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಶುದ್ಧರಾಗಿರಬೇಕು. ಪಯನೀಯರ್ ಸೇವೆಗೆ ಅಂಗೀಕಾರ ಪಡೆಯುವ ವ್ಯಕ್ತಿ, ಸಭೆಯವರೊಂದಿಗೆ ಮತ್ತು ಹೊರಗಿನವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುತ್ತಾನೆಂಬ ಹೆಸರು ಪಡೆದಿರಬೇಕು. ಆ ವ್ಯಕ್ತಿ ಪೂರ್ಣ ಹೃದಯದಿಂದ ಯೆಹೋವನ ಸೇವೆಗೆ ತನ್ನನ್ನು ಮುಡಿಪಾಗಿ ಇಟ್ಟುಕೊಳ್ಳಬೇಕು. ಆತನ ಜೀವನದಲ್ಲಿ ದೇವರಾತ್ಮದ ಗುಣಗಳು ಎದ್ದು ಕಾಣಿಸಬೇಕು. ದೇವರ ರಾಜ್ಯವನ್ನು ಸಾರುವುದು, ಶಿಷ್ಯರನ್ನಾಗಿ ಮಾಡುವುದು ಪಯನೀಯರರ ಮುಖ್ಯ ಉದ್ದೇಶವಾಗಿರಬೇಕು. ಬೈಬಲನ್ನು ಪರಿಣಾಮಕಾರಿಯಾಗಿ ಉಪಯೋಗಿಸಬೇಕು, ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನ ಮಾಡಬೇಕು. ಕ್ಷೇತ್ರ ಸೇವೆ ಮತ್ತು ಕೂಟಗಳ ಏರ್ಪಾಡುಗಳಲ್ಲಿ ಹಿರಿಯ ಮಂಡಲಿಯ ಜೊತೆ ಸಹಕರಿಸಬೇಕು.
27 ತಪ್ಪನ್ನು ಮನಗಾಣಿಸಿದ ಅಥವಾ ಪುನಃಸ್ಥಾಪನೆಗೊಂಡ ಒಬ್ಬ ಪ್ರಚಾರಕನು ಆಕ್ಸಿಲಿಯರಿ ಅಥವಾ ರೆಗ್ಯುಲರ್ ಪಯನೀಯರ್ ಸೇವೆ ಮಾಡಲು ಇಚ್ಛಿಸುವುದಾದರೆ, ಅವನು ಕನಿಷ್ಠ ಪಕ್ಷ ಒಂದು ವರ್ಷವಾದರೂ ಕಾಯಬೇಕು. ನ್ಯಾಯನಿರ್ಣಾಯಕ ಕಮಿಟಿಯಿಂದ ನಿರ್ಬಂಧಕ್ಕೊಳಗಾದ ವ್ಯಕ್ತಿ ಆ ನಿರ್ಬಂಧಗಳಿಂದ ಮುಕ್ತನಾಗುವವರೆಗೆ ಪಯನೀಯರ್ ಸೇವೆಗೆ ಅರ್ಹನಾಗುವುದಿಲ್ಲ.
28 ರೆಗ್ಯುಲರ್ ಪಯನೀಯರರಾಗುವ ಮುಂಚೆ ಹಲವು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲೇಬೇಕಾ? ಇಲ್ಲ. ಮೊದಲು ಆಕ್ಸಿಲಿಯರಿ ಸೇವೆ ಮಾಡಿದರೆ, ರೆಗ್ಯುಲರ್ ಪಯನೀಯರ್ ಸೇವೆ ಮಾಡುವುದು ಸುಲಭ. ಪ್ರತಿ ತಿಂಗಳು ಈ ಪ್ರಚಾರಕ 70 ತಾಸು, ವರ್ಷಕ್ಕೆ 840 ತಾಸು ಮಾಡುತ್ತಾನೆ ಎಂಬ ಖಾತ್ರಿಗಾಗಿ ಹಿರಿಯರು ಕೆಲವು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವಂತೆ ಪ್ರೋತ್ಸಾಹಿಸುತ್ತಾರೆ.
