ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು
ಜೂನ್ 1-7
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 44-45
“ಅಣ್ಣಂದಿರನ್ನು ಕ್ಷಮಿಸಿದ ಯೋಸೇಫ”
‘ನಾನು ದೇವರಿಗೆ ಸಮಾನನೋ?’
ಅವರು ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ ಯೋಸೇಫನು ತನ್ನ ಸೇವಕರನ್ನು ಕಳುಹಿಸಿ ‘ಬೆಳ್ಳಿಯ ಪಾತ್ರೆಯನ್ನು ನೀವು ಕದ್ದಿದ್ದೀರಿ’ ಎಂದು ಆರೋಪಿಸುತ್ತಾನೆ. ಅವರು ಬೆನ್ಯಾಮೀನನ ಚೀಲದಲ್ಲಿ ಆ ಪಾತ್ರೆಯನ್ನು ಕಂಡಾಗ ಅವರನ್ನು ಮತ್ತೆ ಯೋಸೇಫನ ಬಳಿಗೆ ಕರೆದುಕೊಂಡು ಬರುತ್ತಾರೆ. ಈಗ ಅಣ್ಣಂದಿರು ಬದಲಾಗಿದ್ದಾರಾ ಇಲ್ಲವಾ ಎಂದು ತಿಳಿದುಕೊಳ್ಳುವ ಅವಕಾಶ ಯೋಸೇಫನಿಗೆ ಸಿಗುತ್ತದೆ. ಯೆಹೂದನು ಬೆನ್ಯಾಮೀನನನ್ನು ಕರುಣಿಸಿ ಕ್ಷಮಿಸುವಂತೆ ಮತ್ತು ಬೇಕಾದರೆ ನಾವು 11 ಮಂದಿಯೂ ಇಲ್ಲೇ ಐಗುಪ್ತದಲ್ಲಿ ದಾಸರಾಗಿರುತ್ತೇವೆ ಎಂದು ಅಂಗಲಾಚುತ್ತಾನೆ. ಆದರೆ ಯೋಸೇಫನು ಬೆನ್ಯಾಮೀನನನ್ನು ಬಿಟ್ಟು ಉಳಿದವರೆಲ್ಲ ಹೋಗಬಹುದೆಂದು ಹೇಳುತ್ತಾನೆ.—ಆದಿಕಾಂಡ 44:2-17.
ಆದರೆ ಯೆಹೂದನು ಭಾವುಕನಾಗಿ, ‘ಅವನ ತಾಯಿಯ ಮಕ್ಕಳಲ್ಲಿ ಅವನೊಬ್ಬನೇ ಉಳಿದಿರುವುದು, ನನ್ನ ತಂದೆ ಅವನನ್ನು ತುಂಬ ಪ್ರೀತಿಸುತ್ತಾನೆ’ ಎಂದು ಹೇಳುತ್ತಾನೆ. ಆ ಮಾತುಗಳು ಯೋಸೇಫನ ಹೃದಯವನ್ನು ಮುಟ್ಟಿರಬಹುದು. ಯಾಕೆಂದರೆ, ಯಾಕೋಬ ಮತ್ತು ರಾಹೇಲಳ ಮೊದಲ ಮಗ ಯೋಸೇಫ. ರಾಹೇಲಳು ಬೆನ್ಯಾಮೀನನಿಗೆ ಜನ್ಮ ಕೊಟ್ಟಾಗ ತೀರಿಕೊಂಡಿದ್ದಳು. ಯೋಸೇಫನಿಗೆ ಅವನ ತಂದೆ ಯಾಕೋಬನೆಂದರೆ ಪಂಚಪ್ರಾಣ. ಅವನೂ ತನ್ನ ತಾಯಿಯ ನೆನಪುಗಳನ್ನು ಆಗಾಗ ಮೆಲುಕು ಹಾಕುತ್ತಿದ್ದನು. ಈ ಎಲ್ಲ ವಿಷಯಗಳು ಬೆನ್ಯಾಮೀನನನ್ನು ಯೋಸೇಫನಿಗೆ ಇನ್ನೂ ಆಪ್ತನನ್ನಾಗಿಸಿರಬೇಕು.—ಆದಿಕಾಂಡ 35:18-20; 44:20.
ಬೆನ್ಯಾಮೀನನನ್ನು ಒತ್ತೆಯಾಳಾಗಿಸಬಾರದೆಂದು ಯೆಹೂದ ಬೇಡಿಕೊಳ್ಳುತ್ತಾನೆ. ಬೆನ್ಯಾಮೀನನ ಬದಲಿಗೆ ತಾನೇ ಆಳಾಗಿರುತ್ತೇನೆ ಎಂದು ಹೇಳುತ್ತಾನೆ. “ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗುವದಕ್ಕಾದೀತು? ತಂದೆಗೆ ಮಹಾ ಶೋಕವುಂಟಾಗುವದನ್ನು ನಾನು ನೋಡಕೂಡದು” ಎಂದು ತನ್ನ ಮಾತುಗಳನ್ನು ಮುಗಿಸುತ್ತಾನೆ. (ಆದಿಕಾಂಡ 44:18-34) ಯೆಹೂದನು ಬದಲಾಗಿದ್ದಾನೆ ಎಂದು ಯೋಸೇಫನಿಗೆ ಆಗ ಸ್ಪಷ್ಟವಾಯಿತು. ಅವನು ಪಶ್ಚಾತಾಪಪಟ್ಟಿದ್ದಷ್ಟೇ ಅಲ್ಲ, ಈಗ ನಿಸ್ವಾರ್ಥಿಯಾಗಿದ್ದ ಜೊತೆಗೆ ದಯೆ ಮತ್ತು ಕರುಣೆ ತೋರಿಸಿದ್ದ.
ಈ ಮಾತುಗಳನ್ನೆಲ್ಲಾ ಕೇಳಿದ ಯೋಸೇಫನಿಗೆ ಇನ್ನು ತನ್ನ ಭಾವನೆಗಳನ್ನು ಅಡಗಿಸಿಕೊಳ್ಳಲು ಆಗಲಿಲ್ಲ. ತನ್ನ ಸೇವಕರನ್ನೆಲ್ಲಾ ಹೊರಗೆ ಕಳುಹಿಸಿ ಅವನು ತುಂಬ ಗಟ್ಟಿಯಾಗಿ ಅಳುತ್ತಾನೆ. ಅವನ ಅಳು ಫರೋಹನ ಅರಮನೆಯವರೆಗೂ ಕೇಳಿಸುತ್ತದೆ. ನಂತರ ಅವನ ಅಣ್ಣಂದಿರಿಗೆ, ‘ನಾನು ನಿಮ್ಮ ತಮ್ಮನಾದ ಯೋಸೇಫನು’ ಎಂದು ಹೇಳುತ್ತಾನೆ. ಅವರೆಲ್ಲರನ್ನು ಅಪ್ಪಿಕೊಂಡು, ಹಿಂದೆ ಅವರು ಮಾಡಿದ ತಪ್ಪುಗಳನ್ನೆಲ್ಲಾ ಕ್ಷಮಿಸುತ್ತಾನೆ. (ಆದಿಕಾಂಡ 45:1-15) ಹೀಗೆ ಕ್ಷಮಿಸುವುದರ ಮೂಲಕ ಯೋಸೇಫ ಯೆಹೋವ ದೇವರನ್ನು ಅನುಕರಿಸಿದ. (ಕೀರ್ತನೆ 86:5) ನಾವೂ ಹಾಗೇ ಕ್ಷಮಿಸುತ್ತೇವೋ?
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2-E ಪುಟ 813
ಬಟ್ಟೆ ಹರಿದುಕೊಳ್ಳುವುದು
ಏನಾದ್ರೂ ಸಂಭವಿಸಿದಾಗ ಅದ್ರಲ್ಲೂ ಹತ್ತಿರದ ಸಂಬಂಧಿ ಯಾರಾದ್ರೂ ತೀರಿಹೋದಾಗ ದುಃಖ ವ್ಯಕ್ತಪಡಿಸಲು ಬಟ್ಟೆ ಹರಿದುಕೊಳ್ಳುವುದು ಯೆಹೂದಿಗಳ ಮತ್ತು ಪೂರ್ವ ದೇಶಗಳಲ್ಲಿದ್ದ ಜನ್ರ ಸಾಮಾನ್ಯ ರೂಢಿಯಾಗಿತ್ತು. ಅನೇಕ ಸನ್ನಿವೇಶಗಳಲ್ಲಿ ಎದೆಯ ತನಕವಷ್ಟೇ ಬಟ್ಟೆ ಹರಿದುಕೊಳ್ಳುತ್ತಿದ್ದರು, ಪುನಃ ಧರಿಸಿಕೊಳ್ಳಕ್ಕಾಗದ ಹಾಗೆ ಪೂರ್ತಿ ಹರಿದುಕೊಳ್ಳುತ್ತಿರಲಿಲ್ಲ.
ಬಟ್ಟೆ ಹರಿದುಕೊಳ್ಳುವುದರ ಬಗ್ಗೆ ಬೈಬಲಿನಲ್ಲಿರೋ ಮೊದಲ ಉಲ್ಲೇಖ ಯಾಕೋಬನ ಹಿರೀ ಮಗನಾದ ರೂಬೇನನು ತನ್ನ ಬಟ್ಟೆ ಹರಿದುಕೊಂಡ ಸನ್ನಿವೇಶವಾಗಿದೆ. ಯೋಸೇಫ ನೀರಿಲ್ಲದ ಗುಂಡಿಯಲ್ಲಿ ಇಲ್ಲದಿರೋದನ್ನು ನೋಡಿದಾಗ ರೂಬೇನ ಬಟ್ಟೆ ಹರಿದುಕೊಂಡು, “ಆ ಹುಡುಗನು ಇಲ್ಲವಲ್ಲಾ; ಅಯ್ಯೋ ನಾನೆಲ್ಲಿಗೆ ಹೋಗಲಿ ಎಂದು ಗೋಳಾಡಿದನು.” ರೂಬೇನ ಹಿರೀಮಗನಾಗಿದ್ದ ಕಾರಣ ಯೋಸೇಫನ ಜವಾಬ್ದಾರಿ ಅವನದಾಗಿತ್ತು. ಯೋಸೇಫನ ಅಣ್ಣಂದಿರು ಯೋಸೇಫ ಸತ್ತುಹೋದನೆಂದು ತಮ್ಮ ತಂದೆ ಯಾಕೋಬನಿಗೆ ಕಥೆ ಕಟ್ಟಿ ಹೇಳಿದಾಗ ಅವನು ಸಹ ಬಟ್ಟೆ ಹರಿದುಕೊಂಡು, ಗೋಣಿತಟ್ಟು ಸುತ್ತಿಕೊಂಡು ದುಃಖದಲ್ಲಿ ಮುಳುಗಿಹೋದನು. (ಆದಿ 37:29, 30, 34) ಆಮೇಲೆ ಈಜಿಪ್ಟಿನಲ್ಲಿ ಬೆನ್ಯಾಮೀನನನ್ನು ಕಳ್ಳನಂತೆ ಬಿಂಬಿಸಿದಾಗ ಯೋಸೇಫನ ಎಲ್ಲ ಅಣ್ಣಂದಿರು ಬಟ್ಟೆಗಳನ್ನು ಹರಿದುಕೊಂಡು ದುಃಖ ವ್ಯಕ್ತಪಡಿಸಿದ್ರು.—ಆದಿ 44:13
ಕಾವಲಿನಬುರುಜು04 8/15 ಪುಟ 15 ಪ್ಯಾರ 15
ನಿಷ್ಕಾರಣವಾಗಿ ದ್ವೇಷಿಸಲ್ಪಟ್ಟವರು
