ನಮ್ಮ ಸಾಹಿತ್ಯಗಳನ್ನು ಅಮೂಲ್ಯವೆಂದೆಣಿಸುತ್ತೀರೋ?
1 ಯೆಹೋವ ದೇವರ ಮತ್ತು ಯೇಸುವಿನ ಕುರಿತ ಜ್ಞಾನ ಎಷ್ಟೋ ಅಮೂಲ್ಯವಾಗಿದೆ. ಇಡೀ ಪ್ರಪಂಚದಲ್ಲಿ, ಈ ಆಧ್ಯಾತ್ಮಿಕ ಜ್ಞಾನ ಭಂಡಾರವನ್ನು ತುಂಬ ಆಳವಾಗಿ ಮತ್ತು ದೈವಿಕ ವಿವೇಕದಿಂದ ವಿವರಿಸುವಂಥದ್ದು ನಮ್ಮ ಸಾಹಿತ್ಯಗಳು ಮಾತ್ರ. (ರೋಮ. 11:33; ಫಿಲಿ. 3:8) ಹಾಗಾದರೆ ನಮ್ಮ ಸಾಹಿತ್ಯಗಳಿಗೆ ನಾವು ಹೇಗೆ ಗಣ್ಯತೆ ತೋರಿಸಬಹುದು?
2 ಹಲವಾರು ಕುಟುಂಬಗಳು ಮತ್ತು ಸಹೋದರರು ಪ್ರತಿ ಬಾರಿ ರಾಜ್ಯ ಸಭಾಗೃಹಕ್ಕೆ ಬಂದಾಗ ಅಲ್ಲಿರುವ “ಲೋಕವ್ಯಾಪಕ ಕೆಲಸಕ್ಕಾಗಿ” ಎಂದು ಸೂಚಿಸಿರುವ ಕಾಣಿಕೆ ಪೆಟ್ಟಿಗೆಯಲ್ಲಿ ತಮ್ಮಿಂದಾದಷ್ಟು ಕಾಣಿಕೆಯನ್ನು ಹಾಕುತ್ತಾರೆ. ನಮ್ಮ ಸಾಹಿತ್ಯಗಳಿಗೆ ಗಣ್ಯತೆ ತೋರಿಸುವ ಮತ್ತೊಂದು ವಿಧ, ಸೇವೆಯಲ್ಲಿ ಜನರಿಗೆ ಸಾಹಿತ್ಯಗಳನ್ನು ನೀಡುವಾಗ ವಿವೇಚನೆ ತೋರಿಸುವುದೇ ಆಗಿದೆ. ಸಾಹಿತ್ಯವನ್ನು ಕೊಡುವ ಮುಂಚೆ ‘ಮನೆಯವನು ನಮ್ಮೊಂದಿಗೆ ಮಾತಾಡಲು ಇಷ್ಟಪಡುತ್ತಿದ್ದಾನಾ? ನಾವು ಪ್ರಶ್ನೆ ಕೇಳುವಾಗ ಸರಿಯಾಗಿ ಪ್ರತಿಕ್ರಿಯಿಸುತ್ತಿದ್ದಾನಾ? ಮಾತಾಡುವಾಗ, ಬೈಬಲಿಂದ ವಚನ ಓದುವಾಗ ಗಮನಕೊಟ್ಟು ಕೇಳುತ್ತಿದ್ದಾನಾ?’ ಎಂದು ಗಮನಿಸಿ. ಆ ವ್ಯಕ್ತಿಗೆ ನಿಜ ಆಸಕ್ತಿ ಇದೆ ಅಂತನಿಸಿದರೆ ಮಾತ್ರ ಸೂಕ್ತವಾದ ಸಾಹಿತ್ಯವನ್ನು ಕೊಟ್ಟು ಬನ್ನಿ. ಆದರೆ ನಾವು ಕೊಡುವ ಸಾಹಿತ್ಯವನ್ನು ಜನರು ಚೆನ್ನಾಗಿ ಉಪಯೋಗಿಸಿದರೆ ಮಾತ್ರ ಅವರಿಗೆ ಪ್ರಯೋಜನವಾಗುತ್ತದೆ.
