ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮೇ 4-10
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 36-37
“ಅಣ್ಣಂದಿರ ಹೊಟ್ಟೆಕಿಚ್ಚಿಗೆ ಬಲಿಯಾದ ಯೋಸೇಫ”
ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ
ಚಿತ್ರದಲ್ಲಿರುವ ಈ ಹುಡುಗನು ಎಷ್ಟು ಬೇಸರದಿಂದ ಇದ್ದಾನೆಂದು ನೋಡಿರಿ. ಅವನ ಮುಖ ಎಷ್ಟು ನಿರಾಶೆಯಿಂದ ತುಂಬಿದೆ. ಅವನು ಯೋಸೇಫನು. ಅವನ ಅಣ್ಣಂದಿರು ಈಗಷ್ಟೇ ಅವನನ್ನು ಇಲ್ಲಿರುವ ಪುರುಷರಿಗೆ ಮಾರಿದ್ದಾರೆ. ಈ ಪುರುಷರು ಐಗುಪ್ತ ದೇಶಕ್ಕೆ ಪ್ರಯಾಣ ಮಾಡುತ್ತಾ ಇದ್ದರು. ಅಲ್ಲಿ ಯೋಸೇಫನು ದಾಸನಾಗುತ್ತಾನೆ. ಅವನ ಮಲಅಣ್ಣಂದಿರು ಈ ಕೆಟ್ಟ ಸಂಗತಿಯನ್ನು ಮಾಡಿದ್ದೇಕೆ? ಅವರಿಗೆ ಯೋಸೇಫನ ಮೇಲೆ ಹೊಟ್ಟೆಕಿಚ್ಚು ಇದ್ದದರಿಂದಲೇ.
ಅವರ ತಂದೆಯಾದ ಯಾಕೋಬನಿಗೆ ಯೋಸೇಫನೆಂದರೆ ಬಹಳ ಇಷ್ಟ. ಅವನಿಗೆ ಒಂದು ಸುಂದರವಾದ ನಿಲುವಂಗಿಯನ್ನು ಮಾಡಿಕೊಡುವ ಮೂಲಕ ಯಾಕೋಬನು ತನ್ನ ಪ್ರೀತಿಯನ್ನು ತೋರಿಸಿದನು. ಅವನು ಯೋಸೇಫನನ್ನು ಹೆಚ್ಚು ಪ್ರೀತಿಸುವುದನ್ನು ಅವನ ಹತ್ತು ಮಂದಿ ಅಣ್ಣಂದಿರು ನೋಡಿದಾಗ, ಅವರು ಹೊಟ್ಟೆಕಿಚ್ಚು ಪಟ್ಟು ಯೋಸೇಫನನ್ನು ದ್ವೇಷಿಸಿದರು. ಅವರು ಅವನನ್ನು ದ್ವೇಷಿಸಲು ಇನ್ನೊಂದು ಕಾರಣವೂ ಇತ್ತು.
ಯೋಸೇಫನಿಗೆ ಎರಡು ಕನಸುಗಳು ಬಿದ್ದವು. ಆ ಎರಡೂ ಕನಸುಗಳಲ್ಲಿ ಅವನ ಅಣ್ಣಂದಿರು ಬಗ್ಗಿ ಅವನಿಗೆ ನಮಸ್ಕರಿಸುವುದನ್ನು ಕಂಡನು. ಇದನ್ನು ಯೋಸೇಫನು ತನ್ನ ಅಣ್ಣಂದಿರಿಗೆ ತಿಳಿಸಿದಾಗ, ಅವರ ದ್ವೇಷ ಇನ್ನಷ್ಟು ಹೆಚ್ಚಾಯಿತು.
ಹೀಗಿರುವಾಗ ಒಂದಾನೊಂದು ಕಾಲದಲ್ಲಿ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಕುರಿಗಳನ್ನು ಮೇಯಿಸಲು ಹೋಗಿದ್ದರು. ಒಂದು ದಿನ, ಯಾಕೋಬನು ಯೋಸೇಫನನ್ನು ಕರೆದು ಅಣ್ಣಂದಿರು ಹೇಗಿದ್ದಾರೆಂದು ನೋಡಿಕೊಂಡು ಬರುವಂತೆ ಹೇಳುತ್ತಾನೆ. ಯೋಸೇಫನು ಬರುವುದನ್ನು ಅವನ ಅಣ್ಣಂದಿರು ಕಂಡಾಗ ಅವರಲ್ಲಿ ಕೆಲವರು, ‘ನಾವು ಅವನನ್ನು ಕೊಲ್ಲೋಣ!’ ಎಂದು ಹೇಳುತ್ತಾರೆ. ಆದರೆ ಅವರಲ್ಲಿ ದೊಡ್ಡವನಾದ ರೂಬೇನನು ‘ಬೇಡ, ಹಾಗೆ ಮಾಡಬೇಡಿ!’ ಎಂದು ಹೇಳುತ್ತಾನೆ. ಆಗ ಅವರು ಯೋಸೇಫನನ್ನು ಹಿಡಿದು ನೀರಿಲ್ಲದ ಒಂದು ಗುಂಡಿಗೆ ಹಾಕುತ್ತಾರೆ. ಆಮೇಲೆ ಅವನನ್ನು ಏನು ಮಾಡುವುದೆಂದು ಯೋಚಿಸುತ್ತಾ ಕೂತುಕೊಳ್ಳುತ್ತಾರೆ.
ಆ ಸಮಯದಲ್ಲಿ ಕೆಲವು ಇಷ್ಮಾಯೇಲ್ಯ ಪುರುಷರು ಆ ದಾರಿಯಾಗಿ ಬರುತ್ತಾರೆ. ಯೆಹೂದನು ತನ್ನ ಮಲಸಹೋದರರಿಗೆ, ‘ಬನ್ನಿ, ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ’ ಎಂದು ಹೇಳುತ್ತಾನೆ. ಅವರು ಹಾಗೆಯೇ ಮಾಡುತ್ತಾರೆ. ಅವರು ಯೋಸೇಫನನ್ನು 20 ಬೆಳ್ಳಿ ನಾಣ್ಯಗಳಿಗೆ ಮಾರಿಬಿಡುತ್ತಾರೆ. ಅದೆಷ್ಟು ನಿರ್ದಯವಾದ ನೀಚಕಾರ್ಯವಾಗಿತ್ತು!
ಸರಿ, ಈಗ ಯೋಸೇಫನ ಅಣ್ಣಂದಿರು ತಮ್ಮ ತಂದೆಗೆ ಏನು ಹೇಳುವರು? ಅವರೊಂದು ಆಡನ್ನು ಕೊಂದು ಅದರ ರಕ್ತದಲ್ಲಿ ಯೋಸೇಫನ ಸುಂದರವಾದ ನಿಲುವಂಗಿಯನ್ನು ಅದ್ದಿ ಅದ್ದಿ ತೆಗೆಯುತ್ತಾರೆ. ಅನಂತರ ಅವರು ಆ ನಿಲುವಂಗಿಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ಮತ್ತು ತಮ್ಮ ತಂದೆಯಾದ ಯಾಕೋಬನಿಗೆ ತೋರಿಸಿ ‘ಇದು ನಮಗೆ ಸಿಕ್ಕಿತು, ಇದು ಯೋಸೇಫನ ಅಂಗಿಯೋ ಅಲ್ಲವೋ ನೋಡು’ ಎಂದು ಹೇಳುತ್ತಾರೆ.
ಯಾಕೋಬನಿಗೆ ಆ ಅಂಗಿಯ ಗುರುತು ಸಿಗುತ್ತದೆ. ‘ಅಯ್ಯೋ, ಒಂದು ಕಾಡುಮೃಗವು ಯೋಸೇಫನನ್ನು ಕೊಂದಿರಬೇಕು’ ಎಂದು ಅವನು ಜೋರಾಗಿ ಅಳುತ್ತಾನೆ. ಯೋಸೇಫನ ಸಹೋದರರಿಗೆ ಅದೇ ಬೇಕಿತ್ತು. ತಮ್ಮ ತಂದೆಯು ಹಾಗೆಯೇ ನೆನಸಬೇಕೆಂದು ಅವರು ಬಯಸಿದ್ದರು. ಯಾಕೋಬನಿಗೆ ಬಹಳ ದುಃಖವಾಗುತ್ತದೆ. ಅನೇಕ ದಿನಗಳ ವರೆಗೆ ಅವನು ಶೋಕಿಸುತ್ತಾ ಇರುತ್ತಾನೆ. ಆದರೆ ಯೋಸೇಫನು ಸತ್ತಿಲ್ಲ. ಅವನನ್ನು ಕರೆದುಕೊಂಡು ಹೋದ ಸ್ಥಳದಲ್ಲಿ ಏನಾಯಿತೆಂದು ನಾವೀಗ ನೋಡೋಣ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1-E ಪುಟ 678
ಎದೋಮ
(ಎದೋಮ) [ಕೆಂಪು], ಎದೋಮ್ಯರು.
ಎದೋಮ ಅನ್ನೋದು ಯಾಕೋಬನ ಅವಳಿ ಸಹೋದರನಾದ ಏಸಾವನ ಇನ್ನೊಂದು ಹೆಸ್ರು ಅಥ್ವಾ ಅಡ್ಡಹೆಸ್ರು. (ಆದಿ 36:1) ಕೆಂಪು ಬಣ್ಣದ ಆಹಾರಕ್ಕಾಗಿ ಅವ್ನು ತನ್ನ ಚೊಚ್ಚಲುತನದ ಹಕ್ಕನ್ನು ಮಾರಿದ ಕಾರಣ ಈ ಹೆಸ್ರು ಅವ್ನಿಗೆ ಸೂಕ್ತವಾಗಿತ್ತು. (ಆದಿ 25:30-34) ಅವ್ನು ಹುಟ್ಟಿದಾಗ್ಲೂ ತುಂಬ ಕೆಂಪಗಿದ್ದನು. (ಆದಿ 25:25) ಅಷ್ಟೇ ಅಲ್ಲ, ಅವನು ಮತ್ತವನ ಸಂತತಿಯು ವಾಸಿಸಿದ ಪ್ರದೇಶದಲ್ಲಿ ನೆಲ ಮತ್ತು ಬಂಡೆಗಳು ಸಹ ಕೆಂಪು ಬಣ್ಣದಲ್ಲಿದ್ದವು.
it-1-E ಪುಟ 561-562
ರಕ್ಷಣೆ ಅಥ್ವಾ ಪಾಲನೆ
ಒಬ್ಬ ಕುರುಬ ಅಥ್ವಾ ಗೊಲ್ಲನು ತಾನು ಕುರಿಹಿಂಡನ್ನು, ದನಗಳ ಹಿಂಡನ್ನು ಇಟ್ಟುಕೊಳ್ತೇನೆ ಅಥವಾ ಅವುಗಳನ್ನ ಕಾಯುತ್ತೇನೆ ಅಂತ ಹೇಳ್ದಾಗ ಆ ಮಾತು ತಾನು ಪ್ರಾಣಿಗಳನ್ನು ರಕ್ಷಿಸ್ತೇನೆ ಅಥವಾ ಪಾಲನೆ ಮಾಡ್ತೇನೆ ಅಂತ ಅವನು ಕಾನೂನುಬದ್ಧವಾಗಿ ಅಂಗೀಕರಿಸುವುದಕ್ಕೆ ಸೂಚಿಸುತ್ತಿತ್ತು. ಅವ್ನು ಹೀಗೆ ಹೇಳೋ ಮೂಲಕ ಅವುಗಳಿಗೆ ಆಹಾರ ಕೊಟ್ಟು ಪೋಷಿಸ್ತೇನೆ, ಅವುಗಳು ಕಳುವಾಗದಂತೆ ನೋಡಿಕೊಳ್ತೇನೆ, ಒಂದುವೇಳೆ ಅವುಗಳಿಗೆ ಏನಾದ್ರೂ ಸಂಭವಿಸಿದ್ರೆ ಅದಕ್ಕೆ ತಗಲೋ ದಂಡವನ್ನ ಕಟ್ಟುತ್ತೇನೆ ಅಂತ ಆ ಹಿಂಡಿನ ಯಜಮಾನನಿಗೆ ಮಾತು ಕೊಡ್ತಿದ್ದನು. ಆದ್ರೆ ಕೆಲವೊಮ್ಮೆ ಅವನ ಕೈ ಮೀರಿಹೋಗುವ ಸನ್ನಿವೇಶ ಎದುರಾಗುತ್ತಿತ್ತು. ಉದಾಹರಣೆಗೆ, ಆ ಹಿಂಡಿನ ಮೇಲೆ ಕಾಡುಮೃಗಗಳು ದಾಳಿ ಮಾಡಿದಾಗ ಅವನ್ನು ಕಾಪಾಡೋಕೆ ಅವನ ಕೈಯಲ್ಲಿ ಆಗ್ತಿರಲಿಲ್ಲ. ಆಗ ಅವನು ಮೇಲೆ ತಿಳಿಸಲಾದ ನಿಯಮದಿಂದ ಮುಕ್ತನಾಗುತ್ತಿದ್ದನು. ಆದ್ರೆ ಅದಕ್ಕಾಗಿ ಅವನು ಸಾಕ್ಷ್ಯಾಧಾರಗಳನ್ನು ತೋರಿಸಬೇಕಿತ್ತು. ಉದಾಹರಣೆಗೆ, ಆ ಪ್ರಾಣಿಯ ಮೃತದೇಹವನ್ನು ತೋರಿಸಬೇಕಿತ್ತು. ಈ ಸಾಕ್ಷ್ಯಾಧಾರಗಳೆಲ್ಲ ಸರಿಯಾಗಿದ್ರೆ ಅವನ್ನು ಪರೀಕ್ಷಿಸಿದ ಯಜಮಾನನು ‘ಹಿಂಡನ್ನು ಪಾಲನೆ ಮಾಡ್ತೀನಿ’ ಅಂತ ಮಾತು ಕೊಟ್ಟವನದು ಏನೂ ತಪ್ಪಿಲ್ಲ ಅಂತ ತೀರ್ಪು ನೀಡಬೇಕಿತ್ತು.