15 ನಿಷ್ಕಾರಣವಾಗಿ ನಮ್ಮನ್ನು ದ್ವೇಷಿಸುವವರ ಕಡೆಗೆ ಕಹಿಮನೋಭಾವವನ್ನು ತಾಳದಿರಲು ಯಾವುದು ನಮಗೆ ಸಹಾಯಮಾಡಬಲ್ಲದು? ಸೈತಾನನೂ ಅವನ ದೆವ್ವಗಳೂ ನಮ್ಮ ಮುಖ್ಯ ವಿರೋಧಿಗಳಾಗಿದ್ದಾರೆ ಎಂಬುದನ್ನು ಮರೆಯದಿರಿ. (ಎಫೆಸ 6:12) ಕೆಲವರು ನಮ್ಮನ್ನು ಬೇಕುಬೇಕೆಂದು ಮತ್ತು ಉದ್ದೇಶಪೂರ್ವಕವಾಗಿ ಹಿಂಸಿಸುತ್ತಾರಾದರೂ, ದೇವಜನರನ್ನು ವಿರೋಧಿಸುವವರಲ್ಲಿ ಅಧಿಕಾಂಶ ಜನರು ಅಜ್ಞಾನದಿಂದ ಅಥವಾ ಇತರರಿಂದ ಉದ್ರೇಕಿಸಲ್ಪಟ್ಟದ್ದರಿಂದ ಹೀಗೆ ಮಾಡುತ್ತಾರೆ. (ದಾನಿಯೇಲ 6:4-16; 1 ತಿಮೊಥೆಯ 1:12, 13) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ” ಸೇರುವ ಸದವಕಾಶವನ್ನು ಪಡೆಯಬೇಕೆಂಬುದು ಯೆಹೋವನ ಬಯಕೆಯಾಗಿದೆ. (1 ತಿಮೊಥೆಯ 2:4) ವಾಸ್ತವದಲ್ಲಿ, ಈ ಮುಂಚೆ ವಿರೋಧಿಗಳಾಗಿದ್ದವರಲ್ಲಿ ಕೆಲವರು, ನಮ್ಮ ದೋಷರಹಿತ ನಡವಳಿಕೆಯನ್ನು ಗಮನಿಸಿದ ಫಲಿತಾಂಶವಾಗಿ ಈಗ ನಮ್ಮ ಕ್ರೈಸ್ತ ಸಹೋದರರಾಗಿದ್ದಾರೆ. (1 ಪೇತ್ರ 2:12) ಇದಕ್ಕೆ ಕೂಡಿಸಿ, ಯಾಕೋಬನ ಮಗನಾದ ಯೋಸೇಫನ ಉದಾಹರಣೆಯಿಂದ ನಾವು ಒಂದು ಪಾಠವನ್ನು ಕಲಿಯಸಾಧ್ಯವಿದೆ. ಯೋಸೇಫನು ತನ್ನ ಮಲಸಹೋದರರಿಂದಾಗಿ ಅಪಾರ ಕಷ್ಟವನ್ನು ಅನುಭವಿಸಿದನಾದರೂ, ಅವನೆಂದೂ ಅವರ ಬಗ್ಗೆ ಕಡುದ್ವೇಷವನ್ನು ಬೆಳೆಸಿಕೊಳ್ಳಲಿಲ್ಲ. ಏಕೆ? ಏಕೆಂದರೆ, ಯೆಹೋವನು ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಘಟನೆಗಳನ್ನು ನಿರ್ದೇಶಿಸುವ ಮೂಲಕ ಇದರಲ್ಲಿ ಒಳಗೂಡಿದ್ದನು ಎಂಬುದನ್ನು ಅವನು ಅರ್ಥಮಾಡಿಕೊಂಡನು. (ಆದಿಕಾಂಡ 45:4-8) ತದ್ರೀತಿಯಲ್ಲಿ ಯೆಹೋವನು, ನಾವು ಅನುಭವಿಸಬಹುದಾದ ಯಾವುದೇ ಅನುಚಿತ ಕಷ್ಟಾನುಭವವು ತನ್ನ ಹೆಸರಿನ ಮಹಿಮೆಗಾಗಿ ಕಾರ್ಯನಡಿಸುವಂತೆ ಮಾಡಬಲ್ಲನು.—1 ಪೇತ್ರ 4:16.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ವಾಚಕರಿಂದ ಪ್ರಶ್ನೆಗಳು
ಯೆಹೋವನ ಒಬ್ಬ ನಂಬಿಗಸ್ತ ಸೇವಕನಾಗಿದ್ದ ಯೋಸೇಫನು, ಆದಿಕಾಂಡ 44:5 ರಲ್ಲಿ ಸೂಚಿಸಲ್ಪಟ್ಟಿರುವಂತೆ ಶಕುನಹೇಳುವದಕ್ಕಾಗಿ ವಿಶೇಷವಾದ ಒಂದು ಬೆಳ್ಳಿಯ ಪಾನಪಾತ್ರೆಯನ್ನು ಉಪಯೋಗಿಸಿದನೋ?
ಯೋಸೇಫನು ವಾಸ್ತವದಲ್ಲಿ ಯಾವುದೇ ರೀತಿಯ ಕಣಿಹೇಳುವಿಕೆಯನ್ನು ಉಪಯೋಗಿಸಿದನು ಎಂದು ನಂಬಲು ಕಾರಣವಿರುವುದಿಲ್ಲ.
ಭವಿಷ್ಯದ ಕುರಿತು ತಿಳಿಯಲಿಕ್ಕಾಗಿ ಮಾಟಮಂತ್ರಗಳನ್ನು ಉಪಯೋಗಿಸುವುದರ ಬಗ್ಗೆ ಯೋಸೇಫನಿಗಿದ್ದ ನಿಜವಾದ ತಿಳಿವಳಿಕೆಯನ್ನು ಬೈಬಲು ಪ್ರಕಟಪಡಿಸುತ್ತದೆ. ಈ ಮುಂಚೆ ಫರೋಹನ ಕನಸುಗಳ ಅರ್ಥವನ್ನು ವಿವರಿಸುವಂತೆ ಯೋಸೇಫನಿಗೆ ಕೇಳಲ್ಪಟ್ಟಾಗ, ದೇವರು ಮಾತ್ರವೇ ಮುಂಬರುತ್ತಿರುವ ಘಟನೆಗಳನ್ನು “ತಿಳಿಸ”ಬಲ್ಲನು ಎಂದು ಯೋಸೇಫನು ಪುನಃ ಪುನಃ ಒತ್ತಿಹೇಳಿದನು. ಇದರ ಫಲಿತಾಂಶವಾಗಿ, ಯೋಸೇಫನು ಆರಾಧಿಸುತ್ತಿದ್ದ ದೇವರು—ಮಾಂತ್ರಿಕ ಶಕ್ತಿಗಳಲ್ಲ ಬದಲಿಗೆ ಸತ್ಯ ದೇವರು—ಭವಿಷ್ಯದ ಕುರಿತಾದ ವಿವರಗಳನ್ನು ತಿಳಿದುಕೊಳ್ಳುವಂತೆ ಯೋಸೇಫನಿಗೆ ಸಾಧ್ಯಮಾಡುತ್ತಿದ್ದನು ಎಂದು ಸ್ವತಃ ಫರೋಹನೇ ತಿಳಿದುಕೊಂಡನು. (ಆದಿಕಾಂಡ 41:16, 25, 28, 32, 39) ತರುವಾಯ ಮೋಶೆಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಯೆಹೋವನು ಮಾಟಮಂತ್ರವನ್ನು ಅಥವಾ ಕಣಿಹೇಳುವಿಕೆಯನ್ನು ನಿಷೇಧಿಸಿದನು. ಹೀಗೆ ಮಾಡುವ ಮೂಲಕ ತಾನೊಬ್ಬನೇ ಭವಿಷ್ಯವನ್ನು ಮುಂತಿಳಿಸುವವನು ಎಂದು ಆತನು ರುಜುಪಡಿಸಿದನು.—ಧರ್ಮೋಪದೇಶಕಾಂಡ 18:10-12.
ಹಾಗಾದರೆ, ಯೋಸೇಫನು ತಾನು ‘ಶಕುನಹೇಳಲು’ ಬೆಳ್ಳಿಯ ಪಾನಪಾತ್ರೆಯನ್ನು ಉಪಯೋಗಿಸುವುದಾಗಿ ತನ್ನ ಸೇವಕನ ಮೂಲಕ ಹೇಳಿಸಿದ್ದು ಯಾಕೆ? (ಆದಿಕಾಂಡ 44:5) ಯಾವ ಪರಿಸ್ಥಿತಿಗಳ ಕೆಳಗೆ ಈ ಹೇಳಿಕೆಯನ್ನು ಮಾಡಲಾಗಿತ್ತು ಎಂಬುದನ್ನು ನಾವು ಪರಿಗಣಿಸುವ ಅಗತ್ಯವಿದೆ.
ಅತಿ ಘೋರವಾದ ಒಂದು ಕ್ಷಾಮದಿಂದಾಗಿ ಯೋಸೇಫನ ಸಹೋದರರು ದವಸಧಾನ್ಯವನ್ನು ಕೊಂಡುಕೊಳ್ಳಲಿಕ್ಕಾಗಿ ಐಗುಪ್ತಕ್ಕೆ ಪ್ರಯಾಣಿಸಿದ್ದರು. ಸುಮಾರು ವರ್ಷಗಳ ಹಿಂದೆ ಇದೇ ಸಹೋದರರು ಯೋಸೇಫನನ್ನು ಒಬ್ಬ ದಾಸನಾಗುವಂತೆ ಮಾರಿಬಿಟ್ಟಿದ್ದರು. ಈಗ ತಮಗರಿವಿಲ್ಲದೆಯೇ, ಐಗುಪ್ತದ ಆಹಾರ ಮಂತ್ರಿಯಾಗಿದ್ದ ತಮ್ಮ ಸ್ವಂತ ಸಹೋದರನ ಬಳಿ ಅವರು ನೆರವು ನೀಡುವಂತೆ ಬೇಡಿಕೊಂಡರು. ಯೋಸೇಫನು ತನ್ನ ಗುರುತನ್ನು ಬಯಲುಪಡಿಸಲಿಲ್ಲ. ಬದಲಿಗೆ ಅವರನ್ನು ಪರೀಕ್ಷಿಸಲು ತೀರ್ಮಾನಿಸಿದನು. ಸೂಕ್ತವಾಗಿಯೇ, ಯೋಸೇಫನು ಅವರ ಪಶ್ಚಾತ್ತಾಪವು ಯಥಾರ್ಥವಾಗಿದೆಯೋ ಎಂದು ಕಂಡುಹಿಡಿಯಲು ಬಯಸಿದನು. ಮತ್ತು ಅವರಿಗೆ ತಮ್ಮ ತಮ್ಮನಾದ ಬೆನ್ಯಾಮೀನನ ಮೇಲೆ ಹಾಗೂ ಅವನನ್ನು ಅತಿಯಾಗಿ ಪ್ರೀತಿಸುತ್ತಿದ್ದ ತಮ್ಮ ತಂದೆಯಾದ ಯಾಕೋಬನ ಮೇಲೆ ಪ್ರೀತಿಯಿದೆಯೋ—ಮತ್ತು ಎಷ್ಟು ಪ್ರೀತಿಯಿದೆ—ಎಂಬುದನ್ನು ಕಂಡುಕೊಳ್ಳಲು ಅವನು ಬಯಸಿದನು. ಆದುದರಿಂದ ಯೋಸೇಫನು ಒಂದು ಉಪಾಯವನ್ನು ಮಾಡಿದನು.—ಆದಿಕಾಂಡ 41:55–44:3.
ಯೋಸೇಫನು ತನ್ನ ಸೇವಕರಲ್ಲಿ ಒಬ್ಬನಿಗೆ, ತನ್ನ ಸಹೋದರರ ಚೀಲಗಳನ್ನು ಧಾನ್ಯದಿಂದ ತುಂಬಿಸುವಂತೆ ಮತ್ತು ಪ್ರತಿಯೊಬ್ಬನ ಚೀಲದ ಬಾಯಲ್ಲಿ ಅವನವನ ಹಣದ ಗಂಟನ್ನಿಡುವಂತೆ ಹಾಗೂ ಬೆನ್ಯಾಮೀನನ ಚೀಲದ ಬಾಯಲ್ಲಿ ತನ್ನ ಬೆಳ್ಳಿಯ ಪಾನಪಾತ್ರೆಯನ್ನು ಇಡುವಂತೆ ಅಪ್ಪಣೆಕೊಟ್ಟನು. ಈ ಎಲ್ಲ ಪ್ರಸಂಗದಲ್ಲಿ, ಯೋಸೇಫನು ತನ್ನನ್ನು ವಿಧರ್ಮಿ ದೇಶದ ಒಬ್ಬ ಮಂತ್ರಿಯಾಗಿ ಪ್ರತಿನಿಧಿಸುತ್ತಿದ್ದನು. ಅವನು ತನ್ನನ್ನು, ತನ್ನ ಕೃತ್ಯಗಳನ್ನು ಮತ್ತು ತನ್ನ ಭಾಷೆಯನ್ನು ಇಂತಹ ಒಬ್ಬ ಮಂತ್ರಿಯ ಗುಣಲಕ್ಷಣಗಳಿಗೆ ಸರಿಹೋಲುವಂತೆ ಮಾಡಿಕೊಂಡನು. ಅನುಮಾನಪಡದ ಅವನ ಸಹೋದರರ ಕಣ್ಣಿಗೆ ಯೋಸೇಫನು ಐಗುಪ್ತದ ಒಬ್ಬ ಮಂತ್ರಿಯೆಂದೇ ಕಂಡುಬಂದನು.
ಯೋಸೇಫನು ತನ್ನ ಸಹೋದರರನ್ನು ಎದುರುಗೊಂಡಾಗ, ತನ್ನ ಉಪಾಯವನ್ನೇ ಮುಂದುವರಿಸುತ್ತಾ, “ನನ್ನಂಥವನು ಶಕುನ ನೋಡಿ ಗುಟ್ಟನ್ನು ಬಿಚ್ಚುವನೆಂಬದು ನಿಮಗೆ ತಿಳಿಯಲಿಲ್ಲವೋ” ಎಂದು ಕೇಳಿದನು. (ಆದಿಕಾಂಡ 44:15) ಆದುದರಿಂದ ಈ ಪಾನಪಾತ್ರೆಯ ಇಡೀ ಪ್ರಸಂಗವು ಆ ಉಪಾಯದ ಭಾಗವಾಗಿತ್ತು. ಬೆನ್ಯಾಮೀನನು ಆ ಪಾನಪಾತ್ರೆಯನ್ನು ಕದ್ದಿದ್ದಾನೆ ಎಂದು ಹೇಳಿದ್ದು ಹೇಗೆ ಸತ್ಯವಾಗಿರಲಿಲ್ಲವೋ ಹಾಗೆಯೇ ಯೋಸೇಫನು ಆ ಪಾನಪಾತ್ರೆಯನ್ನು ಉಪಯೋಗಿಸುತ್ತಾ ಶಕುನಹೇಳುತ್ತಿದ್ದನು ಎಂಬುದೂ ಸತ್ಯವಾಗಿರಲಿಲ್ಲ.
ಜೂನ್ 8-14
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 46-47
“ಬರಗಾಲದಲ್ಲಿ ಆಹಾರ”
ಕಾವಲಿನಬುರುಜು87-E 5/1 ಪುಟ 15 ಪ್ಯಾರ 2
ಬರಗಾಲದಲ್ಲೂ ಬದುಕಲು ಸಹಾಯ
2 ಯೆಹೋವನು ಹೇಳಿದಂತೆ ಚೆನ್ನಾಗಿ ಬೆಳೆ ಬೆಳೆಯುವ ಕಾಲ ಮುಗಿಯಿತು, ಬರಗಾಲ ಶುರುವಾಯಿತು. ಇದು ಈಜಿಪ್ಟಿನಲ್ಲಿ ಮಾತ್ರವಲ್ಲ ‘ಭೂಲೋಕದಲ್ಲೆಲ್ಲಾ ಹರಡಿತು.’ ಬರದಿಂದ ಬಳಲಿಹೋದ ಈಜಿಪ್ಟಿನ ಜನ ಆಹಾರಕ್ಕಾಗಿ ಫರೋಹನನ್ನು ಅಂಗಲಾಚಿದರು. ಆಗ ಅವನು ಅವರಿಗೆ ‘ನೀವೆಲ್ಲರೂ ಯೋಸೇಫನ ಬಳಿ ಹೋಗಿ. ಅವನು ಹೇಳಿದ ಹಾಗೆ ಮಾಡಿ’ ಎಂದು ಹೇಳಿದನು. ಈಜಿಪ್ಟಿನವರ ಬಳಿ ಹಣ ಖಾಲಿ ಆಗೋವರೆಗೂ ಯೋಸೇಫ ಆಹಾರ ಧಾನ್ಯವನ್ನು ಅವರಿಗೆ ಮಾರಿದನು. ನಂತರ ಅವರ ದನಕರುಗಳನ್ನು ಪಡೆದು ಧಾನ್ಯವನ್ನು ಕೊಟ್ಟನು. ಜನರ ಹತ್ತಿರ ಕೊಡಲು ಇನ್ನೇನೂ ಇಲ್ಲದಿರುವಾಗ ಅವರು ಯೋಸೇಫನ ಬಳಿ ಬಂದು, ‘ಸ್ವಾಮಿ, ನಮ್ಮನ್ನೂ ನಮ್ಮ ಭೂಮಿಯನ್ನು ತೆಗೆದುಕೊಂಡು ಧಾನ್ಯ ಕೊಡು. ನಾವು ನಮ್ಮ ಭೂಮಿಯನ್ನು ಫರೋಹನಿಗೆ ಕೊಟ್ಟು ಅವನಿಗೆ ಗುಲಾಮರಾಗುವೆವು’ ಅಂತ ಹೇಳಿದ್ರು. ಆದ್ದರಿಂದ ಯೋಸೇಫ ಫರೋಹನಿಗಾಗಿ ಅವರೆಲ್ಲರ ಭೂಮಿಯನ್ನು ಕೊಂಡುಕೊಂಡನು.—ಆದಿಕಾಂಡ 41:53-57; 47:13-20.
kr-E ಪುಟ 234-235 ಪ್ಯಾರ 11-12
ಭೂಮಿಯ ಮೇಲೆ ದೇವರ ಇಷ್ಟ ನೆರವೇರಿಸೋ ಸರ್ಕಾರ
11 ಸಮೃದ್ಧಿ. ಆಧ್ಯಾತ್ಮಿಕ ಬರದಿಂದ ಪ್ರಪಂಚ ನರಳುತ್ತಿದೆ. ಯೆಹೋವನು “ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ” ಎಂದು ಎಚ್ಚರಿಸಿದನು. (ಆಮೋ. 8:11) ಹಾಗಾದರೆ, ದೇವರ ರಾಜ್ಯದ ಪ್ರಜೆಗಳೂ ಇದರಿಂದ ನರಳುತ್ತಾರಾ? ತನ್ನ ಜನರಿಗೂ ತನ್ನ ಶತ್ರುಗಳಿಗೂ ಇರುವ ವ್ಯತ್ಯಾಸವನ್ನು ಹೇಳುತ್ತಾ ಯೆಹೋವನು: “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ” ಎಂದು ಹೇಳಿದ್ದಾನೆ. (ಯೆಶಾ. 65:13) ಈ ಮಾತುಗಳು ನಿಮ್ಮ ಕಣ್ಮುಂದೆ ನಡೀತಿರೋದು ನಿಮಗೆ ಕಾಣಿಸುತ್ತಾ?
12 ಲೋಕದ ಜನ ಆಧ್ಯಾತ್ಮಿಕ ಹಸಿವೆಯಿಂದ ನರಳುತ್ತಿದ್ದಾರೆ. ಆದರೆ ನಮ್ಮ ಹತ್ರ ಇವತ್ತು ಆಧ್ಯಾತ್ಮಿಕ ವಿಷಯಗಳು ತುಂಬಿ ತುಳುಕುತ್ತಿವೆ. ನಮ್ಮ ಬೈಬಲ್ ಪ್ರಕಾಶನಗಳು, ಆಡಿಯೋ ವೀಡಿಯೋಗಳು, ಕೂಟಗಳು, ಅಧಿವೇಶನಗಳು ಮತ್ತು ವೆಬ್‌ಸೈಟಿನಲ್ಲಿ ಸಿಗುವ ಮಾಹಿತಿಯೆಲ್ಲಾ ನೋಡಿದರೆ ನಮ್ಮ ಬಳಿ ಆಧ್ಯಾತ್ಮಿಕ ಸಮುದ್ರವೇ ಇದೆ. (ಯೆಹೆ. 47:1-12; ಯೋವೇ. 3:18) ಯೆಹೋವನು ಮಾತುಕೊಟ್ಟಂತೆಯೇ ನಮಗೆ ಸಿಗುತ್ತಿರೋ ಈ ಆಧ್ಯಾತ್ಮಿಕ ಸಮೃದ್ಧಿಯನ್ನ ನೋಡುವಾಗ ಖುಷಿಯಾಗಲ್ವಾ? ಯೆಹೋವನಿಂದ ಬರುವ ಆಧ್ಯಾತ್ಮಿಕ ಆಹಾರವನ್ನು ನೀವು ಪ್ರತಿದಿನ ಸೇವಿಸುತ್ತಿದ್ದೀರಾ?
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1-E ಪುಟ 220 ಪ್ಯಾರ 1
ದೇಹದ ಭಂಗಿ ಮತ್ತು ಕೈಸನ್ನೆ
ಸತ್ತವರ ಕಣ್ಣುಗಳ ಮೇಲೆ ಕೈ ಇಡುವುದು. ಯೆಹೋವನು ಯಾಕೋಬನಿಗೆ “ಯೋಸೇಫನು ನಿನ್ನ ಕಣ್ಣುಗಳ ಮೇಲೆ ಕೈ ಇಡುವನು” ಎಂದು ಹೇಳಿದ್ದನು. (ಆದಿ 46:4) ಇದರ ಅರ್ಥ, ಯಾಕೋಬ ಸತ್ತಾಗ ಯೋಸೇಫ ಅವನ ಕಣ್ಣುಗಳನ್ನು ಮುಚ್ಚುತ್ತಾನೆ ಎಂದಾಗಿತ್ತು. ಇದು ಸಾಮಾನ್ಯವಾಗಿ ಮೊದಲನೇ ಮಗ ಮಾಡುವ ಕರ್ತವ್ಯ. ಮೊದಲ ಮಗನಿಗೆ ಸಿಗೋ ಚೊಚ್ಚಲತನದ ಹಕ್ಕು ಯೋಸೇಫನಿಗೆ ಹೋಗಬೇಕೆಂದು ಯೆಹೋವನು ಸೂಚಿಸಿದನು ಎಂದು ಇದರಿಂದ ಗೊತ್ತಾಗುತ್ತೆ.—1ಪೂರ್ವ 5:2.