3 ರಾಜ್ಯ ಸಭಾಗೃಹದಲ್ಲಿ ಅಥವಾ ಮನೆಯ ಕಪಾಟಿನಲ್ಲಿ ಸಾಹಿತ್ಯಗಳನ್ನು ತುಂಬಿಸಿಟ್ಟರೆ ಏನೂ ಉಪಯೋಗವಿಲ್ಲ. ಪತ್ರಿಕೆಗಳು, ಕಿರುಹೊತ್ತಗೆಗಳು, ಪುಸ್ತಕಗಳು ಮತ್ತು ಕರಪತ್ರಗಳು ಹಳೆಯದಾದರೂ ಸಹ ಅವನ್ನು ಉಪಯೋಗಿಸಬೇಕು. ನಮ್ಮಲ್ಲಿರುವ ಸಾಹಿತ್ಯಗಳ ಹಾಳೆಗಳು ಹಳದಿ ಬಣ್ಣಕ್ಕೆ ಬದಲಾಗದಿದ್ದರೆ, ಹರಿದು ಹೋಗಿರದಿದ್ದರೆ ಅಥವಾ ಹಾಳಾಗಿರದಿದ್ದರೆ ಅವನ್ನು ಸೇವೆಯಲ್ಲಿ ಕೊಡಲು ಪ್ರಯತ್ನಿಸಬಹುದು. ಒಳ್ಳೆಯ ಸ್ಥಿತಿಯಲ್ಲಿರದ ಸಾಹಿತ್ಯಗಳನ್ನು ನಮ್ಮ ಸ್ವಂತಕ್ಕಾಗಿ ಉಪಯೋಗಿಸಬಹುದು ಅಥವಾ ಸರಿಯಾದ ರೀತಿಯಲ್ಲಿ ನಾಶಮಾಡಬೇಕು. ತಿಂಗಳ ಸಾಹಿತ್ಯ ನೀಡುವಿಕೆಗೆ ಹೆಚ್ಚಿನ ಗಮನ ಕೊಡುವುದಾದರೂ ಸೂಕ್ತ ಸಂದರ್ಭಗಳಲ್ಲಿ ಇತರ ಪ್ರಕಾಶನಗಳನ್ನು ಕೊಡಬಹುದು.
4 ಸೇವೆಯಲ್ಲಿ ಕೊಡಲು ಸಭೆಯಿಂದ ಎಷ್ಟು ಸಾಹಿತ್ಯ ತೆಗೆದುಕೊಳ್ಳಬೇಕೆಂದು ಮೊದಲೇ ಯೋಚಿಸಿರಿ. ಎಲ್ಲವನ್ನೂ ಒಮ್ಮೆಲೇ ತೆಗೆದುಕೊಂಡು ಹೋಗಿ ಮನೆಯಲ್ಲಿ ಕೂಡಿಸಿಟ್ಟುಕೊಳ್ಳಬೇಡಿ. ಯಾಕೆಂದರೆ ಪ್ರತಿ ಕೂಟದ ಮೊದಲು ಮತ್ತು ನಂತರ ನಿಮಗೆ ಸಾಹಿತ್ಯಗಳನ್ನು ತೆಗೆದುಕೊಳ್ಳುವ ಅವಕಾಶವಿರುತ್ತದೆ. ವಾರದ ಆರಂಭದಲ್ಲಿ ಕೆಲವು ದಿನಗಳಿಗೆ ಸಾಕಾಗುವಷ್ಟು ಸಾಹಿತ್ಯಗಳನ್ನು ತೆಗೆದುಕೊಳ್ಳಿ, ಅದು ಖಾಲಿ ಆಗುತ್ತಿದ್ದಂತೆ ಮತ್ತೆ ಸ್ವಲ್ಪ ತೆಗೆದುಕೊಳ್ಳಿ.