ಇದೇ ತತ್ವ ಆಸ್ತಿ ನೋಡಿಕೊಳ್ಳುವವ್ರಿಗೂ ಅನ್ವಯ ಆಗ್ತಿತ್ತು. ಕುಟುಂಬದಲ್ಲೂ ಇದು ಅನ್ವಯವಾಗ್ತಿತ್ತು. ಉದಾಹರಣೆಗೆ, ಅಣ್ಣನು ತನ್ನ ತಮ್ಮಂದಿರ ಮತ್ತು ತಂಗಿಯರ ಕಾನೂನುಬದ್ಧ ಪೋಷಕನಾಗಿ ಇರಬೇಕಿತ್ತು. ಈ ಕಾರಣದಿಂದ್ಲೇ ಆದಿಕಾಂಡ 37:18-30 ರಲ್ಲಿ ತಿಳಿಸಿರುವಂತೆ ಯೋಸೇಫನ ಅಣ್ಣಂದಿರು ಅವನನ್ನು ಕೊಲ್ಲಬೇಕೆಂದು ಮಾತಾಡಿಕೊಳ್ಳುವಾಗ ಮೊದಲನೇ ಅಣ್ಣನಾದ ರೂಬೇನನು ಯೋಸೇಫನ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿರಬಹುದು ಅನ್ಸುತ್ತೆ. ಅವ್ನು ಅವ್ರಿಗೆ, “ನಾವು ಅವನ ಪ್ರಾಣವನ್ನು ತೆಗೆಯಬಾರದು” ಅಂತ ಹೇಳಿದ್ನು. “ರೂಬೇನನು ಅವನನ್ನು [ಯೋಸೇಫನನ್ನು] ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರಿಗಿ ಒಪ್ಪಿಸಬೇಕೆಂದು ಅವರಿಗೆ—ಪ್ರಾಣಹತ್ಯಮಾಡಬೇಡಿರಿ; . . . ಅವನ ಮೇಲೆ ಕೈಹಾಕಬೇಡಿರಿ ಎಂದು ಹೇಳಿದನು.” ನಂತರ ಯೋಸೇಫ ಇಲ್ಲದ್ದನ್ನು ನೋಡಿ ರೂಬೇನನಿಗೆ ಎಷ್ಟು ಕಳವಳ ಆಯಿತೆಂದ್ರೆ ‘ತನ್ನ ಬಟ್ಟೆಗಳನ್ನು ಹರಿದುಕೊಂಡನು’ ಮತ್ತು “ಆ ಹುಡುಗನು ಇಲ್ಲವಲ್ಲಾ; ಅಯ್ಯೋ ನಾನೆಲ್ಲಿಗೆ ಹೋಗಲಿ ಎಂದು ಗೋಳಾಡಿದನು.” ಯೋಸೇಫ ಇಲ್ಲದಿರೋದಕ್ಕೆ ತಾನೇ ಹೊಣೆಯಾಗ್ತೇನೆ ಅಂತ ಅವ್ನಿಗೆ ಗೊತ್ತಿತ್ತು. ಈ ಹೊಣೆಯಿಂದ ಜಾರಿಕೊಳ್ಳಲು ಅಣ್ಣಂದಿರೆಲ್ರೂ ಒಂದು ಉಪಾಯ ಮಾಡಿದ್ರು. ಯೋಸೇಫನನ್ನು ಕಾಡುಮೃಗ ಕೊಂದುಬಿಟ್ಟಿದೆ ಅಂತ ತೋರಿಸಲಿಕ್ಕಾಗಿ ಸುಳ್ಳು ಸಾಕ್ಷ್ಯಾಧಾರವನ್ನು ಸೃಷ್ಟಿಸಿದ್ರು. ಇದಕ್ಕಾಗಿ ಯೋಸೇಫನ ಬಟ್ಟೆಯನ್ನು ಹೋತದ (ಮೇಕೆಯ) ರಕ್ತದಲ್ಲಿ ಅದ್ದಿದರು. ನಂತರ ಆ ಬಟ್ಟೆಯನ್ನು ತಮ್ಮ ತಂದೆ ಹಾಗೂ ಕುಟುಂಬದ ನ್ಯಾಯಾಧಿಪತಿಯಾಗಿದ್ದ ಯಾಕೋಬನ ಹತ್ರ ಕಳುಹಿಸಿದ್ರು. ಯೋಸೇಫನ ರಕ್ತಸಿಕ್ತ ಬಟ್ಟೆ ನೋಡಿ ಅವನನ್ನು ಕಾಡುಮೃಗ ಕೊಂದು ತಿಂದಿರಬೇಕು ಅಂತ ಯಾಕೋಬನು ನೆನಸಿದನು. ಹೀಗೆ ರೂಬೇನನು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ್ನು.—ಆದಿ 37:31-33.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು10 9/15 ಪುಟ 14 ಪ್ಯಾರ 11-13
ಏಕತೆ—ಸತ್ಯಾರಾಧನೆಯ ಗುರುತು
11 ಹೆಮ್ಮೆಯು ಜನರ ಮಧ್ಯೆ ವಿಭಜನೆಯನ್ನು ಉಂಟುಮಾಡುತ್ತದೆ. ಹೆಮ್ಮೆಯುಳ್ಳ ಒಬ್ಬ ವ್ಯಕ್ತಿ ತನ್ನನ್ನೇ ಶ್ರೇಷ್ಠನೆಂದು ಪರಿಗಣಿಸಲು ಇಷ್ಟಪಡುತ್ತಾನೆ ಹಾಗೂ ಜಂಭಕೊಚ್ಚಿಕೊಳ್ಳುವುದರಲ್ಲಿ ಸ್ವಾರ್ಥಪರ ಸಂತಸವನ್ನು ಪಡೆಯುತ್ತಾನೆ. ಆದರೆ ಇದು ಅನೇಕವೇಳೆ ನಮ್ಮ ಐಕ್ಯಕ್ಕೆ ತಡೆಯಾಗುತ್ತದೆ. ಒಬ್ಬನು ಜಂಭಕೊಚ್ಚಿಕೊಳ್ಳುವುದನ್ನು ಇತರರು ಕೇಳಿಸಿಕೊಂಡಾಗ ಅವರು ಹೊಟ್ಟೆಕಿಚ್ಚು ಪಡಬಹುದು. ಆದುದರಿಂದಲೇ “ಈ ರೀತಿಯ ಎಲ್ಲ ಹೆಮ್ಮೆಪಡುವಿಕೆಯು ಕೆಟ್ಟದ್ದೇ” ಎಂದು ಶಿಷ್ಯ ಯಾಕೋಬನು ನಮಗೆ ಮುಚ್ಚುಮರೆಯಿಲ್ಲದೆ ತಿಳಿಸಿದ್ದಾನೆ. (ಯಾಕೋ. 4:16) ಇತರರನ್ನು ಕೀಳಾಗಿ ನೋಡುವುದು ಪ್ರೀತಿರಹಿತ ಕ್ರಿಯೆ. ಆದರೆ ಯೆಹೋವನು ನಮ್ಮಂಥ ಪಾಪಿಗಳೊಂದಿಗೆ ವ್ಯವಹರಿಸುವ ಮೂಲಕ ದೀನತೆಯ ಮಾದರಿಯನ್ನು ತೋರಿಸಿದ್ದಾನೆ ಎಂಬುದನ್ನು ನಾವು ಗಮನದಲ್ಲಿಡಬೇಕು. ದಾವೀದನು ಬರೆದದ್ದು: “ನಿನ್ನ [ದೇವರ] ಕೃಪಾಕಟಾಕ್ಷವು [ದೀನತೆಯು, NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.” (2 ಸಮು. 22:36) ಯೋಗ್ಯ ವಿವೇಚನೆಯನ್ನು ಉಪಯೋಗಿಸಲು ಕಲಿಸುವ ಮೂಲಕ ದೇವರ ವಾಕ್ಯವು ಹೆಮ್ಮೆಯನ್ನು ಜಯಿಸಲು ನಮಗೆ ಸಹಾಯಮಾಡುತ್ತದೆ. ಪೌಲನು ಪ್ರೇರಿತನಾಗಿ ಹೀಗೆ ಕೇಳಿದನು: “ನಿನ್ನನ್ನು ಇನ್ನೊಬ್ಬನಿಗಿಂತ ಭಿನ್ನವಾಗಿ ಮಾಡುವಾತನು ಯಾರು? ಹೊಂದದೇ ಇರುವಂಥದ್ದು ನಿನ್ನಲ್ಲಿ ಯಾವುದಿದೆ? ನೀನು ಅದನ್ನು ಹೊಂದಿದ್ದೇ ಆದ ಮೇಲೆ ಹೊಂದದೇ ಇರುವವನಂತೆ ಏಕೆ ಹೆಮ್ಮೆಪಡುತ್ತೀ?”—1 ಕೊರಿಂ. 4:7.
12 ಐಕ್ಯಕ್ಕೆ ಇನ್ನೊಂದು ಸಾಮಾನ್ಯ ತಡೆ ಹೊಟ್ಟೆಕಿಚ್ಚು. ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿರುವುದರಿಂದ ನಮ್ಮೆಲ್ಲರಲ್ಲಿ “ಅಸೂಯೆಪಡುವ ಪ್ರವೃತ್ತಿ” ಇದೆ. ಅನೇಕ ವರ್ಷಗಳಿಂದ ಕ್ರೈಸ್ತರಾಗಿದ್ದವರು ಸಹ ಕೆಲವೊಮ್ಮೆ ಇತರರ ಸನ್ನಿವೇಶ, ಸ್ವತ್ತು, ಸುಯೋಗ ಅಥವಾ ಸಾಮರ್ಥ್ಯಗಳನ್ನು ನೋಡಿ ಹೊಟ್ಟೆಕಿಚ್ಚುಪಟ್ಟಾರು. (ಯಾಕೋ. 4:5) ಉದಾಹರಣೆಗೆ, ಒಬ್ಬ ಕುಟುಂಬಸ್ಥ ಸಹೋದರನು ಪೂರ್ಣ ಸಮಯ ಸೇವೆಯಲ್ಲಿರುವ ಸಹೋದರನ ಸುಯೋಗಗಳನ್ನು ನೋಡಿ ಹೊಟ್ಟೆಕಿಚ್ಚು ಪಡಬಹುದು, ಆದರೆ ತನಗೆ ಮಕ್ಕಳಿರುವುದನ್ನು ನೋಡಿ ಆ ಸಹೋದರನಿಗೂ ಸ್ವಲ್ಪ ಹೊಟ್ಟೆಕಿಚ್ಚಾಗಬಹುದೆಂದು ಅವನು ಅರ್ಥಮಾಡಿಕೊಳ್ಳಲಿಕ್ಕಿಲ್ಲ. ಹಾಗಾದರೆ ಇಂಥ ಹೊಟ್ಟೆಕಿಚ್ಚು ನಮ್ಮ ಐಕ್ಯವನ್ನು ಭಂಗಪಡಿಸದಂತೆ ನಾವು ಹೇಗೆ ತಡೆಗಟ್ಟಬಲ್ಲೆವು?