ಅಕಾ 7:14 ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಒಟ್ಟು 75 ಮಂದಿ: ಈಜಿಪ್ಟಿಗೆ ಹೋದ ಯಾಕೋಬನ ಕುಟುಂಬದವರ ಸಂಖ್ಯೆ 75 ಎಂದು ಸ್ತೆಫನ ಹೇಳಿದನು. ಆಗ ಅವನು ಹೀಬ್ರು ಶಾಸ್ತ್ರದ ಯಾವುದೇ ನಿರ್ದಿಷ್ಟ ವಚನದಿಂದ ಈ ಸಂಖ್ಯೆಯನ್ನು ಹೇಳುತ್ತಿಲ್ಲ ಅಂತ ಅನಿಸುತ್ತದೆ. ಈ ಸಂಖ್ಯೆ ಮ್ಯಾಸೋರಿಟರು ನಕಲು ಮಾಡಿದ ಹೀಬ್ರು ಶಾಸ್ತ್ರಗ್ರಂಥದಲ್ಲಿ ಕಾಣುವುದಿಲ್ಲ. ಆದಿಕಾಂಡ 46:26 ಹೀಗೆ ಹೇಳುತ್ತದೆ: “ಯಾಕೋಬನ ಸೊಸೆಯರಲ್ಲದೆ ಯಾಕೋಬನಿಂದಲೇ ಹುಟ್ಟಿ ಅವನೊಂದಿಗೆ ಐಗುಪ್ತದೇಶಕ್ಕೆ ಹೋದವರು ಒಟ್ಟು ಅರುವತ್ತಾರು ಮಂದಿ.” ವಚನ 27 ಹೀಗೆ ಹೇಳುತ್ತದೆ: ‘ಐಗುಪ್ತದೇಶಕ್ಕೆ ಹೋದ ಯಾಕೋಬನ ಕುಟುಂಬದವರೆಲ್ಲರು ಒಟ್ಟಾಗಿ 70 ಮಂದಿ.’ ಇಲ್ಲಿ ಜನರನ್ನು ಎರಡು ವಿಧಾನದಲ್ಲಿ ಲೆಕ್ಕಿಸಿರುವುದನ್ನು ನಾವು ನೋಡಬಹುದು. ಮೊದಲ ಸಂಖ್ಯೆಯಲ್ಲಿ ಯಾಕೋಬನ ಸಂತಾನದವರನ್ನು ಮಾತ್ರ ಲೆಕ್ಕಿಸಲಾಗಿದೆ. ಎರಡನೇ ಸಂಖ್ಯೆಯಲ್ಲಿ ಈಜಿಪ್ಟಿಗೆ ಬಂದ ಎಲ್ಲರನ್ನೂ ಸೇರಿಸಲಾಗಿದೆ. ಯಾಕೋಬನ ಸಂತಾನದವರ ಸಂಖ್ಯೆಯನ್ನು ವಿಮೋಚನಕಾಂಡ 1:5 ಮತ್ತು ಧರ್ಮೋಪದೇಶಕಾಂಡ 10:22 ರಲ್ಲೂ 70 ಎಂದು ಕೊಡಲಾಗಿದೆ. ಆದರೆ ಸ್ತೆಫನನು ಇವೆರಡಕ್ಕಿಂತಲೂ ಭಿನ್ನವಾದ ಸಂಖ್ಯೆಯನ್ನು ಹೇಳಿದ್ದಾನೆ. ಬಹುಶಃ ಇದರಲ್ಲಿ ಯಾಕೋಬನ ಇತರ ಕುಟುಂಬ ಸದಸ್ಯರನ್ನು ಸೇರಿಸಲಾಗಿದೆ. ಕೆಲವರು, ಯೋಸೇಫನ ಮಕ್ಕಳಾದ ಮನಸ್ಸೆ ಮತ್ತು ಎಫ್ರಾಯಿಮನ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಆದಿಕಾಂಡ 46:20 ರ ಸೆಪ್ಟ್ಯೂಅಜೆಂಟ್ ಭಾಷಾಂತರದಲ್ಲಿ ನೋಡಬಹುದು. ಇನ್ನು ಕೆಲವರು, ಆದಿಕಾಂಡ 46:26 ರಲ್ಲಿ ಬಿಟ್ಟಿರುವ ಯಾಕೋಬನ ಸೊಸೆಯರನ್ನು ಸೇರಿಸಿ ಒಟ್ಟು ಸಂಖ್ಯೆ 75 ಎಂದು ಹೇಳುತ್ತಾರೆ. ಈ ಸಂಖ್ಯೆಯೇ ಸರಿ ಎನ್ನಲು ಮೊದಲ ಶತಮಾನದಲ್ಲಿದ್ದ ಹೀಬ್ರು ಶಾಸ್ತ್ರಗ್ರಂಥದ ಪ್ರತಿಗಳೇ ಆಧಾರ. ಗ್ರೀಕ್ ಸೆಪ್ಟ್ಯೂಅಜೆಂಟ್ ಭಾಷಾಂತರದಲ್ಲಿ ಆದಿಕಾಂಡ 46:27 ಮತ್ತು ವಿಮೋಚನಕಾಂಡ 1:5 ರಲ್ಲಿ “75” ಅನ್ನೋ ಸಂಖ್ಯೆ ಇದೆ ಎಂದು ಅನೇಕ ವರ್ಷಗಳಿಂದ ಬೈಬಲ್ ವಿದ್ವಾಂಸರು ನೆನಸಿದ್ರು. ಇದರ ಜೊತೆಗೆ, 20 ನೇ ಶತಮಾನದಲ್ಲಿ ಮೃತ ಸಮುದ್ರದ ಬಳಿ ವಿಮೋಚನಕಾಂಡ 1:5 ರ ಹೀಬ್ರು ಭಾಷೆಯ ಕೆಲವು ತುಣುಕುಗಳು ಸಿಕ್ಕಿದವು. ಅದರಲ್ಲೂ ಇದ್ದ ಸಂಖ್ಯೆ 75! ಸ್ತೆಫನನು ಹೇಳಿದ ಸಂಖ್ಯೆಗೆ ಈ ಹಳೆಯ ಪ್ರತಿಗಳೇ ಆಧಾರ ಆಗಿರಬಹುದು. ಇವುಗಳಲ್ಲಿ ಯಾವುದೇ ಸಂಖ್ಯೆ ಸರಿಯಾಗಿದ್ದರೂ ನಮಗೆ ಗೊತ್ತಾಗುವ ವಿಷಯ ಏನೆಂದರೆ, ಸ್ತೆಫನನ ಸಂಖ್ಯೆ ಯಾಕೋಬನ ಸಂತತಿಯನ್ನು ಲೆಕ್ಕಿಸುವ ಇನ್ನೊಂದು ವಿಧಾನವನ್ನು ತಿಳಿಸುತ್ತದೆ ಅಷ್ಟೇ.
ಜೂನ್ 15-21
ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 48-50
“ವೃದ್ಧರ ಜ್ಞಾನ ಭಂಡಾರ ಪ್ರಯೋಜನ ಅಪಾರ”
it-1-E ಪುಟ 1246 ಪ್ಯಾರ 8
ಯಾಕೋಬ
ಯಾಕೋಬ ಸಾಯೋದಕ್ಕಿಂತ ಸ್ವಲ್ಪ ಮುಂಚೆ, ಯೋಸೇಫನ ಮಕ್ಕಳನ್ನು ಆಶೀರ್ವದಿಸಿದನು. ದೇವರ ಮಾರ್ಗದರ್ಶನದಿಂದ, ಚಿಕ್ಕವನಾಗಿದ್ದ ಎಫ್ರಾಯೀಮನನ್ನು ದೊಡ್ಡವನಾಗಿದ್ದ ಮನಸ್ಸೆಗಿಂತ ಹೆಚ್ಚಾಗಿ ಆಶೀರ್ವದಿಸಿದನು. ಆಮೇಲೆ ಚೊಚ್ಚಲ ಮಗನಿಗೆ ಸಿಗುವ ಎರಡು ಪಾಲನ್ನು ಯೋಸೇಫನಿಗೆ ಕೊಟ್ಟು ಹೀಗಂದನು: “ನಾನು ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ನಾನು ಕತ್ತಿಬಿಲ್ಲುಗಳಿಂದ ಅಮೋರಿಯರ ವಶದಿಂದ ತಪ್ಪಿಸಿ ಪಡೆದ ಬೆಟ್ಟದ ತಪ್ಪಲನ್ನು ನಿನಗೆ ಕೊಟ್ಟಿದ್ದೇನೆ.” (ಆದಿ 48:1-22; 1ಪೂರ್ವ 5:1) ಆದರೆ ಶೆಕೆಮಿನ ಬಳಿಯಿರುವ ಈ ಜಾಗವನ್ನು ಯಾಕೋಬ ಹಮೋರನ ಮಕ್ಕಳಿಂದ ಹಣ ಕೊಟ್ಟು ಖರೀದಿಸಿದ್ದಲ್ವಾ? (ಆದಿ 33:19, 20) ಹಾಗಾದರೆ ಯಾಕೋಬ ಆ ಜಾಗವನ್ನು ಕತ್ತಿ ಬಿಲ್ಲುಗಳಿಂದ ಹೋರಾಡಿ ವಶಪಡಿಸಿಕೊಂಡ ಅಂತ ಹೇಗೆ ಹೇಳೋಕೆ ಆಗುತ್ತೆ? ಯಾಕೋಬನಿಗೆ ತನ್ನ ಸಂತತಿಯವರು ಮುಂದೆ ಕಾನಾನ್ಯರೊಂದಿಗೆ ಹೋರಾಡಿ ಆ ಜಾಗವನ್ನು ವಶಪಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇತ್ತು. ಇದು ಅವನಿಗೆ, ತಾನೇ ಹೋರಾಡಿ ಗೆದ್ದಂತೆ ಇತ್ತು. (ಇಂಗ್ಲಿಷ್‌ನಲ್ಲಿ ಅಮೋರಿಯರು ಟಿಪ್ಪಣಿ ನೋಡಿ.) ಹೀಗೆ ಯೋಸೇಫನಿಗೆ ಕೊಡಲಾದ ಎರಡು ಪಾಲಿನ ಭೂಮಿಯನ್ನು ಎಫ್ರಾಯೀಮ್ ಮತ್ತು ಮನಸ್ಸೆಯ ಸಂತತಿಗೆ ನೀಡಲಾಯಿತು.
it-2-E ಪುಟ 206 ಪ್ಯಾರ 1
ಕೊನೇ ದಿನಗಳು
ಸಾಯುವಾಗ ಯಾಕೋಬ ಹೇಳಿದ ಭವಿಷ್ಯ. “ನೀವೆಲ್ಲರೂ ಕೂಡಿ ಬನ್ನಿರಿ; ಮುಂದಿನ ಕಾಲದಲ್ಲಿ (ಕೊನೇ ದಿನಗಳಲ್ಲಿ, NW) ನಿಮಗೆ ಸಂಭವಿಸುವದನ್ನು ತಿಳಿಸುತ್ತೇನೆ” ಎಂದು ಯಾಕೋಬ ತನ್ನ ಮಕ್ಕಳಿಗೆ ಹೇಳಿದನು. (ಆದಿ 49:1) ಈ ಮಾತಿನ ಮೂಲಕ ಅವನು ತನ್ನ ಮಾತು ಭವಿಷ್ಯದಲ್ಲಿ ನೆರವೇರುತ್ತದೆ ಎಂದು ಹೇಳಿದನು. ಇದಕ್ಕಿಂತ ಸುಮಾರು ಇನ್ನೂರು ವರ್ಷಗಳ ಮುಂಚೆಯೇ ಯೆಹೋವನು ಯಾಕೋಬನ ತಾತನಾದ ಅಬ್ರಾಮನಿಗೆ (ಅಬ್ರಹಾಮ) ಅವನ ಸಂತತಿಯವರು 400 ವರ್ಷಗಳವರೆಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ಹೇಳಿದ್ದನು. (ಆದಿ 15:13) ಆದ್ದರಿಂದ ಯಾಕೋಬ ಹೇಳಿದ ‘ಮುಂದಿನ ಕಾಲ ಅಥವಾ ಕೊನೇ ದಿನಗಳು’ ಈ 400 ವರ್ಷಗಳು ಮುಗಿದ ನಂತರವೇ ಆರಂಭವಾಗುತ್ತೆ ಎಂದು ಗೊತ್ತಾಗುತ್ತದೆ. (ಆದಿಕಾಂಡ 49 ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಂಗ್ಲಿಷ್ ಭಾಷೆಯಲ್ಲಿರುವ ಇನ್‌ಸೈಟ್ ಪುಸ್ತಕದಲ್ಲಿ ಯಾಕೋಬನ ಮಕ್ಕಳ ಹೆಸರಿನಲ್ಲಿರುವ ಟಿಪ್ಪಣಿಗಳನ್ನು ನೋಡಿ.) ಇದರ ಇನ್ನೊಂದು ನೆರವೇರಿಕೆಯು ‘ದೇವರ ಆಧ್ಯಾತ್ಮಿಕ ಇಸ್ರಾಯೇಲ್ಯರಿಗೂ’ ಅನ್ವಯಿಸುವ ಸಾಧ್ಯತೆ ಇದೆ.—ಗಲಾ 6:16; ರೋಮ 9:6.