5 ಕರಪತ್ರಗಳು ನಮ್ಮ ಸೇವಾಕ್ಷೇತ್ರದಲ್ಲಿರುವ ಅನೇಕ ಜನರ ಮನಸ್ಸನ್ನು ಸೆಳೆಯುತ್ತದೆ ಮತ್ತು ಅವರಿಗಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುತ್ತದೆ. ಮೊದಲ ಭೇಟಿಯಲ್ಲಿ ಮತ್ತು ಸಾರ್ವಜನಿಕ ಸೇವೆಯಲ್ಲಿ ಹೆಚ್ಚಾಗಿ ಕರಪತ್ರ, ಪತ್ರಿಕೆ ಮತ್ತು ಕಿರುಹೊತ್ತಗೆಗಳನ್ನು ಕೊಡಿ. ಕರಪತ್ರಗಳ ಮತ್ತು ಕಿರುಹೊತ್ತಗೆಗಳ ವಿಶೇಷ ಪೋಸ್ಟರ್ಗಳನ್ನು ಸಾರ್ವಜನಿಕ ಸೇವೆಯಲ್ಲಿ ಬಳಸಿ. ಸಿಹಿಸುದ್ದಿ ಅಥವಾ ಸುಖೀ ಸಂಸಾರ ಕಿರುಹೊತ್ತಗೆಯಿಂದ ಬೈಬಲ್ ಅಧ್ಯಯನವನ್ನು ಆರಂಭಿಸಲು ಪ್ರಯತ್ನಿಸಿ. ನೀವು ಪುನರ್ಭೇಟಿ ಮಾಡುವ ವ್ಯಕ್ತಿಗೆ ನಿಜವಾಗಿಯೂ ತುಂಬ ಆಸಕ್ತಿ ಇದೆ ಮತ್ತು ಅವರು ನಮ್ಮ ಸಾಹಿತ್ಯವನ್ನು ಖಂಡಿತ ಚೆನ್ನಾಗಿ ಉಪಯೋಗಿಸುತ್ತಾರೆ ಎಂದು ಅನಿಸಿದರೆ ಆಗ ಬೈಬಲ್ ಬೋಧಿಸುತ್ತದೆ ಅಥವಾ ಇನ್ನಿತರ ಸೂಕ್ತ ಪುಸ್ತಕವನ್ನು ಕೊಡಿ. ಮೊದಲ ಭೇಟಿಯಲ್ಲೇ ಮನೆಯವರು ಅಸಾಧಾರಣ ಆಸಕ್ತಿ ತೋರಿಸಿದರೆ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪರಿಚಯಿಸಬಹುದು. ಸಾಧ್ಯವಾದಾಗೆಲ್ಲ, ಮುದ್ರಿತ ಪ್ರತಿಗಳನ್ನು ಕೊಡುವ ಬದಲು jw.org ವೆಬ್ಸೈಟ್ನಲ್ಲಿರುವ ಎಲೆಕ್ಟ್ರಾನಿಕ್ ಪ್ರತಿಗಳನ್ನು ಕೊಡಲು ಕಲಿತುಕೊಳ್ಳಿ.
6 ನಮಗೆ ಕೊಡಲಾಗಿರುವ ಸಾಹಿತ್ಯಗಳನ್ನು ಜಾಣ್ಮೆಯಿಂದ ಮತ್ತು ವಿವೇಚನೆಯಿಂದ ಬಳಸೋಣ. ಹೀಗೆ ನಮಗಾಗಿ ಯೆಹೋವನು ಒದಗಿಸಿರುವ ಈ ಅಮೂಲ್ಯ ಸಂಪತ್ತನ್ನು ಅಮೂಲ್ಯವಾಗಿಯೇ ಕಾಣೋಣ.