29 ರೆಗ್ಯುಲರ್ ಪಯನೀಯರ್ ಸೇವೆಯ ಅರ್ಜಿಯನ್ನು ಪ್ರಚಾರಕನೊಬ್ಬ ತುಂಬಿಸಿ ಹಿರಿಯ ಮಂಡಲಿಯ ಸಂಯೋಜಕನಿಗೆ ಕೊಟ್ಟಾಗ ಸೇವಾ ಕಮಿಟಿ ಅದಕ್ಕೆ ಯಥಾರ್ಥ ಗಮನಕೊಡಬೇಕು. ಸೇವಾ ಕಮಿಟಿಯ ಸದಸ್ಯರೊಬ್ಬರು ಒಂದೆರಡು ವಾರ ಸಭೆಯಲ್ಲಿ ಇಲ್ಲದಿದ್ದರೆ, ಅವರಿಗಾಗಿ ಕಾಯುತ್ತಾ ಅರ್ಜಿ ಪರೀಕ್ಷಿಸುವುದನ್ನು ಇನ್ನಿತರ ಸದಸ್ಯರು ತಡಮಾಡಬಾರದು. ಅವರ ಬದಲು ಬೇರೊಬ್ಬ ಹಿರಿಯರು ಸಹಾಯಮಾಡಬೇಕು. ಸೇವಾ ಕಮಿಟಿ ಒಪ್ಪಿಗೆ ಕೊಟ್ಟ ನಂತರ ಆ ವಿಷಯವನ್ನು ಹಿರಿಯ ಮಂಡಲಿಗೆ ತಿಳಿಸಬೇಕು. ಹಿರಿಯ ಮಂಡಲಿ ತನ್ನ ಅಭಿಪ್ರಾಯವನ್ನು ತಿಳಿಸಿದ ನಂತರ ಅರ್ಜಿಯನ್ನು ಬ್ರಾಂಚ್ಗೆ ಕಳುಹಿಸಬೇಕು.
30 ಹಿರಿಯರು ರೆಗ್ಯುಲರ್ ಪಯನೀಯರ್ ಅರ್ಜಿಯಲ್ಲಿ ಪ್ರಚಾರಕನ ಆರು ತಿಂಗಳ ತಾಸುಗಳನ್ನು ನಮೂದಿಸಬೇಕು. ಪ್ರಚಾರಕ ನಿಗದಿತ ತಾಸುಗಳನ್ನು ಕ್ರಮವಾಗಿ ತಲುಪುತ್ತಾನೆಂಬ ಭರವಸೆ ಹಿರಿಯರಿಗಿರಬೇಕು. ಆರು ತಿಂಗಳ ವರದಿ ಪ್ರಚಾರಕನ ನಿಜ ಸಾಮರ್ಥ್ಯವನ್ನು ತೋರಿಸದಿರಬಹುದು. ಆ ಆರು ತಿಂಗಳಲ್ಲಿ ಒಂದೆರಡು ತಿಂಗಳು ಹೆಚ್ಚು ತಾಸು ಗಳಿಸಲು ವಿಶೇಷ ಪ್ರಯತ್ನ ಮಾಡಿರುವುದಾದರೆ ಅದನ್ನು ಗಮನಿಸಬೇಕು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಹಿರಿಯರು ಪ್ರಚಾರಕನ ಆರು ತಿಂಗಳ ವರದಿಯನ್ನು ಪರಿಶೀಲಿಸಬೇಕು. ಒಂದುವೇಳೆ ಪ್ರಚಾರಕನ ತಾಸುಗಳ ಸರಾಸರಿ ಹೆಚ್ಚಿದ್ದು, ಅವನು ಸೇವೆಯಲ್ಲಿ ಕಡಿಮೆ ಪ್ರತಿಫಲ ಪಡೆಯುತ್ತಿದ್ದರೆ, ಆ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಹಿರಿಯರು ಪ್ರೋತ್ಸಾಹಿಸಬೇಕು. ಹೀಗೆ ಹಿರಿಯರು ಪ್ರಚಾರಕನನ್ನು ಸದ್ಯಕ್ಕೆ ಪಯನೀಯರ್ ಆಗಲು ಸಮ್ಮತಿ ಸೂಚಿಸಲು ಆಗದಿರುವಲ್ಲಿ, ಅವನ ಅರ್ಜಿಯನ್ನು ಬ್ರಾಂಚ್ಗೆ ಕಳುಹಿಸಲಾಗಿಲ್ಲ ಎಂದು ಅದನ್ನು ಅವನಿಗೆ ತಿಳಿಸಬೇಕು, ಜೊತೆಗೆ ಅದಕ್ಕೆ ಕಾರಣಗಳನ್ನೂ ಕೊಡಬೇಕು. ಅರ್ಹತೆ ಸಾಧಿಸಲು ಯಾವ ಕ್ಷೇತ್ರಗಳಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದು ಸಹ ಹೇಳಬೇಕು. ಮುಂದೊಂದು ದಿನ ಆ ಪ್ರಚಾರಕನು ಪಯನೀಯರನಾಗಲು ಹಿರಿಯರು ತಮ್ಮ ಸಮ್ಮತಿಸುವಲ್ಲಿ ಹಾಗೂ ಅದೇ ಅರ್ಜಿಯನ್ನು ಬ್ರಾಂಚ್ಗೆ ಕಳುಹಿಸುವುದಾದರೆ ಅದರಲ್ಲಿ ಪಯನೀಯರ್ ಸೇವೆ ಆರಂಭಿಸುವ ದಿನಾಂಕವನ್ನು ಬದಲಾಯಿಸಬೇಕು.
31 ಈ ಲೇಖನದಲ್ಲಿ ಕೊಡಲಾಗಿರುವ ಮಾಹಿತಿ ಪಯನೀಯರ್ ಸೇವೆ ಮಾಡಲು ನಿಮ್ಮಿಂದಾಗುತ್ತಾ ಎಂದು ನಿಮ್ಮ ಪರಿಸ್ಥಿತಿಯನ್ನು ಮರುಪರಿಶೀಲಿಸಲು ಸಹಾಯಮಾಡುವುದು. ರೆಗ್ಯುಲರ್ ಪಯನೀಯರರಾಗಲು ನೀವು ನಿಮ್ಮ ಪರಿಸ್ಥಿತಿಯಲ್ಲಿ ಕೆಲವು ಹೊಂದಾಣಿಕೆ ಮಾಡುವಿರೋ? ವಾರದಲ್ಲಿ ಸರಾಸರಿ 17 ತಾಸು ಸೇವೆಯಲ್ಲಿ ವ್ಯಯಿಸಲು ಅನುಕೂಲವಾಗುವಂತೆ ಒಂದು ಪ್ರಾಯೋಗಿಕವಾದ ಶೆಡ್ಯೂಲನ್ನು ಮಾಡಿಕೊಳ್ಳಿ. ಯೆಹೋವನಲ್ಲಿ ಪೂರ್ಣ ನಂಬಿಕೆಯಿಡಿ, ಆತನ ಸಹಾಯದಿಂದ ನೀವು ಯಶಸ್ವಿಗಳಾಗುವಿರಿ ಎಂಬುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ‘ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನು’ ಎಂದು ಆತನೇ ಮಾತು ಕೊಟ್ಟಿದ್ದಾನೆ.—ಮಲಾ. 3:10.
32 ಈಗ ನಮ್ಮ ಪ್ರಶ್ನೆಗೆ ನಿಮ್ಮ ಮನದಾಳದ ಉತ್ತರ ನೀಡಿ. “ಪಯನೀಯರ್ ಸೇವೆ ಮಾಡಲು ನಿಮ್ಮಿಂದಾಗುತ್ತಾ?” ನೀವು ಹೌದು ಎಂದು ಉತ್ತರಿಸುವಲ್ಲಿ, ಯಾವಾಗ ಶುರು ಮಾಡುವಿರೆಂದು ಒಂದು ದಿನವನ್ನು ನಿಗದಿ ಮಾಡಿಕೊಂಡು ಬೇಗನೆ ಆರಂಭಿಸಿ. ಒಂದು ಮಾತನ್ನಂತೂ ಮರೆಯದಿರಿ, ಈ ಸೇವೆಯನ್ನು ಮಾಡುವಾಗ ಯೆಹೋವನು ನಿಮಗೆ ಸಂತೃಪ್ತಿಕರ ಜೀವನವನ್ನು ಖಂಡಿತ ಕೊಟ್ಟೇ ಕೊಡುವನು!