ಕಾವಲಿನಬುರುಜು07 6/1 ಪುಟ 28 ಪ್ಯಾರ 10
ವಯೋವೃದ್ಧರು ಎಳೆಯರಿಗೆ ಆಶೀರ್ವಾದ
10 ವಯಸ್ಸಾದವರು ಜೊತೆವಿಶ್ವಾಸಿಗಳ ಮೇಲೆಯೂ ಉತ್ತಮವಾದ ಪರಿಣಾಮವನ್ನು ಬೀರಬಲ್ಲರು. ಯಾಕೋಬನ ಮಗನಾದ ಯೋಸೇಫನು ತನ್ನ ಮುದಿಪ್ರಾಯದಲ್ಲಿ ನಂಬಿಕೆಯ ಒಂದು ಸರಳ ಕ್ರಿಯೆಯನ್ನು ನಡೆಸಿದನು. ಅದು ಅವನ ಅನಂತರ ಬದುಕಿದ ಲಕ್ಷಾಂತರ ಮಂದಿ ಸತ್ಯಾರಾಧಕರ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ಅವನು 110 ವಯಸ್ಸಿನವನಾಗಿದ್ದಾಗ “ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆ ಕೊಟ್ಟನು.” ಅಂದರೆ, ಇಸ್ರಾಯೇಲ್ಯರು ಕೊನೆಗೆ ಐಗುಪ್ತವನ್ನು ಬಿಟ್ಟು ಹೋಗುವಾಗ ತನ್ನ ಎಲುಬುಗಳನ್ನು ಅವರ ಸಂಗಡ ತೆಗೆದುಕೊಂಡು ಹೋಗಬೇಕೆಂದು ಆಜ್ಞಾಪಿಸಿದನು. (ಇಬ್ರಿಯ 11:22, NIBV; ಆದಿಕಾಂಡ 50:25) ಆ ಅಪ್ಪಣೆಯು ಯೋಸೇಫನ ಮರಣಾನಂತರ ಬಂದ ಅನೇಕ ವರುಷಗಳ ಕಠಿನ ದಾಸ್ಯದ ಸಮಯದಲ್ಲಿ ಇಸ್ರಾಯೇಲ್ಯರಿಗೆ ಆಶಾಕಿರಣವಾಗಿತ್ತು. ತಮ್ಮ ಬಿಡುಗಡೆ ಬರಲಿದೆ ಎಂಬುದಕ್ಕೆ ಅದು ಹೆಚ್ಚಿನ ಆಶ್ವಾಸನೆಯನ್ನು ಕೊಟ್ಟಿತು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು04 6/1 ಪುಟ 15 ಪ್ಯಾರ 4-5
ದೇವರನ್ನು ಘನಪಡಿಸುವವರು ಧನ್ಯರು
4 ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು, ಇಸ್ರಾಯೇಲ್ಯರ ಗಾದ್ ಕುಲದ ಸದಸ್ಯರು ತಮಗೆ ನೆಲೆಸಲು ಯೊರ್ದನಿನ ಪೂರ್ವಭಾಗದಲ್ಲಿರುವ ಹುಲ್ಲುಗಾವಲು ಪ್ರದೇಶ ಬೇಕೆಂದು ಕೇಳಿಕೊಂಡರು. (ಅರಣ್ಯಕಾಂಡ 32:1-5) ಆದರೆ ಅಲ್ಲಿ ಜೀವಿಸಲು ಗಂಭೀರವಾದ ಪಂಥಾಹ್ವಾನಗಳನ್ನು ನಿಭಾಯಿಸಬೇಕಾಗುತ್ತಿತ್ತು. ಯೊರ್ದನಿನ ಪಶ್ಚಿಮ ದಿಕ್ಕಿನಲ್ಲಿದ್ದ ಕುಲಗಳಿಗೆ ಸೈನ್ಯಾಕ್ರಮಣಕ್ಕೆ ನೈಸರ್ಗಿಕ ರೀತಿಯಲ್ಲಿ ತಡೆಯಾಗಿದ್ದ ಯೊರ್ದನ್ ಕಣಿವೆಯ ಸಂರಕ್ಷಣೆಯಿತ್ತು. (ಯೆಹೋಶುವ 3:13-17) ಆದರೆ ಯೊರ್ದನಿನ ಪೂರ್ವದಲ್ಲಿದ್ದ ಪ್ರದೇಶಗಳ ವಿಷಯದಲ್ಲಿ ಜಾರ್ಜ್ ಆ್ಯಡಮ್ ಸ್ಮಿಥ್‌ರವರ ಪರಿಶುದ್ಧ ದೇಶದ ಐತಿಹಾಸಿಕ ಭೂಗೋಳಶಾಸ್ತ್ರ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “[ಅವು] ಹೆಚ್ಚುಕಡಿಮೆ ಯಾವದೇ ತಡೆಯಿಲ್ಲದೆ ಮಹಾ ಅರೇಬಿಯನ್ ಪ್ರಸ್ಥಭೂಮಿಯಲ್ಲಿ ಸಮತಲವಾಗಿ ಹರಡಿಕೊಂಡಿವೆ. ಹೀಗಿರುವುದರಿಂದ ಅವು ಎಲ್ಲ ಯುಗಗಳಲ್ಲಿಯೂ, ಮೇವಿಗಾಗಿ ಹಸಿದಿರುವ, ಪ್ರತಿ ವರ್ಷವೂ ಹುಲ್ಲುಗಾವಲುಗಳನ್ನು ಆಕ್ರಮಿಸುವ ಪಶುಪಾಲ ಕುಲಗಳವರ ಆಕ್ರಮಣಕ್ಕೆ ತುತ್ತಾಗುತ್ತಿದ್ದವು.”
5 ಇಂತಹ ಎಡೆಬಿಡದ ಒತ್ತಡವನ್ನು ಗಾದ್ ಕುಲದವರು ಹೇಗೆ ನಿಭಾಯಿಸಾರು? ಅವರ ಮೂಲಪಿತನಾದ ಯಾಕೋಬನು ತನ್ನ ಮರಣಶಯ್ಯೆಯ ಪ್ರವಾದನೆಯಲ್ಲಿ, “ಗಾದನ ಸಂಗತಿ—ಸುಲಿಗೆಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋಗುವನು” ಎಂದು ಮುಂತಿಳಿಸಿದ್ದನು. (ಆದಿಕಾಂಡ 49:19) ಒಮ್ಮೆ ಕಣ್ಣಾಡಿಸುವಲ್ಲಿ, ಆ ಮಾತುಗಳು ನಿರಾಶಾಜನಕವಾಗಿ ತೋರಬಹುದು. ಆದರೆ ವಾಸ್ತವದಲ್ಲಿ, ಅವು ಗಾದ್ ಕುಲದವರು ಏಟಿಗೆ ಏಟು ಕೊಡುವಂತೆ ನೀಡಲಾದ ಒಂದು ಆಜ್ಞೆಯನ್ನು ಸೂಚಿಸುತ್ತಿದ್ದವು. ಹಾಗೆ ಮಾಡುವಲ್ಲಿ ಆ ಲೂಟಿಗಾರರು ಅವಮಾನಿತರಾಗಿ ಹಿಮ್ಮೆಟ್ಟುವರೆಂದೂ ಗಾದನ ಕುಲದವರು ಅವರ ಹಿಂದಿನಿಂದ ಬೆನ್ನಟ್ಟಿಕೊಂಡುಹೋಗುವರೆಂದೂ ಯಾಕೋಬನು ಆಶ್ವಾಸನೆ ನೀಡಿದನು.
ಅನುಕರಿಸಿ ಪುಟ 164 ರ ಚೌಕ
ಪ್ರವಾದನೆಯ ನೆರವೇರಿಕೆ
ದೇವಜನರ ಪರವಹಿಸಿ ಹೋರಾಡುವ ಮೂಲಕ ಎಸ್ತೇರ್, ಮೊರ್ದೆಕೈ ಬೈಬಲಿನ ಒಂದು ಪ್ರಾಚೀನ ಪ್ರವಾದನೆಯನ್ನು ನೆರವೇರಿಸಿದರು. ಅವರಿಗಿಂತ 1,200 ವರ್ಷಕ್ಕೂ ಹಿಂದೆ ಮೂಲಪಿತೃವಾದ ಯಾಕೋಬನು ತನ್ನ ಪುತ್ರರಲ್ಲೊಬ್ಬನ ಬಗ್ಗೆ ಒಂದು ಪ್ರವಾದನೆ ನುಡಿಯುವಂತೆ ಯೆಹೋವನು ಪ್ರೇರಿಸಿದನು. ಅದೇನೆಂದರೆ, “ಬೆನ್ಯಾಮೀನನು ಕುರಿಗಳನ್ನು ಹಿಡಿದುಕೊಳ್ಳುವ ತೋಳದಂತಿದ್ದಾನೆ. ಹಿಡಿದುಕೊಂಡದ್ದನ್ನು ಬೆಳಿಗ್ಗೆ ಉಣ್ಣುವನು, ಕೊಳ್ಳೆಮಾಡಿದ್ದನ್ನು ಸಂಜೆಯಲ್ಲಿ ಹಂಚಿಕೊಳ್ಳುವನು.” (ಆದಿ. 49:27) “ಬೆಳಿಗ್ಗೆ” ಅಂದರೆ ಇಸ್ರಾಯೇಲಿನಲ್ಲಿ ರಾಜರ ಆಳ್ವಿಕೆ ಆರಂಭವಾದಾಗ ಬೆನ್ಯಾಮೀನನ ವಂಶಸ್ಥರಾದ ರಾಜ ಸೌಲ ಮತ್ತು ಇನ್ನಿತರ ಮಹಾ ಯೋಧರು ಯೆಹೋವನ ಜನರ ಪರವಾಗಿ ಹೋರಾಡಿದರು. “ಸಂಜೆ” ಅಂದರೆ ಇಸ್ರಾಯೇಲಿನ ರಾಜರ ಆಳ್ವಿಕೆ ಕೊನೆಗೊಂಡ ಬಳಿಕ ಬೆನ್ಯಾಮೀನನ ಕುಲದವರೇ ಆಗಿದ್ದ ಎಸ್ತೇರ್ ಹಾಗೂ ಮೊರ್ದೆಕೈ ಯೆಹೋವನ ಶತ್ರುಗಳ ವಿರುದ್ಧ ಹೋರಾಡಿ ಯಶಸ್ವಿಯಾದರು. ಒಂದರ್ಥದಲ್ಲಿ ಅವರು ಕೊಳ್ಳೆಯನ್ನೂ ಹಂಚಿಕೊಂಡರು, ಹೇಗೆಂದರೆ ಹಾಮಾನನ ಅಪಾರ ಆಸ್ತಿಪಾಸ್ತಿ ಅವರಿಗೆ ಸೇರಿತು.
ಜೂನ್ 22-28
ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 1-3
“ನಾನು ಏನಾಗಬೇಕೆಂದು ಅಂದುಕೊಳ್ಳುತ್ತೇನೋ ಅದೇ ಆಗುವೆನು”
ಕಾವಲಿನಬುರುಜು13 3/15 ಪುಟ 25 ಪ್ಯಾರ 4
ಯೆಹೋವನ ಮಹಾನ್ ನಾಮವನ್ನು ಘನಪಡಿಸಿ
4 ವಿಮೋಚನಕಾಂಡ 3:10-15 ಓದಿ. ಮೋಶೆಗಾಗ 80 ವರ್ಷ. ಆಗ ಯೆಹೋವನು ಅವನಿಗೆ ತನ್ನ “ಜನರಾಗಿರುವ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡುವ” ಭಾರೀ ಜವಾಬ್ದಾರಿ ವಹಿಸಿದನು. ಆ ಸಂದರ್ಭದಲ್ಲಿ ಮೋಶೆ ಗೌರವಭರಿತವಾಗಿ ಒಂದು ಅರ್ಥಪೂರ್ಣ ಪ್ರಶ್ನೆಯನ್ನು ದೇವರಿಗೆ ಕೇಳಿದನು. ಅದೇನು ಗೊತ್ತೆ? ‘ನಿನ್ನ ಹೆಸರೇನು?’ ಎಂದು. ದೇವರು ತನ್ನ ಹೆಸರನ್ನು ಎಷ್ಟೋ ವರ್ಷಗಳ ಮುಂಚೆಯೇ ತಿಳಿಸಿದ್ದನಲ್ಲ, ಅಂದಮೇಲೆ ಮೋಶೆ ಹೀಗೇಕೆ ಕೇಳಿದನು ಅಂತೀರಾ? ಮೋಶೆಗೆ ಕೇವಲ ದೇವರ ಹೆಸರು ತಿಳಿಯಬೇಕೆಂದಲ್ಲ, ಆ ಹೆಸರಿನ ಹಿಂದಿರುವ ವ್ಯಕ್ತಿ ಅಥವಾ ವ್ಯಕ್ತಿತ್ವದ ಕುರಿತು ತಿಳಿಯಬೇಕಿತ್ತು. ಹೀಗೆ ಅದು ತಮ್ಮ ಪಿತೃಗಳ ದೇವರು ತಮ್ಮನ್ನು ನಿಜವಾಗಿಯೂ ಬಿಡುಗಡೆ ಮಾಡುತ್ತಾನೆಂಬ ಭರವಸೆಯನ್ನು ಇಸ್ರಾಯೇಲ್ಯರಿಗೆ ಕೊಡುತ್ತದೆ ಎಂದು ಮೋಶೆ ಯೋಚಿಸಿದನು. ಮೋಶೆಯ ಯೋಚನೆ ಸರಿಯೇ ಆಗಿತ್ತು. ಏಕೆಂದರೆ ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಅನೇಕ ವರ್ಷಗಳಿಂದ ದಾಸರಾಗಿ ದುಡಿಯುತ್ತಿದ್ದರು. ಹಾಗಾಗಿ ಇಷ್ಟು ವರ್ಷ ಬಿಡುಗಡೆ ಮಾಡದ ಯೆಹೋವನು ಈಗ ಬಿಡುಗಡೆ ಮಾಡುತ್ತಾನಾ ಎಂಬ ಪ್ರಶ್ನೆ ಅವರಲ್ಲಿ ಬರುವ ಸಾಧ್ಯತೆಯಿತ್ತು. ಅಷ್ಟೆ ಅಲ್ಲದೆ ಕೆಲವು ಇಸ್ರಾಯೇಲ್ಯರು ಈಜಿಪ್ಟಿನ ದೇವರುಗಳನ್ನು ಪೂಜಿಸಲು ಶುರುಮಾಡಿದ್ದರು.—ಯೆಹೆ. 20:7, 8.
ಬೈಬಲಿನ ಅಧ್ಯಯನ ಕೈಪಿಡಿ ಪುಟ 5 ಪ್ಯಾರ 2-3
ಯೆಹೋವ ಎಂಬ ಹೆಸರಿನ ಅರ್ಥವೇನು?