13 ಬೈಬಲ್ ಕ್ರೈಸ್ತ ಸಭೆಯ ಅಭಿಷಿಕ್ತ ಸದಸ್ಯರನ್ನು ಮಾನವ ದೇಹದ ಅಂಗಗಳಿಗೆ ಹೋಲಿಸುತ್ತದೆ. ಇದನ್ನು ಮನಸ್ಸಿನಲ್ಲಿಡುವುದು ಹೊಟ್ಟೆಕಿಚ್ಚನ್ನು ಬಿಟ್ಟುಬಿಡಲು ಸಹಾಯಮಾಡುವುದು. (1 ಕೊರಿಂಥ 12:14-18 ಓದಿ.) ಉದಾಹರಣೆಗೆ ನಮ್ಮ ಕಣ್ಣು ನಮ್ಮ ಹೃದಯಕ್ಕಿಂತ ಹೆಚ್ಚು ಎದ್ದುಕಾಣುವ ದೃಶ್ಯ ಅಂಗ. ಆದರೂ ಆ ಎರಡೂ ಅಂಗಗಳು ನಮಗೆ ಅತ್ಯಮೂಲ್ಯವಾಗಿವೆ ಅಲ್ಲವೆ? ಅದೇ ರೀತಿ, ಸಭೆಯ ಸದಸ್ಯರಲ್ಲಿ ಕೆಲವರು ಕೆಲವೊಮ್ಮೆ ಇತರರಿಗಿಂತ ಪ್ರಮುಖರಾಗಿ ಎದ್ದುಕಾಣಬಹುದಾದರೂ ಯೆಹೋವನಿಗೆ ಎಲ್ಲ ಸದಸ್ಯರೂ ಅಮೂಲ್ಯರು. ಆದುದರಿಂದ ನಮ್ಮ ಸಹೋದರರನ್ನು ಯೆಹೋವನು ವೀಕ್ಷಿಸುವ ರೀತಿಯಲ್ಲೇ ವೀಕ್ಷಿಸೋಣ. ಬೇರೆಯವರನ್ನು ನೋಡಿ ಹೊಟ್ಟೆಕಿಚ್ಚುಪಡುವ ಬದಲು ಅವರ ಕಡೆಗೆ ಕಾಳಜಿ ಹಾಗೂ ವೈಯಕ್ತಿಕ ಆಸಕ್ತಿಯನ್ನು ತೋರಿಸೋಣ. ಹಾಗೆ ಮಾಡುವ ಮೂಲಕ ನಿಜ ಕ್ರೈಸ್ತರು ಹಾಗೂ ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿರುವವರ ಮಧ್ಯೆ ಇರುವ ವ್ಯತ್ಯಾಸವನ್ನು ನಾವು ತೋರಿಸಿಕೊಡುತ್ತೇವೆ.
ನಮ್ಮ ಕ್ರೈಸ್ತ ಜೀವನ
ಎಚ್ಚರ17.5 ಪುಟ 6
ಅಗತ್ಯ ಇರೋ ವಸ್ತುಗಳನ್ನ ರೆಡಿ ಮಾಡಿಟ್ಟುಕೊಂಡಿದ್ದೀರಾ?
ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಬೀಳೋ ವಸ್ತುಗಳನ್ನು ಮೊದಲೇ ರೆಡಿ ಮಾಡಿಟ್ಟುಕೊಳ್ಳುವಂತೆ ಮತ್ತು ಪ್ರತಿವರ್ಷ ಅವನ್ನು ಪರೀಕ್ಷಿಸುವಂತೆ ವಿಪತ್ತು ಪರಿಹಾರ ಸಂಘಟನೆಗಳು ಜನ್ರಿಗೆ ಪ್ರೋತ್ಸಾಹಿಸುತ್ತವೆ. ಆದ್ರೆ ನೀವಿರುವ ಸ್ಥಳ ಮತ್ತು ಸನ್ನಿವೇಶಕ್ಕೆ ತಕ್ಕಂತೆ ನಿಮಗೆ ಅಗತ್ಯ ಇರೋ ವಸ್ತುಗಳು ಬೇರೆ ಬೇರೆ ಇರಬಹುದು. ಹಾಗಾಗಿ ಯಾವ ವಸ್ತುಗಳು ನಿಮ್ಮ ಹತ್ರ ಇರಬೇಕು ಅಂತ ನಿಮ್ಮ ಪ್ರದೇಶದಲ್ಲಿರುವ ಸ್ಥಳೀಯ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಯವರ ಹತ್ತಿರ ಕೇಳಿ ನೋಡಿ.
ಸಾಮಾನ್ಯವಾಗಿ, ಪ್ರತಿಯೊಬ್ಬ ವ್ಯಕ್ತಿಗಾಗಿ ಕಡಿಮೆಪಕ್ಷ 11 ಲೀಟರ್ ನೀರು ಇಟ್ಟುಕೊಳ್ಳಬೇಕು ಮತ್ತು ಮೂರು ದಿನಗಳ ವರೆಗೂ ಕೆಡದಂಥ ಆಹಾರ ಪದಾರ್ಥಗಳನ್ನು, ಬೇಯಿಸೋ ಅಗತ್ಯ ಇಲ್ಲದಿರೋ ಆಹಾರವನ್ನು ಇಟ್ಟುಕೊಳ್ಳಬೇಕು.
ಅಷ್ಟೇ ಅಲ್ಲ, ಕೆಲವು ಜನ್ರು ಈ ಕೆಳಗಿರುವ ವಸ್ತುಗಳನ್ನು ಮೊದಲೇ ಒಂದು ಬ್ಯಾಗಿನಲ್ಲಿ ಇಟ್ಟು ತಯಾರಿ ಮಾಡಿಕೊಂಡಿರುತ್ತಾರೆ:a
■ ಹೊದಿಕೆ, ಒಂದು ಜೊತೆ ಬಟ್ಟೆ ಮತ್ತು ಗಟ್ಟಿಮುಟ್ಟಾದ ಶೂಗಳು
■ ಟಾರ್ಚ್, ರೇಡಿಯೋ (ಬ್ಯಾಟರಿ ಚಾಲಿತ ಅಥವಾ ಚಾವಿ ಕೊಟ್ರೆ ಚಾಲನೆಯಾಗೋ ರೇಡಿಯೋ) ಮತ್ತು ಹೆಚ್ಚಿನ ಬ್ಯಾಟರಿಗಳು
■ ಫಸ್ಟ್-ಏಡ್ ಬಾಕ್ಸ್ ಮತ್ತು ನೆರವಿಗಾಗಿ ಕರೆಯಲು ಒಂದು ಸೀಟಿ (ವಿಶಲ್)
■ ಕೆಲವು ಪಾತ್ರೆಗಳು, ಕ್ಯಾನ್ ಓಪನರ್ಗಳು, ಜೇಬಲ್ಲಿ ಇಡಬಹುದಾದ ಚಿಕ್ಕ ಪುಟ್ಟ ಟೂಲ್ಗಳು, ನೀರು ಬಿದ್ರೆ ಹಾಳಾಗದಿರುವ ಬೆಂಕಿಪೊಟ್ಟಣಗಳು
■ ಮಾಸ್ಕ್ಗಳು, ನೀರಿಂದ ಹಾಳಾಗದಿರುವ ಟೇಪ್ಗಳು ಮತ್ತು ಟೆಂಟ್ ಕಟ್ಟಲಿಕ್ಕಾಗಿ ಪ್ಲಾಸ್ಟಿಕ್ ಶೀಟ್ಗಳು
■ ಹಲ್ಲುಜ್ಜೋ ಬ್ರಷ್, ಸೋಪು, ಟವಲ್ಲು ಮತ್ತು ಟಾಯ್ಲೆಟ್ ಪೇಪರ್
■ ಮಕ್ಕಳಿಗೆ, ವಯಸ್ಸಾದವ್ರಿಗೆ ಮತ್ತು ವಿಕಲಚೇತನರಿಗೆ ಅಗತ್ಯ ಬೀಳೋ ವಸ್ತುಗಳು
■ ಔಷಧಿ, ಮಾತ್ರೆಗಳು, ಔಷಧಿ ಚೀಟಿಗಳು ಮತ್ತು ಇನ್ನಿತರ ಪ್ರಾಮುಖ್ಯ ಡಾಕ್ಯುಮೆಂಟ್ಗಳು. ಇವನ್ನೆಲ್ಲಾ ನೀರು ಒಳಗೆ ಹೋಗದಿರೋ ಡಬ್ಬದಲ್ಲಿ ಇಡ್ಬೇಕು
■ ತುರ್ತಾಗಿ ಸಂಪರ್ಕಿಸಬೇಕಾದ ಫೋನ್ ನಂಬರ್ಗಳು, ಎಲ್ರೂ ಕೂಡಿ ಬರಬೇಕಾದ ಸ್ಥಳಗಳ ಪಟ್ಟಿ ಮತ್ತು ಸ್ಥಳೀಯ ಮ್ಯಾಪ್
■ ಕ್ರೆಡಿಟ್ ಕಾರ್ಡ್ಗಳು ಮತ್ತು ದುಡ್ಡು
■ ಮನೆ ಮತ್ತು ಗಾಡಿಯ ಒಂದು ಜೊತೆ ಕೀ
■ ಪೇಪರ್, ಪೆನ್ಸಿಲ್, ಪುಸ್ತಕಗಳು ಮತ್ತು ಮಕ್ಕಳ ಆಟದ ಸಾಮಾನುಗಳು
■ ಬೈಬಲ್
ಮೇ 11-17
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 38-39
“ಯೆಹೋವನು ಎಂದೂ ಯೋಸೇಫನ ಕೈಬಿಡಲಿಲ್ಲ”
ಕಾವಲಿನಬುರುಜು14-E 11/1 ಪುಟ 12 ಪ್ಯಾರ 4-5
‘ಇಂಥ ಮಹಾ ದುಷ್ಕೃತ್ಯವನ್ನು ನಾನು ಹೇಗೆ ಮಾಡಲಿ?’
“ಯೋಸೇಫನನ್ನು ತೆಗೆದುಕೊಂಡುಹೋದ ಇಷ್ಮಾಯೇಲ್ಯರು ಐಗುಪ್ತದೇಶಕ್ಕೆ ಸೇರಿದಾಗ ಒಬ್ಬ ಐಗುಪ್ತದವನು ಅವನನ್ನು ಅವರಿಂದ ಕ್ರಯಕ್ಕೆ ತೆಗೆದುಕೊಂಡನು; ಇವನು ಯಾರಂದರೆ ಫರೋಹನ ಉದ್ಯೋಗಸ್ಥನೂ ಮೈಗಾವಲಿನವರ ದಳವಾಯಿಯೂ ಆಗಿದ್ದ ಪೋಟೀಫರನು.” (ಆದಿಕಾಂಡ 39:1) ಯುವ ಯೋಸೇಫನನ್ನು ಅವ್ರು ಇನ್ನೊಮ್ಮೆ ಮಾರಿ ಅವನನ್ನು ಎಷ್ಟು ಅವಮಾನ ಮಾಡಿದರೆಂದು ಈ ಕೆಲವೇ ಪದಗಳಿಂದ ನಾವು ತಿಳ್ಕೋಬಹುದು. ಅವ್ರ ಪಾಲಿಗೆ ಅವನು ಕೇವಲ ಸ್ವತ್ತಾಗಿದ್ದನು! ಜನಜಂಗುಳಿಯಿಂದ ಕಿಕ್ಕಿರಿದ, ಬಜಾರುಗಳಿಂದ ತುಂಬಿದ್ದ ನಗರದ ರಸ್ತೆಗಳಲ್ಲಿ ಯೋಸೇಫನು ತನ್ನ ಹೊಸ ಧಣಿಯಾದ ಈಜಿಪ್ಟಿನ ಅಧಿಕಾರಿಯ ಹಿಂದೆಂದೆನೇ ಹೊಸ ಮನೆಗೆ ಹೋಗ್ತಿರೋದನ್ನು ನಾವು ಕಲ್ಪಿಸಿಕೊಳ್ಳಬಹುದು.