ಹೀಬ್ರು ಭಾಷೆಯಲ್ಲಿ ಯೆಹೋವ ಎಂಬ ಹೆಸರು ಒಂದು ಕ್ರಿಯಾಪದದಿಂದ ಬಂದಿದೆ. ಆ ಕ್ರಿಯಾಪದದ ಅರ್ಥ “ಆಗಲು” ಎಂದಾಗಿದೆ. ಅನೇಕ ವಿದ್ವಾಂಸರ ಅಭಿಪ್ರಾಯಕ್ಕನುಸಾರ ಆ ಕ್ರಿಯಾಪದವು ಯಾರೋ ಒಬ್ಬನು ಆಗುವಂತೆ ಮಾಡುತ್ತಿದ್ದಾನೆ ಎಂದು ಸೂಚಿಸುತ್ತದೆ. ಆತನು ದೇವರು. ಆದುದರಿಂದ ದೇವರ ಹೆಸರಿನ ಅರ್ಥವು “ಆತನು ಆಗುವಂತೆ ಮಾಡುತ್ತಾನೆ” ಎಂದು ನೂತನ ಲೋಕ ಬೈಬಲ್ ಭಾಷಾಂತರ ಕಮಿಟಿಯು ಅರ್ಥಮಾಡಿಕೊಂಡಿದೆ. ವಿದ್ವಾಂಸರಿಗೆ ಈ ಅರ್ಥದ ವಿಷಯದಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಹಾಗಾಗಿ ನಾವು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಆದರೆ ಈ ಅರ್ಥವು ಎಲ್ಲದರ ಸೃಷ್ಟಿಕರ್ತನಾಗಿ ಮತ್ತು ತನ್ನ ಉದ್ದೇಶವನ್ನು ಪೂರೈಸುವಾತನಾಗಿ ಯೆಹೋವನು ವಹಿಸುವ ಪಾತ್ರಕ್ಕೆ ಸರಿಯಾಗಿ ಹೊಂದುತ್ತದೆ. ಅದು ಹೇಗೆ? ವಿಶ್ವವನ್ನು ಹಾಗೂ ಬುದ್ಧಿಶಕ್ತಿಯುಳ್ಳ ಜೀವಿಗಳನ್ನು ಸೃಷ್ಟಿ ಮಾಡಿದ್ದು ಆತನೇ. ಮಾತ್ರವಲ್ಲ ಏನೇ ಆಗಲಿ ತನ್ನ ಚಿತ್ತ ಮತ್ತು ಉದ್ದೇಶವು ಯಾವಾಗಲೂ ನೆರವೇರುವಂತೆ ಆತನು ಮಾಡುತ್ತಾನೆ.
ಆದುದರಿಂದ ಯೆಹೋವ ಎಂಬ ಹೆಸರಿನ ಅರ್ಥವು ವಿಮೋಚನಕಾಂಡ 3:14 ರಲ್ಲಿ ಕೊಟ್ಟಿರುವ (NW) ಕ್ರಿಯಾಪದಕ್ಕೆ ಸೀಮಿತವಾಗಿಲ್ಲ. ಆ ವಚನ ಹೀಗನ್ನುತ್ತದೆ: “ನಾನು ಏನಾಗಲು ಬಯಸುತ್ತೇನೋ ಹಾಗೆಯೇ ಆಗುತ್ತೇನೆ” ಅಥವಾ “ನಾನು ಏನಾಗಿ ಪರಿಣಮಿಸಬೇಕೋ ಅದಾಗಿ ಪರಿಣಮಿಸುತ್ತೇನೆ.” ಈ ಪದಗಳು ದೇವರ ಹೆಸರಿನ ಪೂರ್ಣ ಅರ್ಥವನ್ನು ವಿವರಿಸುವುದಿಲ್ಲ. ಬದಲಿಗೆ ಅವು ದೇವರ ವ್ಯಕ್ತಿತ್ವದ ಒಂದು ಅಂಶವನ್ನಷ್ಟೇ ಪ್ರಕಟಪಡಿಸುತ್ತವೆ. ಅದೇನೆಂದರೆ, ಆತನು ತನ್ನ ಉದ್ದೇಶವನ್ನು ನೆರವೇರಿಸಲು ಪ್ರತಿ ಸನ್ನಿವೇಶದಲ್ಲಿ ತಾನು ಯಾವ ಪಾತ್ರವನ್ನು ವಹಿಸುವ ಅಗತ್ಯವಿದೆಯೋ ಅದನ್ನು ವಹಿಸುತ್ತಾನೆಂದು ತೋರಿಸುತ್ತವೆ. ಈ ಅಂಶವು ಯೆಹೋವನ ಹೆಸರಿನ ಅರ್ಥದಲ್ಲಿ ಒಳಗೂಡಿರುವುದಾದರೂ ಆ ಹೆಸರಿನ ಅರ್ಥ ಇಷ್ಟು ಮಾತ್ರವೇ ಅಲ್ಲ. ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ತಾನು ಏನಾಗಬೇಕೋ ಹಾಗೆ ಆಗುವುದು ಮಾತ್ರವಲ್ಲ ತನ್ನ ಸೃಷ್ಟಿಯನ್ನು ಕೂಡ ತಾನು ಹೇಗೆ ಬಯಸುತ್ತಾನೋ ಹಾಗೆ ಆಗುವಂತೆ ಮಾಡುತ್ತಾನೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಎಚ್ಚರ!04-E 4/8 ಪುಟ 6 ಪ್ಯಾರ 5
ಮೋಶೆ—ನಿಜವಾದ ವ್ಯಕ್ತಿನಾ? ಕಲ್ಪನೇನಾ?
ಈಜಿಪ್ಟಿನ ರಾಜಕುಮಾರಿ ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡಳು ಅನ್ನೋದನ್ನ ನಂಬೋಕೆ ಸಾಧ್ಯ ಇದೆಯಾ? ಖಂಡಿತ ಇದೆ. ಈಜಿಪ್ಟಿನ ಧರ್ಮದ ಪ್ರಕಾರ ಒಬ್ಬ ವ್ಯಕ್ತಿ ಸ್ವರ್ಗಕ್ಕೆ ಹೋಗಬೇಕಾದರೆ ಒಳ್ಳೆಯ ಕೆಲಸಗಳನ್ನು ಮಾಡಬೇಕಿತ್ತು. ಅಷ್ಟೇ ಅಲ್ಲದೇ ದತ್ತು ತೆಗೆದುಕೊಳ್ಳುವುದರ ಬಗ್ಗೆ ಭೂಅಗೆತ ಶಾಸ್ತ್ರಜ್ಞರಾದ ಜಾಯ್ಸ್ ಟಿಲ್ಡೆಸ್ಲೇ ಹೀಗೆ ಹೇಳುತ್ತಾರೆ: “ಈಜಿಪ್ಟಿನ ಸ್ತ್ರೀಯರಿಗೆ ಪುರುಷರಂತೆಯೇ ಸಮಾನ ಸ್ಥಾನಮಾನ ಇತ್ತು. ಕಾನೂನು ಮತ್ತು ವ್ಯಾಪಾರದ ವಿಷಯಗಳಲ್ಲಿ ಇಬ್ಬರಿಗೂ ಸಮಾನ ಹಕ್ಕು ಇದೆ ಎಂಬ ಮಾತಿತ್ತು. ಸ್ತ್ರೀಯರು ದತ್ತು ತೆಗೆದುಕೊಳ್ಳುತ್ತಿದ್ದರು.” ಈಜಿಪ್ಟಿನ ಒಬ್ಬ ಸ್ತ್ರೀ ತನ್ನ ಗುಲಾಮರನ್ನು ದತ್ತು ತೆಗೆದುಕೊಂಡಿದ್ದಳು ಎಂದು ಒಂದು ಹಳೆಯ ಪಪೈರಸ್ ದಾಖಲೆ ತಿಳಿಸುತ್ತದೆ. ಮೋಶೆಯ ತಾಯಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರ ಬಗ್ಗೆ ಆ್ಯಂಕರ್ ಬೈಬಲ್ ಡಿಕ್ಷನೆರಿ ಹೀಗೆ ಹೇಳುತ್ತದೆ: ‘ಮೋಶೆಯನ್ನು ನೋಡಿಕೊಳ್ಳಲು ಅವನ ತಾಯಿಯನ್ನೇ ಕೆಲಸಕ್ಕೆ ಇಟ್ಟುಕೊಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಇಂತಹ ಏರ್ಪಾಡು ಸಾಮಾನ್ಯವಾಗಿತ್ತು ಎಂದು ಮೆಸಪೊಟೇಮಿಯದವರ ದತ್ತು ಪಡೆಯುವುದರ ಒಪ್ಪಂದ ಪತ್ರ ಸಾಬೀತು ಮಾಡುತ್ತದೆ.’
ಕಾವಲಿನಬುರುಜು04 3/15 ಪುಟ 24 ಪ್ಯಾರ 4
ವಿಮೋಚನಕಾಂಡ ಪುಸ್ತಕದ ಮುಖ್ಯಾಂಶಗಳು
3:1—ಇತ್ರೋನ ಯಾವ ರೀತಿಯ ಯಾಜಕನಾಗಿದ್ದನು? ಪೂರ್ವಜರ ಕಾಲದಲ್ಲಿ ಕುಟುಂಬದ ತಲೆಯು ತನ್ನ ಸ್ವಂತ ಕುಟುಂಬದ ಯಾಜಕನಾಗಿ ಕಾರ್ಯನಡಿಸುತ್ತಿದ್ದನು. ಇತ್ರೋನನು ಮಿದ್ಯಾನ್ ಕುಲದ ಮುಖ್ಯಸ್ಥನಾಗಿದ್ದನು ಎಂಬುದು ಸುವ್ಯಕ್ತ. ಮಿದ್ಯಾನ್ಯರು ಅಬ್ರಹಾಮನಿಗೆ ಕೆಟೂರಳ ಮೂಲಕ ಹುಟ್ಟಿದವರಾಗಿದ್ದುದರಿಂದ, ಬಹುಶಃ ಇವರು ಯೆಹೋವನ ಆರಾಧನೆಯ ಕುರಿತು ತಿಳಿದವರಾಗಿದ್ದರು.—ಆದಿಕಾಂಡ 25:1, 2.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಕಾವಲಿನಬುರುಜು02 6/15 ಪುಟ 11 ಪ್ಯಾರ 1-4
ಐಗುಪ್ತದ ಸರ್ವೈಶ್ವರ್ಯಕ್ಕಿಂತಲೂ ಶ್ರೇಷ್ಠವಾದದ್ದು
ಮೋಶೆಯು 40 ವರ್ಷ ಪ್ರಾಯದವನಾದಾಗ, ಅಂದರೆ ಅಷ್ಟರೊಳಗೆ ಅವನು ಪೂರ್ಣ ರೀತಿಯಲ್ಲಿ ಒಬ್ಬ ಐಗುಪ್ತ್ಯನಾಗಿರಸಾಧ್ಯವಿದ್ದಾಗ, ಅವನು ‘ಸ್ವಜನರ ಬಳಿಗೆ ಹೋಗಿ ಅವರ ಬಿಟ್ಟೀಕೆಲಸಗಳನ್ನು ನೋಡಿದನು.’ ಅನಂತರದ ಅವನ ಕೃತ್ಯಗಳು ಅವನು ಸುಮ್ಮನೆ ಕುತೂಹಲಕ್ಕಾಗಿ ಹೋಗಿ ನೋಡಲಿಲ್ಲವೆಂಬುದನ್ನು ತೋರಿಸಿದವು. ಅವನು ನಿಜವಾಗಿಯೂ ಅವರಿಗೆ ಸಹಾಯಮಾಡಲು ಹಾತೊರೆಯುತ್ತಿದ್ದನು. ಒಬ್ಬ ಐಗುಪ್ತ ವ್ಯಕ್ತಿಯು ಒಬ್ಬ ಇಬ್ರಿಯನನ್ನು ಹೊಡೆಯುವುದನ್ನು ಅವನು ನೋಡಿದಾಗ, ಅವನು ಮಧ್ಯಪ್ರವೇಶಿಸಿ ಆ ದಬ್ಬಾಳಿಕೆಗಾರರನ್ನು ಕೊಂದುಹಾಕಿದನು. ಆ ಕೃತ್ಯವು, ಅವನ ಮನಸ್ಸು ಅವನ ಇಬ್ರಿಯ ಸಹೋದರರೊಂದಿಗಿತ್ತು ಎಂಬುದನ್ನು ತೋರಿಸಿತು. ಮರಣಹೊಂದಿದ ಆ ಪುರುಷನು, ಒಬ್ಬ ಅಧಿಕಾರಿಯಾಗಿದ್ದಿರಬಹುದು ಮತ್ತು ಅವನ ಕರ್ತವ್ಯಗಳನ್ನು ಪೂರೈಸುತ್ತಿದ್ದಾಗಲೇ ಅವನು ಕೊಲ್ಲಲ್ಪಟ್ಟನು. ಐಗುಪ್ತ ಜನರ ದೃಷ್ಟಿಯಲ್ಲಿ ಮೋಶೆಯು ಫರೋಹನಿಗೆ ನಿಷ್ಠನಾಗಿರಲು ಎಲ್ಲ ಕಾರಣಗಳಿದ್ದವು. ಆದರೆ ಮೋಶೆಯನ್ನು ಪ್ರಚೋದಿಸಿದ ಇನ್ನೊಂದು ಸಂಗತಿಯು ನ್ಯಾಯಕ್ಕಾಗಿರುವ ಪ್ರೀತಿ ಆಗಿತ್ತು. ಈ ಗುಣವು ಮರುದಿನ, ಅನ್ಯಾಯದಿಂದ ತನ್ನ ಸಂಗಾತಿಯನ್ನು ಹೊಡೆಯುತ್ತಿದ್ದ ಒಬ್ಬ ಇಬ್ರಿಯನನ್ನು ಅವನು ಪ್ರತಿಭಟಿಸಿದಾಗ ಇನ್ನೂ ಹೆಚ್ಚಾಗಿ ಪ್ರದರ್ಶಿಸಲ್ಪಟ್ಟಿತು. ಮೋಶೆಯು ಇಬ್ರಿಯ ಜನರನ್ನು ದಾಸತ್ವದಿಂದ ಬಿಡುಗಡೆಮಾಡಲು ಅಪೇಕ್ಷಿಸಿದನು, ಆದರೆ ಫರೋಹನಿಗೆ ಅವನ ಪಕ್ಷಾಂತರದ ಬಗ್ಗೆ ಗೊತ್ತಾದಾಗ ಮತ್ತು ಅವನನ್ನು ಕೊಲ್ಲಿಸಲು ಪ್ರಯತ್ನಿಸಿದಾಗ, ಮೋಶೆಯು ಮಿದ್ಯಾನಿಗೆ ಓಡಿಹೋಗಲು ಒತ್ತಾಯಿಸಲ್ಪಟ್ಟನು.—ವಿಮೋಚನಕಾಂಡ 2:11-15; ಅ. ಕೃತ್ಯಗಳು 7:23-29.
ದೇವರ ಜನರನ್ನು ಬಿಡಿಸಲಿಕ್ಕಾಗಿ ಮೋಶೆಯು ಆಯ್ಕೆ ಮಾಡಿದ ಸಮಯವು ಯೆಹೋವನ ಸಮಯದೊಂದಿಗೆ ತಾಳೆಬೀಳಲಿಲ್ಲ. ಆದರೂ ಅವನ ಕೃತ್ಯಗಳು ನಂಬಿಕೆಯನ್ನು ಪ್ರಕಟಪಡಿಸಿದವು. ಇಬ್ರಿಯ 11:24-26 ಹೀಗನ್ನುತ್ತದೆ: “ಮೋಶೆಯು ದೊಡ್ಡವನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.” ಏಕೆ? ಏಕೆಂದರೆ ಅವನು “ಐಗುಪ್ತದೇಶದ ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠಭಾಗ್ಯವೆಂದೆಣಿಸಿಕೊಂಡನು; ಯಾಕಂದರೆ ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.” “ಅಭಿಷಿಕ್ತನು” ಎಂದರ್ಥವುಳ್ಳ ‘ಕ್ರಿಸ್ತನು’ ಎಂಬ ಈ ಅಸಾಧಾರಣವಾದ ಉಪಯೋಗವು, ಮೋಶೆಗೆ ತಕ್ಕದ್ದಾಗಿದೆ ಯಾಕಂದರೆ, ಅನಂತರ ಅವನು ನೇರವಾಗಿ ಯೆಹೋವನಿಂದಲೇ ಒಂದು ವಿಶೇಷ ನೇಮಕವನ್ನು ಪಡೆದನು.
ಸ್ವಲ್ಪ ಊಹಿಸಿಕೊಳ್ಳಿ! ಮೋಶೆಯು ಪಡೆದಂಥ ಪೋಷಣೆಯು, ಕೇವಲ ಐಗುಪ್ತದ ಕುಲೀನ ವ್ಯಕ್ತಿಯೊಬ್ಬನು ಮಾತ್ರ ಪಡೆಯಸಾಧ್ಯವಿತ್ತು. ಅವನಿಗಿದ್ದ ಹುದ್ದೆಯು ಅವನಿಗೊಂದು ಉಜ್ವಲವಾದ ಜೀವನವೃತ್ತಿ ಮತ್ತು ಕಲ್ಪಿಸಸಾಧ್ಯವಿರುವ ಪ್ರತಿಯೊಂದು ವಿಧದ ಸುಖಭೋಗವನ್ನು ಮುಂದಿಟ್ಟಿತ್ತು. ಆದರೆ ಅವನು ಅದೆಲ್ಲವನ್ನೂ ತಳ್ಳಿಬಿಟ್ಟನು. ದಬ್ಬಾಳಿಕೆಗಾರನಾಗಿದ್ದ ಫರೋಹನ ಆಸ್ಥಾನದಲ್ಲಿ ಜೀವನವನ್ನೂ, ಯೆಹೋವನಿಗಾಗಿ ಮತ್ತು ನ್ಯಾಯಕ್ಕಾಗಿರುವ ತನ್ನ ಪ್ರೀತಿಯನ್ನು ಅವನು ಪರಸ್ಪರ ಹೊಂದಿಸಲು ಸಾಧ್ಯವಿರಲಿಲ್ಲ. ತನ್ನ ಪೂರ್ವಜರಾದ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ದೇವರು ಮಾಡಿದಂಥ ವಾಗ್ದಾನಗಳ ಕುರಿತಾದ ಜ್ಞಾನ ಮತ್ತು ಮನನವು, ಮೋಶೆಯು ದೇವರ ಅನುಗ್ರಹವನ್ನು ಆಯ್ಕೆಮಾಡುವಂತೆ ನಡೆಸಿದವು. ಫಲಿತಾಂಶವಾಗಿ, ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುವುದರಲ್ಲಿ ಮೋಶೆಯನ್ನು ಒಂದು ಬಹು ಮಹತ್ವಪೂರ್ಣ ಪಾತ್ರದಲ್ಲಿ ಉಪಯೋಗಿಸಲು ಶಕ್ತನಾಗಿದ್ದನು.
ಯಾವ ಸಂಗತಿಗಳು ಅತಿ ಪ್ರಾಮುಖ್ಯವಾಗಿವೆ ಎಂಬುದನ್ನು ನಿರ್ಣಯಿಸಬೇಕಾಗುವ ಆಯ್ಕೆಗಳು ನಮ್ಮೆಲ್ಲರ ಮುಂದೆ ಇವೆ. ಮೋಶೆಯಂತೆ ನಿಮ್ಮ ಮುಂದೆಯೂ ಒಂದು ಕಷ್ಟಕರವಾದ ನಿರ್ಣಯವು ಇರಬಹುದು. ನೀವು ಯಾವುದೇ ತ್ಯಾಗವನ್ನು ಮಾಡಲಿಕ್ಕಿರಲಿ, ನೀವು ನಿರ್ದಿಷ್ಟ ಪದ್ಧತಿಗಳನ್ನು ಅಥವಾ ಲಾಭಗಳಂತೆ ತೋರುವಂಥ ಸಂಗತಿಗಳನ್ನು ಬಿಟ್ಟುಕೊಡಬೇಕೊ? ಆ ಆಯ್ಕೆ ನಿಮ್ಮ ಮುಂದಿರುವುದಾದರೆ, ಮೋಶೆಯು ಯೆಹೋವನ ಸ್ನೇಹವನ್ನು ಐಗುಪ್ತದ ಸರ್ವೈಶ್ವರ್ಯಕ್ಕಿಂತಲೂ ಹೆಚ್ಚಾಗಿ ಮೌಲ್ಯವೆಂದೆಣಿಸಿದನು ಮತ್ತು ಅವನದನ್ನು ಪಡೆಯದಿದ್ದದ್ದಕ್ಕಾಗಿ ಎಂದೂ ವಿಷಾದಿಸಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.
ಜೂನ್ 29-ಜುಲೈ 5
ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 4-5
“ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು”
ಕಾವಲಿನಬುರುಜು10 10/15 ಪುಟ 13-14
ನೆವನಗಳನ್ನು ಯೆಹೋವನು ವೀಕ್ಷಿಸುವ ವಿಧ
“ನಾನು ಇದಕ್ಕೆ ತಕ್ಕವನಲ್ಲ.” ಒಂದುವೇಳೆ ನೀವು ಸುವಾರ್ತೆಯ ಶುಶ್ರೂಷಕರಾಗಿರಲು ಅರ್ಹರಲ್ಲ ಎಂದು ನಿಮಗನಿಸೀತು. ಬೈಬಲ್ ಸಮಯದಲ್ಲಿ ಯೆಹೋವನ ಕೆಲವು ನಂಬಿಗಸ್ತ ಸೇವಕರಿಗೂ ಹೀಗೆಯೇ ಅನಿಸಿತು. ಆತನು ನೇಮಿಸಿದ ಕೆಲಸವನ್ನು ಮಾಡಲು ತಾವು ಯೋಗ್ಯರಲ್ಲ ಎಂದು ಅವರು ನೆನಸಿದರು. ಉದಾಹರಣೆಗಾಗಿ ಮೋಶೆಯನ್ನು ತಕ್ಕೊಳ್ಳಿ. ಯೆಹೋವನು ಅವನಿಗೆ ಒಂದು ನೇಮಕವನ್ನು ಕೊಟ್ಟಾಗ ಮೋಶೆಯು, “ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು. ತಾನು ಸಹಾಯಮಾಡುತ್ತೇನೆಂದು ಯೆಹೋವನು ಆಶ್ವಾಸನೆ ಕೊಟ್ಟ ಮೇಲೂ “ಸ್ವಾಮೀ, ಈ ಕಾರ್ಯಕ್ಕೆ ಬೇರೊಬ್ಬನನ್ನು ನೇಮಿಸಬೇಕು” ಎಂದು ಮೋಶೆ ಕೇಳಿಕೊಂಡನು. (ವಿಮೋ. 4:10-13) ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?
ಕಾವಲಿನಬುರುಜು14 4/15 ಪುಟ 9 ಪ್ಯಾರ 5-6
“ಅದೃಶ್ಯನಾಗಿರುವಾತನನ್ನು” ನೀವು ನೋಡುತ್ತಿದ್ದೀರೋ?
5 ಮೋಶೆ ಐಗುಪ್ತಕ್ಕೆ ಹಿಂದಿರುಗುವ ಮುಂಚೆ ದೇವರು ಅವನಿಗೆ ಒಂದು ಪ್ರಾಮುಖ್ಯ ಅಂಶವನ್ನು ಕಲಿಸಿದನು. ಸಮಯಾನಂತರ ಮೋಶೆ ಅದನ್ನೇ ಯೋಬ ಪುಸ್ತಕದಲ್ಲಿ ದಾಖಲಿಸಿದನು. “ಯೆಹೋವನ ಭಯವೇ ವಿವೇಕವು.” (ಯೋಬ 28:28, NW) ಈ ಭಯವನ್ನು ಬೆಳೆಸಿಕೊಳ್ಳಲು ಮತ್ತು ವಿವೇಕದಿಂದ ಕ್ರಿಯೆಗೈಯಲು ಯೆಹೋವನು ಮೋಶೆಗೆ ಹೇಗೆ ಸಹಾಯ ಮಾಡಿದನು? ಆತನು ಹೀಗೆ ಕೇಳಿದನು: “ಮನುಷ್ಯರಿಗೆ ಬಾಯಿ ಕೊಟ್ಟವರಾರು? ಒಬ್ಬನು ಮೂಕನಾಗಿ ಮತ್ತೊಬ್ಬನು ಕಿವುಡನಾಗಿ ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸಿದವರಾರು? ಯೆಹೋವನಾಗಿರುವ ನಾನಲ್ಲವೇ.” ಈ ಮೂಲಕ ಸರ್ವಶಕ್ತ ದೇವರಾದ ತನಗೂ ಮಾನವರಿಗೂ ಇರುವ ವ್ಯತ್ಯಾಸವನ್ನು ತೋರಿಸಿಕೊಟ್ಟನು.—ವಿಮೋ. 4:11.