ಯೋಸೇಫನಿಗೆ ಮನೆ! ಹಿಂದೆ ಯೋಸೇಫನಿಗೆ ಒಂದು ಮನೆ ಅಂತನೇ ಇರಲಿಲ್ಲ. ಅವನು ಹುಟ್ಟಿ ಬೆಳೆದಿದ್ದು ಅಲೆಮಾರಿ ಕುಟುಂಬದಲ್ಲಿ. ಅವ್ರು ಒಂದು ಕಡೆ ವಾಸ ಮಾಡ್ತಿರಲಿಲ್ಲ. ಕುರಿಗಳಿಗೆ ಮೇವು ಎಲ್ಲಿ ಸಿಗುತ್ತೋ ಅಲ್ಲಿ ಡೇರೆ ಹಾಕಿಕೊಂಡು ವಾಸ ಮಾಡ್ತಿದ್ರು. ಅಲ್ಲಿ ಮೇವು ಖಾಲಿಯಾದ ಮೇಲೆ ಇನ್ನೊಂದು ಸ್ಥಳ ಹುಡುಕಿಕೊಂಡು ಹೋಗ್ತಿದ್ರು. ಆದ್ರೆ ಯೋಸೇಫನು ಈಗಿದ್ದ ಮನೆ ಈಜಿಪ್ಟಿನ ಶ್ರೀಮಂತ ವ್ಯಕ್ತಿಯಾಗಿದ್ದ ಪೋಟೀಫರನ ಮನೆಯಾಗಿತ್ತು. ಆ ಮನೆ ತುಂಬ ವೈಭವವಾಗಿತ್ತು ಮತ್ತು ವರ್ಣರಂಜಿತವಾಗಿತ್ತು. ಹಿಂದಿನ ಕಾಲದ ಈಜಿಪ್ಟಿನವ್ರಿಗೆ ಸಮೃದ್ಧವಾಗಿರುವ ತೋಟ, ನೆರಳು ಕೊಡೋ ಮರ ಮತ್ತು ನೀರಲ್ಲಿ ಬೆಳೆಯೋ ಪಪೈರಸ್, ತಾವರೆ ಮುಂತಾದ ಗಿಡಗಳಿಗಾಗಿ ಚಿಕ್ಕ ಕೊಳಗಳು ತುಂಬ ಇಷ್ಟವಾಗ್ತಿದ್ದವು ಅಂತ ಪುರಾತತ್ವ ತಜ್ಞರು ಹೇಳ್ತಾರೆ. ಕೆಲವು ಮನೆಗಳಂತೂ ತೋಟದ ಮಧ್ಯದಲ್ಲೇ ಇರುತ್ತಿದ್ದವು, ತಂಪಾದ ಗಾಳಿಯನ್ನು ಆಸ್ವಾದಿಸಲಿಕ್ಕಾಗಿ ಆ ಮನೆಗಳಿಗೆ ಚಿಕ್ಕ ಬಾಲ್ಕನಿಗಳು ಇರ್ತಿದ್ದವು, ಬೆಳಕಿಗಾಗಿ ದೊಡ್ಡ ಕಿಟಕಿಗಳಿರುತ್ತಿದ್ದವು. ಅನೇಕ ಕೋಣೆಗಳು, ಊಟಕ್ಕಾಗಿ ದೊಡ್ಡ ಕೋಣೆ ಮತ್ತು ಕೆಲ್ಸ ಮಾಡುವವ್ರಿಗೂ ವಸತಿ ವ್ಯವಸ್ಥೆ ಇರ್ತಿತ್ತು.
ಕಾವಲಿನಬುರುಜು14-E 11/1 ಪುಟ 14-15
‘ಇಂಥ ಮಹಾ ದುಷ್ಕೃತ್ಯವನ್ನು ನಾನು ಹೇಗೆ ಮಾಡಲಿ?’
ಹಿಂದಿನ ಕಾಲದ ಈಜಿಪ್ಟಿನ ಜೈಲುಗಳು ಹೇಗಿದ್ದವು ಅಂತ ನಮ್ಗೆ ಗೊತ್ತಿಲ್ಲ. ಪುರಾತತ್ವ ತಜ್ಞರು ಅಂಥ ಸ್ಥಳಗಳ ಪಳೆಯುಳಿಕೆಗಳನ್ನು ಪರೀಕ್ಷಿಸಿದಾಗ ಆ ಜೈಲುಗಳಲ್ಲಿ ಕೋಣೆಗಳು ಮತ್ತು ನೆಲಮಾಳಿಗೆಗಳಿದ್ದವು, ಅವು ಕೋಟೆಗಳ ತರ ಇದ್ದವು ಅಂತ ಕಂಡುಕೊಂಡಿದ್ದಾರೆ. ಯೋಸೇಫನು ಆ ಸ್ಥಳವನ್ನು ವರ್ಣಿಸಲು ಉಪಯೋಗಿಸಿದ ಪದದ ಅರ್ಥ “ಗುಂಡಿ” ಎಂದಾಗಿತ್ತು. ಅಂದರೆ ಅದು ಬೆಳಕಿಲ್ಲದ, ನಿಷ್ಪ್ರಯೋಜಕ ಸ್ಥಳವಾಗಿತ್ತು. (ಆದಿಕಾಂಡ 40:15) ಯೋಸೇಫನಿಗೆ ಹೆಚ್ಚಿನ ಹಿಂಸೆ ಕೊಡಲಾಯಿತು ಅಂತ ಕೀರ್ತನೆಯ ಪುಸ್ತಕ ಹೀಗೆ ವರ್ಣಿಸುತ್ತೆ: “ಅವನ ಕಾಲುಗಳು ಕೋಳದಲ್ಲಿ ನೊಂದವು; ಕಬ್ಬಿಣದ ಬೇಡಿಗಳಿಂದ ಅವನು ಬಂಧಿತನಾದನು.” (ಕೀರ್ತನೆ 105:17, 18) ಈಜಿಪ್ಟಿನವರು ಕೆಲವೊಮ್ಮೆ ಕೈದಿಗಳ ಕೈಗಳನ್ನು ಹಿಂದಕ್ಕೆ ಕಟ್ಟಿ ಹಾಕುತ್ತಿದ್ದರು, ಇದ್ರಿಂದ ಕೈಗಳನ್ನು ಅಲುಗಾಡಿಸೋಕೆ ಆಗ್ತಿರಲಿಲ್ಲ ಮತ್ತು ಕೆಲವ್ರ ಕುತ್ತಿಗೆ ಸುತ್ತ ಕಬ್ಬಿಣದ ಕೋಳಗಳನ್ನು ನೇತುಹಾಕುತ್ತಿದ್ದರು. ಏನೂ ತಪ್ಪು ಮಾಡದಿರೋ ಅಮಾಯಕನಾದ ಯೋಸೇಫನು ಅನ್ಯಾಯವಾಗಿ ಇಂಥ ಕಷ್ಟ ಅನುಭವಿಸಬೇಕಾಗಿ ಬಂತು!
ಅದೂ ಸ್ವಲ್ಪ ಸಮಯಕ್ಕಲ್ಲ. “ಯೋಸೇಫನು ಸೆರೆಯಲ್ಲಿ ಇರಬೇಕಾಯಿತು” ಅಂತ ಬೈಬಲ್ ತಿಳಿಸುತ್ತೆ. ಆ ಭಯಾನಕ ಸ್ಥಳದಲ್ಲಿ ಅವನು ಅನೇಕ ವರ್ಷಗಳು ಇರಬೇಕಾಯಿತು! ತನಗೆ ಬಿಡುಗಡೆ ಆಗುತ್ತಾ ಇಲ್ವಾ ಅನ್ನೋದು ಸಹ ಅವ್ನಿಗೆ ಗೊತ್ತಿರಲಿಲ್ಲ. ಹೀಗೆ ದಿನಗಳು, ದಿನಗಳು ಕಳೆದು ವಾರಗಳು, ವಾರಗಳು ಕಳೆದು ತಿಂಗಳುಗಳಾದವು. ಇಷ್ಟರ ಮಧ್ಯದಲ್ಲೂ ಯೋಸೇಫ ನಿರೀಕ್ಷೆ ಕಳಕೊಳ್ಳದಿರೋಕೆ, ನಿರಾಶನಾಗದಿರೋಕೆ ಯಾವುದು ಸಹಾಯ ಮಾಡ್ತು?
ಬೈಬಲ್ ಅದಕ್ಕೆ ಈ ಸಾಂತ್ವನಕರ ಉತ್ತರ ಕೊಡುತ್ತೆ: ‘ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕೃಪೆಯನ್ನಿಟ್ಟನು’ ಅಥವಾ ಅವನಿಗೆ “ನಿಷ್ಠಾವಂತ ಪ್ರೀತಿ” [NW] ತೋರಿಸಿದನು. (ಆದಿಕಾಂಡ 39:21) ಯೆಹೋವನು ತನ್ನ ನಿಷ್ಠಾವಂತ ಸೇವಕರಿಗೆ ಪ್ರೀತಿ ತೋರಿಸೋದನ್ನು ತಡೆಯೋಕೆ ಯಾವ ಜೈಲು ಗೋಡೆಗಳಿಗಾಗಲಿ, ಕೋಳಗಳಿಗಾಗಲಿ, ಕತ್ತಲು ತುಂಬಿದ ನೆಲಮಾಳಿಗೆಗಳಿಗಾಗಲಿ ಆಗಲ್ಲ. (ರೋಮನ್ನರಿಗೆ 8:38, 39) ಯೋಸೇಫನು ತನ್ನ ಪ್ರೀತಿಯ ಸ್ವರ್ಗೀಯ ತಂದೆಗೆ ತನ್ನ ನೋವು, ಚಿಂತೆಯನ್ನೆಲ್ಲಾ ಹೇಳಿಕೊಳ್ಳುತ್ತಿರೋದನ್ನು ಮತ್ತು ‘ಸಕಲ ಸಾಂತ್ವನದ ದೇವರಿಂದ’ ಮಾತ್ರ ಸಿಗುವ ಶಾಂತಿ, ನೆಮ್ಮದಿಯನ್ನು ಪಡಕೊಳ್ಳುತ್ತಿರೋದನ್ನು ನಾವು ಊಹಿಸಬಹದು. (2 ಕೊರಿಂಥ 1:3, 4; ಫಿಲಿಪ್ಪಿ 4:6, 7) ಯೆಹೋವನು ಯೋಸೇಫನಿಗೆ ಇನ್ನೂ ಯಾವ ಸಹಾಯ ಮಾಡಿದ್ನು? ಯೋಸೇಫನಿಗೆ “ಸೆರೆ ಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು.”
ಕಾವಲಿನಬುರುಜು14-E 11/1 ಪುಟ 15 ಪ್ಯಾರ 2
‘ಇಂಥ ಮಹಾ ದುಷ್ಕೃತ್ಯವನ್ನು ನಾನು ಹೇಗೆ ಮಾಡಲಿ?’
ಬೈಬಲ್ ಅದಕ್ಕೆ ಈ ಸಾಂತ್ವನಕರ ಉತ್ತರ ಕೊಡುತ್ತೆ: ‘ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕೃಪೆಯನ್ನಿಟ್ಟನು’ ಅಥವಾ ಅವನಿಗೆ “ನಿಷ್ಠಾವಂತ ಪ್ರೀತಿ” [NW] ತೋರಿಸಿದನು. (ಆದಿಕಾಂಡ 39:21) ಯೆಹೋವನು ತನ್ನ ನಿಷ್ಠಾವಂತ ಸೇವಕರಿಗೆ ಪ್ರೀತಿ ತೋರಿಸೋದನ್ನು ತಡೆಯೋಕೆ ಯಾವ ಜೈಲು ಗೋಡೆಗಳಿಗಾಗಲಿ, ಕೋಳಗಳಿಗಾಗಲಿ, ಕತ್ತಲು ತುಂಬಿದ ನೆಲಮಾಳಿಗೆಗಳಿಗಾಗಲಿ ಆಗಲ್ಲ. (ರೋಮನ್ನರಿಗೆ 8:38, 39) ಯೋಸೇಫನು ತನ್ನ ಪ್ರೀತಿಯ ಸ್ವರ್ಗೀಯ ತಂದೆಗೆ ತನ್ನ ನೋವು, ಚಿಂತೆಯನ್ನೆಲ್ಲಾ ಹೇಳಿಕೊಳ್ಳುತ್ತಿರೋದನ್ನು ಮತ್ತು ‘ಸಕಲ ಸಾಂತ್ವನದ ದೇವರಿಂದ’ ಮಾತ್ರ ಸಿಗುವ ಶಾಂತಿ, ನೆಮ್ಮದಿಯನ್ನು ಪಡಕೊಳ್ಳುತ್ತಿರೋದನ್ನು ನಾವು ಊಹಿಸಬಹದು. (2 ಕೊರಿಂಥ 1:3, 4; ಫಿಲಿಪ್ಪಿ 4:6, 7) ಯೆಹೋವನು ಯೋಸೇಫನಿಗೆ ಇನ್ನೂ ಯಾವ ಸಹಾಯ ಮಾಡಿದ್ನು? ಯೋಸೇಫನಿಗೆ “ಸೆರೆ ಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು.”
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2-E ಪುಟ 555
ಓನಾನ
(ಓನಾನ) [ಮೂಲ ಅರ್ಥ “ಸಂತಾನೋತ್ಪತ್ತಿ ಸಾಮರ್ಥ್ಯ; ಬಲಾಢ್ಯ ಶಕ್ತಿ”].
ಇವನು ಯೆಹೂದ ಮತ್ತು ಶೂಗನೆಂಬ ಹೆಸರಿನ ಕಾನಾನ್ಯನ ಮಗಳಿಗೆ ಹುಟ್ಟಿದ ಎರಡನೇ ಮಗ. (ಆದಿ 38:2-4; 1ಪೂರ್ವ 2:3) ಓನಾನನ ಅಣ್ಣನಾದ ಏರನು ತಪ್ಪು ಮಾಡಿದ್ದರಿಂದ ಯೆಹೋವನು ಅವನನ್ನು ಸಾಯಿಸಿದನು. ಅವನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಓನಾನನು ಅಣ್ಣನ ಹೆಂಡತಿಯಾದ ತಾಮಾರಳನ್ನು ಮದುವೆ ಮಾಡ್ಕೊಂಡು ಮೈದುನಧರ್ಮವನ್ನು ನಡೆಸಬೇಕೆಂದು ಯೆಹೂದನು ಹೇಳಿದನು. ಮೈದುನಧರ್ಮದ ಮೂಲಕ ಒಂದು ಗಂಡು ಮಗು ಹುಟ್ಟಿದಿದ್ರೆ ಅದು ಓನಾನನ ಸಂತಾನವಾಗುತ್ತಿರಲಿಲ್ಲ, ಬದಲಿಗೆ ಏರನ ಸಂತಾನವಾಗುತ್ತಿತ್ತು ಮತ್ತು ಆ ಮಗುವಿಗೆ ಚೊಚ್ಚಲುತನದ ಬಾಧ್ಯತೆ ಸಿಗುತ್ತಿತ್ತು. ಒಂದು ವೇಳೆ ಮಗು ಹುಟ್ಟದಿದ್ರೆ ಓನಾನನಿಗೆ ಬಾಧ್ಯತೆ ಸಿಗ್ತಿತ್ತು. ಹಾಗಾಗಿ ಓನಾನನು ತಾಮಾರಳ ಜೊತೆ ಸಂಭೋಗ ಮಾಡುವಾಗೆಲ್ಲ “ತನ್ನ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು.” ಇದು ಹಸ್ತಮೈಥುನ ಆಗಿರಲಿಲ್ಲ. ಯಾಕಂದ್ರೆ ಓನಾನನು “ತನ್ನ ಅತ್ತಿಗೆಯಲ್ಲಿ ಸಂಗಮಮಾಡುವಾಗೆಲ್ಲ” ತನ್ನ ವೀರ್ಯವನ್ನು ನೆಲಕ್ಕೆ ಚೆಲ್ಲುತ್ತಿದ್ದನು ಅಂತ ವೃತ್ತಾಂತ ಹೇಳುತ್ತೆ. ಅದರರ್ಥ ಓನಾನನು ಉದ್ದೇಶಪೂರ್ವಕವಾಗಿಯೇ ತನ್ನ ವೀರ್ಯ ತಾಮಾರಳ ಜನನಾಂಗದೊಳಕ್ಕೆ ಹೋಗದಂತೆ ತಡೆದನು. ಈ ಕಾರಣದಿಂದ ತಾಮಾರಳು ಗರ್ಭಿಣಿಯಾಗಲಿಲ್ಲ. ಓನಾನನು ಹಸ್ತಮೈಥುನ ಮಾಡಿದ್ನು ಅಂತ ನೆನಸಿ ಯೆಹೋವನು ಅವನನ್ನು ಸಾಯಿಸಲಿಲ್ಲ. ಬದಲಿಗೆ ಅವ್ನು ತನ್ನ ತಂದೆಗೆ ಅವಿಧೇಯನಾಗಿದ್ದಕ್ಕೆ, ಅತಿಯಾಸೆ ಪಟ್ಟಿದ್ದಕ್ಕೆ, ಮೈದುನಧರ್ಮದ ಏರ್ಪಾಡಿನ ವಿರುದ್ಧ ಪಾಪ ಮಾಡಿದ್ದಕ್ಕೆ ಯೆಹೋವನು ಅವನನ್ನು ಸಾಯಿಸಿದನು.—ಆದಿ 38:6-10; 46:12; ಅರ 26:19.
ಕಾವಲಿನಬುರುಜು04 1/15 ಪುಟ 30 ಪ್ಯಾರ 4-5
ವಾಚಕರಿಂದ ಪ್ರಶ್ನೆಗಳು
ತಾಮಾರಳನ್ನು ತನ್ನ ಮಗ ಶೇಲಹನಿಗೆ ಒಪ್ಪಿಸದಿರುವ ಮೂಲಕ ಯೆಹೂದನು ತಪ್ಪಾಗಿ ವರ್ತಿಸಿದನು. ಗುಡಿವೇಶ್ಯೆಯೆಂದು ತಾನು ನೆನಸಿದ ಸ್ತ್ರೀಯೊಂದಿಗೆ ಯೆಹೂದನು ಸಂಭೋಗವನ್ನೂ ಮಾಡಿದನು. ವಿವಾಹದ ಏರ್ಪಾಡಿನೊಳಗೆ ಮಾತ್ರ ಮನುಷ್ಯನು ಸಂಭೋಗಿಸಬೇಕೆಂಬ ದೇವರ ಉದ್ದೇಶಕ್ಕೆ ಇದು ವ್ಯತಿರಿಕ್ತವಾಗಿತ್ತು. (ಆದಿಕಾಂಡ 2:24) ಆದರೆ ವಾಸ್ತವದಲ್ಲಿ, ಯೆಹೂದನು ವೇಶ್ಯೆಯೊಂದಿಗೆ ಸಂಭೋಗ ಮಾಡಲಿಲ್ಲ. ಬದಲಿಗೆ, ಅವನು ಅರಿವಿಲ್ಲದೆ ತನ್ನ ಮಗ ಶೇಲಹನ ಸ್ಥಾನವನ್ನು ತೆಗೆದುಕೊಂಡು ಹೀಗೆ ಭಾವಮೈದುನ ವಿವಾಹದಲ್ಲಿ ಒಳಗೊಂಡು ಶಾಸನಬದ್ಧ ಸಂತಾನದ ತಂದೆಯಾದನು.
ತಾಮಾರಳ ವಿಷಯದಲ್ಲಿಯಾದರೊ, ಆಕೆಯ ನಡತೆ ಅನೈತಿಕವಾಗಿರಲಿಲ್ಲ. ಆಕೆಗೆ ಹುಟ್ಟಿದ ಅವಳಿ ಪುತ್ರರು ಹಾದರಕ್ಕೆ ಹುಟ್ಟಿದವರೆಂದು ಎಣಿಸಲ್ಪಡಲಿಲ್ಲ. ಬೆತ್ಲೆಹೇಮಿನ ಬೋವಜನು ಮೋಬಾಬ್ಯಳಾಗಿದ್ದ ರೂತಳನ್ನು ಭಾವಮೈದುನ ವಿವಾಹದಲ್ಲಿ ಹೆಂಡತಿಯಾಗಿ ಸ್ವೀಕರಿಸಿದಾಗ, ಬೆತ್ಲೆಹೇಮಿನ ಹಿರಿಯರು ತಾಮಾರಳ ಪುತ್ರ ಪೆರೆಚನ ಕುರಿತು ಪ್ರಸನ್ನಕರವಾಗಿ ಮಾತನಾಡುತ್ತಾ ಬೋವಜನಿಗೆ ಹೀಗೆ ಹೇಳಿದರು: “ನಿನ್ನ ಮನೆಯು ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆಗೆ ಸಮಾನವಾಗಲಿ.” (ರೂತಳು 4:12) ಪೆರೆಚನನ್ನು ಯೇಸು ಕ್ರಿಸ್ತನ ಪೂರ್ವಜರಲ್ಲಿ ಒಬ್ಬನಾಗಿಯೂ ಹೆಸರಿಸಲಾಗಿದೆ.—ಮತ್ತಾಯ 1:1-3; ಲೂಕ 3:23-33.
ಮೇ 18-24
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 40-41
“ಯೋಸೇಫನ ಕಷ್ಟಗಳಿಗೆ ಯೆಹೋವನ ಸಹಾಯದಿಂದ ಮುಕ್ತಿ”
ಫರೋಹನ ಕನಸುಗಳು
ಎರಡು ವರ್ಷಗಳು ದಾಟುತ್ತವೆ. ಯೋಸೇಫನು ಇನ್ನೂ ಸೆರೆಮನೆಯಲ್ಲಿದ್ದಾನೆ. ಪಾನದಾಯಕನಿಗೆ ಅವನ ನೆನಪೇ ಬರಲಿಲ್ಲ. ಒಂದು ರಾತ್ರಿ ಫರೋಹನಿಗೆ ಎರಡು ವಿಶೇಷ ಕನಸುಗಳು ಬೀಳುತ್ತವೆ. ಅವುಗಳ ಅರ್ಥವೇನೆಂದು ಅವನು ಯೋಚಿಸುತ್ತಾನೆ. ಅವನು ಮಲಗಿರುವುದನ್ನು ನೀವು ಈ ಚಿತ್ರದಲ್ಲಿ ಗಮನಿಸಿದ್ದಿರೋ? ಮರುದಿನ ಬೆಳಗ್ಗೆ ಫರೋಹನು ತನ್ನ ವಿದ್ವಾಂಸರನ್ನು ಕರೆದು ತಾನು ಕಂಡ ಕನಸನ್ನು ತಿಳಿಸುತ್ತಾನೆ. ಆದರೆ ಅವನ ಕನಸುಗಳ ಅರ್ಥವನ್ನು ತಿಳಿಸಲು ಅವರಿಗೆ ಸಾಧ್ಯವಾಗುವುದಿಲ್ಲ.
ಈಗ ಆ ಪಾನದಾಯಕನಿಗೆ ಯೋಸೇಫನ ನೆನಪಾಗುತ್ತದೆ. ಅವನು ಫರೋಹನಿಗೆ ‘ನಾನು ಸೆರೆಮನೆಯಲ್ಲಿದ್ದಾಗ ಕನಸುಗಳ ಅರ್ಥವನ್ನು ವಿವರಿಸುವ ಒಬ್ಬ ಮನುಷ್ಯನು ಅಲ್ಲಿದ್ದನು’ ಎಂದು ಹೇಳುತ್ತಾನೆ. ಫರೋಹನು ಆ ಕೂಡಲೆ ಯೋಸೇಫನನ್ನು ಸೆರೆಮನೆಯಿಂದ ಕರೆಸುತ್ತಾನೆ.
ಫರೋಹನು ಯೋಸೇಫನಿಗೆ ತನ್ನ ಕನಸುಗಳನ್ನು ತಿಳಿಸುತ್ತಾನೆ: ‘ಏಳು ಕೊಬ್ಬಿದ ಸುಂದರವಾದ ಆಕಳುಗಳನ್ನು ನಾನು ಕಂಡೆನು. ಆಮೇಲೆ ಏಳು ಅತಿ ಬಡಕಲು ಆಕಳುಗಳು ನನ್ನ ಕಣ್ಣಿಗೆ ಬಿದ್ದವು. ಆ ಬಡಕಲು ಆಕಳುಗಳು ಕೊಬ್ಬಿದ ಆಕಳುಗಳನ್ನು ತಿಂದುಬಿಟ್ಟವು.’
‘ನನ್ನ ಎರಡನೆಯ ಕನಸಿನಲ್ಲಿ ಏಳು ಪುಷ್ಟವಾದ ಮಾಗಿದ ತೆನೆಗಳು ಒಂದೇ ದಂಟಿನಲ್ಲಿ ಬೆಳೆಯುವುದನ್ನು ನಾನು ಕಂಡೆನು. ಅನಂತರ ಏಳು ಒಣಗಿ ಬತ್ತಿಹೋಗಿದ್ದ ತೆನೆಗಳನ್ನು ಕಂಡೆನು. ಈ ಬತ್ತಿಹೋಗಿದ್ದ ತೆನೆಗಳು ಆ ಏಳು ಒಳ್ಳೇ ತೆನೆಗಳನ್ನು ನುಂಗಿಬಿಡಲಾರಂಭಿಸಿದವು.’
ಆಗ ಯೋಸೇಫನು ಫರೋಹನಿಗೆ ಹೇಳುವುದು: ‘ಎರಡೂ ಕನಸುಗಳ ಅರ್ಥವು ಒಂದೇ ಆಗಿದೆ. ಏಳು ಕೊಬ್ಬಿದ ಆಕಳುಗಳು ಮತ್ತು ಏಳು ಪುಷ್ಟ ತೆನೆಗಳು ಅಂದರೆ ಏಳು ವರ್ಷಗಳು. ಏಳು ಬಡಕಲು ಆಕಳುಗಳು ಮತ್ತು ಏಳು ಬತ್ತಿಹೋದ ತೆನೆಗಳು ಅಂದರೆ ತದನಂತರ ಬರುವ ಏಳು ವರ್ಷಗಳು. ಐಗುಪ್ತದಲ್ಲಿ ಏಳು ವರ್ಷ ಬೆಳೆಯು ಬಹಳ ಸಮೃದ್ಧವಾಗಿ ಬೆಳೆಯುತ್ತದೆ. ಅದರ ನಂತರ ಬರುವ ಏಳು ವರ್ಷಗಳಲ್ಲಿ ಬರಗಾಲ ಇರುವುದು.’