6 ಇದರಿಂದ ಮೋಶೆ ಏನು ಕಲಿತನು? ಯೆಹೋವನೇ ಮೋಶೆಯನ್ನು ಕಳುಹಿಸಿದ್ದ ಕಾರಣ ಅವನು ಭಯಪಡುವ ಅಗತ್ಯವಿರಲಿಲ್ಲ. ದೇವರ ಸಂದೇಶವನ್ನು ಫರೋಹನಿಗೆ ತಿಳಿಸಲು ಬೇಕಾದ ಎಲ್ಲಾ ಸಹಾಯವನ್ನು ಯೆಹೋವನು ಕೊಡಲಿದ್ದನು. ಫರೋಹನು ಯೆಹೋವನ ಮುಂದೆ ತೃಣಸಮಾನನಾಗಿದ್ದನು. ಅಲ್ಲದೆ ಐಗುಪ್ತದಲ್ಲಿ ದೇವರ ಸೇವಕರು ಗಂಡಾಂತರಕ್ಕೊಳಗಾದದ್ದು ಇದೇನೂ ಮೊದಲ ಬಾರಿಯಲ್ಲ. ಹಿಂದೆ ಬೇರೆ ಫರೋಹರ ಆಳ್ವಿಕೆಯಡಿಯಲ್ಲಿ ಅಬ್ರಹಾಮನನ್ನು ಮತ್ತು ಯೋಸೇಫನನ್ನು ದೇವರು ಕಾಪಾಡಿದ್ದನು. ಈ ಉದಾಹರಣೆಗಳನ್ನು ಮಾತ್ರವಲ್ಲ ಸ್ವತಃ ತನ್ನನ್ನು ಈ ಮುಂಚೆ ಫರೋಹನಿಂದ ಯೆಹೋವನು ಹೇಗೆ ಉಳಿಸಿದನೆಂದು ಮೋಶೆ ಧ್ಯಾನಿಸಿದ್ದಿರಬೇಕು. (ಆದಿ. 12:17-19; 41:14, 39-41; ವಿಮೋ. 1:22–2:10) ‘ಅದೃಶ್ಯನಾಗಿರುವಾತನಾದ’ ಯೆಹೋವನಲ್ಲಿ ನಂಬಿಕೆಯಿಟ್ಟು ಮೋಶೆ ಧೈರ್ಯದಿಂದ ಫರೋಹನ ಸನ್ನಿಧಿಯಲ್ಲಿ ಹೋಗಿ ನಿಂತನು ಮತ್ತು ಯೆಹೋವನು ಆಜ್ಞಾಪಿಸಿದ ಒಂದೊಂದು ಮಾತನ್ನೂ ಫರೋಹನಿಗೆ ತಿಳಿಸಿದನು.
ನೆವನಗಳನ್ನು ಯೆಹೋವನು ವೀಕ್ಷಿಸುವ ವಿಧ
ಯೆಹೋವನು ಮೋಶೆಯಿಂದ ಆ ನೇಮಕವನ್ನು ಹಿಂದೆಗೆಯಲಿಲ್ಲ. ಆದರೆ ಆ ನೇಮಕವನ್ನು ಪೂರೈಸಲು ಅವನಿಗೆ ಸಹಾಯಕನಾಗಿ ಆರೋನನನ್ನು ನೇಮಿಸಿದನು. (ವಿಮೋ. 4:14-17) ಅಷ್ಟೇ ಅಲ್ಲದೆ ಮುಂದಣ ವರ್ಷಗಳಲ್ಲಿ ಯೆಹೋವನು ಮೋಶೆಗೆ ಬೆಂಬಲವಾಗಿದ್ದು ಅವನ ದೇವದತ್ತ ನೇಮಕಗಳನ್ನು ಯಶಸ್ವಿಯಾಗಿ ಪೂರೈಸಲು ಬೇಕಾದದ್ದೆಲ್ಲವನ್ನೂ ಒದಗಿಸಿದನು. ಇಂದು ನಿಮಗೂ ಶುಶ್ರೂಷೆಯನ್ನು ಪೂರೈಸಲು ಬೇಕಾದ ಸಹಾಯ ನೀಡುವಂತೆ ಯೆಹೋವನು ಅನುಭವೀ ಜೊತೆವಿಶ್ವಾಸಿಗಳನ್ನು ಪ್ರೇರಿಸುವನು ಎಂಬ ಭರವಸೆಯಿರಲಿ. ಎಲ್ಲಕ್ಕಿಂತಲೂ ಹೆಚ್ಚಾಗಿ ತಾನು ಆಜ್ಞಾಪಿಸಿರುವ ಕೆಲಸಕ್ಕೆ ದೇವರು ನಮ್ಮನ್ನು ಅರ್ಹರನ್ನಾಗಿ ಮಾಡುತ್ತಾನೆ ಎಂದು ಆತನ ವಾಕ್ಯವು ನಮಗೆ ಆಶ್ವಾಸನೆಯನ್ನೀಯುತ್ತದೆ.—2 ಕೊರಿಂ. 3:5; “ನನ್ನ ಜೀವನದ ಅತ್ಯಾನಂದಕರ ವರುಷಗಳು” ಚೌಕ ನೋಡಿ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಕಾವಲಿನಬುರುಜು04 3/15 ಪುಟ 28 ಪ್ಯಾರ 4
ವಾಚಕರಿಂದ ಪ್ರಶ್ನೆಗಳು
“ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು” ಎಂಬ ಚಿಪ್ಪೋರಳ ಅಭಿವ್ಯಕ್ತಿಯು ತುಂಬ ಅಸಾಮಾನ್ಯವಾದದ್ದಾಗಿದೆ. ಇದು ಅವಳ ಕುರಿತು ಏನನ್ನು ತಿಳಿಯಪಡಿಸುತ್ತದೆ? ಸುನ್ನತಿಯೊಡಂಬಡಿಕೆಯ ಆವಶ್ಯಕತೆಗಳಿಗೆ ಅನುಸಾರವಾಗಿ ನಡೆದುಕೊಳ್ಳುವ ಮೂಲಕ ಚಿಪ್ಪೋರಳು, ಯೆಹೋವನೊಂದಿಗೆ ಒಂದು ಒಡಂಬಡಿಕೆಯ ಸಂಬಂಧವನ್ನು ಅಂಗೀಕರಿಸಿದಳು. ಸಮಯಾನಂತರ ಇಸ್ರಾಯೇಲ್ಯರೊಂದಿಗೆ ಮಾಡಿಕೊಳ್ಳಲ್ಪಟ್ಟ ನಿಯಮದೊಡಂಬಡಿಕೆಯು, ಒಂದು ಒಡಂಬಡಿಕೆಯ ಸಂಬಂಧದಲ್ಲಿ ಯೆಹೋವನನ್ನು ಒಬ್ಬ ಪತಿಯಾಗಿಯೂ ಇನ್ನೊಂದು ಪಕ್ಷವನ್ನು ಪತ್ನಿಯಾಗಿಯೂ ಪರಿಗಣಿಸಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿತು. (ಯೆರೆಮೀಯ 31:32) ಆದುದರಿಂದ, “ರಕ್ತಧಾರೆಯಿಂದಾದ ಮದಲಿಂಗನು” ಎಂದು ಯೆಹೋವನನ್ನು (ಆತನ ಪ್ರತಿನಿಧಿಯಾಗಿದ್ದ ದೇವದೂತನ ಮೂಲಕ) ಸಂಬೋಧಿಸುವ ಮೂಲಕ, ಆ ಒಡಂಬಡಿಕೆಯ ಷರತ್ತುಗಳಿಗೆ ಚಿಪ್ಪೋರಳು ತನ್ನ ಸ್ವಂತ ಅಧೀನತೆಯನ್ನು ಒಪ್ಪಿಕೊಳ್ಳುತ್ತಿದ್ದಂತೆ ತೋರುತ್ತದೆ. ಅದು ಸುನ್ನತಿಯೊಡಂಬಡಿಕೆಯಲ್ಲಿ ಪತಿಯೋಪಾದಿ ಯೆಹೋವ ದೇವರ ಮುಂದೆ ಪತ್ನಿಸದೃಶ ಸ್ಥಾನವನ್ನು ಅವಳು ಅಂಗೀಕರಿಸಿದ್ದಾಳೋ ಎಂಬಂತಿತ್ತು. ಏನೇ ಆಗಿರಲಿ, ದೇವರ ಆವಶ್ಯಕತೆಗೆ ಅವಳ ವಿಧೇಯತೆಯ ನಿರ್ಣಾಯಕ ಕ್ರಿಯೆಯಿಂದಾಗಿ ಅವಳ ಮಗನ ಜೀವವು ಅಪಾಯದಿಂದ ಕಾಪಾಡಲ್ಪಟ್ಟಿತು.
it-2-E ಪುಟ 12 ಪ್ಯಾರ 5
ಯೆಹೋವ
ಒಬ್ಬ ವ್ಯಕ್ತಿ ಬಗ್ಗೆ ನಮಗೆ ಪರಿಚಯವಿದ್ದ ಮಾತ್ರಕ್ಕೆ ಆ ವ್ಯಕ್ತಿ ನಮಗೆ ‘ಗೊತ್ತು’ ಅಂತ ಹೇಳಕ್ಕೆ ಆಗಲ್ಲ. ಉದಾಹರಣೆಗೆ ಮೂರ್ಖ ನಾಬಾಲನಿಗೆ ದಾವೀದನ ಹೆಸರು ಗೊತ್ತಿತ್ತು. ಆದರೂ ಅವನು ‘ದಾವೀದ ಯಾರು?’ ಎಂದು ಕೇಳಿದ. ಅದರರ್ಥ ದಾವೀದನಿಗೆ ‘ಏನ್ ಅಧಿಕಾರ ಇದೆ?’ ಅಂತ ಅವನು ಕೇಳುತ್ತಿದ್ದ. (1ಸಮು 25:9-11; ಹೋಲಿಸಿ 2 ಸಮು 8:13.) ಅದೇ ರೀತಿ, ಫರೋಹ ಮೋಶೆಗೆ ‘ಯೆಹೋವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಯಾಕೆ ಕಳುಹಿಸಬೇಕು? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇಸ್ರಾಯೇಲ್ಯರು ಹೊರಟುಹೋಗುವದಕ್ಕೆ ನಾನು ಒಪ್ಪುವದೇ ಇಲ್ಲ’ ಎಂದನು. (ವಿಮೋ 5:1, 2) ಫರೋಹನ ಈ ಮಾತಿನ ಅರ್ಥ, ಅವನಿಗೆ ಯೆಹೋವನು ಸತ್ಯ ದೇವರು ಅಂತ ಅಥವಾ ಈಜಿಪ್ಟಿನ ರಾಜನ ಮೇಲೆ ಯೆಹೋವನಿಗೆ ಅಧಿಕಾರ ಇದೆ ಅಂತ, ಅಷ್ಟೇ ಅಲ್ಲ, ಮೋಶೆ ಆರೋನರು ಹೇಳಿದಂತೆ ತನ್ನ ಉದ್ದೇಶವನ್ನು ಪೂರೈಸಲು ಯೆಹೋವನಿಗೆ ಶಕ್ತಿ ಇದೆ ಅಂತ ಅವನಿಗೆ ಗೊತ್ತಿಲ್ಲ ಎಂದಾಗಿತ್ತು. ಆದರೆ ಈಗ ಇಸ್ರಾಯೇಲ್ಯರು, ಫರೋಹ ಮತ್ತು ಅವನ ಇಡೀ ಜನ ದೇವರ ಹೆಸರಿನ ನಿಜ ಅರ್ಥ ಏನೆಂದು ಮತ್ತು ಆ ಹೆಸರಿನ ಹಿಂದೆ ಇರುವ ವ್ಯಕ್ತಿ ಯಾರೆಂದು ತಿಳಿದುಕೊಳ್ಳಲಿದ್ದರು. ಅದಕ್ಕಾಗಿ ದೇವರು ಇಸ್ರಾಯೇಲ್ಯರ ಬಗ್ಗೆ ತನಗಿದ್ದ ಉದ್ದೇಶವನ್ನು ಪೂರೈಸಲಿದ್ದನು. ಅಂದರೆ ಅವರನ್ನು ಬಿಡುಗಡೆಮಾಡಿ, ಅವರಿಗೆ ವಾಗ್ದಾನ ಮಾಡಿದ ದೇಶವನ್ನು ನೀಡುವ ಮೂಲಕ ಅವರ ಪೂರ್ವಿಕರಿಗೆ ನೀಡಿದ ಮಾತನ್ನು ಪೂರೈಸಲಿದ್ದನು. ಹೀಗೆ ‘ಯೆಹೋವನು ಎಂಬ ನಾನೇ ನಿಮ್ಮ ದೇವರಾಗಿದ್ದೇನೆಂಬದು ನಿಮಗೆ ಗೊತ್ತಾಗುವುದು’ ಎಂದು ದೇವರು ಹೇಳಿದ ಮಾತು ನಿಜವಾಗಲಿತ್ತು.—ವಿಮೋ 6:4-8; ಇಂಗ್ಲಿಷ್‌ನಲ್ಲಿ ಆಲ್ಮೈಟಿ ಟಿಪ್ಪಣಿ ನೋಡಿ.