ಆದುದರಿಂದ ಯೋಸೇಫನು ಫರೋಹನಿಗೆ ಹೇಳುವುದು: ‘ಒಬ್ಬ ಬುದ್ಧಿಶಾಲಿ ಪುರುಷನನ್ನು ಆರಿಸಿಕೋ. ಏಳು ಒಳ್ಳೇ ವರ್ಷಗಳಲ್ಲಿ ಆಹಾರವನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ಅವನಿಗೆ ವಹಿಸಿಕೊಡು. ಹೀಗೆ ಮಾಡಿದರೆ, ಮುಂದೆ ಬರುವ ಬರಗಾಲದ ಏಳು ಕೆಟ್ಟ ವರ್ಷಗಳಲ್ಲಿ ಜನರು ಹೊಟ್ಟೆಗಿಲ್ಲದೆ ಸಾಯುವುದಿಲ್ಲ.’
ಯೋಸೇಫನ ಈ ಸಲಹೆಯು ಫರೋಹನಿಗೆ ಇಷ್ಟವಾಗುತ್ತದೆ. ಮತ್ತು ಆಹಾರವನ್ನು ಒಟ್ಟುಗೂಡಿಸಿ ಶೇಖರಿಸಿ ಇಡಲು ಅವನು ಯೋಸೇಫನನ್ನು ಆರಿಸಿಕೊಳ್ಳುತ್ತಾನೆ. ಈಗ ಫರೋಹನ ನಂತರದ ಮುಖ್ಯಸ್ಥಾನ ಯೋಸೇಫನಿಗೆ ಸಿಗುತ್ತದೆ.
ಇದಾಗಿ ಎಂಟು ವರ್ಷ ಕಳೆಯುತ್ತವೆ. ಇದು ಬರಗಾಲದ ಸಮಯ. ಕೆಲವು ಮನುಷ್ಯರು ಬರುತ್ತಿರುವುದನ್ನು ಯೋಸೇಫನು ಕಾಣುತ್ತಾನೆ. ಅವರು ಯಾರೆಂದು ನಿಮಗೆ ಗೊತ್ತೋ? ಅವರು ಬೇರೆ ಯಾರು ಅಲ್ಲ. ಅವನ ಹತ್ತು ಮಂದಿ ಅಣ್ಣಂದಿರೇ! ಅವರ ತಂದೆಯಾದ ಯಾಕೋಬನು ಅವರನ್ನು ಐಗುಪ್ತಕ್ಕೆ ಕಳುಹಿಸಿದ್ದಾನೆ. ಏಕೆಂದರೆ, ತಮ್ಮ ಊರಾದ ಕಾನಾನಿನಲ್ಲಿ ದವಸಧಾನ್ಯ ಖಾಲಿಯಾಗುತ್ತಿತ್ತು. ಯೋಸೇಫನಿಗೆ ತನ್ನ ಅಣ್ಣಂದಿರ ಗುರುತು ಸಿಗುತ್ತದೆ. ಆದರೆ ಅವರಿಗೆ ಅವನ ಗುರುತು ಸಿಗುವುದಿಲ್ಲ. ಯಾಕೆಂದು ನಿಮಗೆ ಗೊತ್ತೋ? ಯಾಕೆಂದರೆ ಯೋಸೇಫನು ಈಗ ದೊಡ್ಡವನಾಗಿ ಬೆಳೆದಿದ್ದಾನೆ. ಅಷ್ಟೇ ಅಲ್ಲ, ಅವನು ಹಾಕಿಕೊಂಡಿದ್ದ ಬಟ್ಟೆ ಸಹ ಭಿನ್ನವಾಗಿತ್ತು.
ಈಗ ಯೋಸೇಫನಿಗೆ ತಾನು ಸಣ್ಣ ಹುಡುಗನಾಗಿದ್ದಾಗ ಕಂಡ ಕನಸು ನೆನಪಾಗುತ್ತದೆ. ಆ ಕನಸಿನಲ್ಲಿ ಅವನ ಅಣ್ಣಂದಿರು ತನಗೆ ಬಗ್ಗಿ ನಮಸ್ಕಾರ ಮಾಡಿದ್ದು ನೆನಪಿಗೆ ಬರುತ್ತದೆ. ಅದರ ಕುರಿತು ಓದಿದ್ದು ನಿಮಗೆ ನೆನಪಿದೆಯೇ? ತನ್ನನ್ನು ಐಗುಪ್ತಕ್ಕೆ ಕಳುಹಿಸಿದಾತನು ದೇವರೇ ಎಂದು ಯೋಸೇಫನಿಗೆ ತಿಳಿದುಬರುತ್ತದೆ. ಮತ್ತು ಅದು ಒಂದು ಒಳ್ಳೆಯ ಉದ್ದೇಶಕ್ಕಾಗಿಯೇ ಆಗಿತ್ತು. ಯೋಸೇಫನು ಈಗ ಏನು ಮಾಡುತ್ತಾನೆಂದು ನೀವೆಣಿಸುತ್ತೀರಿ? ಅದನ್ನು ನಾವು ನೋಡೋಣ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು15-E 11/1 ಪುಟ 9 ಪ್ಯಾರ 1-3
ನಿಮಗೆ ಗೊತ್ತಿತ್ತಾ?
ಫರೋಹನ ಮುಂದೆ ಹೋಗೋ ಮುಂಚೆ ಯೋಸೇಫ ಯಾಕೆ ಕ್ಷೌರ ಮಾಡಿಸಿದನು?
ಆದಿಕಾಂಡ ವೃತ್ತಾಂತ ತಿಳಿಸುವಂತೆ ಫರೋಹನು ತನ್ನನ್ನು ತಬ್ಬಿಬ್ಬುಗೊಳಿಸಿದ ಕನಸುಗಳ ಅರ್ಥವನ್ನು ತಿಳುಕೊಳ್ಳೋಕೆ ಜೈಲಿನಲ್ಲಿದ್ದ ಯೋಸೇಫನನ್ನು ಬೇಗನೇ ಬಿಡಿಸಿ ತನ್ನ ಮುಂದೆ ಕರೆತರುವಂತೆ ಆಜ್ಞಾಪಿಸಿದನು. ಈ ಸಮಯದಷ್ಟಕ್ಕೆ, ಯೋಸೇಫನು ಜೈಲಿಗೆ ಹೋಗಿ ತುಂಬ ವರ್ಷಗಳಾಗಿದ್ದವು. ಬೇಗನೇ ಬರಬೇಕೆಂದು ಫರೋಹನು ಹೇಳಿದ್ರೂ ಯೋಸೇಫನು ಕ್ಷೌರ ಮಾಡಿದ ನಂತರವೇ ಹೋದ್ನು. (ಆದಿಕಾಂಡ 39:20-23; 41:1, 14) ಯೋಸೇಫನಿಗೆ ಈಜಿಪ್ಟಿನ ಸಂಪ್ರದಾಯಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು ಅಂತ ಈ ಚಿಕ್ಕ ವಿವರಣೆಯ ಮೂಲಕ ಬರಹಗಾರ ತಿಳಿಸ್ತಿದ್ದಾನೆ.
ಹಿಂದಿನ ಕಾಲದಲ್ಲಿ ಇಬ್ರಿಯರಂತೆ ಬೇರೆ ದೇಶಗಳ ಜನ್ರು ಗಡ್ಡ ಬಿಡೋದು ಸಾಮಾನ್ಯವಾಗಿತ್ತು. ಆದ್ರೆ “ಪೂರ್ವ ದೇಶಗಳವರಲ್ಲಿ ಈಜಿಪ್ಟಿನವ್ರು ಮಾತ್ರ ಗಡ್ಡ ಬಿಡೋಕೆ ಇಷ್ಟಪಡ್ತಿರಲಿಲ್ಲ” ಅಂತ ಮ್ಯಾಕ್ ಕ್ಲಿಂಟಕ್ ಮತ್ತು ಸ್ಟ್ರಾಂಗ್ರವರ ಸೈಕ್ಲೋಪಿಡಿಯ ಆಫ್ ಬಿಬ್ಲಿಕಲ್, ಥಿಯೋಲಾಜಿಕಲ್ ಆ್ಯಂಡ್ ಎಕ್ಲಿಸಿಯಾಸ್ಟಿಕಲ್ ಲಿಟರೇಚರ್ ತಿಳಿಸುತ್ತೆ.
ಹಾಗಾದ್ರೆ ಕ್ಷೌರ ಮಾಡಿಸಿಕೊಳ್ಳೋದು ಗಡ್ಡ ತೆಗೆಸೋದಷ್ಟಕ್ಕೇ ಸೀಮಿತವಾಗಿತ್ತಾ? ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂ ಪತ್ರಿಕೆ ಹೇಳೋ ಪ್ರಕಾರ, ಒಬ್ಬನು ದೇವಾಲಯಕ್ಕೆ ಹೋಗೋ ಮುಂಚೆ ತಯಾರಾಗೋ ತರಾನೇ ಫರೋಹನ ಮುಂದೆ ಹೋಗುವಾಗಲೂ ತಯಾರಾಗಬೇಕಿತ್ತು ಅಂತ ಈಜಿಪ್ಟಿನ ಸಂಪ್ರದಾಯದಲ್ಲಿತ್ತು. ಒಂದುವೇಳೆ ಅದು ನಿಜ ಆಗಿದ್ರೆ, ಯೋಸೇಫ ಬರೀ ಗಡ್ಡವನ್ನಲ್ಲ ತಲೆ ಕೂದಲು ಮತ್ತು ಮೈ ಮೇಲಿದ್ದ ಕೂದಲನ್ನೂ ತೆಗೆಸಿರುತ್ತಾನೆ.
ಕಾವಲಿನಬುರುಜು09 11/15 ಪುಟ 28 ಪ್ಯಾರ 14
ದೇವರ ಶುಶ್ರೂಷಕರಾಗಿ ಸಭ್ಯವರ್ತನೆ ತೋರಿಸುವುದು
14 ಮನೆಯಲ್ಲಿ ತಮ್ಮ ಮಕ್ಕಳು ಸಭ್ಯತೆಯ ಮೂಲತತ್ತ್ವಗಳನ್ನು ಕಲಿತುಕೊಳ್ಳುವಂತೆ ಬೈಬಲ್ ಕಾಲದ ದೇವಭಕ್ತ ಹೆತ್ತವರು ಖಚಿತಮಾಡಿಕೊಂಡಿದ್ದರು. ಆದಿಕಾಂಡ 22:7 ರಲ್ಲಿ ಅಬ್ರಹಾಮ ಮತ್ತು ಅವನ ಪುತ್ರ ಇಸಾಕ ಪರಸ್ಪರ ಹೇಗೆ ಸಭ್ಯತೆಯಿಂದ ಮಾತಾಡಿಕೊಂಡರು ಎಂಬುದನ್ನು ಗಮನಿಸಿ. ಯೋಸೇಫನಿಗೆ ಸಹ ಅವನ ಹೆತ್ತವರಿಂದ ಉತ್ತಮ ತರಬೇತಿ ದೊರೆತಿತ್ತೆಂಬುದು ವ್ಯಕ್ತ. ಸೆರೆಮನೆಯಲ್ಲಿದ್ದಾಗ ಅವನು ತನ್ನ ಜೊತೆ ಸೆರೆವಾಸಿಗಳೊಂದಿಗೆ ಸಹ ಸಭ್ಯತೆಯಿಂದ ನಡೆದುಕೊಂಡನು. (ಆದಿ. 40:8) ಫರೋಹನಿಗೆ ಅವನು ನುಡಿದ ಮಾತುಗಳು ಉನ್ನತ ಅಧಿಕಾರಿಯೊಂದಿಗೆ ಮಾತನಾಡುವ ಯೋಗ್ಯ ವಿಧಾನವನ್ನು ಅವನು ಕಲಿತಿದ್ದನೆಂದು ತೋರಿಸುತ್ತವೆ.—ಆದಿ. 41:16, 33, 34.
ಮೇ 25-31
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 42-43
“ಯೋಸೇಫ ತೋರಿಸಿದ ಸ್ವನಿಯಂತ್ರಣ”
ಕಾವಲಿನಬುರುಜು15 7/1 ಪುಟ 13 ಪ್ಯಾರ 5-6
‘ನಾನು ದೇವರಿಗೆ ಸಮಾನನೋ?’
ಯೋಸೇಫ ಅವರನ್ನು ಗುರುತಿಸಿದನಾ? ಹೌದು, ನೋಡಿದ ತಕ್ಷಣ ಗುರುತಿಸಿಬಿಟ್ಟ! ಅವರು ತನಗೆ ಅಡ್ಡಬಿದ್ದದ್ದನ್ನು ನೋಡಿ, ಬಾಲ್ಯದಲ್ಲಿ ತನಗೆ ಬಿದ್ದ ‘ಕನಸನ್ನು ನೆನಪಿಸಿಕೊಂಡ.’ ಆ ಕನಸಿನ ಮೂಲಕ ಅವನ ಅಣ್ಣಂದಿರು ಅವನಿಗೆ ಅಡ್ಡ ಬೀಳುವರು ಎಂದು ಯೆಹೋವನು ತಿಳಿಸಿದ್ದನು. (ಆದಿಕಾಂಡ 37:2, 5-9; 42:7, 9) ನಿಮಗೇನು ಅನಿಸುತ್ತೆ, ಯೋಸೇಫ ಈಗ ಏನು ಮಾಡಿರಬಹುದು? ಅವರನ್ನು ಅಪ್ಪಿಕೊಂಡು, ‘ನಾನೇ ನಿಮ್ಮ ತಮ್ಮ’ ಅಂತ ಹೇಳಿರಬಹುದಾ? ಅಥವಾ ಮುಯ್ಯಿಗೆ ಮುಯ್ಯಿ ತೀರಿಸಿರಬಹುದಾ?
ಯೆಹೋವ ದೇವರ ಉದ್ದೇಶದಂತೆ ಎಲ್ಲ ಘಟನೆಗಳು ನಡೆಯುತ್ತಿದ್ದದರಿಂದ ಆ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಯೋಸೇಫ ತಿಳಿದುಕೊಳ್ಳಬೇಕಿತ್ತು. ಕಾರಣ, “ನಿನ್ನಿಂದ ಒಂದು ದೊಡ್ಡ ಜನಾಂಗವಾಗುತ್ತದೆ” ಎಂದು ದೇವರು ಯಾಕೋಬನಿಗೆ ಹೇಳಿದ್ದನು. (ಆದಿಕಾಂಡ 35:11, 12) ಒಂದುವೇಳೆ, ಆ ಅಣ್ಣಂದಿರು ಈಗಲೂ ಕೋಪಿಷ್ಠರು, ನಿರ್ದಯಿಗಳು, ಸ್ವಾರ್ಥಿಗಳು ಆಗಿದ್ದರೆ ಮುಂದೆ ತಮ್ಮ ಜನಾಂಗದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇತ್ತು. ಯೋಸೇಫ ತನ್ನ ದ್ವೇಷ ತೀರಿಸಿಕೊಂಡಿದ್ದರೆ ತನ್ನ ಊರಲ್ಲಿದ್ದ ಅಪ್ಪ ಮತ್ತು ತಮ್ಮ ಬೆನ್ಯಾಮೀನನಿಗೆ ತೊಂದರೆ ಆಗುವ ಸಾಧ್ಯತೆ ಇತ್ತು. ಆದ್ದರಿಂದ ಯೋಸೇಫ ತಾನು ಯಾರು ಎಂದು ಅವರಿಗೆ ತಿಳಿಸದೆ, ಅವರು ಬದಲಾಗಿದ್ದಾರಾ ಇಲ್ಲವಾ ಎಂದು ಪರೀಕ್ಷಿಸಿದ. ಅವನು ಏನೇ ನಿರ್ಧಾರ ಮಾಡುವುದಕ್ಕೂ ಮುಂಚೆ ತನ್ನ ಅಣ್ಣಂದಿರು ಈಗ ಎಂಥವರಾಗಿದ್ದಾರೆ ಎಂದು ತಿಳಿದುಕೊಳ್ಳುವುದು ಪ್ರಾಮುಖ್ಯವಾಗಿತ್ತು.
ಕಾವಲಿನಬುರುಜು15 7/1 ಪುಟ 14 ಪ್ಯಾರ 1
‘ನಾನು ದೇವರಿಗೆ ಸಮಾನನೋ?’
ಯೋಸೇಫನಂಥ ಪರಿಸ್ಥಿತಿ ನಿಮಗೆ ಬರದೇ ಇರಬಹುದು. ಆದರೆ ಎಲ್ಲ ಕುಟುಂಬಗಳಲ್ಲೂ ಮನಸ್ತಾಪ ಮತ್ತು ಬಿರುಕುಗಳು ಬಂದೇ ಬರುತ್ತವೆ. ಅಂಥ ಸಂದರ್ಭಗಳಲ್ಲಿ ನಾವು ಯೋಸೇಫನನ್ನು ಅನುಕರಿಸಬೇಕು. ಅದರರ್ಥ, ನಾವು ನಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುವ ಬದಲಿಗೆ ಯೆಹೋವ ದೇವರು ಬಯಸುವಂತೆ ನಡೆದುಕೊಳ್ಳಲು ಪ್ರಯತ್ನಿಸಬೇಕು. (ಜ್ಞಾನೋಕ್ತಿ 14:12) ನಿಮ್ಮ ಕುಟುಂಬದವರೊಂದಿಗೆ ಸಮಾಧಾನದಿಂದ ನಡೆದುಕೊಳ್ಳುವುದು ಪ್ರಾಮುಖ್ಯ. ಆದರೆ ನೆನಪಿಡಿ, ಯೆಹೋವ ಮತ್ತು ಯೇಸುವಿನೊಂದಿಗಿನ ಸಂಬಂಧ ಅದಕ್ಕಿಂತ ಪ್ರಾಮುಖ್ಯ.—ಮತ್ತಾಯ 10:37.
ಕಾವಲಿನಬುರುಜು15 7/1 ಪುಟ 14 ಪ್ಯಾರ 2
‘ನಾನು ದೇವರಿಗೆ ಸಮಾನನೋ?’
ತನ್ನ ಅಣ್ಣಂದಿರು ಬದಲಾಗಿದ್ದಾರಾ ಇಲ್ಲವಾ ಎಂದು ತಿಳಿದುಕೊಳ್ಳಲು ಯೋಸೇಫನು ಅನೇಕ ಪರೀಕ್ಷೆಗಳನ್ನು ಮಾಡುತ್ತಾನೆ. ಮೊದಲಿಗೆ ಅವರ ಬಳಿ ತುಂಬ ಕಟುವಾಗಿ ಮಾತಾಡುತ್ತಾ ‘ನೀವು ಗೂಢಾಚಾರರು’ ಎಂದು ಆರೋಪಿಸುತ್ತಾನೆ. ‘ಇಲ್ಲ, ನಾವು ಗೂಢಾಚಾರರಲ್ಲ’ ಎಂದು ತಮ್ಮನ್ನು ಸಮರ್ಥಿಸಿಕೊಳ್ಳಲು ತಮ್ಮ ಕುಟುಂಬದ ಮಾಹಿತಿಯನ್ನೆಲ್ಲಾ ಅವರು ಹೇಳುತ್ತಾರೆ. ಆ ಮಾಹಿತಿಯಲ್ಲಿ ಅವರ ಚಿಕ್ಕ ತಮ್ಮ ಬೆನ್ಯಾಮೀನನು ಮನೆಯಲ್ಲಿರುವುದರ ಬಗ್ಗೆಯೂ ಹೇಳುತ್ತಾರೆ. ತನ್ನ ತಮ್ಮನ ಬಗ್ಗೆ ಕೇಳಿ ಯೋಸೇಫನಿಗೆ ತುಂಬ ಸಂತೋಷವಾಗುತ್ತದಾದರೂ ಅದನ್ನು ಹೊರಗೆ ತೋರಿಸಿಕೊಡುವುದಿಲ್ಲ. ಆದರೆ ನಿಜವಾಗಲೂ ಬೆನ್ಯಾಮೀನನು ಬದುಕಿದ್ದಾನಾ? ಅದನ್ನು ತಿಳಿದುಕೊಳ್ಳಲು ಯೋಸೇಫ ಈಗ ಇನ್ನೊಂದು ಉಪಾಯ ಮಾಡುತ್ತಾನೆ. ಅವರಿಗೆ, ‘ನಿಮ್ಮ ಮಾತುಗಳನ್ನು ಪರೀಕ್ಷಿಸುತ್ತೇನೆ. ಅದಕ್ಕಾಗಿ ನೀವು ನಿಮ್ಮ ಚಿಕ್ಕ ತಮ್ಮನಾದ ಬೆನ್ಯಾಮೀನನನ್ನು ಕರೆತರಬೇಕು, ಆಗ ನೀವು ಗೂಢಾಚಾರರಲ್ಲ ಎಂದು ನಂಬುವೆನು. ಅವನನ್ನು ಕರೆತರುವವರೆಗೆ ನಿಮ್ಮಲ್ಲಿ ಒಬ್ಬನನ್ನು ಒತ್ತೆ ಆಳಾಗಿ ಇಟ್ಟುಕೊಳ್ಳುತ್ತೇನೆ’ ಎಂಬ ಷರತ್ತಿಟ್ಟು ಅವರು ಮನೆಗೆ ಹೋಗಲು ಅನುಮತಿಕೊಟ್ಟನು.—ಆದಿಕಾಂಡ 42:9-20.
ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ
ಯೋಸೇಫನು ತನ್ನ ಅಣ್ಣಂದಿರು ಇನ್ನೂ ನಿರ್ದಯಿಗಳಾಗಿ ಇದ್ದಾರೋ ಎಂದು ತಿಳಿಯಲು ಬಯಸುತ್ತಾನೆ. ಆದುದರಿಂದ ಅವರಿಗೆ ‘ನೀವು ಗೂಢಚಾರರು. ನಮ್ಮ ದೇಶದ ದುರ್ಬಲ ಸ್ಥಳಗಳನ್ನು ಪತ್ತೆಹಚ್ಚಲು ಬಂದವರು’ ಎಂದು ಹೇಳುತ್ತಾನೆ.
ಆದರೆ ಅವರು ‘ಅಲ್ಲ, ನಾವು ಗೂಢಚಾರರಲ್ಲ, ಒಳ್ಳೆಯ ಮನುಷ್ಯರು. ನಾವೆಲ್ಲರೂ ಅಣ್ಣತಮ್ಮಂದಿರು. ನಾವು ಹನ್ನೆರಡು ಮಂದಿ ಇದ್ದೆವು. ಆದರೆ ಒಬ್ಬನು ಇಲ್ಲ, ಚಿಕ್ಕವನು ತಂದೆಯ ಬಳಿಯಲ್ಲಿ ಮನೆಯಲ್ಲಿದ್ದಾನೆ’ ಎಂದು ಹೇಳುತ್ತಾರೆ.
ಯೋಸೇಫನು ಅವರ ಮಾತನ್ನು ನಂಬದವನಂತೆ ನಟಿಸುತ್ತಾನೆ. ಅವರಲ್ಲಿ ಒಬ್ಬನಾದ ಸಿಮೆಯೋನನನ್ನು ಸೆರೆಮನೆಯಲ್ಲಿಟ್ಟು ಉಳಿದವರು ಆಹಾರ ತೆಗೆದುಕೊಂಡು ಮನೆಗೆ ಹೋಗುವಂತೆ ಹೇಳುತ್ತಾನೆ. ಆದರೆ ಅವರಿಗೆ, ‘ನೀವು ಹಿಂದೆ ಬರುವಾಗ ನಿಮ್ಮ ಚಿಕ್ಕ ತಮ್ಮನನ್ನು ಕರೆದುಕೊಂಡು ಬರಬೇಕು’ ಎಂದು ಅವನು ಹೇಳುತ್ತಾನೆ.
ಅವರು ಕಾನಾನ್ ದೇಶದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದಾಗ ನಡೆದದ್ದೆಲ್ಲವನ್ನು ತಮ್ಮ ತಂದೆಯಾದ ಯಾಕೋಬನಿಗೆ ತಿಳಿಸುತ್ತಾರೆ. ಯಾಕೋಬನು ಅದನ್ನು ಕೇಳಿ ತುಂಬ ದುಃಖಪಡುತ್ತಾನೆ. ‘ಯೋಸೇಫನೂ ಇಲ್ಲ, ಈಗ ಸಿಮೆಯೋನನೂ ಇಲ್ಲ. ನನ್ನ ಕೊನೆಯ ಮಗನಾದ ಬೆನ್ಯಾಮೀನನನ್ನು ಕರೆದುಕೊಂಡು ಹೋಗಲು ನಾನಂತೂ ಬಿಡುವುದೇ ಇಲ್ಲ’ ಎಂದು ಅವನು ಅಳುತ್ತಾನೆ. ಆದರೆ ಸಮಯ ಕಳೆದಂತೆ ಅವರಲ್ಲಿದ್ದ ಆಹಾರವು ಮುಗಿಯುತ್ತಾ ಬರುತ್ತದೆ. ಅವರು ಆಹಾರವನ್ನು ತರಬೇಕಾದರೆ ಬೆನ್ಯಾಮೀನನನ್ನು ಐಗುಪ್ತಕ್ಕೆ ಕರಕೊಂಡು ಹೋಗಲೇಬೇಕು. ಇದಕ್ಕೆ ಯಾಕೋಬನು ಈಗ ಒಪ್ಪಲೇಬೇಕಾಗುತ್ತದೆ.
ತನ್ನ ಸಹೋದರರು ಬರುತ್ತಿರುವುದನ್ನು ಯೋಸೇಫನು ನೋಡುತ್ತಾನೆ. ತನ್ನ ತಮ್ಮನಾದ ಬೆನ್ಯಾಮೀನನನ್ನು ನೋಡಿ ಅವನಿಗೆ ಬಹಳ ಸಂತೋಷವಾಗುತ್ತದೆ. ಯೋಸೇಫನೇ ಐಗುಪ್ತದ ಈ ಅಧಿಕಾರಿಯೆಂದು ಅವರಲ್ಲಿ ಯಾರಿಗೂ ತಿಳಿದಿಲ್ಲ. ತನ್ನ 10 ಮಂದಿ ಅಣ್ಣಂದಿರನ್ನು ಪರೀಕ್ಷಿಸಲು ಯೋಸೇಫನು ಈಗ ಏನನ್ನೋ ಮಾಡುತ್ತಾನೆ.
ಅವರ ಚೀಲಗಳಲ್ಲಿ ದವಸಧಾನ್ಯವನ್ನು ತುಂಬಿಸುವಂತೆ ಯೋಸೇಫನು ತನ್ನ ಸೇವಕರಿಗೆ ಅಪ್ಪಣೆಕೊಡುತ್ತಾನೆ. ಆದರೆ ಅವರಿಗೆ ತಿಳಿಯದಂತೆ ಬೆನ್ಯಾಮೀನನ ಚೀಲದೊಳಗೆ ದವಸಧಾನ್ಯದೊಂದಿಗೆ ತನ್ನ ವಿಶೇಷವಾದ ಬೆಳ್ಳಿಯ ಪಾನಪಾತ್ರೆಯನ್ನೂ ಇರಿಸುತ್ತಾನೆ. ಅವರೆಲ್ಲರೂ ಹೊರಟು ಸ್ವಲ್ಪ ದೂರ ಹೋದ ನಂತರ ಯೋಸೇಫನು ತನ್ನ ಸೇವಕರನ್ನು ಅವರ ಹಿಂದೆ ಕಳುಹಿಸುತ್ತಾನೆ. ಸೇವಕರು ಅವರನ್ನು ಹಿಂದಟ್ಟಿ ‘ನಮ್ಮ ಧನಿಯ ಬೆಳ್ಳಿಯ ಪಾತ್ರೆಯನ್ನು ನೀವು ಕದ್ದದ್ದೇಕೆ?’ ಎಂದು ಅವರನ್ನು ಕೇಳುತ್ತಾರೆ.
‘ನಾವು ಆತನ ಪಾತ್ರೆಯನ್ನು ಕದಿಯಲಿಲ್ಲ. ನೀವು ನಮ್ಮ ಚೀಲದಲ್ಲಿ ಹುಡುಕಿ. ನಮ್ಮಲ್ಲಿ ಯಾರ ಚೀಲದಲ್ಲಾದರೂ ಆ ಪಾತ್ರೆಯು ಸಿಕ್ಕಿದರೆ ಅವನಿಗೆ ಮರಣ ದಂಡನೆ ಆಗಲಿ’ ಎನ್ನುತ್ತಾರೆ ಸೋದರರೆಲ್ಲರೂ.
ಆದುದರಿಂದ ಸೇವಕರು ಎಲ್ಲಾ ಚೀಲಗಳನ್ನು ಪರೀಕ್ಷಿಸಿ ನೋಡುತ್ತಾರೆ. ನೀವು ಚಿತ್ರದಲ್ಲಿ ನೋಡುವಂತೆ, ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಗುತ್ತದೆ. ಸೇವಕರು ಅನ್ನುವುದು: ‘ನೀವೆಲ್ಲರೂ ಹೋಗಬಹುದು, ಆದರೆ ಬೆನ್ಯಾಮೀನನು ನಮ್ಮೊಂದಿಗೆ ಬರಬೇಕು.’ ಈಗ ಆ 10 ಮಂದಿ ಅಣ್ಣಂದಿರು ಏನು ಮಾಡುವರು?
ಬೆನ್ಯಾಮೀನನೊಂದಿಗೆ ಅವರೆಲ್ಲರೂ ಯೋಸೇಫನ ಮನೆಗೆ ಹಿಂದಿರುಗುತ್ತಾರೆ. ಯೋಸೇಫನು ತನ್ನ ಅಣ್ಣಂದಿರಿಗೆ ಹೇಳುವುದು: ‘ನೀವೆಲ್ಲರೂ ಮನೆಗೆ ಹೋಗಬಹುದು. ಆದರೆ ಬೆನ್ಯಾಮೀನನು ನನ್ನ ದಾಸನಾಗಿ ಇಲ್ಲೇ ಇರಬೇಕು.’
ಈಗ ಯೆಹೂದನು ಮುಂದೆ ಬಂದು ಹೇಳುವುದು: ‘ನಾನು ಈ ಹುಡುಗನನ್ನು ಇಲ್ಲಿ ಬಿಟ್ಟು ಮನೆಗೆ ಹೋದರೆ ನನ್ನ ತಂದೆಯು ಸಾಯುವನು. ಯಾಕೆಂದರೆ ಇವನನ್ನು ನಮ್ಮ ತಂದೆ ಬಹಳ ಪ್ರೀತಿಸುತ್ತಾನೆ. ಆದುದರಿಂದ ದಯವಿಟ್ಟು ನನ್ನನ್ನು ನಿನ್ನ ದಾಸನಾಗಿ ಮಾಡಿಕೋ. ಆದರೆ ಈ ಹುಡುಗನನ್ನು ಮನೆಗೆ ಹೋಗುವಂತೆ ಬಿಡು.’
ತನ್ನ ಅಣ್ಣಂದಿರು ಬದಲಾಗಿದ್ದಾರೆಂದು ಯೋಸೇಫನಿಗೆ ಈಗ ತಿಳಿಯುತ್ತದೆ. ಅವರು ಈಗ ದಯಾಪರರಾದ ಒಳ್ಳೆಯ ಜನರಾಗಿದ್ದಾರೆ. ಈಗ ಯೋಸೇಫನು ಏನು ಮಾಡುತ್ತಾನೆಂದು ನಾವು ನೋಡೋಣ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2-E ಪುಟ 795
ರೂಬೇನ
ರೂಬೇನನಲ್ಲಿ ಕೆಲವು ಒಳ್ಳೇ ಗುಣಗಳಿದ್ದವು. ಅವನ ಒಂಬತ್ತು ತಮ್ಮಂದಿರು ಯೋಸೇಫನನ್ನು ಕೊಲ್ಲಬೇಕು ಅಂತ ಅಂದುಕೊಂಡಾಗ, ಅವನನ್ನು ನೀರಿಲ್ಲದ ಗುಂಡಿಯೊಳಗೆ ತಳ್ಳಲು ಹೇಳಿದ್ದು ರೂಬೇನನೇ. ನಂತರ ಯಾರಿಗೂ ಗೊತ್ತಾಗದಂತೆ ಯೋಸೇಫನನ್ನು ಆ ಗುಂಡಿಯೊಳಗಿಂದ ಹೊರಗೆ ತರಬಹುದೆಂದು ಯೋಚಿಸಿ ಹೀಗೆ ರೂಬೇನನು ಹೇಳಿದ್ದಿರಬಹುದು. (ಆದಿ 37:18-30) 20 ವರ್ಷಗಳ ನಂತರ, ಇದೇ ಸಹೋದರರು ತಾವು ಹಿಂದೆ ಯೋಸೇಫನ ಜೊತೆ ಕೆಟ್ಟದಾಗಿ ನಡಕೊಂಡ ಕಾರಣದಿಂದ್ಲೇ ತಮ್ಮನ್ನು ಗೂಢಚಾರರು ಎಂದು ಆರೋಪ ಹೊರಿಸಲಾಗಿದೆ ಅಂತ ಮಾತಾಡಿಕೊಂಡ್ರು. ಆಗಲೂ ರೂಬೇನನು, ‘ಆ ಹುಡುಗನಿಗೆ ಏನೂ ಕೇಡು ಮಾಡಬೇಡಿರಿ ಅಂತ ನಾನು ಅವತ್ತೇ ಹೇಳಿದ್ದೆ’ ಅಂತ ಅವ್ರಿಗೆ ನೆನಪಿಸಿದನು. (ಆದಿ 42:9-14, 21, 22) ಅವ್ರು ಎರಡನೇ ಬಾರಿ ಈಜಿಪ್ಟಿಗೆ ಹೋಗ್ವಾಗ ಬೆನ್ಯಾಮೀನನನ್ನು ಕಳುಹಿಸಿಕೊಂಡುವಂತೆ ಯಾಕೋಬನಿಗೆ ಕೇಳಿಕೊಂಡ್ರು. ಅದಕ್ಕೆ ಯಾಕೋಬನು ಒಪ್ಪಲಿಲ್ಲ. ಆಗಲೂ ರೂಬೇನನೇ ಮುಂದೆ ಬಂದು ತನ್ನಿಬ್ಬರು ಗಂಡು ಮಕ್ಕಳನ್ನು ಒತ್ತೆ ಇಟ್ಟು ಹೀಗೆ ಹೇಳಿದ್ನು: “ನಾನು ಈ ಹುಡುಗನನ್ನು [ಬೆನ್ಯಾಮೀನನನ್ನು] ತಿರಿಗಿ ತಂದು ಒಪ್ಪಿಸದೆ ಹೋದರೆ ನನ್ನಿಬ್ಬರು ಗಂಡುಮಕ್ಕಳನ್ನು ಕೊಂದು ಹಾಕಬಹುದು.”—ಆದಿ 42:37.
ಕಾವಲಿನಬುರುಜು04 1/15 ಪುಟ 29 ಪ್ಯಾರ 1
ಆದಿಕಾಂಡ ಪುಸ್ತಕದ ಮುಖ್ಯಾಂಶಗಳು—II
43:32—ಇಬ್ರಿಯರೊಂದಿಗೆ ಮಾಡುವ ಊಟ ಐಗುಪ್ತ್ಯರಿಗೆ ಏಕೆ ಅಸಹ್ಯವಾಗಿತ್ತು? ಇದು ಬಹುಮಟ್ಟಿಗೆ ಧಾರ್ಮಿಕ ಪೂರ್ವಾಗ್ರಹ ಅಥವಾ ಕುಲಾಭಿಮಾನದ ಕಾರಣದಿಂದಿರಬಹುದು. ಐಗುಪ್ತರು ಕುರುಬರನ್ನು ಸಹ ಅಸಹ್ಯರೆಂದೆಣಿಸುತ್ತಿದ್ದರು. (ಆದಿಕಾಂಡ 46:34) ಏಕೆ? ಕುರುಬರು ಐಗುಪ್ತ ಜಾತಿಪದ್ಧತಿಯಲ್ಲಿ ಕೆಳಮಟ್ಟದವರಾಗಿದ್ದಿರಬಹುದು. ಇಲ್ಲವೆ, ಕೃಷಿ ಪ್ರದೇಶವು ಸಾಕಷ್ಟು ಇಲ್ಲದಿದ್ದುದರಿಂದ ಐಗುಪ್ತ್ಯರು ಹುಲ್ಲುಗಾವಲನ್ನು ಹುಡುಕಿಕೊಂಡು ಬರುತ್ತಿದ್ದವರನ್ನು ಹೇಯವಾಗಿ ಕಂಡಿರಬಹುದು.
[ಪಾದಟಿಪ್ಪಣಿ]
a ಇಲ್ಲಿ ತಿಳ್ಸಿರೋ ಪ್ರತಿಯೊಂದು ವಸ್ತುಗಳು ನಿಮಗೆ ಅಗತ್ಯ ಇಲ್ಲದಿರಬಹುದು. ಅಥವಾ ಇಲ್ಲಿರೋ ವಸ್ತುಗಳ ಜೊತೆಗೆ ಇನ್ನೂ ಕೆಲವು ವಸ್ತುಗಳು ನಿಮಗೆ ಬೇಕಾಗಬಹುದು.